ಹೆಣ್ಣುಮಕ್ಕಳ ಉಡುಪು ಮತ್ತು ಸುಲ್ತಾನ್ ಟಿಪ್ಪು!

ಡಾ. ವಡ್ಡಗೆರೆ ನಾಗರಾಜಯ್ಯ

ಕೆಲವು ಆಧುನಿಕ ಪಡ್ಡೆ ಹುಡುಗಿಯರು ಬ್ರಾ ಧರಿಸದೆಯೇ ಒಳಗೆ ಗುಜುಮಾಡುವಂತಹ ಟೀಶರ್ಟುಗಳನ್ನು ಅಥವಾ ಬಿಗಿಯಾದ ಬ್ಲೂಜೀನ್ಸ್ ವಸ್ತ್ರಗಳನ್ನು ಧರಿಸುವುದರ ವಿರುದ್ಧ ಸಂಪ್ರದಾಯಸ್ತ ಪುರುಷರ ಅಸಹನೀಯ ಮಾತುಗಳು ಕೇಳಿಬರುತ್ತಿವೆ. ಇದೇ ಭಾರತೀಯ ಪುರುಷ ಸಮಾಜ ಸ್ತ್ರೀಯರು ಕುಪ್ಪಸಗಳನ್ನು ಧರಿಸಬಾರದೆಂದು ತೆರೆದ ಎದೆಗಳಲ್ಲಿರುವಂತೆ ಅಥವಾ ಕುಪ್ಪಸ ಧರಿಸುವ ಹೆಂಗಸರು ತೆರಿಗೆ ಕಟ್ಟಬೇಕಾದ ಕರಾಳ ಕಾನೂನು ಜಾರಿಯಲ್ಲಿರಿಸಿದ್ದ ಬಗ್ಗೆ ನಾವೀಗ ಮರೆತೇಬಿಟ್ಟಿದ್ದೇವೆ.

ನಮ್ಮ ಗ್ರಾಮೀಣ ಭಾರತದ ಕಾಡುಗೊಲ್ಲ, ತಿಗಳ, ಬಂಜಾರ ಮುಂತಾದ ಕೆಲವು ತಳಸ್ತರ ಸಾಮಾಜಿಕ ವಲಯಗಳ ಜನ ತೀರಾ ಇತ್ತೀಚಿನ ದಿನಗಳವರೆಗೂ ಕುಪ್ಪಸಗಳನ್ನೇ ಧರಿಸುತ್ತಿರಲಿಲ್ಲ. ಇಂತಹ ಹೀನ ಪದ್ದತಿಯ ಪಳೆಯುಳಿಕೆಗಳು ಈಗಲೂ ಇರುವುದನ್ನು ನಾವು ಅಪರೂಕ್ಕೆ ನೋಡಬಹುದಾಗಿದೆ. ಹಿಂದಿನ ಕಾಲದ ಮಹಿಳೆಯರು ಇಂತಹ ಹೀನ ಪದ್ದತಿಗೆ ಗುರಿಯಾಗಿದ್ದರು. ಇಲ್ಲಿ ಹೆಸರಿಸಲಾದ ಕಾಡುಗೊಲ್ಲ, ಕುಪ್ಪಸಗಳನ್ನು ಧರಿಸದಿರುವ ತಿಗಳ, ಬಂಜಾರ ಮುಂತಾದ ಸಮುದಾಯಗಳ ಆರ್ಥಿಕ ಗತಿಗೇಡಿ ಹೆಂಗಸರ ಮಾತಿರಲಿ,ಇಂತಹ ಸಾಮಾಜಿಕ ವಲಯಗಳಾಚೆಗೂ ಇರುವ ಉಳ್ಳವರು ಮತ್ತು ಕುಲೀನ ಹೆಂಗಸರೂ ಕೂಡ ಎಲ್ಲೆಂದರಲ್ಲಿ ಯಾವುದೇ ಮುಜುಗರವಿರದೆ ತೆರೆದೆದೆ ತೋರಿಸಿಕೊಂಡು ತಮ್ಮ ಮಕ್ಕಳಿಗೆ ಹಾಲೂಡುತ್ತಿದ್ದರು. ಇದು ನಮ್ಮ ಕಣ್ಣುಗಳಿಗೆ ಅಶ್ಲೀಲವಾಗಿ ಕಂಡದ್ದೇ ಇಲ್ಲ.

ಅಂತಹ ಕಾಡುಗೊಲ್ಲ ತಿಗಳ ಬಂಜಾರ ಜನಾಂಗಗಳ ಹೆಣ್ಣುಗಳಿಂದು ಮೇಲ್ವಸ್ತ್ರ ಧರಿಸಲು ರೂಢಿಮಾಡಿಕೊಂಡದ್ದು ಹೆಣ್ಣಿನ ವಿರುದ್ಧದ ಪುರುಷ ರಾಜಕಾರಣವನ್ನು ಮಣಿಸಲಾಗಿಯಲ್ಲವೇ ಅಲ್ಲ. ‘ಪರಸಂಗದ ಗೆಂಡೆತಿಮ್ಮ’ ಕಾದಂಬರಿಯಲ್ಲಿ ಒಳ ಉಡುಪು ತೊಟ್ಟ ಆಧುನಿಕ ಹೆಣ್ಣುಮಕ್ಕಳ ಸಹವಾಸ ಮಾಡಿದರೆ ಬಡತನದ ನೆಲೆಯ ಹೆಣ್ಣುಮಕ್ಕಳು ಆಧುನೀಕರಣದ ಲಾಂಛನಗಳನ್ನು ಹೊಂದುವ ಆಸೆಗೆಬಿದ್ದು ಹಾದರಕ್ಕಿಳಿಯುತ್ತಾರೆಂದು ಚಿತ್ರಿಸಲಾಗಿದೆ. ಎಪ್ಪತ್ತರ ದಶಕದ ಬಡಜನರ ಮೌಲ್ಯಗಳು ಆ ಬಗೆಯವು. ಅದನ್ನು ಕೃಷ್ಣ ಆಲನಹಳ್ಳಿ ಘನತೆಯಿಂದ ಚಿತ್ರಿಸುತ್ತಲೇ ಆಧುನಿಕ ಲಾಂಛನಗಳ ಮೋಹಕ್ಲೇಶಗಳ ವಿಪತ್ಕಾರಗಳನ್ನು ಕಂಡು ತಿಮ್ಮನ ಮೂಲಕ ಮರುಗಿದ್ದಾರೆ.

ಹೀಗಿರಲು ಬ್ರಾ ಧರಿಸದೆಯೇ ಟೀಶರ್ಟ್ ಮತ್ತು ಬ್ಲೂಜೀನ್ಸ್ ತೊಟ್ಟ ಹೆಣ್ಣಮಕ್ಕಳ ಕಡೆಗಿನ ಕೆಲವು ಪುರುಷರ ನೋಟ ನನ್ನಲ್ಲಿ ಅಸಹ್ಯ ಭಾವನೆ ಮೂಡಿಸುತ್ತಿದೆ. ಹೆಣ್ಣುಮಕ್ಕಳು ಬ್ರಾ ತೊಡುವುದಾಗಲೀ, ಬ್ಲೂಜೀನ್ಸ್ ಧರಿಸುವುದಾಗಲೀ ನಾಗರಿಕತೆಯ ಕುರೂಪದ ಗುರುತಲ್ಲ. ಕುರೂಪ ಇರುವುದು ಪುರುಷನ ನೋಟದಲ್ಲಿಯೇ ಹೊರತು ಹೆಣ್ಣುಮಕ್ಕಳು ಧರಿಸುವ ವಸ್ತ್ರದಲ್ಲಿಯಲ್ಲ. ಬ್ರಾ ತೊಡದೆ ಇರುವುದು ಅನಾಗರಿಕತೆಯೂ ಅಲ್ಲ. ಕೃಷ್ಣ ಆಲನ    ಹಳ್ಳಿಯ ಪರಸಂಗದ ಗೆಂಡೆತಿಮ್ಮನು, ಪೇಟೆಯ ಸಂತೆಯಿಂದ ತಂದ ಬ್ರಾಗಳನ್ನು ಕಳ್ಳತನದಲ್ಲಿ ಮಾರಿ ಕೊನೆಗೆ ತನ್ನ ಸ್ವಂತ ಹೆಂಡತಿ ಮರಂಕಿಯು ವ್ಯಭಿಚಾರ ಮಾಡುವುದನ್ನು ಕಂಡು ಅವಳ ಅನೈತಿಕತೆಗೆ ಆಧುನಿಕತೆ ಗುಟ್ಟಾಗಿ ಮಸಲತ್ತು ಮಾಡಿದೆ ಎಂದು ಮರುಗುತ್ತಾನೆ. ಅನೈತಿಕ ಪ್ರೇಮಕಾಮ ಸಂಬಂಧಗಳು ಮೈತುಂಬಾ ಬಟ್ಟೆ ಧರಿಸುವ ಹೆಣ್ಣುಮಕ್ಕಳಲ್ಲಾಗಲೀ… ಬ್ರಹ್ಮಚರ್ಯ ದೀಕ್ಷೆ ತೊಟ್ಟ ಕೆಲವು ಧರ್ಮಾಧಿಕಾರಿ ಅಥವಾ ಸ್ವಾಮಿಗಳಲ್ಲಾಗಲೀ ಸಂಭವಿಸದೆ ಉಳಿದಿಲ್ಲವಲ್ಲಾ…?!

ಹೆಣ್ಣು ಮತ್ತು ಗಂಡಿಗೆ ಅವರವರ ದೇಹ ಪ್ರಕೃತಿ ಸಹಜ ಸೃಷ್ಟಿ. ಸೌಂದರ್ಯದ ಪ್ರದರ್ಶನವೆಂಬುದು ಆತ್ಮಸಂತೋಷಕ್ಕಾಗಿಯೇ ಹೊರತು ಪುರುಷನ ಪ್ರಚೋದನೆಗಾಗಿ ಅಲ್ಲವೇ ಅಲ್ಲ. ಪುರುಷನನ್ನು ಕೇವಲ ವಸ್ತ್ರವಿನ್ಯಾಸ ಮಾತ್ರದಿಂದಲೇ ಪ್ರಚೋದಿಸುವುದು ಸಾಧ್ಯವಿರದ ಮಾತು. ಹೆಣ್ಣಿನ ಅಂಗ ಸೌಷ್ಟವವನ್ನು ಗುಪ್ತವಾಗಿ ಕನವರಿಸುವ ಪುರುಷ ಅವಳನ್ನು ಯಾವ ವಸ್ತ್ರ ಧರಿಸಿದ್ದಳೆಂಬ ವಸ್ತ್ರವಿನ್ಯಾಸ ಮಾತ್ರದ ಕಲ್ಪನೆಯಿಂದ ಕನವರಿಸಲಾರ. ಅಂತಹ ಪುರುಷ ತನ್ನ ದೈಹಿಕ ಬೇಡಿಕೆಯನ್ನಾಗಲೀ, ಮನೋವಾಂಛೆಯನ್ನಾಗಲೀ ಬಹಿರಂಗ ಪಡಿಸಿಕೊಳ್ಳಲು ಹಾಗೂ ಪುರುಷತ್ವದ ಕೊರತೆಯನ್ನು ಬಚ್ಚಿಡಲು ಹೆಣಗಾಡುವುದು ವಿಪರ್ಯಾಸಕರ.

ಹೆಣ್ಣು ಪುರುಷನಲ್ಲಿರುವ ಕೇವಲ ಪಟುತ್ವದಿಂದ ಮತ್ತು ಆಧುನಿಕ ವಡವೆ ವಸ್ತ್ರ ಧರಿಸುವುದರಿಂದ ತೃಪ್ತಿಪಡುತ್ತಾಳೆ ಎನ್ನುವುದೊಂದು ಮಿಥ್ಯೆ. ಹೆಣ್ತನಕ್ಕೆ ಘಾಸಿಯಾಗದಿರುವ ಮತ್ತು ಅವಳ ಅಸ್ತಿತ್ವನ್ನು ಬಲವಾಗಿ ರೂಪಿಸಿಕೊಡಬಲ್ಲ ಅಸ್ಮಿತೆಗಳನ್ನು ಉಳಿಸುವ ಯಾವುದೇ ಅವಕಾಶಗಳು ಅವಳಲ್ಲಿ ಸಮಾಧಾನ ತರಬಲ್ಲವೆಂಬುದೇ ಇಲ್ಲಿ ಮುಖ್ಯ. ಹೆಣ್ಣು ಒಳ ವಸ್ತ್ರ ಧರಿಸಿದರೆ ಮಾತ್ರ ನಾಗರಿಕಳಾಗುತ್ತಾಳೆಂದು ಕೃಷ್ಣ ಆಲನಹಳ್ಳಿ ಬಿಂಬಿಸಿದ್ದಾರೆ. ಹೆಣ್ಣು ನಾಗರಿಕಳಾದರೆ ಮಾತ್ರ ಅವಳಿಗೆ ಸಮಾಜದಲ್ಲಿ ಗೌರವ ಕೊಡಲಾಗುತ್ತದೆಂದು ಹೇಳುವುದು ಸುಶಿಕ್ಷಿತರ ಅಭಿಪ್ರಾಯ. ಯಾಕೆಂದರೆ ಇವರು ಹೇಳುವ ನಾಗರಿಕತೆ ಆಧುನಿಕ ಕೈಗಾರಿಕಾ ಲಾಂಛನಗಳ ಅಳವಡಿಕೆಯೇ ಆಗಿದೆ. ಇಂತಹ ಆಧುನಿಕ ಸಂಕೇತಗಳನ್ನು ಹೊಂದಲಾಗದಿರುವ ಬಡ ಮತ್ತು ನಿರ್ಗತಿಕ ಹೆಣ್ಣುಗಳ ಪಾಡೇನು? ಇಂತಹ ಪುರುಷ ರಾಜಕಾರಣದ ಹಿಂದೆ ಮೇಲ್ವರ್ಗದವರ ಮತ್ತು ಬಂಡವಾಳಶಾಹಿಗಳ ಹುನ್ನಾರವೂ ಇದೆ. ಇದು ತಳ ಸಮುದಾಯಗಳನ್ನು ಸಮಾಜದ ಮುಖ್ಯವಾಹಿನಿಯಿಂದ ದೂರ ಇಡುವ ವ್ಯವಸ್ಥಿತ ಸಂಚೂ ಸಹ ಆಗಿದೆ. ಅದಕ್ಕಾಗಿಯೇ ಇರಬಹುದು ದೊಡ್ಡ ದೊಡ್ಡ ಬಹುರಾಷ್ಟ್ರೀಯ ಕಂಪನಿಗಳ ಒಳ ಉಡುಪು ಜಾಹೀರಾತುಗಳಲ್ಲಿ ಶ್ರೀಮಂತ ಹೆಣ್ಣು ಮಕ್ಕಳೇ ಹೆಚ್ಚು ಕಂಡುಬರುತ್ತಾರೆ. ಇದರ ಜೊತೆಜೊತೆಗೆ ಮೈಬಣ್ಣದ ವರ್ಣೀಯ ರಾಜಕಾರಣವೂ ಸೇರಿಕೊಂಡಿದೆ. ಬಿಳಿ ತೊಗಲಿನವರಿಗೆ ಮನ್ನಣೆ ನೀಡುವ ಈ ರಾಜಕಾರಣ ಕರಿತೊಗಲಿನ ಹೆಣ್ಣುಗಳನ್ನು ಹಿಂಸಾತ್ಮಕವಾಗಿ ಹೊರದಬ್ಬಿದೆ. ಕೆಲವು ಪತ್ರಕರ್ತರು ಮತ್ತು ಮಾಧ್ಯಮಗಳು ಇಂಥ ಕಂಪನಿಗಳ ದಳ್ಳಾಳಿಗಳಾಗಿ ತಮ್ಮನ್ನು ನಿಯೋಜಿಸಿಕೊಂಡಿದ್ದಾರೆ.

ಬಿಳಿಯ ತೊಗಲಿನ ಚೆಲುವ ಚೆಲುವೆಯರು ಮತ್ತು ಮ್ಯಾಚಿಂಗ್ ಮ್ಯಾಚಿಂಗ್ ಬಣ್ಣಗುರುಡುತನದ ವರ್ಣೀಯ ರಾಜಕಾರಣ ಹೀಗೆಯೇ ಅನೇಕ ಸ್ವರೂಪದ ಹಿಂಸಾತ್ಮಕ ಹಾಗೂ ಭೇದನ್ಯಾಯದ ಪಾತಳಿಗಳಲ್ಲಿ ವ್ಯಕ್ತವಾಗುತ್ತಿದೆ. ಇವತ್ತು ಭಾರತದಲ್ಲಿ ಅಭಿವೃದ್ಧಿ ಅಭಿವೃದ್ಧಿ ಎಂದು ಬಾಯಿ ಬಡಿದುಕೊಳ್ಳುತ್ತಿರುವ ಹಲವಾರು ಬಂಡವಾಳಶಾಹಿಗಳು ವೈದಿಕ ಸಂಪ್ರದಾಯ ಮತ್ತು ಪುರುಷ ಪ್ರಧಾನ ಸಂಸ್ಕೃತಿಯನ್ನೇ ಉಸುರುತ್ತಿದ್ದಾರೆ. ಅಸಲಿಗೆ ನಮ್ಮ ದೇಶವು ಹೆಣ್ಣುಮಕ್ಕಳ ಒಳ ಉಡುಪುಗಳಾಚೆಗೆ, ಮೈಬಣ್ಣದ ರಾಜಕಾರಣದಾಚೆಗೆ, ಸ್ಥಗಿತ ಧಾರ್ಮಿಕ ಮೌಲ್ಯಗಳಾಚೆಗೆ ಅಭಿವೃದ್ಧಿಯ ಚಲನೆ ಕಾಣುತ್ತಿಲ್ಲ.

ಮಲಬಾರ್ ಪ್ರಾಂತ್ಯದಲ್ಲಿ ತೋಟಗಳಲ್ಲಿ ದುಡಿಯುತ್ತಿದ್ದ ಕೂಲಿಹೆಣ್ಣುಗಳು ಕುಪ್ಪಸ ಧರಿಸಬಾರದೆಂದು ನಿಯಮಗಳನ್ನು ವಿಧಿಸಿದ್ದ ನಾಯರ್ ಗಳ ವಿರುದ್ದ ಕತ್ತಿಯ ಮೊನೆಯಿಂದ ಕಾದಿದ ಮೈಸೂರು ಹುಲಿ ಟಿಪ್ಪೂ ಸುಲ್ತಾನನ ಸಂಘರ್ಷದ ಪುಟಗಳೀಗ ನನಗೆ ನೆನಪಾಗುತ್ತಿವೆ. ಕತ್ತಿಯ ಮೊನೆಯಿಂದ ಸುಲ್ತಾನ್ ಟಿಪ್ಪು ದೊರಕಿಸಿಕೊಟ್ಟ ಕುಪ್ಪಸ ತೊಡುವ ಹಕ್ಕನ್ನು ಮಲಬಾರ್ ತೋಟಗಳ ಕೂಲಿಹೆಣ್ಣುಗಳು, ಪುರುಷರ ಕೋಟೆಯಿಂದ ಬಿಡುಗಡೆಗೊಂಡ ಸೌಂದರ್ಯಾನುಭೂತಿ ಎಂಬಂತೆ ಆಚರಿಸುತ್ತಾರೆ.

ಇವತ್ತಿನ ಆಧುನಿಕ ಕಾಲದಲ್ಲಿ ಒಳ ಉಡುಪು ಧರಿಸದೆಯೇ ಗುಜುಮಾಡುವಂತಹ ಟೀಶರ್ಟುಗಳನ್ನು ಅಥವಾ ಬಿಗಿಯಾದ ಬ್ಲೂಜೀನ್ಸುಗಳನ್ನು ಧರಿಸುವ ಸೌಂದರ್ಯವನ್ನು ಹೆಣ್ಣುಮಕ್ಕಳು ಆಚರಿಸುವಂತೆ ಮಾಡುವ ದಾರಿ ಯಾವುದು? ಟಿಪ್ಪು ಸುಲ್ತಾನನ ಕತ್ತಿಗಿಂತಲೂ ಸಂಪ್ರದಾಯಶರಣ ಪುರುಷನ ಕಣ್ಣಿನ ನೋಟ ಹರಿತವಾಗಿರುವಂತೆ ನನಗೆ ಕಾಣಿಸುತ್ತಿದೆ.

ಹೆಣ್ಣುಮಕ್ಕಳು ಎದೆಯ ಮೇಲೆ ಕುಪ್ಪಸ ಧರಿಸದೆ ತೆರೆದೆದೆಯಲ್ಲಿ ಬದುಕಲೆಂದು ಬಯಸಿದ ಪುರುಷ ಪಾರಮ್ಯ ಸಮಾಜ ನಮ್ಮದು. ಇದಕ್ಕೆ ದೃಷ್ಟಿ ಕಡಿಮೆ. ಕುರುಡು ಜಾಸ್ತಿ!

 

‍ಲೇಖಕರು Avadhi

January 5, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: