ಮಾಧ್ಯಮ ನಿಷೇಧ ಪೂರ್ವಯೋಜಿತ ದುರುದ್ದೇಶ ?!

ರವಿಕುಮಾರ್ ಟೆಲೆಕ್ಸ್ 

ಕರ್ನಾಟಕ ವಿಧಾನಮಂಡಲ ಅಧಿವೇಶನದಲ್ಲಿ ಪಾಲ್ಗೂಳ್ಳದಂತೆ ದೃಶ್ಯ ಸುದ್ದಿ ಮಾಧ್ಯಮಗಳಿಗೆ ನಿಷೇಧ ಹೇರುವ ಮೂಲಕ ಸ್ಪೀಕರ್ ಅವರ ತೀರ‍್ಮಾನ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುವಂತದ್ದು. ಇದೊಂದು ಪೂರ್ವ ಯೋಜಿತ ನಿರ್ಧಾರ. ಈ ತೀರ‍್ಮಾನ ಕೇವಲ ಸ್ಪೀಕರ್ ಅವರೆಂದೆದು ಅಷ್ಟು ಸುಲಭವಾಗಿ ಭಾವಿಸುವಂತಿಲ್ಲ. ಇದರ ಹಿಂದೆ ಬೇರೆಯದ್ದೇ ಶಕ್ತಿಯ ನಿರ್ದೇಶನವಿದೆ.

ಹಿಂದೆಯೂ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಗೃಹ ಸಚಿವ ಡಾ. ವಿ.ಎಸ್ ಆಚಾರ್ಯ ಅವರು ಮಾಧ್ಯಮಗಳ ನಿಯಂತ್ರಣಕ್ಕೆ “ಓಂಬಡ್ ಮನ್ಸ್” ನೇಮಕಾತಿ ಬಗ್ಗೆ ಘೋಷಿಸಿದ್ದರು. ತಕ್ಷಣಕ್ಕೆ ಮಾಧ್ಯಮ ವಲಯದಿಂದ ತೀವ್ರ ಪ್ರತಿರೋಧ ವ್ಯಕ್ತವಾದ ಬೆನ್ನೆಲ್ಲೇ ಈ ನಿರ್ಧಾರದಿಂದ ಹಿಂದೆ ಸರಿಯಬೇಕಾಯಿತು.

ಬಿಜೆಪಿಗೆ ತನ್ನದೇ ಆದ ಸ್ಪಷ್ಟವಾದ ಮಾಧ್ಯಮ ನಿಲುವೊಂದು ಇದ್ದೇ ಇದೆ. ಮಾಧ್ಯಮಗಳು ತಮ್ಮ ಬಾಲಬಡುಕತನದಲ್ಲೇ ಇರಬೇಕು ಇಲ್ಲವೆ , ಅವುಗಳನ್ನು ನಿಯಂತ್ರಿಸುವಲ್ಲಿ ಹಿಂದೆ ಸರಿಯಬಾರದು ಎಂಬ ನಿರ್ದೇಶನಗಳನ್ನು ತನ್ನ ಮುಖಂಡರಿಗೆ ನೀಡುತ್ತದೆ ಎಂಬುದರ ಬಗ್ಗೆ ಕೆಲವು ವರ್ಷಗಳ ಹಿಂದೆ ಸಂಘಪರಿವಾರದ ಮೂಲದ ಬಿಜೆಪಿ ನಾಯಕರೊಬ್ಬರು ಹೇಳಿದ್ದು ಈ ಹೊತ್ತಿನಲ್ಲಿ ನನಗೆ ನೆನಪಾಗುತ್ತಿದೆ. ಇಂದು ದೇಶದಲ್ಲಿ ಸುದ್ದಿ ಮಾಧ್ಯಮಗಳನ್ನು ಕಲುಷಿತಗೊಳಿಸಿ ಪ್ರಭುತ್ವದ ಮರ್ಜಿಗೆ ತಕ್ಕಂತೆ ಬಗ್ಗಿ ನಡೆಯುವಂತೆ ಬಳಸಿಕೊಳ್ಳಲಾಗುತ್ತಿದೆ. ಸ್ವಲ್ಪ ಬಗ್ಗಿ ನಡೆಯಿರಿ ಎಂದು ಆದೇಶ ಮಾಡಿದರೆ ನಮ್ಮ ಮಾಧ್ಯಮಗಳು ತೆವಳುತ್ತಿವೆ ಎಂಬಷ್ಟರ ಮಟ್ಟಿಗೆ ವೃತ್ತಿ ಘನತೆಯಿಂದ ವಿಮುಖವಾಗಿ ‘ಗೋಧಿಮೀಡಿಯಾ’ ಸೃಷ್ಟಿಯಾಗಿದೆ.

ಟಿವಿ ಮಾಧ್ಯಮಗಳನ್ನು ಅಧಿವೇಶನದಿಂದ ಹೊರಗಿಟ್ಟಿರುವ ಬಗ್ಗೆ ಸ್ಪೀಕರ್ ಇದುವರೆಗೂ ಸ್ಪಷ್ಟವಾದ ಕಾರಣವನ್ನು ಕೊಟ್ಟಿಲ್ಲ. ಪ್ರಜಾಪ್ರಭುತ್ವದ ಯಾವ ನಡವಳಿಕೆಗೆ ದೃಶ್ಯ ಮಾಧ್ಯಮಗಳಿಂದ ಧಕ್ಕೆಯಾಗಿದೆ ಎಂಬುದನ್ನು ಈ ಕ್ಷಣದವರೆಗೂ ಬಹಿರಂಗಪಡಿಸಿಲ್ಲ. ಹೀಗಿದ್ದಾಗ ಸ್ಪೀಕರ್ ಅವರ ಈ ನಿರ್ಧಾರ ಅದೆಂತಹ ಆತಂಕದಿಂದ ಕೂಡಿದೆ ಎಂಬುದನ್ನು ಪ್ರಶ್ನಿಸಲೇಬೇಕಾಗಿದೆ. ಮಾಧ್ಯಮಗಳ ನಿಷೇಧದ ಬಗ್ಗೆ ರಾಜ್ಯ ಸರ್ಕಾರ ಅಧಿಕೃತವಾಗಿ ತನ್ನ ನಿಲುವುವನ್ನು ಸ್ಪಷ್ಟಪಡಿಸಬೇಕು. ಮುಖ್ಯಮಂತ್ರಿಗಳು ಮೀಡಿಯಾಗಳ ಮೇಲಿನ ನಿಷೇಧವನ್ನು ಹಿಂಪಡೆಯುವಂತೆ ಸ್ಪೀಕರ್ ಅವರಿಗೆ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಕೇಳಿಬರುತ್ತಿದೆ.

ವಿಪಕ್ಷಗಳು ಕೂಡ ಸ್ಪೀಕರ್ ನಿರ್ಧಾರವನ್ನು ಖಂಡಿಸಿವೆ. ಆದರೆ ಮಾಧ್ಯಮಗಳ ನಿಷೇಧದ ಬಗ್ಗೆ ಪತ್ರಿಕಾ ಸಂಘಟನೆಗಳು ದನಿ ಎತ್ತಿದರೂ ಬಾಧಿತ ದೃಶ್ಯಮಾಧ್ಯಮಗಳು ಸರ್ಕಾರದ ನಿರ್ಧಾರದ ವಿರುದ್ದ ಅಂದರೆ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣದ ವಿರುದ್ದ ಜನಾಭಿಪ್ರಾಯ ಮೂಡಿಸುವಲ್ಲಿ. ಸಾರ್ವಜನಿಕ ಚರ್ಚೆಯ ಸಂಗತಿಯನ್ನಾಗಿಸುವಲ್ಲಿ ವಿಫಲವಾಗಿವೆ. ಅದೇ ರೀತಿ ತೀವ್ರ ತರವಾದ ಪ್ರತಿರೋಧ ಒಟ್ಟಾರೆ ರಾಜಕೀಯ ವಲಯದಿಂದ ಕೇಳಿಬರದಿರುವುದು ಅನುಮಾನಗಳಿಗೆ ಕಾರಣವಾಗಿದೆ.

ತುರ್ತು ಪರಿಸ್ಥಿತಿಯಲ್ಲಿ ಸುದ್ದಿಮಾಧ್ಯಮಗಳ ನಿರ್ಬಂಧವನ್ನು ಈ ಹೊತ್ತಿಗೂ ಖಂಡತುಂಡವಾಗಿ ವಿರೋಧಿಸುತ್ತಾ ಭಾಷಣ ಮಾಡುವ ಅಧಿಕಾರ ರೂಢ ಪಕ್ಷದ ಸ್ಪೀಕರ್ ಅವರೇ ಈಗ ಮಾಧ್ಯಮ ನಿಷೇಧ ನಿರ್ಧಾರವನ್ನು ಕೈಗೊಂಡಿರುವುದು ಎಂಥ ವಿಪರ್ಯಾಸ?.

ಪ್ರಭುತ್ವಗಳು ಸದಾ ಮಾಧ್ಯಮಗಳು ತಮ್ಮ ಗುಲಾಮರಾಗಿಯೇ ಇರಬೇಕು ಎಂದು ಬಯಸುವುದನ್ನು ಆಯಾ ಕಾಲಘಟ್ಟದಲ್ಲಿ ಕಾಣುತ್ತಲೆ ಬರುತ್ತಿದ್ದೇವೆ. ಈಗ ಒಂದು ಹೆಜ್ಜೆ ಮುಂದೆ ಹೋಗಿ ನಿಷೇಧದಂತ ಪ್ರಜಾತಾಂತ್ರಿಕ ವಿರೋಧಿ ನಿರ್ಧಾರವನ್ನು ಕೈಗೊಂಡಿರುವುದು ಆತಂಕಕಾರಿ ಬೆಳವಣಿಗೆ. ಎಲೆಕ್ಟ್ರಾನಿಕ್ ಸುದ್ದಿ ಮಾಧ್ಯಮಗಳ ಅತಿರೇಕದ ಬಗೆಗೂ ಜನಸಾಮಾನ್ಯರಲ್ಲೂ ತೀವ್ರವಾದ ವಿರೋಧಗಳು ವ್ಯಕ್ತವಾಗುತ್ತಿವೆ. ವೃತ್ತಿ ಪರತೆಯನ್ನು ಮೀರಿ ಈ ಮಾಧ್ಯಮಗಳು ನಡೆದುಕೊಳ್ಳುತ್ತವೆ ಎಂಬ ಆರೋಪಗಳು ಹೆಚ್ಚಾಗುತ್ತಲೆ ಇವೆ. ಇದರಿಂದ ಮುಕ್ತಿ ಪಡೆಯಲು ಎಲೆಕ್ಟ್ರಾನಿಕ್ ಸುದ್ದಿ ವಾಹಿನಿಗಳು ತಮಗೆ ತಾವೇ ನೀತಿ ಸಂಹಿತೆಯನ್ನು ಹಾಕಿಕೊಳ್ಳುವುದು ಈ ಕಾಲದ ತುರ್ತು ಆಗಿದೆ. ಇದೊಂದು ನೈತಿಕ ಪ್ರಜ್ಞೆಯಾಗಿಯೂ ಒಡಮೂಡಿದಾಗ ದನಿ ಇನ್ನಷ್ಟು ಗಟ್ಟಿಯಾಗುತ್ತದೆ.

ಹಾಗಂತ ಸ್ಪೀಕರ್ ನಿರ್ಧಾರವನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವ ಸರ್ವಾಧಿಕಾರದೆಡೆಗೆ ಜಾರುತ್ತಿದೆ ಎಂಬುದು ಅನುಭವಕ್ಕೆ ಬರುತ್ತಿರುವ ಹೊತ್ತಿನಲ್ಲಿ ಕರ್ನಾಟಕದಲ್ಲಿ ಇಂತಹದ್ದೊಂದು ನಿರ್ಧಾರ ಕೈಗೊಂಡಿರುವುದು ಅಕ್ಷಮ್ಯ ಮತ್ತು ಆತಂಕ ಕಾರಿಯಾದದ್ದು . ಮಾಧ್ಯಮ ವಲಯ ಎಚ್ಚೆತ್ತುಕೊಳ್ಳಬೇಕು. ಮಾಧ್ಯಮ ಸಮೂಹದ ಒಂದು ಭಾಗವನ್ನು ನಿಷೇಧಿಸುವ ತೀರ‍್ಮಾನ ಮುಂದಿನ ದಿನಗಳಲ್ಲಿ ಇಡೀ ಸುದ್ದಿ ಮಾಧ್ಯಮಗಳನ್ನೇ ನಿಯಂತ್ರಿಸುವ ಅಥವಾ ನಿಷೇಧಿಸುವ ಪ್ರಜಾಪ್ರಭುತ್ವ ವಿರೋಧಿ ಕ್ರಮದ ಪೂರ್ವ ಪೀಠಿಕೆಯೂ ಆಗಿರುವುದನ್ನು ಅಲ್ಲೆಗೆಳೆಯಲಾಗದು. ಈಗ ಎಚ್ಚೆತ್ತುಕೊಳ್ಳುವ ಕಾಲ.

‍ಲೇಖಕರು avadhi

October 12, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: