ಪ್ರಕಾಶ್‍ ಕೊಡಗನೂರ್ ಕವಿತೆ – ಒಲಿದ ಮೇಲೆ!..

ಪ್ರಕಾಶ್‍ ಕೊಡಗನೂರ್

1. ಒಲಿದ ಮೇಲೆ!

ಮೌನ ಅವಳು
ಮಾತು ನಾನು

ಬೆರಗು ಅವಳು
ಬಯಲು ನಾನು

ಕನಸು ಅವಳು
ನನಸು ನಾನು

ಕವಿತೆ ಅವಳು
ಹಾಡು ನಾನು

ಪ್ರೀತಿ ಅವಳು
ಸ್ನೇಹ ನಾನು

ರಾಧೆ ಅವಳು
ರುಕ್ಮಿಣಿ ನಾನು

ಅವಳು ನಾನು
ಇನಿಯ ನೀನು!

ಒಲಿದ ಮೇಲೆ
ಒಂದೇಇನ್ನು!!


2. ಪ್ರೇಮದ ನಂಟು

ಅವಳು
ಗಿರಿಶಿಖರ
ಕಾಡುಮೇಡುಗಳ
ಗಾಳಿಬೆಳಕಿನ
ಧರೆಯಚುಂಬಕರಾಣಿ

ಇವನು
ಗುಡುಗು ಸಿಡಿಲುಗಳ
ಮೋಡಗಳಬ್ಬರದಿ
ಕಿಡಿಗಳೆಬ್ಬಿಸುತ ಭೋರ್ಗರೆವ
ಬಾನ ಭಕುತಿಯರಾಜ

ಅವ್ಯಕ್ತಅಮೂರ್ತ
ಪ್ರೇಮದ ನಂಟು;
ಬೆಸೆವ ಪವಾಡದಲಿ
ಬೆರಗೇಅಂಟು!

ಬಹುರೂಪಿ ಜಂಗಸ್ವರೂಪಿ
ಚೇತನದ ಈ ಕರೆಂಟು
ಸರ್ವವ್ಯಾಪಿ ಸರ್ವಶಕ್ತ
ಪ್ರೇಮದಲಿ ಪರ್ಮನೆಂಟು

ಅರ್ಥಕ್ಕೆ ನಿಘಂಟು
ಅನುಭಾವಕೆ ಸಿಹಿಗಂಟು;
ಕವಿ ಕಲಾವಿದರುಗಳಿಗೆ
ಸೋಜಿಗದದಂಟು!!

3. ಸಂಕೀರ್ಣದ ಶರಧಿಯಲ್ಲಿ!

ಕಳೆದುಹೋದೆನೆಲ್ಲಿ ನಾನು?
ಒಳಗೊ ಹೊರಗೊಕಾಣದೇನು!!

ಅರಸಿರುವೆಯೇನು ನಾನು?
ಬದುಕೊ ಸಾವೊ ಭರಿಸದೇನು!!

ಬಯಸಿರುವುದೇನು ನಾನು?
ಪ್ರೇಮವೊ ಕಾಮವೊ ಅರಿಯದೇನು!!

ವಿಕ್ಷಿಪ್ತವೊ ಪ್ರಕ್ಷುಬ್ಧವೊ?
ಚಿತ್ತದೊಳಗೆ ಗುಪ್ತ ನಾನು!!

ಅಸಹಾಯಕತೆಯೊ ವೈಫಲ್ಯವೊ?
ಪರಿಧಿಯೊಳಗೆ ಸ್ತಬ್ಧ ನಾನು!!

ಆಸ್ತಿಕನೊ ನಾಸ್ತಿಕನೊ?
ಶ್ರದ್ಧೆಯೊಳಗೆ ಕೊರಡು ನಾನು!!

ಸಂಕೀರ್ಣದ ಶರಧಿಯಲ್ಲಿ
ಮುಳುಗಿದಂತೆ ನಾನು
ಹೆಚ್ಚಾಗುವ ಹರಿವಿನಲ್ಲಿ
ನುಚ್ಚಾಗದೆ ಏನು!!

4. ಗಂಗೆ!!

ತಾಳಿಯೊಳಗೆಲ್ಲ
ತಾಳಿಕೊಳ್ಳಲಿ ಹೆಂಗೆ?

ತಪ್ತ ಬಯಕೆಗಳು
ಸಿಡಿವ ಕಿಡಿಗಳಾಗಿವೆ
ತಣಿಸಲೆಂಗೆ?

ಕಲೆಯೊ ಪ್ರತಿಭೆಯೊ
ರಿಂಗಣಿಸುತಿರಲೊಳಗೆ
ಅನಾವರಣಗೊಳಿಸಲೆ೦ಗೆ?

ಸತಿಯಗದ್ದುಗೆಯೂ
ಪತಿವ್ರತೆಯಕೀರಿಟವೂ
ಶಾಪವೆನಗೆ
ವಿಮುಕ್ತಿಗೊಳ್ಳಲೆಂಗೆ?

ಬೆಚ್ಚುವ ಇತಿಹಾಸ
ಹಳಸಿದ ವರ್ತಮಾನ
ಸಂಕೀರ್ಣ ಭವಿಷ್ಯ
ಕಣ್ಣ ಮುಂದಿದೆ

ಇಡುವ ಹೆಜ್ಜೆಯ
ಹಾದಿ ಅರಿಯಲು
ಪಡುವ ಪಾಡಿನ
ಬಲ ಗಳಿಸಲು
ಇಷ್ಟು ಸಾಕೆನಗೆ
ಇನ್ಮುಂದೆ ನಾನು ಗಂಗೆ!

‍ಲೇಖಕರು Admin

May 17, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: