ಗುತ್ತಿ, ತಿಮ್ಮಿ, ಐತ, ಪೀಂಚಲು, ಸುಬ್ಬಮ್ಮ, ಹೂವಯ್ಯ ಜೊತೆ ಸೃಜನಾ c/o ಮುಂಬೈ

ಕುಪ್ಪಳಿಯ ಕಾವಳದೊಳಗೆ ಮುಂಬಯಿ ಸೃಜನಾ ಸದಸ್ಯೆಯರು

ಮುಂಬಯಿಯಿಂದ ಗಿರಿಜಾಶಾಸ್ತ್ರಿ

ಪಡುವಣ ದಿಕ್ಕಿನಲಿ ಕೆಂಪಾದ ಸಂಜೆ ಕರಗುತ್ತಾ ಮಲ್ಲ ಮೆಲ್ಲನೆ ಕತ್ತಲು ಗವ್ವೆನ್ನತ್ತಾ ಒಳಸುರಿಯುತ್ತಿತ್ತು. ಅಲ್ಲೊಂದು ಇಲ್ಲೊಂದು ಗೂಡಿಗೆ ಹಾರುವ ಹಕ್ಕಿಯ ಚೀಂಗುಟ್ಟುವ ಸದ್ದು ಬಿಟ್ಟರೆ ಸುತ್ತಲೂ ‘ಚಿನ್ಮೌನ’. ಕವಿಶೈಲದಿಂದ ಕೆಳಗೆ ಜಾರಿದ ಜಾಡಿನಲ್ಲಿ ಕಾಡಿನ ಪೊದೆಯೊಳಗೆ ‘ಮನುಜನಾಕಾರದಲಿ ಮೊರಡಾಗಿ’ನಿಂತ ಶಿಲಾತಪಸ್ವಿ. ಅದರ ಸುತ್ತಲೂ ನಾವು ಸೃಜನಾದ ಗೆಳತಿಯರು.

ಶಿಲಾತಪಸ್ವಿಯ ಬುಡಕ್ಕೆ ಕುಳಿತ ಶಿವಾರೆಡ್ಡಿಯವರು. ಜೊತೆಗೆ ಸೃಜನಾ ಬಳಗವನ್ನು ಕಾಡಿನೊಳಗೆ ಚಾರಣ ಮಾಡಿಸುತ್ತ್ತಿದ್ದ ವಿಮರ್ಶಕಿ, ಕತೆಗಾರ್ತಿ ಡಾ. ಎಲ್.ಸಿ ಸುಮಿತ್ರಾ. ಆ ಶಿಲಾತಪಸ್ವಿಯು ಶಿವಾರೆಡ್ಡಿಯವರ ಮೈಹೊಕ್ಕು ನುಡಿಸುತ್ತಿತ್ತು. ಇಡೀ ಕಾಡಿಗೆ ಕಾಡೇ ಕಿವಿಯಾಲಿಸಿ ಕೇಳುತ್ತಿತ್ತು. ಕಳಂಕವಿಲ್ಲದ ಆಕಾಶ ತದೇಕ ನೋಡುತ್ತಿತ್ತು. ‘ನರತನಕೆ ಹಾತೊರೆ’ಯುವ ಶಿಲಾತಪಸ್ವಿಯು ತನ್ನೊಳಗಿನ ‘ಆದಿಮ ಲಯಾಗ್ನಿ’ಯನ್ನು ಹೊರಸೂಸುತ್ತಿತ್ತು. ಕಾಡೊಳಗಿನ ಹೂಗಳು ‘ಗಾಳಿಹೆಜ್ಜೆಯ ಹಿಡಿದು’ಎಂತಹುದೋ ಸುಗಂಧ ಬೀರುತ್ತಿದ್ದವು.

ಸಿಬ್ಬಲುಗುಡ್ಡೆಯ ತುಂಗೆ ವಾತಾವರಣವನ್ನು ತಂಪಾಗಿಸಿದ್ದಳು. ಹೀಗೆ ಪಂಚಭೂತಗಳ ಅಸ್ತಿತ್ವವನ್ನು ಪಂಚೇಂದ್ರಿಯಗಳ ಮೂಲಕ ಸಾಕ್ಷಾತ್ಕರಿಸಿಕೊಂಡ ಅಲೌಕಿಕ ಅನುಭವವೊಂದಕ್ಕೆ ತೆರೆದುಕೊಂಡಂತೆ ಗೆಳತಿಯರ ಮೈ ರೋಮಂಚನಗೊಂಡಿದ್ದವು. ಅಲ್ಲಿ ಕಾಲವಿರಲಿಲ್ಲ; ದೇಶವಿರಲಿಲ್ಲ; ಗ್ರಹಕೋಟಿ ಶಶಿಸೂರ್ಯ ತಾರಕೆಗಳಿರಲಿಲ್ಲ; ಬೆಳಕು ಕತ್ತಲೆ ಎಂಬ ಭೇದವಿನಿತಿರಲಿಲ್ಲ; ಮಮಕಾರ ಶೂನ್ಯದಲಿ ಮುಳುಗಿದ್ದುವೆಲ್ಲ.

ಇದು ಶಿಲಾತಪಸ್ವಿಯ ಮುಂದೆ ನಿಂತ ಕುವೆಂಪು ಅವರ ಅನುಭವ ಮಾತ್ರ ಆಗಿರಲಿಲ್ಲ ಬದಲಾಗಿ ಕುವೆಂಪುವಿನ ತರುವಾಯ ಅನೇಕ ವರುಷಗಳ ನಂತರ ಅದೇ ಹಾದಿ ತುಳಿದ ಗೆಳೆತಿಯರ ಅನುಭವವೂ ಅಗಿದ್ದಿತು.

ಹೊರಜಗತ್ತಿನ ನೆಟ್ ವರ್ಕ್ ನಿಂದ ಕಡಿದುಕೊಂಡ ಕುಪ್ಪಳಿಯ ಆಸುಪಾಸಿನ ಈ ಸಹ್ಯಾದ್ರಿಯ ಹುಚ್ಚುಕಾಡು, ಸದ್ದು ಗದ್ದಲವೇ ಸರ್ವಸ್ವವಾದ ಮುಂಬಯಿ ಲೋಗರಿಗೆ ಮೌನದ ಪರಿಚಯಮಾಡಿಸುತ್ತಾ ಒಂದು ಅದ್ಭುತ ಲೋಕವನ್ನು ತೆರೆಯಿತು. ಇಂತಹ ಒಂದು ಅದ್ಭುತ ಲೋಕವನ್ನು ತೆರೆದು ತೋರಿಸಲು ಅಂತಹ ಲೋಕದ ಹುಚ್ಚು ಯಾರಿಗಾದರೂ ಹಿಡಿದಿರಬೇಕು. ಅಂತಹ ಹುಚ್ಚನ್ನು ಹತ್ತಿಸಿಕೊಂಡವರು ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಕೆ.ಸಿ. ಶಿವಾರೆಡ್ಡಿಯವರು.

ಕುವೆಂಪು ಅಧ್ಯಯನವೆಂಬ ಪಠ್ಯಪುಸ್ತಕದಲ್ಲಿ, ಕೇವಲ ಸಂಶೋಧನೆಯಲ್ಲಿ ತೊಡಗಿಕೊಳ್ಳುವ ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರುಗಳಿಂದ ‘ಕುವೆಂಪು ಶಿಖರಗಳ’ ಚಾರಣ ಸಾದ್ಯವಾಗುವುದಿಲ್ಲ. ಅದು ಸಾಧ್ಯವಾಗುವುದು ಅಲ್ಲಿನ ‘ಹುಲ್ಲಲಿ, ಕಲ್ಲಲಿ, ಮಣ್ಣಲಿ’ ಹೂಗಿಡ ಹಕ್ಕಿಗಳಲ್ಲಿ ಚೈತನ್ಯವನ್ನು ಕಾಣುವ ‘ತೆಗೆ ಜಡವೆಂಬುದೆ ಸುಳ್ಳು’ ಎನ್ನುವ ನಿಷ್ಠುರ ಸತ್ಯವನ್ನು ಎದೆಗಪ್ಪಿಕೊಳ್ಳುವುದರಿಂದ, ಸೃಷ್ಟಿ ಸೌಂದರ್ಯದೊಲ್ಮೆಯ ಸೃಷ್ಟಿಕರ್ತಂಗೆ ಪೂಜೆಗೈಯು ವುದರಿಂದ ಮಾತ್ರ ಸಾಧ್ಯ. ಅದಕ್ಕೆ ಸಾಕ್ಷಿಯೆಂಬಂತೆ, ನಾವು ಕುಪ್ಪಳಿಗೆ ತಲಪಿದ ಮಾರನೆಯ ಬೆಳಗ್ಗೆ ಐದುಗಂಟೆಗೇ ನಾವು ಇಳಿದು ಕೊಂಡ ಗೆಸ್ಟ್ ಹೌಸಿನ ಮುಂದೆ ಶಿವಾರೆಡ್ಡಿಯವರು ಹಾಜರಾಗಿದ್ದರು. ನಾವೇನು ಅವರನ್ನು ಕರೆದಿರಲಿಲ್ಲ. ಆದರೆ ಅವರಾಗಿಯೇ ಸಹ್ಯಾದ್ರಿಯ ಕಾಡಿನಲ್ಲಿ ನಮ್ಮನ್ನು ಮುನ್ನಡೆಸಲು ಮುಂದಾಗಿದ್ದರು. ಹಾಗೆಯೇ ಸುಮಿತ್ರಾ ಅವರನ್ನೂ ಸಹ ನಾವು ನಿರೀಕ್ಷಿಸಿರಲಿಲ್ಲ. ಮುಂಬಯಿಯಿಂದ ದಣಿದು ಬಂದಿದ್ದ ನಮ್ಮ ಸೃಜನಾದ ಸದಸ್ಯೆಯರಿಗೆೆ ಅವರ ತೀರ್ಥಹಳ್ಳಿಯ ತಂಪು ತೋಟದ ಮನೆಯಲ್ಲಿ ತಂಪು ಪಾನೀಯವನ್ನು ಕುಡಿಸಿ ನಮ್ಮೊಡನೆ ಬಂದು ಎರಡುದಿನಗಳಿದ್ದು ನಮ್ಮ ಪ್ರವಾಸವನ್ನು ಸಾರ್ಥಕಗೊಳಿಸಿದರು.

ಬೆಳಗಿನ ಝಾವ ನಾವು ಹೊರಟಿದ್ದು ಈಗಾಗಲೇ ಕನ್ನಡ ಸಾಹಿತ್ಯದಲ್ಲಿ ಆರ್ಕಿಟೈಪ್ ಆಗಿಬಿಟ್ಟಿರುವ ನವಿಲುಕಲ್ಲಿಗೆ- ಸೂರ್ಯೋದಯ ನೋಡಲು. ಆದರೆ ನಮಗೆ ಕಂಡದ್ದು ಕೆಂಪು ಉಂಡೆಯ ಬಾಲಸೂರ್ಯನಲ್ಲ. ಬದಲಾಗಿ ತಿಮ್ಮಿಯನ್ನು ವಿಸ್ಮಯಗೊಳಿಸಿದ ‘ಕಾವಳ’. ದಾರಿಯುದ್ದಕ್ಕೂ, ಕುವೆಂಪು ಅವರು ನಡೆದುಕೊಂಡೇ ನವಿಲುಕಲ್ಲಿನ ನೆತ್ತಿಗೆ ಹೋಗುತ್ತಿದ್ದುದು, ಬಿ.ಎಂ.ಶ್ರೀಯವರು ಒಮ್ಮೆ ಅವರ ಜೊತೆಗೂಡಿದ್ದು, ಬೃಹತ್ತಾದ ಬಂಡೆಯ ಮೇಲೆ ಸ್ವತಃ ಕುವೆಂಪು ಅವರೇ ನಾಮಕರಣ ಮಾಡಿ ಕೆತ್ತಿದ ‘ಕವಿಶೈಲ’, ಅಲ್ಲಿ ಧ್ಯಾನಸ್ಥನೆಲೆಯಲ್ಲಿ ಕವಿತೆಗಳು ರೂಪುಗೊಳ್ಳುತ್ತಿದ್ದ ಬಗೆ ಮುಂತಾದ ವೈಯಕ್ತಿಕ ವಿವರಗಳ ‘ನೆನಪಿನ ದೋಣಿ’ಯಲ್ಲಿ ನಮ್ಮನ್ನು ಈ ಇಬ್ಬರು ಅತಿಥೇಯರೂ ತೇಲಿಸುತ್ತಿದ್ದರು. ಅದಕ್ಕೆ ಪೂರಕವಾಗಿ ಸೃಜನಾದ ಸದಸ್ಯೆಯರು ನಾಡಗೀತೆ ಹಾಡಿ ವಾತಾವರಣಕ್ಕೊಂದು ಹೊಸಮೆರಗನ್ನಿತ್ತರು.

ಗುತ್ತಿ, ತಿಮ್ಮಿ, ಐತ, ಪೀಂಚಲು, ಸುಬ್ಬಮ್ಮನ ತವರು ಮನೆ, ಹೂವಯ್ಯ ತನ್ನ ಓದುವ ಕೋಣೆಯಿಂದ ಕೆಳಗಿನ ತೊಟ್ಟ್ಟಿಯಲ್ಲಿ ಕಾಣುವ ಮನೆ ಪಾಲಾಗುವ ದೃಶ್ಯ, ಅವನು ತಪಸ್ಸಿಗೆ ಕುಳಿತ ಜಾಗ, ಚಿನ್ನಮ್ಮ ಬಾಲಕಿಯಾಗಿದ್ದಾಗ ಅತೀಂದ್ರಿಯ ಅನುಭವವನ್ನು ಪಡೆವ ದಾರಿ… ಹೀಗೆ ಕುವೆಂಪು ಅವರ ಕಾದಂಬರಿಯ ಪಾತ್ರಗಳೂ ಅವರ ಕವಿತೆಗಳೂ ನಮ್ಮೊಡನೆ ಚಾರಣಮಾಡುತ್ತಿದ್ದವು. ಹಾಗೆಯೇ ಕುವೆಂಪು ಒಲಿದಿರಬಹುದಾದ ಮತ್ತು ಕುವೆಂಪುವಿಗೆ ಒಲಿದಿರಬಹುದಾದ ಹೆಣ್ಣುಗಳ ಸೆನ್ಷುಯೆಲ್ ಎನ್ನಬಹುದಾದ ಕಾದಂಬರಿಯ ಅಚೆಗಿನ ವಿವರಗಳೂ ಸುಳಿದು ಗೆಳತಿಯರ ಕಿವಿಗಳನ್ನು ನೆಟ್ಟಗಾಗಿಸಿದ್ದವು. ಒಮ್ಮೊಮ್ಮೆ ಕುವೆಂಪು ಅವರ ಕುಪ್ಪಳಿಯಲ್ಲಿ ತೇಜಸ್ವಿಯರೂ ಬಂದು ಹೋಗುತ್ತಿದ್ದರು.

ರಾತ್ರಿ ಮಲಗುವ ಮುನ್ನ ಗೆಸ್ಟ್ ಹೌಸಿನ ಅವರಣದಲ್ಲಿ ಗೆಳತಿಯರಿಂದ ಕುವೆಂಪು ಕವಿತೆಗಳ ಗಾಯನ, ಸಾಹಿತ್ಯ ಕೃತಿಗಳ ಚರ್ಚೆ, ಅಂದಿನ ಚಾರಣಕ್ಕೆ ಮುಕ್ತಾಯ ಹಾಡುತ್ತಿದ್ದವು. ಶಿವಲಿಂಗಕ್ಕೆ ನೀರನ್ನೆರೆಯುತ್ತಿದೆಯೋ ಎಂಬಂತೆ ಉದ್ದಬಾಲದ ‘ಬುಲ್ಲೇರಿ’ ಹಕ್ಕಿಯೊಂದು ನೀರಿನಲ್ಲಿ ತನ್ನ ಬಾಲವನ್ನು ಒಮ್ಮೆ ಅದ್ದಿ ಫಕ್ಕನೆ ಮೇಲೆ ಹಾರುವ, ಸೃಜನಾದ ನೇತಾರೆ ಸುನೀತಾ ಶೆಟ್ಟಿಯವರ ಎಂತ ಸೋಜಿಗಾ ಎಂಬ ತುಳು ಕವಿತೆಯೊಂದರ ದೃಶ್ಯ, ಅದು ಸೃಷ್ಟಿಸಿದ ಆವರಣ ಮಾತ್ರ ಎಂದಿಗೂ ಮರೆಯುವಹಾಗೇ ಇಲ್ಲ.

ಕುಪ್ಪಳಿಯಲ್ಲಿರುವ ಹಂಪಿ ವಿ.ವಿ.ಯ ವಿಭಾಗದಲ್ಲಿ ಕುಳಿತು ಡಾ. ಶಿವಾರೆಡ್ಡಿಯವರ ಆದರಾತಿಥ್ಯವನ್ನುಂಡ ಬಳಿಕ, ‘ರಾಮಾಯಣ ದರ್ಶನಂ’ನ ಭಾಗವೊಂದನ್ನು ಸುಶ್ರಾವ್ಯವಾಗಿ ಡಾ. ಸುನೀತಾಶೆಟ್ಟಿಯವರು ಹಾಡಿದರೆ, ಉಳಿದ ಸದಸ್ಯೆಯರು ತಮ್ಮ ರಚನೆಗಳನ್ನು ಅವುಗಳ ಕುರಿತ ಅನುಭವಗಳನ್ನು ಹಂಚಿಕೊಂಡರು.

ಇಂದಿನ ಲೇಖಕರು ತಮ್ಮ ಪರಂಪರೆಯಜೊತೆಗೆ ಗುರುತಿಸಿಕೊಳ್ಳಬೇಕಾದ ಅವಶ್ಯಕತೆ ಇದೆ. ಹಾಗೆ ಮಾಡಿಕೊಂಡಾಗ ಮಾತ್ರ ಗಟ್ಟಿ ಸಾಹಿತ್ಯಕೃತಿಯೊಂದು ಹೊರಬರಲು ಸಾಧ್ಯ. ಹೀಗೆ ಇಂದಿನ ಲೇಖಕರು ತಮ್ಮ ಪರಂಪರೆಯನ್ನು ಆತ್ಮಸಾತ್ ಮಾಡಿಕೊಳ್ಳಲು ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನಗಳಂತಹ ಸಂಸ್ಥ್ತೆಗಳು ಸಹಾಯಮಾಡುತ್ತವೆ. ಅವು ಕೇವಲ ಸಂಬಂಧಪಟ್ಟ ಕವಿಯನ್ನು ಬೆಳಕಿಗೆ ತರುವುದಲ್ಲದೇ ಕಿರಿಯ ತಲೆಮಾರಿನ ಲೇಖಕರಿಗೆ ಸರಿಯಾದ ಮಾರ್ಗವನ್ನೂ ಹಾಕಿಕೊಡುತ್ತವೆ. ಇಂತಹ ಕೆಲಸವನ್ನು ಅದ್ಭುತವಾಗಿ ಈ ಪ್ರತಿಷ್ಠಾನ ಮಾಡುತ್ತಿದೆ.

ಕುವೆಂಪು ಅವರ ಕೃತಿಗಳ ದೇಶಕಾಲವನ್ನು ಅವುಗಳಲ್ಲಿ ಅಡಗಿರುವ ರಹಸ್ಯಗಳನ್ನು, ಅವೆರಡರ ನಡುವಿನ ಸಂಬಂಧಾಂತರಗಳನ್ನು ಅದ್ಭುತ ಛಾಯಾಚಿತ್ರಗಳ ಮೂಲಕ ಶಿವಾರೆಡ್ಡಿಯವರು ಹೊರ ತಂದಿರುವ ‘ಅನುರಕ್ತಿ’ ಎಂಬ ಬೃಹತ್ ಗ್ರಂಥ ಅವರ ಮೇರೆವರಿಯದ ಕುವೆಂಪು ಪ್ರೇಮಕ್ಕೆ ಸಾಕ್ಷಿಯಾಗಿದೆ. ಜೀಂಗುಟ್ಟುವ ಕಾಡಿನೊಳಗೆ ಒಂಟಿಯಾಗಿದ್ದುಕೊಂಡು, ಕುವೆಂಪು ಅವರನ್ನು ಆತ್ಮಸಾತ್ ಮಾಡಿಕೊಳ್ಳಲು ಅವರು ಪಡುತ್ತಿರುವ ಹರಸಾಹಸ ನೋಡಿದರೆ ಅವರ ಈ ಪ್ರೇಮದ ಸ್ವರೂಪ ಅರ್ಥವಾಗುತ್ತದೆ.

ಕುವೆಂಪು ಸ್ಪರ್ಶಿಸಿದ, ಕಾಡಿನ ಮೂಲೆಮೊಡಕುಗಳನ್ನೆಲ್ಲಾ ನಿಖರವಾಗಿ ಬಲ್ಲ ಆಧುನಿಕ ಗುತ್ತಿಯಂತೆ ಅವರು ನಮಗೆ ಕಾಣಿಸಿದರು. ಕುವೆಂಪು, ಅವರ ಮೈಮೇಲೆ ಎಷ್ಟರಮಟ್ಟಿಗೆ ಎರಗಿದ್ದಾರೆಂದರೆ, ಕನ್ನಡದ ಹೊಸಬರಹಗಳೆಲ್ಲಾ ಅವರಿಗೆ ‘ಕುವೆಂಪೋಚ್ಚಿಷ್ಟ’ ವಾಗಿಯೇ ಕಾಣಿಸುತ್ತವೆ. ಇದು ಒಂದು ಅತಿರೇಕವಾಗಿಯೇ ಕಂಡರೂ, ಕವಿಯೊಬ್ಬನನ್ನು ಅಖಂಡವಾಗಿ ‘ಕಾಣಲು’ ಇಂತಹ ಅತಿರೇಕಗಳ ಬೆನ್ನುಹತ್ತುವ ಅವಶ್ಯಕತೆ ಇದೆ. ಹಾಗಿಲ್ಲದಿದ್ದರೆ ವ್ಯಾಸನ ನಂತರ ಯಾವ ಸಾಹಿತ್ಯವೂ ಹುಟ್ಟುತ್ತಲೇ ಇರಲಿಲ್ಲ. ಹೀಗಾಗಿ ಶಿವಾರೆಡ್ಡಿಯವರ ಈ ಸಿಹಿಹುಚ್ಚನ್ನು ನಾವು ಚಿಟಿಕಿ ಉಪ್ಪಿನೊಂದಿಗೇ ಸೇವಿಸಬೇಕಾಗಿದೆ.

‍ಲೇಖಕರು admin

October 11, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. Aparna Rao

    ಸ್ವಕಾರಣದಿಂದ ಅವಕಾಶ ವಂಚಿತರಾಗಿ ಮರುಗುವ ಪರಿಸ್ಥಿತಿ ನಮ್ಮದಾಗಿದ್ದು, ನಿಮ್ಮ ಲೇಖನದಿಂದ ಮತ್ತಷ್ಟು ಕೊರಗುವಂತಾಗಿದೆ. ಅದೇನೇ ಇರಲಿ ನಿಮ್ಮ ಲೇಖನದಿಂದ ಸಾಕಷ್ಟು ವಿಷಯ ಅರಿಯಲು ಬೆರೆಯಲು ಸಾಧ್ಯವಾಗಿದೆ.

    ಪ್ರತಿಕ್ರಿಯೆ
  2. Shyamala Madhav

    ಗಿರಿಜಾ, ಪುನಃ ನಮ್ಮ ನವಿಲು ಕಲ್ಲಿನಲ್ಲಿ, ತುಂಗಾ ತಟದಲ್ಲಿ, ಕವಿಶೈಲದಲ್ಲಿ, ಹಂಪಿ ವಿಶ್ವವಿದ್ಯಾಲಯದಲ್ಲಿ, ಕವಿಮನೆಯಲ್ಲಿ , ಕ್ಯಾಂಪಸ್ ಅಂಗಳದಲ್ಲಿ ಅವೇ ಕ್ಷಣಗಳನ್ನು ಅದೇ ತೀವ್ರತೆಯಿಂದ ಮರುಜೀವಿಸಿದಂತಾಯ್ತು. ಶಿವಾ ರೆಡ್ಡಿ ಅವರ ಫೋನ್ ನಂಬರ್ ಮೊಬೈಲ್ ಬದಲಾದಾಗ ಕಳೆದುಹೋದುದು ಸಿಗದೆ, ಅಡಿಗಡಿಗೆ ಆಗುವ ಅವರ ನೆನಪು ಪುನಃ ಅವರ ಸಂಪರ್ಕಕ್ಕೆ ಹಾತೊರೆಯುತ್ತಿದೆ. ಇನ್ನೆಂದು ಕುಪ್ಪಳಿಗೆ ಎಂದು ಮನ ಕಾತರಿಸುತ್ತಿದೆ. ತುಂಬಾ ಇಷ್ಟವಾಯ್ತು, ಗಿರಿಜಾ.

    ಪ್ರತಿಕ್ರಿಯೆ
  3. Shyamala Madhav

    ಗಿರಿಜಾ, ಆನಂದಮಯಾ ಎಂದು ಅಂದು ನವಿಲು ಕಲ್ಲಿನಲ್ಲಿ, ತುಂಗಾ ತೋಟದಲ್ಲಿ, ಕವಿಶೈಲದಲ್ಲಿ, ಹಂಪಿ ವಿಶ್ವವಿದ್ಯಾಲಯದಲ್ಲಿ, ಕವಿಮನೆಯಲ್ಲಿ ಹಗಲು ರಾತ್ರಿಯ ಹಕ್ಕಿಗಳಿಂಚರಕ್ಕೆ ನಮ್ಮ ಕವಿಗೀತಗಾಯನವನ್ನೂ ಸೇರಿಸಿ ಅಲೌಕಿಕಾನಂದವನ್ನನುಭವಿಸಿದ ಆ ಅಮೃತಘಳಿಗೆಗಳು ಪುನಃ ಎಂದು ನಮ್ಮ ಪಾಲಿಗೆ? ಶಿವಾ ರೆಡ್ಡಿ ಅವರ ಫೋನ್ ನಂಬರ್ ಮೊಬೈಲ್ ಬದಲಾದಾಗ ಕಳೆದು ಹೋಗಿ, ಅವರ ಸಂಪರ್ಕಕ್ಕೆ ಹೃದಯ ಕಾತರಿಸುತ್ತಿದೆ. ಕವಿಯ ಅನುರಕ್ತಿಯ ಈ ಅದ್ಭುತ ಸಾಹಿತಿ, ಛಾಯಾಚಿತ್ರಕಾರ ನಮಗೆ ತೋರಿದ ಆ ರಸಋಷಿಯ ಸಾನ್ನಿಧ್ಯದನುಭವ ಮರೆತೀತಾದರೂ ಎಂತು?!

    ಪ್ರತಿಕ್ರಿಯೆ
  4. T S SHRAVANA KUMARI

    ನಾವೂ ಜೊತೆಗೂಡುವ ಅವಕಾಶವಿದ್ದಿದ್ದರೆ ಅನ್ನಿಸಿದ ಬರಹ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: