-ಕೆ ಎನ್ ಲಾವಣ್ಯಪ್ರಭಾ
ಕಾಂಪೌಂಡಿನೊಳಗೆ ನೆಟ್ಟ ಗಿಡಗಳೆಲ್ಲಾ
ಮೊನ್ನೆಯಷ್ಟೇ ಹನಿದ
ಬೇಸಗೆಯ ಮೊದಲ ಮಳೆಗೆ
ಹಸಿರಾಗಿ ಹೊಳೆಯುತ್ತಾ
ಹೂವರಳಿಸಿಕೊಂಡು
ಹೂನಗೆ ಬೀರುವ ಹೊತ್ತಲ್ಲಿ…
ಹೂವಿನಂಥಾ ಹೆಣ್ಣು ಸುಕೋಮಲೆ
ಅವಳು
ಹೂಹೃದಯವನ್ನೇ ಹೊದ್ದು
ಹೂಮನಸ್ಸನ್ನು ಮುಡಿದು ಮಿಡಿದು
ನೆನಪುಗಳ ಹೂಮಾಲೆ ಕಟ್ಟುತ್ತಾ
ಗೇಟಿನಾಚೆಗೆ ತದೇಕ ದಿಟ್ಟಿಸಿ
ಮನೆಯ ಗಿಡದ ಹೂಗಳನ್ನೆ ಬಿಡಿಸಿ
ಹೂಗುಚ್ಛವಾಗಿಸಿ ಪಕ್ಕದಲ್ಲಿರಿಸಿಕೊಂಡೇ
ಕೂತಿದ್ದಾಳೆ ಅದೆಷ್ಟೋ ಕಾಲದಿಂದ.

ಆತ ಬಂದಾಗ ತಟ್ಟನೆದ್ದು
ಎದೆಬಡಿತ ಸಾವರಿಸಿಕೊಂಡು
ಓಡಿ ಬಾಗಿಲಿನಾಚಿನ ಹೊಸ್ತಿಲಲಿ ನಿಂತೇ
ಕಾತರದ ಕಣ್ಣಲ್ಲಿ ಬರಮಾಡಿಕೊಂಡು
ಕಂಪಿಸುವ ಕೈಗಳಲಿ ಹೂಗೊಂಚಲವನ
ಅಂಗೈಲಿರಿಸಿ ನಾಚುವ ಕ್ಷಣಗಳನ್ನು
ಮತ್ತೆ ಮತ್ತೆ ನೆನೆದು ಪುಳಕಗೊಂಡು
ಕನಸುಗಳ ಕನವರಿಸಿ
ಕಳೆದಿರುಳುಗಳಲ್ಲಿ ಕಾಡಿದ
ಏಕಾಂಗಿತನವನ್ನು ನೇವರಿಸಿ
ಸಂಯಮದ ಹುತ್ತವನೆ ಕಟ್ಟುತ್ತಾ
ಮಣ್ಣಘಮದಲ್ಲಿ ಪ್ರೇಮಗಂಧವ
ಒದ್ದೆನೆಲದಲ್ಲಿ ಹೆಜ್ಜೆನಾದವ
ಹುಡುಕುತ್ತಾ ಕಣ್ಣು ಕೀಲಿಸಿ
ಕಿವಿಯನಾಲಿಸಿ ಕಾಯುತ್ತಿದ್ದಾಳೆ
ಮಾಸಗಳು ವರ್ಷಗಳು ಕಳೆಯುತ್ತಿವೆ
ನೊಂದು ಬೆಂದ ಗಾಯಗಳು
ಮಾಯುತ್ತಿವೆ
ಜೀವ ಮಾಗಿ ಸಾಗುತ್ತಿವೆ
ಬೇಸಗೆ ಚಳಿಗಾಲ ಮಳೆಗಾಲ
ಹುಣ್ಣಿಮೆ ಅಮಾವಾಸ್ಯೆ
ಸುನಾಮಿ ಚಂಡಮಾರುತ
ಕಾಲಕಾಲಕ್ಕೆ ಬಂದು ಹೋಗುತ್ತಿವೆ
ನಿಲ್ಲದ ಅತಿಥಿಗಳಂತೆ.
ಹೂವು ಬಾಡುತ್ತವೆ ಮತ್ತೆ ಅರಳುತ್ತವೆ
ಮತ್ತೆ ತಯಾರಾಗುವ ಹೂಗುಚ್ಛದ
ಜೊತೆ ಪ್ರತಿ ಸಂಜೆಯೂ
ಬೇಸರವಿಲ್ಲದಂತೆ ಕಾಯ್ದು ಕೂರುತ್ತಾಳೆ
ಅವಳು ಶಬರಿಯೋ ಸೀತೆಯೋ
ಊರ್ಮಿಳೆಯೋ ಶಕುಂತಲೆಯೋ
ಅಥವಾ ನಮ್ಮನಿಮ್ಮಲ್ಲೊಬ್ಬಳಾದ
ಸರಳ ಸುಮತಿ ಶಾಂತಿ ತನುಜೆಯೋ
ಯಾವ ವನಿತೆಯೋ….
ಯುಗಯುಗಾಂತರಗಳಿಂದಲೂ
ಒಳಗೊಳಗೆ ನೊಂದು ಬೆಂದು ಕಾದು
ಹದಗೊಂಡು ಕಲ್ಲಿನಂತೆ ಸ್ಥಿರವಾಗಿ
ಮತ್ತೆ ಮತ್ತೆ ಕಾಯುತ್ತಾಳೆ
ಹೂಹೃದಯದ ಹೆಣ್ಣು.






0 Comments