ಅಡುಗೆ ಮನೆಯ ಮೂಲಕ..

ನೂತನ್ ದೋಶೆಟ್ಟಿ 

ಕಳೆದ ಮೇ  ತಿಂಗಳ ಕೊನೆಯ ವಾರ. ಫೇಸ್ ಬುಕ್ಕಿನಲ್ಲಿ ಮಾಡಿದ ಹೊಸ ಪೇಜಿನಲ್ಲಿ ನನ್ನನ್ನೂ ಸೇರಿಸಿ ಅದನ್ನು ನನಗೆ ಲೈಕ್ ಮಾಡಲು ಕಳಿಸಲಾಗಿತ್ತು. ಅದನ್ನು ತೆರೆದು ನೋಡಿದಾಗ ಅದು ಸಣ್ಣ ಪ್ರಮಾಣದಲ್ಲಿ   ಮಹಿಳೆಯರು ನಡೆಸುವ ವ್ಯಾಪಾರ ವಹಿವಾಟಿಗಾಗಿ ನಿರ್ಮಿಸಲಾದ ಅಂತರ್ಜಾಲ ಮಾರುಕಟ್ಟೆ ಎಂದು ತಿಳಿದಾಗ ನಿಜಕ್ಕೂ ಖುಷಿಯಾಯಿತು.

ಮಹಿಳಾ ಸಬಲೀಕರಣದ ಸಲುವಾಗಿ  ಹತ್ತಾರು ಸರ್ಕಾರಿ, ಅರೆ ಸರ್ಕಾರಿ, ಸ್ವಯಂ ಸೇವಾ ಸಂಸ್ಥೆಗಳು ಕಳೆದ 3-4 ದಶಕಗಳಿಂದ ಮಾಡುತ್ತಿರುವ ಕೆಲಸ  ಇಲ್ಲಿ ಅಂದು ಆರಂಭ ಆಗಿತ್ತು. ಅಂತರ್ಜಾಲಕ್ಕೆ ಇದು ಹೊಸತಲ್ಲವಾದರೂ ಕರ್ನಾಟಕದ ಮಹಿಳೆಯರಿಗೆ ಇದು ಹೊಸತು. ಅದರ ರೂವಾರಿ ಅಪರ್ಣ ರಾವ್.

ಇವರು ಮೂಲತಃ ಬೆಂಗಳೂರಿನವರಾಗಿದ್ದು ಈಗ ಮುಂಬೈ ನಿವಾಸಿಯಾದರೂ ಕರುನಾಡ ನಂಟನ್ನು ಬಿಟ್ಟವರಲ್ಲ. ಅವರೂ ಕೂಡ ಸಣ್ಣ ಉದ್ಯಮಿಯೆ. ಕಲಾತ್ಮಕ ಸಾಬೂನುಗಳನ್ನು ತಯಾರಿಸುವುದರಲ್ಲಿ ಸಿದ್ಧ ಹಸ್ತರು. ತಮ್ಮದೇ ಆದ ಸ್ನೇಹ ವರ್ಗದಲ್ಲಿ ವಹಿವಾಟು ನಡೆಸುವ ಅವರು ಕೊರೊನಾ ಲಾಕ್ ಡೌನ್ ಸಮಯದಲ್ಲಿ ವಹಿವಾಟು ನಡೆಸುವ ಸಂಕಷ್ಟವನ್ನು ಸ್ವತಃ ಅನುಭವಿಸಿ ಅದಕ್ಕೆ ಪರಿಹಾರ ಕಂಡುಕೊಳ್ಳಲು ಈ ಅಂತರ್ಜಾಲ ಮಾರುಕಟ್ಟೆಯನ್ನು ಆರಂಭಿಸುವುದರ ಮೂಲಕ ತನ್ನಂತೆ ಸಣ್ಣ ಪ್ರಮಾಣದಲ್ಲಿ ಗೃಹ ಉದ್ದಿಮೆ ನಡೆಸುತ್ತಿರುವವರಿಗೆ ವೇದಿಕೆಯನ್ನು ಕಲ್ಪಿಸಲು ಮಾಡಿದ ಅವರ ನಿರ್ಧಾರದ ಹಿಂದೆ ಕರಾರುವಾಕ್ಕಾದ ಯೋಜನೆ ಹಾಗೂ ಸಿದ್ಧತೆಗಳಿವೆ. 

 ಅವರು ಯೋಜನೆಯನ್ನು ಫೇಸ್ ಬುಕ್ಕಿನಲ್ಲಿ ಹರಿಯಬಿಟ್ಟಾಗ ಅದಕ್ಕೆ ದೊರೆತ ಪ್ರತಿಕ್ರಿಯೆ ಅಭೂತಪೂರ್ವ. ಮೇ 25 ರಂದು ಆರಂಭವಾದ ಈ ಗುಂಪಿನಲ್ಲಿ ಕೇವಲ ಮೂರು ತಿಂಗಳ ಅವಧಿಯಲ್ಲಿ 18850 ಮಹಿಳಾ ಮಾರಾಟಗಾರರು ಸೇರಿದ್ದಾರೆ ಎಂದರೆ ನಿಜಕ್ಕೂ ಆಶ್ಚರ್ಯ ಹಾಗೂ ಸಂತೋಷ ಎರಡೂ ಆಗುತ್ತದೆ. ಇವರಲ್ಲಿ ಕೆಲವರು ಈ ಗುಂಪಿಗೆ ಸೇರುವ ಮೊದಲಿನಿಂದಲೂ ವ್ಯವಹಾರ ಮಾಡುತ್ತಿದ್ದವರು. ಅನೇಕರು ಹೊಸತಾಗಿ ಸೇರಿದವರು. ಕೃಷಿ ಹಿನ್ನೆಲೆಯವರೂ ಸಹ  ತಮ್ಮ ಉತ್ಪನ್ನಗಳಿಗೆ ಮಾರುಕಟ್ಟೆಯಾಗಿ  ಇದನ್ನು   ಬಳಸಿಕೊಂಡಿದ್ದಾರೆ.

ಉಳಿದಂತೆ ಸಾಂಭಾರ ಪುಡಿ, ಚಟ್ನಿ ಪುಡಿಗಳಿಂದ ಹಿಡಿದು ಬಟ್ಟೆ, ಉಡುಪುಗಳು, ಆಭರಣಗಳು, ತರಹೇವಾರಿ ತಿಂಡಿ ತಿನಿಸುಗಳು ಮೊದಲಾದ ಹತ್ತು ಹಲವು ವಸ್ತುಗಳು ಈ ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಜೂನ್ , ಜುಲೈ ಆಗಸ್ಟ್ ತಿಂಗಳುಗಳಲ್ಲಿ  “ತಿಂಗಳ ಯಶಸ್ವಿ ಮಾರಾಟಗಾರ್ತಿ” ಯರನ್ನೂ ಘೋಷಿಸಲಾಗಿದೆ. ಅಂಥವರ ನಿವ್ವಳ ಲಾಭ 35-4೦ ಸಾವಿರಗಳು ಎಂಬುದು ಈ ಮಾರುಕಟ್ಟೆಯ ಮಹಿಳಾ ಉದ್ಯಮಿಗಳ  ಕ್ರಿಯಾಶೀಲತೆಯನ್ನು  ಸಾರುತ್ತದೆ. ಬಹುಶಃ ಈಗ ಈ ಮಾರುಕಟ್ಟೆಯಲ್ಲಿ  ವಹಿವಾಟು ನಡೆಸುವ  ಗ್ರಾಹಕರ ಸಂಖ್ಯೆ ಲಕ್ಷಗಳ ಗಡಿ ದಾಟಿರಬಹುದು. ಇದೀಗ ದಸರಾ ಹಬ್ಬಕ್ಕಾಗಿ ವಿಶೇಷ ದಸರಾ ಮಾರುಕಟ್ಟೆಗೆ  ಈ ಗುಂಪಿನಲ್ಲಿ ಭರದಿಂದ ವಹಿವಾಟು ಆರಂಭವಾಗಿದೆ. 

ಇದನ್ನು ಪೀಠಿಕೆಯಾಗಿ ಇಟ್ಟುಕೊಂಡು ನಾನು ಹೇಳ ಹೊರಟಿರುವುದು ಮಹಿಳೆಯರಲ್ಲಿ ಉದ್ಯಮಶೀಲತೆ ಸಹಜವಾಗಿಯೇ ಇರುತ್ತದೆ ; ಅದು ಪ್ರಕಟವಾಗಲು ಒಂದು ಸಣ್ಣ ಪ್ರೋತ್ಸಾಹ  ಸಿಕ್ಕರೂ  ತಡೆಯಿಲ್ಲದ ಹರಿವಾಗುತ್ತದೆ ಎಂದು.

ಹಪ್ಪಳ, ಸಂಡಿಗೆ, ಚಟ್ನಿಪುಡಿ ಇತ್ಯಾದಿಗಳು ಮಹಿಳೆಯರ ದಿನನಿತ್ಯದ ಕಾಯಕಗಳೇ ಆಗಿದ್ದ ದಿನಗಳಲ್ಲಿ ಅದಕ್ಕೆ ಉದ್ಯಮದ ರೂಪ ದೊರೆತು ದೇಶ-ವಿದೇಶಗಳಲ್ಲಿ ಅದೊಂದು ಹೆಸರಾಂತ  ‘ಬ್ರ್ಯಾಂಡ್’ ಆದದ್ದು ಲಿಜ್ಜತ್ ಎಂಬ ಅಡುಗೆ ಮನೆಯ ಕ್ರಾಂತಿಯಿಂದ. ಮಧ್ಯಾಹ್ನದ ಬಿಡುವಿನ ವೇಳೆಯಲ್ಲಿ  ಹರಟೆಯ ಮೂಲಕ ಸಮಯ ಕಳೆಯುತ್ತಿದ್ದ,  ಶೈಕ್ಷಣಿಕವಾಗಿ ತೀರ ಹಿಂದುಳಿದ, ಸಂಪ್ರದಾಯಸ್ಥ  ಗುಜರಾತಿ ಹೆಂಗಸರ ಗುಂಪು ಇಂಥ ಕ್ರಾಂತಿಯನ್ನು ಮಾಡಿದ್ದೇ ದೇಶದ ಉದ್ದಗಲಕ್ಕೂ  ಬಡ ಹಾಗೂ ಮಧ್ಯಮ ವರ್ಗದ ಕೆಲ  ಮಹಿಳೆಯರ ಮನೆಗಳಲ್ಲಿ  ತಯಾರಾಗುತ್ತಿದ್ದ  ಹಪ್ಪಳ, ಸಂಡಿಗೆಗಳು ಅವರ ಮಕ್ಕಳ ಹೊಟ್ಟೆ ತುಂಬಿಸಿದವು. ಶಾಲೆಯ ಫೀಸ್ ಕಟ್ಟಿದವು.

ಆರ್ಥಿಕ ಸ್ವಾವಲಂಬನೆಗೆ ಹೊಸ ಭಾಷ್ಯ ಬರೆದು ಬಿಟ್ಟೆವು. ಅಡುಗೆ ಮನೆಯ ಈ ಕ್ರಾಂತಿಗೆ ಚಪಾತಿ, ಖಾಕ್ರಾ, ಜೋಳದ ರೊಟ್ಟಿ, ಖಡಕ್ ರೊಟ್ಟಿ ,  ಬಗೆ ಬಗೆಯ ಉಪ್ಪಿನಕಾಯಿಗಳು, ಹತ್ತಾರು ಸಿಹಿ ತಿಂಡಿಗಳೂ ಸೇರಿದಂತೆ ನೂರಾರು ತಿನಿಸುಗಳು ಸೇರಿದವು. ಅಡುಗೆ ಮನೆ ಎಂದು ಮೂಗು ಮುರಿಯುತ್ತಿದ್ದವರೆಲ್ಲ ಮೂಗಿನ ಮೇಲೆ ಬೆರಳಿಡುವಂತೆ ಆದ ಈ ಪುಟ್ಟ  ಉದ್ಯಮಿಗಳ ಬೆಳವಣಿಗೆ ಯಾವ ಅಬ್ಬರವೂ ಇಲ್ಲದ ನಿರಂತರ ಹರಿವಿನ ನದಿಯಂತೆ ಜುಳುಜುಳಿಸುತ್ತಲೇ ಇದೆ.

ನಂತರ ಮನೆಯ ಪುಟ್ಟ  ಹಜಾರಕ್ಕೆ ಬಂದು ನಿಂತ ಉದ್ಯಮ ಬಟ್ಟೆ ಹೊಲಿಯುವ ಯಂತ್ರದ ಕಾಲಾಡಿಸಿತು. ಹೊಲಿಗೆ, ಹೆಮ್ಮಿಂಗ್, ಎಂಬ್ರಾಯ್ಡರಿ, ಸ್ವೆಟರ್, ನಿಟ್ಟಿಂಗ್ – ಒಂದೇ ಎರಡೇ! ಹತ್ತಾರು ಚಿಕ್ಕ ಪುಟ್ಟ ಉದ್ಯೋಗಗಳ, ಉದ್ದಿಮೆಗಳ ಸ್ರಷ್ಟಿಸಿತು. ಇದು ಮಹಿಳೆಯರ ಆತ್ಮಸ್ಥೈರ್ಯವನ್ನು ಮಾತ್ರ ಹೆಚ್ಚಿಸಲಿಲ್ಲ. ದೇಶದ ಆರ್ಥಿಕತೆಗೆ ಅಳಿಲು ಸೇವೆಯಾಗಿತ್ತು ಎಂಬುದನ್ನು ನಾವು ಮರೆಯಬಾರದು. 

ತೊಟ್ಟಿಲು ತೂಗುವ ಕೈ ದೇಶವನ್ನು ಆಳಬಲ್ಲದು – ಎಂಬ ಮಾತನ್ನು ಅನೇಕ ಭಾಷಣ ಸ್ಪರ್ಧೆಗಳಲ್ಲಿ ನಾನು ಹೇಳಿ ಬಹುಮಾನ ಪಡೆದಿದ್ದರೂ ಅದೊಂದು ಕ್ಲೀಷೆಯಾಗಿ ನನ್ನನ್ನು ಕಾಡಿ ಅದನ್ನು ಹೇಳುವುದನ್ನೇ ನಿಲ್ಲಿಸಿಬಿಟ್ಟೆ. ಅಂತಹುದೇ ಇನ್ನೊಂದು ಮಾತು- ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ  ಎಂಬುದು. ಇದನ್ನೂ ನಾನು ಅಪ್ಪಿತಪ್ಪಿಯೂ ಬಳಸುವುದಿಲ್ಲ.

ಮಹಿಳೆಯದು ಕಾಯಕ ಸಂಸ್ಕೃತಿ. ಆಕೆಗೆ ಇಂಥ ಪೂಜೆಗಳೋ, ಹೊಗಳಿಕೆಗಳೋ ಬೇಕಾಗಿಲ್ಲ. ಇದನ್ನು ಇಂದು ಸಹಸ್ರ ಸಹಸ್ರ ಮಹಿಳೆಯರು ಸಿದ್ಧ ಮಾಡಿದ್ದಾರೆ. ಹಪ್ಪಳ , ಸಂಡಿಗೆಗಳನ್ನು ತುತ್ತಿನ ಚೀಲಗಳನ್ನಾಗಿಸಿಕೊಂಡವಳೇ ಇಂದು ಅವುಗಳ ವಹಿವಾಟನ್ನು ಲಕ್ಷಗಳಲ್ಲಿ ದೇಶ- ವಿದೇಶದ ವಹಿವಾಟಾಗಿ ಮಾರ್ಪಡಿಸಿದ್ದಾಳೆ. ತನ್ನ ಅಡುಗೆ ಮನೆಯ ಎಲ್ಲಾ ವಸ್ತುಗಳಿಗೂ ಮಾರುಕಟ್ಟೆ ಮೌಲ್ಯವನ್ನೂ, ಗೌರವವನ್ನೂ ತಂದುಕೊಟ್ಟಿದ್ದಾಳೆ. 

ಕೃಷಿ ಉತ್ಪನ್ನಗಳಾದ ಸಾಂಬಾರ್ ಪದಾರ್ಥಗಳು, ತರಹೇವಾರು ಅಕ್ಕಿ, ಜೇನುತುಪ್ಪ, ಬೆಲ್ಲ, ಹೀಗೆ ಪಟ್ಟಿ ಉದ್ದವಾಗುತ್ತದೆ. ಈ ಬೆಳೆಗಳ ಮೌಲ್ಯ ವರ್ಧನೆಯನ್ನೂ ಮಾಡಿ ಅವುಗಳ ಉಪ ಉತ್ಪನ್ನಗಳನ್ನೂ ಮಾರಾಟ ಮಾಡುತ್ತಾಳೆ. ಇನ್ನು ಹಾಲು, ಹೈನು ಆಕೆಗೆ ಜನ್ಮಜಾತ. ಹಾಲುಣಿಸುವ ತಾಯಿಗೆ ರಾಸುಗಳ ಸಾಕಣೆಯಲ್ಲಿ ಹೇಳಲಾರದ ಪ್ರೀತಿ. 

ನಮ್ಮ ದೇಶದಲ್ಲಿ ಅಡುಗೆ ಮನೆಯ, ಮಕ್ಕಳ ಪಾಲನೆಯ, ಅಷ್ಟೇ ಏಕೆ ಕೃಷಿಯಲ್ಲಿ, ಅಸಂಘಟಿತ ವಲಯಗಳಲ್ಲಿ ಮಹಿಳೆಯ ಕಾಯಕವನ್ನು ಆರ್ಥಿಕ ಅಳತೆಗೋಲಾಗಿ  ಪರಿಗಣಿಸುವುದೇ ಇಲ್ಲ. ಇಂಥ ಎರಡನೇ ದರ್ಜೆಯ ಮೂದಲಿಕೆಗಳು, ಹುನ್ನಾರಗಳು, ಹೊಡೆತ, ಬಡಿತಗಳು ಅವಳ ಕರ್ತೃತ್ವ ಶಕ್ತಿಯನ್ನು ಕೆಲಕಾಲ ಮಂಕಾಗಿಸಬಹುದೇ ಹೊರತು ಹಿಮ್ಮೆಟ್ಟಿಸಲು ಸಾಧ್ಯವಿಲ್ಲ ಎಂಬುದನ್ನು ಕಾಲಕಾಲಕ್ಕೆ  ತೋರಿಸಿದ್ದಾಳೆ.

ಮಹಿಳೆಯನ್ನು ಕಾಲಾಂತರದಿಂದಲೂ ಭೂಮಿಗೆ ಹೋಲಿಸಲಾಗಿದೆ. ಅವಳ ಬಾನವಿಸ್ತಾರದ ಕ್ಷಮತೆಯನ್ನು, ಸಾಗರದಂತಹ ಕ್ರಿಯಾಶೀಲತೆಯನ್ನು ಬಿಟ್ಟು ಭೂಮಿಗೆ ಮಾತ್ರ ಹೋಲಿಸುವುದನ್ನೂ ಇನ್ನು ಮುಂದೆ ಬಿಡಬೇಕೆನೋ. 

ಈ ಮಹಿಳಾ ಮಾರುಕಟ್ಟೆ ಇಷ್ಟೆಲ್ಲಾ ಹೇಳಿಸಿತು. ಇನ್ನೂ ಹೇಳಬಹುದಾದದ್ದು ಬೇಕಾದಷ್ಟಿದೆ.  “ಹೆಣ್ಣಿನ ಜಲುಮಕ್ಕೆ ಬೆನ್ನು ಕಟ್ಟುವವರಿರದಿದ್ದರೂ ಸಮಾಜದ ಬೆನ್ನೆಲುಬಾಗಿ ಆಕೆ ನಿಂತಿದ್ದಾಳೆ” ಎಂಬುದೇ ಈ ಹೊತ್ತಿನ ಖುಷಿ.

‍ಲೇಖಕರು Avadhi

September 20, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನೀನು…

ನೀನು…

2 ಪ್ರತಿಕ್ರಿಯೆಗಳು

  1. Aparna Rao

    ನಮ್ಮ ಮಹಿಳಾ ಮಾರುಕಟ್ಟೆಯ ಬಗ್ಗೆ ಇಷ್ಟು ಒಳ್ಳೆಯ ಪ್ರೋತ್ಶಾಹದ ನುಡಿ ಬರಹ ನಮ್ಮ ಗುಂಪಿನ ಮಟ್ಟಿಗೆ ಅಮೂಲ್ಯವಾದ್ದು ನೂತನ. ಸಾಕಷ್ಟು ಮಹಿಳೆಯರು ಕ್ರಿಯಾತ್ಮಕವಾಗಿ ತೊಡಗಿಸಿಕೊಂಡು ಮಾಡಲ್ಪಟ್ಟ ವಸ್ತುಗಳಿಗೆ ಬೆಲೆ ಸಿಗುವಂತಾಗಲಿ. ಸ್ವಾವಲಂಬನೆಯಿಂದ ಹುಟ್ಟುವ ಆತ್ಮ ವಿಶ್ವಾಸಕ್ಕೆ ಸಮನಾದ ಸಂತೃಪ್ತಿ ಇನ್ಯಾವುದೂ ಇಲ್ಲ. ನಿಜ ಅರ್ಥದ ಮಹಿಳಾ ಸಬಲೀಕರಣ ಅಡಿಗೆ ಮನೆಯಿಂದಲೇ ಆಗಬೇಕಿದೆ. ಅದಕ್ಕೆ ನಿಮ್ಮಂತವರ ಪ್ರೋತ್ಸಾಹ ಅತ್ಯಗತ್ಯವಾಗಿದೆ.

    ಪ್ರತಿಕ್ರಿಯೆ
  2. T S SHRAVANA KUMARI

    ನಾನೂ ಈ ಮಾರುಕಟ್ಟೆ ಆರಂಭವಾದಾಗಿನಿಂದಲೂ ಅದರ ಚಟುವಟಿಕೆಗಳನ್ನು ಬೆರಗಿನಿಂದ ನೋಡುತ್ತಾ ಬಂದಿದ್ದೇನೆ.

    ಇಂತಹ ಒಂದು ಅದ್ಭುತ ಕಲ್ಪನೆಯನ್ನು ಸಾಕಾರಗೊಳಿಸಿದ ಅಪರ್ಣಾ ಮತ್ತು ಅವರ ಸ್ನೇಹಿತೆಯರಿಗೆ ಹೃತ್ಪೂರ್ವಕ ಧನ್ಯವಾದಗಳು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: