ರಂಗಶೋಧದಲ್ಲಿ ದೊರಕಿದ ‘ಸತ್ಯಲೋಕ’

ಕನ್ನಡ ರಂಗಭೂಮಿಯ ವಿಶಿಷ್ಠ ಹೆಸರು ಶ್ರೀಪಾದ್ ಭಟ್. ಕನ್ನಡ ಸಾಹಿತ್ಯಕ್ಕೆ ನೋಟದ ಆಯಾಮ ಕೊಟ್ಟ ಹೆಗ್ಗಳಿಕೆ ಇವರದ್ದು. ಬೆಂಗಳೂರಿನ ‘ರಂಗಶಂಕರ’ದಲ್ಲಿ ಜರುಗಿದ ಶ್ರೀಪಾದ್ ಭಟ್ ನಾಟಕೋತ್ಸವ ಮಿಂಚು ಹರಿಸಿತ್ತು.

ಶ್ರೀಪಾದ್ ಭಟ್ ಅವರ ರಂಗನೋಟವನ್ನು ಒಳಗೊಂಡ ಕೃತಿ ‘ಸಿರಿ ಪಾದ’ ಸಂದರ್ಭದಲ್ಲಿಯೇ ಪ್ರಕಟವಾಯಿತು. ಇವರ ನಾಟಕದ ಹಾಡುಗಳು ಕೇಳುಗರಿಗೆ ಒಂದು ರೀತಿಯ ಕಾಲಕೋಶ. ಹಾಡುಗಳ ಸಿ ಡಿ ಯನ್ನು ‘ಲಹರಿ’ ಹಾಗೂ ‘ಅವಧಿ’ ಜಂಟಿಯಾಗಿ ಹೊರತಂದಿದೆ.

ಈಗ ಸಿರಿ ಪಾದ ಹೆಸರಿನಲ್ಲಿ ಶ್ರೀಪಾದ್ ಭಟ್ ತಮ್ಮ ವಿಶೇಷ ರಂಗ ಅನುಭವವನ್ನು ಮುಂದಿಡಲಿದ್ದಾರೆ.

। ಕಳೆದ ವಾರದಿಂದ ।

ಅಲ್ಲಿ. ಆ ತಾತ, ಚಂದದ ಚಿತ್ರವನ್ನು ಪೂರ್ಣಗೊಳಿಸ್ತಾ ಇದಾನೆ. ಅದು ಅಂತಿಂತ ಚಿತ್ರ ಅಲ್ಲ. ರಜೆಯ ಚಿತ್ರ ಅದು! ಆ ಚಿತ್ರದ  ಪರಿಕಲ್ಪನೆ ಋತು ವಸಂತನದು.! ಚಿತ್ರದಲ್ಲಿರೋ ಆ ರಜೆ, ಹಿಮಾಲಯದ ಶೃಂಗದಲ್ಲೆಲ್ಲೋ ಅಲೆದು, ನೀಲಿ ಆಕಾಶದಲ್ಲಿ ತೇಲಿ, ಸರೋವರದ ನೀರಿನಲ್ಲಿ ಮನಸೋ ಇಚ್ಛೆ ಈಜಾಡಿ, ಭತ್ತದ ಗದ್ದೆಯಲ್ಲಿ ತೆನೆ ಒಡೆಯುವಾಗ  ಹುಟ್ಟುವ ಕಂಪನವನ್ನು ಲಯವನ್ನಾಗಿ ಆಧರಿಸಿ ಮೂಡಿಬಂದುದು! ಆ ತಾತನಿಗೆ ತಾನು ಬಯಸಿದಂತೆ ಆಗುವ ಸತ್ಯಯುಗದ ತಂತ್ರವೂ ತಿಳಿದಿದೆ.! 

ನೋಡನೋಡುತ್ತಿದ್ದಂತೆ  ಆ ಚಿತ್ರದಿಂದ ರಜೆಯ ಮಜ ಅನುಭವಿಸಲಿರುವ ಮಕ್ಕಳ ಗುಂಪೇ ಹೊರಬರುತ್ತವೆ. ಅಜ್ಜನ ಜತೆ ರಜೆಯ ಹಾಡು ಹೇಳುತ್ತ, ಅಜ್ಜನಿಂದ ಲೋಕದ ಕತೆಗಳನ್ನು  ಕೇಳುತ್ತ ತಾವೇ ಆ ಕತೆಗಳಾಗಿ ರೂಪಾಂತರವೂ ಆಗುತ್ತಾರೆ. ಹಾ! ಇಲ್ಲಿ ಕತೆ ಹೇಳೋದು ಅಜ್ಜ ಮಾತ್ರವಲ್ಲ, ಮರವೂ ಕತೆಹೇಳುತ್ತೆ, ಬಣ್ಣವೂ ಕತೆಹೇಳುತ್ತೆ, ಪೊರಕೆಯ ಕಡ್ಡಿಯೂ ಕತೆ ಹೇಳುತ್ತೆ!. ನಾವು ನೋಡುತ್ತಿದ್ದ ಪರಿಚಿತ ಜಗತ್ತು ಅಪರಿಚಿತವಾಗುತ್ತ ಮತ್ತು ಅದೇ ಕಾಲದಲ್ಲಿ ಆ ಅಪರಿಚಿತ ಜಗತ್ತು ಪರಿಚಿತಗೊಳ್ಳುತ್ತ ಸಾಗುತ್ತದೆ.

ಅದೊಂದು ಸಿರಿವಂತರ ಮನೆ. ಅಲ್ಲೊಬ್ಬ ಹುಡುಗ. ಅವನನ್ನು ನೋಡಿಕೊಳ್ಳೋಕೆ ಒಬ್ಬ ಆಳು. ಆ ಕೆಲಸದವನಿಗೆ ಹುಡುಗನನ್ನು ನೋಡಿಕೊಳ್ಳೋದೊಂದು ಬೆಸರದ ಕಾಯಕ. ಅದಕ್ಕೆಂದೇ ಆತ ಒಂದು ವೃತ್ತವನ್ನು ಬರೆದು ಅದರೊಳಗೆ ಆ ಹುಡುಗನನ್ನು ನಿಲ್ಲಿಸಿ ಇದರಿಂದ ಹೊರಹೋದರೆ ಅಪಾಯ ತಪ್ಪಿದ್ದಲ್ಲ ಅಂತ ಹೆದರಿಸಿ ಆಚೆ ಹೋಗ್ತರ‍್ತಾನೆ. 

ಅದೇ ವೃತ್ತದಲ್ಲಿ ಸುಮ್ಮನೆ ನಿಲ್ಲುವ ಹುಡುಗನಿಗೆ ಕಿಟಕಿಯ ಹೊರಗೆ ಸರೋವರದ ಪಕ್ಕದಲ್ಲಿ ನಿಂತ ಆ ಆಲದ ಮರ ಕಾಣಿಸುತ್ತದೆ. ಸೂರ್ಯನ ಕಿರಣದ ಸುದ್ದಿ ಆಲಿಸುವ, ಗಾಳಿಯ ಸಂಗೀತಕ್ಕೆ ಕುಣಿಯುವ ಅದರ ಎಲೆಗಳನ್ನೂ, ಕನಸುಗಳಂತೆ ಇಳೆಗೆ ಇಳಿದಿರುವ ಅದರ ಬಿಳಲುಗಳನ್ನೂ ನೋಡುತ್ತ ನೋಡುತ್ತ ಅದರೊಂದಿಗೇ ಅದರ ಕತೆ ಕೇಳುತ್ತ, ಅದೇ ಆಗುತ್ತ ಹುಡುಗ ತಾನಿರುವ ತಾಣದಿಂದಲೇ ಬಿಡುಗಡೆ ಹೊಂದುತ್ತಿರುತ್ತಾನೆ.

ಆ ಊರಿನಲ್ಲೊಬ್ಬ ಜಾಡಮಾಲಿ ಹುಡುಗ. ಅವನ ಹೆಸರು ಪುಟ್ಟ ಅಂತ. ರಾತ್ರಿ ಊಟ ಸಿಗದೇ ಹಸಿದಿದ್ದ ಹುಲಿಯೊಂದರ ಕಣ್ಣಿಗೆ ಬಿದ್ದನಾತ. ಹುಲಿ ಅಟ್ಟಿಸಿಕೊಂಡು ಬಂತು. ಪುಟ್ಟ ಓಡುತ್ತ ಮನೆಯೊಂದರ ಮೂಲೆಯಲ್ಲಿ ನಿಂತ. ಹುಲಿಯೂ ಮನೆಯೊಳಗೆ ಬಂತು. ಅಲ್ಲಿದ್ದ ಕನ್ನಡಿಯೊಂದನ್ನ ನೋಡಿತು. ಅರೆ! ತನ್ನ ಮುಖದಲ್ಲಿ ಎಷ್ಟೆಲ್ಲ ಅಸಹ್ಯ ಕಪ್ಪು ಪಟ್ಟೆಗಳಿವೆ! ಮೊದಲೇ ಕಪ್ಪು ಅಂದ್ರೆ ಆ ಹುಲಿಗಾಗಿಬರಲ್ಲ. ಆದರೆ  ಈ ಪುಟ್ಟನ ಮುಖದಲ್ಲಿ ಒಂದೂ ಗೆರೆಗಳಿಲ್ಲ. 

ಹುಲಿ ಪುಟ್ಟನಲ್ಲಿ ಕಪ್ಪುಗೆರೆಗಳನ್ನು ಅಳಿಸುವ ಸೋಪು ಕೇಳಿತು! ಪುಟ್ಟ ತನ್ನಲ್ಲಿ ಅಂತದ್ದೇನೂ ಇಲ್ಲ ಅಂದ್ರೆ ಅದು ನಂಬಲ್ಲ. ಅಡ್ಡಡ್ಡ ಸಿಗಿದು ಹಾಕ್ತೇನೆ ಅಂತ ಹೆದರಿಸಿತು. ಪುಟ್ಟ ಹೇಳಿದ “ನೋಡು, ನಾನು ಅಸ್ಪೃಷ್ಯ ಹುಡುಗ. ನೀನು ನನ್ನ ಮುಟ್ಟಿದರೇ ಪಾಪ. ಅಂತಾದ್ದರಲ್ಲಿ ನೀನು ನನ್ನ ತಿಂದೆ ಅಂದರೆ ಮುಗಿದೇ ಹೋಯ್ತು. ತಿಂತೀಯಾ?” ಎಂದು ಸಡ್ಡುಹೊಡೆದು ನಿಂತು ಬಿಟ್ಟ. ಹುಲಿ ಕಂಗಾಲು! ಅಯ್ಯೋ ನನಗಿನ್ನೂ ಮದುವೆ ಆಗಿಲ್ಲ. ನಾನು ನಿನ್ನ ತಿಂದು ಜಾತಿ ಕೆಡಿಸಿಕೊಂಡ್ರೆ ಯಾರೂ ಹೆಣ್ಣುಕೊಡಲ್ಲ” ಅಂತ ಹೇಳಿ ಬಾಲಮುದುರಿ ಓಡಿತು.

ಆ ರಾಜನಿಗೆ ಕಾಲಿಗಂಟುವ ಧೂಳಿನದ್ದೇ ಚಿಂತೆ. ಕಾಲನ್ನು ಧೂಳಿನಿಂದ ರಕ್ಷಿಸಿಕೊಳ್ಳಲು ಭೂಮಿಯನ್ನು ಪೊರಕೆಯಿಂದ ಗುಡಿಸಿ ಧೂಳು ಹೆಚ್ಚಿಸಲಾಯಿತು. ನೀರಿನಿಂದ ತೊಳೆದು ರಾಡಿಗೊಳಿಸಲಾಯಿತು. ಸಮಸ್ಯೆ ಹೆಚ್ಚಾಯಿತೇ ವಿನಹ ಬಗೆಹರಿಯಲಿಲ್ಲ. ರಾಜನಡೆದಾಡೋ ಜಾಗಕ್ಕೆಲ್ಲ ಚರ್ಮಹೊದೆಸುವಂತೆ ಆದೇಶಿಸಲಾಯಿತು! ಆಗ ಚಮಗಾರ  ‘ಭೂಮಿಗೇ ಚರ್ಮಹೊದೆಸುವ ಬದಲು ನಿಮ್ಮ ಕಾಲಿಗೆ ಧರ್ಮಹೊದ್ದರಾಯ್ತಲ್ಲ’ ಅಂತ ಹೇಳಿ ‘ಶೂ’ ಒಂದನ್ನು ಹೊಲಿದು ಕೊಟ್ಟ. ಭೂಮಿಗೆ ಶೂ ಪರಿಚಯಾಗಿದ್ದು ಹೀಗೆ!

ಅವನ ಹೆಸರು ಪಿಯರಿ. ಆತ ಗಿಡಗಳ ತಜ್ಞ. ಅವನ ವಿಶೇಷ ಪರಿಣಿತಿ ಎಂದರೆ ಆತ ಕಸಿಮಾಡುವ ವಿವಿಧ ವಿಧಾನದಿಂದ ಹೂಗಳ ಬಣ್ಣವನ್ನೂ ಬದಲಾಯಿಸುತಿದ್ದ. ಅವನಿಗೆ ಜತೆಯಾಗಿರುವವಳು ಅವನ ಮಗಳು ಕ್ಯಾಮಿಲಿ. ಅವರ ಮನೆಯಲ್ಲಿ ಸುಗಂಧರಾಜ ಹೂವೊಂದು ಮಾತ್ರ ಬಣ್ಣ ಬದಲಾಯಿಸದೇ ಹಠ ಹಿಡಿದಿತ್ತು. ಪಿಯರಿಯ ಪ್ರಕಾರ ಅದು ಅಸಾಧ್ಯ. ಕ್ಯಾಮಿಲಿಗೆ ಅದನ್ನು ಬದಲಾಯಿಸುವ ಹಠ. ಹಠಾತ್ತನೆ ಎರಗಿದ ಯುದ್ಧದಿಂದಾಗಿ ಪಿಯರಿ ರಣರಂಗಕ್ಕೆ ಹೋದ ಹೊತ್ತು. ಎರಗಿದ ಬಾಂಬೊಂದು ಆ ಮನೆಯನ್ನು, ಕನಸನ್ನು ನಾಶಗೈದಿತ್ತು. ಬಿಳಿಯು ಸುಗಂಧರಾಜ ಕೆಂಪಾಗಿತ್ತು.

ಆ ತಾತ ಒಂದಿನ ಆ ಮಕ್ಕಳಿಗೆ ಸತ್ಯಯುಗದ ಕತೆ ಹೇಳ್ತಿದ್ದ. ನಾವು ಯಾವುದರ ಬಗ್ಗೆ ತಿಳಿದುಕೊಳ್ಳಬೇಕೋ ಅದೇ ಆಗುವದು ಹೇಗೆ ಅಂತ. ಆಗ ಅಲ್ಲಿಗೆ ಬಂದ ಪುಟ್ಟಿ ಒಂದು ಗದ್ದಲ ಎಬ್ಬಿಸ್ತಾಳೆ. ಅದೇನೆಂದರೆ ಕನಸಿನಲ್ಲಿ ಅವಳನ್ನು ಚಂದ್ರ ಕದ್ದೊಯ್ದಿದಾನೆ! ಅವಳನ್ನು ಹುಡುಕೋದು ಈಗಿನ ಅಗತ್ಯ.!ಸರಿ ಹುಡುಗರೆಲ್ಲ  ಸತ್ಯಯುಗದ ಮ್ಯಾಜಿಕ್ ಉಪಯೋಗಿಸಿ ಪೊರಕೆಯೆಂಬ ಕನಸಗುದುರೆ ಏರಿ ಪುಟ್ಟಿಯ ಸಮೇತ ಅವಳನ್ನು ಹುಡುಕ ಹೊರಡುತ್ತಾರೆ. ಪುಟ್ಟಿ ಸಿಕ್ಕೇ ಸಿಗುತ್ತಾಳೆ. ಅವಳೂ ಹುಡುಕಹೊರಟವಳಲ್ವಾ?!!!

‘ಮಕ್ಕಳ ಟ್ಯಾಗೋರ್’ ನಾಟಕದ ಕಥಾಸನ್ನಿವೇಶಗಳಿವು. ಸುಖಾಂತ ಚೌದರಿ ಸಂಪಾದಿಸಿದ ಚಿಲ್ಡ್ರ್‌ನ್ಸ್ ಟ್ಯಾಗೋರ್ ಎಂಬ ಪುಸ್ತಕದಲ್ಲಿಯ ಟ್ಯಾಗೋರರ Grandfather’s Holiday, The Tiger, The Invention of Shoes ಎಂಬಕವನಗಳನ್ನೂ, My childhood, Destruction ಎಂಬ ಕತೆಗಳನ್ನೂ ಮತ್ತು ರವೀಂದ್ರರ ಕಲಾಚಿಂತನೆಗಳನ್ನೂ ಆಧರಿಸಿ ರೂಪುಗೊಂಡ ನಾಟಕವಿದು.

ರಚಿಸಿದವರು ಬಕುಲದ ಬಾಗಿಲಿನ ಸುಧಾಆಡುಕಳ. ದೈನಂದಿನ ವಾಸ್ತವಲೋಕದ ಅರಿವನ್ನು ನೀಡುತ್ತ, ಅವುಗಳನ್ನು ದಾಟಹೊರಡುವ ವಿವೇಕವನ್ನು ಮಕ್ಕಳಿಗೆ ಪರಿಚಯಿಸುವ ಈ ಬರಹಗಳನ್ನು ಚಿಂತನ ರಂಗಧ್ಯಯನ ಕೇಂದ್ರ ಉತ್ತರಕನ್ನಡದ ರೆಪರ್ಟರಿಗೆಂದೇ ನಾಟಕವಾಗಿಸಿದ್ದು ರವೀಂದ್ರರು ಹುಟ್ಟಿ ೧೫೦ ಆದ ಸಂದರ್ಭದಲ್ಲಿ.

ರವೀಂದ್ರರ ಮೋಹ ನನ್ನನಾವರಿಸಿದ್ದು ಯಾವತ್ತಿನಿಂದ ಅಂತ ಗೊತ್ತಿಲ್ಲ. ಆದರೆ ಅವರ ಬರಹಗಳು, ಕಲಾಚಿಂತನೆಗಳು, ಕತೆ, ನಾಟಕಗಳು ನನ್ನ ಕಲಾಬುತ್ತಿಯ ಮಹತ್ವದ ಪೋಷಕಗಳಾಗಿವೆ. ಅವರ ಚಿತ್ರಾ, ಕೆಂಪುಕಣಗಿಲೆ, ಅವಳಕಾಗದ, ಮಕ್ಕಳ ಟ್ಯಾಗೋರ್ ಹೀಗೆ ೪ ನಾಟಕಗಳನ್ನು ಈಗಾಗಲೇ ರಂಗದ ಮೇಲೆ ಕಟ್ಟಲು ಪ್ರಯತ್ನಿಸಿದ್ದರೂ ಸಮಾಧಾನವಾಗುತ್ತಿಲ್ಲ. ಗುರುತುಹಾಕಿಕೊಂಡ ಇನ್ನೂ ಅನೇಕ ಪಠ್ಯಗಳು ಬಾಕಿ ಇವೆ.

ಕುಂದಾಪುರದ ಸಮುದಾಯ ಘಟಕ ಅನೇಕ ಕಾಲದಿಂದ ಶಿಕ್ಷಕರು ಮತ್ತು ಮಕ್ಕಳಿಗೆ ರಂಗತರಬೇತಿಗಳನ್ನು ನಡೆಸುತ್ತಲೇ ಬಂದಿದೆ. ಬಹುತೇಕ ಶಿಬಿರಗಳಲ್ಲಿ ಅವರ ಜತೆಯಾಗಿದ್ದೆ ನಾನು. ಅಂತದೊಂದು ಶಿಬಿರದ ಸಂದರ್ಭದಲ್ಲಿ ನನ್ನ ಕಣ್ಣಿಗೆ ಬಿದ್ದ ಪುಸ್ತಕ ಈ ‘ಚಿಲ್ಡ್ರ್‌ನ್ಸ್ ಟ್ಯಾಗೋರ್’. ಇಂಗ್ಲಿಷ್ ಬರದ ನಾನು ಈ ಪುಸ್ತಕವನ್ನು ಸುಧಾಆಡುಕಳ ಅವರ ಕೈಗಿತ್ತು ಇದರ ಕೆಲವು ಕತೆ ಕವನಗಳನ್ನು ಅನುವಾದಿಸಿಕೊಂಡು ಶಿಬಿರದಲ್ಲಿ ರಂಗಕಲಿಕೆಯ ಆಧಾರ ಪಠ್ಯವಾಗಿ ಬಳಸಿದೆ.

ಅಲ್ಲಿ ಭಾಗವಹಿಸಿದ್ದ ಶಿಕ್ಷಕರಿಗೆ ಅಂತೆಯೇ ಮಕ್ಕಳಿಗೆ ಈ ಪಠ್ಯಗಳ ಹೊಸತನ, ಕಥನ ಎಲ್ಲವೂ ಇಷ್ಟವಾಗಿತ್ತು. ಹೀಗಾಗಿ ಬಿಡಿ ಬಿಡಿಯಾಗಿ ಅನುವಾದಿತಗೊಂಡ ಕತೆ ಕವನಗಳನ್ನು ಹೊಲಿದು ರವೀಂದ್ರ ಕೌದಿ ಹೊಲಿಯಲು ಸುಧಾ ಅವರಿಗೇ ನೀಡಿದೆ. ಅವರಿಗೆ ಆ ಸಂದರ್ಭದಲ್ಲಿ ನಾಟಕಪ್ರಕಾರ ಹೊಸದಾಗಿದ್ದರೂ ಮಕ್ಕಳ ಲೋಕವೇನೂ ಹೊಸದಿರಲಿಲ್ಲ ಮತ್ತು ಕಾವ್ಯದೃಶ್ಯ ಕಟ್ಟುವ ಕಾಯಕ ಅವರಿಗೆ ಪ್ರಿಯವೇ ಆಗಿತ್ತು.

ಉತ್ತರಕನ್ನಡಜಿಲ್ಲೆಯಲ್ಲಿ ಆರಂಭಗೊಂಡ ಚಿಂತನರಂಗಧ್ಯಯನ ಕೇಂದ್ರದಿಂದ ೨೦೦೩ರಲ್ಲಿಯೇ ಮಕ್ಕಳಿಗಾಗಿ ದೊಡ್ಡವರು ಅಭಿನಯಿಸುವ ಚಿಕ್ಕ ರೆಪರ್ಟರಿಯನ್ನು ನಾವು ಆರಂಭಿಸಿದ್ದೆವು. ಕಿರಣ ಭಟ್ ಮತ್ತು ನಾನು ಜೊತೆಯಾಗಿ ರೆಪರ್ಟರಿಯ ನಾಟಕ ನಿರ್ದೇಶಿಸುವದು ಮತ್ತು ವಿಠ್ಠಲಭಂಡಾರಿ ಅದನ್ನು ಸಂಘಟಿಸುವದು, ದಾಮೋದರ ನಾಯ್ಕ ತಂಡದ ತಿರುಗಾಟದ ಉಸ್ತುವಾರಿ ನೋಡಿಕೊಳ್ಳುವದು ರೂಢಿ.

ಅದಾಗಲೇ ಕಿರಣ ಮತ್ತು ನಾನು ಸೇರಿ ಪಾಠನಾಟಕಗಳು, ಖರೇ ಚರಣದಾಸನೆಂಬ ಕಳ್ಳ, ಚಾಕ್ ಸರ್ಕಲ್, ಪಾಪು ಬಾಪು, ಬೆಳಕುಹಂಚಿದ ಬಾಲಕ, ಬೆಳಕಿನೆಡೆಗೆ ಮುಂತಾದ ನಾಟಕಗಳನ್ನು ಒಟ್ಟಿಗೇ ನಿರ್ದೇಶಿಸಿದ್ದೆವು. ಆ ವರ್ಷ ರವೀಂದ್ರರ ೧೫೦ರ ಸಂಭ್ರಮಾಚರಣೆಗಾಗಿ ಈ ನಾಟಕವನ್ನು ಅಪ್ಪಿಕೊಳ್ಳೋಕೆ ಎಲ್ಲರೂ ಉತ್ಸಾಹದಿಂದ ಮುಂದಾದರು.

ಮೊದಲ ಬಾರಿಗೆ ನಮ್ಮ ದೊಡ್ಡವರ ತಂಡದಲ್ಲಿ ಮಕ್ಕಳೂ ಅಭಿನಯಿಸುವದೆಂದು ತೀರ್ಮಾನವಾಯಿತು. ನಾಟಕದ ವಸ್ತು ಅದನ್ನು ಬಯಸುತ್ತಿತ್ತು ಕೂಡ. ಆದರಿದು ಸುಲಭವಿರಲಿಲ್ಲ. ಸಂಘಟನೆಯ ಸಮಸ್ಯೆ ಒಂದೆಡೆಯಾದರೆ ಮಕ್ಕಳ ಅಸಾಧ್ಯ ಎನರ್ಜಿಯ ಜತೆಗೆ ಹಿರಿಯ ಕಲಾವಿದರು ಒಂದಾಗುವದು ಸುಲಭದ ಮಾತಾಗಿರಲಿಲ್ಲ. ಆದರೊಂದು ಧೈರ್ಯವಿತ್ತು. ನಮ್ಮಲ್ಲಿ ಅತ್ಯುತ್ತಮ ನಟರಾದ ದಾಮೋದರ, ಅನಂತ, ರಾಧಾ ಮುಂತಾದ ಹಿರಿಯ ನಟರಿದ್ದರು.

ಅವರ ಜತೆ ಶಿರಸಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಓದುತ್ತಿದ್ದ ಮಕ್ಕಳು ಜತೆಯಾದರು. ಆ ವರ್ಷ ಅವರಿಗಾಗಿ ನಾನು ಗೆಲಿಲಿಯೋ ನಾಟಕ ನಿರ್ದೇಶಿಸಿದ್ದೆ. ಅದಕ್ಕಾಗಿ ರಾಷ್ಟ್ರಮಟ್ಟದ ಪುರಸ್ಕಾರವನ್ನೂ ಗಳಿಸಿದ್ದ ಅವರು ಈ ನಾಟಕದಲ್ಲಿಯೂ ಭಾಗವಹಿಸಲು ಸಾಕಷ್ಟು ಉಮೇದಿಯಿಂದಲೇ ಇದ್ದರು. ಹೀಗೆ ಹಿರಿಯ ಕಿರಿಯ ಕಲಾವಿದರ ಮೇಳ ತುಂಬ ಉತ್ಸುಕವಾಗಿಯೇ ಸಿದ್ಧವಾಗಿತ್ತು.

ನಮ್ಮ ತಂಡದ ಅತ್ಯಂತ ಹಿರಿಯ ಕಲಾವಿದರಾದ ಅನಂತನಾಯ್ಕ ಅವರಂತೂ ಮಕ್ಕಳು ಜೊತೆಯಲ್ಲಿ ಅಭಿನಯಿಸುತ್ತಾರೆಂದೇ ರೋಮಾಂಚಿತರಾಗಿದ್ದರು. ಈಗ ವಿಶ್ರಾಂತಿ ಹೊಂದಿದ ಅವರು ಪ್ರೌಢಶಾಲೆಯೊಂದರ ಜವಾನರಾಗಿ ಕೆಲಸ ಮಾಡುತ್ತಿದ್ದು ನಾಟಕದ ಪ್ರದರ್ಶನದ ಹೊರತಾಗಿ ಮತ್ಯಾವುದಕ್ಕೂ ರಜಹಾಕುತ್ತಿರಲಿಲ್ಲ.! ನಾಟಕದ ಕುರಿತ ಮತ್ತು ಮಕ್ಕಳ ಕುರಿತ ಅವರ ಅಸೀಮ ಪ್ರೀತಿಯೆ ಇನ್ನೊಂದು ಕತೆ.

ಪಠ್ಯ ಹಾಗೂ ರಂಗಪಠ್ಯ ಜತೆಜತೆಯಾಗಿಯೇ ಸಿದ್ಧಗೊಳ್ಳಬೇಕಿತ್ತು. ಹೀಗಾಗಿ ಬರಹ ಮತ್ತು ಶೋಧನೆಗಳು ಜಂಟಿಯಾಗಿಯೇ ನಡೆದವು. ಅದು ತನಕ ಹಲವು ಮಕ್ಕಳ ನಾಟಕಗಳನ್ನು ಆಡಿಸುತ್ತ ಅಡಿಸುತ್ತ ನಾವೂ ಒಂದು ಬಗೆಯ ಸಿದ್ಧಮಾದರಿಯ ಕಡೆ ಜಾರುತ್ತಿದ್ದುದು ನಮ್ಮ ಗಮನಕ್ಕೂ ಬಂದಿತ್ತು. ಜಯಂತ ಕಾಯ್ಕಿಣಿಯವರು ಒಂದೆಡೆ ಬರೆದಂತೆ ‘ಹೊಸದಾಗಿ ಹೊತ್ತಿಸಲು ಬೇಕಾದ ಕಿಡಿಗಳ’ ಹುಡುಕಾಟದಲ್ಲಿ ನಾವಿದ್ದೆವು. ಆಗ ನಮ್ಮ ಕೈ ಹಿಡಿದದ್ದು ರವೀಂದ್ರರ ಕಲಾತತ್ವಗಳು.

ಚಿತ್ರ ರಚನೆಗೆ ಸಂಬಂಧಿಸಿದ ಹಾಗೆ ಅವರೊಂದು ಕಡೆ ಹೀಗಂತಾರೆ ‘ಮೊದಲಿಗೆ ಒಂದು ಗೆರೆ ಸುಳಿಯುತ್ತದೆ. ನಂತರದಲ್ಲಿ ಆ ಗೆರೆಯು ಒಂದು ರೂಪವಾಗಿ ಮಾರ್ಪಡುತ್ತದೆ. ರೂಪವು ನಿಶ್ಚಿತವಾಗುತ್ತಿರುವ ಹಾಗೆಯೇ ಸುಸ್ಪಷ್ಟವೂ ಆಗುತ್ತ ನನ್ನ ಕಲ್ಪನೆಯ ಚಿತ್ರವಾಗಿ ಮಾರ್ಪಡುತ್ತದೆ. ರೂಪದ ಈ ಸೃಷ್ಟಿ ಅನಂತವಾದ ಒಂದು ಬೆರಗಿನ ಸ್ರೋತ’. ಈ ಅನಂತ ಬೆರಗಿನ ಗೆರೆಗಳ ಹುಡುಕಾಟವನ್ನು ನಾವೂ ನಡೆಸಿದ ಹೊತ್ತದು.

ಈ ಹುಡುಕಾಟಕ್ಕೆ ಅವರದೇ ಕಥಾವಸ್ತುವಿನ ನಾಟಕ ದೊರೆತುದು ಒಂದು ಚಂದದ ಆಕಸ್ಮಿಕ. ವಸ್ತುವಿನ ಪ್ರಚಂಡ ಸಾಧ್ಯತೆಯನ್ನು ಮನಗಾಣುತ್ತಹೋದರೆ ಅದನ್ನು ರೂಪಿಸುವ ವ್ಯಾಕರಣವೂ ಹೊಸಬಗೆಯಲ್ಲಿ ಗೋಚರಿಸತೊಡಗುವದಲ್ಲವೇ? ಹಾಗೇ ಆಯಿತು.  ನಾನೊಂದು ದಿನ ಸುಧಾಳಲ್ಲಿ ಕೇಳಿದೆ. “ಅವರ ಬಾಲ್ಯದಲ್ಲೆಲ್ಲಾದರೂ ಮರದ ವಿವರ ಬರುತ್ತದಾ?”ಅಂತ. ಅವಳೆಂದಳು “ ಹೌದು ಆಲದಮರವೊಂದನ್ನು ಅವರು ದಿನವೂ ನೋಡುತ್ತಿದ್ದರು.

ತಾನಿರುವ ವೃತ್ತದ ಪಕ್ಕದಲ್ಲಿರುವ ಕಿಟಕಿಯಿಂದ ಕಾಣುವ ಕೊಳದ ದಡದ ಆಲದ ಮರವನ್ನು ನೋಡುತ್ತಲೇ ಬೆಳೆದವರವರು. ಜೊತೆಗೆ ಕೊಳದಲ್ಲಿ ನಡೆಯುವ ಎಲ್ಲ ದೈನಂದಿನ ಚಟುವಟಿಕೆಗಳನ್ನೂ ತಾದಾತ್ಮಯದಿಂದ ಗಮನಿಸುತ್ತಿದ್ದರು. ಅವರಿಗೆ ಕಿಟಕಿಯೇ ಹೊರಜಗತ್ತಾಗಿತ್ತು ಮತ್ತು ಅವರ ಆಸಕ್ತಿಗಳು ಆಲದ ಮರದ ಬಿಳಲಿನಂತಿದ್ದವು.

”  ಪಠ್ಯ, ರಂಗಪಠ್ಯ, ರಂಗಸಜ್ಜಿಕೆ, ದೃಶ್ಯನಿರ್ಮಾಣ ಇವೆಲ್ಲವೂ ಬಿಳಲಿನಂತೆ ಒಂದಕ್ಕೊಂದು ಸೇರಿ ಬಂಧವಾಗಿ ಪ್ರಯೋಗಕ್ಕಿಳಿಯಲು ಅಗತ್ಯ ಸೂಚನೆಗಳಿವು. ಕಿರಣ ಭಟ್ ಈ ಚರ್ಚೆಯನ್ನಿಟ್ಟುಕೊಂಡು ಚಕಚಕನೆ ಚಂದದ ಚಿತ್ರಗಳನ್ನು ಬರೆಯತೊಡಗಿದ. ದಾಮೋದರ ನಾಯ್ಕ ಒಂದು ಕನಸಿನಂತಹ ಮರವನ್ನು ತಯಾರಿಸಿದ. ಅದೆಷ್ಟು ಮುದ್ದಾಗಿತ್ತು ಎಂದರೆ ನಮ್ಮ ಮಕ್ಕಳೆಲ್ಲ ಅದರಡಿ ಒರಗುತ್ತ, ಕಾಲು ಚಾಚುತ್ತ ನಮಗೆ ಅಗತ್ಯವಾದ ಚಲನೆಗಳನ್ನು ತೋರತೊಡಗಿದ್ದರು.

ಟ್ಯಾಗೋರರು  ತಮ್ಮನ್ನು ಆರಂಭದಲ್ಲಿ ಅಸಫಲ ಚಿತ್ರಕಾರನೆಂದು ಕರೆದುಕೊಂಡರೂ ಚಿತ್ರಕಲೆ ಅವರ ಅಪ್ರಜ್ಞಾ ತರಬೇತಿಯಾಗಿತ್ತು. ಮುಂದೆ ಅವರು ಆದಿಮಕಲೆ ಮತ್ತು ಆಧುನಿಕ ಕಲೆಗಳನ್ನು ಒಟ್ಟಾಗಿಕೊಂಡು ಅವರದೇ ಶೈಲಿಯೊಂದನ್ನು ಕಂಡುಕೊಂಡಿದ್ದೂ, ಅವರು ರಚಿಸಿದ ಚಿತ್ರಗಳು ಹಲವು ಪ್ರದರ್ಶನಗಳನ್ನು ಅಂತರಾಷ್ಟ್ರೀಯವೇದಿಕೆಗಳಲ್ಲಿ ಕಂಡಿದ್ದೂ ಒಂದು ಇತಿಹಾಸ. ಆದರೆ ಅವರ ಬರವಣಿಗೆಯಲ್ಲೆಲ್ಲ ಚಿತ್ರವಿರುತ್ತದೆ; ಬರವಣಿಗೆಯಲ್ಲೇ ಚಿತ್ರರಚಿಸಿದ ಆನಂದವೂ ಕಾಣಸಿಗುತ್ತದೆ.

ವಿವಿಧ ಕಲೆಗಳಲ್ಲಿ ಹಾಸುಹೊಕ್ಕಾಗಿರುವ ಲಯಗಳನ್ನು ಅವರು ಒಟ್ಟುಸೇರಿಸುತ್ತ ಅದನ್ನು ಬರವಣಿಗೆಯಲ್ಲಿ ಹಿಡಿದಿಡುತ್ತಿದ್ದರು. ನಾವು ರಂಗಭಾಷೆಗೆ ಅಗತ್ಯ ಚಿತ್ರ ಮತ್ತು ಲಯಗಳನ್ನು ಅವರ ಬರವಣಿಗೆಯಿಂದಲೇ ಆಯ್ದುಕೊಳ್ಳುತ್ತ ನಡೆದೆವು. ರೋಲಾ ಬಾರ್ತ ಹೇಳುವಂತೆ ‘ಅಕ್ಷರದಲ್ಲಿ ಕಂಡ ಕ್ರಿಯಾತ್ಮಕ ಗೆರೆಗಳಿಂದ ಕಲಾಕೃತಿ ನಿರ್ಮಿಸುವ ಆನಂದವದು’. ನಿಜ.

ನಾವು ನಟರೊಂದಿಗೆ, ಅಗತ್ಯ ಪರಿಕರಗಳೊಂದಿಗೆ, ಸಂಗೀತದೊಂದಿಗೆ ರಂಗದ ಮೇಲೆ ಚಲಿಸುವ ‘ಪೇಂಟಿಂಗ್’ ಗಳನ್ನು ಸೃಷ್ಟಿಸುವ ಆನಂದ ಅನುಭವಿಸಿದೆವು. ನಾಟಕಕ್ಕೆ ಅಗತ್ಯವಾದ ಚಿತ್ರಗಳನ್ನು ಗೆಳೆಯ ಸತೀಶ ಯಲ್ಲಾಪುರ ಸುಂದರವಾಗಿ ರಚಿಸಿಕೊಟ್ಟಿದ್ದ. ನಿಧಾನವಾಗಿ ಟ್ಯಾಗೋರರ ಚಿತ್ರಭಾಷೆ ದೃಶ್ಯಭಾಷೆಯಾಗಿ ಅನುವಾದಗೊಳ್ಳತೊಡಗಿತು.

ಒಂದೊಂದು ಕಥಾದೃಶ್ಯಕ್ಕೆ ಒಂದೊಂದು ಬಗೆಯ ನಿರೂಪಣೆಯ ಆಕೃತಿ ಬಳಸಿಕೊಂಡೆವು.  ಅಜ್ಜನ ರಜೆಯ ಹಾಡನ್ನು ನಿಜವಾದ ಪೇಂಟಿಂಗ್ ಬಳಸಿ ಮಕ್ಕಳ ಚೈತನ್ಯವನ್ನು ಬಳಸಿಕೊಳ್ಳುವಂತಹ ನೃತ್ಯದೊಡನೆ ನಿರೂಪಿಸಿದೆವು. ಮರ ಹೇಳಿದ ಕತೆಯಲ್ಲಿ ನಟರನ್ನು ವಿಲಂಬಿತ ಗತಿಯ ಚಲನೆಯಲ್ಲಿ ತೊಡಗಿಸಿ ಕನಸಿನಂತಹ ದೃಶ್ಯ ಸಂಯೋಜಿಸಲಾಯಿತು.

ಹುಲಿಯ ಕತೆಯನ್ನು ರಂಗಭೂಮಿಯಲ್ಲಿ ಪ್ರಸಿದ್ಧವಾಗಿರುವ ಕನ್ನಡಿ ಆಟದ (ಮಿರರ್ ಗೇಮ್)ಮಾದರಿಯನ್ನು ಬಳಸಿ ಕಟ್ಟಲಾಯ್ತು. ‘ಶೂ’ ಕಂಡುಹಿಡಿದ ಕತೆಯನ್ನು ಕಾಮಿಕ್ ಮಾದರಿಯಲ್ಲಿ ಕಾರ್ಟೂನ್ ಶೈಲಿಯ ಅಭಿನಯದಿಂದ ನಿರೂಪಿಸಿದರೆ, ಡಿಷ್ಟçಕ್ಷನ್ ಕತೆಯನ್ನು ಹೆಚ್ಚು ವಾಸ್ತವ ಮಾದರಿಯಲ್ಲಿ ನಿರ್ಮಿಸಿದೆವು.

ನಾಟಕದಲ್ಲಿ ಬರುವ ‘ಸತ್ಯಯುಗ’ದ ಪರಿಕಲ್ಪನೆಯನ್ನು ಮಕ್ಕಳಲ್ಲಿ ಮೂಡಿಸಲು ತೊಡಕೇ ಆಗದಿದ್ದುದು ಮತ್ತು ದೊಡ್ಡವರಿಗೆ ಅದನ್ನು ಪೂರ್ಣವಾಗಿ ಮನಸಿನಲ್ಲಿಳಿಸಲಾಗದಿದ್ದುದು ಎರಡೂ ಸತ್ಯ. ನಾಟಕದಲ್ಲಿ ಬರುವ ಮರ, ಹುಲಿ ಇವೆಲ್ಲವೂ ಪ್ರತೀಕಗಳಂತೆ ಬಳಕೆಯಾಗುತ್ತಿದ್ದುದನ್ನು ಮಕ್ಕಳು ಮನಗಂಡಿದ್ದರು.

ಒಂದು ಇನ್ನೊಂದಾಗುವ ಈ ರೂಪಾಂತರದ ರೂಪಕದ ಅಟಗಳು ಅವರಿಗೆ ಅರಿವಾಗುತ್ತಿದ್ದಂತೆ ಅವರು ಅದರಿಂದ ಮಜಾ ತೆಗೆದುಕೊಳ್ಳಲು ಆರಂಭಿಸಿದ್ದರು. ದೈನಂದಿನ ಲಾಜಿಕ್ ಮುರಿಯುವದರಲ್ಲಿರುವ ಮ್ಯಾಜಿಕ್ ಅವರಿಗೆ ಅರ್ಥವಾಗುತ್ತಿದ್ದಂತೆ ಕಸಬರಿಗೆ, ಬೆಕ್ಕು, ಮರ ಇವೆಲ್ಲವುಗಳೊಂದಿಗೆ ಮಾತನಾಡುತ್ತ ಅವರು ಟ್ಯಾಗೋರರ ಸತ್ಯಯುಗದ ಪರಿಕಲ್ಪನೆಯನ್ನು ಅನುಭವಿಸತೊಡಗಿದ್ದರು. ಆದರೆ ದೊಡ್ಡವರ ತಾರ್ಕಿಕ ಜಗತ್ತಿಗೆ ಇದೊಂದು ಬರಿಯ ಮಕ್ಕಳಾಟಿಕೆ!

ನಾಟಕವು ರಾಜ್ಯದ ಬೇರೆಬೇರೆಕಡೆ ಪ್ರದರ್ಶನಗೊಳ್ಳುತ್ತ ದೆಹಲಿಯ ರಾಷ್ಟ್ರೀಯ ನಾಟಕೋತ್ಸವಕ್ಕೆ ಆಯ್ಕೆಯಾಯಿತು. ನಾಟಕಮುಗಿದ ನಂತರದ ಚರ್ಚೆಯಲ್ಲಿ ಮುಖ್ಯವಾಗಿ ಸತ್ಯಲೋಕಪರಿಕಲ್ಪನೆಯದೇ ಮಾತು. ಮಕ್ಕಳಿಗೆ ಅದನ್ನು ಹೇಗೆ ಮನವರಿಕೆ ಮಡಿಕೊಟ್ಟಿರಿ? ಎಂಬುದು ಅವರ ಕುತೂಹಲ. ನಿಜವಾಗಿ ಮಕ್ಕಳ ಲೋಕವೇ ಆ ಬಗೆಯ ಸತ್ಯಲೋಕದ ಮಾದರಿಯದು. ಬಯಸಿದಂತಹ ರೂಪತಾಳುವ ಭಾವ ಅವರಿಗೆ ಹೊಸತಲ್ಲ.

ಅವರ ಜಗತ್ತು ಎಲ್ಲೆ ಇಲ್ಲದ್ದು. ನಮ್ಮ ಹಸ್ತಕ್ಷೇಪದಿಂದಾಗಿ ಅದು ಸೀಮಿತಗೊಳ್ಳುತ್ತ ಸಾಗುತ್ತದೆ. ಚರ್ಚೆಯಲ್ಲಿ ನಮ್ಮ ಮಕ್ಕಳು ಹೇಳಿದರು ‘ನಾಟಕದಲ್ಲಿ ಬಳಸಿದ ‘ಮರ’ ನಮಗೆ ಪ್ರಾಪರ್ಟಿ ಮಾತ್ರವಾಗಿರಲಿಲ್ಲ, ಅದು ನಮ್ಮೊಳಗೇ ಬೆಳೆದಿತ್ತು. ನಮ್ಮ ತರಗತಿಗಳಲ್ಲಿ ನಾವು ಎಷ್ಟೋಸಾರಿ ಮಾತನಾಡಿಕೊಳ್ಳುತಿದ್ವಿ, ನಮಗೆ ವಿಜ್ಞಾನವನ್ನೂ ಹೀಗೆ ಕಲಿಯಲಾದರೆ ಎಷ್ಟು ಚೆನ್ನಿತ್ತು ಅಂತ’.

ಹಿರಿಯ ಕಲಾವಿದರೊಬ್ಬರು ಎರಡು ವರ್ಷ ಹಿಂದೆ ಅಲ್ಲಿ ಪ್ರಯೋಗವಾಗಿದ್ದ ನನ್ನ ಕಂಸಾಯಣ ನಾಟಕವನ್ನು ಈ ನಾಟಕದ ಜತೆಗಿಟ್ಟು ‘ಅಲ್ಲಿ ಕೊಳಲು ನಾಟಕದುದ್ದಕ್ಕೂ ಚಲಿಸುತ್ತಿದ್ದರೆ, ಇಲ್ಲಿ ‘ಪೇಂಟಿಂಗ್’ ರಂಗದುದ್ದಕ್ಕೂ ಹರಿದಾಡುತ್ತ  ನಾಟಕವನ್ನು ಚಲನಶೀಲ ಗೊಳಿಸುತ್ತದೆ. ನೀವು ಬಳಸುವ ಪ್ರತಿಮೆ ಬಿಡಿಬಿಡಿಯಾಗಿ ಆರಂಭಗೊಂಡು ಇಡಿಯಾಗುತ್ತ ಬೆಳೆಯುವ ಬಗೆ ಕುತೂಹಲಕರ’ ಎಂದಿದ್ದರು.

ನಮ್ಮ ನಾಟಕದ ಚರ್ಚೆಯ ದಿನ ಮಣಿಪುರದಿಂದ ಬಂದ ಮಕ್ಕಳ ನಾಟಕದ ಚರ್ಚೆಯೂ ಇತ್ತು. ಭಿನ್ನ ಭಾಷೆಯ ಎರಡೂ ತಂಡದ ಮಕ್ಕಳು ಮಾತಾಡಿದ್ದೇ ಮಾತಾಡಿದ್ದು. ಬುಡಕಟ್ಟಿನ ಆ ಹುಡುಗರು ಎಷ್ಟು ಗಟ್ಟಿಮುಟ್ಟಾಗಿದ್ದರು ಎಂದರೆ ನಮ್ಮ ಟ್ಯಾಗೋರಜ್ಜ ದಾಮೋದರನಾಯ್ಕರನ್ನು ಎತ್ತಿಕೊಂಡೇ ಕುಣಿದರು.

ನಮ್ಮೊಡನೆ ಬಂದಿದ್ದ ಯಮುನಾಗಾಂವ್ಕರ್ ಊರಿಂದಬರುವಾಗ ಗಟ್ಟಿಯಾದ ಅಡಿಕೆ, ನಮ್ಮಲ್ಲಿ ‘ಬೆಟ್ಟಡಿಕೆ’ ಅನ್ನುತ್ತಾರಲ್ಲ ಅದನ್ನು ತಂದಿದ್ದಳು. ನಾವೆಲ್ಲ ಕಲ್ಲಿನಲ್ಲಿ ಅದನ್ನು ಜಜ್ಜಿ ಚೂರನ್ನು ಬಾಯಲ್ಲಿಟ್ಟುಕೊಂಡರೆ ಮಣಿಪುರದ ಹುಡುಗನೊಬ್ಬ ಅವಳಿಂದ ಇಡಿಯಾದ ಅಡಿಕೆಯನ್ನು ಪಡೆದು ಬಾಯಲ್ಲಿ ಇಟ್ಟವನೇ ಒಮ್ಮೆಲೇ ಜಗಿದು ನೀರಾಗಿಸಿದ್ದ!.

ದೆಹಲಿಯಲ್ಲಿ ಸದನ ನಡೆಯುತ್ತಿದ್ದವೇಳೆಯಾಗಿತ್ತದು. ಆಗ ಸಿ.ಪಿ.ಐ.(ಎಂ)ನಿಂದ ವಿರೋಧ ಪಕ್ಷದ ನಾಯಕರಾಗಿದ್ದ  ಪಶ್ಚಿಮಬಂಗಾಳದ ಬಸುದೇವ ಆಚಾರ್ಯ, ಕೇರಳದ ಯುಜನ ಸಂಸ್ಕೃತಿ ಸಚಿವರಾಗಿದ್ದ ಎಂ.ಎ.ಬೇಬಿ ಮತ್ತಿತರರು ತಮ್ಮ ಅವಿರತ ಕೆಲಸದ ಮಧ್ಯೆಯೂ,  ವಿಠ್ಠಲಭಂಡಾರಿ ಮತ್ತು ಯಮುನಾ ಅವರ ಆಮಂತ್ರಣ ಮತ್ತು ಟ್ಯಾಗೋರರ ನಾಟಕ ಎಂಬ ಆಸಕ್ತಿಯಿಂದ ರಂಗಮಂದಿರಕ್ಕೆ ಬಂದು ನಾಟಕನೋಡಿ  ಆ ಕುರಿತು ಚರ್ಚಿಸಿದ್ದರು.

ಮಾತಿನ ಮಧ್ಯದಲ್ಲಿ ವಿಠ್ಠಲ ಅವರಿಗೆ “ ಟ್ಯಾಗೋರರು ‘ಶೂ’ಕಂಡು ಹಿಡಿದ ನಾಟಕದಲ್ಲಿ ಬಳಸಿದ ವ್ಯಂಗ್ಯ ನೋಡಿ” ಎನ್ನುತ್ತಿದ್ದಂತೆ ಬಸುದೇವ ಅವರು ‘ಅದು ಟ್ಯಾಗೋರರ ಕವನ ಆಧರಿಸಿದ್ದು’ ಎಂದು ತಿದ್ದಿದ್ದರು. ಅವರೆಲ್ಲರ ಸಾಹಿತ್ಯ ಜ್ಞಾನ, ಕಲಾಪ್ರೀತಿ ನೋಡಿ ನಮಗೆ ವಿಸ್ಮಯವಾಗಿತ್ತು. ನಮ್ಮಲ್ಲಿ . . . ಬೇಡ ಬಿಡಿ.

ಈ ನಾಟಕದಲ್ಲಿ ಭಾಗವಹಿಸಿದ್ದ ನಮ್ಮ ಆ ಮಕ್ಕಳೆಲ್ಲ ಇಂದು ಉನ್ನತ ವ್ಯಾಸಂಗದಲ್ಲಿ ತೊಡಗಿದ್ದಾರೆ. ಸುಮ್ಮನೆ ಅವರನ್ನು ಮಾತನಾಡಿಸಿ ನಾಟಕದ ನೆನಪು ಮಾಡಿದೆ.  ಆ ನೆನಪುಗಳನ್ನು ಹಂಚಿಕೊಳ್ಳುತ್ತ ಚಂದನಾ ಅನ್ನುವವಳು, ನಾಟಕದ ನಂತರದ ದೆಹಲಿ ಸಂಚಾರದಲ್ಲಿ ಲೋಟಸ್ ಮಂದಿರದ ಹೊರಗೆ ಕಂಡ ಪತಿವ್ರತೆಯರ ವಿಗ್ರಹದ ಕುರಿತು ನಡೆದ ಮಾತುಕತೆಯನ್ನು ನೆನಪಿಸಿದಳು.

ಯಾರು ಆ ಪತಿವ್ರತೆಯರೆಂದರೆ? ಪುರುಷರು ಹೇಳಿದ್ದನ್ನು ಕೇಳಿಕೊಂಡಿರೋಳಾ? ಅನ್ನುವ ಚರ್ಚೆ ಅಂದು ನಡೆದಿತ್ತಂತೆ. ‘ನಮ್ಮನ್ನು  ಆ ಬಗೆಯ ಚರ್ಚೆಗಳು ಇಂದಿಗೂ ಬೆಳೆಸುತ್ತಿವೆ’ ಎಂದಳು. ನಾಗೇಂದ್ರ ಅನ್ನುವ ಹುಡುಗ ‘ನಾಟಕ ನಮ್ಮಲ್ಲಿ ಮೂಡಿಸಿದ ಸಾಮಾಜಿಕ ಅರಿವನ್ನು ‘ಟೈಗರ್’ ಕವನದ ಮೂಲಕ ನೆನಪಿಸಿಕೊಂಡ. ಸೀಮಾ ಅನ್ನೋ ಹುಡುಗಿ ‘ಸತ್ಯಯುಗದ ಪರಿಕಲ್ಪನೆ ತನ್ನಲ್ಲಿ ಬೆಳೆಯುತ್ತಲೇ ಇರುವ ಬಗೆಯನ್ನು ನೆನಪಿಸಿಕೊಂಡಳು.

೧೯೩೭ರಲ್ಲಿ ಪ್ರಕಟವಾದ ಟ್ಯಾಗೋರರ ಸಚಿತ್ರ ಪುಸ್ತಕ ‘ಷೆ’ (ಅವನು)ದಲ್ಲಿ ಅವರ ಮೊಮ್ಮಗಳು “ತಾತಾ, ಸತ್ಯಯುಗ ಬರುವದಾದರೆ ನೀವೇನಾಗಬಯಸುವಿರಿ?” ಎಂದು ಕೇಳುತ್ತಾಳೆ. ಆಗ ಅವರು “ವಿಶಾಲವಾದ ಪ್ರದೇಶದಲ್ಲಿ ಹರಡಿರುವ ಭೂಭಾಗದ ಒಂದು ತುಣುಕಾಗ ಬಯಸುತ್ತೇನೆ” ಎಂದು ಉತ್ತರಿಸುತ್ತಾರೆ.

ಟ್ಯಾಗೋರರು ಬಾಲ್ಯದಲ್ಲಿ ಹಲವುಬಗೆಯ ಮಿತಿಗಳನ್ನು ಅನುಭವಿಸುತ್ತಲೇ ಬೆಳೆದವರು. ಹೀಗಾಗಿ ಅವರ ಬರಹಗಳಲ್ಲಿ ಚಿತ್ರಿತವಾದ ಮಕ್ಕಳ ಲೋಕ ಈ ಮಿತಿಯನ್ನು ದಾಟುವಬಗೆಯನ್ನು ಕಲಿಸಿಕೊಡುತ್ತದೆ. ಅದರಲ್ಲಿಯೂ ಬಯಸಿದಂತೆ ನಾವಾಗಬಲ್ಲ ರೂಪಾಂತರದ ಕಲ್ಪನೆಯು ರವಿಂದ್ರರ ಸೃಜನಶೀಲತೆಯ ಅತ್ಯುತ್ಕೃಷ್ಟ ಮಾದರಿಯಾಗಿದೆ.

ಇಂದಿನ ಈ ಹಿಂಸ್ರಕ ಜಗತ್ತಿನ ನಡುವೆ ನಮ್ಮೊಳಗೆ ಒಂದು ಸುಂದರ ಸತ್ಯಲೋಕವನ್ನು ಸೃಷ್ಟಿಸಿಕೊಳ್ಳುವದು ಹೇಗೆ ಎಂಬುದನ್ನು ರವೀಂದ್ರರ ಬರಹಗಳು ತೋರಿಕೊಡುತ್ತವೆ. ಸತ್ಯಲೋಕವನ್ನು ಯಾವಾಗಬೇಕಾದರೂ ವಾಪಾಸು ತರಬಹುದು. ಏಕೆಂದರೆ ರವೀಂದ್ರರು ಹೇಳುವ ಹಾಗೆ ನಮ್ಮ ಹತ್ತಿರ ಕತೆ, ಕವನ, ಚಿತ್ರ, ಸಂಗೀತ, ನಾಟಕಗಳಿವೆ.

। ಮುಂದಿನ ವಾರಕ್ಕೆ ।

‍ಲೇಖಕರು ಶ್ರೀಪಾದ್ ಭಟ್

October 10, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

6 ಪ್ರತಿಕ್ರಿಯೆಗಳು

  1. Kiran Bhat

    ಸತ್ಯಯುಗದ ಆ ಅನುಭವ ನಿಜಕ್ಕೂ ಅಮೋಘವಾದದ್ದು ಮತ್ತು ಅದನ್ನು ಬರಹದಲ್ಲೂ ತಂದಿದೀಯ ಶ್ರೀಪಾದ.
    ಚಿಂತನ ರೆಪರ್ಟರಿ ಯ ದಿನಗಳು ದಿವ್ಯ ರಂಗಾನುಭವದ ಕ್ಷಣಗಳು. ಅವುಗಳನ್ನು ಮತ್ತೆ ನೆನಪಿಸಿದ್ದಕ್ಕೆ ಥ್ಯಾಂಕ್ಯೂ..

    ಪ್ರತಿಕ್ರಿಯೆ
  2. Ahalya Ballal

    ಟಾಗೋರರ ಕಲ್ಪನೆಗೆ ನೀವು, ಸುಧಾ ಮತ್ತು ತಂಡ ಸಮಗ್ರವಾಗಿ ಕಟ್ಟಿಕೊಟ್ಟಿರಬಹುದಾದ ದೃಶ್ಯ-ಶ್ರಾವ್ಯ ಆಯಾಮಗಳನ್ನು ಓದಿ, ನೋಡುಗರ ಮನದಲ್ಲಿ ಉಂಟಾಗಿರಬಹುದಾದ ಬಗೆಬಗೆಯ ಅರ್ಥತರಂಗಗಳನ್ನು ಊಹಿಸಿಕೊಂಡು ರೋಮಾಂಚನ ಉಂಟಾಯಿತು, ವಸ್ತುಶಃ.

    ಈ ಶ್ರೀಮಂತ ಅನುಭವ ನಮ್ಮ ಭಾಷೆಗಷ್ಟೇ ಸೀಮಿತಗೊಳ್ಳದೆ ಎಲ್ಲರನ್ನೂ ತಲುಪಲಿ ಸರ್. ಬೇರೆ ಭಾಷೆಯ ರಂಗಾಸಕ್ತರಿಗೂ ಇದು ಪ್ರಯೋಜನವಾಗುವುದು ನಿಶ್ಚಿತ.

    ಪ್ರತಿಕ್ರಿಯೆ
  3. Kavya Kadame

    ಟ್ಯಾಗೋರರ ಸತ್ಯಲೋಕದ ಚೆದುರಿದ ಚಿತ್ರಗಳ ಅನುಪಮ ಕೊಲಾಜ್ ನಂತಿರುವ ಈ ನಾಟಕದ ಬಗ್ಗೆ ಕುತೂಹಲವಾಯಿತು. ಈಗ ತರುಣ- ತರುಣಿಯರಾಗಿರುವ ಈ ಮಕ್ಕಳು ಈಗಲೂ ತಮ್ಮೊಳಗೆ ಆ ಸತ್ಯಲೋಕದ ಕಲ್ಪನೆ ಬೆಳೆಯುತ್ತಿರುವ ಬಗ್ಗೆ ಹಂಚಿಕೊಂಡಿರುವ ಅನುಭವ ಎಷ್ಟು ಆಶಾದಾಯಕವಾಗಿದೆ. ಮಕ್ಕಳು ಈ ಕಲ್ಪನೆಗೆ ಆರಾಮಾಗಿ ಹೊಂದಿಕೊಂಡ ಬಗ್ಗೆ ಮತ್ತು ದೊಡ್ಡವರಿಗೆ ಅದನ್ನು ಅರ್ಥ ಮಾಡಿಕೊಳ್ಳಲು ಕಷ್ಟವಾದ ಬಗೆಯನ್ನು ನಿಸ್ಪ್ರಹವಾಗಿ ನಿರೂಪಿಸಿದ್ದೀರಿ. ಬಹಳ ಇಷ್ಟವಾಯಿತು. 

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: