ಪ್ರಧಾನಮಂತ್ರಿ ಎಮ್ಮೆ ಯೋಜನೆ: ಪಿ. ಸಾಯಿನಾಥ್ ಹೇಳಿದ ಕತೆ.

ಕೇಸರಿ ಹರವೂ 

ಮಹಾರಾಷ್ಟ್ರದ ವಿದರ್ಭ ಜಿಲ್ಲೆ ಬಹಳ ಮುಂಚಿನಿಂದಲೂ ಹತ್ತಿ ಬೆಳೆಗೆ ಹೆಸರುವಾಸಿಯಾಗಿತ್ತು. ಅಲ್ಲಿಯ ರೈತರು ಹತ್ತಿ ಬೆಳೆಯನ್ನು ಚಿನ್ನದ ಬೆಳೆ ಎಂದು ಹೆಮ್ಮೆಯಿಂದ ಕರೆಯುತ್ತಿದ್ದರು. ಯಾವಾಗ ನಮ್ಮ ದೇಶ GATT ಗೆ ಸಹಿ ಹಾಕಿ, MNC ಗಳ ಹಿಡಿತಕ್ಕೆ ವ್ಯವಸಾಯವನ್ನು ಕೊಟ್ಟಿತೋ ಆಗಿನಿಂದ ವಿದರ್ಭ ಜಿಲ್ಲೆಯಲ್ಲಿ ಬಿ‌ಟಿ ಹತ್ತಿಯನ್ನು ರೈತರು ವ್ಯಾಪಕವಾಗಿ ಬೆಳೆಯಬೇಕಾಗಿ ಬಂತು. ಅದರ ಪರಿಣಾಮವಾಗಿ 1997-98 ರ ಹೊತ್ತಿಗೆ ಆ ಜಿಲ್ಲೆಯಲ್ಲಿ ಅನೇಕ ರೈತರು ತೀವ್ರ ಸಂಕಷ್ಟಕ್ಕೆ ಸಿಕ್ಕಿ, ನೂರಾರು ಜನ ಆತ್ಮಹತ್ಯೆ ಮಾಡಿಕೊಂಡರು.

ಅಂದಿನ ಪ್ರದಾನಮಂತ್ರಿಗಳು ವಿದರ್ಭಕ್ಕೆ ಭೇಟಿ ನೀಡಿ, ಅಧ್ಯಯನ ಮಾಡಿಸಿ, ವಿದರ್ಭ ಪ್ಯಾಕೇಜ್ ಅನ್ನು ಘೋಷಿಸಿದರು. ಆ ಪ್ಯಾಕೇಜಿನ ಒಂದು ಕಾರ್ಯಕ್ರಮ ರೈತರಿಗೆ ಹಸು ಮತ್ತು ಎಮ್ಮೆಗಳನ್ನು ವಿತರಿಸಿ ರೈತ ಕುಟುಂಬದ ಆದಾಯವನ್ನು ಸ್ಥಿರಗೊಳಿಸುವುದು. ಸರಿ, ಅನೇಕ ರೈತರಿಗೆ ಹಸು, ಎಮ್ಮೆಗಳನ್ನು ವಿತರಿಸಲಾಯಿತು.

ಒಮ್ಮೆ ಪಿ. ಸಾಯಿನಾಥ್ ಅವರು ಆ ಜಿಲ್ಲೆಯ ಒಂದು ಹಳ್ಳಿಯಲ್ಲಿ ಅಡ್ಡಾಡುತ್ತಿದ್ದಾಗ ಒಬ್ಬ ರೈತ ಹತ್ತಿ ಬೆಳೆ ಪೂರ್ತಿ ನೆಲಕಚ್ಚಿ, ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದ. ಆತನ ಮನೆಗೆ ಒಂದು ಎಮ್ಮೆಯನ್ನು ಕೊಡಲಾಯಿತು. ಆತನ ಸುಮಾರು 60-65 ವಯಸ್ಸಿನ ವಿಧವೆ ಆ ಎಮ್ಮೆಯನ್ನು ದಿನವೂ ಬೆಳಗಿಂದ ಸಂಜೆಯವರೆಗೂ ಊರೆಲ್ಲಾ ಸುತ್ತಿಸುತ್ತಿದ್ದಳಂತೆ. ಸಾಯಿನಾಥ್ ಏಕೆ ಎಂದು ಕೇಳಿದಾಗ ಆಕೆ, “ಅಯ್ಯೋ ಸ್ವಾಮೀ, ಎಹ್ ಭೈಂಸ್ ನಹೀ, ಭೂತ್ ಹೈ (ಇದು ಎಮ್ಮೆಯಲ್ಲ ಭೂತ)” ಎಂದಳಂತೆ. ಏಕೆ ಎಂದಾಗ, “ಇದು ನಮ್ಮ ಮನೆಯ ಎಲ್ಲರೂ ತಿನ್ನುವುದಕ್ಕಿಂತ ಜಾಸ್ತಿ ತಿನ್ನುತ್ತದೆ. ಎಲ್ಲಿಂದ ತರಲಿ ಇದರ ಹೊಟ್ಟೆಗೆ ಸಾಕಾಗುವಷ್ಟು ಆಹಾರ? ಅದಕ್ಕೇ ಅಲ್ಲಿ ಇಲ್ಲಿ ಮೇಯಿಸುತ್ತಿದ್ದೇನೆ” ಎಂದಳಂತೆ. ಆಕೆ ಯಾರಿಗಾದರೂ ಮಾರಿದರೂ ಅವರು ಒಂದು ವಾರದ ನಂತರ ವಾಪಸ್ಸು ಮಾಡಿಬಿಡುತ್ತಿದ್ದರಂತೆ.

ಇದು ಆ ಅಜ್ಜಿಯ ಕತೆಯಾದರೆ, ಇನ್ನೊಂದು ಹಳ್ಳಿಯಲ್ಲಿ ಒಬ್ಬ ಎಡುಕೇಟೆಡ್ ರೈತ. ಅವನಿಗೆ ಕೂಡಾ ಅದೇ ಸ್ಕೀಮಿನ ಅಡಿಯಲ್ಲಿ ಒಂದು ಎಮ್ಮೆ ಬಂದಿತ್ತು. ಮೊದಲೇ ಕೃಷಿ ಬಿಕ್ಕಟ್ಟಿನಿಂದ ಎಣ್ಣೆಯ ಮೇಲಿರುತ್ತಿದ್ದ ಆತ ಈ ಎಮ್ಮೆಯನ್ನು ಕಟ್ಟಿಕೊಂಡು ಮೂರೊತ್ತೂ ಎಣ್ಣೆಯ ಮೇಲಿರಲು ಆರಂಭಿಸಿದ್ದ. ಅದೇ ದಿನಗಳಲ್ಲಿ ಸಾಯಿನಾಥ್ ಅವನನ್ನು ಭೇಟಿಯಾಗುವ ಪ್ರಸಂಗ ಬಂತು. ಅವನು ಅವರಿಗೇ ಅದನ್ನು ಮಾರಲು ತುಂಬಾ ಪ್ರಯತ್ನಿಸಿದನಂತೆ. ಇವರು, “ಅಯ್ಯೋ, ನಾನು ಪತ್ರಕರ್ತ, ಇದನ್ನು ಕೊಂಡು ಏನಪ್ಪಾ ಮಾಡಲಿ?” ಎಂದರೂ ಆತ ಬಿಡದೇ, “ಸ್ವಾಮೀ, ಇದು ಅಂತಿಂಥಾ ಎಮ್ಮೆಯಲ್ಲ, ಪ್ರಧಾನಮಂತ್ರಿಗಳೇ ಕೊಟ್ಟಿರುವ ಎಮ್ಮೆ… ಕೊಂಡುಕೊಳ್ಳಿ” ಎಂದು ಗಂಟುಬಿದ್ದನಂತೆ. “ಸರಿ, ಹಾಗಾದ್ರೆ ಅದನ್ನು ಪ್ರಧಾನಮಂತ್ರಿಗಳಿಗೇ ಮಾರಿಬಿಡು” ಎಂದು ಅವನಿಂದ ಕಳಚಿಕೊಂಡರಂತೆ.

ಒಂದು ಕಾಲದಲ್ಲಿ ಬಹುತೇಕ ಸ್ವಾವಲಂಬೀ ಕೃಷಿಯಲ್ಲಿ ತೊಡಗಿದ್ದ ರೈತ ಇಂದು ಸಂಪೂರ್ಣ ಪರಾವಲಂಬೀ ಕೃಷಿಯ ಹಿನ್ನೆಲೆಯಲ್ಲಿ ಹೇಗೆ ಕೃಷಿಯನ್ನೇ ತ್ಯಜಿಸಿ, ತಾನೂ ಪರೋಕ್ಷವಾಗಿ ಕಾನ್ಟ್ರ್ಯಾಕ್ಟ್ / ಕಾರ್ಪೊರೇಟ್ ಕೃಷಿಗೆ ದಾರಿಮಾಡಿಕೊಡುತ್ತಿದ್ದಾನೆ, ಅವನನ್ನು ನಮ್ಮ ಸರ್ಕಾರವೂ ಹೇಗೆ ಅವನ ಕೃಷಿಯಿಂದ ಹೊರದಬ್ಬುತ್ತಿದೆ ಎನ್ನುವ ವಿಷಯ್ದ ಬಗ್ಗೆ ನಿನ್ನೆ ಪಿ. ಸಾಯಿನಾಥ್ ಅವರು ಕುಂದಾಪುರದಲ್ಲಿ ಮಾತಾಡುತ್ತಿದ್ದರು.

Rajaram Tallur ಅವರ ಕುಟುಂಬ ಟ್ರಸ್ಟ್ ಹಾಗೂ ಸಮುದಾಯ ಸಂಸ್ಥೆ ಈ ಕಾರ್ಯಕ್ರಮವನ್ನು ಆಯೋಜಿಸಿದ್ದವು. ಯೂಟ್ಯೂಬಿನಲ್ಲಿ ಲೈವ್ ಕೂಡಾ ಇತ್ತು.

‘ಕಾರ್ಪೋರೇಟ್ ಫಾರ್ಮಿಂಗ್ ಮತ್ತು ಕೃಷಿ ಬಿಕ್ಕಟ್ಟಿ’ನ ಬಗ್ಗೆ ಸಾಯಿನಾಥ್ ಅವರ ಮಾತುಗಳನ್ನು ಕೇಳಬಯಸುವವರು ಇಲ್ಲಿ ಕ್ಲಿಕ್ಕಿಸಿ

‍ಲೇಖಕರು avadhi

February 15, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: