ಅನಾಮಿಕಾ @ ಹ್ಯಾಂಡ್ ಪೋಸ್ಟ್: ಮಾತಲ್ಲೇ ಬೆತ್ತಲಾಗುವುದು ನನಗೆ ಒಗ್ಗದ ವಿಚಾರ..

ಭವವಿಧುರ, ಒಲವು, ಅಮ್ಮಂದಿರ ದಿನ….

ಎರಡು ಪ್ರಶ್ನೆಗಳಿಗೆ ಉತ್ತರ, ಮತ್ತು ವಿಶ್ವ ಅಮ್ಮಂದಿರ ದಿನಕ್ಕೆ ನಾನು ಬರೆಯಬೇಕು ಅಂದುಕೊಂಡ ಬರೆಹಕ್ಕೆ ಮೊದಲು ಇರ್ಫಾನ್ ಖಾನ್ ಬಗ್ಗೆ ಎರಡು ಮಾತು.

‘ಲಂಚ್ ಬಾಕ್ಸ್’ ಸಿಕ್ವೆನ್ಸ್ ನಲ್ಲಿ ಇಳಾ ಜೊತೆ ಭೂತಾನಿನ ಮನೆಯಲ್ಲಿ ಮಗಳೊಂದಿಗೆ ಕಾಲ ಕಳೆಯುತ್ತಿರುವ ಸಾಜನ್ ಫರ್ನಾಂಡಿಸ್, ‘ಪಿಕು’ ಸಿಕ್ವೆನ್ಸ್ ನಲ್ಲಿ ನನಗಿಂತ ಹತ್ತು ಪಟ್ಟು weird, strange ಆಗಿರುವ ಬೆಂಕಿಎಸಳಿನಂಥ ಹೆಣ್ಣನ್ನು ಸಂಭಾಳಿಸುವ ರಾಣಾ ಇನ್ನೇನಿದ್ದರೆ ಊಹೆ ಮಾತ್ರ. ಭೌತಿಕ ನೋಡಲು, ಮುಟ್ಟಲು ಸಾಧ್ಯವಿಲ್ಲ.

‘ಕಾಲನ ಘಂಟಾನಾದ ಯಾರ ಮರಣವನ್ನು ಸೂಚಿಸುತ್ತದೆ ಎಂದು ಕೇಳಬೇಡ; ಅದು ಸೂಚಿಸುವುದು ನಿನ್ನದೆ ಮರಣವನ್ನು,’ ಎಂದ ಜಾನ್ ಡೆನ್ ಮಾತು ಮತ್ತೆ ನೆನಪಾಗುತ್ತಿದೆ. ಅವನು ಬದನವಾಳುವಿನಿಂದ ಹೊರಡುವಾಗ ಭುಜ ಬಳಸಿ ಹೇಳಿದ ವಿದಾಯವನ್ನು ನಾನು ಇನ್ನು, ‘ಕರೀಬ್ ಕರೀಬ್ ಸಿಂಗಲ್,’ನಲ್ಲಿ ನೇಹಾ ಧುಪಿಯಾ ಒಂದು ದಶಕದ ನಂತರ ಭೇಟಿಯಾದ ವಿಯೋಗಿಯ ಎದೆಯಲ್ಲಿ ಮುಖ ಹುದುಗಿಸಿ, ‘ತೇರೆ ಬದನ್ ಕೇ ಮೆಹಕ್ ಆಜ್ ಭೀ ಬದಲಾ ನಹೀಂ,’ ಎಂದಂತೆ ನೆನೆಯುತ್ತಿದ್ದೇನೆ.

ಅವನಿಗೆ ಇನ್ನು ಯಾರನ್ನೆಲ್ಲ ಭೇಟಿಯಾಗುವುದಿತ್ತೊ, ಏನೆಲ್ಲ ಮಾತನಾಡುವುದಿತ್ತೊ… ಎಲ್ಲ ಅರ್ಧಂಬರ್ಧಕ್ಕೆ ಬಿಟ್ಟು ಎದ್ದು ನಡೆದನಲ್ಲ ಎನಿಸುವಾಗ ನಾನು ಹೀಗೇ ಹೋದರೆ ಎನ್ನುವ ಯೋಚನೆ ಬರುತ್ತಿದೆ. ಇವತ್ತಿಗೇ ಎದ್ದು ನಡೆದರು ‘ಅದೊಂದು’ ಬಾಕಿ ಉಳಿಯಿತು ಎನ್ನುವಂಥ ಯಾವುದೇ ಕೊರಗಿಲ್ಲ. ನೋವಿನ ಭಾರವಿಲ್ಲ. ಬದುಕಲು ಹೀಗೊಂದು ಅವಕಾಶ ಮಾಡಿ ಕೊಟ್ಟ ನಿಯತಿಯ ಬಗ್ಗೆ ಮನಸ್ಸು ತುಂಬಿ ಬರುತ್ತಿದೆ.

ಈ ಅಗಲಿಕೆಗಳು, ಈ ಏಕಾಂತ, ಏನು ಹೇಳುವುದು? ಏನು ಬಿಡುವುದು? ಬರೆಹಕ್ಕೆ ಏನೂ ತೋಚುತ್ತಿಲ್ಲವಲ್ಲ ಎನ್ನುವ ಯೋಚನೆಯಲ್ಲಿದ್ದಾಗ ಬಂದಿದ್ದೆ ಪ್ರಶ್ನೆಗಳಿಗೆ ಉತ್ತರಿಸಿದರೆ ಹೇಗೆ ಎನ್ನುವ ಯೋಚನೆ. ತುಸು ಖಾಸಗಿ ಅನಿಸಿದರು ಬಹಳ ದಿನಗಳಿಂದ ಪರಿಚಿತರನೇಕರು ಕೇಳುತ್ತಿರುವ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದೇನೆ. ಒಬ್ಬೊಬ್ಬರಿಗೆ ಹೇಳುವ ಬದಲು ಎಲ್ಲರಿಗು ಒಂದೆ ಸಲ ಹೇಳಬಹುದು ಎನ್ನುವುದು ಒಂದು ಕಾರಣವಾದರೆ, (ವೈಯಕ್ತಿಕ ಮಾತುಗಳಿಗೆ ಘನತೆ ಗೌರವ ಆರೋಪಿಸಿಕೊಳ್ಳುವುದು ಅಂದ್ರೆ ಇದೆ ಅನಿಸ್ತತೆ!) ಹೀಗೆ ಬರೆಯಬಹುದಾದ ಅವಕಾಶವೊಂದು ಎಲ್ಲ ಕಾಲದಲ್ಲು ಇರಲ್ಲವಲ್ಲ ಅನ್ನೋದು ಇನ್ನೊಂದು ಕಾರಣ.

ಪ್ರಶ್ನೆ ಒಂದು, ನಿನ್ನ ಬರೆಹಗಳಲ್ಲಿ ಭವವಿಧುರರು ಮತ್ತು ಒಲವು ಯಾಕಷ್ಟು ಪುನರಪಿ ಎಂದು ಕೇಳಿದವರಿಗೆ:
ಇರ್ಫಾನ್ ಹೋಗುವ ಎರಡು ದಿನ ಮೊದಲು, ಸ್ನೇಹಿತೆ ಅದ್ಯಾಕೆ ನಿನಗೆ ‘ಭವವಿಧುರ’ ಪದದ ಬಗ್ಗೆ ಅಷ್ಟು ಮೋಹ ಎಂದು ಕೇಳುತ್ತಿದ್ದಳು. ವಸ್ತು, ವ್ಯಕ್ತಿಗಳ ಬಗ್ಗೆ ನಿರ್ಮೋಹಿಯಾದ ನನಗೆ ಕನಿಷ್ಠ ಪದಗಳ ಕುರಿತಾದರು ಮೋಹ ಇರಬಾರದೆ? ಆ ಪದದ ಕಾಪಿ ರೈಟ್ ನನ್ನದು ಅನ್ನೋದು ಒಂದು ಕಾರಣವಾದರೆ, ಇನ್ನೊಂದು ನನ್ನ ಆತ್ಮಸಂಗಾತದ ನಟ ಇರ್ಫಾನ್ ನನ್ನು ನೋಡುವಾಗ ಹೊಳೆದ ಪದ ಅದು.

ಲಂಚ್ ಬಾಕ್ಸ್ ಸಿನೆಮಾ ಸೀನ್ (19:40 to 20:20), ರಾತ್ರಿ ಸಿಗರೇಟು ಸುಟ್ಟು ಊಟಕ್ಕೆ ಕೂರುತ್ತಿದ್ದವನ ಒಂಟಿತನ, ವಿರಹ, ಮಾನಸಿಕವಾಗಿ ಜೊತೆ ಇರುವ ಅವಳು ಈಗ ಇಲ್ಲೆ ಬಂದರೆ… ಅವನ ಭಾವ ಮತ್ತು ನನ್ನ ಕಾಣ್ಕೆ ಒಂದೆಯಾದಂತಹ ದೃಶ್ಯವದು. ಜೊತೆಯೇ ಇದ್ದು ಎಷ್ಟೆಲ್ಲ ಕಂಫರ್ಟ್ ಕೊಡುವ ಜೀವಗಳಿಗಿಂತ ದೂರದಲ್ಲೆಲ್ಲೊ ಇದ್ದು ಮಮತೆಯ ನೋವಾಗಿ ಕಾಡುವ ಇಂತ ಭವವಿಧುರರಿಂದಲೆ ನೋವು ಸಂಕಟಕ್ಕೆ ಅರ್ಥ ಬರುವುದು ಅಂತ ಅನಿಸಿದ್ದು ಆಗಲೆ ನನಗೆ.

ಇನ್ನು ಒಲವು, ಅದು ನನ್ನೊಳಗಿನ ಭಯವನ್ನು ಓಡಿಸುತ್ತದೆ, ನನ್ನನ್ನು ನಾನೆ ಸಂಭ್ರಮಿಸಿಕೊಳ್ಳುವಂತೆ ಮಾಡುತ್ತದೆ. ವ್ಯಕ್ತಿಗಳಿಂದ ದೂರವಾದಾಗಲೆಲ್ಲ ನನಗೆ ಮನದಟ್ಟಾಗುತ್ತದೆ ನಾನು ಕೂಡ ಎಲ್ಲರಂತೆ ಸಾಮಾನ್ಯಳು. ನನ್ನಿಂದ ತಪ್ಪುಗಳಾಗುತ್ತವೆ. ಮತ್ತೆ ಸಾವಿರ ಸಲ ನಾನು ಒಲವಿಸುತ್ತೇನೆ, ಒಲವಿಸಲ್ಪಡುತ್ತೇನೆ ಎನ್ನುವ ನಂಬಿಕೆ ಬರುತ್ತದೆ. ಒಲವಿನಿಂದಾಗಿ ಬೆಳದ ನಂಟುಗಳಿಂದಲೆ ನನಗೆ ಒಲವಿನ ಔನ್ನತ್ಯ, ವ್ಯಕ್ತಿ ವಿಶೇಷಗಳ ಅರಿವಾಗಿದ್ದು. ಏಕಾಂತದ ಹೆಗ್ಗುಲುಮೆಯಲ್ಲಿ ಬೆಂದಿದ್ದರೂ, ಉಸಿರು ಸೋಕಿದರು ಕರಗುವಷ್ಟು ಆದ್ರತೆ ನನ್ನಲ್ಲಿ ಉಳಿದಿದ್ದರೆ ಅದು ಭವವಿಧುರರಿಂದ ಒಲಿದ ಒಲವಿನ ದಯೆಯಿಂದಲೆ. ಹಾಗಾಗಿ ಎಷ್ಟೆ ಪುನರಪಿ ಎಂದರು ನಾನು ಭವವಿಧುರರು ಮತ್ತು ಒಲವಿನ ಬಗ್ಗೆ ಬರೆಯದೆ ಇರಲಾರೆ.

ಪ್ರಶ್ನೆ ಎರಡು, ಸೋಷಿಯಲ್ ಮೀಡಿಯಾಗಳಲ್ಲಿ ಯಾಕಿಲ್ಲ? ಅನಾಮಧೇಯಳಾಗಿ ಬದುಕುವ ಈ ಹಠವೇಕೆ:
ನನಗೆ ಪರಿಚಯಗಳು ಅಂದ್ರೆ ತುಂಬಾ ನವಿರು ಭಾವ. ಅಲ್ಲದೆ ನಾನು ಅವುಗಳನ್ನು ಜತನ ಮಾಡುತ್ತೇನೆ. ಅವರ ಎಲ್ಲ ನೋವುಗಳಿಗು ಕಿವಿಯಾಗುತ್ತೇನೆ. ನನಗೆ ತಿಳಿದಿದ್ದನ್ನು ಹೇಳಿ ಸಂತೈಸುತ್ತೇನೆ. ಇದು ಮನುಷ್ಯ ಮನುಷ್ಯನಿಗೆ ಮಾಡಬಹುದಾದ ಕನಿಷ್ಠ ಸಹಾಯ ಎನ್ನುವುದು ನನ್ನ ನಂಬಿಕೆ. ಆದರೆ, ಎದುರಿನವರಿಗೆ ಬೇರೆಯದೆ ಭಾವ ಮೂಡಿಸತ್ತೆ. ಅಪಾರ್ಥ ಅಂತಲ್ಲ… ಮನುಷ್ಯ ಸಹಜ ಕೀಟಲೆ, ತುಂಟತನವನ್ನು ಯಾವತ್ತು ಗೌರವಿಸುವ ನನಗೆ ಮಾತಲ್ಲೆ ಬೆತ್ತಲಾಗುವ (Sexting) ಪ್ರಕ್ರಿಯೆ ಮನಸಿಗೆ ಒಗ್ಗದ ವಿಚಾರ.

ಎಷ್ಟೊ ಸುಂದರ ಆತ್ಮಗಳನ್ನು ನೋಡಿರುವ ನಾನು ಯಾರೊ ಕೆಲವರು ಮಾಡಿದ್ದಕ್ಕೆ ಮಿಕ್ಕವರನ್ನು ಆ ದೃಷ್ಟಿಯಲ್ಲಿ ನೋಡಲಾರೆ, ಖಂಡಿಸಲಾರೆ. ಆದ್ರೆ ಪದೇಪದೇ ಅಂತವು ಮರುಕಳಿಸಿದರೆ ನನ್ನ ನಂಬಿಕೆಯ ಹಂದರ ಕುಸಿಯಬಹುದಲ್ಲ… ಅದಾಗದಿರಲಿ ಎನ್ನುವುದಕ್ಕಾಗಿ ನಾನು ತುಸು ಹೆಚ್ಚು ಎಚ್ಚರ ವಹಿಸುತ್ತೇನೆ. ಒಂದು ಅಥವಾ ಎರಡು ಪರಿಚಯಗಳಲ್ಲಿ ಹೀಗೆ ಆಯ್ತು ಅಂತ ಅಲ್ಲಿ ಇಲ್ಲಿ ಕಾರಬಹುದು. ವಿಲಾಸ ಮನುಷ್ಯ ಸ್ವಭಾವದ ಒಂದು ಭಾಗ. ಮನುಷ್ಯ ಮನುಷ್ಯನಾಗಿರುವಷ್ಟು ಕಾಲವು ಅದು ಇರುತ್ತದೆ. ಅದಕ್ಕೆ ಕೊನೆ ಎಲ್ಲಿದೆ? ಯಾರನ್ನೊ ದೂಷಿಸುವ ಬದಲು ನಾನೆ ಯಾರ ಕೈಗೆ ಸಿಗದಿದ್ದರೆ ಆಯ್ತು, ಅಷ್ಟೆ.

ಸಾಕು. ಪುಟಕ್ಕೆ ಮೀರದಂತೆ ಉತ್ತರಿಸಬೇಕು ಅಂತ ನಿರ್ಧರಿಸಿದ್ದೆ ಜಾಸ್ತಿನೆ ಆಯ್ತು!!

ಇನ್ನು ನನ್ನ ಬಹು ಪ್ರೀತಿಯ ವಿಶ್ವ ಅಮ್ಮಂದಿರ ದಿನದ ಬಗ್ಗೆ:
ನನಗೆ ಇದು ಅಮ್ಮಂದಿರ ದಿನಕ್ಕಿಂತಲೂ Nurtures ದಿನ. to take care of, feed, and protect someone or something, especially young children or plants, and help him, her, or it to develop: Nurture – ಪದಕ್ಕೆ Cambridge Dictionary ಯಲ್ಲಿರುವ ಅರ್ಥ ಇದು. ಸಾಕು, ಬೆಳೆಸು, ಪೋಷಿಸು ಪದಗಳ ಅರ್ಥದ ಮಿತಿಯನ್ನು ಮೀರಿದ ವಿಶಾಲತೆಯನ್ನು ಅರ್ಥ ಮಾಡಿಸಿದ ಕೆಲವರನ್ನು ಈ ದಿನ ತುಂಬು ಗೌರವದಿಂದ ನೆನೆಯುತ್ತಿದ್ದೇನೆ…

ಆವತ್ತು ಆ ಹುಡುಗ ಇಷ್ಟ ಎಂದಿದ್ದೆಯಲ್ಲ ಏನಾಯ್ತದು ಎಂದು ಅವ್ವ ಮುಚ್ಚಟೆಯಿಂದ ಕೇಳುವಾಗ ಅದರ ಬಗ್ಗೆ ಏನ್ ಕೇಳ್ಬೇಡ ಈಗ ಎಂದಾಗ ಓ.. ಆಗಿತ್ತು, ಈಗಿಲ್ವ ಹೋಗಲಿ ಬಿಡು ಅದಕ್ಕ್ಯಾಕೆ ಅಷ್ಟು ಸಿಡುಕುವೆ ಎಂದು, ಸ್ವಾತಂತ್ರ್ಯ ಮತ್ತು ಸ್ವೇಚ್ಛೆಯ ನಡುವಿನ ತೆಳುಗೆರೆಯನ್ನು ತನ್ನದೆ ಪರಿಭಾಷೆಯಲ್ಲಿ ತಿಳಿಸಿಕೊಟ್ಟ ಅವ್ವನನ್ನು,

ನನ್ನ ಬರೆಹಗಳನ್ನೆಲ್ಲ ಓದುವಾಗ ಅಪ್ಪನ ತಲೆಯಲ್ಲಿ ಏನು ಓಡುತ್ತಿರಬಹುದು ಎನ್ನುವ ಯೋಚನೆ ನನಗೆ ಆಗಾಗ ಬರುತ್ತಿರುತ್ತದೆ. ನಾನು ಕೇಳಿಲ್ಲ, ಅವರು ಹೇಳಿಲ್ಲ. ಹಾಗಂತ ನನ್ನ ಕುರಿತಾದ ಅವರ nourishmentನಲ್ಲಿ ಯಾವ ಬದಲಾವಣೆಯು ಆಗಿಲ್ಲ. ಮಂಟಪದಿಂದ ಎದ್ದಿದ್ದು ಸಾಕಾಗಲಿಲ್ಲ ಎನ್ನುವಂತೆ ಸಬ್ ರಿಜಿಸ್ಟ್ರಾರ್ ಕಚೇರಿಯಿಂದ ಓಡಿದಾಗಲು, ನೀನು ನನ್ನ ಉತ್ತಮ ರಕ್ತದ ಕುಡಿಯೆಂಬ ಅಹಂ ನನಗಿಲ್ಲ, ನಿನಗೆ ಬೇಕಾದ ಕಾವ, ಕೊಲುವ ಒಲವಲ್ಲೆ ಬದುಕಿಕೊ ಎಂದು ಹರಿಸಿದ ಅಪ್ಪನನ್ನು,

ಸಾಕು, ಹುಡುಗರನ್ನು ಹಾಳು ಮಾಡಿದ್ದು! ಇನ್ನೇನಿದ್ದರು ಒಬ್ಬನೊಟ್ಟಿಗೆ ನಿಯತ್ತಾಗಿ ಸಂಸಾರ ಮಾಡುತ್ತೇನೆ ಎಂದಾಗ, ನನಗಿಂತ ಮುಂಚೆ ಅವರೆ ಕಂಗಾಲಾಗಿ ಬೇಡ ಬೇಡ ಈ ಚಲನಶೀಲತೆಯೆ ನಿನ್ನ ಅಂತಃಶಕ್ತಿ ಎಂದು ನನ್ನತನವನ್ನು ಗೌರವಿಸಿದ ಜೀವಗಳನ್ನು,

ಒಲವಿನಲ್ಲಿ ದೀರ್ಘಕಾಲದ ಬದ್ಧತೆ ನನಗೆ ಆಗಿ ಬರಲ್ಲ ಎಂದು ಗೊತ್ತಾದ ಮೇಲೆ ಅತ್ಯಮೂಲ್ಯ ಗಳಿಗೆಗಳನ್ನು ನನಗಾಗಿ ಉಳಿಸಿಕೊಟ್ಟು, ನಾನು ಬೆಳೆಯಲು ನೆರವಾಗಿ ಘನತೆಯಿಂದ ನೇಪಥ್ಯಕ್ಕೆ ಸರಿದು ಹೋದವರನ್ನು,

ಸಂಬಂಧಗಳಲ್ಲಿ ಬಂಡೆಯಂತೆ ಗಟ್ಟಿಯಾಗಿರುವುದಕ್ಕಿಂತ, ಪರ್ವತದಂತೆ ಅಚಲವಾಗಿರುವುದಕ್ಕಿಂತ ಹರಿವ ನೀರಿನಂತಿರುವುದೆ ಶಕ್ತಿಯುತವಾದದ್ದು ಎನ್ನುವುದರ ಅರಿವು ಮೂಡಿಸಿದವರನ್ನು,

ಮೊದಲ ಭೇಟಿಯಲ್ಲೆ ಎಳ್ಳಷ್ಟು ಅಪರಿಚಿತೆ ಅಂತ ಭಾವಿಸದೆ, ಅರ್ಧಕ್ಕೆ ಬಿಟ್ಟ ಪುಸ್ತಕವನ್ನು ಓದುವಂತೆ ನನ್ನನ್ನು ಕೈಗೆತ್ತಿಕೊಂಡು, ಪೊರೆಯುತ್ತಿರುವ ಭವವಿಧುರನನ್ನು,

ಯಾವುದೊ ಋಣಾನುಬಂಧದಿಂದ ನನ್ನ ಬದುಕಿನೊಳಗೆ ಬಂದು ಅಗಾಧವಾಗಿ ಮತ್ತು ಉನ್ನತವಾಗಿ ಪ್ರೀತಿಸಲು ಕಲಿಸಿದ ಹಸುಗೂಸುಗಳನ್ನು.

ನಿದ್ರಿಸುವ ಹೊತ್ತಿನಲ್ಲಿ ಎದ್ದು ಕುಣಿವ, ಕಣ್ತೆರೆವ ವೇಳೆಗೆ ತೂಕಡಿಸುವ ನನ್ನ ಪೀಳಿಗೆಯ ಬೆಂಕಿಯ ಕೂಸುಗಳನ್ನು ನಲ್ಮೆಯ ತೋಳಿನಲಿ ಪೊರೆಯುತ್ತಿರುವ ಎಲ್ಲ Nurturesಗೆ ಈ ಬರೆಹ ಅರ್ಪಣೆ. ~ಒಲವಿರಲಿ.

‍ಲೇಖಕರು avadhi

May 10, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

೧ ಪ್ರತಿಕ್ರಿಯೆ

  1. Shyamala

    ಒಲವಿನ ಅನಾಮಿಕ, ಅನಂತ ಸಾಧ್ಯತೆಗಳನ್ನು ತೋರಿಸಿದ ನಿನ್ನ ಬರಹಗಳಿಗೊಂದು ನನ್ನ ಬಹು ದೊಡ್ಡ ಸಲಾಮ್.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: