‘ಚರಕ’ದ ಕಣ್ಣಲ್ಲಿ ನಾಳಿನ ಪ್ರಶ್ನೆಯಿದೆ..

ಪ್ರತಿಭಾ ಎಂ ವಿ, ಸಾಗರ


ಬದುಕೆಂಬುದು ಹಲವು ಆಕಸ್ಮಿಕಗಳ ಸರಮಾಲೆ. ಹೀಗೇ ಸಾಗುತ್ತಿರುವಾಗ ದಿಢೀರೆಂದು ತಿರುವೊಂದು ಎದುರಾಗುತ್ತದೆ, ಅದು ಅನಿವಾರ್ಯವಾಗುತ್ತದೆ , ಗಮ್ಯಕ್ಕೆ ನಮ್ಮನ್ನು ಎದುರಾದ ತಿರುವೇ ಕರೆದೊಯ್ಯತೊಡಗುತ್ತದೆ..

ರಂಗಭೂಮಿ, ಸಂಘಟನೆ, ಮಕ್ಕಳ ಕ್ಷೇತ್ರ…. ಹೀಗೆ ಹಲವಾರು ಮಜಲುಗಳಲ್ಲಿ ತೊಡಗಿಸಿಕೊಂಡ ನನಗೆ ನೇಕಾರಿಕೆ, ಕೈಮಗ್ಗ ಕ್ಷೇತ್ರದಲ್ಲಿ ಅಂತಹ ಅನುಭವ ಇಲ್ಲದೆಯೂ ನಾಡಿನ ಅತಿಮುಖ್ಯ ಸಂಸ್ಥೆಯಾದ ‘ಚರಕ ಮಹಿಳಾ ವಿವಿಧೋದ್ದೇಶ ಕೈಗಾರಿಕಾ ಸಹಕಾರ ಸಂಘ ‘ಕ್ಕೆ ಅನಿವಾರ್ಯವಾಗಿ, ಆಕಸ್ಮಿಕವಾಗಿ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸಬೇಕಾದ ಸವಾಲು ಮತ್ತು ಜವಾಬ್ದಾರಿ ಎದುರಾಗಿದೆ.

ಚರಕದೊಂದಿಗೆ  ಕಳೆದ ಇಪ್ಪತ್ತು ವರ್ಷಗಳಿಂದ ನನಗೆ ನಂಟಿದೆ. ಕೇವಲ ಗ್ರಾಹಕಳಾಗಿ ಮಾತ್ರವಲ್ಲ, ನಾನು ಅಲ್ಲಿ ನಡೆಯುವ ಕಾರ್ಯಕ್ರಮ -ಅದು ಸಾಂಸ್ಕೃತಿಕ, ವೈಚಾರಿಕ, ಯಾವುದೇ ಇರಲಿ ನಾನು ಪ್ರೇಕ್ಷಕಳಾಗಿ ಸದಾ ಭಾಗವಹಿಸುತ್ತಾ ಬಂದವಳು …

ನನಗೆ ಎಂದಿಗೂ ‘ಚರಕ’ ಕೇವಲ ಉತ್ಪಾದನಾ ಘಟಕವಾಗಿ ಕಂಡಿರಲಿಲ್ಲ ಬದಲಿಗೆ ಒಂದು ಸಾಂಸ್ಕೃತಿಕ ನೆಲವಾಗಿತ್ತು ..

ಮಲೆನಾಡಿಗೆ ಬಂದವರು ಹೆಗ್ಗೋಡಿನ ನೀನಾಸಂ, ಹಾಗೂ ಚರಕವನ್ನೂ ಭೇಟಿ ಮಾಡದೇ ಹೋದರೆ ಆ ಭೇಟಿ ಸಂಪೂರ್ಣವಾಗುವುದೇ ಇಲ್ಲ ಎಂಬಷ್ಟು ಈ ಎರಡೂ ಸಂಸ್ಥೆಗಳು ಜನಮಾನಸದಲ್ಲಿ ನೆಲೆಯೂರಿವೆ.

ಚರಕ ಉತ್ಸವಗಳಲ್ಲಿ ನಡೆವ  ನಾಟಕ, ಸಂಗೀತ, ಯಕ್ಷಗಾನ ಜೊತೆಗೆ  ಕೈಮಗ್ಗದ ಸೀರೆಯುಟ್ಟು ಚಂದವಾಗಿ, ಶಿಸ್ತಾಗಿ  ಓಡಾಡುವ ಹೆಣ್ಣುಮಕ್ಕಳು … ಪ್ರೀತಿಯಿಂದ ಅಲ್ಲಿ ಮಾಡಿದ ಊಟ.. ಚರಕದ ಸಹೋದರಿಯರ ಪ್ರೀತಿ…. ಅಕ್ಕ ಎಂದು ಮಾತಾಡಿಸುವ ಹಲವಾರು ಮನಸುಗಳು ಇವೆಲ್ಲವೂ ನನಗೆ ಸದಾ ವಿಸ್ಮಯವೇ… ಇಲ್ಲಿ ಕೆಲಸ ಮಾಡುವ ಅವರೇ ರಂಗದ ಮೇಲೆ ಪಾತ್ರ ಮಾಡಿದ್ದು ರಂಗಭೂಮಿಯಲ್ಲಿ ತೊಡಗಿಸಿಕೊಳ್ಳುವುದು ಮತ್ತೂ ಬೆರಗೇ… ನಮ್ಮ ತಂಡವೂ ಚರಕ ಉತ್ಸವದಲ್ಲಿ ನಾಟಕಗಳನ್ನಾಡಿದೆ …

ಪ್ರಸಿದ್ಧ ರಂಗಕರ್ಮಿ ಪ್ರಸನ್ನ ಅವರು ರಚಿಸಿದ ನಾಟಕಗಳನ್ನು ನಮ್ಮ ‘ಸ್ಪಂದನ’ ಸಂಸ್ಥೆಗೆ ನಾನೇ ನಿರ್ದೇಶಿಸಿ ಅವು ಹಲವಾರು ಪ್ರದರ್ಶನ ಕಂಡಿವೆ. ಸ್ವತಃ ಪ್ರಸನ್ನ ಅವರು ಸ್ಪಂದನದ ಹಲವಾರು ಕಾರ್ಯಕ್ರಮಕ್ಕೆ ಬಂದಿದ್ದಾರೆ…. ನಟನೆಯ ಪಾಠಗಳನ್ನು ಕಲಿಸಿದ್ದಾರೆ…. ಸಲಹೆ, ಸೂಚನೆ ನೀಡಿದ್ದಾರೆ.

ಸ್ಪಂದನ ಚರಕದ ಜೊತೆಗೂಡಿ ರಂಗಭೂಮಿ, ಸಿನಿಮಾ, ಸಂವಾದ ಇತ್ಯಾದಿ ಕಾರ್ಯಕ್ರಮ ಆಯೋಜಿಸಿದೆ… ಹೀಗೆ ನನ್ನ ಚರಕದ ನಡುವಣ ಬೆಸುಗೆಗೆ, ಭಾಂಧ್ಯವ್ಯಕ್ಕೆ ಮತ್ತೊಂದು ಭಡ್ತಿ ಸಿಕ್ಕಂತಾಗಿದೆ.

ಅಂತಹ ಚರಕ ಸದ್ಯದ ಬಿಕ್ಕಟ್ಟಿನಿಂದಾಗಿ ಸಂಕಷ್ಟದಲ್ಲಿದೆ. ಹೆಣ್ಣುಮಕ್ಕಳ ಕಣ್ಣಲ್ಲಿ ನಾಳಿನ ಪ್ರಶ್ನೆಯಿದೆ. ಪ್ರಸನ್ನ ಸೇರಿದಂತೆ ಹಲವರು ಈ ಪ್ರಶ್ನೆಗಳಿಗೆ ಉತ್ತರ ಕೊಡುವ ಪ್ರಯತ್ನದಲ್ಲಿರುವ ಈ ಹೊತ್ತಲ್ಲಿ ನಾನು ನನ್ನ ಪಾತ್ರವನ್ನು ಹೊಂದಿಸಿಕೊಳ್ಳುತ್ತಿದ್ದೇನೆ.

ಜಗತ್ತನ್ನು ಹೆಣ್ಣಿನ ದೃಷ್ಟಿಯಿಂದ ನೋಡಬೇಕು ಎಂಬ ಉಕ್ತಿಯನ್ನು ಸದಾ ಒಪ್ಪುವಳು ನಾನು…. ಇಂತಹ ಹತ್ತು ಹೆಣ್ಣುಮಕ್ಕಳಿಂದ ಮೂವತ್ತು ವರ್ಷಗಳ ಹಿಂದೆ ಆರಂಭವಾದ ಚರಕ ಇದೀಗ 450 ಕ್ಕೂ ಹೆಚ್ಚು ಜನರನ್ನು ಒಳಗೊಂಡಿದೆ. ಉತ್ತರ ಕರ್ನಾಟಕದ 300 ಕ್ಕೂ ಹೆಚ್ಚು ನೇಕಾರರಿಗೆ ಕೆಲಸ ನೀಡಿ ಅವರ ನೇಕಾರಿಕೆಯನ್ನು ಖರೀದಿಸುವ ಮೂಲಕ ಅವರ ಬದುಕಿಗೆ ಸಹಕಾರಿಯಾಗಿದೆ.

ಚರಕ ಗ್ರಾಮಕೇಂದ್ರಿತ ಸಂಸ್ಥೆಯಾಗಿದ್ದು ಕೈಮಗ್ಗದ ಉತ್ಪನ್ನಗಳನ್ನು ನೈಸರ್ಗಿಕ ಬಣ್ಣಗಳೊಂದಿಗೆ, ಸರಳ ವಿನ್ಯಾಸಗಳೊಂದಿಗೆ ತಯಾರಿಸುತ್ತದೆ. ಇಲ್ಲಿ ಹೆಣ್ಣುಮಕ್ಕಳೇ ಮಗ್ಗದಿಂದ  ನೂಲು ತೆಗೆಯುತ್ತಾರೆ, ಬಟ್ಟೆ ಹೆಣೆಯುತ್ತಾರೆ, ಬಣ್ಣ ಹಾಕುತ್ತಾರೆ, ಕಟಿಂಗ್, ಹೊಲಿಗೆ, ಇಸ್ತ್ರಿ (ಐರನ್ ) ಮಾಡುತ್ತಾರೆ ಪ್ಯಾಕಿಂಗ್ ಮಾಡಿ ಕಳಿಸುತ್ತಾರೆ. ಹಾಗೆಯೇ ಇಲ್ಲಿ ಹಲವು ಗಂಡಸರೂ ಇದ್ದಾರೆ .

‘ದೇಸಿ’ ಸಂಸ್ಥೆ ಚರಕದ ಸೋದರ ಸಂಸ್ಥೆ. ಇದು ನಗರಕೇಂದ್ರಿತವಾಗಿದ್ದು, ಚರಕದ ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸುವ ಮಾರುಕಟ್ಟೆಯ ಕಾರ್ಯ ನಿರ್ವಹಿಸುತ್ತದೆ.

ಈ ಕೋವಿಡ್ ಹಿನ್ನೆಲೆಯಲ್ಲಿ, ಚರಕ ಸಂಸ್ಥೆ ತೀರ ಸಂಕಷ್ಟಕ್ಕೆ ಸಿಲುಕಿದ್ದು, ದೇಸಿ ಅಂಗಡಿಗಳಲ್ಲಿ ಮಾರಾಟವಾಗದೇ ಉಳಿದ ಉತ್ಪನ್ನಗಳು, ಚರಕದ ದಾಸ್ತಾನು ಕೊಠಡಿಯಲ್ಲಿ ಶೇಖರವಾಗಿರುವ ಕೋಟಿಗಟ್ಟಲೆ ಬೆಲೆಯ ಬಟ್ಟೆಯ ಸಂಗ್ರಹ, ಬರಿದಾದ ಬ್ಯಾಂಕಿನ‌ ಖಾತೆ, ಇದರ ಜೊತೆಯಲ್ಲಿ ಸರ್ಕಾರದಿಂದ ಈಗಾಗಲೇ ಮಂಜೂರಾಗಿದೆಯೆಂಬ ಕಾರಣದಿಂದ ಚರಕ ಖರ್ಚು ಮಾಡಿದ ಕೋಟಿಗಟ್ಟಲೇ ಹಣದಲ್ಲಿ ಒಂದು ಪೈಸೆಯೂ ಜಮಾ ಆಗದೆ ಇರುವ ಕೆಟ್ಟ ಸ್ಥಿತಿ… ಇವೆಲ್ಲವೂ ಸೇರಿ ಬಿಕ್ಕಟ್ಟು ದೊಡ್ಡದಾಗಿದೆ.

ಈ ಹೊತ್ತಿನಲ್ಲಿ ಇನ್ನೇನು ಚರಕವನ್ನು ಮುಚ್ಚಿಬಿಡುವ ಪರಿಸ್ಥಿತಿ ಬಂದು ನಿಂತಾಗ ನಾಡಿನ ಹಲವರು ಬೆಂಬಲವಾಗಿ ನಿಂತಿದ್ದಾರೆ, ಪರಿಸ್ಥಿತಿಗೆ ಕಾರಣವನ್ನು ಪ್ರಶ್ನಿಸಿದ್ದಾರೆ, ವಿಮರ್ಷಿಸಿದ್ದಾರೆ, ಟೀಕಿಸಿದ್ದಾರೆ. ಚರಕದ ಪರವಾಗಿ ನಾನು ಈ  ಎಲ್ಲವನ್ನೂ ಸ್ವಾಗತಿಸಿದ್ದೇನೆ .

ಬೆಂಬಲ ನಮ್ಮ ಶಕ್ತಿಯಾದರೆ, ಟೀಕೆ ವಿಮರ್ಷೆಗಳು ನಮ್ಮನ್ನು ಮತ್ತಷ್ಟು ಬೆಳೆಸುತ್ತವೆ ಎಂದು ನಾನು ನಂಬುತ್ತೇನೆ .

“ಶ್ರಮದ ಬದುಕೇ ಸಭ್ಯ ಬದುಕು ” ಎಂಬುದು ಚರಕದ ಮೂಲಮಂತ್ರ, ನೂಲುವುದು ಗಾಂಧಿಯ ಕನಸಾಗಿತ್ತು. ಈ ನೇಕಾರಿಕೆ ನಮ್ಮ ದೇಶದ ಹೆಣ್ಣುಮಕ್ಕಳಿಗೆ ಪೂರಕ ಕಸುಬು, ಚರಕದಲ್ಲಿ ಕೆಲಸ ಮಾಡುವ ಯಾರಿಗೂ ಧಿಡೀರ್ ಶ್ರೀಮಂತರಾಗುವ ಭ್ರಮೆಯಿಲ್ಲ, ತಾವು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕೆಂಬುದು ಅವರ ಆಲೋಚನ ಕ್ರಮ.

ಮಹಿಳೆಯರಿಗೆ ಸ್ವಾವಲಂಬಿ ಬದುಕನ್ನು ಕಲ್ಪಿಸುವಲ್ಲಿ, ಆ ಮೂಲಕ ಘನತೆ ಮತ್ತು ಶ್ರಮ ಸಂಸ್ಕೃತಿಯ ಬಗ್ಗೆ ಗೌರವ ವಿಶ್ವಾಸ ಮೂಡಿಸುವ ಒಂದು ಮಾದರಿ ಸಂಸ್ಥೆ ಚರಕ.

ಇದು ಬೆಳೆದು ಬಂದ ಪರಿಯೇ ಸಾಹಸ. ಇಲ್ಲಿ ಮೂರು ದಶಕಗಳ ಬೆವರಿನ ನಡೆ ಇದೆ.

ಊರಿನ ಸುತ್ತ ಗ್ರಾಮ ಜೀವನದ ವಾತಾವರಣವನ್ನು ಶಕ್ತವಾಗಿ ಚರಕ ಕಟ್ಟಿದೆ. ಇಡೀ ರಾಜ್ಯದ ಕೈಮಗ್ಗ ನೇಕಾರರಿಗೆ ಶ್ರಮದ ಬದುಕಿನ ಮೇಲೆ ವಿಶ್ವಾಸ ಉಳಿಸಿದೆ. ಹಾಗಾಗಿ ಇದೊಂದು ಉತ್ಪಾದನಾ ಘಟಕವೋ, ವ್ಯಾಪಾರಿ ಕೇಂದ್ರವೋ ಮಾತ್ರವಲ್ಲ ಇದೊಂದು ಸಾಂಸ್ಕೃತಿಕ  ಪ್ರಕ್ರಿಯೆ, ಆಲೋಚನಾ ವಿಧಾನ, ಸಹಕಾರ, ಸರಳತೆ, ಸತ್ಯಾಗ್ರಹ, ಯಂತ್ರಮುಕ್ತ ಕಾಯಕ, ಹೀಗೆ ಹತ್ತು ಹಲವು ವೈಚಾರಿಕ ಭಾವಗಳ ಸಮ್ಮಿಲನ.

ಈಗಿನ ತಾತ್ಕಾಲಿಕ ವಿಪತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರದ ತಪ್ಪು ಕೈಗಾರಿಕ ಆರ್ಥಿಕ  ನೀತಿಯಿಂದ ಬಂದಿರುವುದು. ಕೋವಿಡ್ ಅವರಿಗೆ ಒಂದು ಕಾರಾಣವಷ್ಟೆ. ಕಳೆದ ಎರಡು ವರ್ಷಗಳಿಂದ ದೇಶದಲ್ಲಿ ಚಾಲ್ತಿಯಲ್ಲಿರುವ ಆರ್ಥಿಕ ಹಿನ್ನಡೆಯ ಪರಿಣಾಮವಿದು.

ಗ್ರಾಮಗಳ ಉದ್ಯೋಗವನ್ನು ಬದುಕನ್ನು  ಸರ್ಕಾರ ನಾಶ ಮಾಡುತ್ತಿದೆ. ಸರ್ಕಾರ ಘೋಷಿಸಿದ ಅನುದಾನದ ಹಣ ತಲುಪಿದರೆ, ವಿವಿಧ ಯೋಜನೆ ಗಳಿಗೆ ಸರ್ಕಾರದ ಸಂಸ್ಥೆಗಳು ನಮ್ಮ ಬಟ್ಟೆಗಳನ್ನು ಖರೀದಿಸಿದರೆ ನಮ್ಮ ಸಂಸ್ಥೆ ಎದ್ದು ನಿಲ್ಲುತ್ತದೆ ಎಂಬ ವಿಶ್ವಾಸ ನಮ್ಮದು.

ಈಗಾಗಲೇ ಸರ್ಕಾರೇತರ ಸಂಸ್ಥೆಗಳು ನಮಗೆ ಬೆಂಬಲ ಸೂಚಿಸಿರುವುದು, ವೈಯಕ್ತಿಕವಾಗಿ ಹಲವರು ಖರೀದಿಸುವುದರ ಮೂಲಕ ಬೆಂಬಲಿಸುತ್ತಿರುವುದು ನಮಗೆ ಬಹುದೊಡ್ಡ ಪ್ರೇರಣೆ.

ಇಲ್ಲಿನ ಹೆಣ್ಣುಮಕ್ಕಳ ಜೊತೆ ಅವರಿಗೆ ಭಾವನಾತ್ಮಕವಾಗಿ ರಚನಾತ್ಮಕವಾಗಿ ಬೆರೆಯುವುದು ರಂಗಭೂಮಿಯ ಮತ್ತು  ಮಹಿಳಾ ಸಂಘಟನೆಯ ಹಿನ್ನೆಲೆಯಿಂದ ಬಂದ ನನಗೆ ಸುಲಭವೇ ಆದರೂ ಪ್ರಾಯೋಗಿಕವಾಗಿ ನನಗಿನ್ನೂ ಅನುಭವ ಬೇಕಾಗಿದೆ.

ಇಲ್ಲಿನ ಹೆಣ್ಣುಮಕ್ಕಳು ಮತ್ತೆ ತಮ್ಮ ಕಾಯಕದಲ್ಲಿ ತೊಡಗಿಸಿಕೊಳ್ಳುವಂತೆ, ಮುಂದುವರೆಯುವಂತೆ ಪ್ರೇರೇಪಿಸುವುದು, ಅವರ ನಾಳೆಗಳನ್ನು ರೂಪಿಸುವಲ್ಲಿ ಅತಿಮುಖ್ಯ. ಈ ನಡೆಯಲ್ಲಿ ನಾವು ಸಂಘಟನಾತ್ಮಕವಾಗಿ ಭಾಗಿಗಳಾಗಬೇಕಾಗಿದೆ.

ವಿವಿಧ ಸಂಘಟನೆಗಳ ಜೊತೆ ಚರ್ಚೆ, ರಿಯಾಯಿತಿ ದರದ ಮಾರಾಟ, ತಿರುಗಾಟ, ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ, ಸರ್ಕಾರದ ಅನುದಾನ ಪಡೆಯಲು… ಗ್ರಾಮೋದ್ಯೋಗ ಉಳಿಸಲು ಹೋರಾಟ, ಸಂಘಟನೆ ಹೀಗೆ ಹತ್ತು ಹಲವು ಯೋಜನೆಗಳು ನಮ್ಮೆದುರಿಗಿವೆ. ಈ ಎಲ್ಲ ಪ್ರಯತ್ನಗಳ ಪ್ರತಿಫಲವಾಗಿ ಮತ್ತೆ ಚರಕ ತಿರುಗುತ್ತದೆಂಬ ನಂಬಿಕೆಯಿದೆ. ಇದರೊಂದಿಗೆ ತೊಡಗಿಸಿಕೊಂಡ ಖುಷಿ ಒಂದೆಡೆಯಾದರೆ, ಎದುರಿರುವ ಸವಾಲು ದೊಡ್ಡದೆಂಬ ಅರಿವು ಮತ್ತೊಂದೆಡೆ, ಆದರೂ ವಿಶ್ವಾಸವಿದೆ. ನಾವು ಗೆಲ್ಲುತ್ತೇವೆ, ಇದರೊಂದಿಗೆ ಗಾಂಧಿಯ ಕನಸೂ ಗೆಲ್ಲುತ್ತದೆ..

ವಿನಯಾ ಒಕ್ಕುಂದರ ಸಾಲೊಂದು ನೆನಪಾಗುತ್ತಿದೆ,

“ಒಂದಲ್ಲಾ ಒಂದು ದಿನ

ಈ ನೆಲದಾ ಹೆಣ್ಣುಗಳು

ಮೆರವಣಿಗೆ ಹೊರಡುತ್ತಾರೆ “

ಹೊರಟಿದ್ದೇವೆ ಬನ್ನಿ ಸಹಚಾರಿಗಳಾಗಿ,

‍ಲೇಖಕರು Avadhi

September 20, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನೀನು…

ನೀನು…

ದೊರೆ..

ದೊರೆ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: