-ಗೀತಾ ದೊಡ್ಮನೆ
ಅಮ್ಮನ ಚಿತ್ರ ಬಿಡಿಸುವುದು
ಅಮ್ಮನ ಚಿತ್ರ ಬಿಡಿಸುವುದು
ಎಷ್ಟು ಸುಲಭ!
ಮುಡಿಗೊಂದು ಮಲ್ಲಿಗೆದಂಡೆ;
ಮೊಣಕೈವರೆಗಿನ ಹಸಿರಂಚಿನ ರವಿಕೆ
ಸಕ್ಕರೆಕಣ್ಣಿನ ಸೀರೆಯ ಸೆರಗಿಗೆ-
ಓಲಾಡುವ ಹತ್ತಿಯ ನೂಲಿನ ಗೊಂಡೆ
ಹೆಬ್ಬೆರಳು-ಮಧ್ಯದ ಬೆರಳ ಹಿಡಿತದಲಿ
ಹುಬ್ಬಿಗಿಂತ ತುಸು ಮೇಲೆ
ಅಂಟಿಕೊಳ್ಳುವ ಹುಡಿಕುಂಕುಮ-
ಕೆಂಚಗೆ ಅರುಣೋದಯದ ಸಮ
ಕೈ-ವೀಣೆಯ ನಾದದೊಲು
ಮೀಟುವ- ಮಣ್ಣಿನ- ಬಳೆಗಳ ಸರಿಗಮ
ಮಳೆಕಾಡಿನ ಮಡಿಲಿನ ಮಮತೆ-
ಯ ಹನಿಸುವ ಜೋಗುಳ-ಪಾಕ
ನಿರಾಕಾರವೇ ಅಸ್ತಿತ್ವದಂತಾಗಿ
ಭವ-ಭವಾಂತರಗಳಲ್ಲೂ ಕಾಯುವ-
ನಿಯಾಮಕ ಅಮಾಯಕ ಕಣ್ಣಂತೆ..
ಜನ್ಮಾಂತರದ ಸ್ಮೃತಿ-ಬಂಧದ ವಿವಶತೆ
ಹೊತ್ತು ಹೊತ್ತಿಗೆ ತುತ್ತುಧಾತುಗಳ
ಅರೆದು ಕುಡಿಸಿ, ಚುಕ್ಕುತಟ್ಟಿ ಮಲಗಿಸಿ..
ಶಶಿಕಿರಣಗಳ ಹೊದಿಕೆಯಲ್ಲಿ
ಅವಳ ತೋಳ ತೊಟ್ಟಿಲಲ್ಲಿ
ಮಂಪರಿನ ಎಚ್ಚರದಲ್ಲೂ ಕನವರಿಸಿ
ಕನಸುವ ಕೂಸಿಗೆ ಸುಪ್ತ-
ಸಾಗರಗಳ ವಿಪ್ಲವವೆಲ್ಲ ಕರಗಿ-
ದಂತಿದೆ- ಆ-
ಮಂತ್ರದಂಡದಲ್ಲಿ!
ಕೊನೆವರೆಗೆ ಬೆರೆತುಹೋಗಿ-
ಧಮನಿ-ಧಮನಿಗಳಲ್ಲಿ!
ಬಿಡ-ಬಿಡಲಾರದ
ಬಿಡಿಸಬಾರದ ಮಾಯೆ!
ಹೊಕ್ಕಳಿನ ನಂಟಿಗಂಟಿದ
ಶ್ರೀಗಂಧ- ತಾಯೆ!
ಅಮ್ಮನ ಚಿತ್ರ-
ಬಿಡಿಸುವುದು-
ಸಾಧ್ಯವಿಲ್ಲ!!






0 Comments