ಬದುಕು ದೇವರ ಆಟ!…ಅಲ್ಲ.

ಡಾ ಅನಸೂಯ ಕಾಂಬಳೆ

ಕರೋನ ಕಾಲದ ಸಂಕಟಗಳನ್ನು ಹೇಗೆ ವಿಶ್ಲೇಷಿಸಿದರೂ ಕೊನೆಗೆ ಉಳಿಯುವುದು ಅಸಾಯಕತೆ ಎಂಬ ಹಿಂಚಲನೆ. ಮೌಖಿಕ ಮತ್ತು ಪುರಾಣ ಪರಂಪರೆಯಲ್ಲಿ ಪ್ರಭು ಮತ್ತು ಪ್ರಭುತ್ವ ವೈಯಕ್ತಿಕ ಜೀವನದಲ್ಲಾಗಲಿ, ರಾಜಕೀಯವಾಗಿ ಆಗಲಿ ವಿಫಲವಾದಾಗಲೆಲ್ಲ ಹಣೆ ಬರಹದ ಮಿಥ್ ನ್ನು ಸೃಷ್ಟಿಸಿ, ಅಸಹಾಯಕತೆಗೆ ಮುಸುಕನ್ನು ಹೊದಿಸಿ ದೈವೀ ಕಾರಣದ ರಣನೀತಿಯ ಮುದ್ರೆಯನ್ನು ಒತ್ತಿದೆ. ಹಾಗಾಗಿ ʼದೇವರ ಆಟʼ ಎಂಬ ಪ್ರಭುತ್ವದ ಹೇಳಿಕೆಗೆ ಒಂದು ಪರಂಪರೆ ಇದೆ.

ಅದು ಮುಗ್ದ ಜನರನ್ನು ನಂಬಿಸುವ ಸುಲಭ ಮಾರ್ಗವು ಆಗಿದೆ. ಈ ರಾಜಕಾರಣವನ್ನು ಬಿಡಿಸುವ, ಜನಸಾಮಾನ್ಯರ ಅರಿವಿಗೆ ತರುವ ನೈಜ ಮಾರ್ಗವನ್ನು ತೋರಿಸಬೇಕಿದೆ. ಇಂಥ ಚಿಂತನೆಗಳಿಗ ಒದಗಿ ಬರುವವು ಕರೋನಾ ಕಾಲದ ಜನಬದುಕಿನ ಸಂಕಥನಗಳು. ಇಂಥ ಸಂದರ್ಭದಲ್ಲಿ ದೀರ್ಘಕಾಲಿನ ವೈಜ್ಞಾನಿಕ ಚಿಂತನೆಗಳು ಜಾರಿಗೆ ಬರುತ್ತಿಲ್ಲ. ಬಂದಂತೆ- ಬದುಕುವುದು ಎಂಬ ಅನಿಶ್ಚಿತ ವಾತಾವರಣವೊಂದು ಸೃಷ್ಟಿಯಾಗಿದೆ; ಆಗುತ್ತಲೂ ಇದೆ.

ಲಾಕ್‌ ಡೌನ್‌ ಸಂದರ್ಭದಲ್ಲಿ ವಲಸೆ ಕಾರ್ಮಿಕರಂತೆ ಮನೆಗೆಲಸದವರೂ ಮೂಲೆ ಗುಂಪಾದರು. ಉಳ್ಳವರ ಮನೆಯ ಬಗೆಬಗೆಯ ಖಾದ್ಯಗಳು ಸಾಮಾಜಿಕ ಜಾಲತಾಣದಲ್ಲಿ ವಿಜೃಂಭಿಸಿದವು. ಅಡುಗೆ ಮಾಡುವ ಹೆಣ್ಣು ಮಕ್ಕಳ ಬವಣೆಗಳು ಜೋಕುಗಳಾಗಿ ಹರಿದಾಡಿದವು. ಅಡುಗೆ ಮನೆಯಲ್ಲಿ ನೆಪ ಮಾತ್ರಕ್ಕೆ ಕಂಡ  ಗಂಡಸರು ಅಡುಗೆ ಮಾಡುವ ಜೋಕುಗಳಂತೆ -ಬಿಂಬಿಸಿಕೊಂಡರು. ಮಹಿಳೆಯರ ಕೌಟುಂಬಿಕ ಹಿಂಸೆ, ಲೈಂಗಿಕ ಹಿಂಸೆಗಳ ಕುರಿತೂ ವರದಿಯಾದವು.

ಮಹಿಳಾ ಆಯೋಗಗಳು ಲಾಕ್‌ ಡೌನ್‌ ಸಂದರ್ಭದಲ್ಲಿ ಹೆಚ್ಚುತ್ತಿರುವ ಕೇಸ್‌ ಗಳ ಬಗ್ಗೆ ವಿವರಿಸಿದರು. ಆದರೆ ಇದರ ಬಗ್ಗೆ ಗಂಭೀರ ಚರ್ಚೆಗಳು ಆಗಲಿಲ್ಲ. ಪುರುಷರು ಇದನ್ನು ಕಂಡು ಪ್ರಧಾನಿಗಳ ಹೆಸರಿನಲ್ಲೇ ʼʼನಿಮ್ಮ ಗಂಡಂದಿರನ್ನು ಮನೆಯಲ್ಲಿ ನೆಮ್ಮದಿಯಾಗಿ ಇರಲು ಬಿಡಿʼʼ  ಎಂಬ ಸಲಹೆಯನ್ನು ಯಾವ ಅಳಕೂ ಇಲ್ಲದೆ ಹರಡಿದರು. ಇದು ಗಂಡ – ಹೆಂಡತಿ ಮಧ್ಯದ ಸಂಘರ್ಷದಂತೆ ಕಂಡರೂ ಅದು ಜೋಕಾಗಿ ಹಗುರವಾಗಿ ತೇಲಿ ಹೋದದ್ದನ್ನು ಹೋದದ್ದನ್ನು ಕೊರೋನಾ ಕಾಲ ಕಲ್ಪಿಸಿತು.

ಇದು ಮನೆಯೊಳಗಿನ ಶೀತಲ ಸಮರ ತಣ್ಣಗಾದರೂ ಕೆಲಸ ಕಳೆದುಕೊಂಡ ಮನೆ ಕೆಲಸದವರ ಗೋಳು ಸರ್ಕಾರಿ ಅಕ್ಕಿಗೆ ಶಾಂತವಾಯಿತೆ? ಇಲ್ಲ. ಬದುಕಿಗೆ ಅಕ್ಕಿ ಮಾತ್ರವಲ್ಲ ಇನ್ನೂ ಇದೆ… ಪೂರೈಸುವುದು ಹೇಗೆ ? ಮನೆಗೆಲಸದವಳೊಬ್ಬಳ ಸಂಕಟವನ್ನು ನಾನು ಕಂಡಂತೆ  ಅವಳ ಮಾತುಗಳಲ್ಲೇ ವಿವರಿಸುವೆ.

ಸರ್ಕಾರಿ ಆಜ್ಞೆಯಂತೆ ನಮ್ಮ ಮನೆಕೆಲಸದವಳನ್ನು ಬಿಡಿಸಿದ್ದಾಯ್ತು. ಒಂದು ತಿಂಗಳೊಪ್ಪತ್ತಿಗೆ ಇದು ನಿಲ್ಲದು ಎಂಬುದು ಖಾತ್ರಿ ಆಯಿತು. ಪಕ್ಕದ ಮನೆಯಲ್ಲಿ ಕೆಲಸ ಮಾಡುತ್ತಿದ್ದವಳು ಒಂದು ದಿನ ಇದ್ದಕ್ಕಿದ್ದಂತೆ ಬಂದು ʼʼನನಗೆ ಕೆಲಸ ಕೊಡಿ. ನೀವೆಲ್ಲ ಹೀಗೆ ಮಾಡಿದರೆ ನಾವು ಬದುಕೋದು ಹೇಗೆ?ʼʼ ಎಂದು ಕಣ್ಣೀರು ತುಂಬಿಕೊಂಡು ಕೇಳಿದಳು.

ನಾವು ಕರಗಿ ಆಯಿತು; ನಮ್ಮ ಮೂರು ಮನೆಗಳಲ್ಲಿ ಮಾತ್ರ ಕೆಲಸ ಮಾಡಬೇಕು. ಬೇರೆಯವರ ಮನೆಯ ಕೆಲಸಗಳಿಗೆ ಹೋಗಬಾರದು ಎಂದು ಕಂಡಿಶನ್‌ ನೊಂದಿಗೆ ಕೆಲಸಕ್ಕೆ ಕರೆದುಕೊಂಡೆವು. ಆದರೂ ಟಿವಿ ಸೃಷ್ಟಿಸಿದ ಆತಂಕದಿಂದಾಗಿ ಅವಳ ಮೇಲೆ ಕಣ್ಗಾವಲಾಗಿ ಎಚ್ಚರಿಸುತ್ತಲೇ ಇದ್ದೆವು. ಬೇಜವಾಬ್ದಾರಿ ಗಂಡ, ಮಕ್ಕಳೊಂದಿಗೆ ಬದುಕುವ ಅವಳಿಗೆ ನಾವು ಕೊಡುವ ಸಂಬಳ ಸಾಕಾವುದಿಲ್ಲ ಎಂಬ ಸಂಕಟವೂ ಇತ್ತು. ಜೊತೆಗೆ ನಮ್ಮ ವೃತ್ತಿಭಾಂದವರ ಎಚ್ಚರಗಳೂ ಇದ್ದವು.

ಕರೋನದಿಂದ ಮುಕ್ತಿ ಇಲ್ಲದ್ದರಿಂದ ಸರ್ಕಾರಿ ಯೋಜನೆಗಳು ದಿನನಿತ್ಯ ಬದಲಾದಂತೆ ಅವಳ ಅಹವಾಲುಗಳು ಇದ್ದೇ ಇರುತ್ತಿದ್ದವು. ಅವಳ ಮನೆ ಕಡೆ ಬಂದು ಯಾರು ರೇಶನ್‌ ಕೊಡುವುದಿಲ್ಲವೆಂದೂ, ಮಕ್ಕಳ ಸ್ಕೂಲ್ ನಲ್ಲೂ ಕೊಡುತ್ತಿಲ್ಲವೆಂದು, ತಮಗೆ ಕಾರ್ಡ್‌ ಇಲ್ಲದ್ದರಿಂದ ಕಡಿಮೆ ರೇಶನ್‌ ಕೊಡುತ್ತಾರೆಂದೂ ದಿನ ಬೆಳಗಾದರೆ ಅವಳ ಕಂಪ್ಲೇಂಟ್‌ ಕೇಳಬೇಕಿತ್ತು. ʼʼಟಿ.ವಿಯಲ್ಲಿ ಮಕ್ಕಳ ಪಾಠʼʼ ಎಂದು ಸರಕಾರಕ್ಕೆ ಹಿಡಿಶಾಪ ಹಾಕುತ್ತ ಬಂದಳು.

ʼʼಸರ್ಕಾರವರಿಗೆ ಏನ್‌ ತಿಳಿಯೋದಿಲ್ಲ ಏನರಿ… ಟಿವಿ ಯೊಳಗೆ ಪಾಠ ಹೇಳ್ತಾರಂತ… ನಾವು ಟಿವಿಗೆ ಕೇಬಲ್/ ಬುಟ್ಟಿ ಹಾಕಿಸಲು ಎಲ್ಲಿಂದ ರೊಕ್ಕಾ ತರೊಣರಿʼʼ ಎಂದು ಗೋಳಾಡಿದಳು. ಅನೇಕ ಉಪಾಯಗಳನ್ನು ಹೇಳಿ ಮಕ್ಕಳ ಶಿಕ್ಷಣ ಎಷ್ಟು ಮುಖ್ಯ ಎಂದು ನಂಬಿಸಿ ಟಿವಿ ಸುರು ಮಾಡಿಸಿದೆ. ಸ್ವಲ್ಪ ದಿನ ಕಳೆದಿರಲಿಲ್ಲ ಎರಡನೇ ಮಗಳ ಆನ್‌ ಲೈನ್‌ ( ಮೊಬೈಲ್) ಸಮಸ್ಯೆ ದುತ್ತೆಂದು ಎರಗಿತು. ಎದೆ ಒಡೆದುಕೊಂಡಂತೆ ಗೋಳಾಡಿದಳು. ʼʼಸಾಯುವವರನ್ನೇ ಯಾಕ್ರೀ ಇವರು ಸಾಯಿಸ್ತಾರೆʼʼ ಮತ್ತೆ ಬಂದಳು.

ನಿಮ್ಮ ಹಣಕಾಸಿನ, ಬದುಕಿನ ತೊಂದರೆಗಳನ್ನೆಲ್ಲ ವಿವರಿಸಿ ಮುಖ್ಯಮಂತ್ರಿಗಳಿಗೆ, ಶಿಕ್ಷಣ ಮಂತ್ರಗಳಿಗೆ ಪತ್ರ ಬರೆದು, ಡಿ.ಡಿ., ತಹಶೀಲ್ದಾರ್‌, ಡಿಸಿಯವರ ಮೂಲಕ ಎಲ್ಲರೂ ಸೇರಿ ಮನವಿ ಸಲ್ಲಿಸಿ ಎಂದು ಸಂತೈಸಿ ಕಳಿಸಿದೆ. ಅದು ಸಾಧ್ಯವಾಗದೇ ಪದೇ ಪದೇ ಕಾಲ್‌ ಮಾಡಿ ಆನ್‌ ಲೈನ್‌ ಕ್ಲಾಸ್‌ ಗೆ ಹಾಜರಾಗುವಂತೆ ಪೀಡಿಸುತ್ತಿದ್ದ ಮೇಡಮ್‌ ಅವರನ್ನು ಭೇಟಿಯಾಗಲು ಹೋದಳು; ಅಳುತ್ತಾ ಬಂದಳು.

ಅವಳ ಕಷ್ಟವನ್ನು ಅರಿಯದ ಶಾಲೆಯ ಮೇಡಮ್‌_ ʼʼದೊಡ್ಡ ಮಗಳ ಸಲುವಾಗಿ ಟಿವಿ ಹಾಕಿಸಿದೆ… ಇನ್ನೊಬ್ಬ ಮಗಳಿಗೆ ಏನೂ ಮಾಡಂಗಿಲ್ಲ. ಒಬ್ಬಳಿಗೊಂದು ಇನ್ನೊಬ್ಬಳಿಗೊಂದು ಭೇದ-ಭಾವ ಮಾಡ್ತಿʼʼ ಎಂದು ಜಾಡಿಸಿ ಕಳಿಸಿದ್ದಳು. ʼನಮ್ಮ ಕಷ್ಟಾ ಇವರಿಗೆ ದೇವರೇ ಬಂದು ಅರ್ಥ ಮಾಡಿಸಬೇಕರಿʼ ಅಂದಳು. ಶಾಲೆಯ ಒತ್ತಡ ಹೆಚ್ಚಿದ್ದರಿಂದ ತನ್ನ ತವರ ಮನೆಗೆ ಹೋಗಿ ಬಂದು ಸೆಕೆಂಡ್‌ ಹ್ಯಾಂಡ್‌ ಮೊಬೈಲ್‌ ತಂದಳು. ಅದು ವರ್ಕ್‌ ಮಾಡುತ್ತೋ ಇಲ್ಲವೋ ಇನ್ನೂ ಹೇಳಿಲ್ಲ. ಇದನೆಲ್ಲ ನೋಡಿ ಶಿಕ್ಷಣವೂ ಅವಳ ಬದುಕಿನಂತೆ- ಕುಂಟುತ್ತ ಉಸಿರಾಡುತ್ತಿದೆ ಅನಿಸುತ್ತದೆ.

ಇಷ್ಟಕ್ಕೆ ಅವಳ ಕಷ್ಟ ಮುಗಿತಾ? ಇಲ್ಲ. ಬಾಡಿಗೆ ಮನೆಯ ಸಮಸ್ಯೆ ಶುರುವಾಯಿತು. ಒಂದು ಕೋಣೆಯ ಮನೆಯಂತೆ. ಓನರ್‌ ಬಾಡಿಗೆ ಹೆಚ್ಚಿಲು ಹೇಳಿದ. ಮಳೆ ಹೆಚ್ಚಿದ್ದರಿಂದ ಗಟಾರು ನೀರು ಮನೆಯಲ್ಲಿ ನುಗ್ಗುವ ಭಯ!… ಮನೆ ಬದಲಾಯಿಸುವ ಚಿಂತೆ. ಇಷ್ಟೆಲ್ಲ ಕುಟುಂಬ, ಮಕ್ಕಳಿಗಾಗಿ ಹೆಣಗಾಡುತ್ತಿರುವಾಗ ಬೇಜವಾಬ್ದಾರಿ ಗಂಡ ಬಿದ್ದು ತಲೆ ಒಡೆದುಕೊಂಡು ಬಿದ್ದಿದ್ದರಿಂದ ಆಸ್ಪತ್ರೆಗೆ ಓಡಾಟ ಸುರು.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವವರ ಬದುಕಿಗಿಂತ ಕೂಲಿಯವರ ಬದುಕು ಭಿನ್ನವಾಗಿ; ಭೀಕರವಾಗಿದೆ. ಅನ್ನ, ವಸತಿಯಂಥ ಮೂಲಭೂತ ಸಮಸ್ಯೆಗಳಿಂದ ನಲುಗುತ್ತಿರುವ ಈ ಹೆಣ್ಣು ಮಕ್ಕಳ ಬದುಕು ಎಲ್ಲೂ ದಾಖಲಾಗುವದಿಲ್ಲ. ಅವರ ನೈಜ ಬದುಕಿನ ಮೂಲಕ ದೇಶದ ಆರ್ಥಿಕ ಮತ್ತು ಶೈಕ್ಷಣಿಕ ಯೋಜನೆಗಳನ್ನು ರೂಪಿಸಬೇಕಿದೆ. ಏಕೆಂದರೆ ಬದುಕು ದೇವರ ಆಟವಲ್ಲ!.

‍ಲೇಖಕರು Avadhi

September 20, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: