ಸ್ವ್ಯಾನ್ ಕೃಷ್ಣಮೂರ್ತಿ ಅಂಕಣ: ನಾನು ಬಂದು ತಲುಪಿಕೊಂಡದ್ದು ‘ಲಕ್ಷ್ಮಿ ಮುದ್ರಣಾಲಯ’ವನ್ನು…

ತರಲೆ ಮಾಡಿಕೊಂಡು ಕಾಲ ಕಳೆಯುತ್ತಿದ್ದ ನನ್ನನ್ನು ಹಿಡಿದು ಲಕ್ಷ್ಮೀ ಮುದ್ರಣಾಲಯಕ್ಕೆ ಸೇರಿಸಿದರು

ಚಿತ್ರದುರ್ಗದ ನಮ್ಮ ದೊಡ್ಡಮ್ಮನ ಮನೆಯ ಕೆಳಗೆ ಒಂದು ಲೇಡೀಸ್ ಹಾಸ್ಟೆಲ್ ಇತ್ತು. ಆ ಹಾಸ್ಟೆಲಿನ ಮೊದಲ ವರ್ಷದ ಇಂಜಿನಿಯರಿಂಗ್ ಓದುತ್ತಿದ್ದ ಒಂದು ಹುಡುಗಿ ನನ್ನ ಸ್ನೇಹಿತ ಗೋವಿಂದರೆಡ್ಡಿಯ ಸ್ನೇಹಿತೆ. ಆ ಹುಡುಗಿ ಒಂದು ದಿನ ನಮ್ಮ ಬಳಿಗೆ ಬಂದು “ನನಗೆ ಎಸ್.ಜೆ.ಎಂ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಿವಿಲ್ ಬ್ರಾಂಚ್ ಸಿಕ್ಕಿದೆ, ಆದರೆ ನನಗೆ ಎಲೆಕ್ಟ್ರಾನಿಕ್ಸ್ ಸಬ್ಜೆಕ್ಟ್ ಓದಲು ಆಸೆ. ನಿಮಗೆ ನಮ್ಮ ಕಾಲೇಜು ಆಡಳಿತ ಮಂಡಳಿಯಲ್ಲಿ ಪರಿಚಯ ಇದೆಯಂತೆ, ದಯವಿಟ್ಟು ನನಗೆ ಎಲೆಕ್ಟ್ರಾನಿಕ್ಸ್ ಡಿಪಾರ್ಟ್ಮೆಂಟಿಗೆ ಬದಲಾಯಿಸಿಕೊಡಿ” ಎಂದು ವಿನಂತಿ ಮಾಡಿಕೊಂಡಳು. ಹುಡುಗಿ ಬಂದು ವಿನಂತಿ ಮಾಡುತ್ತಿದ್ದಾಳೆ ಎಂದು ನಾನು ಸ್ವಲ್ಪ ಉಬ್ಬಿಹೋದೆ…! “ಅದು ಏನು ಮಹಾ…!! ಚೇಂಜ್ ಮಾಡಿಸಿಕೊಡ್ತೀವಿ ಬಿಡಿ” ಎಂದುಬಿಟ್ಟೆ…

ನಂತರ ನಮ್ಮ ಮುರುಘಾಮಠದ ಆಡಳಿತಾಧಿಕಾರಿಯಾಗಿದ್ದ ಬಸಣ್ಣನವರ ಶ್ರೀಮತಿ ಹಾಗೂ ನನ್ನ ಚಿಕ್ಕಮ್ಮ ಸೌಭಾಗ್ಯ ಅವರ ಬಳಿಗೆ ಈ ಹುಡುಗಿನ ಕರ್ಕೊಂಡ್ ಹೋಗಿ, ಅವರ ಕಡೆಯಿಂದ ಕೆಲಸ ಮಾಡಿಸಬೇಕಿತ್ತು. ಆದರೆ ಈ ಹುಡುಗಿ ನನ್ನ ಸ್ನೇಹಿತನ ಸ್ನೇಹಿತೆ ಅಂತ ಹೆಂಗೆ ಹೇಳೋದು..? ಭಯ…, ನನ್ನ ಸ್ನೇಹಿತನ ತಂಗಿ ಎಂದು ಒಂದು ಸುಳ್ಳು ಹೇಳಿಬಿಡುವುದು ಎಂದು ಒಂದು ಉಪಾಯ ಮಾಡಿದೆವು. ಆದರೆ ಅಣ್ಣನಾಗಿ ಯಾರನ್ನು ಕರೆದುಕೊಂಡು ಹೋಗುವುದು ಎಂಬ ಪ್ರಶ್ನೆ ಹುಟ್ಟಿತು…! ತಕ್ಷಣ ಹೊಳೆದದ್ದು ನಮ್ಮ ಆಪದ್ಬಾಂಧವ ಅಜಿತನ ಹೆಸರು. ತಕ್ಷಣ ಅವರ ಮನೆಗೆ ಹೋದ್ವಿ. ಅವನು ರಾತ್ರಿಯಲ್ಲ ಉಡುಪಿಯಿಂದ ಪ್ರಯಾಣ ಮಾಡಿಕೊಂಡು ಬಂದು ಸುಸ್ತಾಗಿ ಮಲಗಿದ್ದ… ಆದರೂ ಬಿಡದೆ ಅವನನ್ನು ಎಬ್ಬಿಸಿ, “ಬಾ ಬೇಗ ರೆಡಿಯಾಗು, ನೀನು ಮಠದಲ್ಲಿ ಒಂದು ಹುಡುಗಿಗೆ ಸ್ವಲ್ಪ ಹೊತ್ತು ಅಣ್ಣನಾಗಿ ಪಾತ್ರ ಮಾಡಬೇಕು” ಎಂದು ಬಲವಂತವಾಗಿ ಎಬ್ಬಿಸಿಕೊಂಡು ಮಠಕ್ಕೆ ಕರೆದುಕೊಂಡು ಹೋದ್ವಿ….

ನಾವು ಅಲ್ಲಿಗೆ ಹೋಗಿ ನಮ್ಮ ಚಿಕ್ಕಮ್ಮನ ಮುಂದೆ ಅಜಿತನ ತಂಗಿ ಇವಳು ಅಂತ ಪರಿಚಯಿಸುವುದು. ಅವರು ಬಸಣ್ಣನವರ ಹತ್ತಿರ ಮಾತಾಡಿ ನಮ್ಮ ಮಠದ ಎಸ್.ಜೆ.ಎಂ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಬ್ರಾಂಚ್ ಚೇಂಜ್ ಮಾಡಿಸಿಕೊಳ್ಳಲು ಒಂದು ಚೀಟಿ ಕೊಡಿಸುತ್ತಾರೆ ಅಷ್ಟೇ ಅಂದುಕೊಂಡು ಹೋದರೆ…. ಬಸಣ್ಣನವರಿಗೆ ಮೊದಲ ನೋಟದಲ್ಲೇ ಅನುಮಾನ ಬಂದು ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳಿ ನಿಜ ಬಯಲು ಮಾಡಿಬಿಟ್ಟರು…!!! ಹುಡುಗಿಗೆ ಬ್ರಾಂಚ್ ಬದಲಾವಣೆ ಮಾಡಿಕೊಟ್ಟರಾದರೂ ಸುಳ್ಳು ಹೇಳಿದ್ದಕ್ಕಾಗಿ ನನ್ನ ಮೇಲೆ ಬೇಸರ, ಅಸಮಾಧಾನ ಇದ್ದೇ ಇತ್ತು.

ತಪ್ಪು ಮಾಡಿದವರಿಗೆ ಬಸಣ್ಣನವರು ಕೊಡುವ ಶಿಕ್ಷೆ ಅವರನ್ನು ಮಾತನಾಡಿಸದೇ ಇರೋದು ಅಥವಾ ಅವರನ್ನು ನಿರ್ಲಕ್ಷಿಸಿ ಬಿಡೋದು…, ಬೇಕಾದರೆ ಒಂದೋ ಎರಡೋ ಒದೆ ತಿನ್ನಬಹುದು ಅಥವಾ ಚೆನ್ನಾಗಿ ಬೈಸಿಕೊಂಡೂ ಬಿಡಬಹುದು. ಒಬ್ಬರ ಮುಂದೆ ನಿಂತಾಗ ಅವರು ನಮ್ಮನ್ನು ನೋಡದೆ ಹೋದರೆ, ಮಾತಾಡಿಸದೇ ಹೋದರೆ ಅದಕ್ಕಿಂತ ದೊಡ್ಡ ಅವಮಾನ, ಶಿಕ್ಷೆ ಬೇರೊಂದು ಇಲ್ಲ. ಹೀಗೆ ಬಸಣ್ಣನವರು ಸುಮಾರು ಎರಡು ವರ್ಷ ನಾನು ಎದುರೇ ಇದ್ದರೂ ನನ್ನನ್ನು ಮಾತೇ ಆಡಿಸುತ್ತಿರಲಿಲ್ಲ… ಈ ರೀತಿ ಅನೇಕ ತರಲೆಗಳಿಂದ ನನ್ನ ಅಮ್ಮ ಮತ್ತು ಚಿಕ್ಕಮ್ಮ ರೋಸಿಹೋಗಿದ್ದರು. ಇವನನ್ನು ಏನು ಮಾಡುವುದು, ಇಲ್ಲೇ ಚಿತ್ರದುರ್ಗದಲ್ಲಿ ಇದ್ದರೆ ಹಾಳಾಗಿ ಬಿಡುತ್ತಾನೆ ಎಂಬ ಚಿಂತೆ ಅವರಿಗೆ.

ಒಂದು ದಿನ ಮಠದ ಮ್ಯಾನೇಜರ್ ವಿರೂಪಾಕ್ಷಣ್ಣನವರು ಕೊಡಗಿನ ಮಠದ ಕಾಫಿ ತೋಟದಲ್ಲಿ ಪ್ರತಿವರ್ಷದಂತೆ ಆ ವರ್ಷವೂ ಕಾಫಿ ಹಣ್ಣುಗಳು ಬಿಟ್ಟ ಸಮಯದಲ್ಲಿ, ತೋಟ ಕಾಯಲು ಮಠದಿಂದ 15-20 ಜನ ಹುಡುಗರನ್ನು ಕಳಿಸಲು ಹುಡುಕುತ್ತಿದ್ದಾರೆ ಎಂದು ತಿಳಿಸಿದರು. ನಾನು ಕೂಡ ಅಲ್ಲಿಗೆ ಹೋಗಿ ಸ್ವಲ್ಪ ದಿನ ಮಠದ ತೋಟದಲ್ಲಿ ಚೆನ್ನಾಗಿ ಕೆಲಸ ಮಾಡಿ ತೋರಿಸಿದರೆ ಮುಂದೆ ಮಠದಲ್ಲಿ ಯಾವುದಾದರೂ ಖಾಯಂ ಕೆಲಸ ಕೊಡುತ್ತಾರೆ ಎಂಬ ಆಸೆ ಚಿಗುರಿತು. ಚಿಕ್ಕಮ್ಮನ ಕಡೆಯಿಂದ ಮ್ಯಾನೇಜರಿಗೆ ಹೇಳಿಸಿ ಕಾಫಿ ತೋಟದ ಕೆಲಸಕ್ಕೆ ಹೋಗುವವರ ಪಟ್ಟಿಯಲ್ಲಿ ನನ್ನ ಹೆಸರನ್ನೂ ಸೇರಿಸಿಕೊಂಡೆ.

ಪಟ್ಟಿಯಲ್ಲಿ ಹೆಸರಿರುವವರು ಕೊಡಗಿನ ತೋಟಕ್ಕೆ ಹೊರಡುವ ಮುಂಚೆ ಎಲ್ಲರೂ ಸ್ವಾಮೀಜಿ ಮತ್ತು ಬಸಣ್ಣನವರನ್ನು ಕಂಡು, ಅವರಿಗೆ ಒಬ್ಬೊಬ್ಬರೇ ನಮಸ್ಕರಿಸುತ್ತಿದ್ದರು. ನನ್ನ ಸರತಿ ಬಂದಾಗ ನಾನು ಹೋಗಿ ಬಸಣ್ಣನವರ ಕಾಲಿಗೆ ನಮಸ್ಕರಿಸಿದೆ. ತಕ್ಷಣ ಅಲ್ಲೇ ಇದ್ದ ಮ್ಯಾನೇಜರ್‌ಗೆ.. “ಇವನ್ನ ಯಾಕೆ ಕಳಿಸ್ತೀರಾ? ಇವನನ್ನು ಅಲ್ಲಿಗೆ ಕಳಿಸಲು ಯಾರು ಹೇಳಿದರು… ಇವನು ಅಲ್ಲಿಗೆ ಹೋಗುವುದು ಬೇಡ” ಎಂದು ಹೇಳಿ ಎದ್ದುಹೋದರು… ಇದು ನನ್ನ ಜೀವನದಲ್ಲಿ ದೊಡ್ಡ ತಿರುವಿಗೆ ಕಾರಣ ಕೂಡ ಆಯ್ತು….

ನಾನು ಅಂದು ಕೊಡಗಿನ ಮಠದ ಕೆಲಸಕ್ಕೆ ಹೋಗಿದ್ದರೆ ನನ್ನ ಬದುಕಿನ ದಾರಿಯೇ ಬೇರೆ ಕಡೆ ಸಾಗುತ್ತಿತ್ತು. ಅವರ ನಿರಾಕರಣೆ ನನ್ನ ಬದುಕಿಗೆ ಮಹತ್ವದ ತಿರುವನ್ನು ಕೊಟ್ಟಿತು. ಆದರೆ ಇವೆಲ್ಲದರ ನಡುವೆ ನನ್ನನ್ನು ಸ್ವಂತ ಮಗನಂತೆ ಪ್ರೀತಿಸುತ್ತಿದ್ದ ಚಿಕ್ಕಮ್ಮ.. ಇವನಿಗೆ ಏನಾದರೂ ಒಂದು ದಾರಿ ತೋರಿಸಬೇಕು ಎಂದು ಪ್ರಯತ್ನಿಸುತ್ತಲೇ ಇದ್ದರು.

ಒಂದು ದಿನ ಬಸಣ್ಣನವರ ಮುಂದೆ “ಕಿಟ್ಟೀನ ಬೆಂಗಳೂರಿನ ಅಶೋಕ್‌ಕುಮಾರ್ ಅವರ ಲಕ್ಷ್ಮೀ ಮುದ್ರಣಾಲಯಕ್ಕೆ ಕೆಲಸಕ್ಕೆ ಕಳಿಸಿದರೆ ಹೇಗೆ ?” ಎಂದು ಕೇಳಿದಾಗ, ಅವರು ಒಮ್ಮೆ ಜೋರಾಗಿ ನಕ್ಕು “ಅವನಿಗೆ ಅವರೇ ಸರಿಯಾದ ಗುರು, ಕಳಿಸು ಕಳಿಸು” ಎಂದರು. ಅಶೋಕ್‌ಕುಮಾರ್ ಅವರು ಖ್ಯಾತ ಇತಿಹಾಸ ಸಂಶೋಧಕ ಪ್ರೊ. ಲಕ್ಷ್ಮಣ್ ತೆಲಗಾವಿಯವರ ಮುಖಾಂತರ ನಮ್ಮ ಮಠಕ್ಕೆ ಪರಿಚಯವಾದವರು. ನಮ್ಮ ಮಠದ ಮುದ್ರಕರಷ್ಟೇ ಆಗಿರದೆ ಹಿರಿಯ ಜಗದ್ಗುರುಗಳಿಗೆ ಬಹಳ ಆತ್ಮೀಯರಾಗಿದ್ದವರು.

ಮುಂದೆ ಡಾ. ಶಿವಮೂರ್ತಿ ಮುರುಘಾ ಶರಣರು ರಾಜ್ಯದ ಉದ್ದಗಲಕ್ಕೂ ಪ್ರಾರಂಭಿಸಿದ ಪ್ರತಿ ತಿಂಗಳ ಕಾರ್ಯಕ್ರಮ ಶರಣ ಸಂಗಮವನ್ನು ಬೆಂಗಳೂರಿನಲ್ಲಿ ಅತ್ಯಂತ ಶ್ರದ್ಧೆಯಿಂದ, ಅಚ್ಚುಕಟ್ಟಾಗಿ ಆಯೋಜಿಸಿದವರು. ಮಠದ ಇತರ ಕಾರ್ಯಕ್ರಮಗಳು ಹಾಗೂ ಸ್ವಾಮೀಜಿಯವರು “ದೇಶಗಳಲ್ಲಿ ಬಸವತತ್ತ್ವ ಪ್ರಚಾರಕ್ಕಾಗಿ ಕೈಗೊಳ್ಳುತ್ತಿದ್ದ ಪ್ರವಾಸಗಳಲ್ಲಿ ಪೂರ್ಣ ಸಹಕಾರ ನೀಡಿ ಸ್ವಾಮೀಜಿಯವರ ಜೊತೆಗೆ ಇರುತ್ತಾ ನಮ್ಮ ಮಠದ ಪರಮ ಭಕ್ತರಾಗಿದ್ದರು. ಆಡಳಿತಾಧಿಕಾರಿಗಳಾಗಿದ್ದ ಬಸವರಾಜನ್ ಮತ್ತು ಅವರ ಶ್ರೀಮತಿ ಸೌಭಾಗ್ಯ ಅವರಿಗೆ ಅತ್ಯಂತ ಆತ್ಮೀಯ ಕುಟುಂಬ ಸ್ನೇಹಿತರು ಕೂಡ.

ಲಕ್ಷ್ಮೀ ಮುದ್ರಣಾಲಯದ ಅಶೋಕ್‌ಕುಮಾರ್ ಎಂದರೆ ನಮ್ಮ ಮಠದಲ್ಲಿ ಎಲ್ಲರಿಗೂ ಭಯ..! ಯಾಕೆಂದರೆ ಅವರ ಮುಂದೆ ಯಾರೇ ಸಣ್ಣ ತಪ್ಪು ಮಾಡಿದರೂ ಬೈದುಬಿಡುತ್ತಿದ್ದರು. ಎಲ್ಲರೂ “ಅವರಿಗೆ ಬಹಳ ಸಿಟ್ಟು, ಅವರ ಬಳಿಗೆ ಹೋಗಬೇಡ, ಇಲ್ಲೇ ಮಠದ ಯಾವುದಾದರೂ ಕಾಲೇಜಿನಲ್ಲಿ ಕೆಲಸ ಕೇಳಿಕೋ” ಎನ್ನತೊಡಗಿದ್ದರು.

ನಾನು ಚಿಕ್ಕಮ್ಮನ ಬಳಿ “ಬೆಂಗಳೂರಿಗೆ ಹೋಗಲ್ಲ” ಎಂದು ಹಟ ಹಿಡಿದಿದ್ದೆ..! ಅವರು ನನ್ನನ್ನು ಕುಳ್ಳಿರಿಸಿಕೊಂಡು ಸಮಾಧಾನ ಹೇಳಿದರು. “ಅಶೋಕ್‌ಕುಮಾರ್ ಅವರು ಕೂಡ ಕೆಲಸಕ್ಕಾಗಿ ಬೆಂಗಳೂರಿಗೆ ಬಂದು, ಬೇರೆ ಬೇರೆ ಮುದ್ರಣಾಲಯಗಳಲ್ಲಿ ಕಷ್ಟಪಟ್ಟು ಕೆಲಸ ಮಾಡಿ, ಕೆಲಸ ಕಲಿತುಕೊಂಡ ಮೇಲೆ ಅವರೇ ಒಂದು ಸ್ವಂತ ಮುದ್ರಣಾಲಯ ಸ್ಥಾಪಿಸಿ ಹಂತ ಹಂತವಾಗಿ ಹೇಗೆ ಮೇಲೆ ಬಂದರು” ಎನ್ನುವುದನ್ನು ಸಣ್ಣ ಮಕ್ಕಳಿಗೆ ಕಥೆ ಹೇಳುವ ರೀತಿಯಲ್ಲಿ ಹೇಳಿದರು.

“ನೀನು ಅಲ್ಲಿ ಹೋಗಿ ಕೆಲಸ ಕಲಿತು, ಜೀವನದಲ್ಲಿ ಮುಂದೆ ಬರಲು ಅವಕಾಶವಿದೆ” ಎಂದು ಬಿಡಿಸಿ ಹೇಳಿ, ನನ್ನ ಮನ ಒಲಿಸಿ ಬೆಂಗಳೂರಿಗೆ ಕೆಲಸಕ್ಕೆ ಹೋಗಲು ಒಪ್ಪಿಸಿದರು. ಹೀಗೆ ಮಾತಾಡುತ್ತಲೆ ಅಶೋಕ್‌ಕುಮಾರ್ ಅವರಿಗೆ ಕರೆ ಮಾಡೇ ಬಿಟ್ಟರು.. “ಅಂಕಲ್ ನಮ್ಮ ಹುಡುಗನೊಬ್ಬನಿಗೆ ನಿಮ್ಮ ಮುದ್ರಣಾಲಯದಲ್ಲಿ ಒಂದು ಕೆಲಸ ಕೊಡಿ” ಎಂದು ಮನವಿ ಮಾಡಿ ಅವರನ್ನು ಒಪ್ಪಿಸಿಯೇ ಬಿಟ್ಟರು.

“ಇನ್ನು ತಡ ಮಾಡುವುದು ಬೇಡ, ನೀನು ನಾಳೆಯೇ ಬೆಂಗಳೂರು ಮಠಕ್ಕೆ ಹೋಗು, ಅಲ್ಲಿ ಹನುಮಂತಪ್ಪನನ್ನು ಕಾಣು, ಅವರು ನಿನ್ನನ್ನು ಚಾಮರಾಜಪೇಟೆ ಲಕ್ಷ್ಮೀ ಮುದ್ರಣಾಲಯಕ್ಕೆ ಕರೆದುಕೊಂಡು ಹೋಗುತ್ತಾರೆ” ಎಂದು ಹೇಳಿ, ಖರ್ಚಿಗೆ ಸ್ವಲ್ಪ ಹಣ ಕೊಟ್ಟು ಕಳಿಸಿದರು.

ನಾನು ಅಲ್ಲಿಂದ ಹೊರಟು ಮಠದ ಗೇಟ್ ಬಳಿಗೆ ಬಂದಾಗ ಮಠದ ತಿಪ್ಪಣ್ಣ ಸಿಕ್ಕರು. ಅವರು ಕೂಡ ಅಶೋಕ್ ಕುಮಾರ್ ಅವರ ಸ್ನೇಹಿತರು. ಅವರ ಬಳಿ ಹೀಗೇ ಮಾತನಾಡುತ್ತಾ “ಬೆಂಗಳೂರಿನ ಅಶೋಕ್‌ಕುಮಾರ್ ಅವರ ಪ್ರೆಸ್‌ಗೆ ಕೆಲಸಕ್ಕೆ ಹೋಗುತ್ತಿದ್ದೇನೆ, ಆದರೆ ಅವರ ಶೀಘ್ರ ಕೋಪ ನೆನೆದರೆ ನನಗೆ ಭಯ. ಅಣ್ಣ ಏನು ಮಾಡುವುದು ?” ಎಂದಾಗ, ತಿಪ್ಪಣ್ಣ ಸ್ವಲ್ಪ ಧೈರ್ಯ ತುಂಬಿದರು. “ನೀನು ಹೆದರಬೇಡ ಹೋಗು… ಅಶೋಕ್‌ಕುಮಾರ್ ಅವರಿಗೆ ಸಿಟ್ಟು ಜಾಸ್ತಿಯಾದರೂ ಮನಸ್ಸು ಬಹಳ ಒಳ್ಳೆಯದು. ಅವರು ಬೈಯುವಾಗ ಕಾರಣಗಳನ್ನು ಹೇಳಿ ತಪ್ಪಿಸಿಕೊಳ್ಳಲು ಪ್ರಯತ್ನ ಮಾಡಿದರೆ ಅವರಿಗೆ ಕೋಪ ಇನ್ನೂ ಜಾಸ್ತಿಯಾಗಿಬಿಡುತ್ತದೆ, ಬೈಯುವಾಗ ಸುಮ್ಮನೆ ಇದ್ದರೆ ಬೈದು ಸ್ವಲ್ಪ ಹೊತ್ತಿನಲ್ಲೇ ಮರೆತುಬಿಡುತ್ತಾರೆ, ಹೆದರಬೇಡ ಹೋಗು” ಎಂದು ಹೇಳಿ ಕಳಿಸಿದರು.

ನಮ್ಮ ಕುಟುಂಬಕ್ಕೆ ಸಿನಿಮೀಯ ರೀತಿಯಲ್ಲಿ ಬಂದ ಸಂಕಷ್ಟದ ಸಮಯದಲ್ಲಿ ಬಸಣ್ಣನವರು ಮತ್ತು ಸೌಭಾಗ್ಯ ಅವರು ನಮ್ಮ ಸಹಕಾರಕ್ಕೆ ನಿಲ್ಲದಿದ್ದರೆ ನಮ್ಮ ಕುಟುಂಬದ ಬಾಳ ಪಯಣದ ಹಾದಿಯನ್ನು ಊಹಿಸಿಕೊಳ್ಳಲೂ ಸಾಧ್ಯವಾಗುತ್ತಿರಲಿಲ್ಲ…!

ನನ್ನ ವಿದ್ಯಾಭ್ಯಾಸಕ್ಕೆ ಉತ್ತಮ ಅವಕಾಶಗಳಿದ್ದರೂ ಸರಿಯಾಗಿ ಓದದೆ, ಮುಂದಿನ ಜೀವನದ ಬಗ್ಗೆ ಸರಿಯಾಗಿ ಯೋಚಿಸದೆ, ಜೀವನವನ್ನು ಲಘುವಾಗಿ ತೆಗೆದುಕೊಂಡು, ಊರೂರು ಸುತ್ತಿಕೊಂಡು, ಬರೀ ತರಲೆಗಳನ್ನು ಮಾಡಿಕೊಂಡಿದ್ದ ನನ್ನನ್ನು ಹಿಡಿದು ಲಕ್ಷ್ಮೀ ಮುದ್ರಣಾಲಯಕ್ಕೆ ಸೇರಿಸದಿದ್ದರೆ, ಅದರಲ್ಲೂ ಅಶೋಕ್‌ಕುಮಾರ್ ಬಳಿಗೆ ನನ್ನನ್ನು ಕಳುಹಿಸದಿದ್ದರೆ ಇಂದು ನಾನು ಏನಾಗಿ ಇರುತ್ತಿದ್ದೆನೋ….?!

ನನ್ನ ಜೀವನಕ್ಕೆ ಅತ್ಯಂತ ದೊಡ್ಡ ತಿರುವು ಕೊಟ್ಟ ಎಸ್. ಕೆ. ಬಸವರಾಜನ್ ಮತ್ತು ಶ್ರೀಮತಿ ಸೌಭಾಗ್ಯ ಅವರಿಗೆ ನಾನು ಚಿರಋಣಿಯಾಗಿದ್ದೇನೆ.

‍ಲೇಖಕರು avadhi

July 20, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: