ಹಳದಿ ಬಣ್ಣದ ಬಸ್ಸು ಮತ್ತು ಉದ್ದುದ್ದ ಪೆನ್ನುಗಳು..

ಮಂಜುಳ
ಮಹಿಳಾ ಮಕ್ಕಳ ವಿಶೇಷ ಕಾರ್ಯಕ್ರಮಕ್ಕೆ ಹಾಜರಾಗಬೇಕಾಗಿದ್ದರಿಂದ ಧಾವಂತದ ಹೆಜ್ಜೆಗಳೊಂದಿಗೆ ಬಸ್ ಸ್ಟಾಪ್ ಕಡೆಗೆ ನಡೆದೆ. ಮೊದಲೇ ತಡವಾಗಿದೆ.. ಇಲ್ಲಿ ನೋಡಿದರೆ ಜನಸಾಗರ.. ಸರ್ಕಲ್ ನ ನಾಲ್ಕೂ ರಸ್ತೆಗಳಲ್ಲಿ ವೈರಸ್ ನಂತೆ ಬೆಳೆಯುತ್ತಲೇ ಇರುವ ಟ್ರಾಫಿಕ್. ಏನಾಗಿರಬಹುದು..?? ಚುನಾವಣೆ-ಹಬ್ಬ-ಹರಿದಿನ ಅಂತ ಬೆಂಗಳೂರು ಖಾಲಿಯಾಗಿ ಮತ್ತೆ ತುಂಬಿಕೊಳ್ಳುವ ಸ್ಥಿತಿಯಿಲ್ಲ. ಐಪಿಎಲ್ ಮ್ಯಾಚ್‌ನಲ್ಲಿ+ಮಳೆ+ಸೋಮವಾರ ಕೂಡ ಜಂಟಿಯಾಗಿಲ್ಲ. ಯಾರಾದರೂ ಗುದ್ದಿಕೊಂಡು ಅವಘಡಗಳಾದರೂ ತಿರುಗಿ ನೋಡುವ ಸಂಯಮ ಇಲ್ಲಿ ಯಾರಿಗೂ ಇಲ್ಲ..ಮತ್ತೇನು..??
ನುಗ್ಗಿಕೊಂಡು ಹೋಗಿ ಕೋಲು ಅಡ್ಡ ಹಿಡಿದು ನಿಂತಿದ್ದ ಸಿಬ್ಬಂದಿಯನ್ನ ಕೇಳುವಷ್ಟರಲ್ಲಿ ಧೂಳೆಬ್ಬಿಕೊಂಡು -ಹಸಿರು ಬೋರ್ಡ್ ತಗುಲಿಸಿಕೊಂಡು ಬಂದ ವಿವಿಧ ಮಾದರಿ ಸರಣಿ ಕಾರುಗಳು. 300 ಕಿ.ಮೀ ದೂರದಲ್ಲಿ ಜರುಗುವ ರಾಜ್ಯಮಟ್ಟದ ಮಹಿಳಾ-ಮಕ್ಕಳ ಕಾರ್ಯಕ್ರಮಕ್ಕೆ ಕೇಂದ್ರ -ರಾಜ್ಯ ಸಚಿವರ -ಇಲಾಖಾ ಅಧಿಕಾರಿಗಳ ದಂಡು ಮತ್ತು ಅವರನ್ನ ಹೊತ್ತ್ಯೊಯ್ಯುವ ವಾಹನಗಳ ಅಗಾಧ ಸಾಲು.
ಈ ಪ್ರವಾಹ ಹರಿದು ಸಾಗಲು 8-10 ನಿಮಿಷವಾದರೂ ಬೇಕು. ಬಡಿದುಕೊಳ್ಳುತ್ತಲೇ ಇದ್ದ ಮೊಬೈಲು ಕೈಗೆತ್ತಿಕೊಂಡು ಆ ಕಡೆ ತಿರುಗಿದೆ.. ಆ ಕಾರಿನ ಮುಂದೆ ಐದಾರು ಉದ್ದುದ್ದ ಪೆನ್ ಗಳ ಪಾಕೇಟ್ ಹಿಡಿದು ಕೊಳ್ಳುವಂತೆ ಕೇಳುತ್ತಿದ್ದ ಸುಮಾರು 11-12 ರ ವಯಸ್ಸಿನ ಬಾಲಕಿ ಕಂಡಳು.. ಮಾಸಿದ ಲಂಗ -ಎರಡು ಜಡೆ. ತಡಮಾಡದೆ ಅವಳನ್ನು ಮಾತಾಡಿಸಲು ಆ ಕಡೆ ನುಗ್ಗಲು ಮಾಡಿದ ಯತ್ನ. ಜನದಟ್ಟಣೆ ಬೇಧಿಸಲಾಗಲಿಲ್ಲ.
ಬಸ್ಸೇನೋ ಕದಲಿತು. ಆದರೆ ಅವಳೇ ಪದೇ ಪದೇ ಕಣ್ಮುಂದೆ ಸುಳಿದು ಯಾತನೆ ಹಿಡಿಸಿದಳು..
ಸ್ವಾತಂತ್ರ ಹೋರಾಟಗಾರ್ತಿಯರಲ್ಲಿ ತೀವ್ರ ಕದಲಿಸಿದ ವ್ಯಕ್ತಿ ಎಂದರೆ ಪೂರ್ಣಿಮಾಬೆನ್ ಎಂಟರ ಬಾಲಕಿಯಾಗಿದ್ದಾಗ  ಮಹಾತ್ಮಾ ಗಾಂಧಿಯವರನ್ನ ಭೇಟಿಯಾದ ಗಳಿಗೆ. ಗಾಂಧಿಜಿಯವರು ಒಂದಂಶ ಜವಾಬ್ದಾರಿ ಅವಳ ಆತ್ಮಕ್ಕೆ ದಾಟಿಸಿದರೋ ಏನೋ. ಆ ವಯಸ್ಸಿಗೇ ಸ್ವಾತಂತ್ರ್ಯ ಸಂಗ್ರಾಮಕ್ಕೆ ದುಮುಕಿದಾಕೆ..1934ರ ದಂಡಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಜನಸಾಗರದಲ್ಲಿ ಜೈಲು ಪಾಲಾದವರ ಒಟ್ಟು ಸಂಖ್ಯೆಯಲ್ಲಿ 17 ಸಾವಿರ ಮಹಿಳೆಯರಾಗಿದ್ದರು ಎನ್ನುವುದು ವಿಶೇಷ. ಪೂರ್ಣಿಮಾಬೆನ್ ಜೈಲಿನಲ್ಲೂ ಕಸ್ತೂರ ಬಾ ಅವರೊಂದಿಗೆ ಇದ್ದಾಕೆ.. ಅಲ್ಲಿಯೂ ಮಹಿಳೆಯರಿಗೆ ಓದು-ಬರಹ ಕಲಿಸುತ್ತಿದ್ದವಳು.
ಬುಡಕಟ್ಟು ಮಹಿಳೆಯರನ್ನು ಮೇಲೆತ್ತುವ ತುಡಿತದ ತೀವ್ರತೆ ಎಷ್ಟಿತ್ತೆಂದರೆ 1954ರಲ್ಲಿ ಶಕ್ತಿದಳ ಆರಂಭಿಸಿ ಮಹಿಳೆಯರಿಗೆ ಲಾಠಿ ಬಳಕೆ -ಸ್ವರಕ್ಷಣೆ ಇತ್ಯಾದಿ ತರಬೇತಿ ನೀಡುತ್ತಾ ಸಾಗಿದ ಈ ದಳ 1967ರಲ್ಲಿ “ರಿತಾಂಬರ ವಿಶ್ವ ವಿದ್ಯಾಪೀಠವಾಗಿ” ಸಪತಾರದಲ್ಲಿ ಸ್ಥಾಪನೆಯಾಯಿತು. ಸಹಸ್ರಗಳ ಲೆಕ್ಕದಲ್ಲಿ ಬುಡಕಟ್ಟು ಮಹಿಳೆಯರ ಬದುಕಿಗೆ ಅರ್ಥ ಕಟ್ಟಿಕೊಟ್ಟವರು.. ಇವರನ್ನು ಭೇಟಿಯಾಗಲೇಬೇಕು ಎಂಬ ತೀವ್ರತೆ  “2016-ಎಪ್ರಿಲ್ 25ಕ್ಕೆ” ಕೊನೆಯಾಯ್ತು. ಆ ವಯಸ್ಸಿಗೂ ಬಿಳಿಯ ಖಾದಿ ಸೀರೆ-ದೊಡ್ಡ ಕುಂಕುಮ- ಪ್ರಜ್ವಲಿಸುತ್ತಿದ್ದ ಕಣ್ಣುಗಳು..ಅದಮ್ಯ ಚೈತನ್ಯ..ಇವರ ಬಗ್ಗೆ ಯೋಚಿಸುತ್ತಾ ಹೋದಂತೆ ಮಹಾಮಾತೆ ಸಾವಿತ್ರಿ ಬಾಯಿ ಪುಲೆ ತಾನು ಅರ್ಧಕ್ಕೆ ಬಿಟ್ಟಿದ್ದ ಕೆಲಸ ಪೂರ್ಣಗೊಳಿದಲು ಮತ್ತೊಮ್ಮೆ ಇದೇ ನೆಲದಲ್ಲಿ ಉದಯಿಸಿದಳೋ ಎನ್ನಿಸದಿರದು.
2011 ರ ಜನಗಣತಿಯನ್ವಯ 65.46% ಮಹಿಳಾ ಶಿಕ್ಷಣ ಸಾಧ್ಯವಾಗಿದೆ ಮತ್ತು ಶಾಲೆ ಸೇರುವ ಹೆಣ್ಣು ಮಕ್ಕಳ ಪೈಕಿ 63.5% ಹೈಸ್ಕೂಲು ತಲುಪುವ ಹೊತ್ತಿಗೆ ಶಾಲೆ ಬಿಡುತ್ತಾರೆ…!!!! ಮತ್ತು 15.3 ಮಿಲಿಯನ್ ಹೆಣ್ಣುಮಕ್ಕಳು 18ರ ಮಯಸ್ಸಿಗಿಂತ ಮೊದಲೇ ಮದುವೆಯಾಗುತ್ತದೆ. .ಮತ್ತು ಈ  ಹೆಣ್ಣುಮಕ್ಕಳ ಪೈಕಿ 5.7 ಮಿಲಿಯನ್ ಅನಕ್ಷರಸ್ಥರಾಗಿರುತ್ತಾರೆ..
ಪ್ರತೀ ವರ್ಷ ನೆಹರೂರವರ ಜಯಂತಿಯನ್ನು ಮಕ್ಕಳ ದಿನವನ್ನಾಗಿ ಮತ್ತು ನ್ಯೂಯಾರ್ಕ್‍ನಲ್ಲಿ ಕ್ಲಾರಾ ಜೆಟ್‍ಕಿನ್ ಎಂಬ ಮಹಿಳಾ ಕಾರ್ಮಿಕ ಕೆಲಸಕ್ಕಾಗಿ, ಸಮಾನ ವೇತನಕ್ಕಾಗಿ, ಹೆರಿಗೆ ಸೌಲಭ್ಯಕ್ಕಾಗಿ ತಿಂಗಳುಗಟ್ಟಲೆ ಹೋರಾಟ ನಡೆಸಿ ಗೆಲುವು ಸಾಧಿಸಿದ ದಿನ. ವಿಶ್ವಸಂಸ್ಥೆ 1975ರಲ್ಲಿ ಮಾರ್ಚ್ -8ರ ಈ ದಿನವನ್ನು “ವಿಶ್ವ ಮಹಿಳಾ ದಿನ” ಎಂದು ಘೋಷಿಸಿತು.  ಮಹಿಳಾ ದಿನ ಮತ್ತು ಮಕ್ಕಳ ದಿನಾಚರಣೆಗಳು ದೊಡ್ಡ ವೇದಿಕೆಗಳ ಮೇಲೆ ಯಾಂತ್ರಿಕವಾಗಿ ಲಕ್ಷಗಟ್ಟಲೇ ಅನುದಾನ ವ್ಯಯವಾಗುವ ಕಾರ್ಯಕ್ರಮಗಳಾಗುವ ಬದಲು ವಾಸ್ತವಿಕವಾಗಿ ಎಷ್ಟು ಅನುಷ್ಠಾನವಾಗುತ್ತವೆ ಎನ್ನುವುದರ ಬಗ್ಗೆ ಗಮನಹರಿಸಲೇಬೇಕಾದ ಅಗತ್ಯತೆ ಪ್ರತೀ ದಿನದ ಘಟನೆಗಳ ಪಟ್ಟಿ ವೇದ್ಯವಾಗಿಸುತ್ತದೆ.
ಒಬ್ಬರ ಮುಖ ಇನ್ನೊಬ್ಬರು ಸರಿಯಾಗಿ ನೋಡಲು ವಾರಾಂತ್ಯ ಕಾಯುವ ಬದುಕುಗಳು. ಇನ್ನು ಇದನೆಲ್ಲಾ ಯೋಚಿಸುವ,  ಬೇರೆಯವರ ಶಿಕ್ಷಣ ಅವರ ಬದುಕು ಬಗ್ಗೆ ಸುಧಾರಿಸುವ   ಕಲ್ಪನೆ ಕೂಡ ಸುಳಿಯುವುದೂ ದೂರವೇ…ಸರಿ
ರಾಚಿದ ಕಾರ್ಗತ್ತಲುಗಳ ನಡುವೆ ಅಲ್ಲೊಂದು ಇಲ್ಲೊಂದು ನಕ್ಷತ್ರಗಳು ಮೂಡುವಂತೆ ಎಲ್ಲೋ ಕೆಲವರಿಗೆ ಸಾಮಾಜಿಕ ಜವಾಬ್ದಾರಿಗಳ ಕಿಡಿ ಹೊತ್ತಿಸಿಕೊಂಡು ತಾವೇ ಬೆಳಕಾಗಿ ಹರಡಿಕೊಂಡು ಬಿಡುತ್ತಾರೆ .
ಆಕೆ 15 ರ ವಯಸ್ಸಿನ ಮಾನ್ಸಿ ಮೆಹತಾ.  ಕಿಶೋರಿ ಫೌಂಡೇಶನ್ ನ ಸ್ಥಾಪಕಿ. ತನ್ನದೇ ವಯಸ್ಸಿನ ಶಾಲೆಗೆ ಹೋಗದ ತೋಟದಲ್ಲಿ ಕೆಲಸ ಮಾಡುವವರ ಮಗಳಾದ ಲಕ್ಷ್ಮಿಯೊಂದಿಗೆ ಕೆಲವು ತಿಂಗಳ ಪರಿಚಯ. ನಂತರ ಲಕ್ಷ್ಮಿ ಇದ್ದಕ್ಕಿದ್ದಂತೆ ಕಾಣೆಯಾಗುತ್ತಾಳೆ. ವಿವರಗಳ ಆಳ ತಲುಪಿದಾಗ ತಿಳಿಯುತ್ತದೆ ಲಕ್ಷ್ಮಿಯನ್ನು ತುಂಬಾ ದೊಡ್ಡ ವಯಸಿನವನೊಬ್ಬನಿಗೆ ಮದುವೆ ಮಾಡಿಕೊಡಲಾಗಿದೆ ಎಂದು.
ಈ ಘಟನೆಯಿಂದ ಕದಡಿ ಹೋದ ಮಾನ್ಸಿ “ಕಿಶೋರಿ ಫೌಂಡೇಶನ್ ಹುಟ್ಟು ಹಾಕಿ” ತನ್ನದೇ ವಯಸ್ಸಿನ ಹೆಣ್ಣುಮಕ್ಕಳಿಗೆ ತನಗೆ ತಿಳಿದ ಜೀವನ ಕೌಶಲ ಬೋಧಿಸುತ್ತಿದ್ದಾಳೆ. ಅದು ಅವರ ಮನೆಯ ಕೆಲಸದವರ ಮಗಳಾಗಿರಬಹುದು. ಅವರಿಗೆ ಶಿಕ್ಷಣದ ಮಹತ್ವ ತಿಳಿಸಿ ಹೇಳಿ ಆಕೆಯ ವಯಸ್ಸಿಗೆ  ಮಾಡುತ್ತಿರುವ ಪ್ರಯತ್ನ ಅಸಾಧಾರಣವಾದದ್ದು.
ಹೌದು ನಾವೆಲ್ಲಾ ಮದರ್ ತೆರೇಸಾ-ಸಿಂಧೂ ತಾಯಿ ಸಪ್ಕಾಲ್ -ಸಿದ್ದಗಂಗಾ ಸ್ವಾಮಿ ಆಗುವುದು ಸಾಧ್ಯವಿಲ್ಲವಿರಬಹುದು. ಆದರೆ ಸಾಮಾಜಿಕ ಸಮಸ್ಯೆಗಳಿಗೆ ವೈಯುಕ್ತಿಕವಾಗಿ ಕೆಲಸ ಮಾಡುವುದರಿಂದ ತೊಡಗಿಸಿಕೊಳ್ಳುವುದರಿಂದ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ ಎಂಬುದಕ್ಕೆ ಮಾನ್ಸಿ ಮೆಹತಾ ಉಜ್ವಲ ಉದಾಹರಣೆ. ಹೌದು ಇದಕ್ಕಾಗಿ ದೊಡ್ಡ ಅವಕಾಶ ದೊರೆಯದೇ ಹೋಗಬಹುದು ಆದರೆ ನಮ್ಮ ಕೈಯಲ್ಲಿ ಮಾಡಲು ಸಾಧ್ಯವಿರುವುದನ್ನು ಮಾಡುವ ಬಗ್ಗೆ ಯೋಚಿಸಬಹುದೇನೋ.
 
ಮುಂದಿನ ಬಸ್ಸಿನ ಡ್ರೈವರ್ ಅರಚುತ್ತಿರುವುದು ಕಿವಿಗೆ ಬಿದ್ದು ಕಿಟಕಿಯಿಂದ ದೃಷ್ಟಿ ಹಾಯಿಸಿದರೆ ಹಳ್ಳಿಯ ಟ್ರಾಫಿಕ್ ಕಂಟ್ರೋಲರ್ ಗಳು. ಹಸುಗಳು ಅಡ್ಡ ಹೋಗುತ್ತಿವೆ. ಅವುಗಳ ಪಾಲಕಿ ಅದೇ 11 ವಯಸಿನ ಹುಡುಗಿಯೊಬ್ಬಳಿಗೆ “ಶಾಲಾ ಬಸ್ಸಿನ” ಡ್ರೈವರು ಗದರುತ್ತಿದ್ದಾನೆ. ಅವಳೋ ಜಗತ್ತನ್ನೇ ಮರೆತಂತೆ ಹಳದಿ ಬಸ್ಸನ್ನೇ ನೋಡುತ್ತಿದ್ದಾಳೆ. ಡ್ರೈವರ್ ನ ಜೋರಾದ ಕೂಗು ಅವಳನ್ನು ಇಹಕ್ಕೆ ತಂದಿತು. ಹಸುಗಳನ್ನು ರಸ್ತೆಯಿಂದ ಕದಲಿಸಲು ಅವಳು ಓಡಿ ಬರುವ ರಭಸಕ್ಕೆ ಕಲ್ಲು ಕಾಲಿಗೆ ಬಡಿದು ರಕ್ತ ಚಿಮ್ಮಿತು..
ಇಷ್ಟರಲ್ಲಿ ಕುಡಿದವನೊಬ್ಬನ ಬೈಕ್ -ಸೈಕಲ್ ಗೆ ಗುದ್ದಿಕೊಂಡದ್ದರಿಂದ ಚಿಕ್ಕ ಗದ್ದಲ ಹತ್ತಿತು… ಇನ್ನೂ ಐದಾರು ನಿಮಿಷ ಬಸ್ ನಿಲ್ಲುವುದು ಖಚಿತವಾಯ್ತು.
ಕಂಡಕ್ಟರ್ ಗೆ ಹೇಳಿ ಬಸ್ ಇಳಿದು ಆ ಹುಡುಗಿಯತ್ತ ಓಡಿದೆ. ಅವಳು ಓದಿಸಲು ಸಾಧ್ಯವಿಲ್ಲದ ಅನಕ್ಷರಸ್ಥಳಾದ ತನ್ನ ತಾಯಿ. ಚಿಕ್ಕಪ್ಪಂದಿರ ಮೋಸದಿಂದ ಜಮೀನು ಕಳೆದುಕೊಂಡ – ಬಗ್ಗೆ ಇತ್ಯಾದಿ ಹೇಳಿಕೊಂಡಳು. ಆಕೆಯ ಸಂಪೂರ್ಣ ವಿವರ ಪಡೆದು ಬಸ್ ಹತ್ತಿದೆ…
ಬಸ್ ಹೊರಟಿತು. ಕಾಲಿನ ಹೆಬ್ಬರಳಿಂದ ರಕ್ತ ಸೋರಿಸಿಕೊಂಡು ಅವಳ ಅಮ್ಮನನ್ನು ಕೂಗುತ್ತಾ ಹೋದಳು ಮುಂದಿನ  ತಿರುವಿನಲ್ಲಿ ಮತ್ತೆ ಆ ಶಾಲಾ ಬಸ್ಸಿನ ಡ್ರೇವರ್ ಮತ್ತೆ ಅವಳನ್ನು ಗದರಿದ.
ಅವಳು ಕಾಲಿನ ಗಾಯ-ಡ್ರೈವರ್ ನ ಅರಚಾಟ-ಅಮ್ಮನ ಕರೆ. ಎಲ್ಲಾ ಮರೆತು ಹಳದಿ ಬಣ್ಣದ ಶಾಲಾ ಬಸ್ಸನ್ನೇ ನೋಡುತ್ತಿದ್ದಳು.

‍ಲೇಖಕರು Avadhi Admin

May 21, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: