ಕಿರುತೆರೆಗೆ ಇರಬೇಕು ಸಾಮಾಜಿಕ ಜವಾಬ್ದಾರಿ

ಕಿರುತೆರೆ – ಸಾಮಾಜಿಕ ಜವಾಬ್ದಾರಿ
ಬಿ.ಸುರೇಶ

೮೫ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ೭ ಫೆಬ್ರವರಿ ೨೦೨೦, ಶುಕ್ರವಾರ ಬೆಳಗಿನ ೯.೩೦ರಿಂದ ೧೧ ಗಂಟೆವರೆಗೆ ನಡೆದ ಚಲನಚಿತ್ರ: ಕನ್ನಡ ಸಾಹಿತ್ಯ ಎಂಬ ಗೋಷ್ಟಿಯಲ್ಲಿ ಮಂಡಿಸಲಾದ ಪ್ರಬಂಧ.

ಎಲ್ಲ ಕನ್ನಡ ಮನಸ್ಸುಗಳಿಗೆ ನಮಸ್ಕಾರಗಳು.

೮೫ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರಬಂಧ ಮಂಡಿಸುವ ಅವಕಾಶ ನನಗೆ ಎರಡನೆಯ ಸಲ ಒದಗಿ ಬಂದಿದೆ. ಈ ಹಿಂದೆ ಶಿವಮೊಗ್ಗದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರಬಂಧ ಮಂಡಿಸಿದ್ದೆ. ಆಗ ಕಡೆಯ ನಿಮಿಷದಲ್ಲಿ ಬರಬೇಕಾದವರು ಬಾರದೆ ಹೋದುದರಿಂದ ಪ್ರೀತಿಯ ಗುರುಗಳಾದ ಚಂಪಾ ಅವರು ನನ್ನನ್ನು `ಬದಲಿ ಆಟಗಾರ’ ಎಂದು ಕರೆದಿದ್ದರು. ಮಾಧ್ಯಮ ಕುರಿತ ಗೋಷ್ಟಿಯಲ್ಲಿ ಗೌರಿ ಲಂಕೇಶ್ ಅವರ ಜೊತೆಗೆ ನಾನೂ ಸಹ ಇದ್ದೆ, ಕಿರುತೆರೆಯ ಬಗ್ಗೆ ಮಾತಾಡಿದ್ದೆ. ಈ ಸಲ ಅಪರೂಪಕ್ಕೆ ನಾನು ಬದಲಿ ಆಟಗಾರ ಅಲ್ಲ. ಅಧ್ಯಕ್ಷರಾದ ಮನು ಬಳಿಗಾರ್ ಅವರು ಖುದ್ದಾಗಿ ನನಗೆ ಕರೆ ಮಾಡಿ ಬರಲು ಸೂಚಿಸಿದರು. ಈ ಆಹ್ವಾನಕ್ಕಾಗಿ ಮನು ಬಳಿಗಾರ್ ಅವರಿಗೆ, ಸಮ್ಮೇಳನಾಧ್ಯಕ್ಷರು ಮತ್ತು ಗುರುಗಳಾದ ಎಚ್ಚೆಸ್ವಿ ಅವರಿಗೆ ಮತ್ತು ಈ ಆಯ್ಕೆಗೆ ಕಾರಣರಾದ ಕನ್ನಡ ಸಾಹಿತ್ಯ ಪರಿಷತ್ತಿನ ಎಲ್ಲ ಸಮಿತಿಗಳ ಸದಸ್ಯರಿಗೆ ವಿಶೇಷ ಧನ್ಯವಾದಗಳನ್ನು ತಿಳಿಸುತ್ತೇನೆ.

ಇಲ್ಲಿ ಮಾಡುತ್ತಿರುವ ಪ್ರಬಂಧ ಮಂಡನೆಗಾಗಿ ದೊರೆವ ಗೌರವಧನವನ್ನಾಗಲಿ ನನ್ನ ಪ್ರಯಾಣದ ಖರ್ಚನ್ನಾಗಲಿ ನಾನು ಪಡೆಯುವುದಿಲ್ಲ. ಆ ಹಣವನ್ನು ಕನ್ನಡ ನಿಧಿ ಮೂಲಕ ಸದುಪಯೋಗ ಪಡಿಸಿಕೊಳ್ಳಿ ಎಂದು ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಿಗೆ ಕೋರುತ್ತೇನೆ.

ಇಂದಿನ ನನ್ನ ಮಾತುಗಳನ್ನು ಮಂಡಿಸುವ ಮುಂಚೆ ಕೆಲವು ವಿಷಯಗಳನ್ನು ಹೇಳಬೇಕಿದೆ.
೧. ಚಿಕ್ಕಮಗಳೂರಿನ ಸಾಹಿತ್ಯ ಸಮ್ಮೇಳನವನ್ನು ಕುರಿತಂತೆ ಆ ಸಮ್ಮೇಳನದ ಅಧ್ಯಕ್ಷರ ಆಯ್ಕೆಯ ಹಿನ್ನೆಲೆಯಲ್ಲಿ ಸಾಹಿತ್ಯ ಪರಿಷತ್ತು ಧನ ಸಹಾಯ ನೀಡುವುದಿಲ್ಲ ಎಂಬ ನಿಲುವು ತೆಗೆದುಕೊಂಡದ್ದು ಮತ್ತು ಸಂಸ್ಕೃತಿ ಸಚಿವರು ಆ ಸಮ್ಮೇಳನಾಧ್ಯಕ್ಷರ ಬಗ್ಗೆ ಆಡಿದ ಕಟುವಾದ ಮಾತುಗಳಿಗೆ ನನ್ನ ವಿರೋಧವಿದೆ.

೨. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ ನಡೆದ ಸಮ್ಮೇಳನದ ಎರಡನೆಯ ದಿನಕ್ಕೆ ಪೆಟ್ರೋಲ್ ಬಾಂಬ್ ಎಸೆಯುವ ಬೆದರಿಕೆ ಒಡ್ಡಿದವರನ್ನು ಸರ್ಕಾರ ಈ ಕೂಡಲೇ ಬಂಧಿಸಿ ಶಿಕ್ಷೆ ವಿಧಿಸಬೇಕಾಗಿದೆ.

೩. ಪರದೇಶಗಳಿಂದ ನೆಮ್ಮದಿ ಹುಡುಕಿ ನಮ್ಮ ದೇಶಕ್ಕೆ ಬರುವವರನ್ನು ನೆಲೆಗೊಳಿಸಲು ಧರ್ಮಾಧರಿತವಾದ ಕಾನೂನು ರಚಿಸಿರುವುದನ್ನು ಮತ್ತು ಅದಕ್ಕೆ ಸಂಬAಧಿಸಿದAತೆ ಮಾಡಲಾಗಿರುವ ಪ್ರಜೆಗಳ ಯಾದಿ ತಯಾರಿಸುವ ಕ್ರಿಯೆಯು ಸಂವಿಧಾನ ವಿರೋಧಿಯಾಗಿದೆ ಎಂಬುದು ನನ್ನ ನಿಲುವಾಗಿದೆ.

೪. ಸಮ್ಮೇಳನಾಧ್ಯಕ್ಷರು ತಮ್ಮ ಭಾಷಣದಲ್ಲಿ ಸಂಸ್ಕೃತ ಅಥವಾ ಪ್ರಾಕೃತವನ್ನ ಸಂಪರ್ಕ ಭಾಷೆಯಾಗಿ ಮಾಡಬೇಕೆಂದು ಹೇಳಿದ್ದಾರೆ. ಇದಕ್ಕೆ ನನ್ನ ಸಂಪೂರ್ಣ ವಿರೋಧವಿದೆ. ಕರ್ನಾಟಕದಲ್ಲಿ ಎಂದೆಂದಿಗೂ ಕನ್ನಡವೇ ಆಡಳಿತ ಭಾಷೆ. ಕೇಂದ್ರ ಸರ್ಕಾರ ಇರಲಿ ಅಥವಾ ಇನ್ನಾವುದೇ ಸಂಸ್ಥೆಯಿರಲಿ ಕರ್ನಾಟಕದ ಜೊತೆಗೆ ಸಂಪರ್ಕ ಸಾಧಿಸಲು ಕನ್ನಡವನ್ನೇ ಬಲಸಬೇಕು. ಹಾಗೆ ಯಾವುದೇ ಭಾಷೆಯಿಂದ ಕನ್ನಡಕ್ಕೆ ಅನುವಾದ ಆಗುವಂತೆ ಮಾಡುವ ತಂತ್ರಾಂಶಗಳನ್ನು ಸಾಫ್ಟ್ವೇರ್‌ಗಳನ್ನು ಜಗತ್ತಿನಾದ್ಯಂತ ಇರುವ ಕನ್ನಡಿಗರು ಸಿದ್ಧಪಡಿಸಿಕೊಡಬೇಕು.

ಈ ವಿಷಯಗಳನ್ನು ಇಲ್ಲಿ ಹೆಚ್ಚು ಮಾತಾಡಲಾಗದು. ಕೇವಲ ಪ್ರಸ್ತಾಪ ಮಾಡಿದ್ದೇನೆ. ಆದರೆ ೮೫ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪರವಾಗಿ ಈ ವಿಷಯಗಳ ಬಗ್ಗೆ ಸ್ಪಷ್ಟ ನಿಲುವಳಿಯನ್ನು ಪ್ರಕಟಿಸಬೇಕೆಂದು ಸಮ್ಮೇಳನಾಧ್ಯಕ್ಷರಲ್ಲಿ ಮನವಿ ಮಾಡುತ್ತೇನೆ.

ಇನ್ನೂ ಇಂದಿನ ವಿಷಯಕ್ಕೆ ಬರೋಣ. ನನಗೆ ನೀಡಲಾಗಿರುವ ಪ್ರಬಂಧದ ವಿಷಯ `ಕಿರುತೆರೆ – ಸಾಮಾಜಿಕ ಜವಾಬ್ದಾರಿ’ ಕುರಿತು ಅದಾಗಲೇ ಅನೇಕ ಕಡೆಗಳಲ್ಲಿ ಮಾತಾಡಿದ್ದೇನೆ, ಬರೆದಿದ್ದೇನೆ. ಆದರೂ ಸಮಕಾಲೀನ ಸಂದರ್ಭದ ಹಿನ್ನೆಲೆಯಲ್ಲಿ ಈ ವಿಷಯವನ್ನು ಕುರಿತು ಹೇಳಬಹುದಾದ ಅನೇಕ ಹೊಸ ವಿಷಯಗಳಿವೆ. ಅವುಗಳನ್ನು ಕ್ಲುಪ್ತವಾಗಿ ಮಂಡಿಸಲು ಪ್ರಯತ್ನಿಸುತ್ತೇನೆ. ಇಲ್ಲಿ ನಾನು ಮಂಡಿಸುತ್ತಿರುವ ಅಭಿಪ್ರಾಯಗಳೆಲ್ಲವೂ ವೈಯಕ್ತಿಕ ನೆಲೆಯದ್ದು. ಇವುಗಳನ್ನು ಮುಕ್ತವಾಗಿ ಚರ್ಚಿಸಲು ನಾನು ಸದಾ ಸಿದ್ಧನಿದ್ದೇನೆ.

ವೈರುಧ್ಯಗಳ ನಡುವೆ ಓಡುವ ಬದುಕು

`ಕಿರುತೆರೆ’, `ಸಮಾಜ’ ಮತ್ತು `ಜವಾಬ್ದಾರಿ’ ಎಂಬ ಮೂರು ಪದಗಳಿವೆ ನನಗೆ ಕೊಟ್ಟಿರುವ ವಿಷಯದಲ್ಲಿ. ಇನ್ನೂ ಈ ಗೋಷ್ಟಿಯ ಪ್ರಧಾನ ವಿಷಯ “ಚಲನಚಿತ್ರ ಮತ್ತು ಸಾಹಿತ್ಯ”. ಈ ಗೋಷ್ಟಿಯ ಹೆಸರು ಮತ್ತು ಇಲ್ಲಿನ ಪ್ರಬಂಧಗಳ ವಿಷಯವೇ ವೈರುಧ್ಯಗಳಾಗಿವೆ. ಚಲನಚಿತ್ರ ಮತ್ತು ಸಾಹಿತ್ಯದ ಕೊಳುಕೊಡೆಗಳ ಬಗ್ಗೆ ಮಾತಾಡುವಾಗ `ಕಿರುತೆರೆಯ ಸಾಮಾಜಿಕ ಜವಾಬ್ದಾರಿ’ ಎಂದು ಪ್ರಬಂಧ ಮಂಡಿಸುವುದು ಈ ವೈರುಧ್ಯದ ಮತ್ತೊಂದು ಭಾಗ. ಇರಲಿ, ನನ್ನ ಮಿತಿಯಲ್ಲಿ ಈ ವಿಷಯ ಕುರಿತು ಆಡಬಹುದಾದ ಕೆಲವು ಮಾತುಗಳನ್ನು ಹೇಳುತ್ತೇನೆ.

ಮೊದಲಿಗೆ `ಜವಾಬ್ದಾರಿ’ ಎಂಬ ಪದದ ಹಿಂದಿನ ವಿಶೇಷ ಹಾಗೂ ವೈರುಧ್ಯಗಳ ಜಗತ್ತನ್ನು ಗಮನಿಸೋಣ. ಗುಲ್ಬರ್ಗ ಪ್ರಾಂತ್ಯವಾದ್ದರಿಂದ ಇದು ಮಾತಾಡಲೇಬೇಕಾದ್ದು. ಪರ್ಶಿಯನ್ ಮತ್ತು ಹಿಂದೂಸ್ಥಾನಿ ಪದಗಳ ಸಮ್ಮಿಶ್ರದಿಂದ ಇದೇ ಪ್ರಾಂತ್ಯದಲ್ಲಿ ಹುಟ್ಟಿದ ದಖ್ಖನಿ ಭಾಷೆಯ ಪದ `ಜವಾಬ್’. ಆ ಪದಕ್ಕೆ ಸಂಸ್ಕೃತೀಕರಣಗೊಳಿಸಿ ಧಾರಣ ಎಂಬ ಪದವನ್ನು ಕೂಡಿಸಿ ಹುಟ್ಟಿದ ಪದ “ಜವಾಬ್ದಾರಿ”. `ಜವಾಬ್ದಾರಿ’ ಎಂದರೆ ಉತ್ತರದಾಯಿತ್ವ – ಬಿಯೀಂಗ್ ಆನ್ಸರಬಲ್.

ಈ ಪದವೇ ಈ ದೇಶದ ಒಟ್ಟು ಸಿದ್ಧಾಂತಕ್ಕೆ ನೇರವಾಗಿ ಸಂವಾದಿ. ಈ ದೇಶದಲ್ಲಿ ಎಲ್ಲ ಭಾಷೆಗಳ ನಡುವೆ ಕೊಳುಕೊಡೆಗಳನು ನಡೆದಿವೆ. ಎಲ್ಲಾ ಜಾತಿ – ಧರ್ಮದ ಜನ ಜೊತೆಗೆ ಬದುಕುವ ಮೂಲಕವೇ ಭಾಷೆಗಳನ್ನು ರೂಢಿಸಿದ್ದಾರೆ. ಈ ಊರಿನ ಹೆಸರನ್ನೇ ಗಮನಿಸಿ. ಕಲ್ಲಿನ ಬುರುಗು ಮೂಲಕ ಹುಟ್ಟಿದ ಕಲ್ಬುರ್ಗಿ ಎಂಬ ಹೆಸರನ್ನು ಬಹಮನಿ ಸುಲ್ತಾನರ ಕಾಲದಲ್ಲಿ ಹೂವುಗಳ ತೋಟ ಎಂದು ಹೆಸರಿಸಿ ಗುಲ್ಬರ್ಗ ಎಂದು ಕರೆಯಲಾಯಿತು. (ಈ ಎಲ್ಲಾ ವಿವರಗಳು ಗೆಳೆಯ ದೇವು ಪತ್ತಾರ್ ಮತ್ತು ರಿಷಿಕೇಶ್ ಬಹದ್ದೂರ್ ದೇಸಾಯಿ ಅವರ ಇತ್ತೀಚಿನ ಲೇಖನಗಳಲ್ಲಿ ಸವಿಸ್ತಾರವಾಗಿ ದಾಖಲಾಗಿವೆ.) ಈ ಪ್ರಾಂತ್ಯವಂತೂ ಬಂದೇ ನವಾಜರ ಮತ್ತು ಶರಣಬಸಪ್ಪ ಅಪ್ಪ ಮತ್ತು ಕಡಕೋಳ ಮಡಿವಾಳಪ್ಪ ಅಂತಹವರ ಕಾರಣವಾಗಿ ಸರ್ವಧರ್ಮ ಸಮನ್ವಯದ ನಾಡಾಗಿದೆ. ಈ ಹಿನ್ನೆಲೆಯಲ್ಲಿ “ಜವಾಬ್ದಾರಿ’ ಎಂಬ ಪದವು ಈ ಪ್ರಾಂತ್ಯದ ಗುರುತುಗಳು – ನಮ್ಮ ಭಾಷೆಯಲ್ಲಿ ಶಾಶ್ವತವಾಗಿ ಉಳಿದಿರುವ ಸೂಚನೆಯಾಗಿದೆ.

ಆದರೆ ಇಂದು `ಜವಾಬ್ದಾರಿ’ ಎಂಬುದು ಯಾರಿಗೆ ಇರಬೇಕೊ ಅವರಿಗೆ ಇಲ್ಲ. ಪ್ರಶ್ನೆ ಕೇಳಿ ಉತ್ತರ ಪಡೆಯಬೇಕೆಂದು ಬಯಸಿದವನನ್ನು ದೇಶದ್ರೋಹಿ ಎಂದು ಗುರುತಿಸುವ ಸ್ಥಿತಿಯಿದೆ. ಆಳುವ ಸರ್ಕಾರಗಳಿಗೆ ಸ್ವತಃ ಉತ್ತರದಾಯಿತ್ವ ಎಂಬುದಿಲ್ಲ. ಇನ್ನೂ ಇದೇ ಸಮಾಜದ ಶಿಶುಗಳಾದ ಸಿನಿಮಾ ಮತ್ತು ಕಿರುತೆರೆಗಳಿಗೆ ಜವಾಬ್ದಾರಿ ಇದೆಯೇ ಎಂಬ ವಿವರವನ್ನು ಮುಂದೆ ನೋಡೋಣ.

ಇನ್ನೂ ಎರಡನೆಯ ಪದ `ಸಮಾಜ’. ಸಮಾಜ ಎಂಬುದು ಸಮಾನವಾಗಿ ಬದುಕುವ ಜನಗಳು ಇರುವಂತಹದು. ಆದರೆ ಸಧ್ಯದ ಪರಿಸ್ಥಿತಿಯಲ್ಲಿ ದೇಶದ ಒಟ್ಟು ಆದಾಯದಲ್ಲಿ ಶೇಕಡ ೮೦ರಷ್ಟು ಕೇವಲ ಹತ್ತಿಪ್ಪತ್ತು ವ್ಯಕ್ತಿಗಳಿಗೆ ಸೇರಿ, ಶೇಕಡ ೧೫ರಷ್ಟು ಮೇಲ್ವರ್ಗ ಮತ್ತು ಮೇಲ್ ಮಧ್ಯಮ ವರ್ಗದ ಜನಕ್ಕೆ ಸೇರಿ, ಉಳಿದ ಶೇಕಡ ೫ರಲ್ಲಿ ದೇಶದ ಬಹುತೇಕರು ಕೈಗೆ ಬಾಯಿಗೆ ತಾಗದ ಆದಾಯದಲ್ಲಿ ಹೈರಾಣಾಗಿರುವುದನ್ನು ಕಾಣುತ್ತಾ ಇದ್ದೇವೆ. ಇಂತಹ ಸಮಾನವಲ್ಲದ ಸಮಾಜ ಸೃಷ್ಟಿಸಿ ಸಾಮಾಜಿಕ ಜವಾಬ್ದಾರಿ ಎಂದು ಮಾತಾಡುವುದು ಮತ್ತೊಂದು ಬೃಹತ್ ವೈರುಧ್ಯ. ಆದಾಯದ ತರತಮಗಳು ಈ ದೇಶದಲ್ಲಿ ಅದ್ಯಾವ ಮಟ್ಟಕ್ಕೆ ಬೆಳೆದಿವೆ ಎಂದರೆ ನಿತ್ಯ ಹಸಿವಿನಿಂದ ಸಾಯುವವರ ಸಂಖ್ಯೆ, ನಿರುದ್ಯೋಗದಿಂದ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ, ತಾನು ಬೆಳೆದದ್ದಕ್ಕೆ ಸರಿಯಾದ ಬೆಲೆ ಸಿಗದೆ ಹಾಗೂ ಆರ್ಥಿಕ ಒತ್ತಡಗಳಿಂದ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆಗಳನ್ನು ಗಮನಿಸಿದರೆ ನಾವು ಯಾವ ಸಮಾಜದ ಬಗ್ಗೆ ಮಾತಾಡಬೇಕು ಎಂಬುದೇ ಗೊಂದಲ ಎನ್ನುವ ಪರಿಸ್ಥಿತಿಯಿದೆ.

ಪಿ.ಸಾಯಿನಾಥ್ ಅವರ ಬಗ್ಗೆ ತಯಾರಿಸಿದ “ನೀರೋಸ್ ಗೆಸ್ಟ್’ ಮತ್ತು ನವ್ದೀಪ್ ಅವರ `ಲ್ಯಾಂಡ್‌ಲೆಸ್’ ಸಾಕ್ಷ್ಯಚಿತ್ರ ನೋಡಿರುವವರಿಗೆ ಈಗ ನಾನು ಹೇಳಿದ ವಿವರಗಳ ವಿಶ್ವರೂಪ ತಿಳಿದಿರುತ್ತದೆ. ಇದು ಆರ್ಥಿಕ ತಾರಾತಮ್ಯ ಆದರೆ ಭಾಷಾ ತಾರತಮ್ಯ ಇನ್ನೂ ದೊಡ್ಡದು. ಈ ದೇಶದಲ್ಲಿ ಕೆಲವು ಭಾಷೆಗಳು ಉಳಿದ ಭಾಷೆಗಳ ಮೇಲೆ ಸವಾರಿ ಮಾಡಲು ಹೊರಟಿವೆ. ಇದರಿಂದಾಗಿ ಅನೇಕ ಭಾಷೆಗಳು ಅನುಭವಿಸುತ್ತಾ ಇರುವ ಸಂಕಟ ದೊಡ್ಡದು. ಹೀಗಾಗಿಯೇ ಹಿಂದಿ ಹೇರಿಕೆಯ ವಿರುದ್ಧ ಬೃಹತ್ ಚಳವಳಿ ನಡೆಯುತ್ತಿದೆ. ಸಂವಿಧಾನದ ಕಲಂ 343 ರಿಂದ 351ರ ವರೆಗಿನ ವಿವರಗಳಲ್ಲಿ ಇರುವ ಹಿಂದಿ ಪ್ರಚಾರದ ಮತ್ತು ಹಿಂದಿ ಕಲಿಸುವ ವಿವರಗಳನ್ನು ಕೈ ಬಿಡುವವರೆಗೆ ಮತ್ತು ಕೊಂಕಣಿ, ತುಳು, ಕೊಡವ ತರಹದ ಭಾಷೆಗಳನ್ನು ಷೆಡ್ಯೂಲ್ ಭಾಷೆಗಳ ಪಟ್ಟಿಯಲ್ಲಿ ಸೇರಿಸುವ ವರೆಗೆ ಈ ತರತಮ ಮುಂದುವರೆಯಲಿದೆ. ಭಾರತ ಸರ್ಕಾರವು ಒಕ್ಕೂಟ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟು ಈ ಬದಲಾವಣೆಗಳನ್ನು ಕೂಡಲೇ ತರಬೇಕು. ಇಲ್ಲವಾದರೆ ಭಾಷಾ ಅಸ್ತಿತ್ವ ಕಳಕೊಂಡ ಭಾಷೆಗಳು ಒಕ್ಕೂಟದಿಂದ ಹೊರ ನಡೆಯುವ ಆಲೋಚನೆ ಮಾಡಬೇಕಾಗಬಹುದು.

ಈ ಹಿನ್ನೆಲೆಯಲ್ಲಿ ಈಗ `ಸಮಾಜ’ ಎಂಬುದನ್ನು ಕಿರುತೆರೆಯ ಮಟ್ಟಿಗೆ ಆರೋಪಿಸಿ ನೋಡುವುದಾದರೆ ನಾಳೆಯ ಬಗ್ಗೆ ಖಾತ್ರಿ ಇಲ್ಲದ, ಯಾವುದೋ ಭ್ರಮೆಯಲ್ಲಿ ಮುಳುಗಿ ತೇಲುಗಣ್ಣಾಗಿರುವ ಮುಖಗಳೇ ಕಿರುತೆರೆಯನ್ನು ಆಸ್ವಾದಿಸುತ್ತಾ ಇರುವುದನ್ನು ಕಾಣುತ್ತಿವೆ.

ಇನ್ನೂ ಮೂರನೆಯ ಪದ `ಕಿರುತೆರೆ’. ಈಗಿದನ್ನು `ಕಿರು’ ಎಂದು ಕರೆಯುವುದೇ ತಪ್ಪು. ಏಕೆಂದರೆ ಯಾವ ಮಾಧ್ಯಮವನ್ನು `ಹಿರಿದು’ ಎಂದು ಗುರುತಿಸುತ್ತಾ ಇದ್ದೇವೋ ಆ ಸಿನಿಮಾ ಎಂಬುದು ಸಹ ತಾನು ಉಸಿರಾಡಲು ಇದೇ ಕಿರುತೆರೆಯ ಟೆಲಿವಿಷನ್ ಮತ್ತು ಸ್ಟ್ರೀಮಿಂಗ್ ಪ್ಲಾಟ್‌ಫಾರಂಗಳಿMದ ಬರುವ ಆದಾಯವನ್ನೇ ನೆಚ್ಚಿಕೊಂಡಿದೆ. ಸಿನಿಮಾ ನೋಡಲು ಸಿನಿಮಾ ಮಂದಿರಕ್ಕೆ ಹೋಗುವವರಿಗಿಂತ ಕಿರುತೆರೆಯ ಮೂಲಕ ನೋಡುವವರೇ ಕಳೆದ ಅರ್ಧ ದಶಕದಲ್ಲಿ ಹೆಚ್ಚಾಗಿದ್ದಾರೆ ಎಂಬುದು ಅಂಕಿ ಸಂಖ್ಯೆಗಳಿಂದ ತಿಳಿಯುತ್ತಿದೆ. ಇಂತಹ ಕಾಲಘಟ್ಟದಲ್ಲಿ ಈ ಮಾಧ್ಯಮವನ್ನು `ಕಿರಿದು’ ಎಂದು ಗುರುತಿಸುವುದೇ ವೈರುಧ್ಯ.
ಇಂತಹ ವೈರುಧ್ಯಗಳ ನಡುವೆ ನಾವು `ಕಿರುತೆರೆ – ಸಾಮಾಜಿಕ ಜವಾಬ್ದಾರಿ’ ಎಂದು ಗಮನಿಸುವುದಾದರೆ ಹೇಳಬಹುದಾದ ಅನೇಕ ಸಂಗತಿಗಳಿವೆ.

ಮೊದಲಿಗೆ ಕಿರುತೆರೆ ಮಾಧ್ಯಮವನ್ನು ಬಳಸುತ್ತಿರುವ ಕ್ರಮ ಗಮನಿಸೋಣ. ಹೊಸ ಶತಮಾನದ ಆರಂಭದಲ್ಲಿ ಬೆಂಗಳೂರಿನಲ್ಲಿ ನಡೆದ ಒಂದು ಘಟನೆಯನ್ನು ನಾನು ಹಲವೆಡೆ ಉದಾಹರಿಸಿದ್ದೇನೆ. ಅದನ್ನು ಇಲ್ಲಿ ಮತ್ತೆ ನೆನಪಿಸಿಕೊಳ್ಳುತ್ತೇನೆ. ಆಗ ರಾತ್ರಿ ಹತ್ತು ಗಂಟೆಯಾದರೆ ಕನ್ನಡದ ಎರಡು ಪ್ರಮುಖ ಉಪಗ್ರಹ ವಾಹಿನಿಗಳಲ್ಲಿ ಹೆಣ ಬೀಳುತ್ತಿದ್ದ ಕಾಲ. ಆಗ ಕ್ರೈಂ (ಅಪರಾಧದ) ಕತೆಗಳು ಎರಡು ಪ್ರಮುಖ ವಾಹಿನಿಗಳಲ್ಲೂ ಒಂದೇ ಸಮಯದಲ್ಲಿ ಪ್ರಸಾರವಾಗುತ್ತಿತ್ತು. ಅಲ್ಲಿ ಬಂದ ಒಂದು ಕತೆಯ ವಿವರ ನೀಡುತ್ತೇನೆ. ಬೆಂಗಳೂರಿನ ಬಡಾವಣೆಯೊಂದರ ಪ್ರೌಢಶಾಲೆಯಲ್ಲಿ ಓದುತ್ತಿದ್ದ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡದ್ದನ್ನು ಈ ಎರಡೂ ಕಾರ್ಯಕ್ರಮಗಳು ಬಿಚ್ಚಿಟ್ಟಿದ್ದವು. ಅವೆರಡೂ ಕಾರ್ಯಕ್ರಮಗಳು ನೇರವಾಗಿ ಆ ಶಾಲೆಯ ಮೇಷ್ಟರೊಬ್ಬರನ್ನು ಅಪರಾಧಿ ಎಂದು ಆರೋಪಿಸಿದ್ದವು. ಇದಕ್ಕೆ ತೀರಿಕೊಂಡ ಬಾಲಕಿ ಬರೆದ ಪತ್ರದಲ್ಲಿದ್ದ “ಸದರಿ ಮೇಷ್ಟರು ಇದಕ್ಕೆಲ್ಲಾ ಕಾರಣ” ಎಂಬ ಸಾಲು ಕಾರಣವಾಗಿತ್ತು. ಎರಡೂ ಕಾರ್ಯಕ್ರಮ ಮಾಡಿದವರು ವಾಸ್ತವವನ್ನು ಗಮನಿಸಲಿಲ್ಲ. ಆರೋಪ ಮಾಡಿಬಿಟ್ಟರು. ಅದರಿಂದ ಆ ಬಡಾವಣೆಯಲ್ಲಿದ್ದ ಜನ ಅದೆಷ್ಟು ಕೆರಳಿದರೆಂದರೆ ಆ ಶಾಲೆಯ ಎದುರಿಗೆ ಪ್ರತಿಭಟನೆ ಮಾಡಿದರು. ಆ ಶಿಕ್ಷಕನನ್ನು ಕೆಲಸದಿಂದ ತೆಗೆಯುವವರೆಗೆ ಬಿಡಲಿಲ್ಲ. ನಂತರ ಆ ಶಿಕ್ಷಕ ಮಾತ್ರವಲ್ಲ ಆತನ ಕುಟುಂಬಕ್ಕೂ ಆ ಬಡಾವಣೆಯಲ್ಲಿ ಬದುಕುವುದು ಕಷ್ಟವಾಗುವಂತೆ ಮಾಡಿದರು. ಇದರಿಂದಾಗಿ ನೊಂದ ಶಿಕ್ಷಕ ಒಂದೆರಡು ವಾರಗಳ ನಂತರ ಆತ್ಮಹತ್ಯೆ ಮಾಡಿಕೊಳ್ಳುವಂತಾಯಿತು.

ವಾಸ್ತವವಾಗಿ ಆ ಶಾಲೆಯಲ್ಲಿ ವಿಜ್ಞಾನ ವಿಷಯ ಕಲಿಸುತ್ತಿದ್ದ ಆ ಮೇಷ್ಟರು ತೀರಿಕೊಂಡ ಬಾಲಕಿಗೆ ಇದ್ದ (ಇನ್‌ಫ್ಯಾಚುಯೇಷನ್) ಮಾನಸಿಕ ಸಮಸ್ಯೆಯಿಂದ ತಪ್ಪಿಸಲು ಪ್ರಯತ್ನಿಸಿದ್ದರು. ಹದಿಹರಯದ ಮನಸ್ಸುಗಳು ಮಾಡಿಕೊಳ್ಳಬಹುದಾದ ಇಂತಹ ಅವಘಡಗಳ ಸಂಪೂರ್ಣ ವಿವರ ಗಮನಿಸದೆ, ತಮ್ಮ ಮನಸ್ಸಿಗೆ ತೋಚಿದ ಕ್ರಮದಲ್ಲಿ ಮಾತಾಡಿದ ಎರಡೂ ಕ್ರೈಂ ಕಾರ್ಯಕ್ರಮಗಳು ಆ ಅಮಾಯಕ ಶಿಕ್ಷಕನ ಸಾವಿಗೆ ಕಾರಣವಾಗಿದ್ದವು. ಮಾತು ಅಪಾಯಕಾರಿ. ಯಾರ ಮಾತು ಯಾರ ಕೊರಳಿಗೆ ಕತ್ತಿ ತರುತ್ತದೊ, ಕುಣಿಕೆ ತರುತ್ತದೋ ಎಂಬ ಎಚ್ಚರಿಕೆ ಸಮಾಜದಲ್ಲಿರುವ ಎಲ್ಲರಿಗೂ ಇರಬೇಕು.

ಈ ಪರಿಸ್ಥಿತಿ ಅಂದಿನಿಂದ ಇಂದಿನವರೆಗೂ ಮುಂದುವರೆದಿದೆ. ವಾಟ್ಸಪ್‌ನಲ್ಲಿ ಬಂದ ವಿಷಯಗಳನ್ನು ಹಿಡಿದು, ವಾಸ್ತವ ಗ್ರಹಿಸದೆ ಆಡುವ ಮಾತುಗಳೇ ಸುದ್ದಿಗಳಾಗಿ ಬರುತ್ತಿರುವುದನ್ನು ನಾಡು ಗಮನಿಸುತ್ತಿದೆ. ಇದಲ್ಲದೆ ಬಹುತೇಕ ಸುದ್ದಿ ಮಾಧ್ಯಮಗಳು ಅವಕಾಶವಾದಿಗಳಾಗಿವೆ. ಹಣ ಕೊಟ್ಟವನನ್ನು ಹೊಗಳುತ್ತಾ, ನಾಡಿಗೆ ಅಗತ್ಯವಾದ ಅನೇಕ ವಿಷಯಗಳನ್ನು ಚರ್ಚಿಸದೆ ಉಳಿದಿರುವುದು ಸಹ ಕಾಣುತ್ತಿದೆ. ಇದು ಕಳೆದ ಎರಡು ದಶಕಗಳಿಂದ ಹುಟ್ಟಿದ ಅನಾರೋಗ್ಯಕರ ಸ್ಪರ್ಧೆಯಿಂದಾಗಿ ಕಿರುತೆರೆ (ಟೆಲಿವಿಷನ್) ಸುದ್ದಿವಾಹಿನಿಗಳೆಲ್ಲದರ ಸ್ಥಿತಿಯಾಗಿದೆ. ಇವುಗಳಲ್ಲಿ ಜನೋಪಯೋಗಿ ಕಾರ್ಯಕ್ರಮಗಳು ಬರುವುದಿಲ್ಲ ಎಂದೇನಲ್ಲ. ಅನೇಕ ಒಳ್ಳೆಯ ಕಾರ್ಯಕ್ರಮಗಳು ಬರುತ್ತವೆ. ಆದರೆ ಪ್ರೈಂ ಟೈಮ್ (ಅತಿ ಹೆಚ್ಚು ಜನ ನೋಡುವ ಕಾಲಮಾನ) ಎಂದು ಗುರುತಿಸಲಾಗುವ ಕಾಲಮಾನದಲ್ಲಿ ದ್ವೇಷ ಹುಟ್ಟಿಸುವ, ಜಗಳಕ್ಕಿಳಿಯುವ ಸ್ಥಿತಿ ಹೆಚ್ಚಾಗಿದೆ ಎಂಬುದು ಎಲ್ಲರೂ ಗಮನಿಸಿರುವ ಸಂಗತಿಯಾಗಿದೆ. ಇದೂ ಬದಲಾಗುವ ಕಾಲವೂ ದೂರವಿಲ್ಲ. ಅದಾಗಲೇ ಬಹುತೇಕ ಜನ ಕಿರುತೆರೆ ನೋಡುವುದರಿಂದ ದೂರ ಸರಿದು ಅಂತರ್ಜಾಲದಲ್ಲಿ (ವೆಬ್ ನ್ಯೂಸ್) ಸುದ್ದಿಗಳನ್ನು ಓದುವ, ನೋಡುವ ಹಂತಕ್ಕೆ ಚಲಿಸುತ್ತಾ ಇದ್ದಾರೆ. ಅಂದರೆ ಒಂದು ಕಾಲಮಾನಕ್ಕೆ ಒಂದು ಬಗೆಯ ಸುದ್ದಿ ಎಂಬ ಸೂತ್ರ ಈ ಬದಲಾಗುತ್ತಿರುವ ಕಾಲಘಟ್ಟದಲ್ಲಿ ನಡೆಯುವುದಿಲ್ಲ. ಹಾಗಾಗಿ ಎಲ್ಲಾ ವಾಹಿನಿಗಳು ಮಾಹಿತಿ ಕೇಂದ್ರಿತ ಹಾಗೂ ಚುಟುಕು ಸುದ್ದಿಗಳ ಕಡೆಗೆ ಚಲಿಸುವುದನ್ನು ಬಹುಬೇಗ ಕಾಣಲಿದ್ದೇವೆ.

ಮುಕ್ತ ಮಾರುಕಟ್ಟೆ ಮತ್ತು ಕೊಳ್ಳುಬಾಕ ಸಂಸ್ಕೃತಿಯ ಕೂಸುಗಳು

ಈ ಕಿರುತೆರೆ ಹುಟ್ಟಿದ ಕಾರಣ ಏನೇ ಇರಲಿ, ಅದು ಜನಪ್ರಿಯವಾಗಿದ್ದು ಮುಕ್ತಮಾರುಕಟ್ಟೆಯ ಕೊಳ್ಳುಬಾಕ ಸಂಸ್ಕೃತಿಯನ್ನು ವಿಸ್ತರಿಸುವುದಕ್ಕಾಗಿ. ಕಾರ್ಯಕ್ರಮದ ನಡುವೆ ಜಾಹೀರಾತು ಅನ್ನುವ ಕಾಲದಿಂದ ಜಾಹೀರಾತಿನ ನಡುವೆ ಕಾರ್ಯಕ್ರಮ ಎಂಬ ಕಾಲಕ್ಕೆ ಬಂದದ್ದುಂಟು. ಇದನ್ನು ತಿದ್ದಲು ಪ್ರತೀ ಘಂಟೆಗೆ ಇಂತಿಷ್ಟೇ ಜಾಹೀರಾತು ಎಂಬ ಮಿತಿ ಹಾಕುವ ಕಾನೂನು ಸಹ ಬಂದಿದೆ. ಆದರೂ ಮಾಹಿತಿ (ಇನ್‌ರ‍್ಮೇಷನ್), ವಿದ್ಯೆ (ಎಜುಕೇಷನ್) ಮತ್ತು ಮನರಂಜನೆ (ಎಂಟರ್‌ಟೈನ್‌ಮೆಂಟ್) ಎಂಬ ಮೂರು ಮುಖ್ಯ ಕಾರಣಗಳಿಗಾಗಿ ಆಗಬೇಕಿದ್ದ ಟೆಲಿವಿಷನ್ ಕಾರ್ಯಕ್ರಮಗಳು ಇಂದು ಕೇವಲ ಮನರಂಜನೆ (ಎಂಟರ್‌ಟೈನ್ಮೆಂಟ್) ಎಂಬ ಏಕಮುಖಿ ನಿಲುವಿಗೆ ಬಂದಿರುವುದಂತೂ ಸತ್ಯ. ಅಪವಾದ ಎಂಬಂತೆ ವಿದ್ಯೆ (ಎಜುಕೇಷನ್) ಮತ್ತು ಮಾಹಿತಿ (ಇನ್ರ‍್ಮೇಷನ್) ಇರುವ ಕಾರ್ಯಕ್ರಮಗಳನ್ನು ಯಾವುದಾದರೂ ವಾಹಿನಿ ಬಿತ್ತರಿಸಿದರೆ ಅದು ಜನಪ್ರಿಯ ಕಾರ್ಯಕ್ರಮಗಳ ಪಟ್ಟಿಯಲ್ಲಿ ಇರುವುದು ಅನುಮಾನ. ಅಂತವುಗಳನ್ನು ಈ ಸಮಾಜವು ನೋಡದ ಹಾಗೆಯೇ ಈ ಮಾಧ್ಯಮ ನೋಡುಗರನ್ನು ಸಿದ್ಧಪಡಿಸಿದೆಯೇ ಎನಿಸುತ್ತದೆ.

ಇಂತಹ ಸಂದರ್ಭದಲ್ಲಿ ಕಿರುತೆರೆಗಾಗಿ ಕತೆಗಳನ್ನು ಹೆಣೆದು ನಿತ್ಯ ತಯಾರಿಸುವ ಕಾಯಕ ಮಾಡುತ್ತಿರುವವರ ಸಂಕಟ ವಿಭಿನ್ನ ಬಗೆಯದು. ಒಂದು ಕಾಲದಲ್ಲಿ ಈ ಸಮಾಜದಿಂದಲೇ ಹುಟ್ಟಿದ ಅನೇಕ ಘಟನೆಗಳನ್ನು, ಸಾಹಿತ್ಯಕೃತಿಗಳನ್ನು ಆಧರಿಸಿ ಕಿರುತೆರೆಗಾಗಿ ಕಾರ್ಯಕ್ರಮ ಮಾಡುತ್ತಿದ್ದವರು ಅನೇಕರಿದ್ದಾರೆ. (ನಾಗಭರಣ ನಿರ್ದೇಶನದ “ನಮ್ಮ ನಮ್ಮಲ್ಲಿ”, ಕಾಸರವಳ್ಳಿ ಅವರು “ಗೃಹಭಂಗ”, ಸೀತಾರಾಂ ಅವರ “ಕತೆಗಾರ”, ನಾನು ತಯಾರಿಸಿದ “ಪ್ರೀತಿ-ಪ್ರೇಮ”, “ಕಾದಂಬರಿ ಕಣಜ” ಹೀಗೆ ಇನ್ನೂ ಅನೇಕ ಕಾರ್ಯಕ್ರಮಗಳನ್ನು ಸಾಹಿತ್ಯಾಧಾರಿತ ಕಾರ್ಯಕ್ರಮಗಳೆಂದು ಪಟ್ಟಿ ಮಾಡಬಹುದು.) ಆದರೆ ಹೊಸ ಶತಮಾನದ ಎರಡನೆಯ ದಶಕ ಬರುವ ಕಾಲಕ್ಕೆ ವಾಹಿನಿಗಳು ಸಂಪೂರ್ಣ ಕಾರ್ಪೋರೇಟೀಕರಣ ಆಗಿವೆ. ಇಲ್ಲೀಗ ಸ್ಥಳೀಯ ನೋಡುಗರಿಗೆ ಎಂದು ಕಾರ್ಯಕ್ರಮ ತಯಾರಾಗುವುದಕ್ಕಿಂದ ಸಾಮಾನ್ಯೀಕರಣಗೊಂಡ (ಜನರಲೈಸ್ಡ್) ನೋಡುಗರಿಗೆ ಕಾರ್ಯಕ್ರಮ ತಯಾರಾಗುತ್ತಿವೆ. ಈ ಪರಿಸ್ಥಿತಿಯಲ್ಲಿ ಯಾರಾದರೂ ಬಯಸಿದರೂ ಸಾಹಿತ್ಯ ಕೃತಿ ಆಧರಿಸಿದ ಕಾರ್ಯಕ್ರಮವನ್ನು ಮಾಡಲು ಆಯಾ ವಾಹಿನಿಗಳು ಸಮಯ ಕೊಡುವುದು ಬಹುತೇಕ ಇಲ್ಲವೇ ಇಲ್ಲ. ಅಕಸ್ಮಾತ್ ಸರ್ಕಾರೀ ಸಂಸ್ಥೆಯಾದ ದೂರದರ್ಶನ ಎಂಬುದು ಇಂತಹ ಕಾರ್ಯಕ್ರಮ ಮಾಡಲು ಮುಂದಾದರೂ ಆ ವಾಹಿನಿ ನೋಡುವ ಪ್ರೇಕ್ಷಕರ ಸಂಖ್ಯೆ ತೀರಾ ಕಡಿಮೆಯಾಗಿದೆ ಎಂಬುದು ಸತ್ಯ.

ಹೀಗಾಗಿ ಸಾಹಿತ್ಯಕ್ಕೂ ಕಿರುತೆರೆಗೂ ಈಗ ಇರುವ ಸಂಬಂಧ ಕೇವಲ ಯಾವುದೋ ಲೇಖಕನ ಹಾಡಿನ ಸಾಲನ್ನು ಯಾವುದೋ ಕಾರ್ಯಕ್ರಮದಲ್ಲಿ ಹಾಡುವಷ್ಟಕ್ಕೆ ಸೀಮಿತವಾಗಿದೆ ಎನ್ನುಬಹುದು. ಹಾಗೆಂದ ಕೂಡಲೇ ಈ ಕಾರ್ಯಕ್ರಮಗಳಿಗೆ ಸಂಭಾಷಣೆ ಎಂತಲೋ, ನಿರೂಪಣೆ ಎಂತಲೋ ಸಾಹಿತ್ಯ ಬರೆಯುತ್ತಾರಲ್ಲವೇ ಎಂಬ ಪ್ರಶ್ನೆ ಬರುತ್ತದೆ. ಖಂಡಿತ ಆ ಕೆಲಸ ಆಗುತ್ತಿದೆ. ಆದರೆ ಕನ್ನಡದ ಸಂದರ್ಭದಲ್ಲಿ ಶೇಕಡ ೯೦ರಷ್ಟು ಧಾರಾವಾಹಿಗಳು ಇನ್ಯಾವುದೋ ಭಾಷೆಯ ಯಶಸ್ವೀ ಧಾರಾವಾಹಿಗಳ ಮರುಅವತರಣಿಕೆ. ಹೀಗಾಗಿ ಇಲ್ಲಿ ಬರೆಯುವವರು ಅನುವಾದಕರ ಕೆಲಸ ಮಾಡುತ್ತಾ ಇರುತ್ತಾರೆ. ಕೆಲವು ಸ್ವತಂತ್ರ ಕತೆಗಳು ಸಹ ತಯಾರಾಗುತ್ತಿವೆ. ಅವುಗಳು ಸಾಹಿತ್ಯಾಧಾರಿತ ಕೃತಿಗಳಲ್ಲವಾದ್ದರಿಂದ ಇವತ್ತಿನ ಚರ್ಚೆಗೆ ಅವು ಬರುವುದಿಲ್ಲ.

ಇನ್ನೂ ಸ್ಥಳೀಯ ಮತ್ತು ಪ್ರಾದೇಶಿಕ ವೈವಿಧ್ಯವನ್ನು ಈ ಮಾಧ್ಯಮದಲ್ಲಿ ಹಿಡಿಯುವ ಪ್ರಯತ್ನ ತೊಂಬತ್ತರ ದಶಕದಲ್ಲಿ ಮತ್ತು ಈ ಶತಮಾನದ ಆರಂಭದಲ್ಲಿ ಒಂದಿಷ್ಟು ಆಗಿತ್ತು. (ಮೂಡಲಮನೆ, ಸಂಕ್ರಾಂತಿ, ನಾಕುತಂತಿ ಮುಂತಾದ ಧಾರಾವಾಹಿಗಳನ್ನು ನೆನೆಯಬಹುದು.) ನಂತರ ಕಾರ್ಪೋರೇಟಿಕರಣದ ಧಾವಂತದ ಜೊತೆಗೆ ಈ ಬಗೆಯ ಹಲವು ಕನ್ನಡ ಸೊಗಡುಗಳನ್ನು ದಾಟಿಸುವ ಕೆಲಸವನ್ನು ಟೆಲಿವಿಷನ್ ಧಾರಾವಾಹಿಗಳು ಮಾಡಿದ್ದು ಅತೀ ಕಡಿಮೆ. ಒಂದಿಬ್ಬರು ಉತ್ತರ ಕರ್ನಾಟಕ ಭಾಗದ ವಾರ್ತಾವಾಚಕರು ಸಣ್ಣ ಪುಟ್ಟ ಪ್ರಯತ್ನ ಮಾಡಿದರಾದರೂ ಈ ಕಾಲದ ಸಂಖ್ಯೆಗಳ ಆಟದ ಎದುರು ಆ ಪ್ರಯೋಗಗಳು ಬಹುಕಾಲ ಬಾಳಲಿಲ್ಲ. ಹೀಗಾಗಿ ಇಂದು ಟೆಲಿವಿಷನ್‌ನಲ್ಲಿ ಸಾಮಾನ್ಯೀಕರಣಗೊಂಡ ಕನ್ನಡ ಅಥವಾ ಕಂಗ್ಲೀಷು ಕನ್ನಡವೇ ಕೇಳುತ್ತದೆ.

ಒಟ್ಟಾರೆಯಾಗಿ ಹೇಳುವುದಾದರೆ ಎಲ್ಲಿಯವರೆಗೆ ಟೆಲಿವಿಷನ್ ವಾಹಿನಿಗಳು ಕಾರ್ಪೋರೇಟೀಕರಣದಿಂದ ಹೊರಬರುವುದಿಲ್ಲವೋ ಅಲ್ಲಿಯವರೆಗೆ ನೋಡುಗರು ಸುಮ್ಮನಿರಬಾರದು. ತಮ್ಮ ಊರುಗಳಲ್ಲಿ, ಬಡಾವಣೆಗಳಲ್ಲಿ ನೀವುಗಳೇ ಕಮ್ಯುನಿಟಿ ರೇಡಿಯೋ ಹಾಗೆ ಕಮ್ಯುನಿಟಿ ಟೆಲಿವಿಷನ್ ವಾಹಿನಿ ಆರಂಭಿಸಬೇಕು. (ಕೆಲವು ಕೇಬಲ್ ವಾಹಿನಿಗಳು ಈ ಪ್ರಯತ್ನ ಮಾಡುತ್ತಿವೆ. ಆದರೆ ಅವು ಪೂರ್ಣ ಪ್ರಮಾಣದಲ್ಲಿ ಆಯಾ ಸ್ಥಳೀಯ ಜನರ ಅಗತ್ಯ ಪೂರೈಸುತ್ತಿಲ್ಲ.) ಆಗ ಟೆಲಿವಿಷನ್ ಮಾಧ್ಯಮ ಸಂಪೂರ್ಣ ಡೆಮಾಕ್ರಟೈಸ್ ಆಗುತ್ತದೆ. ಜೊತೆಗೆ ಈ ದಿನ ಚರ್ಚೆಯಾಗುತ್ತಿರುವ ಸಾಮಾಜಿಕ ಜವಾಬ್ದಾರಿ ನಿರ್ವಹಣೆ ಸಹ ಖಂಡಿತ ಆಗುತ್ತದೆ.

ಡಿಜಿಟಲ್ ಜಗತ್ತು

ಇಂದು ಡಿಜಿಟಲ್ ಸ್ಟ್ರೀಮಿಂಗ್ ಸೈಟ್‌ಗಳ ಸಂಖ್ಯೆ ದಿನದಿಂದ ದಿನಕ್ಕೆ ದೊಡ್ಡದಾಗುತ್ತಿದೆ. ದಿನವೊಂದಕ್ಕೆ ಯೂಟ್ಯೂಬ್ ಒಂದರಲ್ಲಿಯೇ ಎರಡು ಸಾವಿರ ಗಂಟೆಗಳಿಗೂ ಹೆಚ್ಚು ಕಾರ್ಯಕ್ರಮಗಳು ಅಪ್‌ಲೋಡ್ ಆಗುತ್ತವೆ. ಇವುಗಳಲ್ಲಿ ಯಾವುದನ್ನು ನೋಡುವುದು ಎಂಬ ಆಯ್ಕೆ ನೋಡುಗನಿಗೆ ಬಿಟ್ಟದ್ದು. ಇಲ್ಲಿ ಕನ್ನಡದ್ದೇ ಅನ್ನುವ ಕಾರ್ಯಕ್ರಮಗಳು ಅತೀ ಕಡಿಮೆ. ಹೀಗಾಗಿ ತಮ್ಮ ಮೊಬೈಲ್‌ಗೆ ಅದಾಗಲೇ ಮಣಿದು ಹೋಗಿರುವ ಹೊಸ ತಲೆಮಾರಿನ ನೋಡುಗರು ಕನ್ನಡದ ಕಾರ್ಯಕ್ರಮಗಳಿಂದ ಬಹುದೂರ ಇದ್ದಾರೆ. ಅಕಸ್ಮಾತ್ ಅವರನ್ನು ಕನ್ನಡದ ಕಾರ್ಯಕ್ರಮ ನೋಡಲು ಪ್ರೇರೇಪಿಸಿದರೂ ಅದಾಗಲೇ ಜಾಗತಿಕ ಸಿನಿಮಾಗಳ ರುಚಿ ಹತ್ತಿದವರಿಗೆ ನಮ್ಮ ಭಾಷೆಯ ಕಾರ್ಯಕ್ರಮಗಳು ಪೇಲವ ಅನಿಸುತ್ತದೆ. ಇಂತಹ ಸ್ಥಿತಿಯನ್ನು ದಾಟಿಕೊಂಡು ಕನ್ನಡದ ಕಾರ್ಯಕ್ರಮಗಳನ್ನು ವೆಬ್‌ಸೀರೀಸ್ ಆಗುವ ಪ್ರಯತ್ನ ಅನೇಕರು ಮಾಡುತ್ತಿದ್ದಾರೆ. ಅವರು ಬೇಗ ಎಲ್ಲರ ಕಣ್ಣಿಗೂ ಸಿಗುವ ಹಾಗಾಗಲಿ ಎಂದು ಹಾರೈಸೋಣ.

ಆದರೆ ಈ ವೆಬ್ ಜಗತ್ತಿನಲ್ಲಿ ಸಾಹಿತ್ಯ ಮತ್ತು ದೃಶ್ಯಮಾಧ್ಯಮದ ಸಂಬಂಧ ಅದಾಗಲೇ ನಾನಾಡಿದ ಮಾತುಗಳ ಸ್ಥಿತಿಗಿಂತ ಭಿನ್ನವಾಗಿಲ್ಲ. ಒಂದೆರಡು ಸಾಹಿತ್ಯವನ್ನಾಧರಿಸಿದ ಕೃತಿಗಳು ವೆಬ್ ಸೀರೀಸ್ ಆಗಿ ಹಿಂದಿಯಲ್ಲಿ ಬಂದಿವೆಯಾದರೂ ಅವೂ ಸಹ ಮಾರಾಟದ ಸರಕಾಗಿ ತಯಾರಾದಂತ ಕೃತಿಗಳು. (ಕ್ರೌರ್ಯವನ್ನು ಅಥವಾ ಕಾಮವನ್ನು ವೈಭವೀಕರಿಸಿ ಮಾರಾಟ ಮಾಡಿದ ಕೃತಿಗಳೇ ಹೆಚ್ಚಾಗಿ ಬಂದಿವೆ) ಈ ಮಾತಿಗೆ ಅಪವಾದ ಎನಿಸುವ ಕೆಲವು ಕೃತಿಗಳು ಕಾಣುತ್ತವೆ. ಅವು ಜನಪ್ರಿಯತೆ ಪಡೆದುದು ಅಪರೂಪ.

ಕೆರಳಿಸುವವರ ನಡುವೆ ಕಂಗೆಟ್ಟವರು

ನನ್ನ ಮಾತುಗಳ ಅಂತಿಮ ಹಂತಕ್ಕೆ ಬರುವಾಗ ಈ ಮಾಧ್ಯಮದ ಎಲ್ಲಾ ವಿವರಗಳನ್ನೂ ಗಮನಿಸಿದರೆ ಅನಿಸುವುದಿಷ್ಟು. ಯಾವುದು ಜನರಿಗಾಗಿ ಹುಟ್ಟಿತೋ ಅದು ಜನರನ್ನು ಕೆರಳಿಸುವ, ಒಡೆಯುವ, ದ್ವೇಷಕ್ಕೆಳಸುವ ಅಥವಾ ಕ್ರೌರ್ಯದ ಹಾದಿಗೆ ಕರೆದೊಯ್ಯುವ ಕೆಲಸ ಮಾಡುತ್ತಿದೆ. ಒಬ್ಬ ಪುಟ್ಟ ಆರೇಳು ವರ್ಷದ ಬಾಲಕಿ “ದೇಶ್ ಕಿ ಗದ್ದರೋಂಕೋ” ಎಂದು ಉದ್ದಕ್ಕೆ ದ್ವೇಷದ ಘೋಷಣೆಗಳನ್ನು ಕೂಗುವ ವಿಡಿಯೋ ವೈರಲ್ ಆಗುತ್ತದೆ. ಇದು ಮಗುವಿನ ಮುಗ್ಧತೆಗಿಂತ ಆ ಮಗುವಿಗೆ ಅಂತಹುದನ್ನು ಕಂಠಪಾಠ ಮಾಡಿಸಿದ ಮನಸ್ಸುಗಳನ್ನು ಪರಿಚಯಿಸುತ್ತದೆ. ಇಂಥವುಗಳನ್ನು ನೋಡಿದ ಇನ್ಯಾವುದೋ ಭಾಗದಲ್ಲಿ ಕಿತ್ತೂರು ಚೆನ್ನಮ್ಮನ, ಸಂಗೊಳ್ಳಿ ರಾಯಣ್ಣನ ಮಾತುಗಳಿಗೆ ಅಭಿನಯಿಸಿ ಚಪ್ಪಾಳೆ ಗಿಟ್ಟಿಸುವ ಬದಲು, ಇದೇ ಮಾದರಿಯ ದ್ವೇಷದ ಸ್ಲೋಗನ್‌ಗಳಿಂದ ಮೆಚ್ಚುಗೆ ಪಡೆಯುವ ಖಾಯಿಲೆ ಶುರುವಾಗುತ್ತದೆ ಎಂಬ ಆತಂಕವಿದೆ. ಒಂದೆಡೆ ಮಸೀದಿ ಕೆಡವುವುದೇ ದೇಶಭಕ್ತಿ ಎಂಬ ನಾಟಕ ಮಾಡಿದ ಕರಾವಳಿಯ ಶಾಲಾ ಮಕ್ಕಳನ್ನು ದೇಶಭಕ್ತರೆನ್ನುವ ಮತ್ತು ಮತ್ತೊಂದೆಡೆ ಸರ್ಕಾರದ ಹೊಸ ಕಾಯಿದೆಯನ್ನು ಪ್ರಶ್ನಿಸಿದ ಉತ್ತರ ಕರ್ನಾಟಕದ ಶಾಲೆಯ ಮಕ್ಕಳನ್ನು ದೇಶದ್ರೋಹಿಗಳು ಎಂದು ಪೋಷಕರನ್ನು ಬಂಧಿಸುವ ವೈರುಧ್ಯ ನಮ್ಮೆದುರಿಗಿದೆ. ಇಬ್ಬರನ್ನೂ ಸರ್ಕಾರ ನಡೆಸಿಕೊಂಡ ಕ್ರಮ ಹಾಗೂ ಮಾಧ್ಯಮಗಳು ಈ ವಿವರಗಳನ್ನು ಬಿಚ್ಚಿಟ್ಟ ಕ್ರಮ ಎರಡೂ ಸಹ ಕಣ್ಣೆದುರಿಗಿವೆ. ಇಂತಹವುಗಳ ನಡುವೆ ಆಗುವ ಸಣ್ಣಪುಟ್ಟ ಒಳ್ಳೆಯ ಕೆಲಸಗಳು ಕಾಣಿಸದಂತೆ ನಾಪತ್ತೆ ಆಗುತ್ತಿವೆ. ಈ ಸಂದರ್ಭದಲ್ಲಿ ಈ ಸಮಾಜವು ಒಳಿತನ್ನು ಅದೆಷ್ಟೇ ಸಣ್ಣದಾಗಿದ್ದರೂ ಗುರುತಿಸಿ, ಬೆನ್ನು ತಟ್ಟಿ ಬೆಳೆಸುವ ಕೆಲಸ ಮಾಡಬೇಕಾಗಿದೆ.

ಲೇಖನದ ಆರಂಭದಲ್ಲೇ ಹೇಳಿದಂತೆ ಈ ಮಾಧ್ಯಮಗಳು ಇದೇ ಸಮಾಜದ ಶಿಶುಗಳು. ಸಮಾಜ ಎಷ್ಟು ವಿಘಟಿತವಾಗಿದೆಯೋ ಇವೂ ಅಷ್ಟೇ ವಿಘಟಿತವಾಗಿವೆ. ಇದನ್ನು ಸರಿಪಡಿಸಬೇಕಾದ್ದು ಸಹ ಸಮಾಜದ್ದೇ ಜವಾಬ್ದಾರಿ. ಸಮಾಜವು ಜವಾಬ್ದಾರಿಯಿಂದ ನಡೆಯುವುದನ್ನು ರೂಢಿಸಿಕೊಂಡಾಗ, ಒಡೆವ ಮನಸ್ಸುಗಳನ್ನು ಹತ್ತಿಕ್ಕುವ ಅಭ್ಯಾಸ ಮಾಡಿಕೊಂಡಾಗ ಉಳಿದ ಮಾಧ್ಯಮಗಳು ಸಹ ಜವಾಬ್ದಾರಿಯಿಂದ ಅರಿತು ಕೆಲಸ ಮಾಡುತ್ತವೆ. ಆ ಕಾಲ ಬೇಗ ಬರಲಿ ಎಂಬ ಕನಸು ನನ್ನದು.

ಕಡೆಯಲ್ಲಿ ಒಂದು ಮಾತು:
ಜವಾಬ್ ಪೂಚ್‌ತೇ ಹೀ ರೆಹನಾ…
ಜವಾಬ್ ಮಿಲನೆ ತಕ್ ನಹಿ ರುಕ್‌ನಾ…
ಎಂಬ ದಖ್ಖನೀ ಮಾತಿನೊಂದಿಗೆ ಮುಂದೆ ಪ್ರಶ್ನೋತ್ತರಕ್ಕೆ ಅವಕಾಶ ಇದ್ದರೆ ಸೈ. ಇಲ್ಲವಾದರೆ ತೊಂದರೆ ಇಲ್ಲ. ನಮ್ಮ ಸಂವಾದವನ್ನು ನಿರಂತರವಾಗಿ ಮುಂದುವರೆಸೋಣ ಎನ್ನುತ್ತಾ ನನ್ನ ಮಾತುಗಳನ್ನು ಮುಗಿಸುತ್ತೇನೆ.

ನನ್ನನ್ನು ಇಲ್ಲಿಗೆ ಕರೆಸಿದ, ನನ್ನ ಅಭಿಪ್ರಾಯ ಹಂಚಿಕೊಳ್ಳಲು ಅವಕಾಶ ಒದಗಿಸಿದ ಎಲ್ಲರಿಗೂ, ನನ್ನ ಮಾತಿಗೆ ತಾಳ್ಮೆಯಿಂದ ಕಿವಿಯನ್ನು ಒದಗಿಸಿದ ನಿಮಗೂ ನನ್ನ ವಿಶೇಷ ಧನ್ಯವಾದಗಳು.

‍ಲೇಖಕರು avadhi

February 9, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: