ಹಾಲಿವುಡ್ ಎಂಬ ಬಣ್ಣದ ಲೋಕ..

(ನಿನ್ನೆಯಿಂದ)

ಹಾಲಿವುಡ್ ಎಂಬ ಬಣ್ಣದ ಲೋಕ..

ಹಾಲಿವುಡ್ ಎನ್ನುವ ಈ ಬಣ್ಣದ ಲೋಕವೇ ಒಂದು ವಿಚಿತ್ರ ವಿಶ್ವ.  ಇಲ್ಲಿ ಎಲ್ಲವೂ ಚಲನಚಿತ್ರ, ತಾರೆಗಳು, ಸೌಂದರ್ಯ ವರ್ಧಕಗಳು, ತಾರೆಯರ ಸಾಧನೆಗಳು, ಅವರ ವೇಷಭೂಷಣಗಳು, ಚಿತ್ರ ಪಟಗಳು, ರೂಪದರ್ಶಿಯರು ಇಂಥವುಗಳದ್ದೇ ವಿಶಿಷ್ಟ ಲೋಕ. ಪ್ರಸಿದ್ಧರಾದ ನಟ-ನಟಿಯರ, ಅವರ ನೈಜ ರೂಪ ಲಕ್ಷಣಗಳ ಮೇಣದ ಪ್ರತಿಮೆಗಳ ‘ಮೇಡಂ ಟಸ್ಸಾಡ್ಸ್’ ಎಂಬ ಮೂರಂತಸ್ತಿನ ದೊಡ್ಡ ಸಂಗ್ರಹಾಲಯವಿದೆ.

ಅಲ್ಲಿರುವ ಪ್ರತಿಮೆಗಳ ನಟ-ನಟಿಯರು ಅವರು ಪ್ರಸಿದ್ಧರಾದ ಚಲನಚಿತ್ರಗಳ ವೇಷಭೂಷಣಗಳ ರೂಪದಲ್ಲಿ, ನೈಜ ಎತ್ತರ ಗಾತ್ರಗಳಲ್ಲಿ ಅವರ ಮೇಣದ ಪ್ರತಿಮೆಗಳನ್ನು ನಿರ್ಮಿಸಿದ್ದಾರೆ. ಅದರ ಜೊತೆಯಲ್ಲಿ ನಿಂತು ಫೋಟೋ ತೆಗೆಸಿಕೊಳ್ಳಬಯಸುವವರಿಗೆ, ಅದಕ್ಕೆ ಪೂರಕವಾದ ಪ್ರಾಪ್ಸ್ (ವೇಷ ಭೂಷಣ, ಪರಿಕರ,  ಸಲಕರಣೆಗಳು) ಅನ್ನು ಅದರ ಸನಿಹದಲ್ಲೇ ಇರಿಸಿರುತ್ತಾರೆ ಮತ್ತು ಅದೇ ಚಲನಚಿತ್ರದ ವಾತಾವರಣವನ್ನೇ ತಕ್ಕಮಟ್ಟಿಗೆ ನಿರ್ಮಿಸಿರುತ್ತಾರೆ.

ಅಲ್ಲಿಗೆ ಬಂದವರು ಆ ಪರಿಕರಗಳನ್ನು ಧರಿಸಿ, ತನ್ನ ಮೆಚ್ಚಿನ ನಟನಟಿಯರ ಪಕ್ಕದಲ್ಲಿ ನಿಂತು, ಕುಳಿತು, ತಬ್ಬಿಕೊಂಡು, ವಿವಿಧ ಭಂಗಿಗಳನ್ನು ನೀಡುತ್ತಾ ಫೋಟೋ ತೆಗೆಸಿಕೊಳ್ಳಬಹುದು. ಈ ಸಂಗ್ರಹಾಲಯದ ಪ್ರವೇಶದಲ್ಲಿಯೇ ಇಲ್ಲಿಗೆ ಬಂದವರು ಸ್ಮರಣಿಕೆಯಂತಹ ಫೋಟೋಗಳನ್ನು ತೆಗೆಸಿಕೊಳ್ಳಬಹುದು. ವೀಕ್ಷಣೆಯನ್ನು ಮುಗಿಸಿಕೊಂಡು ತೆರಳುವಾಗ ಮುಂಗಟ್ಟೆಯಲ್ಲಿ ನಾಲ್ಕೈದು ಭಂಗಿಯ, ಹಿನ್ನೆಲೆಯ ನಮ್ಮ ಭಾವಚಿತ್ರವನ್ನು ಕಂಪ್ಯೂಟರಿನಲ್ಲಿ ತೋರಿಸುತ್ತಾರೆ.

ಸಂಭಾಷಣೆಯಲ್ಲಿ ನಿರತರು.. ನಿಜವಾದವರು ಯಾರು? ಮೇಣದ ಪ್ರತಿಮೆ ಯಾರು?

ಅವುಗಳಲ್ಲಿ ನಮಗೆ ಇಷ್ಟವಾದದ್ದನ್ನು ಖರೀದಿಸಬಹುದು; ಇಷ್ಟವಾಗದಿದ್ದರೆ ತಿರಸ್ಕರಿಸಿಯೂ ಬರಬಹುದು. ಇದೇ ತಾಣದಲ್ಲಿ ಬಣ್ಣ-ಬಣ್ಣದ ಮೇಣದಲ್ಲಿ ನಮ್ಮ ಕೈಯನ್ನು ಅದ್ದಿ ಪ್ರತಿಕೃತಿಯನ್ನು ತಯಾರಿಸಿಕೊಡುವಂತಹ ಒಂದು ವ್ಯವಸ್ಥೆಯೂ ಇದೆ. ಇವೆಲ್ಲವನ್ನೂ ನೋಡಿಕೊಂಡು ಕೆಳಗಿಳಿದು ಹೊರಬರುವಾಗ, ಕೆಳಗಿನ ಅಂತಸ್ತಿನಲ್ಲಿ ಹತ್ತು ಹದಿನೈದು ನಿಮಿಷಗಳ ಒಂದು 3ಡಿ ಸಿನಿಮಾವನ್ನು ತೋರಿಸುತ್ತಾರೆ.

ಡಾಲ್ಬಿ ಸಭಾಂಗಣ

ಈ ಸಂಗ್ರಹಾಲಯಕ್ಕೆ ಹೋಗುವ ಮುನ್ನವೇ ವಿಶ್ವ ಪ್ರಸಿದ್ಧವಾದ ಐದು ಅಂತಸ್ತಿನ, 1,80,000 ಚದುರಡಿ ವಿಶಾಲವಾಗಿರುವ 3ಡಿ ತಂತ್ರಜ್ಞಾನವನ್ನು ಹೊಂದಿರುವ, ಪ್ರತಿಷ್ಟಿತ ಆಸ್ಕರ್ ಪ್ರಶಸ್ತಿಗಳನ್ನು ನೀಡುವ ‘ಡಾಲ್ಬಿ’ ಸಭಾಂಗಣವು ಸಿಗುತ್ತದೆ.

ಜಗತ್ತಿನಾದ್ಯಂತ ಅದೆಷ್ಟೋ ನಟ-ನಟಿಮಣಿಯರ ಕನಸು ಸಾಕಾರ ಮಾಡುವ, ಅಂತೆಯೇ ಇನ್ನು ಹಲವರಿಗೆ ಕೇವಲ ಕನಸೇ ಆಗಿ ಉಳಿಯುವ, ಮರೀಚಿಕೆಯಾಗುವ ಈ ಜಾಗವು ಚಿತ್ರ ತಾರೆಯರ ಮಟ್ಟಿಗೆ ದೇವಾಲಯವೇ ಸರಿ.

ನೆಲದ ಮೇಲೆ ನಕ್ಷತ್ರಗಳು ಚೆಲ್ಲಿದ ಹಾದಿ..

ಮೇಣದ ಜಗತ್ತಿನಿಂದ ಹೊರಬಂದರೆ ಆ ರಸ್ತೆಯ ಎರಡೂ ಬದಿಯ ಪಾದಚಾರಿ ಮಾರ್ಗದಲ್ಲಿ ಹಾಗೂ ಅದಕ್ಕೆ ಹೊಂದಿಕೊಂಡಿರುವ ಅಡ್ಡ ರಸ್ತೆಗಳ ಪಾದಚಾರಿ ಮಾರ್ಗಗಳ ಎರಡೂ ಬದಿಯಲ್ಲೂ ಚಿತ್ರರಂಗದಲ್ಲಿ ವಿವಿಧ ರೀತಿಯ ಸಾಧನೆಯನ್ನು ಮಾಡಿದ (ನಟರು, ನಿರ್ಮಾಪಕರು, ನಿರ್ದೇಶಕರು, ತಂತ್ರಜ್ಞರು, ಛಾಯಾಚಿತ್ರಗಾರರು, ಸಂಗೀತ ಸಂಯೋಜಕರು, ಗಾಯಕರು.. ಈ ರೀತಿ ಹದಿನೈದು ವಿಭಾಗಗಳಲ್ಲಿ ಸಾಧನೆಯನ್ನು ತೋರಿದವರ) 2600ಕ್ಕೂ ಹೆಚ್ಚು ತಮ್ಮ ಆರಾಧ್ಯದೇವರ ಹೆಸರುಗಳನ್ನು ಸುಮಾರು ಒಂದೂವರೆ ಅಡಿ ನಕ್ಷತ್ರಗಳಲ್ಲಿ ಕೆತ್ತಿಸಿ ಹುಗಿಸಿದ್ದಾರೆ.

ಇಲ್ಲಿಗೆ ಬಂದವರು ತಮ್ಮ ನೆಚ್ಚಿನ ಆರಾಧ್ಯದೇವರ ನಕ್ಷತ್ರಗಳನ್ನು ಹುಡುಕುತ್ತಾ ಸುಮಾರು ನಾಲ್ಕು ಕಿಲೋಮೀಟರ್ ದೂರ ಸಾಗುವುದು ಒಂದು ಮೋಜಿನ ವಿಷಯ. ಆ ನಕ್ಷತ್ರಗಳು ಕಂಡ ತಕ್ಷಣ ಅದರ ಪಕ್ಕದಲ್ಲಿ ನಿಂತೋ, ಕುಳಿತೋ ಫೋಟೋ ತೆಗೆಸಿಕೊಳ್ಳುವುದು ಇಲ್ಲಿ ಸಾಮಾನ್ಯವಾಗಿ ಕಾಣಸಿಗುವ ದೃಶ್ಯ.

ಕೆಲವು ಬಾರಿ ಎಷ್ಟು ಹುಡುಕಿದರೂ ಸಿಗದ ತಾರೆಯರ ತಾರೆಗಳನ್ನು ಹುಡುಕಲು ಗೂಗಲ್ ಕೂಡ ಸಹಾಯ ಮಾಡುತ್ತದೆ. ಆ ತಾರೆ ನಿಖರವಾಗಿ ಅವರು ನಿಂತಲ್ಲಿಂದ ಎಷ್ಟು ದೂರದಲ್ಲಿ, ಯಾವ ದಿಕ್ಕಿನಲ್ಲಿ, ಯಾವ ಗುರುತಿರುವ ಕಡೆ ಇದೆ ಎಂದು ಸೂಚಿಸುತ್ತದೆ. ಅಬ್ಬಾ ಗೂಗಲ್‌ನ ಮಹಿಮೆಯೇ!!

ನಕ್ಷತ್ರಗಳು ಚೆಲ್ಲಿದ ಹಾದಿಯಲ್ಲಿ ಮಗಳು ತನಗೆ ಬೇಕಾದ ತಾರೆಯನ್ನು ಗೂಗಲ್ ಸಹಾಯದಿಂದ ಹುಡುಕಿದ ಕ್ಷಣ

ತಾರೆಗಳನ್ನು ನೋಡಿದ ಸಂಭ್ರಮವೆಲ್ಲ ಮುಗಿದ ಮೇಲೆ ಪ್ರಸಿದ್ಧವಾದ ‘ಹಾಲಿವುಡ್’ ಚಿನ್ಹೆಯನ್ನು ಹುಡುಕುತ್ತಾ ಕೆಲವು ಕಟ್ಟಡಗಳನ್ನು ದಾಟಿ ಒಂದು ಕಟ್ಟಡಕ್ಕೆ ಬಂದೆವು. ಅದರ ಮೂರನೆಯ ಅಂತಸ್ತಿನಲ್ಲಿದ್ದ ಕಾಫಿಬಾರ್‌ನಲ್ಲಿ ಒಂದಷ್ಟು ಕಾಫಿ, ಹೊಟ್ಟೆಗೊಂದಿಷ್ಟು ಸರಕನ್ನು ತುಂಬಿಸಿಕೊಂಡ ಮೇಲೆ ಅದೇ ಅಂತಸ್ತಿನ ಕಾರಿಡಾರಿನಿಂದ ಹಾಲಿವುಡ್ ಚಿನ್ಹೆಯು ಕಾಣಸಿಕ್ಕಿತು.

ಪಕ್ಕದಲ್ಲಿರುವ ಒಂದು ಕಿರಿಯ ಗುಡ್ಡದ ಮೇಲೆ ದೂರದವರೆಗೂ ಕಾಣುವಂತೆ ‘HOLLYWOOD’ ಎಂದು ದೊಡ್ಡ ಅಕ್ಷರಗಳಲ್ಲಿ ಮೂಡಿಸಿದ್ದಾರೆ. ಇದು ಗುಡ್ಡದ ಒಂದು ಪಾರ್ಶ್ವದಲ್ಲಿ ಇರುವುದರಿಂದ, ಲಾಸ್ ಏಂಜಲೀಸ್‌ನ ಈ ಭಾಗದಲ್ಲಿ ಮಾತ್ರ ಕಾಣಸಿಗುತ್ತದೆ. ಇಷ್ಟು ಪ್ರಸಿದ್ಧವಾದ ಹಾಲಿವುಡ್ ಚಿನ್ಹೆಯನ್ನು ದೀಪಾಲಂಕಾರಗಳು ಬೆಳಗಿಲ್ಲದಿರುವುದು ಅಚ್ಚರಿಯೆನಿಸಿತು.

ನಮ್ಮ ಸಂದೇಹಕ್ಕೆ ಸಿಕ್ಕ ಉತ್ತರ ಇನ್ನಷ್ಟು ಅಚ್ಚರಿಯನ್ನು ನೀಡಿತು. ‘ಯಾವ ಆದಾಯಕ್ಕೂ ಮೂಲವಲ್ಲದ ಇದಕ್ಕಾಗಿ ಅಲಂಕರಣದ ವೆಚ್ಚ ಭರಿಸುವವರು ಯಾರು? ಅಷ್ಟೇ ಅಲ್ಲದೆ, ಅದನ್ನು ಅಲಂಕರಿಸಿದರೆ ನೋಡಲು ಅಲ್ಲಲ್ಲಿ ಗುಂಪುಗೂಡುವ ಜನರಿಂದ ವಾಹನ ಸಂಚಾರಕ್ಕೆ ತಡೆಯಾಗುತ್ತದೆ!!’.

ಮೈಸೂರಿನ ದಸರೆಯ ಸಮಯದಲ್ಲಿ ‘ಸುಸ್ವಾಗತ’ ಎಂದು ಹತ್ತು ಮೈಲು ದೂರಕ್ಕೂ ಕಾಣುವಂತೆ ಮಾಡುವ ವಿದ್ಯುತ್ ಅಲಂಕಾರವನ್ನು, ಇಡೀ ಊರು ಬಣ್ಣ-ಬಣ್ಣದ ವಿದ್ಯುದ್ದೀಪಗಳಿಂದ ಸಿಂಗರಿಸಿಕೊಂಡಿರುವುದನ್ನು, ಹಾಗೆಯೇ ತಿಂಗಳುಗಟ್ಟಲೆ ದೀಪಾಲಂಕಾರಗಳಿಂದ ಬೆಳಗುವ ದಸರಾ ವಸ್ತು ಪ್ರದರ್ಶನವನ್ನೂ, ನೋಡಿ ಸಂತೋಷಿಸುವ ಅಲ್ಲದೇ ವರ್ಷಪೂರ್ತಿ ಪ್ರತಿ ಭಾನುವಾರ ಅರಮನೆಯ ದೀಪಗಳ ಬೆಳಕಿನ ಅಲಂಕಾರವನ್ನು ನೋಡಲೆಂದೇ ಹೋಗುವ ನಮಗೆ ಇಂತಹ ಆಲೋಚನೆ ವಿಚಿತ್ರವೆನ್ನಿಸದೆ?!

ಡಿಸ್ನಿಲ್ಯಾಂಡ್ ಎಂಬ ಮಕ್ಕಳ ಮಾಯಾಲೋಕ..

ಇಂದಿನ ನಾಗರೀಕತೆ ಎಂದುಕೊಳ್ಳುವ ಓಟದಲ್ಲಿ ಸಾಗಿರುವ ಹೊಸ ಪೀಳಿಗೆಯ ಪ್ರತಿಯೊಬ್ಬ ಮಗುವಿನ ಕನಸೂ ‘ಡಿಸ್ನಿಲ್ಯಾಂಡ್’ ಎನ್ನುವ ಮಾಯಾಲೋಕವನ್ನು ನೋಡಬೇಕೆಂಬುದು. ನಾವು ಚಿಕ್ಕವರಿದ್ದ ಕಾಲದಲ್ಲಿ ಹಿರಿಯರು ಕಿನ್ನರ ಲೋಕದ ಕತೆಗಳನ್ನು ಹೇಳಿ, ನಮ್ಮಲ್ಲಿ ಕಲ್ಪನೆಗಳು ಗರಿಗೆದರುವಂತೆ ಮಾಡಿ, ನಮ್ಮಲ್ಲಿ ಬೆರಗು ಹುಟ್ಟಿಸುತ್ತಿದ್ದರು.

ಇಂದಿನ ಮಕ್ಕಳಿಗೆ ಅಂತಹ ರೋಮಾಂಚಕ ಕತೆ ಹೇಳುವವರು ಇಲ್ಲದಿರುವುದರಿಂದ, ಹಾಗೂ ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಬದುಕಿನ ರೀತಿಯಲ್ಲೂ ಬದಲಾವಣೆಗಳಾಗಿ, ಅವರ ಚಿತ್ರ ಪುಸ್ತಿಕೆಗಳಲ್ಲಿ, ಟಿ.ವಿಯ ಕಾಮಿಕ್ ಚಾನೆಲ್‌ಗಳಲ್ಲಿ, ವಿಡಿಯೋ ಆಟಗಳಲ್ಲಿ, ಯೂಟ್ಯೂಬ್‌ಗಳಲ್ಲಿ ಕಾಣ ಸಿಗುವ ಮಿಕ್ಕಿ, ಡೊನಾಲ್ಡ್, ಸ್ಪಂಜ್‌ಬಾಬ್, ಲೇಡಿ ಬಗ್, ಡೈನಸಾರ್.. ಮೊದಲಾದ ಕಥಾವ್ಯಕ್ತಿತ್ವಗಳು ಅದೇ ಬೆರಗನ್ನು ಹುಟ್ಟಿಸುತ್ತವೆ.

ಈ ಡಿಸ್ನಿಲ್ಯಾಂಡ್‌ನಲ್ಲಿ, ಆ ಕಥಾವ್ಯಕ್ತಿತ್ವಗಳ ವೇಷಗಳನ್ನು ಧರಿಸಿದಂತವರು ಅಲ್ಲಲ್ಲಿ ಓಡಾಡುತ್ತಾ ಮಕ್ಕಳೊಂದಿಗೆ ಬೆರೆಯುತ್ತಾ, ಅವರೊಂದಿಗೆ ಫೋಟೋಗೆ ವಿವಿಧ ಭಂಗಿಗಳನ್ನು ನೀಡುತ್ತಾ ಓಡಾಡುತ್ತಿರುತ್ತಾರೆ ಮತ್ತು ಆ ಪಾತ್ರಗಳಿಗೆ ಸಂಬಂಧಿಸಿದಂತ ಹಲವು ಆಟಗಳು ಇಲ್ಲಿವೆ. ಲಾಸ್ ಏಂಜಲೀಸ್‌ನ ಈ ಪ್ರವಾಸಿಗರ, ಮಕ್ಕಳ ನೆಚ್ಚಿನ ತಾಣ 1955ರ ಜುಲೈ 17ರಂದು 160 ಎಕರೆಗಳಷ್ಟು ವಿಸ್ತಾರವಾದ ಪ್ರದೇಶದಲ್ಲಿ ಆರಂಭವಾಯಿತು.

ಬೇರೆ-ಬೇರೆ ದೇಶಗಳಲ್ಲಿ ಕೆಲವೆಡೆ ಡಿಸ್ನಿಲ್ಯಾಂಡ್ ಇದ್ದರೂ ಇಲ್ಲಿನ ಈ ತಾಣ ಅತ್ಯಂತ ಪ್ರಸಿದ್ಧವಾದುದು ಮತ್ತು ವಿಶಾಲವಾದುದು. 10250 ಕಾರಿನ ನಿಲುಗಡೆ ಜಾಗಗಳು ಆರೇಳು ಅಂತಸ್ತಿನಲ್ಲಿ ನಿರ್ಮಾಣವಾಗಿದೆಯೆಂದರೆ ಇಲ್ಲಿನ ವಿಸ್ತಾರವನ್ನು ಯಾರೂ ಊಹಿಸಿಕೊಳ್ಳಬಹುದು.

ಈ ತಾಣವನ್ನು ಎರಡು ಭಾಗಗಳಾಗಿ ವಿಂಗಡಿಸಿದ್ದಾರೆ: ಒಂದು ‘ಡಿಸ್ನಿ ಲ್ಯಾಂಡ್ ಉದ್ಯಾನವನ’ ಇನ್ನೊಂದು ‘ಡಿಸ್ನಿ ಕ್ಯಾಲಿಫೋರ‍್ನಿಯಾ ಸಾಹಸ ವಿಭಾಗ’. ಒಂದು ದಿನದಲ್ಲಿ ಈ ಎರಡೂ ವಿಭಾಗಗಳನ್ನು ನೋಡಲು ಯಾರಿಂದಲೂ ಸಾಧ್ಯವಿಲ್ಲ. ಪೂರ್ತಿಯಾಗಿ ನೋಡಬೇಕೆನ್ನುವವರು ಇಲ್ಲೇ ಎರಡರಿಂದ ಮೂರುದಿನ ಉಳಿದುಕೊಂಡು ಎರಡೂ ಭಾಗಗಳಲ್ಲಿ ಸುತ್ತಾಡುತ್ತಾರೆ.

ನಮಗೆ ಅಷ್ಟೊಂದು ಸಮಯಾವಕಾಶ ಇಲ್ಲದ್ದರಿಂದ ಬರಿಯ ಸಾಹಸ ಭಾಗವನ್ನಷ್ಟೆ ಆಯ್ದುಕೊಂಡು ನಮ್ಮ ಪಯಣವನ್ನು ಆರಂಭಿಸಿದೆವು. ಈ ತಾಣಕ್ಕೆ ಬರುವ ಹಲವರು ತಮ್ಮ ನೆಚ್ಚಿನ ಕಾಮಿಕ್ ಪಾತ್ರದ ಸಂಕೇತವಾಗಿ, ಬೆಕ್ಕಿನ ಕಿವಿಗಳಂತದೋ, ಹಲವು ಬಗೆಯ ಕಿರೀಟದಂತದೋ ಕೆಲವು ವೇಷಭೂಷಣಗಳನ್ನು ಧರಿಸಿ ತಾವೂ ಆ ಕಾಮಿಕ್ ಪಾತ್ರಗಳ ಒಂದು ಅಂಶವೇನೋ ಎನ್ನುವಂತೆ ಓಡಾಡುತ್ತಿರುತ್ತಾರೆ.

ನಮ್ಮೂರ ಜಾತ್ರೆಯಲ್ಲಿ ಥರಥರದ ರಿಬ್ಬನ್‌ಗಳನ್ನು ಜಡೆಗೆ ಕಟ್ಟಿಕೊಂಡು, ಬಣ್ಣಬಣ್ಣದ ಮಣಿಸರಗಳನ್ನು, ಕೈಗೆ ಸುಂದರವಾದ ಬಳೆಗಳನ್ನು ಧರಿಸಿಕೊಂಡು, ಕೈಯಲ್ಲಿ ಬಲೂನನ್ನೋ, ಪೀಪಿಯನ್ನೋ, ತುತ್ತೂರಿಯನ್ನೋ ಊದುತ್ತಾ ನಾವು ಸಂತಸ ಪಡುತ್ತಿದ್ದಂತೆ, ಈ ವಿಧದಲ್ಲಿ ಇಲ್ಲಿ ಬರುವ ಪ್ರವಾಸಿಗರು ಸಂತೋಷ ಪಡುತ್ತಿರುತ್ತಾರೆ. ಒಂದು ಕಲ್ಪನಾ ಲೋಕದಲ್ಲಿ ವಿಹರಿಸುತ್ತಾ ಸಂತೋಷ ಪಡಲು ಯಾರ ಅನುಮತಿಯೂ ಬೇಕಿಲ್ಲವಲ್ಲ!!

ಈ ಸಾಹಸ ವಿಭಾಗದಲ್ಲಿ ಹಲವು ಬಗೆಯ ಆಕರ್ಷಕ 3ಡಿ, 4ಡಿ ಪ್ರದರ್ಶನಗಳಿವೆ. ಆ ಪ್ರದರ್ಶನಗಳಲ್ಲಿ ಭಾಗವಹಿಸುವವರಿಗೆ ತಾವೂ ಆ ಪ್ರದರ್ಶನದ ಒಂದು ಭಾಗವಾಗಿ ಹೋಗಿರುವಂತ ಭ್ರಮೆ ಹುಟ್ಟಿಸುತ್ತದೆ. ರ‍್ಯಾಕೆಟ್‌ಗಳಲ್ಲಿ ಕುಳಿತು ವೇಗವಾಗಿ ಗ್ಯಾಲಕ್ಸಿಯಲ್ಲಿ ಪ್ರಯಾಣಿಸುತ್ತೇವೆ; ಡೈನಸಾರ್‌ಗಳಂತೂ ನಮ್ಮ ಸುತ್ತ ಮುತ್ತಲೇ ಅಡ್ಡಾಡುತ್ತಿರುತ್ತವೆ.

ಮಕ್ಕಳ ಆಟಗಳ ಒಂದು ನೋಟ

ಹಲವು ಪಾತ್ರಗಳು ನಮ್ಮ ತಲೆಯ ಮೇಲೆ, ಭುಜದ ಮೇಲೆ ಹಾರಿ ಬರುತ್ತಿರುತ್ತವೆ; ಅದರಿಂದ ತಪ್ಪಿಸಿಕೊಳ್ಳಲು ನಾವು ಕುಳಿತಿರುವ ಆಸನ 180 ಡಿಗ್ರಿಗಳಲ್ಲಿ ಓಲಾಡುತ್ತಿರುತ್ತದೆ. ಎತ್ತಿ ಹಾಕುತ್ತದೆ; ಮೇಲಕ್ಕೆ ಎಗರಿಸುತ್ತದೆ; ನೀರು ಎರಚುತ್ತದೆ; ಅಷ್ಟೇ ಬೇಗ ವಾಪಸ್ಸು ನಮ್ಮ ಪ್ರಪಂಚಕ್ಕೆ ಮರಳಿಸುತ್ತದೆ. ರೇಸ್ ಕಾರಿನಲ್ಲಿ ಪ್ರಯಾಣಿಸುವ ಅನುಭವವನ್ನು ಸಹಾ ನಾವಿಲ್ಲಿ ಪಡೆದುಕೊಳ್ಳಬಹುದು. ಸುತ್ತು-ಬಳಸಿ, ಮೇಲೆ-ಕೆಳಗೆ-ಪಕ್ಕಕ್ಕೆ ತಿರುಗಿಸಿ, ಅತಿವೇಗವಾಗಿ ಕಾರಿನಲ್ಲಿ ಬೆಟ್ಟ-ಕಣಿವೆಗಳ ನಡುವೆ ಸಾಗುವ ರೋಮಾಂಚಕತೆಯನ್ನು ಅನುಭವಿಸುವ ಅವಕಾಶವಿದೆ.

ಒಟ್ಟಿನಲ್ಲಿ ಇಡಿಯ ದಿನ ಒಂದಾದ ಮೇಲೆ ಒಂದು ಪ್ರದರ್ಶನದಲ್ಲಿ ಭಾಗಿಯಾಗುತ್ತಾ, 5 ನಿಮಿಷಗಳ ಆಟಕ್ಕೆ ಅರ್ಧ ಗಂಟೆ ಕಾದು, ಅದರ ವೈಶಿಷ್ಟ್ಯದ ಅನುಭವವನ್ನು ಪಡೆದುಕೊಂಡ ನಂತರ, ಮತ್ತೆ ಇನ್ನೊಂದು ಪ್ರದರ್ಶನಕ್ಕೆ ಸರದಿಯಲ್ಲಿ ನಿಂತುಕೊಂಡು ಕಾಯುವುದು; ನಡು-ನಡುವೆ ಹೊಟ್ಟೆಯ ಕಡೆ ಗಮನ ಕೊಡುವುದು; ಅಡ್ಡಾಡುವ ಕಾಮಿಕ್ ಪಾತ್ರಗಳ ಜೊತೆಗೆ ಫೋಟೋ ತೆಗಿಸಿಕೊಳ್ಳುವುದು. ಸುತ್ತಲಿನ ಈ ಮಾಯಾಲೋಕದಲ್ಲಿ ನಡೆಯುತ್ತಿರುವುದನ್ನು ಬೆರಗುಗಣ್ಣಿನಿಂದ ನೋಡುತ್ತಿರುವುದು: ಇಂತಹ ಮೋಜು ರಾತ್ರಿ ಒಂಭತ್ತರವರೆಗೂ ಸಾಗುತ್ತಲೇ ಇರುತ್ತದೆ.

ಇಲ್ಲಿ ನೋಡಿದ ಅಷ್ಟೂ ಪ್ರದರ್ಶನದಲ್ಲಿ ನನಗೆ ಬಹಳ ಇಷ್ಟವಾದದ್ದು ಸುಮಾರು ಮುಕ್ಕಾಲು ಗಂಟೆಯ ಅವಧಿಯ ‘ಫ್ರೋಜ಼ನ್’ ಎಂಬ ಮಕ್ಕಳ ನಾಟಕ. ನಾಟಕದ ರಂಗಸಜ್ಜಿಕೆ, ಕಲಾವಿದರು, ಅವರ ವೇಷ-ಭೂಷಣ, ಸಂಗೀತ, ದೃಶ್ಯ ಹಾಗೂ ಧ್ವನಿಗಳ ಪರಿಣಾಮ, ನಟನೆ ಎಲ್ಲವನ್ನೂ 3ಡಿ ಅನುಭವದಲ್ಲಿ ನೋಡಿದ್ದು ನಿಜಕ್ಕೂ ಒಂದು ವಿಶೇಷ. ಈ ದೇಶದ ಮಕ್ಕಳ ನಾಟಕಗಳ ಒಂದು ಪ್ರಾತ್ಯಕ್ಷಿಕೆಯನ್ನು ನೋಡಿದಂತಾಯಿತು. ಒಂದು ಸುಂದರ ಅನುಭವ ನನ್ನೊಳಗೆ ದಾಖಲಾಯಿತು.

ಫ್ರೋಜ಼ನ್ ನಾಟಕದ ಒಂದು ದೃಶ್ಯ

ಇನ್ನೊಂದು ನನಗೆ ಬಹಳ ಇಷ್ಟವಾದ ಪ್ರದರ್ಶನ: ರಾತ್ರಿ ಒಂಭತ್ತು ಗಂಟೆಗೆ ವೈಭವೋಪೇತ ಮೆರವಣಿಗೆಯಲ್ಲಿ ಸಾಗಿ ಬರುವ ವಿವಿಧ ಕಾಮಿಕ್ ಪಾತ್ರಗಳು. ಸುಮಾರು ಮುಕ್ಕಾಲು ಗಂಟೆ ಕಣ್ಮುಂದೆ ಸಾಗುವ ಈ ಮೆರವಣಿಗೆಯಲ್ಲಿ ಹಲವು ಹತ್ತು ಕಾಮಿಕ್ ಪಾತ್ರಗಳು, ಮತ್ಸ್ಯ ಕನ್ಯೆಯರು, ರಾಜಕುಮಾರಿಯರು, ನರ್ತಕಿಯರು ಅತ್ಯಂತ ಸುಂದರವಾಗಿ ಅಲಂಕರಿಸಿಕೊಂಡು, ಅಷ್ಟೇ ಸುಂದರವಾಗಿ ಅಲಂಕೃತಗೊಂಡ ವಾಹನಗಳಲ್ಲಿ, ಮತ್ತು ಕೆಲವರು ಎರಡು ವಾಹನಗಳ ನಡುವಿನ ಮೆರವಣಿಗೆಯಲ್ಲಿ, ನಾವೇನು ಗಂಧರ್ವಲೋಕದಲ್ಲಿದ್ದೇವೇನೋ ಎಂಬ ಭ್ರಮೆ ಹುಟ್ಟಿಸುವಂತಿರುತ್ತೆ.

ಹಸನ್ಮುಖರಾಗಿ ಇಕ್ಕೆಲಗಳಲ್ಲೂ ಕೈ ಬೀಸುತ್ತಾ, ಗಾಳಿಯಲ್ಲಿ ಮುತ್ತುಗಳನ್ನು ತೇಲಿ ಬಿಡುತ್ತಾ, ಮೃದುಸ್ಮಿತವಾದ ಹಾವಭಾವಗಳನ್ನು ತೋರುತ್ತಾ, ಮಕ್ಕಳು ಕಂಡೆಡೆ ಅವರನ್ನು ಮಾತನಾಡಿಸುತ್ತಿರುವರೇನೋ ಎನ್ನುವಂತೆ ಅಭಿನಯಿಸುತ್ತಾ, ಕೆಳಗಿನ ಮೆರವಣಿಗೆಯಲ್ಲಿ ಸಾಗುತ್ತಿರುವ ಕಲಾವಿದರು ಮಕ್ಕಳ ಕೈಕುಲುಕುತ್ತಾ ಮುಂದೆ ಸಾಗುತ್ತಾರೆ.

ಕಡೆಯ ವಾಹನ ಸಾಗುವಾಗ ಮಂತ್ರ ಮುಗ್ಧರಂತೆ, ನೆರೆದಿರುವ ಜನರೆಲ್ಲಾ ಆ ಮೆರವಣಿಗೆಯ ಹಿಂದೆ ಸಾಗುತ್ತಾ ಡಿಸ್ನಿಲ್ಯಾಂಡಿನಿಂದ ತಮ್ಮ ಲೋಕಕ್ಕೆ ಮರಳುತ್ತಾರೆ. ಇದು ಸಾಹಸ ವಿಭಾಗದ ಆ ದಿನದ ಕಡೆಯ ಕಾರ್ಯಕ್ರಮ. ಉದ್ಯಾನವನ ವಿಭಾಗದಲ್ಲಿ ಇದೇ ಸಮಯದಲ್ಲಿ ಆ ದಿನದ ಕಡೆಯ ಕಾರ್ಯಕ್ರಮ ವರ್ಣರಂಜಿತ ಪಟಾಕಿಗಳನ್ನು ಸಿಡಿಸಿ ಒಂದು ಮಾಯಾಲೋಕವನ್ನು ಸೃಷ್ಟಿಸುವ ಕಾರ್ಯ ನಡೆಯುತ್ತಿರುತ್ತದೆ. ಈ ಭಾಗದಿಂದ ಹೊರಬಂದು ಆ ಕಡೆಗೆ ಕಣ್ಣು ಹಾಯಿಸಿದಾಗ ಕೆಲವು ಸಮಯ ನಮಗೂ ಆ ಬೆಳಕುಗಳ ನರ್ತನ ನೋಡುವ ಅವಕಾಶ ದೊರಕಿತು.

ಎಷ್ಟೋ ವರ್ಷಗಳ ನಂತರ ಮಕ್ಕಳೊಂದಿಗೆ ಮಕ್ಕಳಾಗಿ ನಲಿವ ಅವಕಾಶ ದೊರಕಿದ್ದು ಮನಕ್ಕೆ ಒಂದು ರೀತಿಯ ಸಂಭ್ರಮವನ್ನು ನೀಡಿತ್ತು. ಕಾಲಯಾನದಲ್ಲಿ ಐವತ್ತು ವರ್ಷ ಹಿಂದಕ್ಕೆ ಹೋಗಿ ಬಂದಂತಾಗಿದ್ದು ಒಂದು ಉಲ್ಲಾಸದ ಅನುಭವವಾಗಿತ್ತು.

(ಮುಂದುವರಿಯುವುದು)

‍ಲೇಖಕರು avadhi

October 12, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: