ಹುಯ್ಯೋ ಹುಯ್ಯೋ ಮಳೆರಾಯ..

ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಹಿ.ಚಿ. ಬೋರಲಿಂಗಯ್ಯ ಅವರು ಇಂದಿನ ʼನನ್ನಕುಪ್ಪಳಿʼ ಅಂಕಣದಲ್ಲಿ ಮಲೆನಾಡಿನ ಮಳೆಯ ಅನುಭವ ವನ್ನು  ಹಂಚಿಕೊಂಡಿದ್ದಾರೆ.

। ಹಿಂದಿನ ವಾರದಿಂದ ।

ಕುಪ್ಪಳಿ ಪರಿಸರದಲ್ಲಿ ಅದೆಷ್ಟು ಬಗೆಯ ಹಕ್ಕಿಗಳಿಲ್ಲ? ಹೇಮಾಂಗಣದ ಮುಂದೆಯೇ ಪ್ರತಿದಿನ ನಾನು ಉದ್ದ ಬಾಲದ ಕಾಜಾಣಗಳನ್ನು ನೋಡುತ್ತೇನೆ. ಕುವೆಂಪು ಕೃತಿಗಳ ಸಂಕೇತದಂತೆ ಇರುವ ಕಾಜಾಣಗಳು ಯಾವಾಗಲೂ ಜೊತೆಯಾಗಿಯೇ ಇರುತ್ತವೆ.

ಒಂದು ಗಂಡು ಮತ್ತು ಒಂದು ಹೆಣ್ಣು. ಮರದ ರೆಂಬೆಯ ಮೇಲೋ, ಗಿಡದ ಬಳ್ಳಿಗಳ ಮೇಲೋ, ಇಲ್ಲವೇ ವಿದ್ಯುತ್ತಂತಿಗಳ ಮೇಲೋ ಒಟ್ಟೊಟ್ಟಿಗೇ ಕುಳಿತು ಉದ್ದನೆಯ ಪುಕ್ಕವನ್ನು ಅಲ್ಲಾಡಿಸುತ್ತಾ ಪರಸ್ಪರ ನಲಿಯುತ್ತಿರುತ್ತವೆ.

ಮಲೆನಾಡಿನಲ್ಲಿ ಅದೆಷ್ಟು ಬಗೆಯ ಹಕ್ಕಿಗಳಿವೆ? ನೂರಾರು ಬಗೆಯ ಹಕ್ಕಿಗಳಲ್ಲಿ ಕೆಲವನ್ನಾದರೂ ಹೀಗೆ ಪಟ್ಟಿ ಮಾಡಬಹುದು. ಕಾಜಾಣ, ಗುಮ್ಮಾರಲುಹಕ್ಕಿ, ಚಿಟ್ಟೆಹಕ್ಕಿ, ಗೆರಿಗೆಹಕ್ಕಿ, ಕುಟ್ರಿನಹಕ್ಕಿ, ಹುಂಡಕೋಳಿ, ಕೋಗಿಲೆ, ಕಾಮಳ್ಳಿ, ಕೆಂಬೂತ, ನೀರುಕಾಗೆ, ಮಿಂಚುಳ್ಳಿ, ಪಿಕಳಾರ, ಪಾರಿವಾಳ, ಗಿಳಿ, ಗರುಡ, ನವಿಲು, ಮರಕುಟುಕ, ಜೇನುಕುಟುಕ.

ಈ ಪಕ್ಷಿಗಳಲ್ಲಿ ಕೆಲವಾದರೂ ನನ್ನ ಕಣ್ಣಿಗೆ ಬಿದ್ದಿವೆ. ಕೆಲವು ದಟ್ಟ ಮರಗಳಲ್ಲಿ ಉಳಿಯುತ್ತವೆ. ಆದರೆ ಕಾಣುವುದೇ ಇಲ್ಲ. ಕುವೆಂಪುರವರು ಪಕ್ಷಿ ಸೌಂದರ್ಯಕ್ಕೆ ಎಷ್ಟು ಮಾರು ಹೋಗಿದ್ದರೆಂದರೆ ಅವರ ಪಕ್ಷಿಕಾಶಿ ಕವನ ಸಂಕಲನವೇ ಅದಕ್ಕೆ ಸಾಕ್ಷಿ. ಪಕ್ಷಿಕಾಶಿಯ ಒಂದು ಕವನದ ಸೊಗಸು ಯಾವಾಗಲೂ ನನ್ನ ಎದೆಯಲ್ಲಿ ಮರುನುಡಿಯುತ್ತಿರುತ್ತದೆ.
“ನಿನಗೆ ನಾನು, ನನಗೆ ನೀನು,
ಸಣ್ಣ ಹಕ್ಕಿಯೆ;
ಹಾಡು, ಕೇಳಿ ನಲಿವೆ ನಾನು,
ಬಣ್ಣ ಚುಕ್ಕಿಯೆ.
ಕೇಳ್ದರೇನು ಬಿಟ್ಟರೇನು
ಉಳಿದ ಲೋಕವು?
ಉಲಿಯೆ ನೀನು, ನಲಿಯೆ ನಾನು,
ನಮಗೆ ನಾಕವು!’’

ಆಗತಾನೆ ಮೂಡುತಿತ್ತು
ಪುಷ್ಯ ದಿನಮಣಿ.
ಕಟ್ಟುತಿದ್ದ ಮನೆಯ ಬಳಿ
ನೆಟ್ಟ ಬಿದಿರನೆತ್ತಿಯಲಿ
ಪುಟ್ಟದೊಂದು ಚಿಟ್ಟೆಹಕ್ಕಿ
(ಬಾನಿಗೆದುರು ಕರಿಯಚುಕ್ಕಿ!)
ನಲುಮೆ ಚಿಲುಮೆಯುಕ್ಕಿಯುಕ್ಕಿ
ತನ್ನ ಸುಖಕೆ ತಾನೆ ಮಿಕ್ಕಿ
ತನಗೆ ತಾನೆ ಹಾಡುತಿತ್ತು
ತನ್ನ ಮನದಣಿ!

ಹುಯ್ಯೋ ಹುಯ್ಯೋ ಮಳೆರಾಯ:

ಮಲೆನಾಡಿನ ಮಳೆಯ ಬಗ್ಗೆ ನಾನು ಕೇಳಿದ್ದೆ. ಕೆಲವೊಮ್ಮೆ ನೋಡಿದ್ದೆ, ಆದರೆ ಈ ಪರಿಯಲ್ಲಿ ಅನುಭವಿಸಿರಲಿಲ್ಲ. ಆಗಸ್ಟ್‌ ತಿಂಗಳ ಮಧ್ಯಭಾಗವಿರಬಹುದು, ಆಶ್ಲೇಷ ಮಳೆಯ ಎರಡನೇ ಪಾದ ಹಿಡಿಯಿತು ಎಂದರೆ ಹಾಗೀಗಲ್ಲ. ಮಳೆಯ ಜೊತೆಗೆ ಬಿರುಗಾಳಿಯ ರುದ್ರನರ್ತನ.

ಹಗಲು ರಾತ್ರಿಗಳ ಲೆಕ್ಕವಿಲ್ಲ. ಹಾಗೆ ನೋಡಿದರೆ ಹಗಲೆಂಬುದೇ ಇಲ್ಲ. ಕವಿದ ಅಗಾಧ ಕಾರ್ಮೋಡಗಳ ನಡುವೆ ಸೂರ್ಯ ಇಲ್ಲವಾಗಿದ್ದ. ಇಡೀ ಹಗಲು ಸಂಜೆಯ ಮೊಬ್ಬೆನ್ನುವ ಭ್ರಮೆ. ಹೇಮಾಂಗಣದ ಉದ್ದನೆಯ ವಿಶಾಲ ಜಗುಲಿಯ ಮುಂಭಾಗದಲ್ಲಿ ಹೆಂಚಿನ ನೀರು ಜಲಪಾತದಂತೆ ಧುಮ್ಮಿಕ್ಕಿ ಬೀಳುತ್ತಿತ್ತು.

ಅಂಗಳದಲ್ಲಿ ಇರುವ ತಾವರೆ ಕೊಳ ಅಕ್ಷಯ ಪಾತ್ರೆಯಂತೆ ಒಂದೇ ಸಮನೆ ನೀರನ್ನು ಮುಕ್ಕಳಿಸಿ ಉಗಿಯುತ್ತಿತ್ತು. ಹೇಮಾಂಗಣದ ಒಳ ಭಾಗದ ಬಯಲು ಸಭಾಂಗಣ ಕೊಳವಾಗಿ ಮಾರ್ಪಟ್ಟಿತ್ತು.

ಈಗಾಗಲೇ ನೀರಿನಲ್ಲಿ ಕೆಲವಾರು ತಿಂಗಳಿಂದ ನೆಂದೂ ನೆಂದೂ ಹಸಿರ ಪಾಚಿಯನ್ನು ಮೈ ತುಂಬ ಹೊದ್ದುಕೊಂಡಿದ್ದ ಸಭಾಂಗಣ ಈಗ ನೀರೂ ತುಂಬಿಕೊಂಡು ಕೊಳವಾಗಿ ಕಂಗೊಳಿಸುತ್ತಿತ್ತು.

ಹೇಮಾಂಗಣವೆಂಬ ಆ ಬೃಹತ್ಕಟ್ಟಡದ ಹೆಂಚಿನ ನೀರು ಸುರಿಸುರಿದು ಜಲಪಾತದ ನೆನಪನ್ನು ತರುತ್ತಿತ್ತು. ಬಯಲು ಸೀಮೆಯ ನನಗೆ ಇದೇನು ಪ್ರಳಯವೋ ಎಂಬ ಭ್ರಮೆ, ಭಯ, ನಡುಕ ‘ಏಳೆಂಟು ವರ್ಷದಿಂದ ಇಂಥಾ ಮಳೆ ನೋಡ್ಲಿಲ್ಲ ಬುಡಿ’ ಎಂದು ಗುಂಡನೂ ಉದ್ಗರಿಸಿದ.

ಕತ್ತಲು ಕವಿಯಿತು. ಮಳೆ ಇನ್ನೂ ಮತ್ತೂ ಜೋರಾಗುತ್ತಿತ್ತು. ಸುಮಾರು ಎಂಟು ಗಂಟೆಗೆ ಕರೆಂಟೂ ಕೈ ಕೊಟ್ಟಿತು. ಗುಂಡ ಛತ್ರಿ ಹಿಡಿದು ಊಟ ತರಲು ಹೋಗಿದ್ದ. ಗಾಢಾಂಧಕಾರದ ಕಗ್ಗತ್ತಲು. ಹೆಂಚಿನ ನೀರ ಸದ್ದು ಹೆಚ್ಚಾಗುತ್ತಲೇ ಇತ್ತು. ಗಾಳಿ ಮಳೆಯ ಧೋ ಅನ್ನುವ ಸದ್ದು ಉಳಿದೆಲ್ಲ ಶಬ್ದವನ್ನು ನುಂಗಿ ಹಾಕಿತ್ತು. ನನಗೆ ನಿಜಕ್ಕೂ ದಿಗಿಲಾಗಿತ್ತು.

ನನ್ನ ಕೊಠಡಿಯ ಬಾಗಿಲು ಬಂದ್ ಮಾಡಿ ಕಿಟಕಿಯನ್ನು ಮಾತ್ರ ತೆರೆದು ಆ ಕತ್ತಲನ್ನೇ ನೋಡುತ್ತಾ ಕುಳಿತೆ. ಗುಂಡ ಹೋದವನು ಸುಮಾರು ಹೊತ್ತು ಬರಲೇ ಇಲ್ಲ. ದಾರಿಯಲ್ಲಿ ಹಳ್ಳವೇನಾದರೂ ಉಕ್ಕಿತೋ?

ನನ್ನ ಮನದಲ್ಲಿ ಹತ್ತಾರು ಕೆಟ್ಟ ಯೋಚನೆಗಳು ಸುಳಿದು ಹೋದವು. ಸುಮಾರು ರಾತ್ರಿ ಹತ್ತು ಗಂಟೆಗೆ ರಸ್ತೆಯಲ್ಲಿ ಟಾರ್ಚಿನ ಸಣ್ಣ ಬೆಳಕೊಂದು ಮಿಂಚಿ-ಮಿಂಚಿ ಮರೆಯಾಗುವುದನ್ನು ಕಂಡೆ. ಗುಂಡ ಬಂದವನೇ ಹೇಮಾಂಗಣದ ಹೊರಗೇಟು ತೆಗೆದು ಮುಂಬರಿದ.

ಅವನ ಟಾರ್ಚ್‌ ಬೆಳಕಿನಲ್ಲಿ ರಪರಪನೆ ಬೀಳುವ ನಿರಂತರ ಜಲಧಾರೆ ಗೋಚರಿಸುತ್ತಿತ್ತು. ಧೈರ್ಯ ತಂದುಕೊಂಡು ಹೊರಗೆ ಬಂದವನೆ ನನ್ನ ಕೈಲಿದ್ದ ಟಾರ್ಚ್ ನಿಂದ ಅಂಗಳದಲ್ಲಿ ತುಂಬಿದ್ದ ನೀರ ಸಾಗರವನ್ನು ನೋಡಲೆತ್ನಿಸಿದೆ. ಅಲ್ಲಿ ನಿಜಕ್ಕೂ ಸಾಗರವೇ ಉದ್ಭವವಾಗಿತ್ತು. ಗುಂಡ ಸಂಪೂರ್ಣ ತೋಯ್ದು ಹೋಗಿದ್ದ. ಗಾಳಿಯ ರಭಸಕ್ಕೆ ಅವನ ಛತ್ರಿ ಮುರುಟಿ ಹೋಗಿತ್ತು.

ಕರೆಂಟು ಇಲ್ಲದಿರುವ ಕಾರಣ ಹೋಟೆಲಿನವರು ಚಪಾತಿ ಸುಡುವುದನ್ನು ತಡ ಮಾಡಿದ್ದರು. ಮಧ್ಯಾಹ್ನ ಮಾಡಿದ್ದ ಮೀನುಗಸಿಯನ್ನು ಒಂದೆರಡು ಬಾಂಗಡೆ ಮೀನಿನ ಪ್ರೈಯನ್ನು ಜೊತೆಗೆ ತಣ್ಣನೆಯ ಅನ್ನವನ್ನು ಕಳಿಸಿದ್ದರು.

ಇಬ್ಬರೂ ಅದನ್ನೇ ತಿಂದು ಮಲಗಿದೆವು. ಗುಂಡ ಅವನಿಗಾಗಿ ಇದ್ದ ಕಾವಲುಗಾರನ ಕೊಠಡಿಯಲ್ಲಿ ಮಲಗಿ ಆರಾಮವಾಗಿ ನಿದ್ದೆಗೆ ಜಾರಿದ. ಒಂದಷ್ಟೊತ್ತು ವಾರಾಂಡದಲ್ಲಿ ಅಡ್ಡಾಡಿದ ನಾನು ಮಲಗುವ ಪ್ರಯತ್ನ ಮಾಡಿದೆ. ನಿದ್ದೆ ಸುಳಿಯಲೂ ಇಲ್ಲ. ಬೆರಗಿನಿಂದಲೇ ಮಳೆಯನ್ನು ಅನುಭವಿಸುತ್ತಾ ಒದ್ದಾಡಿದ್ದೆ ಅಷ್ಟೆ.

ಬೆಳಗ್ಗೆ ಸುಮಾರು ನಾಲ್ಕು ಗಂಟೆ ವೇಳೆಗೆ ಮಳೆಯ ರಭಸ ಕಡಿಮೆಯಾಯಿತು. ಬೆಳಕಾಗುವಷ್ಟರಲ್ಲಿ ಸಂಪೂರ್ಣವಾಗಿ ನಿಂತಿತು. ಹೇಮಾಂಗಣದ ಅಂಗಳದ ನೀರು ಇಷ್ಟಿಷ್ಟೇ ಇಳಿಯತೊಡಗಿತ್ತು. ಇಂದು ಕವಿಶೈಲದ ಬದಲು ಗಡಿಕಲ್ಲಿನ ಆಚೆವರೆಗೂ ಅಡ್ಡಾಡಿ ಮಳೆತೊಯ್ದ ನೆಲದ ಸೊಬಗನ್ನು ಸವಿಯಲು ತೀರ್ಮಾನಿಸಿದೆ.

ರಾತ್ರಿಯ ರಭಸದ ಮಳೆಗೆ ತನ್ನ ಹಸು ಮತ್ತು ಎಮ್ಮೆ ಕರುಗಳ ಸ್ಥಿತಿ ಏನಾಗಿದೆಯೋ ಎಂದು ಗುಂಡ ಆತಂಕದಿಂದಲೇ ಓಡಿ ಹೋಗಿದ್ದ. ಕುಪ್ಪಳಿಯ ಟಾರು ರಸ್ತೆಯ ತೇವ ಒಂದಿಷ್ಟೂ ಆರಿರಲಿಲ್ಲ. ಬೆಳ್ಳಿಕೊಡಿಗೆಯ ಮನೆ ಮನೆಗಳಿಂದ ಏಳುತ್ತಿದ್ದ ಹಸಿ ಹೊಗೆ ಮಂಜು ಕವಿದಂತೆ ಭಾಸವಾಗುತ್ತಿತ್ತು. ಸದಾ ಅಡ್ಡ ಸಿಗುವ ಸಣ್ಣಹಳ್ಳ ಮೊರೆವ ತೊರೆಯಾಗಿ ಮಾರ್ಪಟ್ಟಿತ್ತು.

ಸುತ್ತ ಮುತ್ತಲ ಗದ್ದೆಗಳು ಹಸಿರು ಹೊದ್ದು ಮಲಗಿದ್ದವಾದರೂ ರಾತ್ರಿಯ ಮಳೆಯ ಏಟಿಗೆ ಮುರುಟಿಕೊಂಡಿದ್ದವು. ಗದ್ದೆಯ ತೋಡುಗಳಲ್ಲಿ ಎಡೆ ಬಿಡದಂತೆ ಜುಳುಜುಳು ನೀರು ತಗ್ಗಿನ ಕಡೆಗೆ ಸಾಗಿ ಹೋಗುತ್ತಿತ್ತು.

ತೆವರಿಗಳ ಮೇಲೆ ನಿಂತ ಜನ ಆಗಿರುವ ಅನಾಹುತವನ್ನು ಲೆಕ್ಕ ಹಾಕುತ್ತಿರಬಹುದೆಂದು ತರ್ಕಿಸಿದೆ. ಗಡಿಕಲ್ಲು ಸಮೀಪಿಸುವಷ್ಟರಲ್ಲಿ ಕುಪ್ಪಳಿ ಶೇಷಪ್ಪ ಗೌಡರ ಮಗ ಕೃಷ್ಣಮೂರ್ತಿ ಸಿಕ್ಕಿದರು. ‘ಮಳೆ ಬಾರಿ ಅನಾಹುತ ಮಾಡಿರಬೇಕು ಅಲ್ಲವೇ?’ ಎಂದು ಪ್ರಶ್ನಿಸಿದೆ.

ಅವರು ನಕ್ಕು ‘ಇದು ನಮಗೆ ಸರ್ವೇಸಾಮಾನ್ಯ, ಮಳೆಯೇ ನಮ್ಮ ಬದುಕು’ ಎಂದರು. ಅಷ್ಟು ಸಹಜವಾಗಿತ್ತು ಅವರ ಪ್ರತಿಕ್ರಿಯೆ. ಬಯಲು ಸೀಮೆಯ ನನಗೆ ಅದರಲ್ಲೂ ಹತ್ತಾರು ವರ್ಷಗಳನ್ನು ಬಳ್ಳಾರಿಯ ಹೊಸಪೇಟೆಯಲ್ಲಿ ಕಳೆದ ನನಗೆ ಇದು ಆಶ್ಚರ್ಯಕರ ಮಳೆಯೇನೋ ನಿಜ. ಆದರೆ ಈ ಮಲೆನಾಡಿಗರಿಗೆ ಇದು ಸರ್ವೇಸಾಮಾನ್ಯ.

ಅಂದು ಸಂಜೆ ಐದು ಗಂಟೆ ವರೆಗೆ ಮಳೆ ಮತ್ತೆ ಹೊಡೆಯಲಿಲ್ಲ. ಕಚೇರಿಯ ನನ್ನ ಕೆಲಸದಲ್ಲಿ ನಾನು ತಲ್ಲೀನನಾದೆ. ಮಧ್ಯಾಹ್ನ ಗುಂಡನಿಗೊಂದು ಕೆಟ್ಟವಾರ್ತೆ ಬಂದಿತ್ತು. ಕೊಪ್ಪ ತಾಲ್ಲೂಕಿನಲ್ಲಿದ್ದ ಅವನ ಹತ್ತಿರದ ಸಂಬಂಧಿಯೊಬ್ಬರು ತೀರಿಕೊಂಡಿದ್ದರು. ಆದ ಕಾರಣ ನಾಲ್ಕುದಿನ ರಜೆಬೇಕು ಎಂದು ವಿನಯದಿಂದ ಭಿನ್ನವಿಸಿದ.

ಗುಂಡನಿಗೆ ರಜೆ ಕೊಡದೆ ವಿಧಿಯೇ ಇರಲಿಲ್ಲ. ನಾಲ್ಕುದಿನ ಯಾಕೆ ಮಾರಾಯ?’ ಅಂದೆ. ತೀರಿಕೊಂಡಿರುವ ವ್ಯಕ್ತಿ ಒಬ್ಬಂಟಿ ಎಂದೂ, ತಾನು ಮಾಡಬೇಕಾದ ವ್ಯವಸ್ಥೆ ತುಂಬಾ ಇದೆಯೆಂದೂ, ಮತ್ತೊಮ್ಮೆ ನಿವೇದಿಸಿಕೊಂಡ.

‘ಆಯ್ತಪ್ಪ ಹೋಗಿ ಬಾ’ ಎಂದೆ. ಅವನು ಹೊರಟ. ಗುಂಡನಿಗೆ ಒಂದುವಾರ ಬೇಕಿದ್ದರೂ ರಜೆ ಕೊಡಲು ನನಗೇನೂ ಅಭ್ಯಂತರವಿರಲಿಲ್ಲ. ಯಾಕೆಂದರೆ ಅವನದು ಇಪ್ಪತ್ನಾಲ್ಕು ಗಂಟೆ ಕೆಲಸ. ಸುಮ್ಮನೆ ರಜೆ ಕೇಳುವವನೇ ಅಲ್ಲ.

ಆದರೆ ನನ್ನ ಸಮಸ್ಯೆ ಏನೆಂದರೆ ಇಂಥ ಮಳೆಗಾಲದ ರಾತ್ರಿ ನಾನೊಬ್ಬನೇ ಇರಬೇಕಲ್ಲ ಎಂಬ ಆತಂಕ! ಇಡೀ ದಿನ ಆಕಾಶ ಮುಸುಕು ಹೊದ್ದುಕೊಂಡೇ ಇತ್ತು. ಬಿಸಿಲು ಬಾರದಿದ್ದರೂ ಒಂದು ರೀತಿಯ ಮಳೆ ವಾತಾವರಣವೂ ಇತ್ತು.

ನಾನು ನನ್ನ ಕೆಲಸದಲ್ಲಿ ನಿರತನಾಗಿದ್ದೆ. ನಾಲ್ಕು ಗಂಟೆಯಷ್ಟರಲ್ಲಿ ಮೋಡ ದಟ್ಟೈಸಿ ಒಟ್ಟು ಗೂಡತೊಡಗಿತ್ತು. ಸುಮಾರು ಐದು ಗಂಟೆಗೆ ಪಶ್ಚಿಮ ದಿಕ್ಕಿನಿಂದ ಒಂದು ರೀತಿಯ ಮೊರೆಯುವ ಸದ್ದು ಬರತೊಡಗಿತು. ಕುವೆಂಪು ಪ್ರತಿಷ್ಠಾನದ ಮಂಜುನಾಥ್ ಅಲ್ಲೇ ಇದ್ದ.

‘ಏನಪ್ಪಾ ಈ ಸದ್ದು?’ ಎಂದು ಕೇಳಿದೆ. ‘ಸಾರ್ ಇದು ಮಳೆ ಸದ್ದು, ಬಾರಿ ಮಳೆ ಬರೋ ಹಂಗಿದೆ’ ಎಂದ. ಹೇಮಾಂಗಣದ ಮಹಡಿಯ ಮೇಲೆ ಹತ್ತಿ ಪಶ್ಟಿಮಕ್ಕೆ ನೋಡಿದೆ. ಮುನ್ನುಗ್ಗುತ್ತಿರುವ ಮಳೆಯ ಮೊರೆತ ಕೇಳಿತೇ ಹೊರತು ದೃಶ್ಯ ಕಾಣಲಿಲ್ಲ.

ಸಭಾಂಗಣದ ಸೂರು ನನ್ನ ನೋಟಕ್ಕೆ ಅಡ್ಡವಾಗಿತ್ತು. ಆಫೀಸಿಗೆ ಬಂದು ಛತ್ರಿ ಹಿಡಿದು ಹೋಗಿ ಅರಣ್ಯ ಇಲಾಖೆಯ ಅತಿಥಿ ಗೃಹದ ಹೊರಾಂಗಣದಲ್ಲಿ ಇರುವ ಕಟ್ಟೆಯ ಮೇಲೆ ಕುಳಿತೆ.

ಹಿಂದೆ ಬೆಳೆದು ನಿಂತ ಕಾಡು. ಒಂದರೆಕ್ಷಣದಲ್ಲಿ ಗಿಡಮರಗಳ ಒಡಲಿಂದ ತಣ್ಣನೆಯ ಗಾಳಿ ರಭಸವಾಗಿ ಬೀಸತೊಡಗಿತು. ಕ್ಷಣಾರ್ಧದಲ್ಲಿ ಎಲೆ ಎಲೆಗಳ ಮೇಲೆ ಟಪಟಪನೆ ಸುರಿವ ಹನಿಗಳ ಹೊಡೆತ. ಮುಂದಿನ ಕೆಲವೇ ಕ್ಷಣಗಳಲ್ಲಿ ಆಕಾಶವನ್ನೇ ತೂತು ಮಾಡಿಕೊಂಡು ಸುರಿಯುತ್ತಿರುವಂತೆ ಭಾಸವಾಗುವ ನಿರಂತರ ನೀರಸ್ವರ!!

। ಮುಂದಿನ ವಾರಕ್ಕೆ ।

October 10, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Shyamala Madhav

    ಈ ಮಳೆಯನ್ನು ಸವಿಯಲು ನಾನೂ ಅಲ್ಲಿರುವ ಕೂತಿದ್ದಾರೆ, ಎಂಬ ಹಂಬಲ!
    ತುಂಬಾ ಚೆಲುವಾಗಿ ಆ ಸೊಗಸನ್ನು ಕಟ್ಟಿಕೊಟ್ಟಿದ್ದೀರಿ, ಸರ್, ಸಂತೋಷವಾಯ್ತು!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: