"ಮಗೂ ಗಂಜಿಯ ಮಡಕೆ ಎಲ್ಲಿ?" 

 
ಜಿ ಎನ್ ಮೋಹನ್ ಸಂಪಾದಿಸಿದ ಸು. ರಂ. ಎಕ್ಕುಂಡಿ ಅವರ ನೆನಪಿನ ‘ಎಕ್ಕುಂಡಿ ನಮನ’ ಕೃತಿಯ ಆಯ್ದ ಲೇಖನ…
‘ಮನವ ಕಾಡುತಿದೆ’
ತಮ್ಮ ಕೀರ್ತನೆಯೊಂದರಲ್ಲಿ ಪುರಂದರದಾಸರು, ‘ಮನವಶೋಧಿಸಬೇಕು ನಿಚ್ಚ’ ಎಂದು ಹಾಡಿ, ಬದುಕನ್ನು ಕುರಿತು ಜನರನ್ನು ಎಚ್ಚರಿಸಿದ್ದರು. ಅವರಂಥ ಭಾವುಕರಿದ್ದ ಕಾಲದಲ್ಲಿ ಬದುಕನ್ನು ಪುಣ್ಯ ಪಾಪಗಳಿಂದಲೆ ಅಳೆಯುತ್ತಿದ್ದರು.
ಮಹಾಭಾರತವನ್ನು ರಚಿಸಿದ ಮೇಲೆ ವ್ಯಾಸರು, ಧರ್ಮಸಾರವನ್ನೆಲ್ಲ ಎರಡು ಮಾತುಗಳಲ್ಲಿ ಸಂಕ್ಷಿಪ್ತವಾಗಿ ಹೇಳಿದರು. ‘ಪರೋಪಕಾರವೇ ಪುಣ್ಯ. ಪರಪೀಡನೆಯೆ ಪಾಪ’ ಎಂದು. ಆದರೆ ಕಾಲವು ಬದಲಾದಂತೆ, ಪುಣ್ಯ ಪಾಪಗಳ ಕಲ್ಪನೆಯೂ ಬದಲಾಯಿತು. ನಮ್ಮ ಧರ್ಮದ ಒಂದು ದೊಡ್ಡ ದುರಂತವೆಂದರೆ, ಪುಣ್ಯ ಪಾಪಗಳ ಆಡಿಟ್ ಮಾಡುವ ಅವಸರದಲ್ಲಿ ನಾವು ಬದುಕುವುದನ್ನೇ ಪೂರ್ತಿ ಮರೆತುಬಿಟ್ಟೆವು.
ಇದನ್ನೆ ಎಲಿಯೆಟ್ ಕವಿ, ‘ಬಾಳುವುದರಲ್ಲೆ ನಾವು ಕಳೆದುಕೊಂಡ ಆ ಬದುಕು ಎಲ್ಲಿದೆ?’ ಎಂಬ ಮಾತಿನಲ್ಲಿ ಹೇಳಿದರು. ನಮ್ಮಿಂದ ಕ್ಷಣಕ್ಷಣಕ್ಕೂ ಕಣ್ಮರೆಗೊಳ್ಳುತ್ತಿರುವ ಬದುಕಿನ ಭಾಗ್ಯವನ್ನೂ, ಸೌಂದರ್ಯವನ್ನೂ ಗಮನಿಸಬೇಕೆಂದು ಕರೆಕೊಡುತ್ತಾರೆ, ರಶಿಯಾದ ಕವಿ, ನಿಕೊಲಯ ರುಬ್’ತ್ಸೊವ, ಈ ಸಾಲುಗಳಲ್ಲಿ: “ಕದ ತೆರೆದು ಬನ್ನಿರಿ ಬೇಗ ಹೊರಗೆ ಬನ್ನಿರಿ, ಕೊಕ್ಕರೆಗಳನ್ನು ನೋಡಿದಿರಾ, ಸುಂದರ, ಭವ್ಯ ಲಾವಣ್ಯಮಯ….”
ಹಲವು ವರ್ಷಗಳ ಹಿಂದೆ, ಒಂದು ಮುಂಜಾವು ನಮ್ಮ ಹಳ್ಳಿ ಬಂಕಿಕೊಡ್ಲದಿಂದ ಪಕ್ಕದ ಇನ್ನೊಂದು ಹಳ್ಳಿಗೆ, ಒಬ್ಬರನ್ನು ಕಾಣಲು ಹೊರಟೆನು. ಆ ಹಳ್ಳಿ ನಮ್ಮ ಊರಿಂದ ಸುಮಾರು ಒಂದು ಮೈಲಿ ದೂರ. ಆದರೆ ಬೆಳಗಿನ ಹೊತ್ತಿನಲ್ಲಿ ಆ ಊರಿಗೆ ಆ ದಾರಿಯಲ್ಲಿ ಹೋಗುವದು ನನಗೆ ಯಾವಾಗಲೂ ಆನಂದದ ವಿಷಯವಾಗಿತ್ತು.
ದಾರಿಯ ಇಬ್ಬದಿಗಳಲ್ಲೂ ಸಣ್ಣ ಸಣ್ಣ ಗುಡಿಸಲುಗಳಿರುವ ಹಿತ್ತಲುಗಳಿದ್ದವು. ಅವುಗಳಲ್ಲಿ ತೇರು ನೋಡಲು ನಿಂತವರಂತೆ ತೆಂಗಿನ ಮರಗಳು, ಒಂದಕ್ಕೊಂದು ತಾಗಿ ತಿಕ್ಕಾಡುವಂತೆ ಬೆಳೆದಿದ್ದವು. ಹಿತ್ತಲದ ಅಂಚಿನಲ್ಲಿ ಗೋಡೆಯ ಬಳಿ, ಮಾವು, ವಾಟೆಮರಗಳು ಬೆಳೆದು ನಿಂತು, ದಾರಿಗಳನ್ನು ನೆರಳಿನಿಂದ ಮುಚ್ಚಿದ್ದವು. ಬಾಳೆ ಹಾಗೂ ತೆಂಗಿನ ಬುಡಗಳಿಗೆ ನೀರು ಹರಿಸುತ್ತಿದ್ದ ಬಡವರ ಧ್ವನಿಗಳು ಕೇಳಹತ್ತಿದವು. ಅಲ್ಲಲ್ಲಿಯ ಬಿಲಗುಗಳಲ್ಲಿ, ಜುಳುಜುಳು ನೀರು ಓಡುವ ಸದ್ದು. ಅಲ್ಲೊಂದು ಇಲ್ಲೊಂದು ಬಣ್ಣಬಣ್ಣದ, ಉದ್ದನೆಯ ಗರಿಯ ಹಕ್ಕಿಗಳು. ಮುಂದೆ ಸಾಗಿದರೆ ಕೆಲವು ಮೆಟ್ಟಲುಗಳು ಸಿಗುತ್ತವೆ. ಅವನ್ನಿಳಿದರೆ ವಿಸ್ತಾರ ಗದ್ದೆಯ ಬಯಲುಗಳು ಬರುತ್ತವೆ.
ಮೆಟ್ಟಿಲುಮೇಲೆ ನಿಂತು ನೋಡಿದರೆ, ಇಡೀ ಗದ್ದೆಯ ಬಯಲು ತುಂಬ ಜನರು, ಗಂಡಸರು, ಹೆಂಗಸರು, ಗುಂಪುಗುಂಪಾಗಿ ದುಡಿಯುವದು ಕಾಣುತ್ತದೆ. ಬದುಗಳನ್ನೂ, ಬೇಲಿಯನ್ನೂ ಕಟ್ಟಿಕೊಂಡು, ಕೆಲವರು ತರಕಾರಿ ಬೆಳೆಯುತ್ತಾರೆ; ಕೆಲವರು ನೀರು ಎತ್ತುತ್ತಾರೆ; ಕೆಲವರು ತರಕಾರಿ ಹಣ್ಣುಗಳನ್ನು ಕೊಯ್ದು ಬುಟ್ಟಿ ತುಂಬುತ್ತಾರೆ.
ಆ ಬಯಲಲ್ಲಿ ಒಂದು ಕಡೆ ಒಬ್ಬ ರೈತ, ತನ್ನ ಹೊಲವನ್ನು ಉಳುತ್ತಿದ್ದನು. ಆತನ ಹೊಲದಂಚಿಗೆ ಎಂಟು ಹತ್ತು ವರ್ಷದ ಒಬ್ಬ ಹುಡುಗಿ ಕುಳಿತಿದ್ದಳು. ಅವಳ ಸನಿಹದಲ್ಲೆ ಒಂದು ಬುಟ್ಟಿಯಿದ್ದಿತು. ಅದರಲ್ಲಿ ಒಂದು ನೀರಿನ ಚೊಂಬು, ಮಡಕೆ, ಒಂದೆರೆಡು ಸಣ್ಣ ಪಾತ್ರೆ ಇದ್ದವು. ಹೊಲವನ್ನು ಉಳುತ್ತಿರುವ ತಂದೆಗಾಗಿ ಹುಡುಗಿ ಬುತ್ತಿಯ ಬುಟ್ಟಿಯನ್ನು ತಂದಿದ್ದಳು. ಆತ ಉಳುವದು ಮುಗಿಯುವುದನ್ನೆ ಕಾಯುತ್ತ ಕುಳಿತಿದ್ದಳು.

ಒಮ್ಮೆಲೆ ಆ ಹುಡುಗಿ ಅಲ್ಲಿಂದೆದ್ದು ಬದುವಿನ ಮೇಲೆ ನಿಂತುಕೊಂಡಳು. ಪಕ್ಕದ ಗದ್ದೆಯ ಕಡೆಗೆ ನಿಧಾನವಾಗಿ  ಸಾಗಿ ಅಲ್ಲಿ ಏನನ್ನೋ ನೋಡುತ್ತ ನಿಂತಳು. ಏನಿರಬಹುದೆಂಬ ಕುತೂಹಲದಿಂದ, ನಾನೂ ಸ್ವಲ್ಪ ಮುಂದೆ ಬಂದು ನೋಡಿದೆನು. ನಾಲ್ಕೈದು ಬೆಳ್ಳಕ್ಕಿಗಳು ಲಾವಣ್ಯದ ವರ್ತುಲಗಳನ್ನು ರಚಿಸುತ್ತ ಮೆಲ್ಲನೆ ಇಳಿದು ಬಂದವು. ಬೆಳ್ಳನೆಯ ಮೈಚೆಲುವು, ಹರಡಿದ ರೆಕ್ಕೆಗಳು, ನೀರು ಹರಿವ ಬಿಲಗುಗಳ ಬದಿ ಕುಳಿತು, ಕೊರಳು ಕೊಂಕಿಸಿ, ಆಚೆ ಈಚೆ ನೋಡಿದವು. ಹರಿಯುವ ನೀರಿಗೆ ಚುಂಚು ಹಾಕಿದವು. ಆ ಬೆಳ್ಳಕ್ಕಿಗಳು ಕುಳಿತು ನೀರು ಕುಡಿಯುವ ಆ ಸೊಬಗಿನಲ್ಲಿ ಹುಡುಗಿ ತನ್ಮಯಳಾಗಿ ಹೋದಳು. ಅವುಗಳ ಸೌಂದರ್ಯವು ಒಂದು ಕ್ಷಣ ಅವಳನ್ನು ಮೈಮರೆಸಿಬಿಟ್ಟಿತು. ಅವಳ ಕಣ್ಣು, ಮನಸ್ಸು, ಲೋಕ ಎಲ್ಲವೂ ಆ ಹಕ್ಕಿಗಳ ಬೆಳ್ಳನೆಯ ಮೋಹಕತೆಯಲ್ಲಿ ಕರಗಿ ಹೋದವು. ಅವಳು ಆನಂದ ಪುಲಕಿತಳಾದಳು.
“ಗಂಜಿಯ ಮಡಕೆ ಎಲ್ಲಿ?” ತಂದೆ ಗಟ್ಟಿಯಾಗಿ ಕೂಗಿದ್ದು ಕೇಳಲಿಲ್ಲ. ಮಗಳು ಹಕ್ಕಿಗಳ ಚೆಲುವನ್ನು ನೋಡುವದರಲ್ಲಿ ಮುಳುಗಿದ್ದಳು. ಉಳುವುದನ್ನು ಮುಗಿಸಿದ ತಂದೆಗೆ ಹೊಟ್ಟೆ ಚುರುಗುಡುತ್ತಿತ್ತು. ಮತ್ತೆ ಆ ರೈತ ಕೂಗಿದನು. “ಮಗೂ ಎಲ್ಲಿ ಗಂಜಿಯ ಮಡಕೆ?” ಆಗ ಹುಡುಗಿ, ತಂದೆ ಕರೆಯುವುದನ್ನು ಗಮನಿಸಿ, ಆತನತ್ತ ಓಡಿ ಬಂದಳು. ಬರುವಾಗಲೂ ಮತ್ತೆ ಮತ್ತೆ ಆ ಹಕ್ಕಿಗಳ ಕಡೆಗೆ ನೋಡುತ್ತಲೆ ಬಂದಳು. ತಾನು ತಂದಿರುವ ಬುಟ್ಟಿಯಲ್ಲಿದ್ದ ಗಂಜಿಯ ಮಡಿಕೆ ತೆರೆದು, ಹಸಿದು ಬಂದ ತಂದೆಗೆ ಬಡಿಸಿದಳು. ತಂದೆ ಮಗಳೂ ಇಬ್ಬರೂ, ಗಂಜಿಯನ್ನು ಉಂಡರು. ನಾನು ನನ್ನ ಪ್ರಯಾಣ ಮುಂದುವರೆಸಿದೆನು.
ಆ ರೈತನ ಮಗಳು, ಆಮೇಲೆ ನಮ್ಮ ಶಾಲೆಯಲ್ಲೆ ಕಲಿತಳು. ತುಂಬ ಬಡವರಾದರೂ, ಅವರ ಕುಟುಂಬ ಕಷ್ಟಪಟ್ಟು ದುಡಿಯುತ್ತಿದ್ದರು. ಆ ಹುಡುಗಿಯನ್ನು ಅವರು ಚೆನ್ನಾಗಿ ಓದಿಸಿದರು. ಚುರುಕು ಬುದ್ಧಿಯ ಆ ಹುಡುಗಿಗೆ ಆಟಪಾಠಗಳಲ್ಲೂ ತುಂಬ ಪ್ರೀತಿಯಿದ್ದಿತು.
ನನ್ನಂತೆ ಶಿಕ್ಷಕ ವೃತ್ತಿಯಲ್ಲಿದ್ದವರಿಗೆ, ಮಕ್ಕಳು ಬೆಳೆದು ಬದಲಾಗುವುದನ್ನು ಗಮನಿಸುವದು ವೃತ್ತಿಜನ್ಯವಾದ ಒಂದು ಹವ್ಯಾಸವಾಗಿರುತ್ತದೆ. ಅವರು ದೊಡ್ಡವರಾಗುವಾಗ- ಒಮ್ಮೊಮ್ಮೆ ಪೂರ್ತಿ ದೊಡ್ಡವರಾಗಿಬಿಡುತ್ತಾರೆ. ಸಣ್ಣವರಿದ್ದಾಗಿನ ಮನಸ್ಸಿನ ಸರಳತೆ, ಮುಗ್ದತೆ, ವಾತ್ಸಲ್ಯ ಎಲ್ಲ ಕಳೆದುಕೊಂಡುಬಿಡುತ್ತಾರೆ. ಬಾಳ್ವೆಯ ದುಃಖಗಳಿಗೆ, ಕೆದಕಿದರೆ ಎಲ್ಲ ತೆರೆದುಬಿಡುತ್ತಾರೆ. ನಾನು ನೋಡಿದ ಆ ರೈತ ಹುಡುಗಿ ಉಳಿದೆಲ್ಲ ಮಕ್ಕಳಂತೆ, ಪ್ರಾಣಿಗಳನ್ನು ಪಕ್ಷಿಗಳನ್ನು ಪ್ರೀತಿಸುತ್ತಿದ್ದಳು. ಬೆಟ್ಟ ಬಯಲುಗಳನ್ನು, ಕಾಡು, ಕಣಿವೆಗಳನ್ನು ಪ್ರೀತಿಸುತ್ತಿದ್ದಳು. ಕೊಕ್ಕರೆಗಳ ಚೆಲುವನ್ನು ನೋಡುತ್ತ ತನ್ನನ್ನೆ ಮರೆತುಕೊಳ್ಳುತ್ತಿದ್ದಳು.
ಇಂಥ ಕೋಮಲ ರಸದೃಷ್ಟಿ ಹಾಗೂ ಸಂವೇದನೆ ಹೊಂದಿದ ಮಕ್ಕಳು ದೊಡ್ಡವರಾಗುವ ಹೊತ್ತಿಗೆ ಇವರಿಗೆ ಬೆಳ್ಳಕ್ಕಿ ಕೊಕ್ಕರೆಗಳ ಲಾವಣ್ಯವರ್ತುಲಗಳು ಕಣ್ಮರೆಗೊಳ್ಳುತ್ತವೆ. ಅವುಗಳ ಮೈಸೊಬಗು, ರೆಕ್ಕೆಬಿಚ್ಚಿಕೊಳ್ಳುವ ಸೌಂದರ್ಯ, ನೀರು ಕುಡಿಯುವ ಮಾಟ ಆಮೇಲೆ ಆ ಹಕ್ಕಿಗಳೂ, ಕೂಡ ತೀರ ಸದರವಾಗುತ್ತವೆ. ಅಲೌಕಿದ ಸ್ಪಂದನವನ್ನುಂಟುಮಾಡುವ ಆ ರಸಕ್ಷಣಗಳು ಅವರಿಂದ ದೂರ ದೂರ ಸರಿಯುತ್ತವೆ. ಕಣ್ಣಿಗೆ ಸೊಬಗನ್ನೂ, ಜೀವಕ್ಕೆ ಆನಂದವನ್ನೂ ನೀಡುವ ಪ್ರಕೃತಿಯು ಅವರ ಪಾಲಿಗೆ ಇಲ್ಲವಾಗುತ್ತದೆ. ಏಕೆಂದರೆ ಅವರ ಕಿವಿಯಲ್ಲಿ ಸದಾ ಒಂದು ಪ್ರಶ್ನೆ ಮೊಳಗುತ್ತಲೇ ಇರುತ್ತದೆ.
“ಮಗೂ ಗಂಜಿಯ ಮಡಕೆ ಎಲ್ಲಿ?”
ಈ ಗಂಜಿಯ ಮಡಕೆಯೆ, ಕೊಕ್ಕರೆಗಳನ್ನೂ ನುಂಗುತ್ತದೆ. ಮಗುವಿನ ಮನಸ್ಸನ್ನೂ ನುಂಗುತ್ತದೆ. ಅಂದಿನಿಂದಲೂ ಈ ಸಮಸ್ಯೆ ನನ್ನನ್ನು ಕಾಡುತ್ತಿದೆ. ನಮ್ಮ ಮಕ್ಕಳು ದೊಡ್ಡವರಾಗುವ ಹೊತ್ತಿಗೆ ಗಂಜಿಯ ಮಡಕೆಗಾಗಿ, ಕೊಕ್ಕರೆ, ಬೆಳ್ಳಕ್ಕಿಗಳನ್ನು ತೊರೆಯಲೇ ಬೇಕೆ?

‍ಲೇಖಕರು Avadhi

January 5, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: