ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಿನ್ನ ಒಲವಿಗೆ ಕಳಸವ ನಾನಿಡುವೆ…

-ಬಿ ಕೆ ಸುಮತಿ

ಅಂದು….!
ಎರಡು ಜಡೆ ಹಾಕಿಕೊಂಡು ಆಕಾಶವಾಣಿ ಸ್ಟುಡಿಯೋದಲ್ಲಿ ಸ್ಪರ್ಧೆಗೆ ಹಾಡಿ ಬಹುಮಾನ ಗಳಿಸಿದಳು ಪುಟ್ಟ ಬಾಲಕಿ, ಜಾನಕಿ.

ಇಂದು..!
ಆಕಾಶವಾಣಿಯೇ ಆ ತಾಯಿಗೆ ಲಾಲಿ ಹಾಡುತ್ತಿದೆ. ದೇಶವೇ ಮಿಡಿಯುತ್ತಿದೆ.

ಬೆಳಗಿನ ಭಕ್ತಿಗೀತೆ ಕಾರ್ಯಕ್ರಮ ದಿಂದ ಹಿಡಿದು ರಾತ್ರಿ 11 ರವರೆಗೂ ಆಕಾಶವಾಣಿ ಪ್ರಸಾರ ಸಾಗುತ್ತದೆ. ದಕ್ಷಿಣ ಭಾರತದ ಎಲ್ಲ ಆಕಾಶವಾಣಿ ಕೇಂದ್ರಗಳು ಎಸ್ ಜಾನಕಿ ಅವರ ಹೆಸರು ಹೇಳದೆ ಪ್ರಸಾರ ನಡೆಸಲು ಸಾಧ್ಯವೇ ಇಲ್ಲ. ಈಗ, ಚಿತ್ರಗೀತೆಗಳ ವಾಹಿನಿಗಳೇ ಹೆಚ್ಚು. ಪ್ರತಿ ಗಂಟೆಗೆ 10 , 12 ಹಾಡುಗಳ ಪ್ರಸಾರ.
ದಿನ ಒಂದಕ್ಕೆ ಎಷ್ಟು ಹಾಡುಗಳು..!!
ಯೋಚಿಸಿ.
ಹಾಗೇ ಒಂದೊಂದಾಗಿ ಹಾಡು ಕೇಳಿಸಲು ಶುರುವಾಗುತ್ತದೆ. ಬೆಳಿಗ್ಗೆ ಆಗಲಿ, ಸಂಜೆ ಆಗಲಿ, ಸಂತೋಷ ಇರಲಿ, ದುಃಖ ಇರಲಿ
ಯಾವ ಸಮಯಕ್ಕೆ ಎಂಥಾ ಗೀತೆ ಬೇಕು, ಜಾನಕಿಯವರ ಹಾಡುಗಳು ಸಿಗುತ್ತವೆ. ಮದುವೆ ಇರಲಿ ಶಾಲಾ ಸಮಾರಂಭ ಇರಲಿ, ದೊಡ್ಡವರಿರಲಿ, ಚಿಕ್ಕವರಿರಲಿ, ಅವರ ಹಾಡುಗಳು ನಮ್ಮನ್ನು ನಡೆಸಿವೆ.

ಅ ಆ ಇ ಈ ಕನ್ನಡದಾ ಅಕ್ಷರ ಮಾಲೆ
ಅಂತ ಕನ್ನಡ ಕಲಿಸಿದರು.
ಕಾವೇರಿ ತೀರದಲ್ಲಿ ಒಂದು ಕಾಡು ಆ ಕಾಡೊಂದು ಮೃಗಗಳ ಬೀಡು ಅಂತ ಕಥೆ ಹೇಳಿದರು.
“ಚಿಲಿಪಿಲಿಗುಟ್ಟುವ ಹಕ್ಕಿಯ ಕಂಠದೆ “ಇಂಪನು ಇಟ್ಟವನಾರೆ”
ಚಂದ್ರಮುಖಿ ಪ್ರಾಣಸಖಿ, ಚತುರೆ ನೀ ಕೇಳೇ”
50 , 60 ರ ಗೀತೆಗಳು ಒಂದು ರೀತಿ ಆದರೆ, ಅಂಥಿಂಥ ಹೆಣ್ಣು ನಾನಲ್ಲ, ಪೂಜಿಸಲೆಂದೇ ಹೂಗಳ ತಂದೆ,
ಮಣ್ಣಲಿ ಕಲೆಯಾ ರೂಪಿಸುವೆ, 70, 80,90 ರ ಗೀತೆಗಳ ಸೊಗಸೇ ಬೇರೆ.
‘ಅಂತ’ ಚಿತ್ರದ
ಪ್ರೇಮವಿದೆ ಮನದೆ,
ಆನಂದಭೈರವಿಯ ಮಲಗಿರುವೆಯಾ ರಂಗನಾಥ, ಶ್ರುತಿ ಸೇರಿದಾಗ ಚಿತ್ರದ ಕನಸಲ್ಲಿ ಬಂದವನಾರೇ
ಹೀಗೇ ನೂರಾರು ಗೀತೆಗಳು ನುಗ್ಗಿಕೊಂಡು ಕಿವಿಯೊಳಗೆ ತೂರಿ ಬರುತ್ತವೆ.

ಎಸ್. ರಾಜೇಶ್ವರರಾವ್ ಅವರಿಂದ ಹಿಡಿದು ಇಳಯರಾಜ ,ಹಂಸಲೇಖ, ವಿ ಮನೋಹರ್ ವರೆಗೂ ಅನೇಕ ಸಂಗೀತ ನಿರ್ದೇಶಕರ ಜೊತೆ ಕೆಲಸ ಮಾಡಿದ್ದಾರೆ ಎಸ್ ಜಾನಕಿ.

ಇನ್ನು, ಬೇರೆ ಬೇರೆ ಗಾಯಕಿಯರ , ಗಾಯಕರ ಜೊತೆ ಹಾಡಿದ್ದಾರೆ. ಪಿ ಬಿ ಶ್ರೀನಿವಾಸ್, ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಜೊತೆಗೆ ಹಾಡಿರುವ ಯುಗಳಗೀತೆಗಳು ಸಾವಿರಾರು. ಹಾಗೆಯೇ ಅವರ ಗೀತೆಗಳಿಗೆ ಅಭಿನಯ ಮಾಡಿರುವ ನಾಯಕಿಯರು ಕೂಡ ಅನೇಕ ಮಂದಿ. ಅಂದಿನ ಸಾವಿತ್ರಿ , ಜಮುನಾ, ಲೀಲಾವತಿ, ಜಯಂತಿ, ಕಲ್ಪನಾ ರಿಂದ, ಇಂದಿನ ಸುಧಾ ರಾಣಿ, ಆಶಾರಾಣಿ , ಮಾಲಾಶ್ರೀ ವರೆಗೂ ಅಂದರೆ ಅವರ ಗಾನವಲಯದ ವ್ಯಾಪ್ತಿ, ಎಷ್ಟು ವಿಸ್ತಾರ..!

ದಕ್ಷಿಣ ಭಾರತ ಚಿತ್ರರಂಗದ ಎಲ್ಲರಿಗೂ ಎಸ್ ಜಾನಕಿ ಆಪ್ತರು.
ಇನ್ನು ಅಭಿಮಾನಿಗಳು ಅಂತ ನೋಡಿದರೆ, ಕೋಟಿ ಕೋಟಿ ಅಭಿಮಾನಿಗಳು.
ಗಾನಸಾಮ್ರಾಜ್ಞಿ ಆಗಿ ಎಲ್ಲರ ಹೃದಯಗಳಲ್ಲಿ ನೆಲೆಸಿದ್ದಾರೆ.
ಜಾನಕಿಯವರು ಮೂಲತಃ ತೆಲುಗಿನವರು. ಆದರೆ ಎಲ್ಲ ಭಾಷೆಗಳನ್ನು ಅರಿತು ಹಾಡಿದರು. ನಮ್ಮಲ್ಲಿ ನಮ್ಮವರೇ ಆಗಿ ಬೆರೆತರು.
ಚೆನ್ನೈ ನಲ್ಲಿ ವಾಸ ಮಾಡಿದರು.
ಹೈದರಾಬಾದ್ ನಲ್ಲಿ ಇದ್ದರು.
ಈಗ ಕೆಲವು ವರ್ಷಗಳಿಂದ ಮೈಸೂರಿನಲ್ಲಿ ನೆಲೆಸಿದ್ದರು.
ಮೈಸೂರಿನಲ್ಲಿ ಒಂದು ಸಂಗೀತ ಸಂಜೆಯಲ್ಲಿ ತಾವು ಇನ್ನು ಮುಂದೆ ಹಾಡುವುದಿಲ್ಲ ಎಂದೂ ಹೇಳಿದ್ದರು.
ತಮ್ಮ ಪಾಡಿಗೆ ತಾವು ಇರಲು ಬಯಸಿದರು.
ಆದರೆ ….
ನಿತ್ಯವೂ ಬರುವ ಅಭಿಮಾನಿಗಳನ್ನು ಭೇಟಿ ಮಾಡುತ್ತಿದ್ದರು. ಯಾರಾದರೂ ಕಿರಿಯರು ಅವರ ಮುಂದೆ ಹಾಡಿದಾಗ, ಬೆನ್ನು ತಟ್ಟಿ ಪ್ರೋತ್ಸಾಹ ನೀಡುತ್ತಿದ್ದರು.
ಮಾಧ್ಯಮ ಗಳಿಗೆ ಸಂದರ್ಶನ ಕೊಡುತ್ತಿರಲಿಲ್ಲ. ಯಾವುದೇ ಸಭೆ ಸಮಾರಂಭಗಳಲ್ಲಿ ಭಾಗವಹಿಸುತ್ತಿರಲಿಲ್ಲ.
ಅವರು ಶಾಂತಿ ಬಯಸುತ್ತಿದ್ದರು.
ಅವರು ಮಗುವಿನ ಹಾಗೆ ಇದ್ದರು. ಲೋಕ ವ್ಯವಹಾರ ಗಳು ತಿಳಿಯುತ್ತಿರಲಿಲ್ಲ. ನಾಟಕೀಯ ವರ್ತನೆ ತೋರುತ್ತಿರಲಿಲ್ಲ.
ಸದಾ ಕೃಷ್ಣನ ಧ್ಯಾನ ದಲ್ಲಿ ತೊಡಗಿರುತ್ತಿದ್ದರು.
ಮಗ ಮುರಳೀಕೃಷ್ಣ ಎಲ್ಲವನ್ನೂ ನಿಭಾಯಿಸುತ್ತಿದ್ದರು. ಆರು ತಿಂಗಳ ಹಿಂದೆ ಮಗ ತೀರಿಕೊಂಡರು.
ಅದಕ್ಕಿಂತ ಮುಂಚೆ ಅವರಿಗೆ ಅತ್ಯಂತ ಪ್ರೀತಿ ಪಾತ್ರ ಳಾಗಿದ್ದ ಮೊಮ್ಮಗಳು, ಒಂದು ಆಕಸ್ಮಿಕದಲ್ಲಿ ಅಗಲಿದಳು. ಕಳೆದ ಎರಡು ಮೂರು ವರ್ಷಗಳಲ್ಲಿ ಅವರು ಕುಟುಂಬದ ಆತ್ಮೀಯರನ್ನು ಕಳೆದುಕೊಂಡರು.

ಆದರೂ ಸ್ಥೈರ್ಯ ದಿಂದ ಸಮತೋಲನ ಕಳೆದುಕೊಳ್ಳದೆ ನಗುನಗುತ್ತಲೇ ಇದ್ದರು.

ಮಗ ಮುರಳಿ ಹೋದ ಮೇಲೆ , ಇನ್ನೊಬ್ಬ ಮೊಮ್ಮಗಳು ಅಪ್ಸರ ಬೆಂಗಳೂರಿಗೆ ಬನ್ನಿ ಎಂದಾಗಲೂ, ಹೈದರಾಬಾದ್ ನ ಆತ್ಮೀಯರು ಇಲ್ಲಿಗೆ ಬನ್ನಿ ಎಂದು ಕರೆದಾಗಲೂ, ಮೈಸೂರು ನನ್ನ ಕಾಪಾಡಿದೆ, ಮೈಸೂರು ಬಿಟ್ಟು ಎಲ್ಲೂ ಹೋಗುವುದಿಲ್ಲ ಎಂದು ಹೇಳಿದರು. ಮಗನ ಹಾಗೇ ಇದ್ದ ನವೀನ್ ಅಮ್ಮನನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಂಡರು.

ಆದರೆ ಇತ್ತೀಚೆಗೆ ಅವರನ್ನು ಗೃಹ ಬಂಧನ ಕ್ಕೆ ಒಳಪಡಿಸಲಾಗಿದೆ, ಅವರಿಗೆ ಸ್ವಾತಂತ್ರ್ಯ ಇಲ್ಲ ಎಂದೆಲ್ಲ ಸುಳ್ಳು ಸುದ್ದಿಗಳನ್ನು ಕೆಲವು you tubers ಮತ್ತು ಸಣ್ಣ ಮಾಧ್ಯಮಗಳು ಹಬ್ಬಿಸಿದಾಗ ತುಂಬಾ ತುಂಬಾ ನೊಂದುಕೊಂಡರು.

ನನಗೆ ಏನೂ ಬೇಡ , ನನಗೆ interview ಕೊಡುವುದು ಬೇಡ ಎಂದು ಹೇಳಿದರೆ ಇವರಿಗೆ ಯಾಕೆ ಅರ್ಥ ಆಗುವುದಿಲ್ಲ ಎಂದು ಬೇಸರ ಪಟ್ಟುಕೊಳ್ಳುತ್ತಿದ್ದರು.
ಅವರಿಗೆ ಸಾಕಷ್ಟು ಆರೋಗ್ಯ ತೊಂದರೆಗಳು ಇದ್ದವು.

ಆಸ್ಪತ್ರೆಗೆ ಹೋಗಬೇಕಾಗುತ್ತಿತ್ತು. ಸೀರೆ ಉಡುವುದೇ ಕಷ್ಟ ಆಗುತ್ತಿತ್ತು. ಅದರೂ ಅಭಿಮಾನಿಗಳಿಗೆ ಅಂತ ಒಂದಿಷ್ಟು ಸಮಯ ಮೀಸಲಿಟ್ಟು
ಮಾತಾಡುತ್ತಿದ್ದರು.

ಅವರ ಮಗ ಮುರಳಿ ಅಭಿಮಾನಿಗಳಿಗೆ ಹೇಳುತ್ತಿದ್ದ ಮಾತು, ದಯವಿಟ್ಟು ಸಾಮಾಜಿಕ ಜಾಲತಾಣಗಳಲ್ಲಿ ತಕ್ಷಣ ಅಮ್ಮನ ಜೊತೆಗಿನ ಫೋಟೊ ಹಂಚಿಕೊಳ್ಳಬೇಡಿ, ಅವರ ಜೊತೆಗೆ video ಮಾಡಬೇಡಿ, ಅದು ಬೇರೆ ಬೇರೆ ಕಡೆ ಹರಡಿ, ಅವರು ಎಲ್ಲರನ್ನೂ ನೋಡುತ್ತಾರೆ ಎಂಬ ಭಾವ ಹಬ್ಬಿ, ಇನ್ನಷ್ಟು, ಮತ್ತಷ್ಟು ಜನ ಬರುತ್ತಾರೆ. ಅವರಿಗೆ ಕೈಲಾಗುವುದಿಲ್ಲ, rest ಬೇಕು ಎಂದು .
ಆದರೇನು ?
ನಮ್ಮ ಮಂದಿಗೆ ಇವೆಲ್ಲಾ ತಿಳಿಯುತ್ತಲೇ ಇರಲಿಲ್ಲ.
ಹ್ಞೂ ಎಂದು ಹೇಳಿ ಬಂದು ಎರಡು ದಿನಗಳಿಗೆ ಜಾಲತಾಣಗಳಲ್ಲಿ post ಮಾಡುತ್ತಿದ್ದರು. ಮುರಳಿ ಮತ್ತು ಅಮ್ಮ ನೊಂದುಕೊಳ್ಳುತ್ತಿದ್ದರು.
ಅವರು ಮನೆಯಲ್ಲಿ ನೈಟಿ ಧರಿಸಿದರೂ , ಯಾರಾದರೂ ಬರುತ್ತಾರೆ ಎಂದರೆ ಸೀರೆ ಉಟ್ಟುತಯಾರಾಗುತ್ತಿದ್ದರು.
ಕಷ್ಟ ಆದರೂ ಕುಳಿತುಕೊಳ್ಳುತ್ತಿದ್ದರು. ಇದ್ಯಾವುದೂ ಯಾರಿಗೂ ಗೊತ್ತಾಗಲೇ ಇಲ್ಲ.

ಒಬ್ಬರು ಅಭಿಮಾನಿ, ನೈಟಿ ಯಲ್ಲಿ ಇರುವಾಗ ಫೋಟೋ ತೆಗೆಯಬೇಡ ಎಂದು ಅವರು ಎಷ್ಟು ಹೇಳಿದರೂ , ಇದು ನೆನಪಿಗೆ ಮಾತ್ರ , ಎಲ್ಲೂ ಹಾಕುವುದಿಲ್ಲ ಎಂದು ಮಾತು ಕೊಟ್ಟು, ಫೋಟೋ ತೆಗೆದು , ತನ್ನ ಜಾಲತಾಣದಲ್ಲಿ post ಮಾಡಿದ್ದು ಅಷ್ಟೇ ಅಲ್ಲದೆ, ತಾನು ಹಾಡಿದ ಒಂದು ಸಂಗೀತ ಕಾರ್ಯಕ್ರಮ ಕ್ಕೆ ಆ ಫೋಟೋ back drop ಮಾಡಿಕೊಂಡರು.

ಮುರಳಿ ಇಂತಹ ಘಟನೆಗಳಿಂದ ಬೇಸತ್ತುಹೋಗಿದ್ದರು. ಅಮ್ಮ ನೊಂದುಕೊಳ್ಳುತ್ತಿದ್ದರು. ಮುರಳಿ ಅವರಿಗೂ ಆರೋಗ್ಯ ಸರಿ ಇರಲಿಲ್ಲ. ಈ ಕಾರಣಗಳಿಗಾಗಿಯೇ ಅವರು ಎಲ್ಲರನ್ನೂ ನೋಡಲು ಇಷ್ಟಪಡುತ್ತಿರಲಿಲ್ಲ. ಆದರೆ ಇದನ್ನು ಬೇರೆ ರೀತಿಯಲ್ಲಿ ಭಾವಿಸಿ ಬಾಯಿಗೆ ಬಂದದ್ದೆಲ್ಲ ಮಾತಾಡುತ್ತಾ ಮೂರು ದಿನಗಳ ಸೀರಿಯಲ್ ರೂಪದಲ್ಲಿ ಒಂದು channel ಪ್ರಸಾರ ಮಾಡಿತು.

ಅಮ್ಮ ತುಂಬಾ ತುಂಬಾ ನೊಂದುಕೊಂಡರು. ನನ್ನಿಂದಾಗಿ ಬೇರೆಯವರಿಗೆ ತೊಂದರೆ ಅಂತ ದುಃಖ ಪಡುತ್ತಿದ್ದರು. ಬಾಲ್ಯದಲ್ಲೇ ತಂದೆ ತಾಯಿಯನ್ನು ಕಳೆದುಕೊಂಡರು. ಮಧ್ಯವಯಸಲ್ಲಿ ಪತಿಯನ್ನು ಕಳೆದುಕೊಂಡರು. ಕೊನೆಗಾಲದಲ್ಲಿ ಮಗನನ್ನು ಮೊಮ್ಮಗಳನ್ನು ಕಳೆದುಕೊಂಡರು.
ಬದುಕಿನ ಅನೇಕ ಏರಿಳಿತಗಳನ್ನು ಅನುಭವಿಸಿದರು. ಅವರು ಹಾಡುಗಳ ಸರದಾರಿಣಿ. ಅವರು ದಕ್ಷಿಣ ಭಾರತದ ಸಂಗೀತ ಪ್ರೇಮಿಗಳ ಹೃದಯ ಸಿಂಹಾಸನಾಧೀಶ್ವರಿ. ಆದರೆ ಅವರು ಒಬ್ಬ ಅಮ್ಮ. ಅವರು ಒಬ್ಬ ಅಜ್ಜಿ. ಅವರು ಒಬ್ಬರು ಗೃಹಿಣಿ. ಅವರಿಗೆ ವೈಯುಕ್ತಿಕ ಬದುಕು ಇತ್ತು . ಇದನ್ನು ಗೌರವಿಸುವ ಬುದ್ಧಿ ಕೆಲವರಿಗೆ ಬರಲೇ ಇಲ್ಲ ಎಂದು ನೋವಾಗುತ್ತದೆ.

ಕಳೆದ ಅನೇಕ ದಿನಗಳಿಂದ ನಾನು, ನನ್ನ ಅಕ್ಕ ಸುಧಾರಾಣಿ ಜಾನಕಿ ಅಮ್ಮನ ಒಡನಾಟದಲ್ಲಿ ಇರಲು ಸಾಧ್ಯ ಆಗಿತ್ತು. ಮೌನವಾಗಿ ಹೋಗಿ ಬರುತ್ತಿದ್ದೆವು. ಮುರಳಿ ಜೊತೆ ಗಂಟೆಗಟ್ಟಲೆ ಮಾತಾಡಿದ್ದೇವೆ. ಜಾನಕಿ ಅಮ್ಮನ ಜೊತೆ ಬಂಗಾರದ ಸಮಯ ಸಿಕ್ಕಿದ್ದು ನಮ್ಮ ಪುಣ್ಯ. ಅಮ್ಮ ಅಕ್ಕನ ಮನೆಗೂ ಸಹ ಬಂದಿದ್ದರು.

ಅವರೇ ಹಾಡಿದ ಕೆಲವು ಅಪರೂಪದ ಹಾಡುಗಳನ್ನು ಅವರಿಗೆ ಕಳಿಸಿದ್ದೆ. ” ಓ , ಇದನ್ನು ಮರೆತೇ ಬಿಟ್ಟಿದ್ದೇನೆ, ಚೆನ್ನಾಗಿದೆ ಅಲ್ಲವಾ” ಎನ್ನುತ್ತಿದ್ದರು ಮಗುವಿನ ಹಾಗೆ.

ಕೆಲವು ಸಲ ಆ ಹಾಡು ಹಾಡಿದಾಗ ಏನಾಯ್ತು ಅಂತ ಹೇಳುತ್ತಿದ್ದರು. ಚಿತ್ರರಂಗದಲ್ಲಿ ಅವರು ಮೇರು ಸ್ಥಿತಿಯಲ್ಲಿ ಇದ್ದಾಗ ಆ ಕಾಲ ಹೇಗಿತ್ತು ಎಂದು ಘಟನೆಗಳನ್ನು ನೆನಪು ಮಾಡಿಕೊಳ್ಳುತ್ತಿದ್ದರು. ಇದನ್ನೆಲ್ಲಾ ಬರೆಯಬಹುದು ಅಂದರೆ, ಯಾಕೆ ಬರೆಯಬೇಕು , ಬೇಕಿಲ್ಲ ಎನ್ನುತ್ತಿದ್ದರು. ಈಗ ಅದನ್ನೆಲ್ಲ ಹೇಳಿ ಏನು ಪ್ರಯೋಜನ, ಯಾಕೆ ಯಾರ ಬಗ್ಗೆ ಯಾದರೂ ನಾನು ಈಗ ಮಾತಾಡಬೇಕು ಎನ್ನುತ್ತಿದ್ದರು.

ಇಂಥ ಸೂಕ್ಷ್ಮ ಮನಸಿನ ಕಲಾವಿದೆಯನ್ನು ಅರ್ಥ ಮಾಡಿಕೊಳ್ಳುವಲ್ಲಿ ಮಾಧ್ಯಮ ಗಳು ಎಡವಿದವು. ಅಭಿಮಾನಿಗಳು ಔಚಿತ್ಯ ಮೀರಿ ವರ್ತಿಸಿದರು.
ಇಂದು, ತಮ್ಮ ಪ್ರೀತಿಯ ಮುರಳಿಯನ್ನು ಕಾಣಲು ಅಮ್ಮ ಹೊರಟುಬಿಟ್ಟರು. ಅಲ್ಲಿ ಅವರಿಗೆ ಸ್ವರ್ಗ ಇದೆ . ಎಸ್ ಪಿ ಬಾಲಸುಬ್ರಹ್ಮಣ್ಯಂ, ಪಿ ಬಿ ಶ್ರೀನಿವಾಸ್, ರಾಜಕುಮಾರ್ , ಜಿಕೆ ವೆಂಕಟೇಶ್ ಎಲ್ಲರೂ ಅಲ್ಲಿದ್ದಾರೆ.

ಅಮ್ಮ ಈಗ ಸಂತೋಷವಾಗಿದ್ದಾರೆ.
ಪ್ರೀತಿಯ ಜಾನಕಿ ಅಮ್ಮನಿಗೆ ನಮಸ್ಕಾರ.

‍ಲೇಖಕರು Admin

17 July, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading