ಮಲೆಗಳಲ್ಲಿ ಮದುಮಗಳು: ಗುತ್ತಿಯ ಅಳಲು ಮತ್ತೆ ಮುಗಿಲು ಮುಟ್ಟಿತ್ತು..

ಪುಟ್ಟಪ್ಪನ ಕೂಸು ಮಗಳು

ಸ್ವರ್ಣ ಎನ್ ಪಿ

ಕನ್ನಡ ಕವಿ ಕಾವ್ಯ ಪರಿಚಯ ಪ್ರಶ್ನೆಗೆ ಉತ್ತರಿಸಲು ಸ್ಕೂಲ್ನಲ್ಲಿದ್ದಾಗ ಹೆಸರು ಉರುಹಚ್ಚಿದ್ದು ಬಿಟ್ಟರೆ ‘ಮಲೆಗಳಲ್ಲಿ ಮದುಮಗಳು’
ಬಗ್ಗೆ ಅಷ್ಟೇನೂ ನಿನ್ನೆಯ ತನಕ ನನಗೆ ಗೊತ್ತಿರಲಿಲ್ಲ, ಈಗಲೂ ಗೊತ್ತಿಲ್ಲ. ಕೆಲ ವರ್ಷಗಳ ಕೆಳಗೆ ಮೈಸೂರಿನಲ್ಲಿ ಮದುಮಗಳು ಪ್ರದರ್ಶನಗೊಂಡಾಗ
ನೋಡ್ಬೇಕು ಅಂದ್ಕೊಂಡ್ರೂ ಮೈಸೂರಿನಲ್ಲಿ ಮಳೆ ಬಂದು ಮದುಮಗಳು ತೋಯ್ದಳಂತೆ ಅಂತ ಅಲ್ಲಿ ಇಲ್ಲಿ ಕೇಳಿ ಆಸೆ ಕಡಿಮೆಯಾಯಿತು .
ಈ ಬಾರಿ ಮತ್ತೆ ಬೆಂಗಳೂರಿನಲ್ಲಿ ಒಂದು ತಿಂಗಳ ಪ್ರದರ್ಶನ ಅಂತ ತಿಳಿದಾಕ್ಷಣ ಆಸೆಗೆ ಮತ್ತೆ ವಸಂತ ಬಂದದ್ದು ನಿಜ.

ನಾ ಕಂಡ ಮದುಮಗಳನ್ನ ಅಕ್ಷರಗಳಲ್ಲಿ ಸೆರೆಹಿಡಿಯುವುದು ಸುಲಭವಲ್ಲದಿದ್ದರೂ, ದಾಖಲೆ ಇರಲಿ ಎಂಬ ಆಸೆಗೆ ಬಿದ್ದು ಒಂದು ಪುಟ್ಟ ಪ್ರಯತ್ನ ಮಾಡಿದ್ದೇನೆ.
ಆಸೆಗೆ ವಸಂತ ಬಂದ್ರೂ , ಶಿಶಿರ ಬಂದ್ರೂ , ಸಕಲ ಸಂಪತ್ತನ್ನೂ ತೊಡೆ ಗಣಕದಲ್ಲೇ ಕಾಣಲೆತ್ನಿಸುವ ಅಚ್ಚ ತಂತ್ರಜ್ಞಾನಿಗಳಾದ ನಮಗೆ,
ನಾಟಕದ ಟಿಕೇಟ್ ತರೋಕೆ ವಾರ್ತಾಭವನ ಕಲಾಕ್ಷೇತ್ರದ ತನಕ ಹೋಗಲು ಸೋಮಾರಿತನ ! ರಂಗಾಸಕ್ತ ಕೆಲ ಸ್ನೇಹಿತರೊಬ್ಬರನ್ನ ವಾರ್ತಾಭವನಕ್ಕೆ ಓಡಿಸಿ ವಾರ ಮುಂಚೆ ಟಿಕೆಟ್ ಕಾಯ್ದಿರಿಸಿದ್ವಿ. ಕಲಾಗ್ರಾಮ ಹೆಸರೇ ಕೇಳಿರದಿದ್ದ ನಾವು ಗೂಗಲ್ ಮಾತೆಯ ಮೊರೆ ಹೊಕ್ಕು ನಕ್ಷೆ ಸಿಧ್ಧಪಡಿಸಿಕೊಂಡಿವಿ.
ಟಿಕೇಟ್ ಸಿಕ್ತು, ತುಂಬಾ ರಶ್ ಇದೆ , ಬೇಗ ಬನ್ನಿ ಅಂತೆಲ್ಲ ಹೇಳಿದ್ರಂತೆ ಟಿಕೇಟ್ ಕೊಡೋವಾಗ. ಅವರ ಮಾತನ್ನು ಶಿರಸಾವಹಿಸಿ ಪಾಲಿಸಿದ ನಾವು 7 ಘಂಟೆಗೆ ಕಲಾಗ್ರಾಮದಲ್ಲಿ ಹಾಜರ್ !
ಟಿಕೇಟ್ ಇದ್ದ ಸ್ನೇಹಿತರಿನ್ನೂ ಪತ್ತೆ ಇರ್ಲಿಲ್ಲ , ಆದ್ರೆ ಕಲಾಗ್ರಾಮದ ಸೆಕ್ಯೂರಿಟೀ ನಾವು ಮದ್ವೆ ಮನೆಗಗೇ ಹೋಗಿದೀವೇನೋ ಅನ್ನೋತರ “ಒಳಗ್ ಹೋಗಿ ಸಾರ್, ಮಗೂನ ಆಚೆ ಈಚೆ ಬಿಡ್ಬೇಡಿ ಸಾರ್, ಹಾವುಗಳಿವೆ.ಹೋಗಿ ಅಮ್ಮ ” ಅಂತ ನಮ್ಮ ಟಿಕೇಟನ್ನೂ ಕೇಳದೆ , ಉಪಚಾರ ಹೇಳಿದ್ರೆ ನಾನು ಫುಲ್ ಖುಷ್. ಒಳಗೆ ಹೊದ್ಮೇಲೆ ದೀಪ ಹಾಕ್ತಾ ಇದ್ದೋರು “ಇದು ನಾಲ್ಕನೇ ಸ್ಟೇಜ್ ಸಾರ್ , ಇಲ್ಲೇ ನಿತ್ಕಂಡ್ ನೋಡ್ಬೇಕು, ಅದೋ ಅಲ್ಲಿ ಮೂರನೇದು ” ಅಂತ ವಿವರಣೆ ಕೊಟ್ರೆ , ಅಯ್ಯೋ ! ಸೀಟೆ ಇಲ್ಲ ಎಲ್ಲಿ ಕೂತು ಏನು ನೋಡೋದು ಅಂತ ನಾನು ಯೋಚಿಸ್ತಾ ಇದ್ದೆ.
ಒಳಗಡೆ ಅಲ್ಲೊಬ್ಬರು ಇಲ್ಲೊಬ್ಬರು ಕಂಡಾಗ, ‘ಫೆಸ್ಬುಕ್ಕು, ಅಂತರ್ಜಾಲಗಳಲ್ಲಿ ಜನ ಬರೀ ಲೈಕೊತ್ತುತಾರೆ ದುಡ್ಡುಕೊಟ್ಟು, ನೋಡೋಕೆ ಬರೋರು , ಕೊಂಡುಕೊಳ್ಳೋರು ಕಡಿಮೆ’ ಅಂತ ಪ್ರಶಾಂತ್ ಅಡೂರರ ಪ್ರಬಂಧದಲ್ಲಿ ಓದಿದ್ದು ಜ್ಞಾಪಕ ಆಯ್ತು . ಹೋಗ್ಲಿಬಿಡು , ಮಗ ಬಿಡೋತಂಕ, ನಮ್ಮನ್ನ ನಿದ್ರಾ ದೇವಿ ತನ್ನ ತೆಕ್ಕೆಗೆ ಸಂಪೂರ್ಣವಾಗಿ ಎಳೆದು ಕೊಳ್ಳೋತನಕ ನೋಡೋದು ಆಮೇಲೆ ‘ಜೈ ‘ ಅಂದ್ರಾಯ್ತು ಅಂತ ಅಲ್ಲೇ ರಸರುಷಿಯ ಕುಪ್ಪಳ್ಳಿ ಮನೆಯ ಥರ ಇದ್ದ ಮನೆಯ ಅಂದವನ್ನ ನೋಡ್ತಾ ಕೂತ್ವಿ.ಅಂತಿಮವಾಗಿ ನಮ್ಮ ಸ್ನೇಹಿತರೂ ಟಿಕೇಟೂ ಬಂದು , ನಾವು ಅಲ್ಲೇ ಇದ್ದ ಮಳಿಗೆಯಲ್ಲಿ ಸ್ವಲ್ಪ ತಿಂದು ಮೊದಲ ರಂಗ ಮಂದಿರ ‘ಕೆರೆಯಂಗಳ’ ಕ್ಕೆ ಹೋದರೆ ಅಲ್ಲಾಗಲೇ ಸೀಟ್ಗಳು ಭರ್ತಿಯಾಗುತ್ತಿದುದ ಕಂಡಿದ್ದು ಸಂತಸವಾಯ್ತು. ಈ ಮೊದಲ ರಂಗಮಂದಿರ ಇದೆ ಅಲ್ಲ , ಅದರ ಬಗ್ಗೆ ಇನ್ನೊಂದೆರಡಾದ್ರೂ ಬರಹಗಳನ್ನ ಬರೀಬಹುದು. ಕಟ್ಟಿದ ಅಡಪರು ಮತ್ತು ಕಲೆಗಾರಿಗೊಂದು ಸಲಾಮು. ಅಂತೂ ಎಲ್ಲ ಆನ್ನೌಂಸ್ಮೆಂಟ್ ಮುಗಿದು ರಂಗದ ಮೇಲೆ ನಾಲ್ಕು ಜನ ಕಿನ್ನುಡಿ ಕಥೆಗಾರರು ಕಾಣಿಸಿಕೊಂಡಾಗ ಮಧುಮಗಳು ನಮ್ಮನ್ನ ಆವರಿಕೊಳ್ಳಲಾರಂಬಿಸಿದಳು.

‘ಮಲೆಗಳಲ್ಲಿ ಮಧುಮಗಳೂsss ಪುಟ್ಟಪ್ಪನ ಕೂಸುಮಗಳೂss ‘ ಅಂತ ಹಂಸಲೇಖರ ತಂಡ ಹಿಂದೆ ಹಾಡುತ್ತಿದ್ದಾರೆ ನಮಗೆ ತೇಲಿಹೋದ ಅನುಭವ.
ಎಷ್ಟೇ ಹೇಳಿದರೂ ,ಮೊದಲ ರಂಗದ ಕಥೆ ಅರ್ಥವಾಗಲು, ಕಾದಂಬರಿ ಓದದಿದ್ದರಿಂದ ನಮಗೆ ಸ್ವಲ್ಪ ಸಮಯ ಬೇಕಾಯ್ತು. ಗುತ್ತಿ ನಾಯಿ , ನಾಯಿ ಗುತ್ತಿ ರಂಗ ಮಂಚದ ತುಂಬೆಲ್ಲಾ ಓಡಾಡುತಿದ್ದರೆ ಕಥೆಯ ಹಿಂದೆ ನಾವು ಕಷ್ಟಪಟ್ಟು ಓಡುತ್ತಿದ್ದೆವು. ಮೊನ್ನೆ ಅವಧಿಯಲ್ಲಿ ಬಂದ ಸತ್ಯನಾರಾಯಣರ ಬರಹ ಸ್ವಲ್ಪ ಸಹಾಯಕ್ಕೆ ಬಂತಾದರೂ ನಮ್ಮ ನೆನಪಿನ ಶಕ್ತಿ ಹುಲಿಕಲ್ ನೆತ್ತಿಯ ಹತ್ತಲು ಪ್ರಯಾಸ ಪಡುತ್ತಿತ್ತು. ಮಧ್ಯೆ ಮಧ್ಯೆ ಹಾಡುಗಳ ಸಂಗೀತ ಸಾಹಿತ್ಯ ಬೇರೆ ಕಥೆನಾ , ನಾನಾ ಅಂತ ಸವಾಲೊಡ್ಡುತಿತ್ತು. ನಿಮಿಷಕ್ಕೊಂದು ಹೊಸ ಪಾತ್ರ ತೆರೆಯ ಮೇಲೆ ತೆರೆದು ಕೊಳ್ಳುತ್ತಿತ್ತು . ಅಷ್ಟರಲ್ಲೇ ತೇಲಿ ಬಂತು ಒಂದು ಹಾಡು
‘ಫಲ ತುಂಬಿದ ಹೊಲಕೆ ಕೊಲ್ಲುವ ಬೇಲಿ ಕಾವಲು….ಹರss…ಹರss’. ಎಂತಾ ಸಾಲು ! ಮೊಟ್ಟ ಮೊದಲ ಬಾರಿಗೆ ಒಂದು ಪೇಪರ್ ಪೆನ್ನಿನ ಸಮೇತ ಸಿದ್ಧಳಾಗಿ ಹೋದ ನಾನು ಬರೆದುಕೊಂಡ ಮೊದಲ ಸಾಲು.
ಕೊಲ್ಲುವ ಶಕ್ತಿ ಇದ್ದವನಿಗೆ ಮಾತ್ರವಲ್ಲವೇ ಕಾಯುವ ಅರ್ಹತೆ ?

ಗುತ್ತಿ , ಹುಲಿಯ , ನಾಗಕ್ಕ , ನಾಗತ್ತೆ, ಮುಕುಂದಯ್ಯ, ಪೀಂಚಲು, ಐತ, ಬಿಸೇಕಲ್ ( ಬೈಸಿಕಲ್ ) ಸವಾರಿಯ ಪಾದ್ರಿ, ಹಾರು ಕುದುರೆ ಸವಾರ ವೆಂಕಟರಮಣ ನಾಯಕ ಇನ್ನೂ ಕೆಲವು ಪಾತ್ರಗಳು ಕೇರಿಯೇರಿಯ ಸುಂದರ ತಾಣದಲ್ಲಿ , ಚಂದದ ಹಾಡುಗಳೊಂದಿಗೆ ಚಂದ್ರ ತಾರೆಗಳ ಸಮಕ್ಷಮದಲ್ಲಿ ನಮ್ಮನ್ನ ಎದಿರುಗೊಂಡವು. ನನ್ನ ನೆನಪಲ್ಲಿ ಗಟ್ಟಿಯಾಗಿ ಉಳಿದದ್ದು ಪೀಂಚಲು.
ಎರಡು ಗಂಟೆಯ ನಂತರ ಸುಮಾರು ಹನ್ನೊಂದು ಘಂಟೆಗೆ ಇನ್ನೂ ಎರಡನೇ ರಂಗಮಂದಿರ ಬಯಲು ರಂಗಮಂದಿರಕ್ಕೆ ಹೋಗಿ ಅಂದ್ರು . ಕಲಾಗ್ರಾಮ ಮದುವೆಗೆ ಬಂದವರಿಂದ ಗಿಜಿ ಗಿಜಿ ಗುಡುತ್ತಿತ್ತು .
ತಿಮ್ಮಿ ಗುತ್ತಿಯೊಂದಿಗೆ ಹೊರಟು ಹೋಗುವುದು, ದೇವಯ್ಯಗೌಡ ಮತ್ತು ಪಾದ್ರಿಯ ಸ್ನೇಹ , ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣ , ನಾಗಕ್ಕ ವೆಂಕಟರಮಣ ಹೆಗಡೆಯ ಬಲೆಗೆ ಬೀಳುವುದು, ಮಧ್ಯೆ ತಿಮ್ಮಿಯ ತಾಯಿಯ ಮೇಲೆ ಬಂದ ದೈವಗಳ ಭರಾಟೆಯಲ್ಲಿ ಎರಡನೇ ರಂಗ ಮಂದಿರದ ಕಥೆ ಮುಗಿದ್ದದ್ದೇ ಗೊತ್ತಾಗಲಿಲ್ಲ. ಗಂಡನನ್ನು ಕಳೆದುಕೊಂಡ ನಾಗಕ್ಕ ಮತ್ತು ಗಂಡನಿದ್ದೂ ಇಲ್ಲದಂತಾದ ರಂಗಮ್ಮನ ಪಾತ್ರ ತುಂಬಾ ಹೊತ್ತು ಕಾಡಿತ್ತು.
ಇನ್ನೂ ಮೂರನೇ ರಂಗ ಬಿದಿರು ಮೆಳೆಗೆ ಹೋಗಿ ಅಂತ ಹೇಳುತ್ತಿದ್ದಹಾಗೆ ಮತ್ತೆ ಓಡಿ ಜಾಗ ಹಿಡಿದು ಕೂರುವಷ್ಟರಲ್ಲಿ ಕತೆಗಾರರು ಪ್ರತ್ಯಕ್ಷರಾದರು.
ಅಜ್ಜ ಕಲ್ಲಯ್ಯಗೌಡರು ಬೆಟ್ಟ ಹತ್ತಿ ತನ್ನೊಂದಿಗೆ ಬಂದವನಿಗೆ ಕತ್ತಿ ಮಸೆಯುವ ಕಲ್ಲು ತೋರಿಸುತ್ತಾ ಹೇಳ್ತಾರೆ ” ಇದೇ ಕಲ್ಲಲ್ಲಿ ತಿರುಪತಿಗೆ ಹೋಗಿ ತಿರುಗಿ ಬಾರದ ಮಗ ,
ನಮ್ಮ ತಾತ ಮುತ್ತಾತ ಎಲ್ಲರೂ ಕತ್ತಿ ಮಸೆದ್ರು. ಆದ್ರೆ ನಾವು ಹೋಗ್ತೀವಿ ಈ ಕಲ್ಲು ಮಾತ್ರ ಇಲ್ಲೇ ಇರ್ತದೆ “. ಜೀವಹೋದರೂ ಜೇವದ ದ್ವೇಷಕ್ಕೆ ನಿರಂತರ ಸಾಕ್ಷಿಯಾಗುವ ಕಲ್ಲುಗಳು
ಅದೆಷ್ಟು ಕಥೆ ಹೇಳುತ್ತಾವೋ ? ಚೆಲುವಯ್ಯ ಕೊಟ್ಟ ಉಂಗುರವನ್ನ ಕಾಸಿಮ್ ಸಾಬರಿಂದ ಹಿಂಪಡೆಯಲು ಹೋದ ಅಂತಕ್ಕನ ಮಗಳು ಕಾವೇರಿ ಅತ್ಯಾಚಾರಕ್ಕೊಳಗಾಗಿ ಬಾವಿಗೆ ಬೀಳುತ್ತಾಳೆ.
ಅದು ನಾಟಕ ಅಂತ ಗೊತ್ತಿದ್ದರೂ ಮೂರು ಜನ ಗಂಡಸರು ಕಾವೇರಿಯನ್ನ ಬಾಗಿಲಿನ ಹಿಂದೆ ಹೊತ್ತೊಯ್ದರೆ, ನಾ ತಲೆ ತಗ್ಗಿಸಿದ್ದೆ . ಪಕ್ಕಕ್ಕೆ ತಿರುಗಿದರೆ ಸ್ನೇಹಿತೆ ಮತ್ತು ಆಕೆಯ 16 ವರ್ಷದ ಮಗಳೂ ನನ್ನಂತೆ ಕಸಿವಿಸಿ ಪಡುತ್ತಿದರು . ಅಂತಕ್ಕ ಮಗಳ ಕಳೇಬರದ ಮುಂದೆ ಗೋಳಾಡುವ ದೃಶ್ಯ ಮತ್ತೆ ನೋಯಿಸಿತ್ತು . ನಂತರ ಬಂದದ್ದು ತಿರುಪತಿಗೆ ಹೋದ ದೊಡ್ಡಣ್ಣ ಹೆಗಡೆ ಶವವಾಗಿ ತೀರ್ಥಹಳ್ಳಿಯಿಂದ ಹಿಂತಿರುಗುತ್ತಾನೆ.

ಗಂಡ ಹೇಗಿದ್ದರೂ ಸರಿ ಅವನನ್ನ ಕರೆ ತರಬೇಕೆಂದು ಹೋಗಿ ಗಂಡನ ಕಳೆದು ಕೊಂಡ ರಂಗಮ್ಮಳೂ ಅವನ ಜೊತೆಯೆ ಇನ್ನಿಲ್ಲವಾಗುತ್ತಾಳೆ. ತಂದೆ ತಾಯಿಯರನ್ನ ಒಟ್ಟಿಗೆ ಕಳೆದು ಕೊಂಡ ಮಗು ಧರ್ಮೂವಿನ ಗೋಳಾಟ ಕಂಡು ನಾವು ಅತ್ತಿದ್ದು ಕತ್ತಲಲ್ಲಿ ಯಾರಿಗೂ ಕಾಣಲಿಲ್ಲ . ಪೊಲೀಸರಿಂದ ತಪ್ಪಿಸಿಕೊಂಡ ಗುತ್ತಿ ಹೋಗುದೆಲ್ಲಿಗೆ ಎಂಬ ಪ್ರಶ್ಣೆಯೊಂದಿಗೆ ಮುಗಿದ ಮೂರನೇ ರಂಗದ ಕಥೆ ನಿಜಕ್ಕೂ ನೋವಿನ ಹಾಡಾಗಿತ್ತು , ಕಾಡುವ ಕತೆಯಾಗಿತ್ತು. ಈ ರಂಗದಲ್ಲಿ ಕೇಳಿ ನೆನಪಲ್ಲುಳಿದ
ಸಾಲುಗಳು ‘ ಕನಸೆಲ್ಲಾ ಸುಳ್ಳೇನು…ಕಂಡದ್ದೇ ನಿಜವೇನು…..? ಮತ್ತು ‘ ದೇವರೆಂಬೋದು ಉರುಳು…’.
ಅಂತೂ ಇಂತೂ ಮೂರನೇ ರಂಗದ ಕತೆಗೂ ತೆರೆ ಬಿದ್ದು ಹೊಂಗೆಯಂಗಳಕ್ಕೆ ಹೋರಡಿ ಎಂದಾಗ ಘಂಟೆ ನಾಲ್ಕಾಗಿಯೂ , ನಾವು ನಿದ್ದೆ ಮಾಡದಿದ್ದುದು ನೆನಪಿಗೆ ಬಂತು . ನಿದ್ರೆಯೂ ಮದುಮಗಳನ್ನ ಸಿಂಗರಿಸುತ್ತಿದ್ದಳೇನೋ ?
ನಾಲ್ಕನೇ ರಂಗದಲ್ಲಿ ಪೀಂಚ್ಲು ಮತ್ತು ಐತರು ಬೇರಾದ ಗುತ್ತಿ ಮತ್ತು ತಿಮ್ಮಿಯನ್ನ ಮತ್ತೆ ಒಂದು ಮಾಡುತ್ತಾರೆ. ನಾಗಕ್ಕ ಚಿನ್ನಮ್ಮನಿಗೆ ಧೈರ್ಯತುಂಬಿ ಎರಡನೇ ಮದುವೆಯಿಂದ ಹಿಂದೆ ಸರಿದು ಮುಕುಂದಯ್ಯನೊಂದಿಗೆ ಹೋಗಲು ಸಹಾಯ ಮಾಡುತ್ತಾಳೆ. ದೇವಯ್ಯನನ್ನ ಕ್ರೈಸ್ಥ ಮತಕ್ಕೆ ಹೋಗುವುದನ್ನು ಮುಕುಂದಯ್ಯ ತಡೆಯುತ್ತಾನೆ . ಇಲ್ಲಿ ರೆವೆರೆಂಡ್ ಫಾದರ್ ಹೇಳುವ ಮಾತು ಮರೆಯಲಾಗದ್ದು “ಮತಾಂತರವಾಗದಿದ್ದರೂ ಬ್ರಾಹ್ಮಣರ ಪಾದ ತೊಳೆದ ನೀರನ್ನು ತೀರ್ಥವೆಂದು ಕುಡಿಯುವ ತನಕ ನಿಮ್ಮ ಉಧ್ಧಾರ ವಾಗಲ್ಲ. ಎಲ್ಲ ನೀರೂ ತೀರ್ಥವೇ , ಎಲ್ಲ ತೀರ್ಥವೂ ನೀರೇ ” . ಜಲ ತೀರ್ಥವಾದಾಗ ಬುವಿ ಗುಡಿಯಾದೀತು. ಚಿನ್ನಮ್ಮ , ತಿಮ್ಮಿಯರನ್ನು ಹುಲಿಕಲ್ ನೆತ್ತಿಯಲ್ಲಿ ಪೀಂಚ್ಲು ಮತ್ತು ಐತರು ಒಂದು ಮಾಡಿದಾಗ ರತ್ನ ಪಕ್ಷಿಯೊಂದು ಹಿಮ್ಮೇಳದಲ್ಲಿ ಹಾಡುತ್ತಿತ್ತು , ಮೂಡಣ ನಾಡು ಕೆಂಪಾಗಿ ಅರಳುತಿತ್ತು.
ಸುಖಾಂತ್ಯ ಎಂದು ಕೊಳ್ಳುವಷ್ಟರಲ್ಲಿ ಮಾತೆ ಆಡದೆ ಪಾತ್ರವಾದ ನಾಯಿ ಹುಲಿಯ ತುಂಗೆಯಲ್ಲಿ ಮುಳುಗಿತ್ತು , ಗುತ್ತಿಯ ಅಳಲು ಮತ್ತೆ ಮುಗಿಲು ಮುಟ್ಟಿತ್ತು. ಇಲ್ಲಿ ಯಾರೂ ಮುಖ್ಯರಲ್ಲ ಎಂಬ ಕವಿವಾಣಿ ಮತ್ತೆ ನಮ್ಮನ್ನು ಎಚ್ಚರಿಸಿತ್ತು.
ಹೊರಡಲನುವಾದ ಪ್ರೇಕ್ಷಕರನ್ನು ನಿರ್ದೇಶಕರು ತಡೆದು ನಿಮ್ಮ ಸ್ನೇಹಿತರಿಗೆ ನಾಟಕವನ್ನು ಶಿಫಾರಸುಮಾಡಿ ಅಂತ ಕೇಳಿಕೊಂಡರು . ಮದುವೆಗೆ ಮುನ್ನ ಬೀಳುವ ಅರಿಷಿಣದ ನೀರು ಮದುಮಗಳ ಸೌಂದರ್ಯ ಹೆಚ್ಚಿಸುತ್ತೆ ಅಂತಾರೆ. ಮಲ್ನೀರು ಹಾಕ್ಕೊಂಡು, ಮಲೆ ನಾಡಿಂದ,ಮಲೆಗಳಿಂದ, ಸ್ವಯಂ ರಸ ಋಷಿಯೇ ಕರೆತಂದ ಮದುಮಗಳ ಚಂದವನ್ನ ನಾವೇನು ಶಿಫಾರಸು ಮಾಡೋದು ?
 

‍ಲೇಖಕರು avadhi

April 22, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

18 ಪ್ರತಿಕ್ರಿಯೆಗಳು

  1. Satyanarayana BR

    ಕಾದಂಬರಿಯನ್ನು ಹಲವು ಬಾರಿ ಓದಿದ್ದರೂ ನಾನು ನಾಟಕ ನೋಡಿಲ್ಲ. ಆಶ್ಚರ್ಯವೆಂದರೆ ನನಗೆ ಆ ನಾಟಕ ನೋಡಬೇಕು ಅನ್ನಿಸುತ್ತಲೇ ಇಲ್ಲ! ಅಷ್ಟರಮಟ್ಟಿಗೆ ಕರತಲ ರಂಗಭೂಮಿಗೆ ಅತ್ಯುತ್ತಮ ಉದಾಹರಣೆಯಾದ ಆ ಕಾದಂಬರಿ ನನ್ನ ಮನೋರಂಗಭೂಮಿಕೆಯಲ್ಲಿ ಅಭಿನಯಿಸಲ್ಪಟ್ಟಿದೆ. ಅಭಿನಯಿಸಲ್ಪಡುತ್ತಿದೆ.
    ನಿಮ್ಮ ಲೇಖನದ ಒಂದು ಸಾಲು “ಅಜ್ಜ ಕಲ್ಲಯ್ಯಗೌಡರು ಬೆಟ್ಟ ಹತ್ತಿ ತನ್ನೊಂದಿಗೆ ಬಂದವನಿಗೆ ಕತ್ತಿ ಮಸೆಯುವ ಕಲ್ಲು ತೋರಿಸುತ್ತಾ ಹೇಳ್ತಾರೆ ” ………. ಇಲ್ಲಿ ಆ ಅಜ್ಜ ಕಲ್ಲಯ್ಯಗೌಡರು ಅಲ್ಲ; ಹಳೆಮನೆ ಸುಬ್ಬಣ್ಣಹೆಗ್ಗಡೆಯವರು.
    ನಿಮ್ಮ ಈ ಲೇಖನಕ್ಕೆ ಅಭಿನಂದನೆಗಳು ಹಾಗೂ ಧನ್ಯವಾದಗಳು

    ಪ್ರತಿಕ್ರಿಯೆ
  2. Vanamala V

    ಸ್ವರ್ಣಾ ಮೇಡಂ…
    ತುಂಬಾ ಚೆನ್ನಾಗಿ ಬರ್ದಿದೀರಿ. ಓದಿ ಖುಷಿಯಾಯ್ತು. Thank u very much.

    ಪ್ರತಿಕ್ರಿಯೆ
  3. Srikanth Manjunath

    ಸೊಗಸಾಗಿದೆ ಲೇಖನ. ಕಥೆ ವಿಶ್ವಪ್ರಸಿದ್ಧ, ಲೇಖಕ ಜಗತ್ ಪ್ರಸಿದ್ಧ. ಇಂತಹ ಒಂದು ಕಥೆಯನ್ನು ಇಡಿ ರಾತ್ರಿ ಹಲವು ರಂಗ ಮಂಚದಲ್ಲಿ ನೋಡುವ ಒಂದು ವಿಭಿನ್ನ ಅನುಭವ ಪಡೆಯಲೇಬೇಕು ಅನ್ನಿಸುವಷ್ಟರ ಮಟ್ಟಿಗೆ ನಿಮ್ಮ ಲೇಖನ ಪರಿಣಾಮಕಾರಿಯಾಗಿದೆ. ಖಂಡಿತ ಹೋಗಿ ನೋಡುವ ಆಸೆ ಚಿಗುರೊಡೆದಿದೆ.
    ಸುಂದರ ಲೇಖನ ಹಂಚಿಕೊಂಡದಡಕ್ಕೆ ಧನ್ಯವಾದಗಳು ಸ್ವರ್ಣ!

    ಪ್ರತಿಕ್ರಿಯೆ
  4. Badarinath Palavalli

    ಈ ನಾಟಕಕ್ಕೆ ಹೋಗಲೇ ಬೇಕೆಂದು ಬಹಳ ಪ್ರಯತ್ನಪಟ್ಟೆ, ಚುನಾವಣಾ ಸಮಯ ನೋಡಿ, ಹಗಲಿಲ್ಲ ರಾತ್ರಿಯಿಲ್ಲ ನ್ಯೂಸ್ ಚಾನೆಲಿನಲ್ಲಿ ಉಸಿರಾಡಲೂ ಪುರುಸೊತ್ತಿಲ್ಲ.
    ರಸ ಋಷಿಯ ಅನನ್ಯ ಕೃತಿಗೆ ತಾವು ಕೊಟ್ಟಿರುವ ಫೋಟೋಗಳನ್ನು ನೋಡಿದರೆ ಹಡಪರು ಅಮೋಘವಾಗಿ ರಂಗಸಜ್ಜಿಕೆ ಮಾಡಿದ್ದಾರೆ. ಸಂಗೀತವೂ ಖಂಡಿತ ಕರ್ಣ ರಂಜನೀಯವಾಗಿದ್ದೀತು.
    ಒಟ್ಟಾರೆ, ನಾಟಕ ಕಳೆದುಕೊಂಡ ನನಗೆ ನಿಮ್ಮ ಬರಹವೇ ಪ್ರಾತ್ಯಕ್ಷಕ.

    ಪ್ರತಿಕ್ರಿಯೆ
  5. Swarna

    ವಾರ್ತಾ ಇಲಾಖೆ ಕಛೇರಿ (ಜೆ.ಸಿ.ರೋಡ್), ರವೀಂದ್ರ ಕಲಾಕ್ಷೇತ್ರ ಮತ್ತು ನಾಟಕ ನಡೆಯುವ ಸ್ಥಳ ಕಲಾಗ್ರಾಮದಲ್ಲಿ ಟಿಕೆಟ್ ಕೊಳ್ಳ ಬಹುದು .
    ಮುಂದಿನ ವಾರದಿಂದ ಒಂದು ಬೋನಸ್: ನಾಟಕದ ಎಲ್ಲಾ ಹಾಡುಗಳನ್ನೂ ಸಿ.ಡಿ.ಯಲ್ಲಿ ಕೊಡುತ್ತಾರಂತೆ.
    ತಿದ್ದಿದ್ದಕ್ಕೆ , ಧನ್ಯವಾದಗಳು ಸತ್ಯನಾರಾಯಣ ಸಾರ್

    ಪ್ರತಿಕ್ರಿಯೆ
  6. Anita.Ramesh

    Thanks sir nanu ennu manegalalli madumagalu odilla. nivu kotta vivarane enda oduva ase bandide.. danyavadagalu….

    ಪ್ರತಿಕ್ರಿಯೆ
  7. santhosh

    i went to drama and it was really inspiring after looking at the efforts put into make it reality..
    the director of the drama announced that they are going release CD of 46 songs of drama, and we are waiting for the CD so let us know if it released.

    ಪ್ರತಿಕ್ರಿಯೆ
  8. santhosh

    ಇಲ್ಲಿ ಯಾರೂ ಮುಖ್ಯರಲ್ಲ;
    ಯಾರೂ ಅಮುಖ್ಯರಲ್ಲ;
    ಯಾವುದೂ ಯಃಕಶ್ಚಿತವಲ್ಲ!
    ಇಲ್ಲಿ ಯಾವುದಕ್ಕೂ ಮೊದಲಿಲ್ಲ;
    ಯಾವುದಕ್ಕೂ ತುದಿಯಿಲ್ಲ;
    ಯಾವುದೂ ಎಲ್ಲಿಯೂ ನಿಲ್ಲುವುದೂ ಇಲ್ಲ;
    ಕೊನೆ ಮುಟ್ಟುವುದೂ ಇಲ್ಲ!
    ಇಲ್ಲಿ ಅವಸರವೂ ಸಾವಧಾನದ ಬೆನ್ನೇರಿದೆ!
    ಇಲ್ಲಿ ಎಲ್ಲಕ್ಕೂ ಇದೆ ಅರ್ಥ;
    ಯಾವುದೂ ಅಲ್ಲ ವ್ಯರ್ಥ;
    ನೀರೆಲ್ಲ ಊ ತೀರ್ಥ!
    i need this audio please if any has mail me @ : [email protected]

    ಪ್ರತಿಕ್ರಿಯೆ
    • G

      kannada and culture department is coming out with a audio CD which contains all the songs of the play

      ಪ್ರತಿಕ್ರಿಯೆ
  9. malathi S

    ವಾಹ್ ಸ್ವರ್ಣ! ಬರಹದಲ್ಲಿ ಮದುಮಗಳನ್ನು ಸೆರೆ ಹಿಡಿಯುವ ಯತ್ನ ನಿಜಕ್ಕೂ ಸುಂದರವಾಗಿ ಮೂಡಿ ಬಂದಿದೆ. ನಾನು ಓದಿ ತುಂಬ ಮೆಚ್ಚಿಕೊಂಡ ಪುಸ್ತಕ ‘ಮಲೆಗಳಲ್ಲಿ ಮದುಮಗಳು’ (ಮತ್ತೊಂದು ಕಾನೂರು ಸುಬ್ಬಮ್ಮ ಹೆಗ್ಗಡತಿ). ಇದನ್ನು ಓದುವಾಗ ನಾವು ಕೊಪ್ಪ (ಶೃಂಗೇರಿ ಬಳಿ) ದಲ್ಲಿದ್ದೆವು. ಮುಂಬೈನಿಂದ ಬಂದ ನಾನು ಕೊಪ್ಪದಲ್ಲಿದ್ದು ನಿಧಾನಕ್ಕೆ ಅಕ್ಷರಕ್ಕೆ ಅಕ್ಷರ ಜೋಡಿಸಿ, ಗೊತ್ತಾಗದ ಪದಕ್ಕೆ ರಾಯರಿಂದ ಅರ್ಥ ಹೇಳಿಸಿಕೊಳ್ಳುತ್ತ ಓದಿದ್ದು ಒಂದು ರೋಮಾಂಚಕಾರಿ ಅನುಭವ. ಈ ಅನುಭವಕ್ಕೆ ಧಕ್ಕೆಯಾಗಬಹುದೇನೋ ಅಂತ ನಾನು ಈ ನಾಟಕವನ್ನು ನೋಡಲು ಹಿಂಜರಿಯುತ್ತಿದ್ದೇನೆ. ನಾವು ಆಫಿಸ್ ನವರೆಲ್ಲ ಸೇರಿ ಹೋಗ್ತಾ ಇದ್ದೀವಿ. ನಾನು ಅರೆ ಮನಸ್ಸಿನಿಂದ ಒಪ್ಪಿಗೆ ನೀಡಿದ್ದೆ. ಆದರೆ ನಿಮ್ಮ ಬರಹ ಓದಿ,ಈಗ ಈ ಅನುಭವಕ್ಕೆ ನಾನೂ ಕಾತುರಳಾಗಿದ್ದೇನೆ. (ರವೀಂದ್ರ ಕಲಾಕ್ಷೇತ್ರದ ಹೊರಗೆ ಮೊನ್ನೆ ಮ.ಮ ಪೋಸ್ಟರ್ ನೋಡಿದೆ. ತುಂಬ ಚೆನ್ನಾಗಿದೆ ಪೋಸ್ಟರ್)
    ಥ್ಯಾಂಕ್ಯು
    @ ಬದರಿ ಭೈಯಾ : ಮೇ 30 ತನಕ ಇದೆ ಈ ನಾಟಕ
    🙂
    ಮಾಲತಿ ಎಸ್.

    ಪ್ರತಿಕ್ರಿಯೆ
  10. Deviprasad M

    ಸ್ವರ್ಣಾ ಮೇಡಂ…
    ತುಂಬಾ ಚೆನ್ನಾಗಿ ಬರ್ದಿದೀರಿ. ಓದಿ ಖುಷಿಯಾಯ್ತು. Thank u very much.
    –Copied

    ಪ್ರತಿಕ್ರಿಯೆ
  11. Gopaal Wajapeyi

    ಎಷ್ಟು ಚೆನ್ನಾಗಿ ಬರೆದಿದ್ದೀರಿ ಸ್ವರ್ಣಾ ಮೇಡಂ…! ನೋಡುವ ಆಸೆಯನ್ನು ನೂರ್ಮಡಿಗೊಳಿಸಿದ್ದೀರಿ.
    ಹೋಗುವ ಆಸೆ ಬೆಟ್ಟದಷ್ಟಿದೆ. ಆದರೆ ಒಂದು ‘ಐತಿಹಾಸಿಕ ಪ್ರಯೋಗ’ವನ್ನು ನೋಡಲಾರದ ಅಸಹಾಯಕತೆಗೆ ನನ್ನನ್ನು ದೂಡಿದೆ ನನ್ನ ಸೂಕ್ಷ್ಮ ಪ್ರಕೃತಿ. ಆ ಸಂಗೀತ, ಆ ದೃಶ್ಯಕಾವ್ಯ, ಆ ದಿರಿಸಿನ ಸೊಬಗು, ಆ ಅಭಿನಯ ಎಲ್ಲವನ್ನೂ ನಿಮ್ಮಂಥವರ ಅನುಭವದ ಮೂಲಕವೇ ನಾನು ಸವಿಯಬೆಕಾಗಿದೆ.

    ಪ್ರತಿಕ್ರಿಯೆ
  12. malegalallimadhumagalu

    thank you very much and thank you avadhi, for this article.director of the play asked to message three friends about the play , now after reading the blog and its reactions it seems it as reached and encouraged even more people from your article.
    some people who have read the novel do not have to fear about loosing their imagery, we have not tried or made efforts to recreate the novel hear, this is a performance and an art form by itself. in any way we are not trying to illustrate the novel with physical things as set and props and actors. so people are most welcome to watch the play and give us the feed back about their imagery of novel and the performance too. thanks all for the comments too.

    ಪ್ರತಿಕ್ರಿಯೆ
  13. Swarna

    ಬರೆಸಿದ ಗೆಳತಿಗೂ, ಪ್ರಕಟಿಸಿದ ಅವಧಿಗೂ, ಓದಿ ಇಷ್ಟ ಪಟ್ಟ ತಮ್ಮೆಲ್ಲರಿಗೂ ವಂದನೆಗಳು .
    ಮದುಮಗಳನ್ನ ಮಿಸ್ ಮಾಡ್ಬೇಡಿ

    ಪ್ರತಿಕ್ರಿಯೆ
  14. sripathi manjanabailu

    Swarna madam,
    Very good article, you have spread the essence of the play t0 the readers. It will give a boost them, to run towards the ‘Booking Counter’.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: