-ನಾಗಮಣಿ ಎಸ್ ಎನ್
ನಾಟಕ “ಅದಲು ಬದಲು ಕಂಚಿ ಕದಲು” – ಮನರಂಜನೆಗಾಗಿ ಅಲ್ಲ ಮನಮಂಥನಕ್ಕಾಗಿ
ರಚನೆ: ಲಕ್ಷ್ಮೀಪತಿ ಕೋಲಾರ
ವಿನ್ಯಾಸ ಮತ್ತು ನಿರ್ದೇಶನ: ಡಾ. ಉದಯ್ ಸೋಸಲೆ
ಬೆಳಕು: ಮಹದೇವಸ್ವಾಮಿ
ಪ್ರಸಾಧನ: ಮೋಹನ್ ಕುಮಾರ್
ಸಂಗೀತ: ರಾಜೇಶ್ ಹಳೆಮನೆ, ಸುನಿಲ್ ಕುಮಾರ್, ದಶರಥ, ರಚನಾ, ಸ್ನೇಹ
ತಂಡ: ಆಜೀವಿಕ
ಮೊದಲ ಪ್ರದರ್ಶನ: ೧೫/೦೭/೨೬, ರವೀಂದ್ರ ಕಲಾಕ್ಷೇತ್ರ, ಅವಧಿ: ೨ ಗಂಟೆಗಳು
ನಾಟಕದ ಹೆಸರು “ಅದಲು ಬದಲು ಕಂಚಿ ಕದಲು”, ಇದು ಮಕ್ಕಳಾಗಿ ಆಡುತ್ತಾ, ಎದುರಿರುವ ತಂಡದವರನ್ನು ಏಮಾರಿಸುತ್ತಾ ಗೆಲುವು ಸಾಧಿಸಲು ಹೇಳುತ್ತಿದ್ದ ಹಾಡಿನೊಂದರ ಸಾಲು. ನಾಟಕದ ಹೆಸರು ನೋಡಿ ನಾನಂದುಕೊಂಡಿದ್ದೆ ಇದೊಂದು ಹಾಸ್ಯನಾಟಕವಿರಬಹುದು ಅಂತ! ಅಬ್ಬಾ, ನಾಟಕ ನೋಡುತ್ತಾ ಹೋದಂತೆ ಎಂಥ ಗಂಭೀರವಾದದು, ವಿಶಿಷ್ಟವಾದುದು, ವಿಭಿನ್ನವಾದುದು ಮತ್ತು ಪ್ರಸ್ತುತವಾದದು ಎಂಬುದು ಅರ್ಥವಾಗತೊಡಗಿತು. ಅವಕಾಶವಾದಿ ಸಂಸ್ಕೃತಿಯೊಂದು ತಳಮೂಲ ಆದಿ ಸಂಸ್ಕೃತಿಗಳನ್ನು ಏಮಾರಿಸುತ್ತಾ ಭೌತಿಕ ಸುಖಗಳ ಖಜಾನೆಯನ್ನು ಕೊಳ್ಳೆಹೊಡೆದಿದ್ದು ಹೇಗೆ ಎನ್ನುವ ಐದು ಸಾವಿರ ವರ್ಷಗಳ ಕತೆ ಹೇಳತೊಡಗಿದಾಗ ಅದರ ಗಾಂಭೀರ್ಯ ಅರಿವಾಗತೊಡಗಿತು.
ಹರಪ್ಪಾ ಅಲ್ಲ, ಮೆಲುವ; ಕಾಳಿ ಅಲ್ಲ, ಕೊರವಿ; ಗಂಗೆಯಲ್ಲ ನೀರಿನಬೀಜ; ಯಾರಿಗೂ ದಕ್ಕದ ದಕ್ಲ; ಇವರೆಲ್ಲರ ಸಾಂಸ್ಕೃತಿಕ ಇತಿಹಾಸ, ಅವರ ಸ್ಥಾನ ಪಲ್ಲಟ ಹೇಳುವ ನಾಟಕ, ಆಧ್ಯಾತ್ಮಿಕ ಸಾಂಸ್ಕೃತಿಕ ವೈಚಾರಿಕತೆ ಮೂಲಕ ವರ್ತಮಾನವನ್ನೂ ಕಟ್ಟಿಕೊಡುವ ಪ್ರಯತ್ನ ಮಾಡುತ್ತದೆ. ನೋಡಿ ಮನರಂಜನೆ ಪಡೆಯುವುದಕಷ್ಟೇ ಸೀಮಿತವಲ್ಲ ನಾಟಕ, ನೋಡಿದ ನಂತರ ಕಾಡುವ ನಾಟಕ. ಐದು ಸಾವಿರ ವರ್ಷಗಳ ಇತಿಹಾಸ, ಸಂಸ್ಕೃತಿಗಳು ಸಾಗಿ ಬಂದ ಪಯಣ ಹೇಳುತ್ತಾ ವರ್ತಮಾನದ ಅನೇಕ ಗೋಜಲು ಗೊಂದಲಗಳಿಗೆ ಉತ್ತರ ಹುಡುಕುವ ಪ್ರಯತ್ನ ಮಾಡುತ್ತದೆ.
ನಾಟಕ ಪ್ರೇಕ್ಷರಿಗೆ ಐದು ಸಾವಿರದ ವರ್ಷಗಳ ಇತಿಹಾಸ, ತಳಮೂಲ ಸಂಸ್ಕೃತಿಯನ್ನು ಹೈಜಾಕ್ ಮಾಡಿದ ಯಜಮಾನ ಸಂಸ್ಕೃತಿಯ ಗುಳ್ಳೆನರಿತನ, ಆದಿನಿವಾಸಿಗಳ ಸಾಂಸ್ಕೃತಿಕ ತಲ್ಲಣ ಪಲ್ಲಟಗಳನ್ನು ಹೇಳುತ್ತದೆ. ತಳಮೂಲ ಜನರ ಮುಗ್ಧತೆ, ಹೃದಯ ವೈಶಾಲ್ಯತೆ, ಯಾರಿಗೂ ಕೆಡುಕು ಬಯಸದ ಸಕಲಜೀವ ಪ್ರೀತಿ ಬದುಕಿನ ಬಗೆಗಿನ ಅವರ ಉತ್ಕಟ ಪ್ರೇಮವನ್ನು ನಿವೇದಿಸುತ್ತದೆ. ಹರಪ್ಪಾದಿಂದ ಕಂಚಿಗೆ ಬರುವ ಕೊರವಿ ಕಾಳಮ್ಮನಾದದ್ದು, ಮುಂಬಾ ಆಯಿ ಮುಂಬಯಿ ಆದದ್ದು, ಕೋಲಿ ಕಾಳಿಯಾಗಿದ್ದು … ಹೀಗೆ ಅನೇಕ ರಾಜ್ಯಗಳ ಸಾಂಸ್ಕೃತಿಕ ಇತಿಹಾಸ ಹೇಳುತ್ತದೆ. ವರ್ತಮಾನ ಮರೆತಿರುವ, ಮರೆಮಾಚಲು ಪ್ರಯತ್ನಿಸುವ ಅನೇಕ ವಿಷಯಗಳ ಕಡೆ ಗಮನ ಸೆಳೆಯುತ್ತದೆ. ಈ ರೀತಿಯ ನಾಟಕ ರಚನೆ ಸಾಮಾನ್ಯವಾವಾದುದಲ್ಲ. ಲಕ್ಷ್ಮೀಪತಿ ಕೋಲಾರ ತಮ್ಮ ಇಷ್ಟು ವರ್ಷಗಳ ಸಂಶೋಧನೆ, ಪರಿಶ್ರಮ, ಅಧ್ಯಯನವನ್ನು ಇಲ್ಲಿ ಧಾರೆ ಎರೆದು ಒಂದು ಯಶಸ್ವೀ ನಾಟಕ ಕಟ್ಟಿಕೊಟ್ಟಿದ್ದಾರೆ. ಇಂಥದೊಂದು ಕತೆಯಿರುವ ನಾಟಕವನ್ನು ರಂಗಕ್ಕೆ ತರುವುದು ಸುಲಭವಲ್ಲ. ಆ ಪ್ರಯತ್ನವನ್ನು ನಿರ್ದೇಶಕ ಡಾ. ಉದಯ್ ಸೋಸಲೆ ಮಾಡಿದ್ದಾರೆ.
ಕೊರವಂಜಿ ಪಾತ್ರದ ಮೂಲಕ ನಾಟಕ ತೆರೆದುಕೊಳ್ಳತೊಡಗುತ್ತದೆ. ವಿವಿಧ ಪಾತ್ರಗಳು ಒಂದೊಂದಾಗಿ ರಂಗದ ಮೇಲೆ ಕಾಣಿಸಿಕೊಳ್ಳುತ್ತಾ ಐದು ಸಾವಿರ ವರ್ಷಗಳ ಕತೆ ವ್ಯಥೆ ಹೇಳುತ್ತಾ ಸಾಗುತ್ತವೆ. ನಾವಿಂದು ಮರೆತ ನಮ್ಮ ಆದಿಮೂಲ ಚರಿತ್ರೆ ರಂಗದ ಮೇಲೆ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಒಮ್ಮೆ ನೋಡಲೇಬೇಕಾದ ನಾಟಕ.
ನಾಟಕ ಪ್ರದರ್ಶನ ಇನ್ನೂ ಸುಧಾರಿಸಬೇಕು. ಪಾತ್ರಗಳು ಆಡುವ ಮಾತು ಪ್ರೇಕ್ಷಕರಿಗೆ ಸ್ಪಷ್ಟವಾಗಿ ತಲುಪಬೇಕು. ಸಂಗೀತಕ್ಕೆ ಜಾನಪದ ಮಟ್ಟುಗಳನ್ನು ಬಳಸಿಕೊಂಡಿರುವುದು ಸೂಕ್ತವಾಗಿದೆ. ಗಾಯನ ಮತ್ತು ತಮಟೆಯಲ್ಲಿ ಆ ಜಾನಪದ ಮಾಧುರ್ಯವು ಮೇಳೈಸಬೇಕು. ಬೆಳಕು ನಾಟಕದ ಓಘಕ್ಕೆ ಸಮನ್ವಯಗೊಳ್ಳಬೇಕು. ನಿರ್ದೇಶನ ಮತ್ತಷ್ಟು ಬಿಗಿಯಾಗಬೇಕು. ನಾಟಕದ ಮೊದಲ ಪ್ರದರ್ಶನವಾದ್ದರಿಂದ ಇಂತಹ ಲಘು ಲೋಪದೋಷಗಳನ್ನು ಮುಂದಿನ ಪ್ರದರ್ಶನಗಳಲ್ಲಿ ಸುಧಾರಿಸಿಕೊಳ್ಳುವ ಅವಕಾಶವಿದೆ. ನಾಟಕ ತಂಡಕ್ಕೆ ಅಭಿನಂದನೆಗಳು.






0 Comments