ನನ್ನ ಅಮ್ಮ.. ನನ್ನ ಹೆಮ್ಮೆ..

ಸ್ವ್ಯಾನ್ ಕೃಷ್ಣಮೂರ್ತಿ

ಅಮ್ಮ ಎಂಬ ಶಬ್ದದಲ್ಲಿ ಏನೋ ಅಡಗಿದೆ. ಅವಳ ಸುಖ ಆರೋಗ್ಯ ಲೆಕ್ಕಿಸದೆ ಎಂಥ ಸಂದರ್ಭದಲ್ಲಿಯೂ ದೃತಿಗೆಡದೆ ಮಕ್ಕಳು ಕುಟುಂಬವನ್ನು ಸಂರಕ್ಷಿಸುತ್ತಾಳೆ. ಈ ವಿಷಯದಲ್ಲಿ ನನ್ನ ಅಮ್ಮ ಕೂಡ ಹೊರತಾಗಿಲ್ಲ. ಚಿತ್ರದುರ್ಗದ ಖ್ಯಾತ ವಕೀಲರಾದ ಗೌಡರ ರಂಗಣ್ಣನವರ ಕೊನೆಯ ಮಗಳಾಗಿ ಬಾಯಲ್ಲಿ ಬಂಗಾರದ ಚಮಚದೊಂದಿಗೆ ಹುಟ್ಟಿದವಳು ನನ್ನಮ್ಮ ಶೋಭಾ.

ಕೊನೆಯ ಮಗಳಾಗಿದ್ದರಿಂದ ಮನೆಯಲ್ಲಿ ಎಲ್ಲರ ಪ್ರೀತಿ ಪಾತ್ರಳಾಗಿ ಬೆಳೆದಳು. ಚೆನ್ನಾಗಿ ವಿದ್ಯಾಭ್ಯಾಸ ಮಾಡಿ ಏನಾದರೂ ಸಾಧಿಸಬೇಕೆಂಬ ಹಂಬಲದಲ್ಲಿರುವಾಗಲೇ ನಮ್ಮ ತಾತನವರಿಗೆ ಅನಾರೋಗ್ಯದ ಕಾರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕಾಯ್ತು. ಚಿಕಿತ್ಸೆಯ ನಂತರ ನಾನು ಬದುಕುತ್ತೇನೋ ಇಲ್ಲವೋ ಎಂಬ ಕೊರಗಿನೊಂದಿಗೆ ನಮ್ಮ ತಾತ ಅವರ ಮುದ್ದಿನ ಮಗಳ ಮದುವೆ ಮತ್ತು ಅವರು ಕಷ್ಟಪಟ್ಟು ಕಟ್ಟಿದ ವಕೀಲರ ಆಫೀಸ್ ನ ಚಿಂತೆಯಲ್ಲಿ ಇರುವಾಗಲೇ ಎರಡು ಸಮಸ್ಯೆಗೆ ಒಂದೇ ಪರಿಹಾರವಾಗಿ, ಆಗಿನ್ನೂ ವಕೀಲ ವೃತ್ತಿ ಆರಂಭಿಸಿದ ನನ್ನ ಅಪ್ಪನೊಂದಿಗೆ ಮದುವೆ ಮಾಡಬೇಕೆಂಬ ತಪ್ಪು ನಿರ್ಧಾರದಿಂದ ಸಣ್ಣ ವಯಸ್ಸಿಗೆ ಒತ್ತಾಯದ ಮದುವೆಯಾಗಿ ವಿದ್ಯಾಭ್ಯಾಸವನ್ನು ಅರ್ಧಕ್ಕೆ ಮೊಟುಕುಗೊಳಿಸಬೇಕಾಯ್ತು.

ಆದರೆ ನಮ್ಮ ತಾತ ಶಸ್ತ್ರಚಿಕಿತ್ಸೆಯ ನಂತರ 25 ವರ್ಷಗಳು ಬದುಕಿದ್ದರು. ಇನ್ನು ನನ್ನ ಅಮ್ಮನ ಬಾಲ್ಯದ ಮೂವರು ಗೆಳತಿಯರು ಈಗ ಡಾಕ್ಟರ್ ಗಳಾಗಿದ್ದಾರೆ.

ಮದುವೆಯಾದ ಮೇಲೆ ಸಿನಿಮೀಯ ರೀತಿಯಲ್ಲಿ ಬಂದೆರಗಿದ ನಾನಾ ಕಷ್ಟಗಳಿಂದ, ಸುಖದ ಸುಪ್ಪತ್ತಿಗೆಯಲ್ಲಿ ಬೆಳೆದ ಅಮ್ಮ ಹಳ್ಳಿ ಸೇರಿ ರೈತ ಮಹಿಳೆಯಾಗಿ ಹಗಲಿರುಳು ಲೆಕ್ಕಿಸದೆ 15 ವರ್ಷ ಹೊಲಗಳಲ್ಲಿ ಗಂಡು ಮಕ್ಕಳಿಗೆ ಸಮನಾಗಿ ದುಡಿಯಬೇಕಾಯ್ತು. ಅದರಿಂದಲೂ ಕಷ್ಟಗಳು ನೀಗದಿದ್ದಾಗ ನಾಲ್ಕು ಮಕ್ಕಳ ಸಮೇತ ಉಟ್ಟ ಬಟ್ಟೆಯಲ್ಲಿ ಮನೆಯಿಂದ ಹೊರಬಂದು ಚಿತ್ರದುರ್ಗದ ಮುರುಘಾಮಠದ ಶಾಲೆಯಲ್ಲಿ ಒಂದು ಸಣ್ಣ ಹುದ್ದೆಗೆ ಸೇರಿದರು. ಅಲ್ಲಿ ಇದ್ದುಕೊಂಡೇ 20 ವರ್ಷಗಳ ಬಳಿಕ ವಿದ್ಯಾಭ್ಯಾಸವನ್ನು ಮುಂದುವರಿಸಿ ಅದೇ ಶಾಲೆಯಲ್ಲಿ ಶಿಕ್ಷಕಿಯಾಗಿ, ಲೆಕ್ಕವಿಲ್ಲದಷ್ಟು ನೋವನ್ನು ಹೃದಯದೊಳಗೆ ಬಚ್ಚಿಟ್ಟುಕೊಂಡು, ತಾಳಿ, ಬಾಳಿ ಬದುಕನ್ನು ಕಟ್ಟಿಕೊಳ್ಳಲು ಎದುರಾದ ಕಷ್ಟಗಳೆಲ್ಲವನ್ನೂ ಸ್ವತಃ ತಾನೇ ನುಂಗಿಕೊಂಡಳು.

ಹೆಣ್ಣು ತಾಯಿಯಾದಾಗ ಅವಳಲ್ಲಿನ ಆಸೆಗಳು ಬತ್ತಿ ಹೋಗುತ್ತವೆ ಎಂದು ಅನಿಸುತ್ತೆ. ಮಗು ಜನಿಸಿದಾಗ ಒಂದು ಹೆಣ್ಣು ತಾಯಿಯಾಗಿ ತನಗೆ ತಾನೆ ಜನ್ಮ ನೀಡಿಕೊಳ್ಳುತ್ತಾಳೆ, ಎಂಬಂತೆ ತನಗೆ ಬಂದ ಕಷ್ಟ ನನ್ನ ಮೂವರು ಹೆಣ್ಣುಮಕ್ಕಳಿಗೆ ಬಾರದಿರಲಿ ಎಂದು ಅವರನ್ನು ಚೆನ್ನಾಗಿ ಓದಿಸಿದರು. ಅವರನ್ನು ಒಳ್ಳೆಯ ಕುಟುಂಬಗಳಿಗೆ ಮದುವೆ ಮಾಡಿ ಕೊಟ್ಟು ಒಬ್ಬೊಬ್ಬರನ್ನೇ ದಡ ಸೇರಿಸಿದರು .

ಅಮ್ಮನಿಗೆ ದೊಡ್ಡ ಚಿಂತೆ ಎಂದರೆ ನಾನೇ..! ಅವರು ನನಗೆ ಉತ್ತಮ ಶಿಕ್ಷಣ ಕೊಡಿಸಬೇಕೆಂದು ಒಳ್ಳೆಯ ಶಾಲಾ ಕಾಲೇಜುಗಳಿಗೆ ಸೇರಿಸಿದರೂ ನಾನು ಓದಲೇ ಇಲ್ಲ. ಇತ್ತ ಒಳ್ಳೆ ಕೆಲಸವೂ ಇಲ್ಲ …! ” ನೀನೊಂದು ಹೆಣ್ಣಾಗಿ ಹುಟ್ಟಿದ್ದರೆ ನಿನಗೂ ಯಾವುದಾದರೂ ಒಳ್ಳೆ ಸಂಬಂಧ ನೋಡಿ ತಲೆ ತೊಳೆದುಕೊಂಡು ಬಿಡ್ತಿದ್ವಿ” ಎಂದು ಎಷ್ಟೋ ಬಾರಿ ಗೊಣಗುತ್ತಿದ್ದುದೂ ಉಂಟು…!

ಮುಂದೆ ನಾನು ಬೆಂಗಳೂರಿಗೆ ಬಂದು ‘ಲಕ್ಷ್ಮಿ ಮುದ್ರಣಾಲಯ’ದಲ್ಲಿ ಕೆಲಸಕ್ಕೆ ಸೇರಿದ ಮೇಲೆ ಸ್ವಲ್ಪ ಸಮಾಧಾನದ ಉಸಿರು ಬಿಟ್ಟರು. ಸ್ವಲ್ಪ ದಿನಗಳ ನಂತರ ಅಮ್ಮನೂ ಬೆಂಗಳೂರಿಗೆ ಬಂದು, ಮಹಾನಗರಿಯ ಹೈಟೆಕ್ ಸ್ಕೂಲ್ ಗಳಿಗೆ ಹೊಂದಿಕೊಂಡು ಶಿಕ್ಷಕಿಯಾಗಿ ದುಡಿಯುತ್ತಾ, ಸೂಕ್ತ ಸಮಯದಲ್ಲಿ ನನಗೆ ಮದುವೆ ಮಾಡಿ, ಮದುವೆಯಾದ ಕೂಡಲೆ ಸೊಸೆಯನ್ನೂ ಇಂಜಿನಿಯರಿಂಗ್ ಓದಲು ಪ್ರೇರೇಪಿಸಿ ಓದಿಸಿದರು.

ನಾನೇ ಒಂದು ಸ್ವಂತ ಮುದ್ರಣಾಲಯ ಮಾಡುವುದಾಗಿ ತಿಳಿಸಿದಾಗ, ಅವರಲ್ಲಿದ್ದ ಬಂಗಾರ ಮತ್ತು ಜಮೀನನ್ನು ಮಾರಿ ಮುದ್ರಣಾಲಯ ಪ್ರಾರಂಭಿಸಲು ಪ್ರೋತ್ಸಾಹಿಸಿದರು. ನನ್ನ ಜೊತೆ ಸೇರಿ ಸಂಸಾರದ ಸಂಸಾರದ ನೊಗ ಎಳೆದರು. ಸೊಸೆಯನ್ನು ಕೆಲಸಕ್ಕೆ ಕಳುಹಿಸಿ, ಮೊಮ್ಮಕ್ಕಳ ಜವಾಬ್ದಾರಿಯನ್ನು ಹೊತ್ತುಕೊಂಡರು. ಮನೆಯ ಯಾವ ತೊಂದರೆಯೂ ನಮಗೆ ಗೊತ್ತಾಗದ ಹಾಗೆ ನಿಭಾಯಿಸುತ್ತಾ, ನಾನು ನನ್ನ ಸಂಪೂರ್ಣ ಸಮಯವನ್ನು ಮುದ್ರಣಾಲಯಕ್ಕೆ ಮೀಸಲಿಡುವ ಹಾಗೆ ಮಾಡಿ ಸಾಧನೆಯ ಮಾರ್ಗದಲ್ಲಿ ನನ್ನನ್ನು ಮುನ್ನಡೆಸಿದರು .

ನಂತರ ಒಂದು ದಿನ ಸೇಡಂನ ಮಹಿಪಾಲ ರೆಡ್ಡಿ ಮುನ್ನೂರ್ ಅವರು ಅವರ ತಾಯಿಯವರ ಸ್ಮರಣಾರ್ಥ ನೀಡುವ ‘ಅಮ್ಮ ಪ್ರಶಸ್ತಿ’ಗೆ ನೀವು ಆಯ್ಕೆ ಆಗಿದ್ದೀರ ಎಂದಾಗ ಬಹಳ ಖುಷಿಯಾಯಿತು . ಅದು ಅಮ್ಮ ಹೆಸರಿನ ಪ್ರಶಸ್ತಿಯಾದ್ದರಿಂದ ಖುಷಿ ಇನ್ನಷ್ಟು ಇಮ್ಮಡಿಗೊಂಡಿತ್ತು. ನನಗೆ ಪ್ರಶಸ್ತಿ ಬಂದ ವಿಷಯ ಕೇಳಿ, ಪತ್ರಿಕೆಗಳಲ್ಲಿ ನೋಡಿ ಅಮ್ಮನ ಸಂತೋಷಕ್ಕೆ ಪಾರವೇ ಇರಲಿಲ್ಲ.

ಅಮ್ಮಂದಿರು ಅವರು ಸಾಧಿಸಲಾಗದ್ದನ್ನು ಮಕ್ಕಳ ಮುಖಾಂತರ ಮಾಡಿಸಿ ಸಂತಸಪಡುತ್ತಾರೆ. ಮಕ್ಕಳಿಗೆ ಪ್ರಶಸ್ತಿ ಬಂದ ವಿಷಯ ಕೇಳಿ ಅಥವಾ ಸಂದ ಸಮಾರಂಭದಲ್ಲಿ ದೂರದಲ್ಲಿ ಕುಳಿತು ನೋಡಿ ಆನಂದ ಭಾಷ್ಪದೊಂದಿಗೆ ಅವರಿಗೇ ಪ್ರಶಸ್ತಿ ಸಂದಷ್ಟು ಖುಷಿಪಡುತ್ತಾರೆ. ತಾಯಿಯ ಋಣ ತೀರಿಸಲಾಗದು ಕಡೇ ಪಕ್ಷ ಅವಳನ್ನು ಈ ರೀತಿ ಸಣ್ಣ ಪುಟ್ಟ ಸಂತೋಷಗಳನ್ನಾದರೂ ಕೊಡಬೇಕೆಂಬ ಬಯಕೆಯಿಂದ ಅಮ್ಮ ಪ್ರಶಸ್ತಿಯನ್ನು ನನ್ನ ಮತ್ತು ಕುಟುಂಬಕ್ಕಾಗಿ ತನ್ನ ಇಡೀ ಜೀವನ ಕಣ್ಣೀರಲ್ಲಿ ಕೈತೊಳೆದ ಅಮ್ಮನೇ ಸ್ವೀಕರಿಸಿದರೆ ಹೇಗೆ ಎಂಬ ಆಲೋಚನೆ ಹೊಳೆಯಿತು. ಆಯೋಜಕರ ಬಳಿ ನನ್ನ ಮನದ ಬಯಕೆ ಹೇಳಿಕೊಂಡಾಗ ಅವರು ಸಂತೋಷದಿಂದ ಒಪ್ಪಿಕೊಂಡರು. ಅಮ್ಮನೂ ಸಂತೋಷದಿಂದ ಸ್ವೀಕರಿಸಿದಳು.

ಈಗ ಮಕ್ಕಳು ಮೊಮ್ಮಕ್ಕಳೊಂದಿಗೆ ಬಾಲ್ಯ ಮತ್ತು ತಾರುಣ್ಯ ಮರಳಿ ಬಂದಿತೇನೋ ಎನ್ನುವ ನೆಮ್ಮದಿ ಮತ್ತು ಉತ್ಸಾಹದಲ್ಲಿ ಸುಖಸಂಸಾರ ನಡೆಸುತ್ತಿದ್ದಾರೆ.

‍ಲೇಖಕರು avadhi

May 10, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: