ಸಮಾಜವಾದದೊಂದಿಗೆ ಗಾಂಧಿ ಮುಖಾಮುಖಿ…

ಬಾಪು ಹೆದ್ದೂರಶೆಟ್ಟಿ

ಸಮಾಜವಾದಿಗಳೊಂದಿಗೆ ಮುಖಾಮುಖಿಯಾಗುವುದಕ್ಕಿಂತ ಮೊದಲು ಸಮಾಜವಾದಿ ತತ್ವಗಳು ಹಾಗೂ ಆದರ್ಶಗಳೊಂದಿಗೆ ಗಾಂಧಿ ಮುಖಾಮುಖಿಯಾದರು. ಸ್ವಾತಂತ್ರ್ಯ, ಸಮಾನತೆ ಹಾಗೂ ಸಹೋದರಭಾವಗಳು ಸಮಾಜವಾದದ ಮೂರು ಮೂಲತತ್ವಗಳು, ಆದರ್ಶಗಳು, ಸಮಾನತೆ ಎನ್ನುವುದು ಅಕ್ಷರಶಃ ಸಮಾಜವಾದದ ಕೇಂದ್ರ ತತ್ವ. ಆದುದರಿಂದಲೇ ಸಮಾಜವಾದಿ ಇತಿಹಾಸಕಾರ ಜಾರ್ಜ ಲೈಧ್ಯಾಮ್ “ಸಮಾಜವಾದ ಎಂದರೆ, ಮೊದಲನೆಯದಾಗಿ, ಆಸ್ತಿಯ ಸಿದ್ಧಾಂತವಲ್ಲ, ರಾಜ್ಯವ್ಯವಸ್ಥೆಯ ಬಗೆಗಿನ ಸಿದ್ಧಾಂತವೂ ಅಲ್ಲ. ಸಮಾಜವಾದ ಸಮಾನತೆಯ ಬಗೆಗಿನ ಸಿದ್ಧಾಂತ, ಸಮಾನತೆಯ ಬಗೆಗಿನ ಒತ್ತಾಸೆ ಎಲ್ಲಾ ಸಮಾಜವಾದಿಗಳನ್ನೂ ಒಟ್ಟಿಗೆ ತರುತ್ತದೆ, ಮಿಕ್ಕುಳಿದ ಎಲ್ಲಾ ವಿಷಯಗಳ ಬಗ್ಗೆ ಅವರಲ್ಲಿ ಭಿನ್ನಾಭಿಪ್ರಾಯವಿದೆ” ಎಂದು ಸರಿಯಾಗಿಯೇ ಹೇಳಿದ್ದಾರೆ.

ಇಡಿ ಜಗತ್ತಿನಲ್ಲಿ ಗಾಂಧಿಯವರನ್ನು ಭಾರತದ ‘ಸ್ವಾತಂತ್ರ್ಯಕ್ಕಾಗಿ ಹೋರಾಡಿದವರೆಂದೇ ಗುರುತಿಸಲಾಗುತ್ತದೆ. ಆದರೆ ಅವರ ಮೊದಲ ಮುಖಾಮುಖಿಯಾದದ್ದು ‘ಸಮಾನತೆ’ಯೊಂದಿಗೆ, ಅದೂ ದಕ್ಷಿಣ ಆಫ್ರಿಕೆಯಲ್ಲಿ, ದಕ್ಷಿಣ ಆಫ್ರಿಕೆಯಲ್ಲಿ ಅವರು ನಡೆಸಿದ ಹೋರಾಟ, ಬಿಳಿ ಚರ್ಮದ ಜನರಿಂದ ಕರಿ ಬಣ್ಣದ ಜನರ ‘ಸ್ವಾತಂತ್ರ್ಯ’ಕ್ಕಾಗಿ ಅಲ್ಲ, ಬಿಳಿ ಚರ್ಮದ ಜನರೊಂದಿಗೆ ಕರಿ ಬಣ್ಣದ ಜನರ ‘ಸಮಾನತೆಗಾಗಿ. ಲೂಯಿ ಫಿಲ್ಟರ್ ಕೂಡ ಇದೇ ಅಭಿಪ್ರಾಯವನ್ನು ಬೆಂಬಲಿಸುತ್ತಾರೆ. “ಗಾಂಧಿ ಒಂದು ತತ್ವವನ್ನು ಸ್ಥಾಪಿಸಬಯಸಿದರು; ಭಾರತೀಯರು ಬ್ರಿಟಿಷರ ಸಾಮ್ರಾಜ್ಯದ ಪ್ರಜೆಗಳು ಹಾಗೂ ಆ ಕಾರಣದಿಂದ ಅದರ ಕಾನೂನುಗಳಡಿಯಲ್ಲಿ ಸಮಾನತೆಯ ಹಕ್ಕುಳ್ಳವರು” ಎಂದು ಲೂಯಿ ಫಿಶ್ವರ್ ಅವರು ಹೇಳುತ್ತಾರೆ. ನಂತರ ಗಾಂಧಿಯವರ ಅಸ್ಪೃಶ್ಯತಾ ನಿವಾರಣಾ ಆಂದೋಲನದ ಬಗ್ಗೆ ಹೇಳುತ್ತ ಲೂಯಿ ಫಿಕ್ಚರ್, “ಭಾರತೀಯರ ಸಮಾನತೆಗಾಗಿ ಆಗ ತಾನೇ ದಕ್ಷಿಣ ಆಫ್ರಿಕೆಯಲ್ಲಿ ಹೋರಾಡಿ ಬಂದಿದ್ದ ಗಾಂಧಿಯವರು ಭಾರತದಲ್ಲಿಯೇ ಭಾರತೀಯರೇ ಇನ್ನಿತರ ಭಾರತೀಯರ ಮೇಲೆ ಹೊರಿಸಿದ ಕ್ರೂರ ಅಸಮಾನತೆಯನ್ನು ಹೇಗೆ ತಾನೇ ಸಹಿಸಬಹುದಿತ್ತು” ಎನ್ನುತ್ತಾರೆ. ಗಾಂಧಿಯವರೇ “ದಕ್ಷಿಣ ಆಫ್ರಿಕೆಯಲ್ಲಿ ನಮ್ಮೊಡನೆ ಪರೈಯಾಗಳಂತೆ ನಡೆದುಕೊಂಡ ರೀತಿಯ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ ನಾವು ಭಾರತದಲ್ಲಿ ನಮ್ಮ ಬಂಧುಗಳೇ ಆದ, ಆದರೆ ನಾವೇ ‘ಅಸ್ಪೃಶ್ಯ’ರೆಂದು ಸೌಜನ್ಯಹೀನರಾಗಿ ಕರೆಯಲಾಗುವ ಜನರೊಂದಿಗೆ ನಡೆದುಕೊಳ್ಳುತ್ತಿರುವ ರೀತಿಯಿಂದ ಮೊದಲು ಕೈತೊಳೆದುಕೊಳ್ಳಬೇಕು” ಎಂದು ಹೇಳಿದ್ದರು. ಆದುದರಿಂದ ಅಸ್ಪೃಶ್ಯರ ಬಗೆಗಿನ ಅವರ ಕಾಳಜಿಯ ಹಿಂದಿದ್ದ ಪ್ರೇರಣೆ, ಕರುಣೆ ಅಥವಾ ಸಹಾನುಭೂತಿ ಅಥವಾ ಅನುಕಂಪ ಮೊದಲಾದವುಗಳಾಗಿರಲಿಲ್ಲ, ಬದಲಿಗೆ ಅಸ್ಪಶ್ಯರಿಗೆ ಸಮಾಜದಲ್ಲಿ ಇನ್ನಿತರ ಜಾತಿಗಳೊಡನೆ ಸಮಾನತೆ’ಯನ್ನು ದೊರಕಿಸುವುದೇ ಆಗಿತ್ತು. ಆದುದರಿಂದಲೇ ಬಹುಶಃ ಅವರು ಜಾತಿಗಳ ಮುಂದುವರಿಕೆಯನ್ನು ಒಪ್ಪಿಕೊಂಡರು. ಆದರೆ ಅವುಗಳ ನಡುವಣ ಅಸಮಾನತೆಯನ್ನು ಹಳಿದರು. ಭಾರತದ ಸ್ವಾತಂತ್ರಕ್ಕೋಸ್ಕರ ಅವರು ನಡೆಸಿದ ಹೋರಾಟವನ್ನೂ ಲೆಕ್ಕಿಸಿದರೆ,  ಬರಿ ಸ್ವಾತಂತ್ರ್ಯವನ್ನು ಪಡೆಯುವುದಕ್ಕೋಸ್ಕರವಲ್ಲ, ವಿಶ್ವದ ದೇಶಗಳ ಮಧ್ಯೆ ಭಾರತಕ್ಕೆ ಸಮಾನ ಸ್ಥಾನವನ್ನು ಕೊಡಿಸುವುದಕ್ಕೋಸ್ಕರ ಎಂದೂ ವ್ಯಾಖ್ಯಾನಿಸಬಹುದಾಗಿದೆ.

ಸಾಮಾನ್ಯವಾಗಿ ಸಮಾಜವಾದದ ಹುಟ್ಟನ್ನು ಯುರೋಪಿನಲ್ಲಾದ ಬೆಳವಣಿಗೆಗಳ ಜೊತೆಗೆ ಗುರುತಿಸಲಾಗಿದೆ. “ಸಮಾಜವಾದಿ ಸೂತ್ರಗಳು, ಫ್ರೆಂಚ್ ಹಾಗೂ ಔದ್ಯೋಗಿಕ ಕ್ರಾಂತಿಗಳು ಹುಟ್ಟುಹಾಕಿದ, ಸಾಮಾಜಿಕ, ರಾಜಕೀಯ ಹಾಗೂ ತಾಂತ್ರಿಕ, ಈ ಮೂರು ವಿಧದ ಬದಲಾವಣೆಗಳು ಉಂಟು ಮಾಡಿದ ಹುದುಗಿನಿಂದ ಮೂಡಿ ಬಂದವು” ಎನ್ನುತ್ತಾರೆ ಸಮಾಜವಾದಿ ಚಿಂತಕ ಅಶೋಕ ಮೆಹತಾ. ಆದರೆ ಸಮಾಜವಾದದ ಬಗೆಗಿನ ಗಾಂಧಿ ಅವರ ವಿಚಾರಗಳು ಯಾವುದೇ ಪುಸ್ತಕದಿಂದ ಅಥವಾ ಇತಿಹಾಸದ ಪುಟಗಳಿಂದ ಎರವಲು ಪಡೆದವುಗಳಾಗಿರಲಿಲ್ಲ. ಅವರು ಯಾವುದೇ ಪುಸ್ತಕವನ್ನೂ ಓದಿ ಈ ವಿಚಾರ ಪ್ರಸ್ತಾಪಿಸುತ್ತಿಲ್ಲ ಎನ್ನುತ್ತಿದ್ದರು. ಇತಿಹಾಸವನ್ನೂ ಅಧ್ಯಯನ ಮಾಡಿ ಹೇಳುತ್ತಿಲ್ಲ. ಕಣ್ಣೆದುರಿನ ವಾಸ್ತವವನ್ನೇ ಹೇಳುತ್ತಿದ್ದರು. ಅವರೇ ಒಂದು ಬಾರಿ ಹೇಳಿದ ಹಾಗೆ, ಅವರ ಸಮಾಜವಾದವು ಅವರಿಗೆ ಸ್ವಾಭಾವಿಕವಾಗಿಯೇ ಬಂದಿತ್ತು, ಯಾವುದೇ ಪುಸ್ತಕದಿಂದ ಅಳವಡಿಸಿ ಕೊಂಡುದಾಗಿರಲಿಲ್ಲ. ಅವರ ಸಮಾಜವಾದಕ್ಕೆ ಬಹುಶಃ ‘ಅನ್ ಟು ದ ಲಾಸ್ಟ್’ ಒಂದು ಬೀಜವಾಗಿದ್ದರೂ, ಅವರ ಬದುಕಿನ ಅನುಭವವೇ ಅದಕ್ಕೆ ನೀರು ಹಾಗೂ ಗೊಬ್ಬರಗಳಾಗಿದ್ದವು. ಆದುದರಿಂದಲೇ ಅವರ ಸಮಾಜವಾದವು ಧರ್ಮದಲ್ಲಿ ಅದರಲ್ಲೂ ಅವರ ಹಿಂದೂ ಧರ್ಮದಲ್ಲಿ – ನೆಲೆನಿಂತಿತ್ತು, ಆದುದರಿಂದ ಸಮಾಜವಾದ ಬಗ್ಗೆ ಅವರಿಗೆ ಒಂದು ವ್ಯವಸ್ಥಿತವಾದ ಹಾಗೂ ಸಂರಚನಾತ್ಮಕವಾದ ವಿಚಾರಗಳ ಚೌಕಟ್ಟು ಇಲ್ಲದಿರುವುದು ಸ್ವಾಭಾವಿಕವೇ ಆಗಿತ್ತು. ಹಾಗೂ ಆ ಕಾರಣದಿಂದಲೇ ಸಮಾಜವಾದ ಎಂದರೇನು ಎಂಬ ಬಗ್ಗೆ ವಿವರಗಳ ವಿಷಯದಲ್ಲಿ ಅವರು ಹಲವು ಬಾರಿ ವಿರೋಧಾತ್ಮಕ ಮಾತುಗಳನ್ನು ಹೇಳಿದರು ಎಂದು ತೋರುತ್ತದೆ. ಆದುದರಿಂದಲೇ ವೈಚಾರಿಕ ಸ್ಥಿರತೆ ಎನ್ನುವುದೊಂದು ಕತ್ತೆ ಎಂದು ಅವರು ಹೇಳಿದ್ದುದು ಒಂದು ಉದ್ದೇಶಹೀನ ಆಕಸ್ಮಿಕವಲ್ಲ ಎಂದು ತೋರುತ್ತದೆ.

– ಆದರೆ, 1922ರಷ್ಟರಲ್ಲಿ ಗಾಂಧಿ ಅಮೇರಿಕೆಯ ಸಮಾಜವಾದಿ ಮತ್ತು ಬರಹಗಾರ ಎಡ್ವರ್ಡ ಬೆಲ್ಲಾಮಿಯವರ (1840-1898) ಪುಸ್ತಕ ‘ಇಕ್ವಾಲಿಟಿ’ – (ಸಮಾನತೆ)ಯನ್ನು ಓದಿದ್ದರು. 1940ರ ವರೆಗೂ ತಾನು ಸಮಾಜವಾದದ ಬಗ್ಗೆ, ಕಮ್ಯುನಿಜಂ ಬಗ್ಗೆ ಹೆಚ್ಚೇನೂ ಓದಿಲ್ಲ ಎಂದು ಗಾಂಧಿ ಪ್ರಾಮಾಣಿಕವಾಗಿಯೇ ಹೇಳಿಕೊಂಡಿದ್ದರು. “ನಾನು ಸಮಾಜವಾದದ ಬಗ್ಗೆ ಅಧ್ಯಯನ ಮಾಡಿಲ್ಲ. ಆ ವಿಷಯದ ಬಗ್ಗೆ ನಾನು ಯಾವ ಪುಸ್ತಕವನ್ನೂ ಓದಿಲ್ಲ; ಜಯಪ್ರಕಾಶ ನಾರಾಯಣರ ಒಂದು ಪುಸ್ತಕವನ್ನು ಓದಿದ್ದೇನೆ, ಮಸಾನಿಯವರು ಕೊಟ್ಟ ಒಂದು ಪುಸ್ತಕವನ್ನೂ ಓದಿದ್ದೇನೆ” ಎಂದು ಅವರು ಹೇಳಿದ್ದರು. “ಸಂಪೂರ್ಣಾನಂದರು ಒಂದು ಒಳ್ಳೆಯ ಪುಸ್ತಕವನ್ನು ಬರೆದಿದ್ದಾರೆ. ಅದನ್ನೂ ಓದಿದ್ದೇನೆ. ಸಮಾಜವಾದದ ಬಗೆಗಿನ ನನ್ನ ಅಧ್ಯಯನ ಇಷ್ಟೇ. ಕಮ್ಯುನಿಜಂ ಬಗ್ಗೆಯಂತೂ ನಾನು ಏನನ್ನೂ ಓದಿಲ್ಲ ಎಂದೂ ಹೇಳಿದ್ದರು. ನಂತರ ಅವರು ಜಯಪ್ರಕಾಶ ನಾರಾಯಣರೊಂದಿಗೆ ನಾಸಿಕದ ಜೈಲಿನಲ್ಲಿದ್ದ ಸಿ.ಕೆ. ನಾರಾಯಣ ಸ್ವಾಮಿಯವರು ಸಮಾಜವಾದದ ಬಗ್ಗೆ ಬರೆದ ಒಂದು ಪುಸ್ತಕವನ್ನೂ ಓದಿದರು. ಜಯಪ್ರಕಾಶ ನಾರಾಯಣರು ಹಾಗೂ ಡಾ. ಸಂಪೂರ್ಣಾನಂದರು ಬರೆದ ಪುಸ್ತಕಗಳನ್ನು ಹೋಲಿಸಿ, ಡಾ. ಸಂಪೂರ್ಣಾನಂದರಿಗೆ “ಜಯಪ್ರಕಾಶ ನಾರಾಯಣರು ಬರೆದ ಪುಸ್ತಕವನ್ನೂ ನಾನು ಕಾಳಜಿ ವಹಿಸಿ ಓದಿದ್ದೇನೆ, ಅವರ ಹಾಗೂ ನಿಮ್ಮ ವ್ಯಾಖ್ಯಾನಗಳಲ್ಲೇನಾದರೂ ಭಿನ್ನತೆ ಇರಬಹುದೇ? ನಿಮ್ಮ ಹಾಗೂ ಪುಸ್ತಕಗಳೆರಡರಲ್ಲೂ ಭಾರತದಲ್ಲಿ ಕೊನೆಯ ಕ್ರಾಂತಿ ಹೇಗೆ ಬರಲಿದೆ ಎಂಬ ಬಗ್ಗೆ ನನಗೆ ಸ್ಪಷ್ಟ ಕಲ್ಪನೆ ಬರಲಿಲ್ಲ. ಹಲವಾರು ಜನರ ಜೊತೆಗೆ ಚರ್ಚೆ ಮಾಡಿದ ನಂತರವೂ ನನಗೆ ಇದು ಗೊತ್ತಾಗಲಿಲ್ಲ” ಎಂದು ಪ್ರಾಮಾಣಿಕವಾಗಿ ಹೇಳಿದ್ದರು. ಸಿ.ಕೆ. ನಾರಾಯಣಸ್ವಾಮಿಯವರು ಬರೆದ ಪುಸ್ತಕ ಅವರಿಗೆ ಇಷ್ಟವಾಗಿತ್ತು. ಬಹುಶಃ ಆದುದರಿಂದಲೇ ಗಾಂಧಿ ಸಮಾಜವಾದದ ಹುಟ್ಟಿನ ಬಗ್ಗೆ, ತತ್ವಗಳ ಬಗ್ಗೆ ತಮ್ಮದೇ ಅವರ ಆದ ವಿಚಾರಗಳನ್ನು ಹೊಂದಿದ್ದರು.

ಒಬ್ಬ ಬ್ಯಾರಿಸ್ಟರ್ ಆಗಿದ್ದುದರಿಂದ ಗಾಂಧಿಯವರಿಗೆ ಕಾನೂನಿನ ಮುಂದಿನ ಸಮಾನತೆಯ ಪರಿಕಲ್ಪನೆ ಇತ್ತು. “ಕಾನೂನು, ತನ್ನ ಭವ್ಯ ಸಮಾನತೆಯಲ್ಲಿ ಶ್ರೀಮಂತ ಹಾಗೂ ಬಡವರಿಬ್ಬರೂ, ಸೇತುವೆಗಳ ಕೆಳಗೆ ಮಲಗುವುದನ್ನೂ, ಬೀದಿಗಳಲ್ಲಿ ಭಿಕ್ಷೆ ಬೇಡುವುದನ್ನೂ ಹಾಗೂ ರೊಟ್ಟಿ ಕದಿಯುವುದನ್ನೂ ನಿಷೇಧಿಸುತ್ತದೆ” ಎಂದು ಕಾನೂನಿನ ಸಮಾನತೆಯ ಪರಿಕಲ್ಪನೆಯನ್ನು ಅಲತೋಲ ಫ್ರಾನ್ಸ್ ಮೂದಲಿಸಿದ್ದ. ಆದರೆ ಗಾಂಧಿ, ಈ ಪರಿಕಲ್ಪನೆಯ ಋಣಾತ್ಮಕ ಅಂಶವನ್ನು ಗ್ರಹಿಸಿದ್ದರು, ಅವರಿಗೆ “ಸಮಾನತೆ ಎಂದು ನ್ಯಾಯದಲ್ಲಿ ಸಮಾನತೆಯಷ್ಟೇ”. ಜಾತಿ, ಜನಾಂಗ, ನಂಬಿಕೆ ಹಾಗೂ ಬಣ್ಣಗಳು ಭಿನ್ನವಾಗಿದ್ದರೂ ಜನಸಾಮಾನ್ಯರಿಗೆ ಹಸಿವು ಹಾಗೂ ಬಾಯಾರಿಕೆಗಳು ಸಮಾನವಾಗಿ ಇರುವಂತ ಗಾಂಧಿಯವರಿಗೆ ಮಾನವನ ಮೂಲಭೂತ ಅಧಿಕಾರಗಳ ವಿಷಯದಲ್ಲಿ ಕಾನೂನಿನ ಕಣ್ಣಿನಲ್ಲಿ ಸಮಾನತೆ ಬೇಕಿತ್ತು. 1908ರ ಸಪ್ಟೆಂಬರ್ 9ರ ‘ದ ಸ್ಟಾರ್’ ಪತ್ರಿಕೆ, “ನಾನು ಕಾನೂನಿನ ಕಣ್ಣಿನಲ್ಲಿ ಸಮಾನತೆಯ ಬಗ್ಗೆ ಮಾತನಾಡಿದಾಗ ನನ್ನನ್ನು ಮೂದಲಿಸಲಾಗುತ್ತದೆ, ಆದರೆ ಈ ಬಗ್ಗೆ ನನಗೆ ಒಳ್ಳೆಯ ಒಡನಾಡಿ ಇದ್ದಾರೆ, ಯಾಕೆಂದರ ಕರ್ನಲ್ ಸೀಲಿಯವರೇ ಇದೇ ವಾದವನ್ನು ಮುಂದೊಡ್ಡಿದ್ದಾರೆ” ಎಂದಿದ್ದರು ಗಾಂಧಿ ಎಂದು ವರದಿ ಮಾಡಿತ್ತು. ದಕ್ಷಿಣ ಆಫ್ರಿಕೆಯಲ್ಲಿ ಅವರು ಪ್ರಾರಂಭಿಸಿದ ಮೊದಲ ಸತ್ಯಾಗ್ರಹ ಕೂಡ ಬಿಳಿಯರು ಹಾಗೂ ಕರಿಯರ ನಡುವೆ ಭೇದಭಾವ ಮಾಡುವ ‘ಏಷಿಯಾಟಿಕ್ ರಿಜಿಸ್ಟ್ರೇಷನ್’ ಕಾನೂನಿನ ವಿರುದ್ಧವೇ ಆಗಿತ್ತು.

ಆದರೆ, ಮಾನವರೊಂದಿಗೆ ಸಮಾನತೆಯ ಆಧಾರದ ಮೇಲೆ ವ್ಯವಹರಿಸುವುದು ಸಾಧ್ಯ ಎಂದು ಅವರಿಗೆ ಅನಿಸಿತ್ತಾದರೂ ಅವರ ಪ್ರಕಾರ ಯಾರೂ ಸಂತತನವನ್ನು ಹಾಗೂ ದುಷ್ಟತನಗಳನ್ನು ಒಂದೇ ಆಧಾರದ ಮೇಲೆ ಇಡಬಾರದಿತ್ತು. ಆದರೆ ಗಾಂಧಿಯವರು ಇಲ್ಲಿ ಆರ್ಥಿಕ ಸಮಾನತೆಯಲ್ಲದೆ ಬೇರೆ ಸಮಾನತೆಯ ಬಗ್ಗೆ ಮಾತನಾಡುತ್ತಿದ್ದರು ಎನ್ನುವುದು ಸ್ಪಷ್ಟ.

****

‍ಲೇಖಕರು Admin

October 2, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: