ಹಿಂಸೆಯ ನಾವೆಯೊಳಗೆ ಅಹಿಂಸೆಯ ಪೂಜಾರಿ…

ಡಾ ರಾಜಶೇಖರ ಮಠಪತಿ (ರಾಗಂ)

1947, ಸೆಪ್ಟೆಂಬರ್ 11ರ ಪ್ರಮುಖ ಭೆಟ್ಟಿಯೇ ದೆಹಲಿಯ ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯ, ಮಾನವ ಕಾಳಜಿಗಳ ಡಾ. ಜಕೀರ್ ಹುಸೇನ್ ಕೋಮು ಗಲಭೆಯ ದಾಳಿಗೆ ಒಳಗಾಗಿದ್ದರು. ಗಾಂಧಿಗೆ ಅವರನ್ನು ಭೆಟ್ಟಿಯಾಗಿ ಸಂತೈಸುವ ಬಯಕೆ. ಆದರೆ ಈಗಾಗಲೇ ಸಾಕಷ್ಟು ಹಿಂದುಗಳ ಕೆಂಗಣ್ಣಿಗೆ ಗುರಿಯಾಗಿದ್ದ ಗಾಂಧಿ ಹುಸೇನರನ್ನು ಭೇಟಿಯಾಗುವದು ಆಗಿರಲಿಲ್ಲ, ಅನೇಕ ನಾಯಕರಿಗೆ ಇದು ಸ್ವಾಗತನೀಯವೂ ಆಗಿರಲಿಲ್ಲ. 

ಡಾ. ಝಕೀರ್ ಹುಸೇನ್ ಪಂಜಾಬದ ಜಲಂಧರಗೆ ಭೆಟ್ಟಿಕೊಟ್ಟಿದ್ದರು. ಜಲಂಧರನಿಂದ ಹೊರಟು ದೆಹಲಿಗೆ ಬರುವ ಮಾರ್ಗಮಧ್ಯದಲ್ಲಿ ಅವರ ಕುರಿಗಡ್ಡ, ಶೇರವಾನಿ ಟೋಪಿಯನ್ನು ನೋಡುತ್ತಲೇ ಮುಸ್ಲಿಂನೆಂದು ಸಿಖ್ ಮತಾಂಧ ಯುವಕರು ಝಕೀರ ಹುಸೀನ್‌ ಮೇಲೆ ಮಾರಣಾಂತಿಕ ದಾಳಿಯನ್ನು ಮಾಡಿದರು. ಸಾವಿನೊಂದಿಗೆ ಇವನ್ನೊಬ್ಬ ಮುಖಾಮುಖಿಯಾಗಿ ನಿಂತ ಆ ಕ್ಷಣದಲ್ಲಿ ಝಕೀರ ಹುಸೇನ್‌ರಿಗೆ ಬದುಕು ದುಗ್ಗಾಣಿ ಬೆಲೆಯೂ ಇಲ್ಲದ ವಸ್ತು ಅನಿಸಿತು. ಆದರೆ ಅದು ಎಲ್ಲಿಂದ ಬಂದರೋ ಒಬ್ಬ ಸಿಖ್ ಕ್ಯಾಪ್ಟನ್, ಇನ್ನೊಬ್ಬ ಹಿಂದು ರೇಲ್ವೆ ಅಧಿಕಾರಿ, ದಾಳಿಕೋರರಿಂದ ಝಕೀರ್ ಹುಸೇನರನು ಮುಕ್ತ ಮಾಡಿ ಸಾವಿಗೆ ಎದೆಯೊಡ್ಡಿ ನಿಂತರು. ಹುಸೇನ್ ಮುಸ್ಲಿಂರಲ್ಲ. ಅವರೊಬ್ಬ ಮಾನವತಾವಾದಿ, ಅವರನ್ನು ಕೊಲ್ಲಲೇಬೇಕು ಎನ್ನುವವರು ನಮ್ಮನ್ನು ಕೊಂದೇ ಮುಂದೆ ಹೋಗಬೇಕೆಂದು ಸಾವಿನ ಮುಖಕ್ಕೆ ಹೊಡೆದಂತೆ ಮಾತನಾಡಿದರು. ಹೀಗೆ ಪ್ರಾಣಾಪಾಯದಿಂದ ಪಾರಾಗಿ ಸಣ್ಣಪುಟ್ಟ ಗಾಯಗಳೊಂದಿಗೆ ತಾವು ಬದುಕಿ ಬಂದ ಕಥೆಯನ್ನು ಝಕೀರ್ ಹುಸೇನ್ ಗಾಂಧಿಯ ಮುಂದಿಡುತ್ತಿದ್ದರು. ಅವರಿಗೂ ಅದೇ ದ್ವಂದ್ವ ಗಾಂಧೀಯ ಮುಂದೆ ಝಕೀರ್ ಕೇಳುವ ಪ್ರಶ್ನೆಗಳು ಗಾಂಧಿಯ ಪ್ರಶ್ನೆಗಳೇ, ಮನುಷ್ಯ ಮನುಷ್ಯನನ್ನು ಕೊಲ್ಲುವಷ್ಟು ಕ್ರೂರಿ ಯಾಕಾಗುತ್ತಾನೆ ಬಾಪು? ಸಾಯುವವನು ಹಿಂದುವೂ ಮುಸ್ಲಿಂನೋ? ಅಥವಾ ಸಿಖ್‌ನೋ? ಆದರೆ ಸಾವಿನ ದಾರುಣತೆ ಒಂದೇ ಅಲ್ಲವೆ? ನೆಲದಲ್ಲಿ ಉಳಿದ ಅಲ್ಪಸ್ವಲ್ಪ ಸಂಸ್ಕೃತಿಯೂ ಕೂಡ ಹೀಗೇಕೆ ಮಣ್ಣಾಗುತ್ತಿದೆ? ಝಕೀರರ ಈ ಗಾಂಧಿಯ ಪ್ರಶ್ನೆಗಳಷ್ಟೇಯಲ್ಲ ಪ್ರತಿಯೊಬ್ಬ ಮನುಷ್ಯನ ಪ್ರಶ್ನೆಗಳು.

ಗಾಂಧಿ, ಇಲ್ಲೊಂದು ತನ್ನ ತಪ್ಪು ಗ್ರಹಿಕೆಯನ್ನು ಸರಿಪಡಿಸಿಕೊಳ್ಳಲು ಯತ್ನಿಸುತ್ತಾನೆ. ಆತನಿಗೆ ಗೊತ್ತಿದೆ ಬ್ರಿಟಿಷ್ ಆಗಮನಕ್ಕೂ ಪೂರ್ವದಿಂದಲೂ ಭಾರತದ ಇತಿಹಾಸದಲ್ಲಿ ಹಿಂದೂ, ಮುಸ್ಲಿಂ, ಸಿಖ್‌ರು ಸಾಮರಸ್ಯದಿಂದ ಬಾಳಿದ ಉದಾಹರಣೆಗಳಿವೆ. ಈ ಎರಡೂ ಧರ್ಮಗಳು ಸೇರಿಕೊಂಡೇ ಹೊಸ ಆಲೋಚನೆಗಳಿಗೆ ಹುಟ್ಟು ನೀಡಿದ ಸಂದರ್ಭಗಳಿವೆ. ಬಹುತೇಕ ಬ್ರಿಟೀಷ್ ಆಡಳಿತವೇ ಭಾರತದಲ್ಲಿ ಹಿಂದೂ-ಮುಸ್ಲಿಂರ ಮಧ್ಯದ ತಿಕ್ಕಾಟಗಳಿಗೆ ಕಾರಣವಾಗಿದೆ. ಬ್ರಿಟಿಷ್‌ರು ಈ ದೇಶವನ್ನು ಬಿಟ್ಟು ತೊಲಗಿದ ಮರುಕ್ಷಣದಿಂದಲೇ ಹಿಂದೂ-ಮುಸ್ಲಿಂರು ಸಹೋದರರಂತೆ ಬಾಳುತ್ತಾರೆ ಎನ್ನುವ ತನ್ನ ನಂಬಿಕೆಯನ್ನು ಗಾಂಧಿ ಸಂಪೂರ್ಣ ಕಳೆದುಕೊಂಡಿದ್ದಾನೆ. ಇತಿಹಾಸದ ತನ್ನ ಗ್ರಹಿಕೆ ಬಹಳ ತಪ್ಪಾಗಿತ್ತು ಎನ್ನುವ ಸಾಮಾಜಿಕ ಅರಾಜಕತೆ ತನ್ನ ಎದುರೇ ನಿಂತುಕೊಂಡಿದೆ. ಈಗ ಗಾಂಧಿಗೆ ಕಾಡುವ, ಮತ್ತೆ ಮತ್ತೇ ಪೀಡಿಸುವ ಪ್ರಶ್ನೆಗಳೆಂದರೆ ಪಾಕಿಸ್ಥಾನದ ನಿರ್ಮಾಣದ ನಂತರವೂ, ನೌಕಾಲಿ ಕಲ್ಕತ್ತಾ, ದೆಹಲಿ ಮತ್ತು ಅಮೃತಸರಗಳಲ್ಲಿ ಸಾವಿರಾರು ಹಿಂದೂ-ಮುಸ್ಲಿಂರ ಕೊಲೆಯ ನಂತರವೂ, ಒಂದು ಸಹಜ ಶಾಂತಿ ಈ ಸಮಾಜದಲ್ಲಿ ಏಕೆ ಸಾಧ್ಯವಾಗುತ್ತಿಲ್ಲ? ಹಾಗಾದರೆ ಇದು ಸತ್ಯ ಎನ್ನುವುದಾದರೆ ಇತಿಹಾಸದ ತನ್ನ ಅರ್ಥೈಸಿಕೊಳ್ಳುವಿಕೆ ತಪ್ಪಾಗಿತ್ತೆ? ಗಾಂಧಿಗೆ ಏನೊಂದೂ ಅರ್ಥವಾಗುತ್ತಿಲ್ಲ.

ಸೆಪ್ಟೆಂಬರ್ 12 ರಂದು ಗಾಂಧಿ ದೆಹಲಿಯ ಅನೇಕ ನಾಯಕರನ್ನು ಬೆಟ್ಟಿಯಾದರು. ಪ್ರಮುಖವಾಗಿ ಗವರ್ನರ್ ಜನರಲ್, ಪ್ರಧಾನಿ, ಹಣಕಾಸು ಮಂತ್ರಿ ಶ್ರೀ ಆರ್. ಎಸ್. ಷಣ್ಮುಖಂ ಶೆಟ್ಟಿ, ಡಾ. ರಾಮಮನೋಹರ್ ಲೋಹಿಯಾ, ಲಾರ್ಡ್ ಲಿಸ್ಟ್ ವೆಲ್, ಮಿಸ್ಟರ್ ಚೌಹೀದ ಹುಸೇನ ಹಾಗೂ ಕರಾಚಿಯ ಕಮೀಷನರ್- ಎಲ್ಲರನ್ನೂ ಗಾಂಧಿ ಸಂದರ್ಶಿಸಿದ್ದ, ನಿರಾಶ್ರಿತರು ತಮ್ಮ ತಮ್ಮ ಸ್ಥಳಗಳಿಗೆ ಮರಳಿ ಹೋಗಲೇಬೇಕು ಅನುರೋಧಿಸಿದ. ಆದರೆ ಆತನ ಮಾತುಗಳೆಲ್ಲ ಗಾಳಿಗಿಟ್ಟ ದೀಪಗಳಂತಾಗಿತ್ತು. ಜುಮ್ಮಾ ಮಸಜೀದ್ ಪಕ್ಕದಲ್ಲಿ ಮೂವತ್ತು ಸಾವಿರಕ್ಕೂ ಹೆಚ್ಚು ನಿರಾಶ್ರಿತರು ಬಂದು ನೆಲೆಸಿಯಾಗಿತ್ತು. ಇವರ ಮಧ್ಯ ಸಾಗಿಹೋಗಿ ಅವರ ನೋವು ನಲಿವುಗಳನ್ನು ಕೇಳುವದು ಗಾಂಧಿಯ ಇಚ್ಛೆಯಾಗಿತ್ತು. ಆದರೆ ಪೊಲೀಸ್ ಅಥವಾ ಮಿಲಿಟರಿ ರಕ್ಷಣೆಯಿಲ್ಲದೇ ಗಾಂಧಿ ಒಬ್ಬನನ್ನೇ ಒಂಟಿಯಾಗಿ ಅಲ್ಲಿಗೆ ಕಳುಹಿಸುವ ಇಚ್ಛೆ ಪ್ರಧಾನಿ ನೆಹರೂಗೆ ಇರಲಿಲ್ಲ.

ಸೇರಿದ ಜನಸಾಗರದ ಮಧ್ಯ ಎಷ್ಟೊಂದು ಧಾರುಣ ಚಿತ್ರಗಳು! ಮನುಷ್ಯ ಕ್ರೌರ್ಯದ ಮುಂದೆ ಮನುಷ್ಯನ ಬಾಳಿನ ವಿಶ್ವಾಸ ನಲುಗಿ ಹೋಗಿತ್ತು. ಯಾರೋ ಅಳುತ್ತಿದ್ದಾರೆ, ಇನ್ನಾರೋ ಎದೆ ಬಡಿದುಕೊಂಡು ಕೂಗುತ್ತಿದ್ದಾರೆ. ಮತ್ತೆ ಕೆಲವರು ಕೈ ಮುಗಿದುಕೊಂಡು ನಿಂತಿದ್ದಾರೆ. ಹಲವರು ಬಂದು ಗಾಂಧಿ ಕಾಲುಗಳಿಗೆ ಎರಗುತ್ತಾರೆ. ಬದುಕನ್ನೇ ಮುರಿದುಕೊಂಡ ವ್ಯಕ್ತಿಯೊಬ್ಬ ಹೇಳಿದ “ಕಳೆದ ಅನೇಕ ದಿನಗಳಿಂದ ಹೊಟ್ಟೆ ಖಾಲಿಯಿದೆ. ಈ ಕೊರೆವ ಛಳಿಯಲ್ಲಿ ಹೊದ್ದುಕೊಳ್ಳಲು ತುಂಡು ಬಟ್ಟೆಯೂ ಇಲ್ಲ. ನಮ್ಮ ಮಕ್ಕಳಿಗೆ ಕುಡಿಯಲು ನೀರು ಸಿಗುತ್ತಿಲ್ಲ. ನಮ್ಮ ಹೆಂಡಂದಿರು ನಮ್ಮ ಬಳಿಯಲ್ಲಿ ಇಲ್ಲ. ನಾವೇನು ಮಾಡಬೇಕು? ಸಾವು ಈ ಬದುಕಿಗಿಂತಲೂ ಉತ್ತಮವೆನಿಸುತ್ತದೆ.” ಗಾಂಧಿ ಎಲ್ಲದಕ್ಕೂ ಮೌನವಾಗಿದ್ದ. ಒಂದು ಸಾಂತ್ವನ ಭರಿತ ನೋಟ, ಮಾತು, ಸ್ಪರ್ಶ, ಮತ್ತು ಪ್ರಾರ್ಥನೆ ಎಲ್ಲ ರೋಗಗಳಿಗೂ ಅವನ ಬಳಿಯಿದ್ದ ಔಷಧಿಯಷ್ಟೇ. 

ಗಾಂಧಿ ಎಲ್ಲಿಯೂ ನಿಲ್ಲುವಂತಿರಲಿಲ್ಲ. ಅಹಿಂಸೆಯ ಪೂಜಾರಿ ಹಿಂಸೆಯ ಕಡಲಿನಲ್ಲಿಯೇ ಯಾತ್ರೆಯನ್ನು ಮುಂದುವರೆಸಬೇಕಾಗಿತ್ತು. ಈಗ ಆತ ನಿಜಾಮನ ವಾಸ್ತವ್ಯವಿರುವ ಕನ್ನಾಟ್ ಸರ್ಕಸ್ ಪ್ರದೇಶಕ್ಕೆ ಬಂದ. ಅದೊಂದು ರೀತಿಯಲ್ಲಿ ದೆಹಲಿ ಸತ್ತ ಅಥವಾ ಸಾಯುತ್ತಿರುವ ರೀತಿಗೊಂದು ಸಾಕ್ಷಿಯಾದ ಪ್ರದೇಶ. ಎಲ್ಲಿ ನೋಡಿದರಲ್ಲಿ ಷೋಲಿಸರು, ಸೈನಿಕರು, ನಿರ್ಜನವಾದ ರಸ್ತೆಗಳು, ಸುಟ್ಟಬಾಗಿಲುಗಳು, ರಸ್ತೆಯ ತುಂಬಾ ಗಾಜಿನ ಚೂರುಗಳು ಇವೆಲ್ಲ ಮಹಾನ್ ಭಾರತೀಯರ ವಿಕೃತಿಯ ಕಥೆಯನ್ನು ಸಾರುವಂತಿದ್ದವು. ಗಾಂಧಿ ಈಗ ಅವರ ಪಾಲಿನ ಆಶಾಕಿರಣ. ತಮ್ಮ ಸರಂಜಾಮುಗಳೊಂದಿಗೆ ಬದುಕಿಗಾಗಿ ಒಂದು ನಿಶ್ಚಿತ ನೆಲೆಯನ್ನು ಹುಡುಕುತ್ತಿದ್ದ ಜನಗಳು ಕೊನೆಗೆ ಗಾಂಧಿಯಿಂದಾದರೂ ಏನಾದರೂ ಒಂದು ಪರಿಹಾರ ದೊರೆತೀತು ಎಂದು ಕಾಯ್ದುಕೊಂಡಿದ್ದರು. ಈ ಗಾಂಧಿ ಬಂದಾದರೂ ಬರಲಿ ಈತ ಜೀವನದುದ್ದಕ್ಕೂ ಮರೆಯಲಾರದ ಪ್ರಶ್ನೆಯೊಂದನ್ನು ಕೇಳಿಯೇ ಬಿಡುತ್ತೇನೆ ಎಂದು ಸಾಮಾನ್ಯ ಮುಸ್ಲಿಂ ಮಹಿಳೆಯೊಬ್ಬಳು ಕುದಿಯುತ್ತಿದ್ದಳು. ಗಾಂಧಿ ಬಂದರು. ಆಕೆಯ ಪ್ರಶ್ನೆಗಳ ಸುರಿಮಳೆ ಪ್ರಾರಂಭವಾಯಿತು. “ನಾವು ನಮ್ಮ ಪಾಲಿಗೆ ಸಂಸಾರ ಸಂತೃಪ್ತಿಗಳೊಂದಿಗೆ ತಣ್ಣಗಿದ್ದೆವು. ಈಗ ನೋಡು ಜನ ಬೆತ್ತಲೆಯಾಗಿ ನಮ್ಮ ಮೇಲೆ ಎರಗಿದ್ದಾರೆ. ಕತ್ತಲೆ ನಮ್ಮನ್ನು ಕೊಳ್ಳೆ ಹೊಡೆದಿದೆ. ಎಲ್ಲಿ ಏನಿದೆ? ಎನ್ನುವುದನ್ನು ಗೊತ್ತಿಲ್ಲದ ಮುಗ್ಧ ಜನ ನೀವು ತೋರಿಸಿದ ರಾಷ್ಟ್ರಗಳ ಕಡೆಗೆ ಹೊರಟು, ಬಂಧುವರ್ಗವನ್ನು ಕಳೆದುಕೊಂಡು ಕೊನೆಗೆ ಪ್ರಾಣವನ್ನೂ ರಕ್ಷಿಸಿಕೊಳ್ಳಲಾಗದೇ ಕೊಲೆಯಾಗಿದ್ದಾರೆ. ನನ್ನನ್ನು ನೋಡು ಬಾಪು, ನಾನು ಗಂಡನನ್ನ ಕಳೆದುಕೊಂಡಿದ್ದೇನೆ. ಸಂಬಂಧಿಗಳನ್ನು ಕಳೆದುಕೊಂಡಿದ್ದೇನೆ. ಆಸರೆಯಾಗಿ ಉಳಿದಿದ್ದ ಮಕ್ಕಳನ್ನೂ ಕಳೆದುಕೊಂಡಿದ್ದೇನೆ. ಈ ಮುಪ್ಪಿಗೆ ಯಾರ ಬಳಿ ಹೋಗುವುದು, ಯಾರ ಆಸರೆ ಬಯಸುವದು. ನನ್ನಂತೆ ಇಲ್ಲಿ ನೂರಾರು ಕುಟುಂಬಗಳ ಗೋಳು. ಬಾಪು ನೀನೇ ಹೇಳು ನಾವು ಎಂದಾದರೂ ಇಂತಹ ಸ್ವಾತಂತ್ರ್ಯ, ಇಂತಹ ಪಾಕಿಸ್ಥಾನಕ್ಕಾಗಿ ಕೇಳಿದ್ದೆವೋ? ಯಾವ ತಪ್ಪಿಗಾಗಿ ನಮಗೆ ಇಂತಹ ಘೋರ ಶಿಕ್ಷೆ? ಈಗ ನಾವು ಯಾರ ನಂಬಿ ಬದುಕಬೇಕು?

ಗಾಂಧಿ ಅವಳೊಂದಿಗೆ ಅಳುತ್ತಲೇ ಇದ್ದರು. ಇದು ಗಾಂಧಿಯೊಳಗಿನ ಗಾಂಧಿಯೊಬ್ಬನ ತಾಕಲಾಟವೂ ಆಗಿತ್ತು. ತನ್ನ ಅತ್ಯಂತ ವಿನೀತ ನಿಸ್ಸೋತ ಧ್ವನಿಯಲ್ಲಿ ಆ ತಾಯಿಯ ಕೈ ಹಿಡಿದು ಗಾಂಧಿ ಹೇಳಿದ “ಹೌದು ಮಾಯಿ, ನೀನು ನಿನ್ನ ಗಂಡ ಮತ್ತು ಕುಟುಂಬವನ್ನು ಕಳೆದುಕೊಂಡಿದ್ದಿಯಾ, ಆದರೆ ಖುದಾನನ್ನು ಮರೆಯುತ್ತೀಯಾ? ಆತ ನಮ್ಮನ್ನೆಲ್ಲ ಆಳುತ್ತಿದ್ದಾನೆ. ಆತನೇ ನಮಗೆ ರಕ್ಷಣೆಯನ್ನು ನೀಡಬೇಕಿದೆ. ನಾವು ಎಲ್ಲವನ್ನೂ ಕಳೆದುಕೊಂಡಾಗಲೂ ಆತನೊಬ್ಬನೇ ನಮ್ಮೊಂದಿಗಿರುತ್ತಾನೆ. ಖುದಾ ಇದ್ದಾನೆ ಮಾಯಿ. ಆತ ನಮಗೆ ಇದೆಲ್ಲವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ನೀಡುತ್ತಾನೆ.” ಹೀಗೆ ಹೇಳುವಾಗ ಗಾಂಧಿ ತನ್ನ ಪಕ್ಕದಲ್ಲಿದ್ದ ಜಮಾತ್ ಉಲ್ ಉಲೆಮಾನ್ ನಾಯಕರುಗಳಾದ ಮೌಲ್ವಿ ಹಿಪ್ಟರ್‌ ರಹಮನ್, ಮೌಲಾನಾ ಹಾಜಿ ಮಹ್ಮದ ನಾಸಿಂ ಮತ್ತು ಮೌಲಾನ ಝಾಪ್ರಿಯೆಡೆಗೆ ಪಿಳಿಪಿಳಿ ಕಣ್ಣು ಬಿಟ್ಟು ನೋಡುತ್ತಿದ್ದ. ಆತನ ಮಾತುಗಳಿಗೆ ಧರ್ಮದ ಒಂದಿಷ್ಟು ಬೆಂಬಲ ಬರಲಿ, ಅಧಮ ಧರ್ಮವೆಂದರೆ ಇದುವೇ ಎನ್ನುವದು ಧ್ವನಿಸಲಿ ಎಂಬುವರು ಗಾಂಧೀಯ ನೋಟದ ನಿರೀಕ್ಷೆಯಾಗಿರಬಹುದು.

ಸಾಯಂಕಾಲವಾಗಿತ್ತು, ಗಾಂಧಿ ದೆಹಲಿಯ ಪಶ್ಚಿಮ ಭಾಗವನ್ನು ಸುತ್ತಿಕೊಂಡು ಪ್ರಾರ್ಥನೆಗೆ ಹೋದರು. ಸಾಯಂಕಾಲದ ತನ್ನ ಪ್ರಾರ್ಥನೆಯಲ್ಲಿ ಹಿಂದುಗಳ ಮುಂದೆ ಗಾಂಧಿಯಿಟ್ಟ ಪ್ರಶ್ನೆ ಹೀಗಿತ್ತು. “ನಮಗೆ ನೋವಾಗಿದೆ. ಖಂಡಿತವಾಗಿಯೂ ನಮಗೆ ನೋವಾಗಿದೆ. ಆದರೆ ಪ್ರತಿಕಾರ ಈ ನಮ್ಮ ನೋವನ್ನು ಶಮನಗೊಳಿಸಬಹುದೆ? ನನ್ನ ಹಿಂದು ಬಂಧುಗಳೇ, ನಮ್ಮ ಬಂಧುಗಳ ಕೊಲೆ ಪಾಕಿಸ್ಥಾನದಲ್ಲಿ ನಡೆಯಿತು ಎನ್ನುವ ಕಾರಣಕ್ಕಾಗಿ ಇಲ್ಲಿ ನಾವು ಮುಸ್ಲಿಂರನ್ನೇಕೆ ಕೊಲ್ಲಬಾರದು? ಎನ್ನುವ ಪ್ರಶ್ನೆಯನ್ನು ಹಾಕಿಕೊಳ್ಳಬಹುದೆ? ಗೊತ್ತಿರಲಿ ದೌರ್ಜನ್ಯವನ್ನು ದೌರ್ಜನ್ಯದಿಂದಲೇ ಕೊನೆಗಾಣಿಸಲಾಗದು. ರಕ್ತಪಾತದಲ್ಲಿ ತೊಡಗಿಕೊಳ್ಳವದು ನಮ್ಮನ್ನು ಮತಿಹೀನರನ್ನಾಗಿ ಮಾಡುತ್ತದೆ. ನಾನು ಈ ಅನುಭವವನ್ನು ಯಾವುದೇ ಪುಸ್ತಕದಿಂದ ಎತ್ತಿಕೊಂಡು ಹೇಳುತ್ತಿಲ್ಲ. ನನ್ನ ಬದುಕಿನ ಅನುಭವದ ಹಿನ್ನೆಲೆಯಲ್ಲಿ ಹೇಳುತ್ತಿದ್ದೇನೆ. ಕೆಡುಕನ್ನು ಒಳಿತಿನಿಂದಷ್ಟೇ ಗೆಲ್ಲಬಹುದಾಗಿದೆ.” ಗಾಂಧಿ ಮಾತಾಡುತ್ತಿದ್ದ. ಈ ಸಂದರ್ಭದಲ್ಲಿ ಆತನ ಮಾತುಗಳು ಒಳಗಿಳಿಯುವಷ್ಟು

ಬಹುತೇಕ ಕಾಲದ ನೆಲ ಹದಗೊಂಡಿರಲಿಲ್ಲ.

********

‍ಲೇಖಕರು Admin

October 2, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: