'ನಿಂತ ಗಂಡಿನ ದಡದಲ್ಲಿ ಹರಿವ ನದಿಯಾಗಿದ್ದೆ ನೀನು…' – ರಾಜೇಂದ್ರ ಪ್ರಸಾದ್

ರಾಜೇಂದ್ರ ಪ್ರಸಾದ್

ಸ್ತ್ರೀ ಅಂದ್ರೆ ನನ್ನ ಪಾಲಿಗೆ ಅವ್ವ, ಮಗಳು, ಹೆಂಡತಿ, ಗೆಳತಿ, ನೂರಾರು ಸಂಬಂಧಗಳು ಅಷ್ಟೇ ಅಲ್ಲ… ಈ ಗುಣಗಳ ಹೊತ್ತ ಭೂಮಿ, ಮಳೆ, ನದಿ, ಸಂಗೀತ, ಕಾವ್ಯ, ಪುಸ್ತಕ ಎಲ್ಲವೂ… ಅದೊಂದು ಅದುಮಿಡಲಾರದ ಚೇತನ.. ಸದಾ ತಾನಿರುವಲ್ಲಿ ಪುಟಿಯುತ್ತಲೆ ಇರುತ್ತದೆ ಸ್ತ್ರೀತನ.

ಹೆಣ್ಣು ಮೀನಿನಂತೆ

ಬದುಕ ಈಜಿದಳು

ನಾವೆಯಲಿ ಜಗತ್ತು

ಹೊತ್ತು ಸಾಗಿದಳು

ಅವಳ ಹೆಜ್ಜೆ ಯಾರಿಗೂ

ದಕ್ಕಲಿಲ್ಲ..

ತುಂಬುಕುಟುಂಬದಲ್ಲಿ ಹುಟ್ಟಿದ ನನ್ನನು ತುಂಬಾ ಪ್ರಭಾವಿಸಿದ್ದು ನನ್ನ ಅವ್ವಂದಿರೇ (ಅಜ್ಜಿಯರು). ನಾ ತುಂಬಾ ಕಾಲ ತಾಯಿಯ ಬಳಿ ಇದ್ದವನಲ್ಲ. ಹುಟ್ಟಿದ 7 ನೇ ತಿಂಗಳಿಗೆ ಅಜ್ಜಿಯ ಮಡಿಲಿಗೆ ಬಂದವನು ಮುಂದೆ 12 ವರ್ಷ ತುಂಬಿ ಹೈಸ್ಕೂಲು ಸೇರುವ ದೆಸೆಯಿಂದ ಅಪ್ಪ-ಅಮ್ಮನ ಬಳಿಗೆ ನಗರ ಜೀವನಕ್ಕೆ ಕಾಲಿಟ್ಟಿದ್ದು. ಈ ಪರ್ವಕಾಲದಲ್ಲಿ ಮುತ್ತಜ್ಜಿ, ಅಜ್ಜಿ, ದೊಡ್ಡಮ್ಮ – ಈ ಮೂರೂ ಹೆಣ್ಣುಜೀವಗಳು ನನ್ನ ಇಡೀ ಬದುಕನ್ನು ಕಟ್ಟಿಕೊಳ್ಳಲು ಬೇಕಾದ ಭದ್ರ ಬುನಾದಿಯನ್ನು ಹಾಕಿಕೊಟ್ಟಿವೆ. ಅಕ್ಷರಗಳ ಹಂಗಿಲ್ಲದೆ ಈ ಮೂವರು ಸಾವಿರಾರು ಪುಸ್ತಕಗಳನ್ನು ಓದುವಂತೆ ನನ್ನ ರೂಪಿಸಿದ್ದಾರೆ..

ನಿತ್ಯ ಕನಸಿಗೆ ಕಾಣುವ

ಅವ್ವ

ನಿನ್ನೆಗಳ ಹಾಡುತ್ತಾಳೆ

ನಾಳೆಗಳ ತೂಗುತ್ತಾಳೆ

ಮುತ್ತಜ್ಜಿಗೆ ಮಾತು ಇರಲಿಲ್ಲ… ನನ್ನ ನೋಡಿದ ಕೂಡಲೇ ನಗುತ್ತಿತ್ತು.. ಹತ್ತಿರಕ್ಕೆ ಕರೆದು ಕೈ ಹಿಡಿದು ಸುಮ್ಮನೆ ಕುಳಿತುವ ಆ ಪರಿ ನೆನೆಸಿಕೊಂಡರೆ.. ಆ ಪ್ರೀತಿಯ ಮುಂದೆ ಜಗತ್ತು ಯಕಶ್ಚಿತ್ ಎನಿಸಿಬಿದತ್ತೆ..
ನಾನು 2ನೇ ತರಗತಿಗೆ ಬಂದಾಗ ಮುತ್ತಜ್ಜಿ ತೀರಿಕೊಂಡಳು.. ಯಾವುದೋ ಭಾಗ ಕತ್ತರಿಸಿಕೊಂಡವಂತೆ ಅತ್ತಿದ್ದೆ..
ಇನ್ನು ಅಜ್ಜಿ ಇವತ್ತಿಗೂ ನನ್ನ ಮಹಾಗುರು. ಅವಳನ್ನು ಪ್ರೀತಿಯಿಂದ ‘ಅವ್ವ’ ಎಂತಲೇ ಕರೆಯುವುದು ನಾನು.. ಗೊತ್ತಿಲ್ಲ ನಾನು ತಿಳಿದ ಹಾಗೆ ತಾಯಿಯ ತವರು ಮನೆಯ ಸಂಬಂಧಗಳು ತುಂಬಾ ಗಟ್ಟಿಯಾಗಿರುತ್ತವೆ.. ಈ ಅವ್ವ ತನ್ನೆಲ್ಲ ಬಡತನವನ್ನು ಕೂಲಿ ಮಾಡಿ 8-10 ಮಕ್ಕಳ ದೊಡ್ಡ ಸಂಸಾರವನ್ನು ಸಾಗಿಸಿದವಳು.. ಅವಳ ತಾಳ್ಮೆ, ದಯೆ, ವಿಚಾರಪರತೆ, ಸಾತ್ವಿಕ ಕೋಪ..ಅದರಲ್ಲೂ ಬಂಧುಬಳಗವನ್ನು ‘ಬಾವಣಿಸುವ’ ಗುಣ. ನನ್ನ ಪಾಲಿನ ಆದರ್ಶ ಈಕೆ.
ಭುಜದೆತ್ತರ ಬೆಳೆದ
ಮಗನ ಮೈಕಟ್ಟನ್ನು
ಆನಂದದಿಂದ ನೋಡುತ್ತಾ
ಕೂತ ಅವ್ವನಿಗೆ
ತನ್ನ ಹಸಿದ , ತಳಹೊಕ್ಕ
ಹೊಟ್ಟೆ ಮರೆತೇ ಹೋಗುತ್ತದೆ.
ಬಹುತೇಕ ಈ ಗುಣಗಳನ್ನು ನಾನು ಅವಳಿಂದಾನೆ ನನ್ನೊಳಗೆ ಸೇರಿಸಿಕೊಂಡಿದ್ದೀನಿ..
ನನ್ನ ದೊಡ್ಡಮ್ಮ ನನ್ನ ಪಾಲಿನ ಯಶೋಧೆ. ನನ್ನ ಜೀವನದಲ್ಲಿ ದೇವಕಿ ಹೆಸರಿನಲ್ಲಿ ಕಾಣಿಸಿಕೊಳ್ಳುತ್ತಾಳೆ ಅಷ್ಟೇ. ನನ್ನನ್ನು ಒಳ್ಳೆಯ ಮನುಷ್ಯನನ್ನಾಗಿ ರೂಪಿಸಿದ್ದು, ಓದಿಸಿದ್ದು – ಇದೇ ಅಮ್ಮ. ಇವತ್ತಿಗೂ ‘ಕವಿತೆ’ಬರ್ಕೊಂಡು ಕೊಟ್ಕೊಂಡಿದ್ದೀಯೋ ವ್ಯವಹಾರ ಸರಿಯಾಗ್ ನೋಡ್ತಿಯೋ ಇಲ್ವೋ ಅಂತ ತರಾಟೆಗೆ ತೆಗೆದುಕೊಳ್ಳುವ, ತನ್ನಿಡೀ ಜೀವನ ನನಗಾಗಿ ಬದುಕಿಬಿಟ್ಟ ಹೆಣ್ಣು .. ಎಂದೋ ತನ್ನ ಹೃದ್ರೋಗ ದಿಂದ ಸಾಯಬೇಕಿದ್ದವಳು ನನಗಾಗಿ ಇನ್ನೂ ಬದುಕಿದ್ದೀನಿ ಅಂತಾಳೆ.
ಈ ಮೂವರ ಹೊರತಾಗಿಯೂ ನನ್ನ ಹೆತ್ತಮ್ಮ, ಸದಾ ಜಗಳವಾಡೊ ನನ್ನ ತಂಗಿ, ಅತ್ತೆಯರು, ಚಿಕ್ಕಮ್ಮಂದಿರು, ಗೆಳತಿಯರು,ಹಳ್ಳಿಯ ಯಾವ ಓಣಿ -ಕೇರಿ ಬಳಸಿಬಂದರೂ ಅತ್ತೆ, ಚಿಕ್ಕಮ್ಮ, ಅಜ್ಜಿ ಅನ್ನುವ ಸಾವಿರ ಸಂಬಂಧಗಳು,
ಈಗಷ್ಟೇ ಸೇರಿಕೊಂಡು ನನ್ನ ತಂಗಿಯ ಪುಟ್ಟಮಗಳು ಅಬ್ಬಬ್ಬಾ ಎಷ್ಟು ಜನ ಹೆಣ್ಣುಮಕ್ಕಳು ನನ್ನ ಬದುಕನ್ನು ಸಂಪನ್ನಗೊಳಿಸುತ್ತಿದ್ದಾರೆ.. ಸಂಗಾತಿಯಾಗಿ ಬರುವವಳು ಒಬ್ಬಳು ಮಾತ್ರ ಬಾಕಿ ಇದ್ದಾಳೆ!

ಸ್ತ್ರೀ ಸೂಕ್ತ

ನಿನ್ನ ಛಾಯೆಯಷ್ಟೆ ಕಂಡು

ಮಾಯೆಯೆಂದು ಬೆಚ್ಚಿಬಿದ್ದರು

ನಿನ್ನ ಮೂರ್ತದ ಬಣ್ಣಕ್ಕೆ

ಹಚ್ಚಿ ಬೆಲೆ ಕಟ್ಟಿದರು

ನಾಲಗೆಯಲ್ಲಿ ನೀರು ಹನಿಸುತ್ತಲೇ

ಬೆಂಕಿ ಎಂದರು

ಕೊನೆಗೆ,

ದೇವರೆಂದರು ಸುಖದ ಪಾರಮ್ಯಕ್ಕೆ!

ಮಿಗಿಲಾಗಿ

ನಿಂತ ಗಂಡಿನ ದಡದಲ್ಲಿ

ಹರಿವ ನದಿಯಾಗಿದ್ದೆ ನೀನು..

 
ಇದಿಷ್ಟು ವೈಯುಕ್ತಿಕ ಹಾಗೂ ಭಾವನಾತ್ಮಕ ನೆಲೆಗಟ್ಟಿನಲ್ಲಿ ನೋಡಿದ ಸ್ತ್ರೀ ಸಂಬಂಧ. ಆದ್ರೆ ವರ್ತಮಾನದ ಬದುಕಿನಲ್ಲಿ ಇದು ಹೀಗೆ.. ಇಷ್ಟು .. ಭಾವನಾತ್ಮಕ ನೆಲೆಗಟ್ಟಿನಲ್ಲಿ ಇಂದು ಉಳಕೊಂಡಿದೆಯೇ? ಎನುವ ಪ್ರಶ್ನೆ ನನ್ನಲ್ಲಿ ಈಚೆಗೆ ಕಾಡಲಾರಂಭಿಸಿದೆ.
ಹೊಸಶತಮಾನದ ಹೊಸನೆಲೆಗಳು ಬದುಕಿನಲ್ಲಿ ಕಾಣಿಸತೊಡಗಿವೆ. ಹೆಣ್ಣು ಸಂಕೋಚ, ನಿರ್ಬಂಧಗಳನು ದಾಟಿದಳು.. ಕಾನೂನನ್ನು ತನ್ನವಾಗಿಸಿಕೊಂಡಳು. ಎಲ್ಲ ವೃತ್ತಿ-ಪ್ರವೃತ್ತಿಗಳಲ್ಲೂ ಚತುರೆ ಎನಿಸಿಕೊಂಡಳು. ಆದರೆ ಭದ್ರತೆಯ ವಿಚಾರದಲ್ಲಿ ಮಾತ್ರ ಇನ್ನೂ ಕಷ್ಟ ಮತ್ತು ನಿಕೃಷ್ಟವಾಗುತ್ತಿದೆ ಪರಿಸ್ತಿತಿ. ಮೂಲ ಎಲ್ಲಿಯದು?
ಹೆಣ್ಣು ಹಿಡಿದ ಕುಡುಗೋಲು, ಸೌಟುಗಳು
ಬೆಳೆದು , ಬೇಯಿಸಿ, ಉಣ್ಣಿಸಿ
ದೇಶ ಮುನ್ನಡೆಸಿದುವೇ ಹೊರತು
ಸಿಂಹಾಸನವೇರಿದ ಸಾಮ್ರಾಟರಲ್ಲ.
ಮೊದಲಿಂದಾನು ಇದ್ದ ಪುರುಷ ಪ್ರಧಾನ ಸಂಸ್ಕೃತಿ ಇನ್ನೂ ಕೂಡ ಸಮಾಜವನ್ನು ತನ್ನ ಕಬಂಧ ಬಾಹುಗಳಹಿಡಿತದಿಂದ ಬಿಟ್ಟಿಲ್ಲವೇನು?! ಅಥವಾ ಹೆಣ್ಣಿನ ಬಗ್ಗೆ ಗಂಡಿಗೆ ಇರುವ ಸ್ವೇಚ್ಛೆಯ, ಉದಾಸೀನದ ಮನೋಭಾವ ಬದಲಾಗುತ್ತಿಲ್ಲವಾ? ವಿಪರ್ಯಾಸ ಅಂದ್ರೆ ಈ ಹಿಂದೆ ಇದ್ದ ಸುರಕ್ಷತೆಯ ಭಾವ ಇವಾಗ ಮೂರು ಕಾಸಿನಷ್ಟು ಕೂಡ ಇಲ್ಲದಿರುವುದು. ವೈಯುಕ್ತಿಕವಾಗಿ ಮೇಲೆ ನಾನು ಹೇಳಿದ ಭಾವನಾತ್ಮಕ ಸಂಬಂಧಗಳು ಜೀವಂತವಿದ್ದು ಮನುಷ್ಯ ಮಹಿಳಾ ದೌರ್ಜನ್ಯಕ್ಕೆ ಮುಂದಾಗುವುದು ಪುರುಷ ಪ್ರಜ್ಞೆಯ ದ್ವಂದ್ವ ನೆಲೆಗಟ್ಟನ್ನು ತೋರಿಸುತ್ತಿದೆ.
2-3 ದಶಕಗಳ ಹಿಂದೆ ಅವಿರತವಾಗಿ ನಡೆದ ಹೆಣ್ಣುಭ್ರೂಣ ಹತ್ಯೆಗಳ ಪರಿಣಾಮ ಇವತ್ತು ಹೆಣ್ಣು-ಗಂಡಿನ ಸರಾಸರಿ ಏರುಪೇರಾಗಿದೆ. ನನ್ನ ವಯೋಮಾನದ ಹುಡುಗರಿಗೆ ಮದುವೆಯಾಗಲು ಹೆಣ್ಣು ಸಿಗದ ಪರಿಸ್ತಿತಿ ತಲೆದೂರಿದೆ. ವಿಕೃತಗಳ ಅಟ್ಟಹಾಸ ಮುಗಿಲು ಮುಟ್ಟುತ್ತಿದೆ..ಚಿಕ್ಕ ಚಿಕ್ಕ ಮಕ್ಕಳಿಂದ ಶುರುವಾಗಿ, ವಯೋವೃದ್ದರವರೆಗೂ ಇದರ ವ್ಯಾಪ್ತಿ ಹರಿದಿಕೊಳ್ಳುತ್ತಿರೋದು ತುಂಬಾ ಆತಂಕಕಾರಿಯಾದ ವಿಷಯ. ಅದರಲ್ಲೂ ವಿದ್ಯಾವಂತವರ್ಗವೂ ಲೈಂಗಿಕ ಕಿರುಕುಳದಂತ ವಿಕೃತಿಗೆ ಇಳಿದಿದ್ದು ಅಸಹ್ಯವೆನಿಸಿದೆ.

ಒಲೆ ಊದುತ್ತಾ ಉಸಿರೆಳೆಯುತ್ತಾ

‘ಅ ಆ’ ತಿದ್ದೋ ಅನ್ನುವ ಅವ್ವ

ಸಾಕ್ಷರಳಲ್ಲ. ಆದರೂ ಕಲಿಸುತ್ತಾಳೆ

ಅವಳಿಗೆ ಗೊತ್ತಿರೋದು ಅವೆರಡೇ ಅಕ್ಷರ.

ಸ್ತ್ರೀ ಸಬಲೀಕರಣಕ್ಕೆಂದು ಬೇಕಾದಷ್ಟು ಕಠಿಣ ಕಾನೂನುಗಳನ್ನು ತಂದರೂ ಅವುಗಳ ಜಾರಿಯಲ್ಲೂ ಲೋಪ..

ಮಹಿಳಾ ಮೀಸಲಾತಿ ಎನ್ನೋದು ಮರೀಚಿಕೆಯಂತೆ ಸಂಸತ್ತಿನ ಅಂಗಳದಲ್ಲಿ ಅಡ್ಡಾಡುತ್ತಿದೆ
ನನಗಿರುವ ದೊಡ್ಡ ಸಂದೇಹ.. ನಮ್ಮ ಭಾವನಾತ್ಮಕ ನೆಲೆಯಲ್ಲೇ ಸಮಾನತೆಯ ಕಾಣ್ಕೆ ಇಲ್ಲವೇನೋ?!
ಅವಳ ಲಜ್ಜೆ-ನಾಚಿಕೆಗಳು
ಇರಲಿಲ್ಲವಾದಲ್ಲಿ
ಇವನ ಗಂಡಸುತನಕ್ಕೆ
ಕಿಮ್ಮತ್ತಿಲ್ಲ!
ಈವರೆಗೂ ‘ಹೆಣ್ಣು’ ಎನ್ನುವ ಸ್ತ್ರೀವಾಚಕಗಳೇ ಕುಗ್ಗಿಸಿಬಿಟ್ಟವು ಅವಳನ್ನು ಈ ನೆಲದ ಮೇಲೆ.. ಅಸಲಿಗೆ ಮನುಷ್ಯ ಈ ಜೈವಿಕ ಸ್ವರೂಪಕ್ಕೆ ಅತೀತ ಬೆಳೆಯುತ್ತಿರುವ ಈ ಹೊತ್ತಿನಲ್ಲೂ ಈ ಸ್ತ್ರೀವಾಚಕ ಪದಗಳ ಉಚ್ಚಾರದಲ್ಲೆಲ್ಲೋ ಅಡಗಿರುವ ಭಾವದಲ್ಲಿ ಲೋಪವಿದೆ ಅನಿಸುತ್ತೆ.. ಮೊದಲು ಅದನ್ನು ಸರಿಪಡಿಸಿಕೊಳ್ಳಬೇಕು. ನಮ್ಮ ಮುಂದಿನ ಪೀಳಿಗೆಗೆ ಲಿಂಗ ಅಸಮಾನತೆಯ ಸೋಂಕು ತಗುಲದ ಹಾಗೆ ಭಾವನಾತ್ಮಕ ನೆಲೆಯಲ್ಲೇ ಸಮಾನತತ್ವವನ್ನು ಅವರ ಎದೆಗಿಳಿಸಬೇಕು. ಸ್ತ್ರೀ-ಪುರುಷ ಎಂಬ ಲಿಂಗಾಧಾರಿತ ಸಾಮಾಜಿಕ ಪರಿಕಲ್ಪನೆಗಳನ್ನು ತೊಡೆದುಹಾಕಿ ಮಾನವತಾ ಪರಿಕಲ್ಪನೆಗಳಿಗೆ ಮುಂದಾಗಬೇಕು.

ನನ್ನ ನಿದ್ದೆಗಾಗಿ ಅವ್ವ

ಅದೆಷ್ಟೋ ಪದ ಕಟ್ಟಿ

ಹಾಡಿದಳು.. ಯಾರೂ

ಅವಳನ್ನು ಕವಿಯೆನ್ನಲಿಲ್ಲ.

 

‍ಲೇಖಕರು G

March 8, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

9 ಪ್ರತಿಕ್ರಿಯೆಗಳು

  1. ಮಂಜಿನ ಹನಿ

    ರಾಜಣ್ಣ, ಏನ್ ಬರ್ದಿದ್ದೀಯೋ ಮಾರಾಯ? ಈ ಬರಹಕ್ಕೆ ಏನೆನ್ನಲೂ ಪದಗಳು ಸಾಲುತ್ತಿಲ್ಲ. ಆ ಹನಿಗವನಗಳ ಕಿಮ್ಮತ್ತು, ಅಬ್ಬಾ! ಬಹಳ ಹಿಡಿಸ್ತು 🙂
    – ಪ್ರಸಾದ್.ಡಿ.ವಿ.

    ಪ್ರತಿಕ್ರಿಯೆ
  2. Swarna

    ಗೆಜ್ಜೆ ನಾದದಲ್ಲಿ ತಲ್ಲೀನರಾದವರಿಗೆ ಹೆಜ್ಜೆಗಳು ದಕ್ಕುವುದಾದರೂ ಹೇಗೆ ?
    ಚಂದದ ಬರಹ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: