‘ನಿನ್ನ ದೇವರು ನಿನ್ನ ದೇಶವನ್ನು ಕಾಪಾಡಲಿ, ಜೈ ಬಾರ್ಸಿಲೋನಾ’

ಈಕೆ ‘ಜಯನಗರದ ಹುಡುಗಿ’.ಹಾಗಂತ್ಲೆ ಫುಲ್ ಫೇಮಸ್ಸು. ಈಕೆ ಬರೆಯುತ್ತಿದ್ದ ‘ಜಯನಗರದ ಹುಡುಗಿ’ ಅಂಕಣ ಹಾಗೂ ಆನಂತರ ಅದೇ ಹೆಸರಲ್ಲಿ ಬಂದ ಪುಸ್ತಕದಿಂದಾಗಿ ಈಕೆ ಬಾರ್ಸಿಲೋನದಲ್ಲಿ ಇದ್ದರೂ, ಬೆಂಗಳೂರೆಂಬ ಮಾಯಾ ನಾಗರಿಯಲ್ಲಿದ್ದರೂ ಈಕೆ ‘ಜಯನಗರದ ಹುಡುಗಿ’ ಮಾತ್ರ.

ಯಂತ್ರಗಳಿಗೆ ಮಾತು ಕಲಿಸುವ Artificial Intelligence ಕ್ಷೇತ್ರದ ಈ ಎಂಜಿನಿಯರ್ ತಂದೆ ಸುಧೀಂದ್ರ ಹಾಲ್ದೊಡ್ಡೇರಿ, ತಾತ, ಖ್ಯಾತ ಪತ್ರಕರ್ತ ಎಚ್ ಆರ್ ನಾಗೇಶರಾವ್ ಅವರಿಂದ ಪಡೆದದ್ದು ಬಹಳಷ್ಟು.

ಪ್ರಸ್ತುತ ಬಾರ್ಸಿಲೋನಾದಲ್ಲಿ ತಾವು ಕೆಲಸ ಮಾಡುತ್ತಿದ್ದ ಅವಧಿಯಲ್ಲಿ ಕಂಡ ನೋಟಗಳ ಚಿತ್ರಣ ಇಲ್ಲಿದೆ.

। ಹಿಂದಿನ ವಾರದಿಂದ ।

ಗೌಹರ್ ಭುಜ ತಟ್ಟಿದ ಮೇಲೆ ಅವಳಿಗೆ ಗೊತ್ತಾಗಿದ್ದು ತಾನು ಪಾರ್ಕಿನಲ್ಲಿ ತಲ್ಲೀನಳಾಗಿದ್ದೇನೆ ಎಂದು. ಮನೆಯೊಡತಿ ಹುಡುಗಿ ಕಾಣೆಯಾಗಿದ್ದಾಳೆಂದು ಗೊತ್ತಾಗಿ ಗೌಹರ್ ಳನ್ನ ಕಳಿಸಿದ್ದಳು ಹುಡುಕಿಕೊಂಡು ಬಾ ಎಂದು. ಇವಳು ಪಾರ್ಕಿಗೆ ಹೋಗಿದ್ದಾಳೆ ಎಂದು ಅರಿತು ಬಂದಿದ್ದಳು.

”ಹಾಗೆ ದಡಬಡ ಓಡಿ ಬಂದರೆ ನಾವು ಏನು ಅಂದುಕೊಳ್ಳಬೇಕು, ಸ್ವಲ್ಪಾನೂ ಪಾರ್ಟಿ ಮ್ಯಾನರ್ಸ್ ಇಲ್ಲ ನಿನಗೆ , ಏನೇ ಆಗಲಿ ಅವರು ನಮ್ಮ ಮನೆಗೆ ಬಂದಿರೋದು ಹಾಗಿದ್ದಾಗ ನಾವು ಸಹ ಹೋಸ್ಟ್ಗಳೇ ಸ್ವಲ್ಪವಾದರೂ ಅವರಿಗೆ ಮರ್ಯಾದೆ ಕೊಡಬೇಕು” ಎಂದು ಉದ್ದಕ್ಕೆ ಭಾಷಣ ಬಿಗಿಯಲು ಶುರು ಮಾಡಿದಳು. “ಆಯ್ತು ಬಿಡು ಏನ್ ಮಾಡಕ್ಕಾಗತ್ತೆ, ನನ್ನ ಕರ್ಮ” ಎಂದುಕೊಂಡು ಗೌಹರ್ ಜೊತೆ ಮನೆಗೆ ನಡೆದುಕೊಂಡು ಬಂದಳು.

ಚೆಂದವಾದ ಪಾರ್ಟಿಯಿಂದ ಹುಡುಗಿ ಹೊರಹೋಗಿದ್ದಕ್ಕೆ ಎಲ್ಲರೂ ಗಾಬರಿಯಿಂದ ನಿಂತಿದ್ದರು. ಆಮೇಲೆ ಒಳಗಡೆ ಬಂದ ಮೇಲೆ ಎಲ್ಲರೂ ಅವಳನ್ನ ವಿಚಾರಿಸಿ ಸಮಾಧಾನ ಮಾಡಿ ಒಳಗೆ ಕರೆದುಕೊಂಡು ಹೋದರು.  ಪಾರ್ಟಿಯೆಲ್ಲ ಆದಮೇಲೆ ಬಂದ ಹುಡುಗಿಯರು ಎಲ್ಲಾ ಸ್ವಚ್ಚ ಮಾಡಿ ಹೋದರು.

ಅಬ್ಬಬ್ಬಾ ಪರವಾಗಿಲ್ಲ ಇಲ್ಲಿ ಜನಕ್ಕೆ ಅದೆಷ್ಟು ಸಭ್ಯತೆ, ನಮ್ಮ ಜನರು ಹೇಗೆ ಕಂಡವರ ಮನೆಗೆ ಬಂದು ಪಕ್ಕದಲ್ಲಿ ಡಸ್ಟ್ ಬಿನ್ ಇದ್ದರೂ ಕಿಟಕಿಯಲ್ಲಿ ಲೋಟ ತಟ್ಟೆ ಇಟ್ಟು ಬಂದವರ ಮನೆಯನ್ನ ಅದೆಷ್ಟು ಗಲೀಜು ಮಾಡುತ್ತಾರೆ ಎಂದುಕೊಂಡೇ ಹಾಸಿಗೆ ಮೇಲೆ ಬಿದ್ದುಕೊಂಡಳು. ಟಕ್ ಎಂದು ಶಬ್ದ ಬಂತು. “ಏನಪ್ಪಾ” ಎಂದು ಎದ್ದು ನೋಡಿದರೆ ಕರೆಂಟು ಹೋಯ್ತು.

ಕರ್ಮ ಇವತ್ತು ದಿನಾನೆ ಸರಿ ಇಲ್ಲ ಎಂದು ಆಚೆಕಡೆ ಬಂದರೆ ಜೋರಾಗಿ ಓನರ್ ಯಾರ ಹತ್ತಿರವೋ ಜಗಳ ಆಡುತ್ತಿದ್ದಳು. ಕೈಯಲ್ಲಿ ಕಟಿಂಗ್ ಪ್ಲೇಯರ್ ಹಿಡಿದುಕೊಂಡು ಅಲ್ಲಿ ಒಂದು ವೈರ್ ಕಟ್ ಮಾಡಿದ್ದ. ಅಂದರೆ ಅದು ನಮ್ಮ ಮನೆಯ ಪವರ್ ಕಟ್ ಮಾಡಿದ್ದಾನೆ, ನೆಮ್ಮದಿಯಾಗಿ ಮಲಗಿಕೊಳ್ಳಲು ಆಗುವುದಿಲ್ಲವಲ್ಲ ಎಂದು ಬೈದುಕೊಂಡು “ಇದು ಅನ್ಯಾಯ ನೀನು ಪವರ್ ತೆಗೆದ್ದದ್ದು” ಎಂದು ತಾನೆ ಹುಡುಗಿ ಜಗಳವಾಡಲು ಹೋದಳು.

ಅವನು “ಮೂರು ತಿಂಗಳ ಬಿಲ್ ಕಟ್ಟಿಲ್ಲ, ಅದು ಇಷ್ಟು ಜನ ಬೇರೆ ಇದ್ದೀರಿ ನಿಮಗೆ ಬಾಡಿಗೆಯಲ್ಲಿ ದುಡ್ಡು ಹಿಡಿದಿದ್ದರೆ ಅದನ್ನೆಲ್ಲಾ ನೀವು ಕೋರ್ಟ್ ಕೇಸ್ ಹಾಕಿ ತೆಗೆದುಕೊಳ್ಳಬಹುದು” ಎಂದು ಬಡಬಡಿಸಿ ಒಂದು ನೋಟಿಸ್ ಅಂಟಿಸಿ ಹೋದ.

ಬಿಲ್ ಬಂದ ದಿವಸವೇ ಅದಕ್ಕೆ ಸರಿಯಾದ ಚಿಲ್ಲರೆ ಇಟ್ಟು ಕಟ್ಟುತ್ತಿದ್ದ ತಾತ, ಒಂದು ಮೈಲಿ ದೂರ ಕರೆಂಟ್ ಬಿಲ್ ಕಟ್ಟುವ ಜಾಗ ಇದ್ದರೂ ಸಮ್ಜೆ ಮುಂಚೆ ಹೋದರೆ ಕಡಿಮೆ ಜನ ಇರುತ್ತಿದ್ದರು ಹೋಗುತ್ತಿದ್ದ ಹುಡುಗಿಯ ಅಮ್ಮನ ನೆನೆದು ಇಂತಹ ಕಚಡಾ ಮನೆಗೆ ಬಂದೆ ಎಂದು ಮನೆಯೊಡತಿಯ ಕಡೆಗೆ ದುರುಗುಟ್ಟಿಕೊಂಡು ನೋಡಿದಳು. ಅವಳು ಕಣ್ಣು ಬಿಡುತ್ತಿದ್ದಳು.

“ನಡಿ ಒಳಗೆ” ಎಂದು ಎಲ್ಲರನ್ನು ಒಳಗಡೆ ಕರೆದುಕೊಂಡು ಹೋದ ಹುಡುಗಿ, “ಕರೆಂಟ್ ಬಿಲ್ ಹಾಳಾಗಿ ಹೋಗಲಿ, ನಮ್ಮ ದುಡ್ಡೇನಾಯಿತು, ಒಂದನೇ ತಾರೀಖಾಗಲ್ಲಿಲ್ಲ, ಬಂದು ಬಾಡಿಗೆ ಇಸ್ಕೋತಿದ್ದೆ, ಅದು ಯೂಸ್ ಮಾಡಬೇಡ, ಇದು ಯೂಸ್ ಮಾಡಬೇಡ ಎಂದು ದೊಡ್ಡ ಪಟ್ಟಿ ಕೊಡುತ್ತಿದ್ದೆ, ಕರೆಂಟು ಕಡಿಮೆ ಯೂಸ್ ಮಾಡು ಎಂದು ಪಾಠ ಮಾಡುತ್ತಿದ್ದೆ, ಮೂರು ತಿಂಗಳು ಜಾಸ್ತಿ ದುಡ್ಡು ತೆಗೆದುಕೊಂಡೆಯಲ್ಲ , ಏನಾಯಿತು, ಮನೆಗೆ ಏನು ತೆಗೆದುಕೊಂಡು ಬಂದೆ, ಇಲ್ಲಾ ಯಾವ ಟ್ರಿಪ್ಪಿಗೆ ಹೋದೆ” ಎಂದು ಕಿರುಚಾಡೋದಕ್ಕೆ ಶುರು ಮಾಡಿದಳು.

ಶೋಕಿ ಮಾಡುವುದು ಜೀವನದ ಅತ್ಯಂತ ಮುಖ್ಯ ಕೆಲಸ ಎಂದು ಇದ್ದ ಈ ಮೆನೆಯೊಡತಿಗೆ ಯಾವುದೇ ಪ್ರಿಯಾರಿಟಿ ಇರುತ್ತಿರಲ್ಲಿಲ್ಲ. ಬೇಕಾದ ಹಾಗೆ ಬೇಕೆಂದ ಕಡೆ ತಿರುಗೋದು ತಿಂಗಳ ಕೊನೆಯಾದ ಮೇಲೆ ಕೈಸಾಲ ಮಾಡೋದು ಇವೆಲ್ಲ ಅವಳ ಕಲೆ. ಒಂದು ಸಾವಿರ ಲಿಪ್ ಸ್ಟಿಕುಗಳು ಅದು ಇದು ಎಲ್ಲವೂ ಅವಳ ಹತ್ತಿರ ಇರುತ್ತಿತ್ತು. ಕೆಂಪು ಬಣ್ಣದ್ದೇ 423 ಲಿಪ್ ಸ್ಟಿಕ್ಕುಗಳು ಅವಳ ಬಳಿ ಇತ್ತು. ಇಂಥದ್ದೇ ಏನೋ ಮಾಡಿಕೊಂಡಿರಬೇಕು ಎಂದು ಗದರಿ ಕೇಳಿದರೆ, “ನನ್ನ ಮೋಕ್ಷಕ್ಕೆ ಕೊಟ್ಟೆ” ಎಂದು ಹೇಳಿದಳು.

“ಏನು ಇನ್ನೊಮ್ಮೆ ಹೇಳು” ಎಂದಳು ಹುಡುಗಿ, “ನಾನು ಸ್ವರ್ಗಕ್ಕೆ ಹೋಗಬೇಕು ಸತ್ತ ಮೇಲೆ, ಅದಕ್ಕೆ ಈ ಸೆಕ್ಟ್ ನ ಫಾಲೋ ಮಾಡಿದರೆ ನಮ್ಮನ್ನ ನೇರ ಸ್ವರ್ಗಕ್ಕೆ ಕಳಿಸುವ ಏರ್ಪಾಡು ಮಾಡುತ್ತಾರಂತೆ, ಅವರು ಹೇಳುವ ಪಾಠಗಳನ್ನ ಕಲಿಯೋದಕ್ಕೆ ಹೋದೆ, ಅದು ತುಂಬಾ ಫೀಸ್ ಇರುವ ಕೋರ್ಸು” ಎಂದು ಹೇಳಿದಾಗ ಹುಡುಗಿಗೆ ತೆಗೆದು ಬಿಡೋಣ ಅನ್ನಿಸಿತು.

“ಸ್ವರ್ಗ ಹೋಗುವುದಿಲ್ಲ, ನರಕ ಬರುವುದು ಇಲ್ಲ;
ಸ್ವರ್ಗ ನರಕಗಳೇನು ಶಾಸ್ತ್ರಸ್ಥವಲ್ಲ.
ಎದೆಯ ದನಿ ಧರ್ಮನಿಧಿ! ಕರ್ತವ್ಯವದುವೆ ವಿಧಿ !

ನಂಬದನು; ಅದನುಳಿದು ಋಷಿಯು ಬೇರಿಲ್ಲ !” ಎಂದು ರಾಷ್ಟ್ರಕವಿ ಕುವೆಂಪು ಹೇಳಿದ್ದನ್ನು ಮನೆಯೊಡತಿಗೆ ವಿವರಿಸಿ ಹೇಳುವ ಎಂದು ಯೋಚನೆ ಮಾಡಿ ಈ ಹೆಡ್ಡಳಿಗೆ ಕುವೆಂಪು ಎಂಬ ದಾರ್ಶನಿಕರ ಮಾತು ನಯಾಪೈಸೆ ಅರ್ಥವಾಗುವುದಿಲ್ಲ ಎಂದು ತಲೆಚೆಚ್ಚಿಕೊಂಡು , “ಎಲ್ಲಿ ಯಾವುದು ಇದು ಕರ್ಮ” ಎಂದು ದೊಡ್ಡ ಧ್ವನಿಯಲ್ಲೇ ಕೇಳಿದಳು, ಒಂದು ದೊಡ್ಡ ಪಾಂಪ್ಲೆಟ್ ತೋರಿಸಿದಳು, ಒಂದು ದಿಗಂತಕ್ಕೆ ಒಬ್ಬ ಬಿಳಿ ಬಟ್ಟೆ ಹಾಕಿಕೊಂಡು ನಡೆಯುತ್ತಿರುವ ಫೋಟೋ.

“ಏನು ಹೆಸರು, ಯಾವ ಧರ್ಮದವನು ಇವನು” ಎಂದು ಹುಡುಗಿ ಕೇಳಿದರೆ, “ಈ ಧರ್ಮಕ್ಕೆ ಹೆಸರಿಲ್ಲ, ನಾನು ಕ್ರಿಸ್ಚಿಯನ್ ಅಲ್ಲ, ಹಿಂದೂನೂ ಅಲ್ಲ, ಮುಸ್ಲಿಮ್ ಅಲ್ಲ, ಬುದ್ಧಿಸ್ಟ್ ಅಲ್ಲ, ಜ್ಯೂ ಅಲ್ಲ, ಆದರೂ ನಾನು ದೇವರನ್ನ ನಂಬುತ್ತೇನೆ ಅವನು ಜೀಸಸ್ ಅಲ್ಲ, ಕೃಷ್ಣ ಅಲ್ಲ, ಏಸು ಅಲ್ಲ, ಬುದ್ಧ ಅಲ್ಲ” ಎಂದು ಐಲುಐಲಾಗಿ ಮಾತಾದಲು ಶುರುಮಾಡಿದಳು. “ನಿಮ್ಮ ದೇವರಿಗೆ ಹೆಸರೇ ಇಲ್ವಾ, ಇದನ್ನ ನಡೆಸುತ್ತಿರೋನು ಯಾರು?” ಎಂದು ಗೌಹರ್ ಬಹಳ ಗಂಭೀರವಾಗಿ ಕೇಳಿದಳು.

“ಹೆಸರಿಲ್ಲದ ದೇವರು, ಒಟ್ಟಿನಲ್ಲಿ ಗಾಡ್ ಅಷ್ಟೆ” ಎಂದಳು. “ಸರಿ ಅದಕ್ಕೆ ಒಬ್ಬೊಬ್ಬರಿಂದ ನೀನು ಪ್ರತಿ ತಿಂಗಳು 50 ಯುರೋ ಕರೆಂಟಿಗೆ ಅಂತ ಇಸಿದುಕೊಂಡಿದ್ದೆ, ಅಂದರೆ ನಾವು ನಾಲ್ಕು ಜನ 200 ಯುರೋ 3  ತಿಂಗಳಿಗೆ ಒಟ್ಟೂ 600 ಯುರೋ ಕೊಟ್ಟಿದ್ದೀಯ, ಸ್ವರ್ಗಕ್ಕೆ ಹೋಗೋದಕ್ಕೆ ಇನ್ನೆಷ್ಟು ಯೂರೋ ಬೇಕು ನಿನಗೆ, 600 ಯುರೋಗೆ ಎಷ್ಟು ಮೆಟ್ಟಿಲು ಹತ್ತಿದ್ದೀಯಾ?” ಎಂದು ಗದರಿಸಿ ಕೇಳಿದಾಗ “ವರ್ಷಕ್ಕೆ 2400 ಯುರೋ ಕಟ್ಟಬೇಕು, ಅದು ಹತ್ತು ವರುಷ ಅದಾದ ಮೇಲೆ ನಾವು ನಾಲ್ಕು ಜನರನ್ನ ಇಂಥದಕ್ಕೆ ಸೇರಿಸಿದರೆ ಆಯ್ತು, ನಮಗೆ ಸ್ವರ್ಗ ಪ್ರಾಪ್ತವಾಗುವುದು ಗ್ಯಾರೆಂಟಿ” ಎಂದು ಬಹಳ ಉತ್ಸಾಹದಿಂದ ಹೇಳಿದಳು.

“ಗ್ಯಾರೆಂಟಿನಾ?ಅದು ಹೇಗೆ, ಅದೆಷ್ಟು ಜನ ಸ್ವರ್ಗಕ್ಕೆ ಹೋಗಿದ್ದಾರೆ, ಹೋದವರಿಂದ ಕನ್ಫರ್ಮೇಷನ್ ಬಂದಿದಿಯಾ, ಅಕಸ್ಮಾತ್ ನೀನು ದುಡ್ಡು ಅರ್ಧ ಕಟ್ಟಿದರೆ ನಿನಗೆ ಅರ್ಧ ಸ್ವರ್ಗ ತೋರಿಸುತ್ತಾರಾ?” ಎಂದು ಇದ್ದ ಬದ್ದ ಪ್ರಶ್ನೆಯನ್ನೆಲ್ಲ ಕೇಳಿ ಅವಳನ್ನ ತಬ್ಬಿಬ್ಬುಗೊಳಿಸಿದರು. ಅವಳಿಗೆ ತಲೆ ಸುತ್ತು ಬಂದು. “ಓಹ್ ಗಾಡ್” ಎಂಬ ಇನ್ನ್ಯಾವುದೋ ಭಾಷೆಯಲ್ಲಿ ಪ್ರಾರ್ಥನೆ ಮಾಡಿಕೊಳ್ಳಲು ಪ್ರಾರಂಭಿಸಿದಳು.

ಗೌಹರ್ ಮಾತ್ರ, “ಇವಳಿಗೆ ಇವತ್ತೇ ನಾನು ಜನ್ನತ್ ತೋರಿಸುತ್ತೀನಿ” ಎಂದು ಕುಪಿತಗೊಂಡು ಎರಡು ಬಿಡೋದಕ್ಕೆ ಹೋದಳು. ಹುಡುಗಿ ಸುಧಾರಿಸಿ, “ನೀನು ಸ್ವರ್ಗಕ್ಕೆ ಹೋಗ್ತಿಯೋ ನರಕಕ್ಕೆ ಹೋಗ್ತಿಯೋ ಅವೆಲ್ಲ ನನಗೆ ಬೇಕಾಗಿಲ್ಲ, ಮೊದಲು ಮನೆಗೆ ಕರೆಂಟು ಬರಬೇಕು, ಆಮೇಲೆ ನಮ್ಮ ದುಡ್ಡು ವಾಪಸ್ಸು ಬರಬೇಕು, ಆಮೇಲೆ ಎಲ್ಲಾದ್ರು ಹೋಗ್ ಸಾಯಿ, ಇಲ್ಲದಿದ್ದ್ರೆ ನೀನು ಇವತ್ತು ಜೈಲಿಗೆ ಹೋಗ್ತಿಯಾ” ಎಂದು ಹುಡುಗಿ ಮತ್ತು ಮನೆಯಲ್ಲಿರುವ ಎಲ್ಲರೂ ಗಲಾಟೆ ಎಬ್ಬಿಸಿದರು.

ಪಕ್ಕದ ಮನೆಯವರು ಇದಕ್ಕೆ ಧ್ವನಿಗೂಡಿಸಿದರು. ಓದೋ ಮಕ್ಕಳನ್ನ ಮನೆಯಲ್ಲಿಟ್ಟುಕೊಂಡು ಏನಿವರ ಪುಂಡಾಟಿಕೆ  ಎಂದು ಬೈದು ಕರೆಂಟು ಬಿಲ್ಲು ಕಟ್ಟಿ ಬಾ ಎಂದು ಬೈದರು. ಥೇಟ್ “ಗಣೇಶನ ಮದುವೆ” ಸಿನಿಮಾದಲ್ಲಿ ರಮಣ ಮೂರ್ತಿ ಆಡಿದಂಗೆ, “ಇಲ್ಲಪ್ಪ ನನ್ನ ಹತ್ತಿರ ಕಾಸೇ ಇಲ್ಲ”ಎಂದು ಕೈಯಾಡಿಸುವಾಗ, ಹುಡುಗಿಗೂ ಮನೆಗೆ ಒಂದು ನಾಯಿ ತಂದು ಅದಕ್ಕೆ ಮನೆಯೊಡತಿಯ ಹೆಸರಿಟ್ಟು, ಬಾಯಿಗೆ ಬಂದ ಹಾಗೆ ಬೈಯ್ಯುವ ಆಸೆಯಾಯಿತು ಆದರೆ ತಡೆದುಕೊಂಡು, “ನನಗೀಗ ಪವರ್ ಬೇಕು” ಅಷ್ಟೇ ಎಂದು ಕಿರುಚಿದಳು.

ಅಲ್ಲಿಗೆ ಮನೆಯೊಡತಿ ಇನ್ನು ತನ್ನ ಕೊಲೆಯಾಗುತ್ತದೆ ಎಂದು ಹೆದರಿ ಪರ್ಸಿನಲ್ಲಿದ್ದ ಅಷ್ಟು ಇಷ್ಟು ದುಡ್ಡನ್ನು ತೆಗೆದುಕೊಂಡು ಹೋಗಿ ಬಿಲ್ ಕಟ್ಟಲು ತಯಾರಾದಳು. “ಬಿಲ್ ಕಟ್ಟಿ ರಸೀತಿ ತೋರಿಸಬೇಕು” ಎಂದು ಮನೆಯಾಚೆಯೇ ನಿಂತಿದರು.

ಗೌಹರ್ ಮಾತ್ರ, “ತಡಿ ನಾನೂ ಹೋಗಿ ಬರುತ್ತೇನೆ, ಆಮೇಲೆ ಅಲ್ಲಿಂದ ಎಸ್ಕೇಪ್ ಆದರೆ ಕಷ್ಟ” ಎಂದು ತಾನೂ ಹೊರಟು ನಿಂತಳು, ಹುಡುಗಿಯೂ ಇರು ನಾನು ಬರುತ್ತೇನೆಂದು ಹೊರಟಳು. ಪಕ್ಕದ ರಸ್ತೆಯಲ್ಲಿದ್ದ ಕಂಪೆನಿಗೆ ದುಡ್ಡು ಕಟ್ಟಿ ರಸೀತಿ ತೆಗೆದುಕೊಂಡು, ಆನ್ಲೈನಿನ ಬ್ಯಾಂಕ್ ಲಿಂಕಿಗೆ ಅರ್ಜಿಯನ್ನು ಬಲವಂತವಾಗಿ ಬರೆಸಿ ಸೈನ್ ಮಾಡಿಸಿದರು.

“ಇನ್ನು ಮುಂದೆ ಬಾಡಿಗೆ ದುಡ್ಡನ್ನ ಬ್ಯಾಂಕಿಗೆ ಮಾತ್ರ ಹಾಕೋದು “ ಎಂದು ಬೈದು ಮನೆಗೆ ಬಂದರು. … ಮನೆಗೆ ಕಾಲಿಟ್ಟಾಕ್ಷಣ ಫಳಕ್ ಎಂದು ಬಲ್ಬು ಹತ್ತಿಕೊಂಡಿತು. “ನೀನು ನಿನ್ನ ದೇವರು ನಿನ್ನ ದೇಶವನ್ನು ಕಾಪಾಡಲಿ, ಜೈ ಬಾರ್ಸಿಲೋನಾ” ಎಂದು ಘೋಷಣೆ ಕೂಗಿ ಹುಡುಗಿ ಮತ್ತು ಗೌಹರ್ ಮನೆಗೆ ಕಾಲಿಟ್ಟರು.

| ಮುಂದಿನ ವಾರಕ್ಕೆ ।

October 10, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: