ರಾಜಕಾರಣ ಬದಲಿಸಿದ್ದಾರೆ ಹುಷಾರ್..!!

ರಾಜಕೀಯ ಮಹಾಸ್ಫೋಟವೆ?!!!
ಇಲ್ಲ.. ಮಹಾ ಪಲ್ಲಟವೆ?

ಚುನಾವಣೆ ನಂತರದ ಸಮೀಕ್ಷೆಗಳು ಬದಲಾದ ಭಾರತದ ರಾಜಕೀಯ ಒಲವು ನಿಲುವುಗಳ ಬಗ್ಗೆ ಈ ಪ್ರಶ್ನೆಯನ್ನು ಎತ್ತುತ್ತಿವೆ.

ಸಮೀಕ್ಷೆಗಳ ಸಾಚಾತನಗಳ ಬಗ್ಗೆ ಈಗಾಗಲೇ ಹಲವು ರೀತಿಯ ಗುಮಾನಿಗಳು ವ್ಯಕ್ತವಾಗಿವೆ. ಆದರೂ, ಬದಲಾಗುತ್ತಿರುವ ಭಾರತದ ಬಗ್ಗೆ ಈ ಸಮೀಕ್ಷೆಗಳು ಖಚಿತವಾದ ಸುಳಿವು ನೀಡುತ್ತಿವೆ.
ಜೊತೆಗೆ ಯಾರು ಒಪ್ಪಲಿ, ಬಿಡಲಿ.
ಸೋಲು.. ಸೋಲೇ…
ಗೆಲುವು.. ಗೆಲುವೇ..
ಜನತಾ ಜನಾರ್ದನ ಅನ್ನುವುದೇ ಅದಕ್ಕೆ.

ಈ ಸಮೀಕ್ಷೆಗಳ ಫಲಿತಾಂಶ ಕಂಡಾಗ ಮೋದಿ ತಮ್ಮ ರಾಜಕೀಯ “ಮಂತ್ರ ಶಕ್ತಿಯ” ಮೂಲಕ ಹೇಗೆ ಪ್ರಭಾವಶಾಲಿಯಾಗಿ ಕಾಣುತ್ತಿದ್ದಾರೆ ಎನ್ನುವುದಷ್ಟೆ ಅಲ್ಲ, ಪ್ರತಿಪಕ್ಷ ರಾಜಕಾರಣ ಭಾರತವನ್ನು ಅರ್ಥ ಮಾಡಿಕೊಂಡು, ಬಿಜೆಪಿಯನ್ನೂ ಎದುರಿಸುವ “ಸಮರಕಲೆ”ಯ ತಂತ್ರಕ್ಕೆ ಇನ್ನೂ ಹೆಣಗಾಡುತ್ತಿರುವ ವ್ಯಕ್ತವಾಗುತ್ತಿದೆ.

ಸಮೀಕ್ಷೆಗಳನ್ನು ನೋಡಿದರಂತೂ ಒಂದು ವರ್ಗಕ್ಕೆ ಸಂಭ್ರಮ ಬೆರಗು.
ಮತ್ತೊಂದು ವರ್ಗಕ್ಕೆ ದಿಗ್ಭ್ರಮೆ, ಅಚ್ಚರಿ.

Times now- vmr ಸರ್ವೇ ಪ್ರಕಾರ ಎನ್ ಡೀ ಎ ಗೆ 306
Repuplic- c voter ಪ್ರಕಾರ ಎನ್ ಡೀ ಎ ಗೆ 287
Neta- news x ಪ್ರಕಾರ ಎನ್. ಡೀ ಎ ಗೆ 242
News18- ipsos ಹೇಳುವಂತೆ ಎನ್ ಡೀ ಎ ಗೆ 336
Aaj Tak- axis – mu India ಪ್ರಕಾರ 339 – 365
Abp- Nelson ಸರ್ವೇ ರೀತಿ ಎನ್. ಡೀ ಎ ಗೆ 267

ಹೀಗೆ ಸಾಗುತ್ತದೆ ಈ exit poll ವಿಜಯ ಯಾತ್ರೆಯ ಲಹರಿ..

ಇನ್ನು ಎರಡೇ ದಿನಗಳಲ್ಲಿ ಈ ಸರ್ವೇ ಅಥವಾ ರಾಜಕೀಯ ಪಂಡಿತರ ನಿಜ ಸುಳ್ಳುಗಳ ಲೆಕ್ಕಾಚಾರ ಬಯಲಾಗುತ್ತದೆ ಎಂದಿಟ್ಟುಕೊಂಡರೂ ಭಾರತ ಚಾರಿತ್ರಿಕವಾಗಿ “ರಾಜಕೀಯ ಪಲ್ಲಟದ” ಸ್ಥಿತಿಗೆ ಬಂದು ತಲುಪಿದೆ ಎಂಬುದಂತೂ ನಿರ್ವಿವಾದ.

ಪ್ರಧಾನಿ ಮೋದಿ ಮತ್ತು ಅಮಿತ್ ಶಾ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷ ಈ ಬಾರಿ ನಡೆಸಿದ್ದು ಬರೀ ಚುನಾವಣೆ ಅಲ್ಲ. ಭಾರತ ರಾಜಕಾರಣದ ನೆಲೆ, ನಂಬಿಕೆಯ ಬುನಾದಿಯನ್ನೆ ಬದಲಾಯಿಸಬಲ್ಲ ದೊಡ್ಡ ಪ್ರಯೋಗ. ಅದೊಂದು ಸಮೂಹ ಸನ್ನಿ ಸೃಷ್ಟಿಸುವ, ಮತ್ತೊಂದು ಅರ್ಥದಲ್ಲಿ ಮನ ಪರಿವರ್ತನೆಯ, ಸಾಂಪ್ರದಾಯಿಕ ಬುಡವನ್ನೇ ಅಲ್ಲಾಡಿಸುವ, ದೊಡ್ಡ ಪ್ರಯೋಗ.

ಸ್ವತಂತ್ರ ಭಾರತಕ್ಕೆ ನಡೆದ ಹೋರಾಟದ ಪ್ರಭಾವ ಮರೆಯಾಗಿ, ಹೊಸ ತಲೆಮಾರಿನ ಆದ್ಯತೆಗಳು ಬದಲಾಗಿ, ಪ್ರತಿಪಕ್ಷಗಳ ಬತ್ತಳಿಕೆಯಲ್ಲಿ ಹೊಸತನ ಇಲ್ಲವಾಗಿ, ಬಿಜೆಪಿ, ಸಂಘ ಪರಿವಾರದ ಅಬ್ಬರ, ಆರ್ಭಟದ ರಾಜಕಾರಣವೇ ಮುಖ್ಯವಾಗಿ, ಸ್ಥಿತ್ಯಂತರ ಘಟ್ಟದಲ್ಲಿ ನಡೆದ ಚುನಾವಣೆ ಇದು.
ಮುಂದಿನ ದಿನಗಳ ರಾಜಕಾರಣವು ಸಂಪೂರ್ಣ ಬದಲಾಗಲಿದೆ ಎನ್ನುವುದರ ದಿಕ್ಸೂಚಿ ಇದು.

ಆರ್ಥಿಕ ಕುಸಿತ, ಆಡಳಿತಾತ್ಮಕ ವೈಫಲ್ಯ, ಅಚ್ಚೆ ದಿನ್ ಆಯೇಂಗೆ ಎಂಬ ಘೋಷಣೆ ಕೇವಲ ಹಗಲುಗನಸು ಎಂಬ ಭ್ರಮೆ, ನೋಟು ಅಮಾನ್ಯೇಕರಣದ ವಿವಾದ, ನಿರುದ್ಯೋಗ ಇಷ್ಟೆಲ್ಲಾ ಸರಣಿ ವೈಫಲ್ಯ ಇದ್ದರೂ, ಅದನ್ನು ವ್ಯವಸ್ಥಿತವಾಗಿ ತನ್ನ ಅದ್ದೂರಿ ಪ್ರಚಾರ ತಂತ್ರ ಮತ್ತು ಸಮೂಹ ಸನ್ನಿಯ ಮೂಲಕ ರಣಕಣದ ಆದ್ಯತೆಯನ್ನು ಬದಲಾಯಿಸಿದ, ಮಂಕು ಬೂದಿ ಎರಚಿ ಗಮನವನ್ನೇ ಬೇರೆಡೆ ಸೆಳೆದ ಬಿಜೆಪಿ ವೈಖರಿ ವಿಸ್ಮಯ ಮೂಡಿಸುತ್ತದೆ.

ಒಂದೊಂದು ಹಂತದ ಚುನಾವಣೆಯಲ್ಲೂ ಒಂದೊಂದು ರಾಜಕೀಯ ಅವತಾರ ತಾಳುತ್ತ, ಅಪ್ಪಟ ವ್ಯವಹಾಸ್ಥರಂತೆ ಕಂಡುಬಂದ ಮೋದಿ- ಶಾ ಜೋಡಿ, ರಾಷ್ಟ್ರೀಯವಾದದ ಸರಕನ್ನು
ಚುನಾವಣೆ ಉದ್ದಕ್ಕೂ ಮಾರಾಟ ಮಾಡಿದ ರೀತಿ ಚುನಾವಣೆಯ ಭಾಷೆಯನ್ನೇ ಬದಲಾಯಿಸಿದೆ.
ಅಭಿವೃದ್ಧಿ, ಉದ್ಯೋಗಸೃಷ್ಟಿ ಇತ್ಯಾದಿ ಮಹತ್ವದ ವಿಚಾರಗಳಿಗೆ ಎಳ್ಳು ನೀರು ಬಿಟ್ಟು, ರಾಷ್ಟ್ರೀಯವಾದದ ಸಂಕೇತವಾಗಿ ಮೋದಿಯನ್ನು ಮುಂದಿಟ್ಟು ಉನ್ಮಾದದಿಂದ ಜನಾದೇಶ ಕೋರಿದ್ದು ಅದೊಂದು ದೊಡ್ಡ ರಾಜಕೀಯ ತಂತ್ರವೇ.

ಇದಕ್ಕೆ ಎದುರಾಗಿ ಪ್ರತಿಪಕ್ಷಗಳಲ್ಲಿ ಅದರಲ್ಲೂ ಕಾಂಗ್ರೆಸ್ನಲ್ಲಿ, ಜನರಿಗೆ ಒಪ್ಪಿತವಾಗುವ ಪರಿಣಾಮಕಾರಿ ಪರ್ಯಾಯ ಇಲ್ಲದಿದ್ದುದು ಮತ್ತೊಂದು ದೌರ್ಬಲ್ಯ.

ಮೋದಿ ಹಟಾವೋ ಬಿಟ್ಟರೆ ಪರ್ಯಾಯ ನಾಯಕತ್ವ ರೂಪಿಸುವಲ್ಲಿ ಜನರಲ್ಲಿ ಭರವಸೆ ಮೂಡಿಸದಿದ್ದದ್ದು ಹಿನ್ನಡೆಗೆ ಮತ್ತೊಂದು ಕಾರಣ. ಗಟ್ಟಿಯಾದ ನಾಯಕತ್ವದ ಕೊರತೆ ಇನ್ನೊಂದು ಕಾರಣ. ಎನ್.ಡಿ.ಎ ಗೆದ್ದು ಮೋದಿ ಮತ್ತೊಮ್ಮೆ ಅಧಿಕಾರಕ್ಕೆ ಬಂದೇಬಿಟ್ಟರು ಎಂಬ ಲೆಕ್ಕದ ಮೇಲೆ ಇದನ್ನು ದಾಖಲಿಸುತ್ತಿಲ್ಲ. ಕೆಲವೊಮ್ಮೆ ಸಮೀಕ್ಷೆಗಳ margin of errors ಜಾಸ್ತಿ ಆದಾಗ, ಇಲ್ಲವೇ ಮಾದರಿ ಸಂಗ್ರಹ ವ್ಯತ್ಯಾಸವಾದಾಗ ಸಮೀಕ್ಷೆಗಳು ಉಲ್ಟಾ ಹೊಡೆಯುತ್ತವೆ. ಅಂತಹ ಉದಾಹರಣೆಗಳು ಸಾಕಷ್ಟಿವೆ.

ಆದರೆ ದಕ್ಷಿಣ ಭಾರತ – ಉತ್ತರಭಾರತದ ರಾಜಕೀಯ ಒಲವು ನಿಲುವುಗಳೆ ಪರಸ್ಪರ ವಿರುದ್ಧವಾಗಿರುವ, ಪಶ್ಚಿಮ ಬಂಗಾಳದ ಕೆಂಪು ಪಡೆ ತಳಮಟ್ಟದಲ್ಲಿ ಕೇಸರಿ ಪಡೆಯಾಗುತ್ತಿರುವ, ಹಿಂದುತ್ವಕ್ಕೆ ಎದುರಾಗಿ ಆಹಿಂದತ್ವ ಸೆಡ್ಡು ಹೊಡೆಯಬಹುದು ಎನ್ನುವ ಲೆಕ್ಕಾಚಾರವೇ ಗೊಂದಲಕ್ಕೆ ತಿರುಗಿ, ತಳ ಸಮುದಾಯದ ಯುವವರ್ಗ ರಾಷ್ಟ್ರೀಯವಾದಕ್ಕೆ ಮರುಳಾಗಿ ಕೇಸರಿ ಪಡೆಯ ಬೆಂಬಲಕ್ಕೆ ನಿಲ್ಲುತ್ತಿರುವ ಈ ಹೊತ್ತಲ್ಲಿ, ಭಾರತದ ರಾಜಕಾರಣ ಸಂಕ್ರಮಣ ಘಟ್ಟದಲ್ಲಿದೆ. ಮತ್ತೊಂದು ವ್ಯಾಖ್ಯಾನದ ಪ್ರಕಾರ ಸಂದಿಗ್ಧತೆ, ಸಂಕಷ್ಟದಲ್ಲೂ ಇದೆ.

ಧರ್ಮ ಮತ್ತು ರಾಷ್ಟೀಯವಾದವನ್ನು ಬೆಸೆದು ಅಭಿಪ್ರಾಯ ರೂಪಿಸುವ ಬಿಜೆಪಿ ತಂತ್ರ ಮುಖ್ಯವಾಹಿನಿಗೆ ಬಂದಿದೆ. ಜಾತ್ಯತೀತ ತತ್ವ, ಅಭಿವೃದ್ದಿ , ಸಾಮಾಜಿಕ ನ್ಯಾಯದ ಘೋಷಣೆಗಳು ಸವಕಲು ಎಂಬಂತಾಗಿ ಹಿನ್ನೆಲೆಗೆ ಸರಿದಿವೆ. ಇಲ್ಲಿ ಈ ಬದಲಾವಣೆಯ ಪ್ರಯೋಗವನ್ನು ಇನ್ನಷ್ಟು ತೀಕ್ಷ್ಣವಾಗಿ ವಿಶ್ಲೇಷಿಸಲು ಯತ್ನಿಸಿದ್ದೇನೆ.

ಭಾರತದ ಇಂದಿನ ಸಾಮಾಜಿಕ, ಆರ್ಥಿಕ ಸ್ಥಿತಿ ಮತ್ತು ಬಿಜೆಪಿಯ ಪ್ರಯೋಗ ಒಂದಕ್ಕೊಂದು ಬೆಸೆದುಕೊಂಡಿದೆ.
ಅದು ಹೊಸ ತಲೆಮಾರಿನ ಮತದಾರರ ಮನಸ್ಥಿತಿಯ ವಿಚಾರ.

ಅಂದರೆ, ಕೃಷಿಗೆ ತಿಲಾಂಜಲಿ ಹೇಳಿ, ಹಳ್ಳಿಗಳಲ್ಲಿ ಪೋಷಕರನ್ನು ಬಿಟ್ಟು ಅಕ್ಷರಶಃ ಅವುಗಳನ್ನು ವೃದ್ಧಾಶ್ರಮ ಮಾಡಿ, ಪಟ್ಟಣ ಸೇರುವ ಯುವಕರ ಬದುಕಿನ ತಲ್ಲಣ ಇದರಲ್ಲೂ ಅಡಗಿದೆ. ಹಳ್ಳಿಗಾಡಿನಲ್ಲಿ ಬದುಕಿನ ಬಂಡಿ ಸಾಗದು ಎಂಬ ಭ್ರಮೆಯಲ್ಲಿ ಸಾಂಪ್ರದಾಯಿಕ ಕೃಷಿ ಆರ್ಥಿಕ ಮೂಲಕ್ಕೆ ಗುಡ್ ಬೈ ಹೇಳುತ್ತಿರುವ ಈ ಪಡೆ, ಪಟ್ಟಣ ಸೇರಿ ನಿರುದ್ಯೋಗಿಗಳಾಗುತ್ತಿದ್ದಾರೆ. ನಗರ ಪ್ರದೇಶದಲ್ಲಿ ಹಣ ಕಮಾಯಿಸಬಹುದೆಂಬ ಅವರ ಭ್ರಮೆಯ ಗುಳ್ಳೆ ಒಡೆದು ಹೋಗುತ್ತಿದೆ.

ಇದರ ಜೊತೆ ನಗರಗಳಲ್ಲಿ ಓದಿದ ನಿರುದ್ಯೋಗಿ ಹುಡುಗರ ಹತಾಶೆ ಸೇರಿಕೊಳ್ಳುತ್ತಿವೆ. ಸಾಮಾಜಿಕವಾಗಿ ಸಮಗ್ರತೆಯ ಅರಿವಿಲ್ಲದ, ಹೆಜ್ಜೆ ಹೆಜ್ಜೆಗೂ ದುಡುಕು, ಭಾವೋನ್ಮಾದ, ಕೊರಗು, ಬೇಸರ ತುಂಬಿಕೊಂಡ ಈ ಹಸಿಬಿಸಿ ಹುಡುಗರು, ಆಡಳಿತದ ವೈಫಲ್ಯ ಗುರುತಿಸಿ ಅದರ ವಿರುದ್ಧ ಸಿಟ್ಟು ಕಾರುವ ಮೊದಲೇ, ಅವರ ಗಮನವನ್ನು ಮೀಸಲಾತಿ ಪಡೆಯುವ ಇತರೆ ಸಮುದಾಯದತ್ತ, ಅದರಲ್ಲೂ ಅಲ್ಪಸಂಖ್ಯಾತರತ್ತ ತಿರುಗಿಸಿ ಅವರನ್ನು ಹೊಣೆ ಮಾಡಲಾಗುತ್ತಿದೆ. ಕೋಮು ಧ್ರುವೀಕರಣದ ರೀತಿ ಇದು. ಗ್ರಾಮ ಭಾರತವನ್ನು ಬಲಪಡಿಸಿದರೆ ಪರಿಸ್ಥಿತಿ ಸುಧಾರಣೆ ಆಗುತ್ತದೆ ಎನ್ನುವುದು ಗೊತ್ತಿದ್ದರೂ ಈ ಬಗ್ಗೆ ಚಕಾರ ಇಲ್ಲ.

ಹಳ್ಳಿಗಳಲ್ಲಿ ಬದುಕು ಕಾಣದ, ಪಟ್ಟಣಗಳಲ್ಲಿ ಭವಿಷ್ಯವಿಲ್ಲದೆ ಕಂಗೆಟ್ಟು ತ್ರಿಶಂಕು ಸ್ಥಿತಿ ತಲುಪಿರುವ ಈ ತರುಣರೆ “ಈ ತ್ರಿಶಂಕು ಭಾರತ ರಾಜಕಾರಣದ ಪ್ರಯೋಗ ಪಶುಗಳು”. ತಮ್ಮ ದುಸ್ಥಿತಿಗೆ ಉದ್ಯೋಗ ಸೃಷ್ಟಿಸಲು ಸಾಧ್ಯವಾಗದ ಸರಕಾರವನ್ನು ಹೊಣೆ ಮಾಡುವ ಬದಲಿಗೆ ಇತರೆ ಸಮುದಾಯವೇ ಹೊಣೆ ಎಂಬ ತಪ್ಪು ಕಲ್ಪನೆಗೆ ಬರುತ್ತಿರುವ ಈ ಯುವ ಸಮುದಾಯವೇ ಬಿಜೆಪಿಯ ಪ್ರಯೋಗದ ದಾಳ.

ಈ ಮುಗ್ದ ಸಮುದಾಯಕ್ಕೆ ರಾಷ್ಟೀಯ ವಾದದ “ಬಲಿಷ್ಟ ಆಯುಧ” ಸಿಕ್ಕಿದ್ದೇ ತಡ ಕೇಸರಿ ಪಡೆಯ ಸೇನಾನಿಗಳಾಗಿ ಘರ್ಜಿಸತೊಡಗಿದ್ದಾರೆ. ರಾಷ್ಟ್ರೀಯ ವಾದದ ಈ ಘೋಷಣೆ ಈ ತರುಣರಿಗೆ ತೋಳ್ಬಲ ತಂದುಕೊಡುತ್ತಿದೆ. ಇವರೇ ಸಧ್ಯದ “ತ್ರಿಶಂಕು ಭಾರತದ” ಪ್ರತಿನಿಧಿಗಳು. ಜಾತಿ, ಧರ್ಮ, ಸಾಮಾಜಿಕ ತಾರತಮ್ಯದ ಅರಿವಿಲ್ಲದೆ, ರಾಷ್ಟ್ರೀಯವಾದದಿಂದಲೇ ತಮ್ಮ ಎಲ್ಲ ಸಮಸ್ಯೆ ಬಗೆಹರಿಯುತ್ತದೆ ಎಂಬ ಭ್ರಮಾಲೋಕದಲ್ಲಿ ವಿಹರಿಸುತ್ತಿರುವ ಬಿಸಿ ರಕ್ತದ ಯುವಕರು.

ಹೀಗಾಗಿ ಬಿಜೆಪಿ ದೃಷ್ಟಿಯಿಂದ ಈ ಬದಲಾವಣೆಯ ಪರ್ವದಲ್ಲಿ ಮೋದಿ “ರಾಷ್ಟ್ರೀಯವಾದದ ಕನಸುಗಳನ್ನು ಮಾರಾಟ ಮಾಡುತ್ತಿರುವ ವ್ಯಾಪಾರಿ. ಈ ಹುಡುಗರೇ ಅವರ ಬಳಕೆದಾರರು” ಇದಕ್ಕೆ ಪರ್ಯಾಯ ರೂಪಿಸುವಲ್ಲಿ ಪ್ರತಿಪಕ್ಷ ರಾಜಕಾರಣ ಬದಲಾಗಬೇಕು ಎನ್ನುವುದೇ ಇಲ್ಲಿಯ ಸಾರಾಂಶ.

ಇನ್ನು ಮುಖ್ಯ ಭಾಗಕ್ಕೆ ಬರೋಣ.

ನಿಜ ಹೇಳಬೇಕೆಂದರೆ ಫಲಿತಾಂಶ ಒಂದು ವೇಳೆ ಎನ್. ಡಿ. ಎ ಅಧಿಕಾರಕ್ಕೆ ಬಂದಿದ್ದೇ ನಿಜವಾದರೆ , ಬಿಜೆಪಿ ಪಡೆಯುವ ಸ್ಥಾನಗಳ ಮೇಲೆ ಭವಿಷ್ಯದ ರಾಜಕಾರಣ ನಿಂತಿದೆ. ಬಿಜೆಪಿ ಬಹುಮತ ಪಡೆಯದಿದ್ದರೆ “ತ್ರಿಶಂಕು ಭಾರತದ ಸ್ಥಿತಿ” ಸರಿ ಪಡಿಸುವ ನಿಟ್ಟಿನಲ್ಲಿ ಮೈತ್ರಿ ಪಕ್ಷಗಳ ಜವಾಬ್ದಾರಿ ಹೆಚ್ಚಿರುತ್ತದೆ. ರಾಷ್ಟ್ರ ರಾಜಕಾರಣದ ಮೇಲೆ ನಿಯಂತ್ರಣ ಇರುತ್ತದೆ.

ಇಲ್ಲ..ಬಿಜೆಪಿಯೇ ಒಂದು ಪಕ್ಷವಾಗಿ ಬಹುಮತ ಪಡೆದರೆ ಭಾರತ ರಾಜಕಾರಣ ಬೇರೆ ಆಗಲಿದೆ.
ಇಲ್ಲವೇ..margin of error ಹೆಚ್ಚಾದರೆ ಚಿತ್ರಣ ಬದಲಾಗಲಿದೆ.

‍ಲೇಖಕರು Avadhi

May 21, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

3 ಪ್ರತಿಕ್ರಿಯೆಗಳು

  1. basavaraju

    ಸಮೀಉಲ್ಲಾ ಸರ್ ನಿಮ್ಮ ಲೇಖನ ಚೆನ್ನಾಗಿದೆ.
    ಆದರೆ ಧಮ೯ದ ವ್ಯಪಾರಿಗಳು
    ಯಾರು .‌‌‌…?
    ನೀವು ನನ್ನ ದೃಷ್ಟಿಯಲ್ಲಿ ಅಲ್ಪ ಸಂಖ್ಯಾತರಲ್ಲ.
    ಅಂದರೆ ನೀವು ಮುಸ್ಲಿಂ ಸಮುದಾಯದ ವರು ನಾನು ಹಿಂದು,
    ಈ ತಾರತಮ್ಯ ನನಗಾಗಲಿ ನಿಮಗಾಗಲಿ
    ಬಂದಿಲ್ಲ.ಹಾಗಂತ ನಾನು ನನ್ನ ಜಾತಿಯ ಅಸ್ಮಿತೆಯಿಂದ ಹೋರಬಂದಿಲ್ಲ,
    ನೀವೂ ಬರವ ಅವಶ್ಯಕತೆ ಇಲ್ಲ.ಆದರೂ ನನ್ನ ಹಬ್ಬಗಳಿಗೆ ನೀವು, ನಿಮ್ಮ ಹಬ್ಬಗಳಿಗೆ ನಾವು ನಮ್ಮದೇ ಹಬ್ಬ ಏನೋ… ಅನ್ನುವ ಪಾಲ್ಗೋಳ್ಳುವ ಪರಂಪಯೇ ಇಲ್ಲಿ ಅಂದರೆ ಭಾರತದಲ್ಲಿ ಹಾಸು ಹೊಕ್ಕಾಗಿದೆ.
    ಆದರೆ ಕಾಂಗ್ರೆಸ್ ಮತ್ತು ಮಮತಾ ಬ್ಯಾನರ್ಜಿ ರವರು ಮುಸ್ಲಿಂ ಮತ ಬ್ಯಾಂಕ್ ಓಲೈಕೆ ಮಾಡದೇ ಎಲ್ಲರನ್ನೂ ಸರಿಸಮವಾಗಿ ಖಂಡಿದ್ಧರೇ ಈ ಬಿಜೆಪಿ ಜನ್ಮ ತಾಳಲು ಅವಕಾಶವೇ ಇರಲಿಲ್ಲ.
    ಮತ್ತೆ ಮೀಡಿಯಾಗಳು ಬಲವಂತವಾಗಿ ಅಭಿಪ್ರಾಯ ಜನರ ಮೇಲೆ ಹೇರತ್ತಿವೆ ಎನ್ನುತ್ತಿರಿ.ಆದರೆ ಜನರ ತೀರ್ಮಾನ
    ಈಗಾಗಲೇ ಬಾಕ್ಸ್ ನಲ್ಲಿ ಕೂತಿವೆ.
    ಅಲ್ಲಿಗೆ ಜನರ ಮೇಲೆ ಅಭಿಪ್ರಾಯ ಹೇರುವ ಮಾತೇಕೆ.ನನಗೆ ಅರ್ಥವಾಗುತ್ತಿಲ್ಲ.

    ಪ್ರತಿಕ್ರಿಯೆ
  2. Padmanabha Gowda

    ಸಮಿವುಲ್ಲಾ ಸರ್
    ಬರಹ ಚೆನ್ನಾಗಿದೆ.
    ಆದರೆ ಬಿಜೆಪಿಯ ಬಗೆಗಿನ ಅಸಹನೆ ಎದ್ದು ತೋರುತ್ತಿದೆ.

    ಬಿಜೆಪಿಯ 5 ವರ್ಷಗಳ ವೈಫಲ್ಯಗಳ ಬಗ್ಗೆ ಬರೆದ ನಿಮಗೆ ಅದರ ಹಿಂದಿನ ವರ್ಷಗಳಲ್ಲಿ ಆಳಿದ ಕಾಂಗ್ರೆಸ್ಸಿನ ವೈಫಲ್ಯ ಮತ್ತು ಅದನ್ನು ಮುಚ್ಚಿಡಲು ಕಾಂಗ್ರೆಸ್ಸಿನ ತಿಂಗಳಿಗೆ 6000 ರೂಪಾಯಿನ ಗಜ್ಜರಿ ತೋರಿಸಿದ್ದು, ಚೌಕಿದಾರನನ್ನು ಚೋರ್ ಎಂದಿದ್ದು ಇತ್ಯಾದಿ ಅಗ್ಗದ ಪ್ರಚಾರಗಳ ಬಗ್ಗೆ ಬರೆಯಬೇಕು ಎಂದನಿಸಲಿಲ್ಲವೇ?
    ಕಾಂಗ್ರೆಸ್ಸು, ಜೆಡಿಸ್ ಇತರೆ ಪಕ್ಷಗಳ ಅಹಿಂದರ ಓಲೈಕೆಯಂತಹ ಮತ ಬ್ಯಾಂಕು ರಾಜಕೀಯ ಸರಿಯೇ?
    ಕನಿಷ್ಠ ಪಕ್ಷ ಬಿಜೆಪಿಯ ಹಿಂದುತ್ವ ಮತ್ತು ರಾಷ್ಟ್ರೀಯವಾದ ನಮ್ಮೆಲ್ಲರ ಮುಂದಿದೆ, ಬಾಕಿ ಪಕ್ಷಗಳ ಧೋರಣೆ ಏನೆಂಬ ಕ್ಲಾರಿಟಿ ಇದೆಯೇ?

    ಪ್ರತಿಕ್ರಿಯೆ
  3. Prashanth

    I have never seen even a single article (I would be happy to be proved wrong) talking any smallest positive thing about Modi/NDA. Hope today’s result will help Avadhi’s management and writers to change their biased view. I genuinely hope Avadhi becomes more sensitive towards mandate which is given by people of our country.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: