ಜಾತ್ರೆಯ ಬಲ್ಬಿನಂತೆ ಹಿಂದಕ್ಕೂ..ಮುಂದಕ್ಕೂ ಓಡುತ್ತಿರಬೇಕು ಅಷ್ಟೇ !

ಪ್ರಸಾದ್ ಶೆಣೈ ಆರ್.ಕೆ

ಮೊದ ಮೊದಲ ಮಳೆ ಸುರಿದಂತೆ, ಬಂಡೆಮೇಲೆ ಹಾಲ ಜಲಪಾತ ಭೋರ್ಗರೆದು ಚಿಮ್ಮುವಂತೆ ನೀವೇ ನಿಮ್ಮನ್ನು ಅರೆಕ್ಷಣ ಮರೆಯುವಂತೆ ಮಾಡಿದ ಮೊದಲ ಪ್ರೇಮ ಪತ್ರವನ್ನು, ಒಂದೆರೆ ಕ್ಷಣ ನಿಮ್ಮ ಜೊತೆಗಿದ್ದರೂ ನಿಮಗರಿವಿಲ್ಲದ್ದಂತೆ ಈಗಲು ನಿಮಗೆ ಸ್ಪೂರ್ತಿಯಾಗಿರೊ ಯಾವುದೋ ಊರಿನ ಜೀವವನ್ನು ಯಾವತ್ತಾದರೂ ಮತ್ತೆ ಮತ್ತೆ ನೆನಪು ಮಾಡಿಕೊಂಡಿದ್ದೀರಾ ?

ಮೊದಲ ಪ್ರೇಮಪತ್ರ ಎಲ್ಲೋ ಜೋಪಾನವಾಗಿಟ್ಟಿದ್ದರೆ ಆಗಾಗ ಅವಳದ್ದೋ ಅವನದ್ದೋ ಹಾಲುಗೆನ್ನೆಯನ್ನೇ ನೇವರಿಸುವಂತೆ ಮುದ್ದಾಡಿ ಒಲವ ದೃಷ್ಟಿ ಬೀರಿ ಮತ್ತೆ ಜೋಪಾನ ಮಾಡಿಟ್ಟಿದ್ದೀರಾ? ನಿಮ್ಮನ್ನೇ ಕೇಳಿಕೊಳ್ಳಿ.

ನಮಗೆ ಹಾಗೇ ಮಾಡುವ ಅಗತ್ಯವೇ ಇಲ್ಲ. ಆ ಪತ್ರ ಬರೆದವಳೇ ಈಗ ನನ್ನ ಜೊತೆಗಿದ್ದಾಳೆ ಅಂದ್ರೆ ನನ್ನ ಸಹಚಾರಿಣಿಯಾಗಿ.  ನಾನೇನಿದ್ದರೂ ಅವಳನ್ನೇ ನೇವರಿಸ್ತೇನೆ. ಪತ್ರಕ್ಕೆಂತ ನೇವರಿಸೋದು? ಅಂತ ಮುದದಿಂದ ನುಡಿಯುವವರ ಬಳಿಯೂ ನನಗೊಂದಷ್ಟು ಮಾತನಾಡೋದಿದೆ. ಹಾಗೇ ಮೊದಲ ಪ್ರೇಮ ಪ್ರಕರಣವನ್ನು ನೆನೆದುಕೊಂಡರೆ ಕಣ್ಣೀರು ಬಂದುಬಿಡುತ್ತೆ, ಅದಕೆ ನೆನಪೇ ಮಾಡಲು ಹೋಗಲ್ಲ, ಎಲ್ಲವನ್ನೂ ಈಗ ನೆನಪು ಮಾಡಿಕೊಂಡು ಆಗಬೇಕಾದ್ದೇನು? ಎಂದು ಪ್ರಶ್ನಿಸಿ ಸುಮ್ಮನಾಗುವವರೇ ಇಲ್ಲಿ ಕೇಳಿ

ಯಾಕೆಂದರೆ ನಾವಿವತ್ತು ನೆನಪುಗಳನ್ನು ಮತ್ತೆ ಮತ್ತೆ ಮೆಲುಕಾಡುತ್ತಾ”ಒಂದಾನೊಂದು ಕಾಲದಾಗ ಏಸೊಂದು ಮುದವಿತ್ತಾ”ಎನ್ನುವ ಆಹ್ಲಾದವನ್ನೇ ಮರೆತುಬಿಟ್ಟಿದ್ದೇವೆ, ಕಾಲ ಅನ್ನೋ ಕುದುರೆಯ ಜೊತೆ ಮುಂದೊಕ್ಕೋಡುತ್ತಲೇ ಆದಷ್ಟು ಬೇಗ ಗುರಿ ತಲುಪಬೇಕು ಎನ್ನುವ ಹಂಬಲದಲ್ಲೇ ಇರುವ ನಾವು, ಹಿಂದಕ್ಕೋಡುತ್ತ ನಮ್ಮ ನಮ್ಮ ನೆನಪುಗಳನ್ನೇ ಈ ಕಾಲಕ್ಕೂ ಸ್ಪೂರ್ತಿಯಾಗಿಸುತ್ತ, ಜೀವ ಪ್ರೀತಿಯ ಮೂರ್ತಿಯಾಗಿಸುತ್ತ ಅನುದಿನವೂ ಬೆಳಗೋದನ್ನು ಮರೆತೇ ಬಿಟ್ಟಿದ್ದೇವೆ. ಅದಕ್ಕೇ ನೆನಪು ಅನ್ನೋ ಅಂತರಂಗದ ನಿಧಿಯನ್ನು ಮತ್ತೆ ನಿಮ್ಮ ಜೊತೆ ಅಗೆಯುವ ಆಸೆಯಾಗಿದೆ ನನಗೆ.

ಎಷ್ಟೇ ದೂರ ಹೋದರೂ ಆ ದೂರ ಹೋದ ನಂತರ ಎಲ್ಲೋ ಹಿಂದಿನ ನಿಲ್ದಾಣದಲ್ಲಿ ಕಿಸಕ್ಕಂತ ನಮ್ಮನ್ನೇ ನೋಡಿ ನಕ್ಕ ಮಗು, ಕಣ್ಣಲ್ಲಿ ಕಣ್ಣಿಟ್ಟು ನೋಡಿ ಬೆಳಕ ಹೊಮ್ಮಿಸಿದ ಯಾವುದೋ ಊರಿನ ಎಣ್ಣೆಗಪ್ಪು ಹುಡುಗಿ, ನೀಲ ಸೊಗಸಿನಿಂದ ಫಳ ಫಳ ಮಿನುಗಿದ ಕೆರೆ, ನಾವು ಇಷ್ಟಪಟ್ಟು ಸವೆಸಿ ಬಂದ ಅಂಕುಡೊಂಕಾದ ರಸ್ತೆ ಎಲ್ಲವೂ ಕಾಡಿಯೇ ಕಾಡುತ್ತದೆ. ಯಾಕೆಂದರೆ ಅವೆಲ್ಲವನ್ನು ನಾವು ಕಂಡದ್ದು ಅರೆಕ್ಷಣವಾದರೂ ಅವು ನಮ್ಮ ಮನೋಕೋಶದಲ್ಲಿ ಮೂಡಿಸಿದ ತಣ್ಣನೆಯ ಕೋಲಾಹಲ, ಪರಿಣಾಮ ಅಮೂರ್ತವಾದುದು. ಬದುಕಿನಲ್ಲಿ ಅವೆಲ್ಲಕ್ಕೂ ಇರುವ ಮೌಲ್ಯ ಎಷ್ಟು ಅಂತ ಬಣ್ಣನೆ ಮಾಡಲು ಸಾಧ್ಯವೇ ಇಲ್ಲ. ಇದೇ ರೀತಿ ನಮ್ಮ ಬದುಕಿನಲ್ಲಿ ಬಂದ ಪತ್ರಗಳು, ಪಾತ್ರಗಳು, ಮತ್ಯಾವುದೋ ಸ್ಥಳಗಳು ನಮ್ಮನ್ನೊಮ್ಮೆ ಸರಿದು ಹೋಗಿದ್ದರೂ ಎಷ್ಟೋ ಕಾಲದ ಬಳಿಕ ಮತ್ತೆ ಹೂ ತೆನೆಯ ಹಗುರಿನಂತೆ ಅವುಗಳನ್ನೆಲ್ಲಾ ನೆನಪು ಮಾಡಿಕೊಳ್ಳುವುದು ಎಷ್ಟೊಂದು ಹಿತವಾದುದು.

ಮೊನ್ನೆ ನಾ ಮಾಡಿದ್ದೂ ಅಷ್ಟೆ. ಯಾವುದೋ ಒಂದು ಅಸಹನೆಯಲ್ಲಿ ಬದುಕು ಇಷ್ಟೇ ಅಲ್ಲವಾ? ಯಾಕಪ್ಪಾ ಈ ಬದುಕಿನಲ್ಲಿ ವೈವಿದ್ಯತೆಗಳೇ ಇಲ್ಲ? ಅನ್ನೋ ವಿಚಿತ್ರ ಶೂನ್ಯದಲ್ಲೇ ಕಳೆದುಹೋಗಿರುವಾಗ ಅಳುವ ಕಂದದ ತುಟಿಗೆ ಜೇನ ಹನಿಗಳು ಬಿದ್ದ ಹಾಗೇ ನನ್ನ ಕೈ ಬೆರಳಿಗೆ ಅವಳು ಯಾವತ್ತೋ ಬರೆದ ಪತ್ರದ ಸಿಹಿ ಸಿಹಿ ಮಿಠಾಯಿಯಂತಹ ಅಕ್ಷರಗಳು ಅಂಟಿಕೊಂಡವು. ಕಣ್ಣರಳಿಸಿ ನೋಡಿದರೆ ಆಹಾ ಆ ಚಂದದ ಅಕ್ಷರಗಳ ಸಾಲಿನಲ್ಲಿ ಎಷ್ಟೋ ವರ್ಷದ ಹಿಂದೆ ಪತ್ರ ಬರೆದ ಆ ಹುಡುಗಿಯ ಫಳ ಫಳ ಕಣ್ಣುಗಳು, ನವಿಲಗರಿ ಹಾಗಿದ್ದ ಆಕೆಯ ಹುಬ್ಬುಗಳು, ತುಟಿಯ ರಂಗು ಹೆಜ್ಜೆಗಳೆಲ್ಲಾ ತಿಳಿ ನೀಲಿ ಬಣ್ಣದ ಕಾಗದದಲ್ಲಿ ಕಂಡಂತಾಗಿ ಕಾಮನಬಿಲ್ಲಿನ ಏಳೂ ಬಣ್ಣದಂತಾದೆ. ಅವಳು ಆ ಕಾಲದಲ್ಲಿ ಬರೆದಿದ್ದರೂ ಅವಳ ಒಂದೊಂದು ಸಾಲುಗಳೂ ಎಷ್ಟೊಂದು ಪ್ರಬುದ್ಧವಾಗಿತ್ತೆಂದರೆ,  ಓದುತ್ತ ಓದುತ್ತ ಅವಳು ಶಕ್ತಿ ಕೊಟ್ಟದ್ದು ಆ ಅಕ್ಷರಗಳಿಗಾ, ನನಗಾ ಅಥವಾ ಆ ಕಾಲದಿಂದ ಈ ಕಾಲಕ್ಕೆ ಶಕ್ತಿ ಕೊಟ್ಟಳಾ ಎನ್ನುವ ಅಚ್ಚರಿಯಾಯ್ತು. ನಂಗೆ ಅವಳು ಬರೆದಿದ್ದಳು.

“ಆಕಸ್ಮಿಕ ಘಟನೆಗಳು ಎಷ್ಟೊಂದು ಮುದ ನೀಡುತ್ತದೆ ಅಲ್ವಾ? ಹೇಳಿ ಕೇಳಿ ಬರದ ಸಂಗತಿಗಳೇ ಎಷ್ಟೊಂದು ಚಂದ. ಬಾರದ ಊರಿಗೆ ಬಯಸದೇ ಬಂದ ಬಸ್ಸು, ಬಿಸಿಲುಗಾಲದಲ್ಲಿ ಹೂವಂತೆ ಸುರಿದ ಮಳೆ, ಹೇಳದೇ ಅವಳು ಕೊಟ್ಟ ಮುತ್ತು, ಜಾತ್ರೆಯಲ್ಲಿ ಅಚಾನಕ್ಕಾಗಿ ಸಿಕ್ಕ ಕಳೆದುಹೋದ ಗೆಳೆಯ, ಇವೆಲ್ಲಾ ಎಷ್ಟೊಂದು ಖುಷಿಕೊಡುತ್ತದೆ ಅಲ್ವಾ ಆಕಸ್ಮಿಕತೆಯಲ್ಲಿ ಬದುಕಿನ ಅರ್ಧ ರೋಚಕತೆ ಅಡಗಿದೆ ಅನ್ಸುತ್ತೆ ನಂಗೆ. ಆ ಆಕಸ್ಮಿಕ ಸಂಗತಿಗಳನ್ನು ಪ್ರೀತಿಸೋಣ, ಮುಂದೆ ಜೊತೆಗಿರುತ್ತೇವೋ ಗೊತ್ತಿಲ್ಲ. ಒಂದು ವೇಳೆ ಇರದಿದ್ದರೆ ಅದೂ ಒಂದು  ಆಕಸ್ಮಿಕ ಅಂತ ತಿಳಿದುಕೊಂಡು ಸುಮ್ಮನಿದ್ದುಬಿಡೋಣ. ಮತ್ಯಾವುದೋ ಬದುಕಿನ  ತಿರುವಿನಲ್ಲಿ ಹೇಳದೇ ಕೇಳದೇ ಸಿಕ್ಕರೆ ಅದೂ ಒಂದು ಆಕಸ್ಮಿಕ ಅಂತ ಖುಷಿಪಡೋಣ “ಅಂತೆಲ್ಲಾ ಬರೆದಿದ್ದದ್ದನ್ನು ಓದುತ್ತ ಓದುತ್ತ ಬದುಕು ಆಕಸ್ಮಿಕ ಸಂಗತಿಗಳ ದೊಡ್ಡದ್ದೊಂದು ನಕ್ಷತ್ರಮಾಲೆ ಅಂತನ್ನಿಸಿ ಬೆಳಕಾಗಿ ಹೋದೆ. ನೋಡಿ ಅವಳ ಪತ್ರದಲ್ಲಿದ್ದ ಇಷ್ಟೇ ಇಷ್ಟು ಸಾಲು ಎಷ್ಟೊಂದು ನನ್ನನ್ನು ಬೆಳಗಿಸಿತು. ಅದೇ ಪತ್ರದ ತುದಿಯಲೊಂದು ಸು.ರಂ.ಎಕ್ಕುಂಡಿಯವರ  ಪುಟ್ಟ ಸಾಲಿತ್ತು

“ದೂರ ದಾರಿಯ ಹಿಡಿದ ಹಿರಿಯರೇ ನಿಮಗಲ್ಲಿ ದಾರಿ ತೋರಲಿ ನನ್ನ ಪುಟ್ಟ ಬೆಳಕು..

ದುಃಖ ಚೀಲವ ಹೊತ್ತು ಸಾಗಿರುವ ಪಯಣಿಗರೇ ಹಿಡಿ ಬೆಳಕು ನೀಡಿರಲಿ ಹೊಳೆವ ಬದುಕು…

ತೂಗಿ ಬಿಡುವೆನು ದೂರ ನಡೆದವರಿಗೆಂದು ಬಣ್ಣ ಬಣ್ಣದ ಮಗಿಲ ಬುಟ್ಟಿಯಿದನಿಂದು..

ಓದುತ್ತ, ಅನುಭವಿಸುತ್ತ ಅಬ್ಬಾ ಅನ್ನಿಸಿತು ನನಗೆ, ಅವಳು ಆವತ್ತು ಪತ್ರದಲ್ಲಿ ಕೊಟ್ಟ ಹಿಡಿ ಬೆಳಕಿನ ಪ್ರಭೆಯಲ್ಲಿ ನಾನು ಮತ್ತಷ್ಟು ಬೆಳಗಿಹೋಗಿದ್ದೆ. ನೋಡಿದಿರಾ ಗತಕಾಲದ ಒಂದೊಂದು ಪುಟ್ಟ ಪತ್ರ, ಪತ್ರದಂತೆ ಆ ಕಾಲದಲ್ಲಿ ಬೆರಗು ಹುಟ್ಟಿಸಿದ ಸಂಗತಿಗಳು ಒಂದಷ್ಟು ಕಾಲ ಮೀರಿದ ಮೇಲೆಯೂ ಬಾಳುತ್ತದೆ, ಬೆಳೆಯುತ್ತದೆ, ನಮಗೆ ದಾರಿ ತೋರಿಸೋ ಕಂದೀಲಿನಂತೆ ಹೊಳೆಯುತ್ತದೆ. ನಾ ನಿಮಗೆ ಹೇಳೋದು ಇಷ್ಟೆ. ಬರೀ ಪತ್ರ ಅಂತಲ್ಲ, ನೀವು ಜೋಪಾನ ಮಾಡಿಕೊಂಡಿಟ್ಟ ಪುಟ್ಟ ಚೀಟಿ, ಚಿತ್ರ, ಕರ್ಚೀಪು, ಬಣ್ಣದ ಹಾಳೆ, ಅವಳ ವೇಲು, ಕೈಬಳೆ, ನವಿಲಗರಿ, ಹೀಗೆ ಏನಿದ್ದರೂ ಅದನ್ನೊಮ್ಮೆ ನಿಟ್ಟಿಸಿ ನೋಡಿ, ಅಲ್ಲೊಂದು ಕಣ್ಣೀರು, ನಗು, ಬೆರಗು, ನಿರಾಶೆ, ಮುಷ್ಟಿಯಷ್ಟು ಸಂಭ್ರಮ, ಪ್ರೀತಿ ಸಿಕ್ಕೇ ಸಿಗುತ್ತದೆ ನಿಮಗೆ, ಗತ ನೆನಪೂ ಇಲ್ಲಿ ಉಲ್ಲಾಸದ ಹೊಳೆಯಾಗುತ್ತದೆ.

ಒಂದು ವೇಳೆ ಅಂತಹ ವಸ್ತುಗಳ್ಯಾವುದು ನಮ್ಮ ಬಳಿ ಇಲ್ಲ ಎಂದರೂ ಹೋಗಲಿ, ಮನಸ್ಸಲ್ಲಿ ಒಂದಷ್ಟು ನೆನಪುಗಳಂತೂ ಇದ್ದೇ ಇರುತ್ತದಲ್ವಾ? ನಿಮ್ಮನ್ನು ಪ್ರೀತಿಸಿದ ಮೊದಲ ಹುಡುಗಿಯೋ,  ಅಥವಾ ಹುಡುಗನೋ ಈಗ ಎಲ್ಲಿದ್ದಾರೆ ಅಂತ  ಸುಮ್ಮನೇ ಕುತೂಹಲಕ್ಕೆ ಬಿದ್ದು ಹುಡುಕಿ, ನಿಮ್ಮೊಳಗನ್ನು ಪ್ರೇರೇಪಿಸುವ ಬದಲಾಯಿಸಿದ ಜಾಗಯಾವುದಾದರೂ ಇದ್ದರೆ ಅಲ್ಲೊಮ್ಮೆ ತಿರುಗಿ ಬನ್ನಿ,  ನಿಮ್ಮನ್ನು ಮೊದಮೊದಲ ಬದುಕಿನ ಹಿತವಾದ ಸ್ನೇಹಸುಗಂಧವನ್ನು ನೀಡಿದ ವ್ಯಕ್ತಿ  ನಿಮ್ಮ ಜೊತೆ ಈಗ ಸಂಪರ್ಕದಲ್ಲೇ ಇರದಿದ್ದರೆ, ಸುಮ್ಮನೇ ಅವರೆಲ್ಲಾದರೂ ಸಿಗುತ್ತಾರಾ? ಅಂಥ ಹುಡುಕಿ.

ಗತಕಾಲದ ಕೆಲವೊಂದು ಸಮೃದ್ಧ ಖುಷಿ ಈಗಿಲ್ಲ, ಆ ಕಾಲ ಎಷ್ಟೊಂದು ಚಂದ ಇತ್ತು, ಈಗೆಲ್ಲಾ ಹಾಳಾಗಿದೆ ಅನ್ನುವ ಭಾವುಕತೆಯಲ್ಲಿ ಬಳಲೋದೇ ಬೇಡ, ನೀವು ಸಾಗಿ ಬಂದ ದಾರಿಯನ್ನು ಈ ಕಾಲದ ಕಣ್ಣಲ್ಲಿ ನೋಡಿಬಿಡಿ. ಆಗ ಅನುಭವಿಸಿದ್ದೆಲ್ಲವೂ ಮತ್ತೆ  ಮತ್ತೆ ದಕ್ಕುತ್ತದೆ. ಆ ಕಾಲದ ಖುಷಿ ಈ ಕಾಲಕ್ಕೆ ಹಾಡಗುತ್ತದೆ. ಆ ಕಾಲದ ಬೇಸರವೂ ಈ ಕಾಲಕ್ಕೆ ಸ್ಪೂರ್ತಿಯೂ ಆಗಬಹುದು.

ಮೊನ್ನೆ ನಮ್ಮೂರಿನಲ್ಲಿ ಜಾತ್ರೆ ಜಿಗಿಜಿಗಿ ಕಳೆಗಟ್ಟಿತ್ತು. ಆ ಬಣ್ಣದ ಬಣ್ಣದ ಬೆಳಕಿನ ನಡುವೆ, ಆಕಾಶದೆತ್ತರಕ್ಕೆ ತಿರುಗುತ್ತಿರುವ ಜಾತ್ರೆಯ ತೊಟ್ಟಿಲುಗಳ ನುಡವೆ, ಮಾವಿನಕಾಯಿಯ ಚುರುಮುರಿಯ ಪರಿಮಳದ ನಡುವೆ ಹಳೆಯ ಸ್ನೇಹಿತೆಯೊಬ್ಬಳು ನೆನಪಾದಳು, ಇದೇ ಜಾತ್ರೆಯ ಹೊಂಬಣ್ಣದ ಬೆಳಕಿನ ನಡುವೆ ಅವಳಿಗೆ ನೂರಾರು ಕತೆ ಹೇಳಿದ್ದೆ, ಹುಡುಗಾಟಿಕೆಯಲ್ಲಿಯೇ ದಿನ ಕಳೆಯುತ್ತಿದ್ದ ಅವಳಿಗೆ ಬುದ್ಧಿ ಹೇಳಿದ್ದೆ. ಆಮೇಲೆ ಅವಳು ಬದಕಿನ ಯಾವುದೋ ತಿರುವಿನಲ್ಲಿ ಕಳೆದಹೋಗಿದ್ದಳು. ಮೊನ್ನೆ  ಜಾತ್ರೆಯಲ್ಲಿ ಒಂಟಿಯಾಗಿ ಅಲೆಯುತ್ತಿದ್ದಾಗ ಅವಳದ್ದೇ ನೆನಪಾಗಿ, ಎಲ್ಲೋ ಇದ್ದ ಅವಳ ನಂಬರ್ ಹುಡುಕಿ ಕರೆ ಮಾಡಿದೆ, ಅವಳ ಧ್ವನಿಯಲ್ಲಿ ಎಂದೂ ಇರದ ಪ್ರಬುದ್ದತೆ ಇದ್ದ ಹಾಗಿತ್ತು. ಮಾತಾಡುತ್ತ ಜಾತ್ರೆ ಬಗ್ಗೆ ಪ್ರಸ್ತಾಪ ಮಾಡಿದಾಗ ನಂಗೂ ಆ ಜಾತ್ರೆ ನೆನಪಾಗ್ತಿದೆ. ನೀವು ಆವತ್ತು ನಂಗೆ ಬುದ್ದಿ ಹೇಳಿದ್ದು ಆವತ್ತು ನಂಗೆ ಅರ್ಥವಾಗಿಲ್ಲ, ಆದ್ರೆ ಇವತ್ತು ಅರ್ಥವಾಗಿದೆ. ನೀವು ಯಾವತ್ತೋ ಬರೆದ ಪತ್ರವನ್ನು ಆಗಾಗ ಓದ್ತಾ ಇರ್‍ತೇನೆ. ಏನೋ ಒಂದು ಸ್ಪೂರ್ತಿ ಸಿಗುತ್ತದೆ ಅಂತ ತಣ್ಣಗೇ ಹೇಳಿದಳು

ನೋಡಿ ನಂಗೊಂದು ಪತ್ರ ಸ್ಪೂರ್ತಿ ನೀಡಿದರೆ ಅವಳಿಗೆ ನಾ ಬರೆದಿದ್ದ ಪತ್ರವೇ ಸ್ಪೂರ್ತಿ ನೀಡಿದೆ. ಭೂತಕಾಲದಿಂದ ಈ ವರ್ತಮಾನದಲ್ಲಿ ಕಲಿಯೋದು ಎಷ್ಟೊಂದೆಲ್ಲಾ ಇದೆ ಅಂತನ್ನಿಸಿ ನಿರುಮ್ಮಳನಾದೆ. ನಾವು ನಿನ್ನ ಜೊತೆ ಕಳೆದ ನೆನಪುಗಳು ಯಾವುದೇ ಆಗಿರಲಿ, ಅದು ಸಾಯೋ ತನಕ ನನ್ನ ನೆನಪೆಂದರೆ ಬರೀ ನನ್ನ ನೆನಪೇ ಆಗಿರುತ್ತದೆ. ನೆನಪುಗಳನ್ನು ನೆನಪು ಮಾಡಿಕೊಳ್ಳದಿದ್ದರೆ ಎಷ್ಟೊಂದೆಲ್ಲಾ ಕಳೆದುಕೊಳ್ಳುತ್ತೇವಲ್ಲಾ, ಅದನ್ನು ಕಳೆದುಕೊಳ್ಳಲು ಇಷ್ಟವಾಗಲಿಲ್ಲ ಅದಕ್ಕೆ ನಿನ್ನನ್ನೂ ನೆನಪೂ ಮಾಡಿಕೊಂಡೆ, ನೀನು ಹೇಗಾದ್ರೂ ಇರು ಆದರೆ ನೆನಪುಗಳನ್ನು ನೆನಪು ಮಾಡಿಕೊಳ್ಳದೆ ಇರಬೇಡ, ಬರಿ ನನ್ನದ್ದಂತ ಅಲ್ಲ, ಯಾವ ನೆನಪಾದ್ರೂ ಆಗಲಿ, ಆ ನೆನಪುಗಳಿಗೆ ನಿನ್ನನ್ನು ಪೊರೆಯೋ ಗುಣ ಇದೆ ಅಂತಾದ್ರೆ ಅದನ್ನು ಇನ್ನಷ್ಟು ಜತನ ಮಾಡಿಕೊಅಂದೆ.

ಖಂಡಿತ, ನೆನಪುಗಳ ಮೌಲ್ಯ ಈಗೀಗ ಅರಿವಾಗ್ತಿದೆ ಎಂದಳು.

ಸರಿ ನೆನಪಿನ ತಿರುವಿನಲ್ಲಿ ಮತ್ತೆ ಯಾವತ್ರಾದ್ರೂ ಸಿಗೋಣಎಂದು ಫೋನಿಟ್ಟೆ. ಜಾತ್ರೆಯಲ್ಲಿ ಸಾಲು ಬಲ್ಬಿನ ಬೆಳಕುಗಳು ಹಿಂದಕ್ಕೂ, ಮುಂದಕ್ಕೂ ಓಡುತ್ತ ಬೆಳಗುತ್ತಿತ್ತು. ನಾವೂ ಅಷ್ಟೇ ಆಗಾಗ ಹಿಂದಕ್ಕೂ ಹೋಗಿ ಯಾವುದ್ಯಾವುದನ್ನೋ ನೆನಪು ಮಾಡಿಕೊಳ್ಳಬೇಕು, ಅಲ್ಲೇ ನಿಲ್ಲದೇ ಮತ್ತೆ ಮುಂದಕ್ಕೋಡುತ್ತ ಬೆಳೆಗಬೇಕಲ್ವಾಎಂದುಕೊಳ್ಳುತ್ತ ಮುಂದಕ್ಕೆ ನಡೆದೆ.

‍ಲೇಖಕರು avadhi

February 9, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: