ಪಡ್ಡಾಯಿ ಕಟ್ಟಿದ ಕಥೆ- ಕಡಲಿಗೆ ಹೋದ ಕಡಲಗುಳಿಗ!

ಚಿಕ್ಕ ವಯಸ್ಸಿನಲ್ಲಿಯೇ ಚಿತ್ರರಂಗದಲ್ಲಿ ತಮ್ಮ ಛಾಪು ಮೂಡಿಸಿದವರು ಅಭಯ ಸಿಂಹ. ಇವರು ನಿರ್ದೇಶಿಸಿದ ಮೊದಲ ಚಲನಚಿತ್ರ ‘ಗುಬ್ಬಚ್ಚಿಗಳು’. ೨೦೦೮ ರಲ್ಲಿ ಆರಂಭವಾದ ಇವರ ಚಿತ್ರ ಪಯಣಕ್ಕೆ ಈಗ ದಶಕದ ವಸಂತ.

ಕಡಲ ಅಲೆಗಳ ಅಬ್ಬರವನ್ನು ಆಲಿಸುತ್ತಲೇ ಬೆಳೆದ ಹುಡುಗನಿಗೆ ಮನಸ್ಸು ಮತ್ತೆ ಮತ್ತೆ ಅತ್ತಲೇ ಎಳೆದದ್ದು ಆಕಸ್ಮಿಕವಲ್ಲ. ತಾನು ಬಾಲ್ಯದಿಂದಲೂ ಕಂಡ ಸಮುದ್ರ, ಮೀನುಗಾರರು, ದೋಣಿ, ಬಲೆ, ಹಡಗು ಎಲ್ಲವನ್ನೂ ಸೇರಿಸಿ ಕಟ್ಟಿದ ಚಿತ್ರವೇ ‘ಪಡ್ಡಾಯಿ’.

ತುಳು ಭಾಷೆಯ ಈ ಸಿನೆಮಾ ಕೇವಲ ಭಾಷೆಯ ಕಾರಣಕ್ಕಾಗಿ ಮಾತ್ರ ನೋಡುಗರನ್ನು ಕಾಡಲಿಲ್ಲ. ಬದಲಿಗೆ ಇದು ಯಶಸ್ವಿಯಾಗಿ ತುಳು ನೆಲದ ಸಂಸ್ಕೃತಿಯನ್ನು ಕಟ್ಟಿಕೊಟ್ಟ ಚಿತ್ರ. ಈ ಚಿತ್ರಕ್ಕೆ ಮತ್ತೆ ರಾಷ್ಟ್ರ ಪ್ರಶಸ್ತಿ ಇವರನ್ನು ಹುಡುಕಿಕೊಂಡು ಬಂದಿತು.

 

ಅಭಯ ಸಿಂಹ ಹೇಗೆ ತಮ್ಮ ಸಿನೆಮಾವನ್ನು ಕಟ್ಟುತ್ತಾರೆ ಎನ್ನುವ ಕುತೂಹಲ ಎಲ್ಲರಿಗೂ ಇದೆ. ಈ ಪ್ರಶ್ನೆಯನ್ನು ನಾವೂ ಕೇಳಬೇಕು ಎಂದುಕೊಂಡಿದ್ದಾಗಲೇ ಅಭಯ ಸಿಂಹ ‘ಅಕ್ಷರ ಪ್ರಕಾಶನ’ದ ಮೂಲಕ ‘ಪಡ್ಡಾಯಿ’ ಕಟ್ಟಿದ ಕಥೆಯ ಕೃತಿಯನ್ನು ಹಿಡಿದು ಬಂದರು.

ಕನ್ನಡದಲ್ಲಿ ಸಿನೆಮಾ ಕುರಿತ ಕೃತಿಗಳು ಬೆರಳೆಣಿಕೆಯಷ್ಟು. ಇಂತಹ ಸಂದರ್ಭದಲ್ಲಿ ಚಿತ್ರಕಥೆಯ ಸಮೇತ ಅಭಯ ಸಿಂಹ ಪಡ್ಡಾಯಿ ಕಟ್ಟಿದ ಕಥೆಯನ್ನು ಹೇಳಿದ್ದಾರೆ. ಓದಿ-

ಈ ಕೃತಿ ಕೊಳ್ಳುವ ಆಸಕ್ತಿ ಇದ್ದಲ್ಲಿ  ಇಲ್ಲಿ ಒತ್ತಿ 

| ನಿನ್ನೆಯಿಂದ |

8

ನಮ್ಮ ಬಹುತೇಕ ಚಿತ್ರೀಕರಣ ಮಲ್ಪೆಯಲ್ಲೂ, ಸಮೀಪದ ಪಡುಕರೆಯಲ್ಲೂ ನಡೆಯಿತು. ಮಲ್ಪೆ ಈ ಭಾಗದ ದೊಡ್ಡ ಮೀನುಗಾರಿಕಾ ಬಂದರು. ಸುಮಾರು ಮೂರು ಸಾವಿರ ದೋಣಿಗಳು ಇಲ್ಲಿ ದಿನವೂ ವ್ಯವಹಾರ ನಡೆಸುತ್ತವೆ. ಅಪರಾತ್ರಿಯಲ್ಲಿ ಸಮುದ್ರಕ್ಕಿಳಿಯುವ ಮೀನುಗಾರರು ಎಂಟು ಗಂಟೆಯಷ್ಟೊತ್ತಿಗೆ ದಡಕ್ಕೆ ಮೀನು ತಂದು ಹಾಕುತ್ತಾರೆ. ಅಲ್ಲಿ ಕೂಡಲೇ ಹರಾಜು, ಮಾರಾಟ ಇತ್ಯಾದಿಗಳು ಚುರುಕಾಗಿ ನಡೆದು ಮೀನುಗಾರಿಕೆಯ ಬಹುತೇಕ ವ್ಯವಹಾರ ಹನ್ನೊಂದು ಗಂಟೆಯೊಳಗೆ ಮುಗಿದಿರುತ್ತದೆ.

ಆದರೆ ಮೀನುಗಾರರ ಜೀವನ ಈ ಬದುಕಿಗೆ, ದೋಣಿಗಳೊಂದಿಗೆ ಎಷ್ಟು ಹಾಸು ಹೊಕ್ಕಾಗಿರುತ್ತದೆಯೆಂದರೆ, ದಿನದ ಯಾವುದೇ ಸಮಯಕ್ಕೆ ನಾವು ಬಂದರಿಗೆ ಹೋದರೂ, ಎಲ್ಲೋ ಹರಿದ ಬಲೆ ರಿಪೇರಿ ಮಾಡುತ್ತಾ ಕುಳಿತಿರುವವರು, ಮುಂದಿನ ಪ್ರಯಾಣಕ್ಕೆ ಮೀನನ್ನು ಸುರಕ್ಷಿತವಾಗಿ ದಡಕ್ಕೆ ತರಲು ದೋಣಿಗಳಲ್ಲಿ ಮಂಜುಗಡ್ಡೆ ತುಂಬಿಸುವವರು ಕಾಣಿಸುತ್ತಿರುತ್ತಾರೆ.

ಇನ್ನು ಹಾಯಾಗಿ ಎರಡು ಕಂಬಕ್ಕೆ ಬಟ್ಟೆ ಕಟ್ಟಿ ತೊಟ್ಟಿಲು ಮಾಡಿ ಮಲಗಿ ನಿದ್ರಿಸುವವರೂ, ದೋಣಿಯ ಮೇಲೆಯೇ ಸೋಪು ಹಚ್ಚಿಕೊಂಡು ಸ್ನಾನ ಮಾಡುವವರೂ ಸಿಗುತ್ತಾರೆ. ದೋಣಿಗಳನ್ನು ಜೋಡಿಸಿಟ್ಟ ಈ ಬಂದರು ನಮ್ಮ ಕಣ್ಣಿಗೆ ದೃಶ್ಯಗಳ ಮಹಾಪೂರ. ಹೀಗಾಗಿ ನಮ್ಮ ಕೆಲವು ದೃಶ್ಯಗಳನ್ನು ಅಲ್ಲೇ ಚಿತ್ರೀಕರಿಸಲು ನಿರ್ಧರಿಸಿದ್ದೆವು.

ಇಲ್ಲಿನ ಚಟುವಟಿಕೆಗಳ ಮಧ್ಯದಲ್ಲಿ ಚಿತ್ರೀಕರಣ ಮನೋಹರವಾದರೂ, ಧ್ವನಿ ದಾಖಲೀಕರಣ ತುಸು ಕಷ್ಟ. ಆದರೂ ನಮ್ಮ ಧ್ವನಿ ತಜ್ಞ ಜೇಮಿ ಸಾಕಷ್ಟು ಚಾಣಾಕ್ಷತನದಿಂದ ಇರುವ ಸೀಮಿತ ಪರಿಕರಗಳಲ್ಲೆ ಚೆನ್ನಾಗಿ ಧ್ವನಿ ದಾಖಲೀಕರಿಸಿಕೊಂಡ. ಇಲ್ಲಿ ನಾವು ಚಿತ್ರೀಕರಿಸಿಕೊಂಡ ಶಾಟ್‌ಗಳೆಲ್ಲವೂ, ಒಟ್ಟು ಸಿನಿಮಾಕ್ಕೆ ವಾತಾವರಣವನ್ನು ಕಟ್ಟಿಕೊಡಲು ಬಹಳ ಸಹಕಾರಿಯಾಗಿದ್ದವು.

ನಮ್ಮ ಚಿತ್ರದ ಕೆಲವು ದೃಶ್ಯಗಳನ್ನು, ಮಲ್ಪೆಯ ಬಂದರಿನಲ್ಲಿ ಚಿತ್ರೀಕರಿಸಬೇಕಿತ್ತು. ಬೆಳಗ್ಗಿನ ಹೊತ್ತಿನ ಚುರುಕಿನ ವ್ಯಾಪಾರದ ಸಮಯದಲ್ಲಿ, ಈ ಬಂದರಿಗೆ ಒಂದು ವಿಶಿಷ್ಟ ಕಳೆಯಿರುತ್ತದೆ. ಆದರೆ ಈ ಜನಜಂಗುಳಿಯಲ್ಲಿ ಚಿತ್ರೀಕರಿಸುವುದೂ ವಿಶೇಷ ಸವಾಲೇ ಸರಿ. ಜನರು ಕ್ಯಾಮರಾ ಕಡೆಗೆ ನೋಡುವುದು, ನಟರನ್ನು ಮಾತನಾಡಿಸುವುದು ಇತ್ಯಾದಿಗಳು ಯಾವುದೇ ಚಿತ್ರೀಕರಣ ತಂಡಕ್ಕೂ ಸವಾಲೇ ಸರಿ.

ನಮ್ಮ ನಟ-ನಟಿಯರು ಈ ಮೊದಲು ಅಭ್ಯಾಸಕ್ಕೆಂದು ಅನೇಕ ಬಾರಿ ಈ ಬಂದರಲ್ಲೇ ಇದ್ದು, ಕೆಲಸ ಮಾಡಿದ್ದರಿಂದಾಗಿ, ಅವರು ಅಲ್ಲಿನವರೊಳಗೊಬ್ಬರಂತೆ ಕಂಡು ಬಂದರು. ಪರಿಚಿತರು, ಕೊನೆಗೂ ಚಿತ್ರೀಕರಣಕ್ಕೆ ಬಂದಿರೇ, ಬನ್ನಿ ಎಂದು ಹೃತ್ಪೂರ್ವಕ ಸಹಾಯ ನೀಡಿದರು. ಚಿತ್ರೀಕರಣಕ್ಕೆ ಎರಡು ದಿನ ಬೇಕಾದೀತೇನೋ ಅಂದುಕೊಂಡಿದ್ದ ನಮಗೆ ಒಂದೇ ದಿನದಲ್ಲಿ ಅಂದುಕೊಂಡದ್ದು ಎಲ್ಲವನ್ನೂ ಚಿತ್ರೀಕರಿಸಲು ಸಾಧ್ಯವಾಯಿತು.

ಬಂದರಿನಲ್ಲಿ ಚಿತ್ರೀಕರಣ ಮಾಡುತ್ತಿರುವ ಸಂದರ್ಭದಲ್ಲೂ, ಬದಲಾಗುತ್ತಿರುವ ಇಲ್ಲಿನ ಪರಿಸ್ಥಿತಿಗಳು ನನ್ನನ್ನು ಸೆಳೆದವು. ಇಂದು ಮನೆಯಲ್ಲಿ ಸಾಂಬಾರು ಪುಡಿಗಳನ್ನು, ಸಾರಿನ ಪುಡಿಗಳನ್ನು ಹೀಗೆ ಎಲ್ಲಾ ವಿಧದಲ್ಲೂ ಸಿದ್ಧ ಅಡುಗೆ ಪದಾರ್ಥಗಳ ಬಳಕೆ ಇರುವಂತೆ, ಮೀನುಗಳನ್ನು ಕತ್ತರಿಸುವ ಮತ್ತು ಸಂಸ್ಕರಿಸುವ ಕಲೆಯೇ ನಾಶವಾಗುತ್ತಿದೆ. ಅಂಥವರಿಗಾಗಿ ವಿಶೇಷವಾಗಿ ಮೀನುಗಳನ್ನು ಕತ್ತರಿಸಲು ಇಂದು ಒಂದಷ್ಟು ಜನರು ಬಂದರಿನಲ್ಲೇ ಸಿಗುತ್ತಾರೆ!

 

ಹಿಂದೆಲ್ಲ ಪಾಲಿನ ಲೆಕ್ಕದಲ್ಲಿ ಮಾರಾಟವಾಗುತ್ತಿದ್ದ ಮೀನು, ಇಂದು ಕೆ.ಜಿ ಲೆಕ್ಕದಲ್ಲಿ ಮಾರಾಟವಾಗುತ್ತಿದೆ. ದಿನೇಶಣ್ಣ ಹೇಳುತ್ತಿದ್ದ ಸೆಣಬಿನ ಬಲೆಗಳು ಎಲ್ಲೂ ಇಲ್ಲ. ಬಳಸಿದ, ಹರಿದ ಬಲೆಗಳು ಸಮುದ್ರ ಪಾಲಾಗಿ, ಸಮುದ್ರವೇ ಒಂದು ಕಸದ ತೊಟ್ಟಿಯಾಗುತ್ತಿದೆ. ಹೆಚ್ಚಿದ ಯಾಂತ್ರಿಕೃತ ಮೀನುಗಾರಿಕೆಯಿಂದಾಗಿ, ಹಿಡಿದ ಬಹುತೇಕ ಮೀನು ಆಹಾರ ಮಾರುಕಟ್ಟೆಗೆ ಯೋಗ್ಯವಲ್ಲ. ಹೀಗಾಗಿ ಗೊಬ್ಬರ ಕಾರ್ಖಾನೆಗಳಿಗೆ ಸರಬರಾಜು ಆಗುತ್ತಿವೆ.

ಜನರು, ಜೀವನ ಶೈಲಿ ಬದಲಾಗುತ್ತಿರುವಂತೆ, ನಾವು ‘ಆಧುನಿಕ’ರಾಗುತ್ತಿದ್ದಂತೆ, ಪರಿಸರದ ಮೇಲೆ ಗೌರವ ಕಡಿಮೆಯಾಗುತ್ತಿರುವ ಸೂಚನೆಯಾಗಿ ಒಟ್ಟು ಪರಿಸರ ಕಾಣಿಸುತ್ತಿರುವುದು ಗಾಬರಿಯ ವಿಚಾರ. ಒಂದೆಡೆ ಆಹಾರ ಭದ್ರತೆಯ ಬಗ್ಗೆ ಮಾತುಗಳು ನಡೆಯುತ್ತಿರುವ ಸಂದರ್ಭದಲ್ಲಿ, ಮೀನುಗಾರಿಕೆ ಉದ್ಯೋಗದ ಶೈಲಿ, ಮೀನುಗಾರರ ಜೀವನ ಶೈಲಿ, ಆಹಾರ ಕ್ರಮವಾಗಿ ಮೀನುಗಾರಿಕೆಯ ಬಗ್ಗೆ ಇನ್ನಷ್ಟು ಚಿಂತನೆ ಅಗತ್ಯ ಎಂದು ಅನ್ನಿಸುತ್ತಿತ್ತು ನನಗೆ. ಅಂದು ಸಮುದ್ರದಿಂದ ಹಿಡಿದು ತಂದ ಮೀನುಗಳು, ಬೇರೆ ಬೇರೆಯಾಗಿ, ವಿವಿಧ ವಾಹನಗಳನ್ನು, ಬುಟ್ಟಿಗಳನ್ನು ಸೇರಿಕೊಂಡು, ಹೊರಟಾಗ, ನಾವೂ ಚಿತ್ರೀಕರಣ ಮುಗಿಸಿಕೊಂಡು ಅಲ್ಲಿಂದ ಹೊರಟೆವು.

ಇನ್ನು ಪಡುಕರೆ ಊರಿನ ಬಗ್ಗೆ ವಿಶೇಷವಾಗಿ ಹೇಳಲೇ ಬೇಕು. ನಮ್ಮ ಚಿತ್ರೀಕರಣ ಬಹುಪಾಲು ಈ ಊರಿನ ಸುತ್ತಮುತ್ತಲೇ ನಡೆಯಿತು. ಹೀಗಾಗಿ ಬೆಳಗೆದ್ದು ಚಿತ್ರೀಕರಣ ತಂಡ ನೇರವಾಗಿ ಈ ಊರಿಗೆ ಸುಮಾರು ೧೦ ಕಿಲೋ ಮೀಟರ್ ಪ್ರಯಾಣ ಮಾಡಿ ಸೇರಿಕೊಳ್ಳುತ್ತಿದ್ದೆವು. ಆ ಊರಿಡೀ ನಮ್ಮನ್ನು, ತಮ್ಮವರೆಂದು ಸ್ವೀಕರಿಸಿಬಿಟ್ಟಿದ್ದರು. ಗೆಳೆಯ ರಂಜಿತನ ಪರಿಚಿತರೇ ಅವರೆಲ್ಲ.

ಜೊತೆಗೆ ಒಂದು ವಿಶೇಷ ಪ್ರೀತಿ ಅವರಿಗೆ ನಮ್ಮ ಮೇಲೆ. ನಾವು ದಿನವೂ ಬೆಳಗ್ಗೆ ಈ ಊರು ತಲುಪಿದಾಗ, ಇನ್ನೂ ಅನೇಕರು ಎದ್ದು ಮುಖ ತೊಳೆಯುತ್ತಿರುತ್ತಿದ್ದರು. ಬಾಯಲ್ಲಿ ಬ್ರಶ್ ಸಿಕ್ಕಿಸಿಕೊಂಡು ಸಮುದ್ರ ದಂಡೆಯಲ್ಲಿ ನಿಂತು ಅದೇನೋ ನೋಡುತ್ತಿದ್ದವರು ಅನೇಕರು. ನಮ್ಮನ್ನು ಕಂಡು ಪರಿಚಯದ ನಗು ನಗುತ್ತಿದ್ದರು. ಈ ಊರಿಗೆ ನಾವು ಊರವರೇ ಆಗಿಬಿಟ್ಟಿದ್ದೆವು.

ಚಿತ್ರೀಕರಣದ ಸ್ಥಳಕ್ಕೆ ಸಮೀಪದಲ್ಲಿ ಯಾವುದೋ ಮನೆಯಲ್ಲಿ ನಮ್ಮ ಊಟವನ್ನು ಇರಿಸಿ ಹಂಚಲು ಒಪ್ಪಿಗೆ ಕೇಳಿದರೆ, ಸ್ಥಳವೂ ಕೊಟ್ಟು, ನೀರೂ ಕೊಟ್ಟು, ಊಟ ಮಾಡಿ ಎನ್ನುತ್ತಿದ್ದರು. ಊಟವಾದ ಮೇಲೆ ಎರಡು ಮಾತು ಆಡಿ, ಮನೆಯ ಅತಿಥಿಗಳಂತೆ ಸತ್ಕರಿಸಿ ಕಳಿಸುತ್ತಿದ್ದರು. ಈ ಊರಿನ, ಮೊಗವೀರರ ಒಳ್ಳೆಯತನವನ್ನು ಎಷ್ಟು ಹೊಗಳಿದರೂ ಸಾಲದು.

ಪಡುಕೆರೆಯಲ್ಲಿ ಅಲ್ಲೊಂದು, ಇಲ್ಲೊಂದು ಹೀಗೆ ಮರಳಲ್ಲಿ ಮಲಗಿ, ತೆಂಗಿನ ಗರಿಯ ಹೊದಿಕೆ ಹೊದ್ದ ದೋಣಿಗಳು, ಕಡಲ ಕೊರೆತ ತಡೆಯಲು ತಂದು ಹಾಕಿದ ದೊಡ್ಡ ದೊಡ್ಡ ಕಲ್ಲುಗಳು, ಹೀಗೆ ಇಡೀ ಊರಿಗೆ ಊರೇ ನಮ್ಮ ಮಟ್ಟಿಗೆ ಒಂದು ದೊಡ್ಡ ಸ್ಟೂಡಿಯೋ ಆಗಿಬಿಟ್ಟಿತ್ತು.

ಇಂದು ಮಲ್ಪೆಯ ಮೀನುಗಾರಿಕೆಯ ಇನ್ನೊಂದು ವಾಸ್ತವ, ಅಲ್ಲಿನ ಕೆಲಸಗಾರರದ್ದು. ಒಂದು ಮಧ್ಯಮ ಗಾತ್ರದ ದೋಣಿ ಒಮ್ಮೆ ಸಮುದ್ರಕ್ಕೆ ಹೋದರೆ, ಅದರಲ್ಲಿ, ಬಲೆಯ ನಿರ್ವಹಣೆ, ದೋಣಿಯ ನಿರ್ವಹಣೆ ಇತ್ಯಾದಿ ಕೆಲಸಗಳಿಗೆ ಸುಮಾರು ಹದಿನೈದರಿಂದ ಇಪ್ಪತ್ತೈದು ಜನ ಬೇಕಾಗುತ್ತದೆ. ಆದರೆ, ಇಂದು ಯಾವುದೋ ಮಾಲ್‌ನಲ್ಲಿ ಕಾವಲುಗಾರನಾಗಿರುವುದರಿಂದ ಹಿಡಿದು, ಟ್ಯಾಕ್ಸಿ ಓಡಿಸುವುದು, ಗುಮಾಸ್ತನಾಗಿರುವುದು, ರಿಯಲ್ ಎಸ್ಟೇಟ್ ಕೆಲಸದಲ್ಲಿ ತೊಡಗಿಸಿಕೊಳ್ಳುವುದು, ಮಂಗಳೂರಿನಲ್ಲಿ ಬರುತ್ತಿರುವ ಹೊಸ ಉದ್ಯಮಗಳಲ್ಲಿ ಕೆಲಸಗಾರರಾಗಿರುವುದು ಇತ್ಯಾದಿ ವಿಭಿನ್ನ, ಕಡಿಮೆ ಪ್ರಮಾಣದ ಶ್ರಮ ಬಯಸುವ, ಕೆಲಸಗಳಿಂದಾಗಿ, ಬಂದರಿನಲ್ಲಿ ಕೆಲಸ ಮಾಡಲು ಜನ ಕಡಿಮೆಯಾಗುತ್ತಿದ್ದಾರೆ.

ಇದು ಕೃಷಿ ಮತ್ತಿತರ ಕಡೆಗಳಲ್ಲೂ ಕಾಣುತ್ತಿರುವ ಸಾಮಾನ್ಯ ಸಂಗತಿ. ಆದರೆ, ಮೀನುಗಾರಿಕೆಗೆ ಸಾಮುದಾಯಿಕ ಶ್ರಮ ಅಗತ್ಯ. ಹೀಗಾಗಿ, ಉತ್ತರ ಭಾರತದಿಂದ, ಅದರಲ್ಲೂ ಒರಿಸ್ಸಾದಂಥಾ ಸಮುದ್ರತೀರ ಇರುವ ರಾಜ್ಯಗಳಿಂದ ಬರುವವರು ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ, ಇಂದು ಮಲ್ಪೆಯಲ್ಲಿ ತುಳುವಿನಷ್ಟೇ ಸಹಜವಾಗಿ ಹಿಂದಿಯೂ ಕೇಳಿಬರುತ್ತಿದೆ.

ಇದನ್ನು ನಾನು ಚಿತ್ರಕಥೆಯೊಳಗೆಯೂ ತಂದಿದ್ದೆ. ಇದರಿಂದಾಗಿ, ಪಡುಕೆರೆಯಲ್ಲಿ ಅನೇಕ ಬಾಡಿಗೆ ಮನೆಗಳೂ ಸಿಗುತ್ತವೆ. ಅಲ್ಲಿ ಉತ್ತರ ಭಾರತದ ಕಾರ್ಮಿಕರು ತಂಡವಾಗಿ ಬಾಡಿಗೆಗೆ ಇರುತ್ತಾರೆ. ಇಂಥಾ ಒಂದು ಬಾಡಿಗೆ ಮನೆಯನ್ನು ನಾವು ಹಿಡಿದು, ಅದರಲ್ಲಿ, ನಮ್ಮ ನಿತ್ಯ ಚಿತ್ರೀಕರಣಕ್ಕೆ ಬೇಕಾದ ವಸ್ತುಗಳನ್ನು ಇರಿಸಿಕೊಳ್ಳಲಾರಂಭಿಸಿದೆವು. ಅವುಗಳನ್ನು ನಿತ್ಯವೂ ಸಾಗಿಸುವ ಬದಲು, ಈ ವ್ಯವಸ್ಥೆ ಅನುಕೂಲಕರವಾಗಿತ್ತು.

ಪಡ್ಡಾಯಿ ಚಿತ್ರದಲ್ಲಿ ಬರುವ ಒಂದು ದೊಡ್ಡ ತಿರುವು, ದಿನೇಶಣ್ಣನ ಕೊಲೆಯದ್ದು. ಮರುದಿನ ಬೆಳಗ್ಗೆ, ಮನೆಯೆದುರು ಸೇರುವ ಜನ, ಅಲ್ಲಿಗೆ ಬರುವ ಪೊಲೀಸರು, ಹೆಣ ಸಾಗಿಸಲು ಬರುವ ಆಂಬ್ಯುಲೆನ್ಸ್ ಇತ್ಯಾದಿಗಳನ್ನು ನಾವು ಸಿದ್ಧಗೊಳಿಸಿಕೊಳ್ಳಬೇಕಿತ್ತು. ಉಡುಪಿಯಲ್ಲಿ ಹುಡುಕಿದಾಗ, ಹೆಣ ಸಾಗಿಸುವ ಆಂಬ್ಯುಲೆನ್ಸ್ ನಮಗೆ ಸಿಕ್ಕಿತು. ಆದರೆ, ಆ ದಿನ ಮನೆಯೆದುರು ಊರಿನ ಜನರು ಸೇರಿದ್ದಾರೆ ಎಂದು ತೋರಿಸಲು, ಪಡುಕೆರೆಯ ಜನರನ್ನೇ ವಿನಂತಿಸಿಕೊಂಡು ಸೇರಿಸಿದೆವು.

ಕೊನೆಗೆ ಚಿತ್ರೀಕರಣದ ವೇಳೆಗೆ, ಸುತ್ತಮುತ್ತಲಿನಿಂದ ಸಾಕಷ್ಟು ಜನರು ಬಂದು ಸೇರಿ, ಇಡೀ ವಾತಾವರಣಕ್ಕೆ ನಿಜವಾದ ಸಾವಿನ ಮನೆಯ ವಾತಾವರಣ ನಿರ್ಮಾಣವಾಯಿತು. ಸೇರಿದ್ದ ಊರಮಂದಿಯ ಮುಖದಲ್ಲಿ ನಿಜವಾದ ದುಃಖ ಕಾಣಿಸಿಕೊಂಡಿತು, ಕುತೂಹಲ ಕಂಡಿತು. ಆ ಇಡೀ ಅನುಭವ ಒಂದು ವಿಚಿತ್ರ ಅನುಭವಾಗಿ ನಮ್ಮೆಲ್ಲರ ಮನಸ್ಸಲ್ಲಿ ಉಳಿಯಿತು.

ಕಡಲಿಗೆ ಹೋದ ಕಡಲಗುಳಿಗ!

ಚಿತ್ರೀಕರಣದ ಕೊನೆಯ ಆದರೆ ಮಹತ್ತರವಾದ ಹಂತದಲ್ಲಿ ನಾವು ಸಮುದ್ರಕ್ಕೆ ಮೀನು ಹಿಡಿಯಲು ಹೋಗುವ ದೋಣಿಯಲ್ಲಿ ಹೋಗಿ, ಆಳ ಸಮುದ್ರದಲ್ಲಿ ಮೀನು ಹಿಡಿಯುವ ಪ್ರಕ್ರಿಯೆಯನ್ನು ಚಿತ್ರೀಕರಿಸಿಕೊಳ್ಳಬೇಕಿತ್ತು. ಇದಕ್ಕಾಗಿ ನಮ್ಮ ಇನ್ನೊಬ್ಬ ಗೆಳೆಯ ಪುರುಷೋತ್ತಮನನ್ನು ಹಿಡಿದೆವು. ಅವನು ಮೀನುಗಾರಿಕೆಗೆ ಹೋಗುವ ದೋಣಿಯೊಂದರ ಲೆಕ್ಕಿಗ.

ಪ್ರತಿದಿನವೂ ಮೀನುಗಾರಿಕೆಗೆ ಸಮುದ್ರಕ್ಕೆ ಹೋದ ದೋಣಿ ದಡಕ್ಕೆ ಬಂದಾಗ, ಎಷ್ಟು ಮೀನು ಸಿಕ್ಕಿತು, ಎಷ್ಟು ಕ್ರಯಕ್ಕೆ ಮಾರಾಟವಾಯಿತು, ಮೀನುಗಾರಿಕೆಗೆ ಎಷ್ಟು ಜನರು ಹೋದರು, ಅವರಿಗೆ ಎಷ್ಟು ಪಾಲು ಸಿಕ್ಕಿತು, ಆ ದಿನ ಮೀನುಗಾರಿಕೆಗೆ ಬಳಕೆಯಾದ ಡೀಸಿಲ್ ಎಷ್ಟು, ಬಲೆ ರಿಪೇರಿಗೆ ಆದ ಖರ್ಚೇನಾದರೂ ಇದೆಯೇ? ದೋಣಿಯಲ್ಲಿ ನಡೆದ ಅಡುಗೆಗೆ ಬಳಕೆಯಾದ ವಸ್ತುಗಳ ಖರ್ಚು ಏನು? ಹೀಗೆ ಅನೇಕ ರೀತಿಯ ಲೆಕ್ಕಗಳನ್ನು ದಾಖಲಿಸುವುದು ಪುರುಷೋತ್ತಮನ ಕೆಲಸ.

ಮೀನುಗಾರಿಕೆಯ ವರ್ಷ ಮುಗಿದಾಗ, ಈ ಲೆಕ್ಕ ಪ್ರಕಾರ ಎಲ್ಲರಿಗೂ ಹಣ ವಿತರಿಸಲಾಗುತ್ತದೆ. ವರ್ಷದ ನಡುವಿನಲ್ಲೇ, ಯಾರಾದರೂ, ಮುಂಗಡವಾಗಿ ಹಣ ಪಡೆದುಕೊಂಡಿದ್ದರೆ, ಒಟ್ಟು ಲೆಕ್ಕದಲ್ಲಿ ಅದನ್ನೂ ಸರಿತೂಗಿಸಿಕೊಳ್ಳಬೇಕಿತ್ತು. ಹೀಗೆ, ಪುರುಷೋತ್ತಮನ ಕೆಲಸ ಸಾಕಷ್ಟು ಕಷ್ಟದ್ದು. ಅವನು, ಅವನು ಲೆಕ್ಕ ಇಡುತ್ತಿದ್ದ ದೋಣಿಗಳ ಮಾಲಿಕರ ಬಳಿಗೆ ನಮ್ಮನ್ನು ಕರೆದುಕೊಂಡು ಹೋದ. ನಾವು ಅವರನ್ನು ಸಹಾಯ ಕೇಳಿದಾಗ, ಅವರು ಸಂತೋಷದಿಂದಲೇ ನಮ್ಮನ್ನು ಸಮುದ್ರಕ್ಕೆ ಕರೆದೊಯ್ಯಲು ಒಪ್ಪಿಗೆ ನೀಡಿದರು.

ಈ ದೋಣಿಗಳಲ್ಲಿ ಸುಮಾರು ಇಪ್ಪತ್ತು ಜನರು ಸುಮಾರು ನಾಲ್ಕು ಗಂಟೆಗೆ ಹೊರಟು ಆಳ ಸಮುದ್ರವನ್ನು ತಲುಪುತ್ತಾರೆ. ಅಲ್ಲಿ ‘ತಂಡೇಲ’ ಅಥವಾ ಮೀನುಗಳ ತಂಡವನ್ನು ದೂರದಿಂದಲೇ ಗುರುತಿಸುವವನು ಹೇಳಿದಲ್ಲಿ ಬಲೆಯನ್ನು ಬೀಸಿ ಮೀನು ಹಿಡಿಯುತ್ತಾರೆ. ಆ ದೊಡ್ಡ ಕೊಳ್ಳೆಯನ್ನು ಜತೆಗೇ ಹಿಂಬಾಲಿಸಿ ಬರುವ ಇನ್ನೊಂದು ದೋಣಿಗೆ ಹಾಕಿ ದಡಕ್ಕೆ ಕಳಿಸಿಬಿಡುತ್ತಾರೆ. ಮತ್ತೆ ಮೊದಲ ದೋಣಿ ಇನ್ನೊಂದೇ ಮೀನುಗಳ ಗುಂಪು ಹುಡುಕುತ್ತ ಸಾಗುತ್ತದೆ.

ವಾಕಿ ಟಾಕಿ ಮೂಲಕ ಸಂಪರ್ಕದಲ್ಲಿರುವ ಈ ಎರಡೂ ದೋಣಿಗಳು, ಜಿ.ಪಿ.ಎಸ್ ಮೂಲಕ ಅಗಾಧ ಸಮುದ್ರದಲ್ಲಿ ಮತ್ತೆ ಮತ್ತೆ ಪರಸ್ಪರರನ್ನು ಕಂಡುಕೊಂಡು ಮೀನು ಹಿಡಿಯುವ, ಸಾಗಿಸುವ ಪ್ರಕ್ರಿಯೆ ನಡೆಸುವುದೂ ಉಂಟು. ಒಮ್ಮೆ ಬಲೆ ಬೀಸಿ ಅದನ್ನು ಎತ್ತಬೇಕಾದರೆ ಸುಮಾರು ಮೂರರಿಂದ ನಾಲ್ಕು ಗಂಟೆ ಬೇಕಾಗುತ್ತದೆ. ಹೀಗಾಗಿ ದಿನಕ್ಕೆ ಎರಡು ಅಥವಾ ಮೂರು ಬಾರಿ ಮೀನು ಹಿಡಿದು ಬಳಲಿದ ಮೇಲೆ ಮುಖ್ಯ ದೋಣಿ ದಡಕ್ಕೆ ಮರಳುತ್ತದೆ.

ಇಂಥಾ ಒಂದು ದಿನದ ಪ್ರಕ್ರಿಯೆಯಲ್ಲಿ ನಾವು ಭಾಗಿಯಾಗಬೇಕಿತ್ತು. ಆಗಸ್ಟಿನಲ್ಲಿ ಮೀನುಗಾರಿಕೆ ಆರಂಭವಾದಾಗ ಸಮುದ್ರ ಇನ್ನೂ ಸಾಕಷ್ಟು ರುದ್ರವಾಗಿಯೇ ಇರುತ್ತದೆ. ದೋಣಿ ಸಾಕಷ್ಟು ಓಲಾಡುತ್ತಿರುತ್ತದೆ, ಆಗೀಗ ಬಂದೇ ಬಿಡುವ ಮಳೆ ಇತ್ಯಾದಿಗಳು ನುರಿತ ಮೀನುಗಾರರಿಗೇ ಸಾಕಷ್ಟು ಸವಾಲನ್ನು ಒಡ್ಡುತ್ತಿರುತ್ತದೆ. ಹೀಗಾಗಿ ಆಗ ಚಿತ್ರೀಕರಣ ಬೇಡ ಎಂದು ದೋಣಿಯವರೇ ನಮಗೆ ಹೇಳಿದ್ದರು. ಹೀಗಾಗಿ ಉಳಿದೆಲ್ಲಾ ಚಿತ್ರೀಕರಣ ನಡೆಸುತ್ತ ನಾವು ಸರಿಯಾದ ಸಮಯಕ್ಕೆ ಕಾಯುತ್ತಿದ್ದೆವು.

ಕೊನೆಗೂ ನಮಗೆ ದೋಣಿಯವರಿಂದ ಸೂಚನೆ ಬಂದೇ ಬಿಟ್ಟಿತು. ಸಮುದ್ರದಲ್ಲಿ ಚಿತ್ರೀಕರಣದ ಸಾಹಸಕ್ಕೆ ನಾವು ಹೊರಟೇ ಬಿಟ್ಟೆವು.
ದೋಣಿಯಲ್ಲಿ ಮೀನುಗಾರರ ಸಂಖ್ಯೆಯೇ ಸಾಕಷ್ಟಿರುವಾಗ ನಮ್ಮ ಚಿತ್ರೀಕರಣದ ತಂಡ ಅತ್ಯಂತ ಸಣ್ಣದಾಗಿರುವುದು ಅಗತ್ಯವಾಗಿತ್ತು. ಹೀಗಾಗಿ ನಮ್ಮ ಛಾಯಾಗ್ರಾಹಕ ವಿಷ್ಣು ಲೈಟ್ ಇಲ್ಲದೇ ಚಿತ್ರೀಕರಣ ಮಾಡಲು ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದರು. ಉಳಿದ ಚಿತ್ರೀಕರಣಕ್ಕೆ ಬಳಸಿದ ದೊಡ್ಡ ಕ್ಯಾಮರಾ ಬಿಟ್ಟು, ಸಣ್ಣದನ್ನು ಸಿದ್ಧ ಮಾಡಿಕೊಂಡೆವು.

ದೋಣಿಯ ಸೀಮಿತ ಸ್ಥಳಾವಕಾಶ ಹಾಗೂ ನಿಯಂತ್ರಣವಿಲ್ಲದ ಧ್ವನಿಯನ್ನು ಗಮನಿಸಿ, ಜೇಮಿ ಹಾಗೂ ಅವನ ಧ್ವನಿ ದಾಖಲಾತಿ ತಂಡಕ್ಕೆ ರಜೆ ಕೊಡಲಾಯಿತು. ದೋಣಿಯವರಿಗೆ ಹೊರೆಯಾಗದಂತೆ, ಬೆಳಗ್ಗಿನ ತಿಂಡಿ, ಮಧ್ಯಾಹ್ನದ ಊಟ, ನೀರು ಇತ್ಯಾದಿಗಳನ್ನು ಕಟ್ಟಿಕೊಂಡು ಮೋಹನ ಶೇಣಿ, ಚಂದ್ರಹಾಸ್ ಉಳ್ಳಾಲ್ ಇಬ್ಬರೇ ನಟರನ್ನು ಸೇರಿಸಿಕೊಂಡು ಸಮುದ್ರ ಯಾನಕ್ಕೆ ಸಿದ್ಧರಾದೆವು.

ನಮ್ಮ ಪರಿಚಯದ ವೈದ್ಯರನ್ನು ಕೇಳಿಕೊಂಡು, ಸಮುದ್ರ ಪ್ರಯಾಣದ ಅನುಭವ ಇಲ್ಲದ ನಮಗೆ ಎದುರಾಗಬಹುದಾದ ಆರೋಗ್ಯದ ಸವಾಲುಗಳಿಗೆ (ಸಮುದ್ರದ ಮಂದ ಕುಲುಕಾಟಕ್ಕೆ, ಹೊಟ್ಟೆ ತೊಳೆಸಿ ವಾಂತಿ ಬರುವುದು ಸಾಮಾನ್ಯ) ಔಷಧಿಯನ್ನೂ ಇಟ್ಟುಕೊಂಡಿದ್ದೆವು. ಬೆಳಗ್ಗಿನ ಜಾವ ಐದು ಗಂಟೆಗೆ ಮಲ್ಪೆ ಬಂದರಿನ ಹೊರಗಿನ ಗೇಟಿನಲ್ಲಿ ಸಿಗಲು ನಮಗೆ ಸೂಚನೆಯಿತ್ತು.

ಮರುದಿನದ ಚಿತ್ರೀಕರಣದ ನಿರೀಕ್ಷೆಯಲ್ಲಿ, ರಾತ್ರಿಯ ನಿದ್ರೆ ಆಗಲೇ ಇಲ್ಲ. ಬೆಳಗ್ಗೆ ಮೂರು ಗಂಟೆಗೇ ಎದ್ದು ಸಿದ್ಧವಾಗಿ ಹೊರಟೇ ಬಿಟ್ಟೆವು. ಮೀನುಗಾರರು ನಮಗಾಗಿ ಕಾಯುತ್ತಿದ್ದರು. ಮಲ್ಪೆಯ ಬಂದರಿನಲ್ಲಿ ದೋಣಿಗಳು ಒಂದಕ್ಕೊಂದು ತಾಗಿಸಿ ನಿಲ್ಲಿಸಿರುತ್ತಾರೆ. ಆಯಾ ದೋಣಿಯ ಮೇಲಿನ ವಿವಿಧ ಬಣ್ಣದ ಧ್ವಜಗಳ ಮೂಲಕ ದೋಣಿಯನ್ನು ಗುರುತಿಸಲಾಗುತ್ತದೆ. ನಾವು ಪ್ರಯಾಣಿಸಬೇಕಿದ್ದ ದೋಣಿಯನ್ನು ತಲುಪಲು ಹಲವು ದೋಣಿಗಳನ್ನು ದಾಟುತ್ತಾ ಸಾಗಬೇಕಿತ್ತು. ಬಂದರಿನಲ್ಲಿ ಎತ್ತರದಲ್ಲಿ ಹಾಕಿರುವ ಹೈಮಾಸ್ಟ್ ದೀಪದ ನಸುಬೆಳಕಿನಲ್ಲಿ, ನಟರು, ತಂತ್ರಜ್ಞರು, ಕ್ಯಾಮರಾ ಸಾಮಗ್ರಿಗಳು, ಊಟ, ಔಷಧಿ ಹೀಗೆ ಎಲ್ಲವನ್ನೂ ಕೈಯಿಂದ ಕೈಗೆ ದಾಟಿಸಿಕೊಳ್ಳುತ್ತಾ ಸಾಗಿದೆವು.

ನಟರು ಒಂದು ದೋಣಿಯಲ್ಲಿ ಹೋಗುವುದೆಂದೂ, ಕ್ಯಾಮರಾ ಮತ್ತು ನಾನು ಇನ್ನೊಂದು ದೋಣಿಯಲ್ಲಿ ಹಿಂಬಾಲಿಸುತ್ತಾ, ನಟರ ಆರಂಭಿಕ ಶಾಟ್ಸ್ ತೆಗೆಯುವುದೆಂದೂ ಮಾತನಾಡಿಕೊಂಡು ಹೊರಟೆವು. ಯಾವುದೋ ಗೊಂದಲಮಯ ಬಸ್ಸ್ ನಿಲ್ದಾಣದಿಂದ ಹೊರಡುವ ಬಸ್ಸುಗಳಂತೆ ಪರಸ್ಪರರಿಗೆ ಜಾಗ ಮಾಡಿಕೊಡುತ್ತಾ, ಜೋರಾಗಿ ಮಾತನಾಡುತ್ತಾ ಸೂರ್ಯ ಎದ್ದು ಮುಖ ತೊಳೆಯುವ ಮೊದಲೇ ನಾವು ಮಲ್ಪೆಯ ಬಂದರನ್ನು ಬಿಟ್ಟು ಹೊರಟೆವು.

‘ಪಡ್ಡಾಯಿ’ ಚಿತ್ರದ ಆರಂಭದಲ್ಲಿ, ಟೈಟಲ್ಸ್ ಕಾಣುವಾಗ ಬರುವ ಶಾಟ್ಸ್ ತೆಗೆದದ್ದು ಇದೇ ಸಮಯಕ್ಕೆ. ನಸುಕಿನಲ್ಲಿ ಧಾಳಿಗೆ ಹೊರಡುವ ಸೈನ್ಯದಂತೆಯೇ ನೂರಾರು ದೋಣಿಗಳು ಏಕಕಾಲಕ್ಕೆ ಸಮುದ್ರಮುಖಿಯಾಗಿ ಹೊರಟಿದ್ದವು. ಸಮುದ್ರದ ಮೇಲೆ ತೇಲಿ ಉಪ್ಪನ್ನೂ, ತೇವವನ್ನೂ ಹೊತ್ತು ತರುವ ನರುಗಾಳಿ ಮುಖಕ್ಕೆ ಸೋಕುತ್ತಿದ್ದಂತೆ, ಚಿತ್ರ ತಂಡ ಉತ್ಸಾಹದಲ್ಲಿ ಅತ್ತಿತ್ತ ಕಣ್ಣು ಹಾಯಿಸುತ್ತಾ, ಸಾಧ್ಯವಾದ ಶಾಟ್ಸ್ ತೆಗೆದುಕೊಳ್ಳುತ್ತಾ ಸಾಗಿದೆವು.

ದೋಣಿಯ ಒಂದು ಮೂಲೆಯಲ್ಲಿ ಒಲೆಯ ಮೇಲೆ ದೊಡ್ಡದೊಂದು ಹಂಡೆಯಲ್ಲಿ ಅಕ್ಕಿ ಅನ್ನವಾಗಲು ಧ್ಯಾನಿಸುತ್ತಿತ್ತು. ನಿಧಾನದ ಉರಿಯಲ್ಲಿ ಬೆಂದ ಅನ್ನ, ಉಪ್ಪಿನಕಾಯಿ, ಸಮುದ್ರದಿಂದ ಬರುವ ತಾಜಾ ಮೀನಿನ ಸಾರು, ದಿನವಿಡೀ ದೈಹಿಕ ಶ್ರಮದ ಜೀವನ, ಮೊಗವೀರರ ಆರೋಗ್ಯಕ್ಕೆ ಇದಕ್ಕಿಂತ ಹೆಚ್ಚಿನದ್ದೇನೂ ಬೇಕಿರಲಿಲ್ಲ!

 

। ಇನ್ನು ಉಳಿದದ್ದು ನಾಳೆಗೆ ।

ಹಾಗೆಯೇ, ಅಮೆಜಾನ್ ಪ್ರೈಮ್ ನಲ್ಲಿ ಪಡ್ಡಾಯಿ ಸಿನಿಮಾ ಇದೆ.

Link to audience in UK:
https://amzn.to/2MtHFw5

Link to audience in USA:
https://amzn.to/2MtHukp

Link to audience in India:
https://bit.ly/2KLzUzB

‍ಲೇಖಕರು avadhi

October 12, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: