’ಅಕೇನೂ ನಮ್ಮ ಹಾಗೇನೇ…’, ಚಿದಂಬರ ನರೇಂದ್ರ

ಚಿದಂಬರ ನರೇಂದ್ರ

ಗಂಡಸು – ಹೆಂಗಸಿಗೆ


Jealousy thy name is woman – Shakespeare.
ನೋಡೆ,
ಗಂಡಸರು ಎಷ್ಟು perfect ಆಗಿ
analyse ಮಾಡ್ತಾರೆ ಎಂದೆ.
ಆಕೆ ಸಿಟ್ಟಿನಿಂದ internet ON ಮಾಡಿ
ಈ ಕಥೆ ಒಮ್ಮೆ ಓದಿ,
ಆಮೇಲೆ ಹೆಣ್ಣಿನ ಬಗ್ಗೆ ಮಾತಾಡೊರಂತೆ ಎಂದಳು.
ಅರೆ! ಇದು ಅಜ್ಜಿ ಹೇಳಿದ ಕಥೆ.
ನಿಮಗೂ ಗೊತ್ತಿರಬಹುದು
ಇಲ್ಲಾಂದ್ರೆ ಕೇಳಿ,
ಹೇಳ್ತೇನೆ.
 
ಲಕ್ಷ್ಮೀ, ಸರಸ್ವತಿ ಮತ್ತು ಪಾರ್ವತಿ
ತಾವೇ great ಅಂತ ಮೆರೆದಾಡೊದನ್ನ ನೋಡಿ
ನಾರದನಿಗೆ, ಒಮ್ಮೆ ರೇಗಿ ಹೋಯ್ತಂತೆ.
ಇವರಿಗೆ, ಸರಿಯಾಗಿ ಪಾಠ ಕಲಿಸ್ಬೇಕು ಅಂತ
ಅವರ ಮುಂದೆ,
ಮಹರ್ಷಿ ಅತ್ರಿಯ ಹೆಂಡತಿಯ
ಹಿರಿಮೆಯ ಬಗ್ಗೆ,
ಆಕೆಯ ಪಾತಿವ್ರತ್ಯದ ಬಗ್ಗೆ,
ಹಾಡು ಕಟ್ಟಿ ಹಾಡಿದ.
ಸಿಟ್ಟಿಗೆದ್ದ ತ್ರಿಮೂರ್ತಿಗಳ ಹೆಂಡತಿಯರು
ಗಂಡಂದಿರ ಬಳಿ ಹೋಗಿ ಗೋಳಾಡಿದರಂತೆ
ಅತ್ರಿಯ ಹೆಂಡತಿಯನ್ನು test ಮಾಡುವಂತೆ,
ಆಕೆಯ ಹಿರಿಮೆಯನ್ನು
ಸುಳ್ಳಾಗಿಸುವಂತೆ ಬೇಡಿಕೊಂಡರಂತೆ.
 
ದೇವರಾದರೇನಂತೆ, ಅವರೂ ಗಂಡದಿರೇ ತಾನೇ
ಹೆಂಡತಿಯರ ಮಾತು ಕೇಳಿ,
ಹಿಂದೂ ಮುಂದೂ ನೋಡದೇ
ತ್ರಿಮೂರ್ತಿಗಳು ಭೂಲೊಕಕ್ಕೆ ಹೊರಟರು.
ಅತ್ರಿಯ ಮನೆಯ ಮುಂದೆ
ಸಾಧುಗಳ ವೇಷದಲ್ಲಿ ನಿಂದರು.
“ಅಮ್ಮಾ ಭಿಕ್ಷೆ”
ಮನೆಗೆ, ಸಾಧುಗಳು ಬಂದದ್ದನ್ನು ಕಂಡು
ಅತ್ರಿಯ ಹೆಂಡತಿಗೆ ಸಂತೋಷವಾಯಿತು
ಸಾಧುಗಳನ್ನು ಒಳಗೆ ಕರೆದು,
ಕೂಡಿಸಿ, ಆದರಿಸಿದಳು.
ಭೋಜನಕ್ಕೆ ಆಹ್ವಾನಿಸಿದಳು.
“ಅಮ್ಮಾ, ನಿನ್ನ ಮನೆಯಲ್ಲಿ
ಊಟ ಮಾಡುವುದಕ್ಕೆ ನಮಗೇನೊ ಸಂತೋಷವೇ,
ಆದರೆ, ನಮ್ಮದೊಂದು ವ್ರತವಿದೆ,
ನೀನು, ಮೈಮೇಲೆ ಒಂದಿಂಚೂ ಬಟ್ಟೆಯಿಲ್ಲದೆ
ಪೂರ್ತಿ ಬೆತ್ತಲಾಗಿ ಬಡಿಸಿದರೆ ಮಾತ್ರ
ನಾವು ಊಟ ಮಾಡುತ್ತೇವೆ”
ಅತ್ರಿಯ ಹೆಂಡತಿ ಸಂದಿಗ್ಧಕ್ಕೀಡಾದಳು
ತನ್ನ ಪತಿಯನ್ನೊಮ್ಮೆ ಭಕ್ತಿಯಿಂದ ನೆನೆದು
ಆ ಮೂವರ ಮೇಲೆ
ಗಂಗಾಜಲವನ್ನು ಸಿಂಪಡಿಸಿದಳು.
ನೋಡ ನೋಡುತ್ತಿದ್ದಂತೆ ತ್ರಿಮೂರ್ತಿಗಳು
ಆರು ತಿಂಗಳ ಕೂಸು ಮಕ್ಕಳಾದರು.
ಆಮೇಲೆ, ಪೂರ್ತಿ ಬೆತ್ತಲಾಗಿ
ಆ ಮಕ್ಕಳಿಗೆ ಊಟ ಮಾಡಿಸಿ
ತನ್ನ ಮಾತು ಉಳಿಸಿಕೊಂಡಳು.
ಮಕ್ಕಳಿಲ್ಲದ ಅತ್ರಿಯ ಮನೆಯಲ್ಲೇ
ತ್ರಿಮೂರ್ತಿಗಳು ಬೆಳೆಯತೊಡಗಿದರು
 
ಇತ್ತ ಸ್ವರ್ಗದಲ್ಲಿ, ಇಷ್ಟು ದಿನಗಳಾದರೂ
ತಮ್ಮ ಗಂಡದಿರು ವಾಪಸ್ಸು ಬರಲಿಲ್ಲವೆಂದು
ಲಕ್ಷ್ಮಿ, ಸರಸ್ವತಿ ಮತ್ತು ಪಾರ್ವತಿ ಚಿಂತೆಗೀಡಾಗಿ
ಗಂಡಂದಿರನ್ನು ಹುಡುಕಿಕೊಂಡು
ಅತ್ರಿ ಮಹರ್ಷಿಯ ಮನೆಗೆ ಬಂದರು.
ಅಲ್ಲಿ ಅಂಗಳದಲ್ಲಿ ಆಟ ಅಡುತ್ತಿದ್ದ
ಬಾಲರೂಪಿ ತ್ರಿಮೂರ್ತಿಗಳನ್ನು
ಕಂಡು ದಂಗಾದರು.
ಅತ್ರಿಯ ಹೆಂಡತಿಯಲ್ಲಿ
ಕ್ಷಮೆ ಯಾಚಿಸಿ
ತಮ್ಮ ಗಂಡಂದಿರನ್ನು
ಬಿಟ್ಟುಕೊಂಡುವಂತೆ ಬೇಡಿಕೊಂಡರು.
ತ್ರಿಮೂರ್ತಿಗಳು ತನ್ನ ಹೊಟ್ಟೆಯಲ್ಲಿ
ಹುಟ್ಟುತ್ತೇವೆ ಎಂದು
ಮಾತು ಕೊಟ್ಟರೆ ಮಾತ್ರ
ಬಿಟ್ಟು ಕೊಡುತ್ತೇನೆ ಎಂದಳು
ಅತ್ರಿಯ ಹೆಂಡತಿ.
ಆಕೆಯ ಮಾತಿಗೆ ಒಪ್ಪಿ
ಗಂಡದಿರನ್ನು ಬಿಡಿಸಿಕೊಂಡು ಬರುವಷ್ಟರಲ್ಲಿ
ಈ ಹೆಂಡದಿರಿಗೆ ಸಾಕು ಸಾಕಾಯಿತು.

ಕೊಟ್ಟ ಮಾತಿಗೆ ತಪ್ಪದಂತೆ
ತ್ರಿಮೂರ್ತಿಗಳ ಅಂಶ ಸಂಭೂತನಾದ
ದತ್ತಾತ್ರೇಯ,
ಅತ್ರಿಯ ಹೆಂಡತಿ
ಅನಸೂಯೆಯ ಹೊಟ್ಟೆಯಲ್ಲಿ
ಹುಟ್ಟಿದನಂತೆ.
ಇದು ಕಥೆ.
 
ಏನು! ,
ಅಸೂಯೆ ಅಂತೆಲ್ಲ start ಮಾಡಿ
ಅನಸೂಯೆಯ ಕತೆ ಹೇಳ್ದಾ ಅಂತಿರಾ?
ಹಾಗೇ ಆಗತ್ತೆ ನೋಡಿ,
ಈ ಹೆಣ್ಣಿನ ಬಗ್ಗೆ ಬರೆಯೊಕೆ ಕೂತ್ರೆ.
ಮುಟ್ಟಿದೆ, ಅಂತಿದ್ದ ಹಾಗೇನೇ ಮಾಯ ಆಗ್ತಾಳೆ
ಗೆದ್ದೆ, ಅಂದ್ಕೊಳ್ತಿದ್ದ ಹಾಗೇನೇ ಸೋಲಿಸಿಬಿಡ್ತಾಳೆ.
ಹೀಗೇಲ್ಲಾ ಕಥೆ ಕಟ್ಟಿ
ಆಕೆಗೊಂದು satisfaction ಕೊಟ್ಟು
myth ಮಾಡಿ
ಎಷ್ಟು ಜೋಪಾನ ಮಾಡ್ತೀವಿ ನಾವು.
ದೇವತೆ, ತಾಯಿ, ಹೆಂಡತಿ, ಮಗಳು
ಅಕ್ಕ, ತಂಗಿ, ಗೆಳತಿ
ಈ ಸಂಬಂಧಗಳ comfort ಗೆ
ಆಕೆ ಎಷ್ಟು ಒಗ್ಗಿ ಹೋಗಿದ್ದಾಳೆ ಅಂದ್ರೆ
ನೀನು ಹೆಣ್ಣು ಕಣಮ್ಮಾ
ಮನುಷ್ಯ ಜಾತಿ, ಅಂದ್ರೆ
ಆಕೆಗೆ ದಿಗ್ಭ್ರಮೆಯಾಗುತ್ತದೆ.
ತ್ಯಾಗ, ಸಹನೆ, ಅಂತಃಕರಣ
ಎಲ್ಲ tag ಗಳನ್ನು ಕಿತ್ತು ಹಾಕಿದರೆ
ಅಕೇನೂ ನಮ್ಮ ಹಾಗೇನೇ
ರಕ್ತ, ಮಾಂಸ,
ತುಂಬ್ಕೊಂಡಿರೊ ಪ್ರಾಣಿ.
ಆಕೆಗೂ ನಮ್ಮ ಹಾಗೇ
ಸೊಕ್ಕು, ಹೊಟ್ಟೆಕಿಚ್ಚು
ಸಂತೋಷ, ದುಃಖ,
ಪ್ರೇಮ, ಕಾಮ
ಎಲ್ಲ ಬೇಕಾಗತ್ತೆ.
ಏನೋ, ಹುಂಬತನ, ಭೋಳೆತನ
ನಮಗಿಂತ ಸ್ವಲ್ಪ ಜಾಸ್ತಿ.
ಅದಕ್ಕೇ ಹೀಗೆಲ್ಲಾ ಹೊಗಳಿ,
ಅಟ್ಟಕ್ಕೇರಿಸಿ,
ಕೈ ಕಟ್ಟಿ ಹಾಕೊದಾ?
ಅದಕ್ಯಾಕ್ರಿ ಹೆದರ್ಬೇಕು?
ಬರ್ಲಿ ಬಿಡ್ರಿ competition ಗೆ.
ಮಿಥ್ಯೆಯ ಜೊತೆ ಮುದ್ದಾಡಿ
ಸುಖ ಅನುಭವಿಸೋದ್ಕಿಂತ
ಸತ್ಯದ ಜೊತೆ ಗುದ್ದಾಡಿ
Hurt ಆಗೋದೇ
betterಉ.
 
ಹೆಣ್ಣಿನ ಬಗ್ಗೆ ಒಂದೊಳ್ಳೆ ಕವಿತೆ
ಬರೆಯೋಣಾ ಅಂತ start ಮಾಡಿ
ಏನೇನೋ ಬರೆದ್ಬಿಟ್ಟೆ.
ಅದೂ ಅಲ್ದೆ ನಮ್ಮ ಅಜ್ಜ,
ಹೆಣ್ಣಿನ ಬಗ್ಗೆ ಒಂದು
ಇಂಥಾ ಒಳ್ಳೆ ಕವಿತೆ ಬರೆದ್ ಮೇಲೆ
ನಾನು ಮತ್ತೆ ಬರೆಯೊದ್ರಲ್ಲಿ
ಏನೇನೂ ಅರ್ಥ ಇಲ್ಲ.
ಇದನ್ನೂ ನನ್ನ ಕವಿತೆನೇ ಅಂದ್ಕೊಂಡು
ಓದಿ ಬಿಡಿ.
(ಇದು first stanza ಮಾತ್ರ)
 
“ತಾಯಿ ಕನಿಮನೆಯೇ ನೀ ಅಕ್ಕ ಅಕ್ಕರತೆಯೇ
ಬಾಯೆನ್ನ ತಂಗಿ ಬಾ ಮುದ್ದು ಬಂಗಾರವೇ
ನೀಯೆನ್ನ ಹೆಂಡತಿಯೋ ಮೈಗೊಂಡ ನನ್ನಿಯೋ
ಮಗಳೋ ನನ್ನೆದೆಯ ಮುಗುಳೋ ?
ಈಯೆನ್ನ ಇರವಿಂಗೆ ಬೇವಸದ ಬಾಳಿಕೆಗೆ
ಈಯುತ್ತ ಕೈಮೈಗಳಂ ಜೇವಭಾವದಿಂ
ಸ್ತ್ರೀಯೆ ಕಾಪಾಡಿದೌ ಪಾಡಾಗಿ ಮೂಢನನು
ತೆಕ್ಕೈಸಿ ನೂರು ತೆರದಿ.”
– ಅಂಬಿಕಾತನಯದತ್ತ

‍ಲೇಖಕರು G

March 8, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. VidyaShankar

    Interesting style… ಚಂಪೂ ಕಾವ್ಯ?! ಸತಿ ಅನುಸೂಯ ಕತೆ ಒಂದು ಒಳ್ಳೆಯ ರೂಪಕ ಎಂದೆನಿಸುತ್ತೆ… ಗಂಡಸಿನ ಶೀಲ ಪ್ರಕರಣದಲ್ಲಿ (ಶೂರ್ಪಣಿಕಿ ಪ್ರಕರಣದಲ್ಲಿ) ಗಂಡು ಯಾಕೆ violent ಆದ???

    ಪ್ರತಿಕ್ರಿಯೆ
  2. ಜಿ.ಎನ್ ನಾಗರಾಜ್

    ಬರ್ಲಿ ಬಿಡ್ರೀ ಕಾಂಪಿಟಿಷಿನ್ ಗೆ
    ಮಿಥ್ಯದ ಜೊತೆ ಮುದ್ದಾಡಿ
    ಸುಖ ಅನುಭವಿಸೋದಿಕ್ಕಿಂತಾ
    ಸತ್ಯದ ಜೊತೆ ಗುದ್ದಾಡಿ
    ಹರ್ಟ್ ಆಗೋದೇ
    ಬೆಟರ್ರು ಇಂತಹ ಮನಸ್ಸು ಜಗತ್ತಿನೆಲ್ಲಾ ಗಂಡುಗಳಿಗೆ ಬಂದರೆ ಮಹಿಳಾ ದಿನಾಚರಣೆಯ ಅಗತ್ಯ ಬೀಳುವುದಿಲ್ಲ.ಇದೇ ಮಹಿಳಾ ವಿಮೋಚನೆಯ ವಾಖ್ಯೆ.ಇಂತಹ ಭಾವನೆ ಬರಲು ಗಂಡಸಿಗೆ ಬಹಳ ಧೈರ್ಯ ಬೇಕು. ಅಂದರೆ ಗಂಡಸಿಗೆ ಅವನ ಹೇಡಿತನದಿಂದ ವಿಮೋಚನೆ ಬೇಕು. ಆದರೆ ಇದು ಒಬ್ಬ ವ್ಯಕ್ತಿಯ ಕೆಲಸವಲ್ಲ.ಿಂತಹ ಮನಸ್ಸು ರೂಪುಗೊಂಡದ್ದು ಪಾಳೆಯಗಾರೀ ವ್ಯವಸ್ಥೆಯಲ್ಲಿ. ರಾಜ್ಯ,ಸಾಮ್ರಾಜ್ಯಗಳು ವಿಭಜನೆಗೊಳ್ಳಬಾರದು ಇಡಿಯಾಗಿ ಉಳಿಯಬೇಕು ಎಂಬ ರಾಜ ಸ್ವಾರ್ಥದ ಜೊತೆಗೆ ಆಸ್ತಿಯನ್ನು ಕುಟುಂಬದಲ್ಲಿಯೇ ಉಳಿಸಿಕೊಳ್ಳಬೇಕೆಂಬ ಹಂಬಲ ಒತ್ತಾಯದ ಮದುವೆ, ಕೀಳ್ಗಳೆಯುವ ಮನೋಭಾವವನ್ನು ಸೃಷ್ಠಿಸಿತು. ವ್ಯವಸ್ಥೆಯ ಬದಲಾವಣೆಗೆ ತುಡಿಯುತ್ತಲೇ ವೈಯುಕ್ತಿಕ ನೆಲೆಯಲ್ಲಿಯೂ ಈ ಅಪೂರ್ವ ಮನೋಭಾವವನ್ನು ರೂಢಿಸಿಕೊಳ್ಳೋಣ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: