ಮಂಡ್ಯ ರಮೇಶ್ ಕಾಲಂ : ’ಮುಗುಳ್ನಗೆ ಉಕ್ಕಿಸುವ ನಲ್ಲೆಯರನ್ನು ನೆನೆಯದೇ ಇರಲಾರೆ…’

‘ಸ್ತ್ರೀ’ ಅಂದರೆ ಅಷ್ಟ ಸಾಕೇ?

ಹೆಣ್ಣು ಹೆಣ್ಣೆಂದು ಬೀಳುಗಳೆವರು,
ಕಣ್ಣು ಕಾಣದ ಗಾವಿಲರು!
ಸಂಚಿ ಹೊನ್ನಮ್ಮನಿಂದ ‘ಕುರುಡು ಮುಂಡೇವು’ ಅಂತಾ ಶತಮಾನಗಳಷ್ಟು ಹಿಂದೆಯೇ
ಉಗಿಸಿಕೊಂಡ ಗಂಡು ಜಾತಿ ನನ್ನದು!
ಇಷ್ಟೆಲ್ಲಾ ವರ್ಷಗಳ ನಂತರ ‘ವ್ಯಕ್ತಿ ನಿರ್ಮಾಣ’ಕ್ಕೆ ನನಗೆ ನೆನಪಾಗುವುದು ಮಾತ್ರ ಒಬ್ಬಳಲ್ಲ! ಹತ್ತಾರು ಹೆಣ್ಣುಗಳು!
ಆರಿಸಿದರೇ ಕರುಳಿಗೆ ಅರ್ಥವಾಗುವುದು ಒಂದು ಮೂರು ಮಂದಿ. ಮುಖ್ಯವಾಗಿ ನನ್ನಜ್ಜಿ ಸೀತಮ್ಮ! ಬ್ಲಾಕ್ ಅಂಡ್ ವೈಟ್ ಫೋಟೋದಲ್ಲಿ ಗಮನಿಸಿ ನೋಡಿದರೆ ವಯಸ್ಸಿನಲ್ಲಿ ಸುಂದರಿಯಾಗಿರಬಹುದೇನೋ ಅಂತಾ ಅನುಮಾನ ಮೂಡಬಹುದು. ನನಗೆ ಅಜ್ಜಿ ಅಂತಾಗುವ ವೇಳೆಗೆ ತೀರಾ ಸಾಧಾರಣ ರೂಪಿನ ಹೆಂಗಸಾಕೆ – ನನ್ನಜ್ಜನ ಎರಡನೇ ಪತ್ನಿಯಾಗಿ ಕಾಲಿಟ್ಟು, ಈಕೆಗೆ ನಾಲ್ಕಾರು ಮಕ್ಕಳಾಗುವ ಹೊತ್ತಿಗೆ ಗಂಡನನ್ನು ಕಳೆದುಕೊಂಡು ಒಟ್ಟು ಹನ್ನೆರಡು ಮಕ್ಕಳನ್ನೂ ತನ್ನವರೆಂದೇ ಭಾವಿಸಿ ಬೆಳೆಸಿದ ಅಂತಃಕರಣರೂಪಿ ನನ್ನಜ್ಜಿ. ತಾತ ಹೋದಾಗ ಮನೆ ಮಕ್ಕಳಿಗೆ ದಿಕ್ಕಾದ ಅಜ್ಜಿ ಮಗನೊಬ್ಬ ಮಾಯವಾಗಿದ್ದಾಗ, ಮರಳಿ ಮನೆಗೆ ಬಂದಾಗ ರಾಷ್ಟ್ರಪತಿಗೆ ನೇರ ಪತ್ರ ಬರೆದು ಆಙ್ಞೆ ಹೊರಡಿಸಿ ಮಗನಿಗೆ ಕೆಲಸ ಕೊಡಿಸಿದಾಕೆ! ಇನ್ನೆಂಥಾ ಗುಂಡಿಗೆ – ಚಾಣಾಕ್ಷತೆ ಇರಬೇಕು.
ಓದಲಿ ನಾನು ಅಂತ ನನ್ನಪ್ಪ ನನ್ನ ಅಜ್ಜಿಯ ಬಳಿ ಎಸೆದು ಹೋಗಿದ್ದರು, ಶಾಲೆಗೆ ಬುತ್ತಿ ತರುತ್ತಿದ್ದ ಅಜ್ಜಿ ದೂರದಲ್ಲಿ ಕುಳ್ಳಿರಿಸಿಕೊಳ್ಳುತ್ತಿದ್ದಳು, ಊಟದ ಡಬ್ಬಿಯಲ್ಲೆರಡು ಗ್ಲೂಕೋಸ್ ಬಿಸ್ಕತ್ತು! ಎಲ್ಲೂ ಹೇಳುವ ಹಾಗಿಲ್ಲ! ಪ್ರತಿಷ್ಠೆ. ಅಜ್ಜಿಯ ಪೇಲವ ಮುಖದ ಹಿಂದಿನ ಮೃದು ಮನಸ್ಸಿಗೆ ಹಸಿವೆ ಕರಗಿದ ದಿನಗಳು ನೆನಪಿದೆ. ನನ್ನ ಗಾಂಧಿ ಪಾತ್ರಕ್ಕೆ ‘ಸೋಪ್ ಬಾಕ್ಸ್’ ಪ್ರೈಸ್ ಸಿಕ್ಕಿದ್ದನ್ನು ಎಂದೂ ಬಳಸದೆ ದೇವರ ಗೂಡಿನಲ್ಲಿ ಇಟ್ಟು ಕಾಯ್ದುಕೊಂಡಿದ್ದಳು. ನಾನು ಸಿನಿಮಾ ಸ್ಟಾರ್ ಆದಾಗ ಮೊದಲ ಚಿತ್ರಕ್ಕೆ ಕರೆದೊಯ್ದಾಗ ‘ಚೆನ್ನಾಗಿ ಮಾಡುತ್ತೆ ಮುಂಡೇದು!’ ಅಂತಾ ಇದ್ದ ನಾಲ್ಕಾರು ಹಲ್ಲು ತೋರಿಸಿ ನಕ್ಕಿದ್ದಳು ಎಲ್ಲ ಮಕ್ಕಳಿಗೂ ಮದುವೆ ಮಾಡಿ ಮೊಮ್ಮಕ್ಕಳ ಮದುವೆಯನ್ನೂ ಕಂಡು ಕಡೆಗಾಲದಲ್ಲಿ ಕಾಮೆಂಟ್ರಿ ಕೇಳುತ್ತಾ, ಟಿ.ವಿ.ಯಲ್ಲಿ ಕ್ರಿಕೆಟ್ ನೋಡಿ ಕಾಮೆಂಟ್ ಮಾಡುತ್ತಾ ತುಂಬು ಬದುಕು ಸಾಗಿಸಿ ಸದ್ದಿಲ್ಲದೆ ನಡೆದುಬಿಟ್ಟಳು.
ನನ್ನಕ್ಕ ಕಾಲೇಜಿನ ‘ಡಿಬೇಟ್ ಸ್ಟಾರ್’, ಚಂದಗಾತಿ, ಜೀವನೋತ್ಸಾಹದ ಪ್ರತಿರೂಪ ಅದು! ನಾನು ಹೇಳದೆ – ಕೇಳದೆ ನಾಟಕ ಡಿಪ್ಲೊಮಾಗೆ ನೀನಾಸಮ್ಗೆ ಓಡಿ ಹೋದಾಗ ತಪ್ಪದೇ ತಿಂಗಳಿಗೈವತ್ತು ರೂಪಾಯಿ ಕಳಿಸಿ ನಾನು ಏನಾದರೂ ಆಗಲಿ ಅಂತ ಅಲವತ್ತುಕೊಂಡವಳು ಇವತ್ತಿಗೂ ಜೀವನ ಇರುವುದೇ ಸಂಬ್ರಮ ಪಡಲಿಕ್ಕೆ ಅಂತಾ ನಂಬಿಕೊಂಡವಳು. ಹಬ್ಬ-ಹರಿದಿನ- ಉಡುಗೊರೆ-ಊಟ-ಗೊಜ್ಜು-ಮನೆ-ಆಸ್ತಿ-ಟಿ.ವಿ.-ಬಟ್ಟೆ-ಒಡವೆ-ಗೆಳೆತನಕ್ಕಾಗಿ ಸಡಗರಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟವಳು. ದುಡಿದ ಅನೇಕ ಮಂದಿಗೆ ಸಂತೋಷಪಡಲು ಗೊತ್ತಿರುವುದಿಲ್ಲ, ಈಕೆ ಹೊರತು. ‘ಬದುಕಿನ ಪ್ರತಿ ಕ್ಷಣವೂ ಸಂತಸ ಭಾವ. ನಿನ್ನೊಳಗೆ ಇದೇ ಬದುಕಿಗೆ ಬೇಕಾದ್ದು; ಹುಮ್ಮಸ್ಸು!’ ಅಂತಾ ಹೇಳಿಕೊಟ್ಟವಳು ನನ್ನಕ್ಕ. ಮಮತೆಯ ಮೂರ್ತರೂಪ. ಈ ಕ್ಷಣಕ್ಕೂ ಮೈಸೂರಿನ ಗಂಗೋತ್ರಿ ಅಂಚೆ ಕಛೇರಿಯಲ್ಲಿ ಅರಳಿದ ಮುಖವೊಂದು ಆವಿರ್ಬವಿಸಿದೆಯೆಂದರೇ ಅದು ನನ್ನಕ್ಕ ‘ವಲ್ಲಿ’ಯದೇ!
ನನ್ನಜ್ಜಿಯ ದೂರದೃಷ್ಟಿ – ನನ್ನಕ್ಕನ ಸಂಬ್ರಮ – ನನ್ನಾಕೆಯ ಮಲೆನಾಡ ಮುಗ್ಧತೆ, ನನ್ನಮ್ಮನ ಜಿಗುಟುತನ – ನನ್ನತ್ತಿಗೆಯ ಆದರತೆ ಈ ಭಾವಗಳೆಲ್ಲಾ ಮೇಳೈಸಿಕೊಂಡಿರುವ ನನ್ನ ಬದುಕಿನ ‘ದಿಶೆ’ ನನ್ನ ಮಗಳು, ಬದಲಾಗುತ್ತಲೇ ಹೋದ ನನ್ನ ಜೀವನ ಗಾಲಿಗೆ ಬಣ್ಣ ಬಳಿದಾಕೆ.
ವಿಚಿತ್ರ ನೋಡಿ! ಶಾಸ್ತ್ರೀಯ ಸಂಗೀತಕ್ಕೆ ಸೇರಿಸಿದೆ – ನನ್ನ ಹಿಂದೇ ಓಡಿಬಂದಳು, ನಾಟ್ಯಕ್ಕೆ ಅವಳು ಮನ ಸೋಲಲಿಲ್ಲ. ನನ್ನ ‘ನಟನ’ ತಂಡದ ಜೊತೆಗೆ ಇದ್ದಳು ನಟಿಸಲು ಉತ್ಸಾಹವೇನೂ ತೋರಲಿಲ್ಲ-ಆದರೆ, ಆಕೆ ಅದ್ಭುತವಾಗಿ ಹಾಡುತ್ತಾಳೆ, ನರ್ತಿಸುತ್ತಾಳೆ, ನಟಿಸುತ್ತಾಳೆ, ಸೊಗಸಾಗಿ ಬರೆಯಬಲ್ಲಳು, ಎಲ್ಲಾ ಮೀರಿ ಸಹೃದಯಿ. ನನ್ನ ಗೊಂದಲಗೊಂಡ ಸ್ಥಿತಿಗೆ ಮೌನವಾಗಿ ಮದ್ದು ನೀಡುವ ಗುಣ ನನ್ನ ವ್ಯಕ್ತಿತ್ವ ರೂಪುಗೊಳ್ಳಲು ಪ್ರಮುಖ ಕಾರಣಗಳಾಗಿವೆ.
ನಾನು ಹೀಗಾಗಲು ಇವರೊಂದಿಗೆ ನಾನು ಹೆಸರಿಸಲಾಗದ (ಹೇಳಿದರೆ ಒದೆ ಬೀಳುವ ಬಯವಿರುವುದರಿಂದ!) ಅನೇಕ ಜೀವಗಳೂ ಕಾರಣವಾಗಿದೆ. ‘ನಿನಗಿಂತ ಮಾದಕ ಇನ್ನಿಲ್ಲ ಕಣೋ!’ ಅಂತಂದು ನನ್ನ ರೊಚ್ಚಿಗೆಬ್ಬಿಸಿದ ಅನೇಕ ಮನದನ್ನೆಯರೂ ನನ್ನಲ್ಲಿ ಸ್ಪೂರ್ತಿ ಉಕ್ಕಿಸಿ ನನ್ನ ಬದುಕನ್ನು ಸಂಪದ್ಭರಿತ ಮಾಡಿದ್ದಾರೆ.
ನೀರವದ ರಾತ್ರಿಗಳಲ್ಲಿ, ಬಿರು ಬೇಸಿಗೆಯ ಮುಂಜಾವುಗಳಲ್ಲಿ ತಮ್ಮ ನೆನಪುಗಳಿಂದಲೇ ಮನದೊಡಲಲ್ಲಿ ಮುಗುಳ್ನಗೆ ಉಕ್ಕಿಸುವ ‘ನಲ್ಲೆಯರನ್ನು ನೆನೆಯದೇ ಇರಲಾರೆ!

‍ಲೇಖಕರು avadhi

April 22, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

8 ಪ್ರತಿಕ್ರಿಯೆಗಳು

  1. mandyaramesh

    ‘VIJAJA NEXT’ “nimma jeevanadalli hennugala paatra enuu?” anta keliddaru ….aaga barediddu!

    ಪ್ರತಿಕ್ರಿಯೆ
  2. pravara

    ರಮೇಶಣ್ಣ… ನಿಮ್ಮ ನಟನೆಯಷ್ಟೇ ಸುಂದರ ಬರವಣಿಗೆ

    ಪ್ರತಿಕ್ರಿಯೆ
  3. deepaG

    ಒಬ್ಬ ನಟ ಬರಹಗಾರನಾದರೆ ಅಕ್ಷರಗಳು ಬಣ್ಣ ಬಳಿದುಕೊಂಡು ಕುಣಿದಂತೆ ಭಾಸವಾಗುತ್ತದೆ. ರಮೇಶ ಸರ್ ಅತ್ಯದ್ಬುತ ಮಹಿಳಾ ಮಣಿಗಳ ಮದ್ಯ ಬೆಳೆದಿದ್ದರಿಂದಲೋ ಏನೋ ನೀವು ಇಷ್ಟೊಂದು ಹೆಂಗಳೆಯರ ರಸಿಕ ಕಣ್ಮಣಿಯಾಗಿದ್ದೀರಿ.. ನಿಮ್ಮ ಬರಹ ಮತ್ತೆ ಮತ್ತೆ ಓದಿಸಿಕೊಳ್ಳುವಂತಿದೆ.

    ಪ್ರತಿಕ್ರಿಯೆ
  4. deepaG

    ನಿಮ್ಮ ಅಕ್ಷರಗಳು ನಿಮ್ಮಂತೆ ಬಣ್ಣ ಹಚ್ಚಿಕೊಂಡು ಪರದೆಯ ಮೇಲೆ ಮಿಂಚಿದಂತೆ ಗೋಚರಿಸುತ್ತಿವೆ.. ಸದಾ ನಗುವನ್ನೇ ಹೊಮ್ಮಿಸುವ ನಿಮ್ಮ ಮನ ಇಂತಹ ಹೆಂಗಳೆಯರ ಮನದನ್ನೆಯರ ಮನ ಗೆದ್ದದ್ದರಿಂದಲೇನೋ ನೀವು ಇಷ್ಟೊಂದು ಪರಿಪಕ್ವವಗಲು ಸದ್ಯವಾದದ್ದು… ನಿಮ್ಮ ಎಲ್ಲ ನಲ್ಲೆಯರು ಈ ಬರಹ ಓದಿ ಮುಗುಳ್ಣಗಲಿ ಎಂದು ಆಶಿಸುವೆ..

    ಪ್ರತಿಕ್ರಿಯೆ
  5. Gopaal Wajapeyi

    ಆಹಾ ರಮೇಶ್…! ಏನು ಹೇಳಲಿ ನಿಮ್ಮ ಬರವಣಿಗೆಯ ಶೈಲಿಗೆ?! ಸಿಂಪ್ಲಿ ಸೂಪರ್ಬ್…!

    ಪ್ರತಿಕ್ರಿಯೆ
  6. Triveni

    ಮಂಡ್ಯ ರಮೇಶ್ ಅಂದ್ರೆ ನನಗೆ ನೆನಪಾಗೋದು ‘ನಾಗಮಂಡಲ’ದಲ್ಲಿ ಅವರ ಅಭಿನಯ! ‘ರಂಗೀಲಾ…ರೇ’ಯ ರಂಗು ಮೊದಲ ಅಂಕಣದಲ್ಲಿಯೇ ಮನ ಸೆಳೆಯುತ್ತಿದೆ! 🙂

    ಪ್ರತಿಕ್ರಿಯೆ
  7. Ambekar Pramod

    Mitra,
    Shivarudrappa navar Akashada baninannli, chandratare tottilalli, belaknittu toogidake nianage bere hesrau beke Ninage stree andaraste sake sake?
    Ninna rangilare shubahavagali

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: