ಸ್ಫೂರ್ತಿ ಹರವೂಗೌಡ ಅರಳಿಸಿದ ’ಹುಣಸೆ ಹೂ’ – ವಿದ್ಯಾ ರಾವ್

ವಿದ್ಯಾ ರಾವ್

“ಯಾವುದೋ ಯುಗದಲ್ಲಿ, ಯಾರದೋ ಅಶೋಕ ವನದಲ್ಲಿ, ಯಾರಿಗಾಗಿ ಶೋಕಿಸಿದಳು ಸೀತೆ?” ಎಂಬ ಮನಕಲಕುವ ಸಾಲುಗಳನ್ನು ಹೊತ್ತ “ಅಪೂರ್ಣ ರಘುನಂದನ” ಮುಂತಾದ ತೀವ್ರ ಭಾವಸ್ಪರ್ಶಿ, ಸಂವೇದನೆಗಳನ್ನು ಪುಟಪುಟಗಳಲ್ಲೂ ಹೊತ್ತಿರುವ ಕವನಗಳ ಸಂಕಲನ, ಸ್ಫೂರ್ತಿ ಹರವೂ ಗೌಡರ “ಹುಣಿಸೆ ಹೂ”.
ಈ ಸಂಕಲನದ ಬಹುಪಾಲು ಕವಿತೆಗಳೆಲ್ಲ ಸ್ತ್ರೀತ್ವದ ಭಾವ ಪಯಣ. ಹರೆಯದ ಹುಚ್ಚು ಪ್ರೀತಿ, ನೋವು, ವಿರಹಗಳು ಬಂಡಾಯವಾಗುತ್ತಲೇ ಸ್ವಗತಗಳೊಳಹೊಕ್ಕು ತನ್ಮೂಲಕ ಆತ್ಮಾವಲೋಕನಕ್ಕೂ ಇಳಿಯುತ್ತವೆ. ಕಾಡು ದೊರೆ ಹೆಣದ ಮುಂದೆ ಒಂದಿಷ್ಟು/ಹಕ್ಕಿ,ಕಪ್ಪೆ ತಿಂದ ಬೆಕ್ಕು/ಕಲಕದು ಕೆದಕದು/ವಾಸ್ತವ ಇನ್ನೂ ತೆರೆದುಕೊಳ್ಳುತ್ತಲೇ ಇದೆ/ಇತಿಹಾಸಕ್ಕೊಂದು ಕ್ಷಮೆ ಬೇಡುತ್ತಾ/ ಖಾಲಿ ಜವಾಬ್ದಾರ ಮುಂತಾದ ಕವನಗಳು ಇಂಥದ್ದೇ ಬಂಡಾಯದ ಅಭಿವ್ಯಕ್ತಿಗಳು. ಇದರಲ್ಲಿ ಸ್ತ್ರೀಯ ಭಾವನಾತ್ಮಕತೆ, ಪುರುಷನ ವೈರುಧ್ಯ, ಸಂಬಂಧಗಳ ಕ್ಷಣಿಕತೆ, ಶಾಶ್ವತವಾಗಿ ಅನುಭವಿಸಬೇಕಾದ ಮಡುಗಟ್ಟಿದ ನೋವು, ಮರೆಯಲಾರದ ನೆನಪುಗಳೂ ಒಂದಕ್ಕೊಂದು ಬೆಸೆದು ವ್ಯಂಗ್ಯದಲ್ಲೂ, ಹತಾಶೆಯಲ್ಲೂ ಕೊನೆಗೊಳ್ಳುತ್ತವೆ. “ನೀನು ಪುರುಷ” ಕವನವಂತೂ ಬಂಡಾಯಕ್ಕೊಂದು ಮಾದರಿಯ ಕವನವೆಂದರೂ ತಪ್ಪಾಗಲಾರದು.

“ಗೋರಿಗಳ ಮೇಲಿನ ಕಾಂಕ್ರೀಟಿನಂತಾಗಿದ್ದ, ಯಾವ ಮರ, ಹೂ, ಗಿಡ ಬಳ್ಳಿಗಳನ್ನರಸಿ ನಗಿಸಲಾರ..””ಭಾವಗಳ ಕೊಲ್ಲಲ್ಪಟ್ಟ..ಸಂಬಂಧವಿಟ್ಟುಕೊಂಡ ಹೆಂಗಸನ್ನಾದರೂ ಕೇಳಬೇಕಿತ್ತು..ಪಾಪಗಳು ಅನ್ನುವುದಾದರೂ ಏನಿರಬಹುದು” (ಕಾಡು ದೊರೆ ಹೆಣದ ಮುಂದೆ) ಸಾಲುಗಳಲ್ಲಿ ಸಾಮಾಜಿಕ ಚೌಕಟ್ಟಿನಿಂದ ಹೊರಗೆ ನಿಂತ ಸಂಬಂಧಗಳಿಂದ ಹೇರಲ್ಪಡುವ ನೋವು, ದಕ್ಕದ ಪ್ರೀತಿ ಮತ್ತು ಪಾಪವೆನ್ನುವ ಪರಿಕಲ್ಪನೆಯನ್ನು ಅರ್ಥೈಸಿಕೊಳ್ಳುವ ಹತಾಶ ಪ್ರಯತ್ನಗಳಿವೆ. ಮಡುಗಟ್ಟಿದ ಕಡುಕಪ್ಪು ಆಕ್ರೋಶವಿದೆ.
“ಹೊಲಿದುಕೊಂಡ ಎಷ್ಟೋ ಸಂಬಂಧಗಳ ಹೊಲಿಗೆಯ ಹಿಂದಿನ ನೋವು” ಅಂದುಬಿಡುತ್ತಾರೆ ಸ್ಫೂರ್ತಿ ಒಮ್ಮೆಗೇ. “ಪ್ರತಿ ಸಂಬಂಧಗಳು ಸೂಜಿ ಚುಚ್ಚಿದಂತೆ” ಅನ್ನುತ್ತಲೇ “ನಿರೀಕ್ಷೆಗಳಿಗೆ ವ್ಯತಿರಿಕ್ತವಾಗಿ ವರ್ತಿಸುವುದು ಪುರುಷ ಪ್ರಭುತ್ವ” ಎಂದು ಹೇಳಿ ಸಂಬಂಧಗಳ ಒಳಗಿನ ತಲ್ಲಣಗಳಿಗೆ ತರ್ಕದ ಆಯಾಮವನ್ನೂ ಕೊಟ್ಟು ಓದುಗರ ಬುದ್ಧಿಗೆ ಕಸರತ್ತಿನ ಅವಕಾಶವನ್ನು ಕಲ್ಪಿಸಿದ್ದಾರೆ.
ನೋವು, ಸಿಟ್ಟುಗಳೂ ಶಾಶ್ವತವಲ್ಲ. ವ್ಯಂಗ್ಯ ಸಿಟ್ಟಿನ ಕಲಾತ್ಮಕ ಅಭಿವ್ಯಕ್ತಿಯಾಗಿಬಿಡುತ್ತದೆ ಇಲ್ಲಿ. ಆದರೂ ಕವನದ ಜಾಡು, ಭಾವಗಳ ಹರಿವು ಅಲ್ಲಿಯೇ ನಿಲ್ಲುವುದಿಲ್ಲ. ಸ್ಫೂರ್ತಿಯವರ ಕವನಗಳು ಒಂದೇ ಲಯದಲ್ಲಿ ಹರಿಯುವ ನದಿಯಲ್ಲ. ಇಲ್ಲಿ ಭಾವತೀವ್ರತೆಯ ರಭಸವಿದೆ. ಎಲ್ಲೋ ನಡುಬಂಡೆಗೆ ತಾಕಿ, ಸುಳಿಯಾಗಿ ತನ್ನೊಳಗೆ ತಾನೇ ಕರಗಿ, ಆತ್ಮಾವಲೋಕನದಲ್ಲಿಳಿದು ತುಸು ಹೊತ್ತು ಅಲ್ಲೇ ವಿರಮಿಸಿ ವೇಗಕ್ಕೆ ತಡೆಹಾಕುವ ಕವಿತೆಗಳೂ ಇವೆ.” ನನಗೂ ಅವಲಂಬನೆ ಬೇಕಿತ್ತು, ಬರುವುದೆಲ್ಲವ ತಬ್ಬಬೇಕಾಯ್ತು, ಹೂವೋ, ಮುಳ್ಳೋ, ಎದೆ ನೋವಿಗೆ ಗೊತ್ತು” ಎನ್ನುವ ಪ್ರಾಮಾಣಿಕ ಅವಲೋಕನವೊಂದು ಹೃದಯದಾಳಕ್ಕೆ ಇಳಿದು ನಿಟ್ಟುಸಿರೊಂದನ್ನು ತರುತ್ತದೆಂದರೆ ಉತ್ಪ್ರೇಕ್ಷೆಯಲ್ಲ.
ಬರುವುದಿಲ್ಲ ಕಾಯ್ದುಬಿಡು/ ಮತ್ತೆ ನಿನ್ನನ್ನೇ ಪ್ರೀತಿಸುತ್ತಿದ್ದೇನೆ ಹಳೇ ಕಡಲೇ/ಖಾಲಿಯಾಗಲಿ ಒಮ್ಮೆಯಾದರೂ ಮುಂತಾದ ಪದ್ಯಗಳಲ್ಲಿ ಕಳೆದ ಬದುಕಿನ ಲಯವೊಂದನ್ನು ಪುನ: ಕಂಡುಕೊಳ್ಳುವ, ಮತ್ತೆ ಹಳೆಯದರ ತೆಕ್ಕೆಗೆ ಮರಳಿ ಉಸಿರಾಡಲು ಬಯಸುವ, ಕ್ಷೀಣವೆನಿಸಿದರೂ ಆಶಾವಾದವೊಂದರ ಎಳೆಕಂಡುಕೊಳ್ಳುವತ್ತ ಹೊರಡುವ ಸಕಾರಾತ್ಮಕತೆಗಳು ಕಾಣ ಸಿಗುತ್ತವೆ. ಅಲ್ಲಿಂದ ಸ್ವಲ್ಪ ಮುಂದೆ ಸಾಗಿ ದಿವ್ಯ ಪ್ರೇಮ, ಪ್ರೇಮ ಸಂಭ್ರಮ, ಶೃಂಗಾರದ ಕನವರಿಕೆಗಳಂತಿರುವ ಪದ್ಯಗಳೂ ನಮ್ಮ ಗಮನ ಸೆಳೆಯುತ್ತವೆ. “ಪ್ರೇಮ ಸರಸ್ವತಿ”ಯಲ್ಲಿ “ಪ್ರೇಮ ಸರಸ್ವತಿ ಹರಿಯಲಿ, ನನ್ನೂರು-ನಿನ್ನೂರ ಮನದ ನಡುವೆ, ಹಾರಲಿ ಪಾರಿವಾಳ ನನ್ನ ನಿನ್ನ ಪ್ರೀತಿ ಗೆಲುವಿಗೆ” ಎಂದು ನವಿರು ಕಾವ್ಯವನ್ನೂ ಮುಟ್ಟಿದ್ದಾರೆ. ಈ ಸಾಲುಗಳಲ್ಲಿ ಎಲ್ಲೋ ಕೆ.ಎಸ್.ನ ಮತ್ತೊಮ್ಮೆ ಮುಗುಳ್ನಕ್ಕಂತೆ ಭಾಸವಾಗುತ್ತದೆ.
ಕವನ ಸಂಕಲನದ ಕಡೆಯ ಹಂತಗಳಲ್ಲಿ ಸ್ವಗತವನ್ನು ಮೀರಿ ಕವನಗಳು ತೀವ್ರ ಸಮಾಜಮುಖಿಯಾಗುತ್ತ ಹೋಗಿರುವುದು ಸ್ಫೂರ್ತಿಯಲ್ಲಿ ಒಬ್ಬ ಭರವಸೆಯ ಕವಿಯತ್ರಿಯನ್ನು ಅನಾವರಣ ಮಾಡಿದೆ. ಮಾನವ ಕುಲವನ್ನು ಒಡೆಯುವ ಧಾರ್ಮಿಕತೆ,ಗಾಂಧಿಯ ಜೀವತ್ಯಾಗದ ಮಹತ್ತರ ಅರ್ಥಗಳನ್ನು ಮರೆತ ದೇಶದ ಪರಿಸ್ಥಿತಿ, ಮಲೆಕುಡಿಯರ ನೋವುಗಳಿಗೆ ಧ್ವನಿಯಾಗುವ “ಕೆಂಪು ಗೀತೆ”, ವಿವಿಧ ಬದುಕುಗಳ ಯಥಾವತ್ತು ಚಿತ್ರಣ ಕಟ್ಟಿಕೊಡುತ್ತ ಸಾಗುವ “ಉಳಿದದ್ದು ನಾನು”, ವರದಕ್ಷಿಣೆ ಮತ್ತು ವಧುಪರೀಕ್ಷೆಯ ವಿರುದ್ಧ ಮೊನಚಾದ ವ್ಯಂಗ್ಯವನ್ನು ಹೊತ್ತ “ನಾವು ಮಾರಾಟಕ್ಕಿಲ್ಲ” ಇವೆಲ್ಲವೂ ಅಂತರಂಗವನ್ನು ದಾಟಿ ಜಗತ್ತಿನ ಅನಿಷ್ಟಗಳ ವಿರುದ್ಧ ಮಾತನಾಡುತ್ತವೆ. ಸಮಗ್ರ ಕವನಗಳಲ್ಲಿ ಸಂದೇಶಗಳನ್ನೂ ಗಟ್ಟಿಯಾಗಿ ಧ್ವನಿಸುತ್ತವೆ.
“ಪ್ರೀತಿಸಿ ಭಗ್ನಳಾದೆ” ಒಂದು ವಿಶಿಷ್ಟ ಕವನ. ಇದು, ಬುದ್ಧನ ಯಶೋಧರೆಯ ತಲ್ಲಣಗಳನ್ನು ಸೆರೆ ಹಿಡಿಯುತ್ತ ವಿಶ್ವವ್ಯಾಪಿಯಾಗುತ್ತದೆ. “ನಿನ್ನನಷ್ಟೇ ಪ್ರೀತಿಸಿ ಭಗ್ನಳಾದೆ, ನೀ ಜಗತ್ತನ್ನೇ ಪ್ರೀತಿಸಿ ಬುದ್ಧನಾದೆ” ಈ ಸಾಲಿನಲ್ಲಿ ವ್ಯಕ್ತಿ ಕೇಂದ್ರಿತ ಪ್ರೀತಿ ಮತ್ತು ಪ್ರಪಂಚಕ್ಕೆ ಸಂದ ಪ್ರೀತಿಯ ವಿಶಾಲ ವ್ಯಾಪ್ತಿಯನ್ನು ಅಕ್ಕಪಕ್ಕದಲ್ಲಿಟ್ಟು ವೈರುಧ್ಯಗಳ ನಡುವಿನ ಅಗಾಧ ವ್ಯತ್ಯಾಸಗಳಲ್ಲಿ ವಿಶ್ವತತ್ವವೊಂದನ್ನು ಹೇಳ ಹೊರಟು ಗೆಲ್ಲುತ್ತದೆ. ಇದಲ್ಲದೆ ಗ್ರಾಮ್ಯಭಾಷೆಯ, ಜಾನಪದೀಯವಾದ ಪ್ರಯೋಗಗಳೂ, ವಚನಗಳಂತೆ ತೋರುವ ಕವನಗಳೂ ಅಚ್ಚರಿ ಮೂಡಿಸುತ್ತವೆ. ಇಲ್ಲಿ ಮೂಡಿಬಂದಿರುವ ಸಂಕೇತಗಳು, ಪ್ರತಿಮೆಗಳು ಮತ್ತು ರೂಪಕಗಳು ತಮ್ಮ ಉದ್ದೇಶಗಳನ್ನು ಉತ್ತಮವಾಗಿ ನಿಭಾಯಿಸಿವೆ. ಬರವಣಿಗೆಯ ಭಾಷೆ ವಿವಿಧ ಪ್ರಯೋಗಗಳನ್ನು ಕಂಡಿದೆ.
ಹುಣಸೆ ಚಿಗುರಿನ ಹುಳಿ ಒಗರನ್ನೂ, ಹೂವಿನ ನವಿರನ್ನೂ ಹೊತ್ತ “ಹುಣಿಸೆ ಹೂ” ಸಂಕಲನದ ಪದ್ಯಗಳಲ್ಲಿ ಸ್ಫೂರ್ತಿ ಸ್ಪರ್ಶಿಸಿರುವ ಭಾವಗಳು, ವಿಷಯಗಳು ಹತ್ತು ಹಲವಾರು. ವಯೋಸಹಜ ಭಾವ ತೀವ್ರತೆ, ಆಲೋಚನೆಯ ಕ್ರಮ ಮತ್ತು ಆಳ, ಪ್ರತಿಭೆಯ ಅನಾವರಣ, ಆಗುಹೋಗುಗಳಿಗೆ ಸ್ಪಂದಿಸುವ ಸೂಕ್ಷ್ಮತೆ ಪ್ರಶಂಸನೀಯ. ಎಲ್ಲಕ್ಕೂ ಮಿಗಿಲಾಗಿ ಮಿತಿಗಳನ್ನು ಅರ್ಥೈಸಿಕೊಂಡು ಬೆಳೆಯುತ್ತ ಹೋಗುವಲ್ಲಿ ಅವರು ತೋರಿರುವ ಪ್ರಾಮಾಣಿಕತೆ ನಮ್ಮಹೃದಯಗಳನ್ನು ಮುಟ್ಟದೇ ಇರಲಾರದು. ಸಹೃದಯ ಓದುಗರೆಲ್ಲರ ಪ್ರೋತ್ಸಾಹ, ಪ್ರೀತಿ, ಅಭಿಮಾನಗಳು ದೊರೆತಲ್ಲಿ ನಾಡಿನ ಭರವಸೆಯ ಕವಿಯತ್ರಿ ಇವರಾಗುವಲ್ಲಿ ಸಂದೇಹವಿಲ್ಲ. “ಹುಣಿಸೆ ಹೂ” ಓದುಗರೆಲ್ಲರೂ ಒಮ್ಮೆ ಓದಲೇಬೇಕಾದ ಕವನ ಸಂಕಲನ.
 

‍ಲೇಖಕರು G

December 11, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ಹರವು ಸ್ಫೂತಿ್ಗೌಡ

    ನನ್ನೆಲ್ಲ. ಪದ್ಯಗಳನ್ನ ಪ್ರಕಟಿಸಿ ಸಂಕಲನ ಹೊರತರಲು ಪ್ರೋತ್ಸಾಹ. ನೀಡಿದ ಅವಧಿ, ಹಾಗೂ ವಿಧ್ನ್ಯಾ ಅವರಿಗೆ ಧನ್ಯವಾದ …

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: