ನಾನು ಅಮ್ಮಂದಿರ ಆಸೆಗಳೊಂದಿಗೆ ಕೂತೆ…

ಪ್ರಸಾದ್ ನಾಯ್ಕ್ 

ಅಂದೊಮ್ಮೆ ಬಹುದಿನಗಳ ನಂತರ ಅಮ್ಮನ ಆಸೆಗಳೊಂದಿಗೆ ಚಕ್ಕಳಮಕ್ಕಳ ಹಾಕಿಕೊಂಡು ಕೂತೆ.

ಹೌದು. ಅಮ್ಮನ ಕೆಲ ಚಿಕ್ಕಪುಟ್ಟ ಆಸೆಗಳೊಂದಿಗೆ!

ಅವುಗಳಿಗೆ ಬಹುತೇಕ ಅಮ್ಮನಷ್ಟೇ ವಯಸ್ಸಾಗಿತ್ತು.

ಅಮ್ಮನಷ್ಟೇ ಮಾಗಿದ್ದವು ಕೂಡ.

ಆದರೆ ಹೆಣ್ತನದ, ಮಾತೃತ್ವದ ಲವಲವಿಕೆಗೇನೂ ಕಮ್ಮಿಯಿರಲಿಲ್ಲ. ಅಮ್ಮನಂತೆಯೇ ಅವಳ ಆಸೆಗಳಿಗೂ ನನ್ನ ಬಗ್ಗೆ ಅಂಥಾ ನಿರೀಕ್ಷೆಗಳೇನೂ ಇರಲಿಲ್ಲ. ದೂರುದುಮ್ಮಾನಗಳಂತೂ ಮೊದಲೇ ಇರಲಿಲ್ಲ. ”ಇಷ್ಟು ದಿನ ಎಲ್ಲಿ ಹೋಗಿದ್ದೆ? ಕೊನೆಗೂ ನನ್ನತ್ತ ಬರಲು ನಿನಗೆ ಸಮಯ ಸಿಕ್ಕಿತಾ?”, ಎಂದೆಲ್ಲಾ ಅವುಗಳು ಖಾರದ ಮಾತುಗಳನ್ನಾಡಲಿಲ್ಲ. ಬದಲಾಗಿ ಅವುಗಳು ನನ್ನನ್ನು, ನನ್ನ ಆಸೆಗಳನ್ನೇ ಪ್ರೀತಿಯಿಂದ ದಿಟ್ಟಿಸಿದವು. ಕಾಳಜಿಯಿಂದ ತಲೆ ನೇವರಿಸಿದವು. ಅಮ್ಮನ ಬದುಕಿಗೆ ಇವುಗಳು ಹೊಸದೇನಲ್ಲ ನೋಡಿ. ಈಗಷ್ಟೇ ತಾಯಿಯಾದ ಹೆಣ್ಣೊಬ್ಬಳು ಹೊಂದಿರುವ ಮಾತೃತ್ವದ ಲವಲವಿಕೆಯಿಂದ, ಇದೇ ಮೊದಲ ಬಾರಿಯೆಂಬಂಥಾ ಹುಮ್ಮಸ್ಸಿನಲ್ಲಿ ಅವುಗಳು ನನ್ನನ್ನು ಅಪ್ಪಿಕೊಂಡವು, ಒಪ್ಪಿಕೊಂಡವು. ನಾನು ಬಂದಿರುವ ಉದ್ದೇಶವನ್ನೇ ಮರೆತವನಂತೆ ಆ ನಿಷ್ಕಲ್ಮಶ ಪ್ರೀತಿಯಲ್ಲಿ ಕ್ಷಣಕಾಲ ಮಿಂದೆದ್ದೆ.

ಅವುಗಳು ಅಮ್ಮನ ಅವೇ ಆಸೆಗಳು. ಕೆಲವೇ ಕೆಲವು ಹಿಡಿಮುಷ್ಟಿಯಷ್ಟಿನವು. ದನಿಯಾಗದೆ ಉಳಿದಿರುವ ಅಸಂಖ್ಯಾತ ಹಂಬಲಗಳು. ಮೊಟ್ಟಮೊದಲ ಬಾರಿಗೆ ಹೂವಿನ ಎಸಳಿನಂತಿರುವ ತನ್ನ ಕರುಳಕುಡಿಯನ್ನು ನಾಜೂಕಾಗಿ ಹಿಡಿದಿದ್ದ ದಿನದಿಂದ ಹಿಡಿದು ಇಂದಿನವರೆಗೂ ಮಗುವಿನ ಅಸ್ತಿತ್ವದಲ್ಲಿ ತನ್ನ ಅಸ್ತಿತ್ವವನ್ನು ಮರೆತೇಹೋದಂತಿರುವ ಸಂಗತಿಗಳು. ಕುಟುಂಬದ ಪೋಷಣೆಯಲ್ಲಿ, ಮಗುವಿನ ಲಾಲನೆಪಾಲನೆಯಲ್ಲಿ, ತನ್ನದೇ ಆದ ತರಹೇವಾರಿ ಜವಾಬ್ದಾರಿಗಳ ಜಂಜಾಟದಲ್ಲಿ ಮರೆತೇಹೋದ, ಇವೆಲ್ಲವುಗಳ ಭಾರದಲ್ಲಿ ಅಪ್ಪಚ್ಚಿಯಾಗಿ ಮತ್ತೆ ತಲೆಯೆತ್ತುವ ಗೋಜಿಗೇ ಹೋಗದ ಪುಟ್ಟ ಆಕಾಂಕ್ಷೆಗಳು. ಅಪರೂಪಕ್ಕೊಮ್ಮೆ ಅವುಗಳಿಗೆ ಜೀವ ಬಂದಾಗ ಅಮ್ಮನೆಂಬ ಜೀವವು ಅದೆಷ್ಟು ನಲಿದಾಡಿತ್ತೋ. ಆದರೆ ಅಮ್ಮನ ಅಂಥಾ ಪುಟ್ಟ ಖುಷಿಗಳನ್ನು ಅಮ್ಮನ ಸುತ್ತಲಿದ್ದವರು ಅದೆಷ್ಟು ನೋಡಿದರೋ, ಬಿಟ್ಟರೋ ನನಗಂತೂ ಗೊತ್ತಿಲ್ಲ. ಅಮ್ಮನ ಆಸೆಗಳು, ಚಿಕ್ಕ ಖುಷಿಗಳು ಅಷ್ಟರ ಮಟ್ಟಿನ ಗಮನಕ್ಕೂ ಯೋಗ್ಯವಾಗದೆ ಉಳಿದವೇ? ಅಮ್ಮನ ದೈವತ್ವದ, ತ್ಯಾಗದ, ಸಮರ್ಪಣೆಗಳ ಭರದಲ್ಲಿ ಇವೆಲ್ಲಾ ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಂಡಿದ್ಯಾವಾಗ? ತಮ್ಮ ಜೀವನದ ದಿಗಂತವನ್ನು ವಿಸ್ತರಿಸುವ ಹುಮ್ಮಸ್ಸಿನಲ್ಲಿ, ಅಮ್ಮನ ಬದುಕಿನ ಸೀಮೆಗಳನ್ನು ನಾವುಗಳು ಇಷ್ಟಿಷ್ಟೇ ಕಬಳಿಸಿದ್ಯಾವಾಗ?

ಅಮ್ಮನ ಹೇಳದುಳಿದ ಮಾತುಗಳು ನನ್ನನ್ನು ಅದೆಂತೋ ತಾಕುತ್ತವೆ. ನಾನು ಮಾತಿನ ಮಾರ್ಗವನ್ನು ಹಿಡಿಯದಿದ್ದರೂ ಮಗ ಸೂಕ್ಷ್ಮಗ್ರಾಹಿಯೆಂಬುದು ಅಮ್ಮನಿಗೆ ಅದ್ಹೇಗೋ ಗೊತ್ತಾಗುತ್ತದೆ. ಹೀಗಾಗಿ ನಮ್ಮಿಬ್ಬರ ನೋವು-ನಲಿವುಗಳ ತರಂಗಗಳು ಒಂದೇ ಎಂಬಂತಿನ ಸಾಮ್ಯತೆಯಲ್ಲಿ ಸಾಗುತ್ತವೆ. ಪರಸ್ಪರರಿಗೆ ಆಸರೆ, ಸಾಂತ್ವನಗಳಾಗುತ್ತವೆ. ಹೀಗಾಗಿ ಅಮ್ಮನ ಆಸೆಗಳಿಗೆದುರಾಗಿ ಕುಳಿತಾಗ ನನಗೆ ಗಾಬರಿಯಾಗುವುದಿಲ್ಲ. ಆಗೊಮ್ಮೆ ಈಗೊಮ್ಮೆ ಎದುರಾದರೂ ಆಗಂತುಕರೆನಿಸಿಕೊಳ್ಳುವುದಿಲ್ಲ. ಹೇಗೋ ಹರಕೆ ತೀರಿಸಿ ಮುಂದಕ್ಕೆ ಸಾಗುವ ಕಾಟಾಚಾರದ ರೂಢಿಗಳೂ ಅವುಗಳಲ್ಲ. ನನ್ನ ಹುಮ್ಮಸ್ಸಿನಲ್ಲಿ ಅಮ್ಮನಿಗೆ ತನ್ನ ಯೌವನವು ಕಾಣಬಹುದೇನೋ. ಆದರೆ ಅಮ್ಮನ ಇಂಥಾ ಪುಟ್ಟ ಖುಷಿಗಳಲ್ಲಿ ತನ್ನ ಬಾಲ್ಯದ ಅನುಭೂತಿಯೂ ನನಗೆ ದಕ್ಕದೇ ಹೋಗುವುದಿಲ್ಲ. ಇಂಥಾ ಭಾವುಕ ಕ್ಷಣಗಳಲ್ಲಿ ಚೋಟುದ್ದ ಜಡೆಯ, ಲಂಗದಾವಣಿ ಧರಿಸಿದ, ಭೂತ-ಭವಿಷ್ಯಗಳ ಭಯಗಳಿಲ್ಲದ ಪುಟ್ಟ ಹೆಣ್ಣುಮಗುವನ್ನಷ್ಟೇ ಅಮ್ಮನಲ್ಲಿ ಕಂಡಂತಾಗುತ್ತದೆ. ಮನದೊಳಗಿನ ಮಗುವು ಅರಳಿದಾಗ ಅಮ್ಮನ ಮಾಗಿದ ಕಣ್ಣುಗಳಲ್ಲಿ ಮಿಂಚುವ ಹೊಳಪನ್ನೊಮ್ಮೆ ನೋಡಬೇಕು!

ಹೀಗೆ ಎಂದಿನ ಹುರುಪಿನಲ್ಲಿ ಅಮ್ಮನ ಆಸೆಗಳೊಂದಿಗೆ ಕೂತಾಗ ಅದೆಷ್ಟು ಲೋಕಗಳು ಕಾಣಸಿಕ್ಕವು ನೋಡಿ. ಜಗದೋದ್ಧಾರಕ ಶ್ರೀಕೃಷ್ಣನ ಪುಟ್ಟ ಬಾಯೊಳಗೆ ಯಶೋದೆಗೆ ಬ್ರಹ್ಮಾಂಡವೇ ಕಂಡಂತೆ!

**********

”ತಾಯೊಬ್ಬಳ ಬದುಕಿನ ತಲಾಶೆ…”

”ಬೇಬಿ… ಅದನ್ನು ತಗೊಳ್ಳಲಾ, ಇದನ್ನು ತಗೊಳ್ಳಲಾ?”

ಬುಕ್ ಸ್ಟಾಲ್ ಒಂದರಲ್ಲಿ ತನ್ನಷ್ಟಕ್ಕೆ ಪುಸ್ತಕಗಳನ್ನು ಆರಿಸುತ್ತಿದ್ದ ನನ್ನ ಎಡಗಡೆಯಿಂದ ಸೌಜನ್ಯಭರಿತ ದನಿಯೊಂದು ಬಂದಂತಾಯಿತು. ಯಾರೆಂದು ನೋಡಿದರೆ ಓರ್ವ ವೃದ್ಧೆ. ಇಂದಿರಾಗಾಂಧಿಯಂತೆ ಮಟ್ಟಸವಾಗಿ ಖಾದಿ ಸೀರೆ ತೊಟ್ಟ, ತುಟಿಯಂಚಿನಲ್ಲಿ ತುಂಟ ನಗುವಿದ್ದ, ಗೌರವರ್ಣದ ಸ್ಫುರದ್ರೂಪಿ ಅಜ್ಜಿ. ಆಕೆಯ ಕೈತುಂಬಾ ಪುಸ್ತಕಗಳು. ನಾವಿಬ್ಬರೂ ಆ ಹೊತ್ತಿನವರೆಗೆ ಆಗಂತುಕರಾಗಿದ್ದೆವಷ್ಟೇ. ಆದರೆ ಅವರ ಅಂಥದ್ದೊಂದು ಕರೆಯಿಂದ ಉಳಿದದ್ದೆಲ್ಲಾ ಮರೆತೇಹೋಯಿತು. ಮಿಠಾಯಿ ಅಂಗಡಿಯಲ್ಲಿ ಲೆಕ್ಕವಿಲ್ಲದಷ್ಟು   ಬಣ್ಣಬಣ್ಣದ ಮಿಠಾಯಿಗಳನ್ನು ಕಂಡು ಗೊಂದಲದಲ್ಲಿರುವ ಮಗುವಿನಂತೆ ಅಂದು ಆಕೆ ನನಗೆ ಕಂಡರು. ನನ್ನ ಶಾಪಿಂಗ್ ಅರ್ಧಕ್ಕೇ ನಿಂತುಹೋಗಿ ನಾನು ಅವರ ಶಾಪಿಂಗಿನಲ್ಲಿ ಮುಳುಗಿಬಿಟ್ಟೆ. ಕೊನೆಗೂ ಐದಾರು ಒಳ್ಳೊಳ್ಳೆಯ ಕೃತಿಗಳನ್ನು ಆರಿಸಿಕೊಂಡು ಭಲೇ ಖುಷಿಯಾಗಿಬಿಟ್ಟರು ಅಜ್ಜಿ.

”ಯಾರೂ ಈಗೀಗ ಮಾತಿಗೆ ಸಿಗೋದೇ ಇಲ್ಲ ನೋಡಿ. ಅದರಲ್ಲೂ ನಿಮ್ಮ ವಯಸ್ಸಿನವರಂತೂ ತಮ್ಮ ಸ್ಮಾರ್ಟ್‍ಫೋನುಗಳನ್ನು ಬಿಟ್ಟರೆ ಬೇರೆ ಜಗತ್ತೇ ಇಲ್ಲವೆಂಬಂತೆ ಮುಳುಗಿರುತ್ತಾರೆ”, ಎಂದರಾಕೆ. ಏನಿದು ಇಷ್ಟು ಶಾಪಿಂಗ್ ಮೂಡ್ ಎಂದು ಕೇಳಿದರೆ ಜೀವಮಾನವಿಡೀ ಅದೂ ಇದೂ ಅಂತ ದುಡೀತಾ ಇದ್ದುಬಿಟ್ವಿ. ಈಗಲಾದರೂ ನಮಗಿಷ್ಟ ಅನ್ನೋ ಕೆಲಸಗಳನ್ನು ಮಾಡಬೇಕಲ್ವಾ… ಕಳೆದ ತಿಂಗಳು ಬೆಟ್ಟ, ಗುಡ್ಡ, ಜಲಪಾತಗಳನ್ನೆಲ್ಲಾ ಅಪ್ಪಿಕೊಂಡು ಬಂದಾಯಿತು. ಈ ಸಲ ಕೊಂಚ ಓದೋಣ ಅಂತ ನಿರ್ಧರಿಸಿದೆ ಎಂದರವರು. ಮುಂದೆ ಏನೆಲ್ಲಾ ಯೋಜನೆಗಳಿವೆ ಎಂಬ ನನ್ನ ಪ್ರಶ್ನೆಗೆ ”ಪ್ಯಾರಾಗ್ಲೈಡಿಂಗ್ ಮಾಡಬೇಕಲ್ಲಾ ಬೇಬಿ…” ಎಂದರಾಕೆ. ಅವರಿಗೀಗ ನೆಲವನ್ನು ಬಿಟ್ಟು ಆಗಸದಲ್ಲಿ ಹಕ್ಕಿಯಂತೆ ಹಾರುವಾಸೆ. ಕೊಂಚ ದುಬಾರಿಯಾದರೂ ಈ ಶಹರದಲ್ಲಿ ಆಸಕ್ತರಿಗಾಗಿ ಪ್ಯಾರಾಗ್ಲೈಡಿಂಗ್ ಸೌಲಭ್ಯಗಳಿರುವ ನಿಟ್ಟಿನಲ್ಲಿ ಯಾವತ್ತಾದರೂ ಖಂಡಿತ ಪ್ರಯತ್ನಿಸೋಣ ಎಂಬ ಸಮ್ಮತಿಯೊಂದಿಗೆ, ನಂಬರುಗಳ ವಿನಿಮಯಗಳೊಂದಿಗೆ ನಮ್ಮಿಬ್ಬರ ಭೇಟಿ ಕೊನೆಯಾಗಿತ್ತು.

”ನಿನಗ್ಗೊತ್ತಾ… ನನಗೆ ನಿನ್ನ ವಯಸ್ಸಿನ ಮೊಮ್ಮಗಳಿದ್ದಾಳೆ… ಆದರೆ ಮೊದಲ ನೋಟಕ್ಕೆ ನನ್ನ ಅಸಲಿ ವಯಸ್ಸನ್ನು ಯಾರೂ ಅಷ್ಟು ನಿಖರವಾಗಿ ಊಹಿಸುವುದು ಕಷ್ಟ. ಈಗ ಹಿಂತಿರುಗಿ ನೋಡಿದರೆ ವರ್ಷಗಳೆಲ್ಲಾ ಹೇಗೆ ಉರುಳಿಹೋದವಲ್ಲಾ ಅನ್ನಿಸುತ್ತದೆ. ಬದುಕಲಿಲ್ಲ ಅಂತೇನೂ ಇಲ್ಲ, ಆದರೆ ನಾವಂದುಕೊಂಡಂತೆ ಬದುಕಲಾಗಲಿಲ್ಲ ಅಷ್ಟೇ. ನಾವು ಅಮ್ಮಂದಿರು ಕರ್ತವ್ಯ, ಜವಾಬ್ದಾರಿಗಳ ಒತ್ತಡದಲ್ಲಿ ‘ನಮಗೇನು ಬೇಕು?’ ಎಂಬ ಪ್ರಶ್ನೆಯನ್ನು ಗೊತ್ತಿದ್ದೋ ಗೊತ್ತಿಲ್ಲದೆಯೋ ಸುಮ್ಮನೆ ಬದಿಗೆ ಸರಿಸಿಬಿಡುತ್ತೇವೆ. ಕ್ರಮೇಣ ಇದುವೇ ನಮ್ಮ ಯಾಂತ್ರಿಕ ಜೀವನವಾಗಿಬಿಡುತ್ತದೆ. ಈ ಇಳಿವಯಸ್ಸು ನನಗೆ ಕೊಂಚ ಬಿಡುವಿನ ಕ್ಷಣಗಳನ್ನು ನೀಡಿದೆ. ಪುಣ್ಯಕ್ಕೆ ಆರೋಗ್ಯವೂ ಚೆನ್ನಾಗಿದೆ. ಹೀಗಾಗಿ ಎಲ್ಲವನ್ನೂ ಈಗ ಬಾಚಿಕೊಳ್ಳುವ ಉತ್ಸಾಹ…”, ಎನ್ನುತ್ತಿದ್ದರು ಆಕೆ. ಹೊಸ ಗೆಳೆತನವನ್ನು ಸಂಪಾದಿಸುವ ವಿಚಾರದಲ್ಲಿ ಅವರಿಗೆ ಸಂಕೋಚವೇನಿಲ್ಲ. ಜೀವನಪ್ರೀತಿಗಂತೂ ಬರವೇ ಇಲ್ಲ.

ಈ ಅಮ್ಮನ ಹೂತುಹೋಗಿದ್ದ ಆಸೆಗಳನ್ನು ಯಾರು ಬಡಿದೆಬ್ಬಿಸಿರಬಹುದು? ಅವುಗಳು ತಾನಾಗಿಯೇ ಜೀವಂತವಾಗಿ ಅವರ ಮನದ ಕದವನ್ನು ತಟ್ಟಿದವೇ ಅಥವಾ ಬೇರ್ಯಾವುದೋ ಜೀವವೊಂದು ಸಂಜೀವಿನಿಯಾಯಿತೇ? ತಡವಾಗಿಯಾದರೂ, ತಡಕಾಡಿಯಾದರೂ ಅವರ ಆಸೆಗಳಿಗೆ ಮತ್ತೊಂದು ಅವಕಾಶ ಸಿಕ್ಕಿತಲ್ಲಾ ಎಂದನಿಸಿ ಖುಷಿಯಾಯಿತು.

ಇದಕ್ಕಿಂತ ಹೆಚ್ಚಿನ ಸಂತಸ ಬೇರೇನಿದೆ?

**********

”ಎಲ್ಲಾ ಹೌದಮ್ಮಾ, ಆದರೆ ನಿನಗೇನು ಬೇಕಮ್ಮಾ?”

ಹಿಂದಿ ಭಾಷೆಯ ಕವಯತ್ರಿ ಮೀನಾಕ್ಷಿ ಜೀಜಿವಿಷಾರ ಸುಂದರ ಕವಿತೆಯೊಂದಿದೆ. ಈ ಕವಿತೆಯು ಒಟ್ಟಾರೆಯಾಗಿ ಆಧುನಿಕ ಜೀವನಶೈಲಿಯ ಬಗೆಯದ್ದಾದರೂ ಹೆಣ್ಣು-ಗಂಡಿನ ವಿಭಿನ್ನ ಯೋಚನಾಲಹರಿಗಳತ್ತ ಪರಿಣಾಮಕಾರಿಯಾಗಿ ಬೆಳಕನ್ನೂ ಚೆಲ್ಲುವಂಥದ್ದು.

ಅವಳು ನನಗೆ ಹಕ್ಕಿಗಳ ಕಲರವ ಇಷ್ಟ ಅನ್ನುತ್ತಾಳೆ. ಇದನ್ನು ಕೇಳಿದ ಅವಳ ಗಂಡ ಹಕ್ಕಿಯ ಕಲರವವಿರುವ ಎಲೆಕ್ಟ್ರಾನಿಕ್ ಕರೆಘಂಟೆಯೊಂದನ್ನು ಮನೆಬಾಗಿಲಿಗೆ ಅಳವಡಿಸುತ್ತಾನೆ. ಅವಳು ನನಗೆ ಹಚ್ಚಹಸಿರ ಮರಗಳು ಹವೆಗೆ ಹಾಯಾಗಿ ತೊಯ್ದಾಡುವುದನ್ನು ಕಾಣುವ ಹಂಬಲವಾಗಿದೆ ಎಂದರೆ ಇವನು ನಿಸರ್ಗದ ಚಿತ್ರವಿರುವ ದೊಡ್ಡದೊಂದು ಪೋಸ್ಟರ್ ತಂದು ಮನೆಯ ಗೋಡೆಗೆ ಅಂಟಿಸುತ್ತಾನೆ. ಅವಳು ತನಗೆ ನದಿಯಲ್ಲಿ ಈಜಾಡುವ ಮೀನುಗಳನ್ನು ಹಿಡಿಯುವ ಹಂಬಲ ಎಂದರೆ ಅವನೋ ದೊಡ್ಡದಾದ ಗಾಜಿನ ಅಕ್ವೇರಿಯಂ ತಂದು ಮನೆಯ ಮೇಜಿನಲ್ಲಿಡುತ್ತಾನೆ. ಅವಳ ಚಂದ್ರ-ತಾರೆಗಳನ್ನು ಹೊದ್ದ ಆಕಾಶವನ್ನು ಅಳೆಯುವ ಹಂಬಲಕ್ಕೆ ಇವನು ಬೆಡ್‍ರೂಮಿನಲ್ಲಿ ರಾತ್ರಿಯ ಆಕಾಶದ ಥೀಮ್ ಇರುವ ವಾಲ್-ಪೇಪರ್ ಹಾಕಿಸಿದರೆ, ಬಣ್ಣಬಣ್ಣದ ಹೂಗಳನ್ನು ಸ್ಪರ್ಶಿಸುವ ಅವಳ ಆಸೆಯನ್ನು ಪೂರೈಸಲು ಇವನು ಇಂಪೋರ್ಟೆಡ್ ಪ್ಲಾಸ್ಟಿಕ್ ಹೂವುಗಳನ್ನು ತಂದು ಮನೆಯ ಹಾಲಿನ ಹೂಗುಚ್ಛದಲ್ಲಿಡುತ್ತಾನೆ.

ಅವಳು ಏನೇನೋ ಹೇಳುತ್ತಲೇ ಇರುತ್ತಾಳೆ. ಇವನು ಇನ್ನೇನನ್ನೋ ಮಾಡುತ್ತಲೇ ಇದ್ದಾನೆ. ಇಬ್ಬರೂ ತಮ್ಮದೇ ಗುಂಗಿನಲ್ಲಿದ್ದಾರೆ. ‘ನಾನು ಇವಳ ಆಸೆಗಳನ್ನೆಲ್ಲಾ ಅದೆಷ್ಟು ಚೆನ್ನಾಗಿ ಪೂರೈಸುತ್ತೇನೆ. ಇವಳಿಗೋ ಮಾಡಿದಷ್ಟೂ ಕಮ್ಮಿ’, ಎನ್ನುವುದು ಗಂಡನ ಹಮ್ಮು. ‘ನನಗೇನಿಷ್ಟವೆಂಬುದು ಅವನಿಗೆ ಗೊತ್ತೇ ಇಲ್ಲ’, ಎಂಬುದು ಪತ್ನಿಯ ಅಂಬೋಣ.

ಇದು ಭೌತಿಕ ಪ್ರಪಂಚದ್ದಾಯಿತು. ಇನ್ನು ಕೆಲವು ಸಂದರ್ಭಗಳಲ್ಲಿ ಅವಳ ಸಂಗಾತಿಯು ‘ತಂದು ಹಾಕುವುದಷ್ಟೇ’ ತನ್ನ ಬದುಕಿನ ಧ್ಯೇಯ ಅಂದುಕೊಂಡಿರುತ್ತಾನೆ. ”ಹೊಟ್ಟೆಗೆ ಅನ್ನ, ಮೈಮುಚ್ಚಿಕೊಳ್ಳೋಕೆ ಬಟ್ಟೆ, ತಲೆಯ ಮೇಲೊಂದು ಸೂರು ಮಾಡಿಟ್ಟಿದ್ದೇನಲ್ವಾ… ತಿಂದು ಬಿದ್ದಿರು”, ಎಂಬ ಧಾಟಿಯಲ್ಲಿ ಅವಳೊಂದಿಗೆ ವ್ಯವಹರಿಸುತ್ತಾನೆ. ಇಲ್ಲಿರುವುದು ಪುರುಷಪ್ರಧಾನ ವ್ಯವಸ್ಥೆಯ ಕಮಟು. ಅದರಲ್ಲೂ ಆರ್ಥಿಕ ಸ್ವಾವಲಂಬನೆಯಿಲ್ಲದ, ಒಳ್ಳೆಯ ಕೌಟುಂಬಿಕ ಬೆಂಬಲವಿಲ್ಲದ ಮಹಿಳೆಗೆ ಇದು ನುಂಗಲೂ ಆಗದ ಉಗುಳಲೂ ಆಗದ ಬಿಸಿತುಪ್ಪ. ಇಲ್ಲಿರುವ ಹೆಣ್ಣಿನ, ಇಲ್ಲಿರುವ ಪತ್ನಿಯ, ಇಲ್ಲಿರುವ ತಾಯಿಯ ಮಾನಸಿಕ ಮತ್ತು ಭಾವನಾತ್ಮಕ ಅಗತ್ಯಗಳನ್ನು ಪೂರೈಸುವವರಾರು? ಅವಳ ಆಸೆ-ಆಕಾಂಕ್ಷೆಗಳಿಗೂ ಕೂಡ ಬೆಲೆಯಿದೆ ಎಂಬುದನ್ನು ಆಕೆಗೆ ಮನದಟ್ಟು ಮಾಡಿಸುವವರ್ಯಾರು? ಸಂಸಾರದ ಈ ಜಂಜಾಟಗಳೇ ಇಲ್ಲದೆ ಒಂದು ಕಾಲದಲ್ಲಿ ನವಿರಾಗಿದ್ದ ಅವಳ ಖುಷಿಯ ದಿನಗಳನ್ನು ಮತ್ತೆ ಮರಳಿ ಕೊಡುವವರ್ಯಾರು?

ಇಂಥಾ ತಾಯಂದಿರ ಆಸೆಗಳೆದುರು ಕೂತು ಅವುಗಳನ್ನು ಸುಮ್ಮನೆ ಹೀಗೆ ಮಾತಾಡಿಸಲಿಕ್ಕಿದೆ: ”ನಿನ್ನ ರೆಕ್ಕೆಗಳನ್ನು ಬಳಸಿ ನಾನು ಹಾರಾಡಿದ್ದೇನೋ ಆಯಿತು. ಆಗಸ ಬಾಚಿಕೊಂಡಷ್ಟೂ ವಿಶಾಲವಾಗಿದೆ. ಹೇಳು, ನೀನು ನಿನಗಾಗಿ ಹಾರುವುದು ಯಾವಾಗ? ಇನ್ನೂ ಕಂಡಿರದ ಲೋಕಗಳನ್ನು ನೋಡಿ ಕಣ್ತುಂಬಿಕೊಳ್ಳುವುದು ಯಾವಾಗ?”

‍ಲೇಖಕರು avadhi

May 10, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: