ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸೌಮ್ಯ ದಯಾನಂದ ಕವಿತೆ – ಏನ್ ಸಮಾಚಾರ..!?

ಸೌಮ್ಯ ದಯಾನಂದ

ಕಣ್ಣಿಗೆ ಹಚ್ಚುತ್ತಿದ್ದ
ಕಾಡಿಗೆಯು
ಅವಳನ್ನು ಕೆಣಕುತ್ತಿತ್ತು..!
ಅದಕ್ಕೂ ಗುಮಾನಿ ಮೂಡಿತ್ತು.‌.
ತುಟಿಯ ರಂಗಿನೊಂದಿಗೆ
ಈಗಾಗಲೇ ಪಿಸುಗುಟ್ಟಿತ್ತು..!
ಏನ್ ಸಮಾಚಾರ..?!
ಏನಿವತ್ತು ಇವಳು ಹೀಗೆ..?!

ವರ ಬರುವನಂತೆ
ಈ ದಿನ!
ತಾನು ಕೇಳಿಸಿಕೊಂಡದ್ದನ್ನೇ
ಹೇಳಿತ್ತು
ಆ ಜುಮುಕಿ ಬಾಗಿ ಬಳುಕಿ..!
ಮೂಗುತಿಯ ಕಣ್ಣಲ್ಲಿ
ಮಿಂಚು..!
ಖುಷಿಗೋ… ಕುತೂಹಲಕ್ಕೋ..
ಕೆನ್ನೆಯ ರಂಗನ್ನು ಕಂಡೋ..!

ಹಣೆಬೊಟ್ಟು
ಸಿಂಗಾರಗೊಂಡಿತ್ತು
ಗಂಭೀರವಾಗಿಯೇ
ಬೀಗುತ್ತಿತ್ತು..
ಹುಡುಗ ನೋಡಲು
ಬರುತ್ತಿರುವುದು
ತನ್ನನ್ನೇ ಎಂಬಂತೆ…

ಕುಡಿ ಹುಬ್ಬುಗಳಂತೂ
ವಾದಕ್ಕಿಳಿದಿದ್ದವು!
ಮೊದಲು ನೋಡುವುದು
ಅವನಾ..?!ಇವಳಾ..?!
ಅಷ್ಟರಲ್ಲಿ
ಕಾಡಿಗೆಯ ಕಡ್ಡಿ
ಇಬ್ಬರನ್ನೂ
ತಿದ್ದಿ ತೀಡಿ ಸುಮ್ಮನಿರಿಸಿತು!

ಗಲ್ಲವೇಕೋ
ಮುನಿಸಿಕೊಂಡಿತ್ತು..!
ಕೊನೆಗೆ ಅದಕ್ಕೂ
ಒಂದು ಚುಕ್ಕಿ ಇಡಬೇಕಾಯ್ತು..
ಇಟ್ಟದ್ದೊಂದೇ..
ತುಟಿಗಳೊಡಗೂಡಿ
ನಗೆಮಲ್ಲಿಗೆ ಅರಳಿಸಿತು..!

ಮುಂಗುರುಳು ನುಸುಳಿ
ತನ್ನ ಇರುವಿಕೆಯನ್ನು
ಸಾರುತ್ತಿತ್ತು…
ನಾನೂ ಬರ್ತೀನಿ
ಅಂತ ಹಠ ಹಿಡಿಯಿತು!
ಸುತ್ತಿ ಸಂತೈಸಿದಾಗ
ಇದ್ದಲ್ಲಿಯೇ
ಕುಪ್ಪಳಿಸತೊಡಗಿತು..!

ಇಂದೇಕೋ
ಎಲ್ಲವೂ ತಮ್ಮನ್ನು ತಾವೇ
ನೋಡಿಕೊಂಡು
ಸಂಭ್ರಮ ಪಟ್ಟವು…!
ನಲ್ಲನ
ಕಲ್ಪನೆಯಲ್ಲೇ ಕಳೆಗೂಡಿದವು!
ಕಾತರವ ತಾಳಲಾರದೇ
ಮೂಕವಾದವು…!!

‍ಲೇಖಕರು Admin

17 May, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading