ಪಿ ಪಿ ಉಪಾಧ್ಯ ಸರಣಿ ಕಥೆ 15 – ಶಾಮಣ್ಣನವರದ್ದು ಮೂಡುಬಿದ್ರೆಯ ಕೋಣ…

ಪಿ ಪಿ ಉಪಾಧ್ಯ

15

ಶಾಮಣ್ಣ ಕೊಟ್ಟ ಭಕ್ಷೀಸು…

ಅಂದಿನಿ೦ದ ಆದಿಗೆ ದಿನವಿಡೀ ಕೆಲಸ. ಹಾಗೆಂದು ಎಲ್ಲ ಕೆಲಸ ಅವನೇ ಮಾಡಲಿಕ್ಕಿದೆಯೇ. ಕಂಬಳದ ಕೋಣದ ಕೆಲಸವನ್ನು ಮಾಡಲು ಅವನದ್ದೇನೂ ಅಡ್ಡಿಯಿಲ್ಲ. ಆದರೆ ಅಮ್ಮನದ್ದು ಅಡ್ಡಿ. ದೊಡ್ಡಸ್ತಿಕೆ ತೋರಿಸಲೆಂದೇ ಕೊಂಡು ಕೊಂಡ ಕೋಣಗಳನ್ನು ನೋಡಿಕೊಳ್ಳುವ ಕೆಲಸವನ್ನು ಅವನೇ ಮಾಡಿ ಆ ದೊಡ್ಡಸ್ತಿಕೆಗೆ ಭಂಗ ತಂದುಕೊಳ್ಳುವುದೇ ಎನ್ನುವುದು ಅವಳ ವಾದ. ಅಪ್ಪನೂ ಸೈ ಎಂದಿದ್ದರು. ಕೂಡಲೇ ಆ ಎರಡು ಕಂಬಳದ ಕೋಣಗಳನ್ನು ನೋಡಿಕೊಳ್ಳಲೆಂದೇ ಒಬ್ಬ ಕೆಲಸದಾಳನ್ನು ನಿಯಮಿಸಿದ್ದರು. ಅವನೂ ಮನೆ ಕೆಲಸಕ್ಕೆ ಬರುತ್ತಿದ್ದವನೇ. ಇಂದಿನಿ೦ದ ನಿನ್ನ ಕೆಲಸ ಆ ಕೋಣಗಳನ್ನು ನೋಡಿಕೊಳ್ಳುವುದು ಮಾತ್ರ' ಎಂದಾಗ ಅವ ಸಂತೋಷದಿ೦ದ ಒಪ್ಪಿಕೊಂಡ. ಆದರೂ ಪ್ರತಿ ಕೆಲಸ ಮಾಡುವಾಗಲೂ ಆದಿ ಅವನ ಹಿಂದೆಯೇ ಇರುವುದನ್ನು ಮಾತ್ರ ಬಿಡಲಿಲ್ಲ.

ಆದಿ ಅಲ್ಲಲ್ಲಿ ಕೇಳಿ ತಿಳಿದದ್ದು ಮತ್ತು ಕೋಣಗಳನ್ನು ಕೊಡುವಾಗ ಹೆಗ್ಡೇರು ತಿರುಗಿ ತಿರುಗಿ ಹೇಳಿದ್ದನ್ನು ಕೇಳಿಸಿಕೊಂಡದ್ದು ಎಲ್ಲ ಸೇರಿ ಕೋಣಗಳ ಉಪಚಾರ ಸುರುವಾಗಿತ್ತು. ಅದರಲ್ಲಿ ಯಾವುದೇ ಕಾರಣಕ್ಕೂ ಅವುಗಳನ್ನು ಬಿಸಿಲಿಗೆ ಬಿಡಬಾರದು ಎನ್ನುವುದು ಒಂದು. ಅವುಗಳ ಮಿರಿ ಮಿರಿ ಮಿಂಚುವ ಹೊಳೆಯುವ ಕೆಂಬಣ್ಣವೇ ಅವುಗಳ ಆಕರ್ಷಣೆ. ನಾಳೆ ಕಂಬಳಕ್ಕೆ ಅವುಗಳನ್ನು ಎಳೆದುಕೊಂಡು ಹೋಗುವಾಗ ನೋಡಿದ ಜನ ಮೂಗಿನ ಮೇಲೆ ಬೆರಳಿಡಬೇಕು.ಕಂಬಳದ ಕೋಣಗಳೆಂದರೆ ಶಾಮಣ್ಣನವರ ಮನೆಯ ಕೋಣಗಳು. ಬೆರಳಿನಲ್ಲಿ ಸಿಡಿದರೆ ರಕ್ತ ಚಿಮ್ಮಬೇಕು ಹಾಗಿದ್ದಾವೆ’ ಎಂದು ಹೊಗಳಬೇಕು ಎನ್ನುವುದುಆದಿಯ ಬಯಕೆ.

ತಿನ್ನಲಿಕ್ಕೂ ಹಾಗೆಯೇ. ಒಣ ಕೊಬ್ಬರಿಯನ್ನು ಪುಡಿಮಾಡಿ ಅರ್ಧ ಕೇಜಿಯಷ್ಟನ್ನು ದಿನಕ್ಕೆ ಮೂರು ಬಾರಿ ಬೇಯಿಸಿದ ಹುರುಳಿಯೊಂದಿಗೆ ತಿನ್ನಿಸಬೇಕು. ಸಾಕಷ್ಟು ಹುರುಳಿ ಕೊಡದಿದ್ದರೆ ಕೈ ಕಾಲು ಬೀಳುತ್ತವೆ. ಕಂಬಳದ ಗದ್ದೆಯಲ್ಲಿ ಒಂದೋ ಓಡುವುದೇ ಇಲ್ಲ ಎಂದು ಮುಷ್ಕರ ಹೂಡಿಯಾವು, ಇಲ್ಲ ಮಧ್ಯದಲ್ಲಿ ಮುಗ್ಗರಿಸಿದರೂ ಮುಗ್ಗರಿಸಿಯಾವು. ಹಾಗಾಗಿ ಧಂಡಿಯಾಗಿ ಹುರುಳಿಯನ್ನೂ ತಿನ್ನಿಸಬೇಕು. ರುಚಿ ಬೇಕೆಂದರೆ ಸ್ವಲ್ಪ ಬೆಲ್ಲವನ್ನೂ ಸೇರಿಸಬೇಕಾದೀತು.

ಬೇಯಿಸಿದ ಹುರುಳಿಯನ್ನು ಅರೆಯುವ ಕಲ್ಲಿನಲ್ಲಿ ಅರೆದು ಸ್ವಲ್ಪ ನಜ್ಜು ಗುಜ್ಜು ಮಾಡಿದರೆ ಸುಲಭದಲ್ಲಿ ತಿನ್ನುತ್ತವೆ. ಇದೆಲ್ಲ ಆದಿ ಕಲೆ ಹಾಕಿದ ವಿಷಯ. ಊರಿಗೆ ಹೊಸದಾಗಿ ಬಂದ ಗೋಡಾಕ್ಟರರ ಹತ್ತಿರ ಇದನ್ನೆಲ್ಲ ಹೇಳಿದರೆ ನಕ್ಕಿದ್ದರು. ಬೇಕಾದರೆ ಒರಳಿನಲ್ಲಿ ಸ್ವಲ್ಪ ಅರೆದು ನಜ್ಜು ಗುಜ್ಜು ಮಾಡಿಕೊಡಿ. ತಿನ್ನಲು ಸುಲಭವಾಗುತ್ತದೆ. ಮತ್ತೆ ಬೆಲ್ಲ ಗಿಲ್ಲ ಸೇರಿಸುವುದು ಇದೆಯಲ್ಲ ಅದು ನಿಮ್ಮ ತೃಪ್ತಿಗೆ. ಅಸಲು ಗುಟ್ಟು ಏನೆಂದರೆ ಹಸು, ಎಮ್ಮೆ, ಕೋಣಗಳಿಗೆ ಸಿಹಿಯ ರುಚಿ ಗೊತ್ತಾಗುವುದೇ ಇಲ್ಲ' ಎಂದರೂನಿಮ್ಮ ಸಮಾಧಾನಕ್ಕೆ ಏನು ಬೇಕೋ ಹಾಗೆ ಮಾಡಿ’ ಎನ್ನುತ್ತ ನೋಡಿ ಇದಿಷ್ಟು ವಿಟಮಿನುಗಳ ಮಾತ್ರೆಯನ್ನು ಮಾತ್ರ ಕೊಡುತ್ತಿರಿ' ಎಂದು ಒಂದಿಷ್ಟು ಪುಗಸಟ್ಟೆ ಮಾತ್ರೆಗಳನ್ನು ಕೊಟ್ಟು ಕಳುಹಿಸಿದ್ದರು. ಕೆಲಸದವನಿಗಂತೂ ಆಶ್ಚರ್ಯವೋ ಆಶ್ಚರ್ಯ. ತಮ್ಮಂತಹವರ ಮನೆಯಲ್ಲಿ ಬಿಡಿ.

ಸಾಮಾನ್ಯ ಸ್ಥಿತಿವಂತರ ಮನೆಯಲ್ಲಿ ಜನರ ಬಗ್ಗೆಯೂ ಇಷ್ಟು ಕಾಳಜಿ ವಹಿಸರು. ಅಂತಹುದರಲ್ಲಿ ಇಲ್ಲಿ ಕೋಣಗಳ ಬಗ್ಗೆ ಇಷ್ಟು ಮುತುವರ್ಜಿ ವಹಿಸುತ್ತಾರೆಂದರೆ. ತೀರ ಬಡತನದ ಬದುಕು ಸಾಗಿಸುತ್ತಿದ್ದ ಅವನಿಗೆ ಅದನ್ನು ಜೀರ್ಣಿಸಿಕೊಳ್ಳಲಿಕ್ಕೆ ಆಗಿರಲಿಲ್ಲ. ಹಾಗೆಂದು ಶಾಮಣ್ಣನವರ ಮನೆಯಲ್ಲಿ ದುಡಿದರೆ ಮಾತ್ರ ಸಿಗುವ ಕೂಲಿಯಿಂದಾಗಿಯೇ ಮನೆ ಒಲೆ ಹಚ್ಚುವಂತಹ ಅನಿವಾರ್ಯತೆಯಿದ್ದ ಅವ ಮೊದ ಮೊದಲು ಹೊಟ್ಟೆಯಲ್ಲಿನ ಬೆಂಕಿ ತಡೆಯಲಾರದೇ ಊರೆಲ್ಲ ಹೇಳಿಕೊಂಡು ಬಂದರೂ ಮತ್ತೆ ಇಲ್ಲದ ಉಪಧ್ವಾಪ ತನಗೆ ಯಾಕೆಂದು ಸುಮ್ಮನಾಗಿದ್ದ. ಆದರೂ ಶಾಮಣ್ಣನವರ ಮನೆಯ ಕಂಬಳದ ಕೋಣಗಳ ಉಪಚಾರ ಕೆಲವು ದಿನಗಳ ಮಟ್ಟಿಗಾದರೂ ಊರ ಜನರ ಬಾಯಿಯಲ್ಲಿ ದಂತ ಕಥೆಯಾಗಿ ಸುತ್ತಿದ್ದು ಸುಳ್ಳಲ್ಲ.

ವಂಡಾರು ಕಂಬಳಕ್ಕೆ ಮೂರು ನಾಲ್ಕು ತಿಂಗಳಿರುವಾಗಲೇ ಕೋಣಗಳ ಜೊತೆ ಮನೆಗೆ ಬಂದಿತ್ತಾದ್ದರಿAದ ತಯಾರಾಗಲು ಬೇಕಾದಷ್ಟು ದಿನಗಳೇ ಇದ್ದುವು. ಆದಿಯ ಮೆಹನತ್ತು ಮತ್ತು ಶಾಮಣ್ಣನವರ ಕೈಹಿಡಿತ ಮಾಡದ ಖರ್ಚಿನಿಂದಾಗಿ ಕೋಣಗಳು ಮೈ ಕಳೆದುಕೊಳ್ಳಲಿಲ್ಲ. ದಷ್ಟ ಪುಷ್ಟವಾಗಿ ಕೊಂಡು ಬರುವಾಗ ಇದ್ದುದಕ್ಕಿಂತ ನಳನಳಿಸುವಂತಾಗಿದ್ದುವು. ಕಂಬಳದ ದಿನ ನಿಗದಿಯಾದದ್ದು ಗೊತ್ತಾಗುತ್ತಲೇ ಖುದ್ದಾಗಿ ಆದಿಯೇ ಅಲ್ಲಿಗೆ ಹೋಗಿ ತಮ್ಮ ಹೆಸರು ಕೊಟ್ಟು ಬಂದಿದ್ದ. ಮೊದ ಮೊದಲು ಯಾರೋ ಕುಶಾಲಿಗೆ ಬಂದಿದ್ದಾರೆ೦ದು ಅಷ್ಟು ಕಾಳಜಿ ವಹಿಸದ ಅಲ್ಲಿನ ಗುರಿಕರ‍್ರು ಪಡುಕರೆ ಶಾಮಣ್ಣನವರ ಮಗ ಎಂದು ತಿಳಿದದ್ದೇ ಸಕಲ ಮರ್ಯಾದೆಯೊಂದಿಗೆ ಅವನನ್ನು ಆದರಿಸಿ ಹೆಸರು ಬರೆಸಿಕೊಂಡು ಕಳಿಸಿದ್ದರು. ಆಗಲೇ ಅಲ್ಲಿಗೆ ಬಂದಿದ್ದ ಮಾಮೂಲಿಯಾಗಿ ಭಾಗವಹಿಸುತ್ತಿದ್ದ ಕೊಕ್ಕರ್ಣೆ ಭಾಗವತರದ್ದು ಮತ್ತು ಅಮಾಸೆಬೈಲಿನ ಶೆಟ್ಟರುಗಳದ್ದು ಮುಖ ಬಿಳಿಚಿಕೊಂಡಿತ್ತು. ಅವರಿಗೆಲ್ಲ ಆಗಲೇ ಸುದ್ದಿ ಹೋಗಿತ್ತು. ಪಡುಕೆರೆ ಶಾಮಣ್ಣನವರು ಮೂಡುಬಿದ್ರಿಯ ಹೆಗ್ಡೇರ ಮನೆಯಿಂದ ತಂದ ಕೋಣಗಳನ್ನು ಕಂಬಳಕ್ಕೆ ತಯಾರು ಮಾಡುತ್ತಿದ್ದಾರೆ ಎಂಬುದು.

ಒಂದನೆಯದು ಹೊಸತಾಗಿ ಈ ವ್ಯವಹಾರಕ್ಕೆ ಕೈ ಹಾಕಿದ ಶಾಮಣ್ಣ ಸುಲಭದಲ್ಲಿ ಬಿಡಲಿಕ್ಕಿಲ್ಲ ಎನ್ನುವುದು, ಎರಡನೆಯದು ಕಂಬಳಕ್ಕೆ ಜಾತಿ ಕೋಣಗಳನ್ನು ಸಾಕುವುದು ಮತ್ತು ಅವುಗಳನ್ನು ತಯಾರು ಮಾಡುವಲ್ಲಿ ತುಳು ನಾಡಿನವರ ಸಮಕ್ಕೆ ಬರಲು ತಮಗಿನ್ನೂ ಸಾಧ್ಯವಾಗಿಲ್ಲ ಎನ್ನುವುದು ಈ ಬಡಗಲಿನವರು ಮನಸ್ಸಿಲ್ಲದ ಮನಸ್ಸಿನಿಂದಾದರೂ ಒಪ್ಪುವ ಮಾತೇ. ಅದರಲ್ಲಿ ಈಗ ಈ ಶಾಮಣ್ಣ ಕೋಣಗಳನ್ನು ಓಡಿಸಲಿಕ್ಕೆ ಆ ಹೆಗ್ಡೇರ ಕಡೆಯಿಂದಲೇ ಜನ ಬೇರೆ ಕರೆಸುತ್ತಾರಂತೆ ಅಂದ ಮೇಲೆ ತಾವೆಲ್ಲ ಬಾಲ ಮಡಚಿಕೊಂಡು ಕೂರುವುದೇ ಆಯ್ತು ಎನ್ನುವ ಹೆದರಿಕೆ.

ಕಂಬಳದ ಗುರಿಕಾರರಿಗಂತೂ ಹುಮ್ಮಸ್ಸೋ ಹುಮ್ಮಸ್ಸು. ಲಾಗಾಯ್ತಿನಿಂದ ನಡೆದುಕೊಂಡು ಬಂದ ವಂಡಾರು ಕಂಬಳ ಸುತ್ತ ಮುತ್ತ ಎಷ್ಟೇ ಹೆಸರು ಮಾಡಿದ್ದರೂ ಯಾವತ್ತೂ ಬಡಗಿನವರ ಮಿತಿ ಬಿಟ್ಟು ಹೊರ ಹೋಗಿರಲಿಲ್ಲ. ಅದೇ ಶೆಟ್ಟರು. ಅದೇ ಹಂದೇರು. ಕೊಕ್ಕರ್ಣೆಯವರದ್ದಂತೂ ಕಳೆದ ಹತ್ತು ವರ್ಷಗಳಿಂದ ಅದೇ ಒಂದು ಜೊತೆ ಕೋಣಗಳು. ಪದೇ ಪದೇ ಅವುಗಳನ್ನೇ ನೋಡಿ ಬೇಜಾರಾದ ಮಂದಿ ಹೇಳುವುದಿತ್ತುಬಹುಶಃ ಬಾಲ ಎತ್ತಿ ಸೆಗಣಿ ಹಾಕಲೂ ಸಾಧ್ಯವಿಲ್ಲ ಎಂದಾದಾಗಲೇ ಈ ಕೊಕ್ಕರ್ಣೆಯ ಕೋಣಗಳಿಗೆ ನಿವೃತ್ತಿ ಎಂದು ಕಾಣುತ್ತದೆ’ ಎಂದು. ಹಾಗಿರುವಾಗ ಈಗ ಈ ಶಾಮಣ್ಣನವರದ್ದು ಮೂಡುಬಿದ್ರೆಯ ಕೋಣ; ಅಲ್ಲಿನದ್ದೇ ಜನ ಅಂದ ಮೇಲೆ ಕಂಬಳ ಕಳೆಗಟ್ಟದೇ ಇರಲು ಸಾಧ್ಯವೇ.

ತಿಂಗಳಿರುವಾಗಲೇ ಕರಪತ್ರ ಮುದ್ರಿಸಿ ಸುತ್ತ ಹದಿನಾಲ್ಕು ಗ್ರಾಮಗಳಿಗೆ ಹಂಚಿ ಬಿಟ್ಟಿದ್ದರು. ಖಾಯಂ ಆಗಿ ಅಂಗಡಿ ಹಾಕಿಕೊಳ್ಳಲು ಬರುತ್ತಿದ್ದವರಿಗೆ ಎಂದೂ ಇಲ್ಲದಂತೆ ಇಂತಿಷ್ಟು ಛಾರ್ಜು ಕಟ್ಟಿ ಮೊದಲೇ ಜಾಗ ಕಾಯ್ದಿರಿಸಿಕೊಳ್ಳಬೇಕೆಂತಲೂ ಸುದ್ದಿ ಕಳುಹಿಸಿದ್ದರು. ಬಾಯಿಯಲ್ಲಿ ಗೊಣಗುಟ್ಟಿದರೂ ಯಾರೂ ಹಿಂದೆಗೆದಿರಲಿಲ್ಲ. ಬದಲಿಗೆ ನಾ ಮುಂದು ತಾ ಮುಂದು ಎಂದು ಮುಗಿ ಬಿದ್ದು ಮುಂಗಡ ಹಣ ಕಟ್ಟಿದ್ದರು. ಕೆಲವರಂತೂ ವ್ಯಾಪಾರವೂ ಆಗಬೇಕು ಕಂಬಳವನ್ನೂ ನೋಡಬೇಕು ಎಂದುಕೊ೦ಡು ಅಂಗಡಿ ಹಾಕಲು ಆಯಕಟ್ಟಿನ ಜಾಗವನ್ನು ಹುಡಕಿ ಗುರುತು ಮಾಡಿ ತಮ್ಮ ಹೆಸರಿನ ರಟ್ಟು ಹೊತ್ತ ಗೂಟವನ್ನೂ ಹೊಡೆಸಿ ಬಂದಿದ್ದರು.

ಅಂತೂ ಆದಿ ಕಂಬಳಕ್ಕೆ ಹೆಸರು ನೋಂದಾಯಿಸಿದ್ದೇ ಇಡೀ ವಂಡಾರಿನಲ್ಲೇ ಹೊಸ ಚಾಲನೆ ಸುರುವಾಗಿತ್ತು. ಕಂಬಳದ ಗದ್ದೆಯನ್ನು ಎಂದೂ ಇಲ್ಲದಂತೆ ಮಣ್ಣನ್ನು ಉತ್ತು ಉತ್ತು ಹಸನು ಮಾಡಿ ನೀರು ಕಟ್ಟಿ ಮೆದು ಮಾಡಿದ್ದರು. ಕಂಬಳದ ಗದ್ದೆ ಸುತ್ತ ಜನ ನುಗ್ಗದಂತೆ ಬಿದಿರಿನ ಬಲವಾದ ಬೇಲಿ ಕಟ್ಟಿಸಿದ್ದರು. ಯಾವುದಕ್ಕೂ ಇರಲಿ ಎಂದು ಕೋಟದ ಪೋಲೀಸು ಠಾಣೆಗೂ ಒಂದು ಸುದ್ದಿ ಕೊಟ್ಟು ಕನಿಷ್ಠ ಒಂದಿಬ್ಬರು ಕಾನ್‌ಸ್ಟೇಬಲುಗಳನ್ನಾದರೂ ಕಳುಹಿಸುವಂತೆ ಮನವಿ ಮಾಡಿಕೊಂಡಿದ್ದರು.

ಇತ್ತ ಶಾಮಣ್ಣನವರ ಮನೆಯಲ್ಲೂ ಅಷ್ಟೆ. ಮೂಡುಬಿದ್ರಿಯಿಂದ ಆಳುಗಳು ಎರಡು ದಿನ ಮೊದಲೇ ಬಂದಿಳಿದಿದ್ದರು. ಬಂದವರೇ ಮೊದಲು ಮಾಡಿದ ಕೆಲಸ ಕೋಣಗಳನ್ನು ಕಟ್ಟಿದ್ದ ಹಟ್ಟಿಗೆ ನುಗ್ಗಿ ಅವುಗಳ ಬೆನ್ನು ಸವರಿ ಬಾಲ ತಿರುಚಿ `ಪರವಾಯಿಲ್ಲ ಚನ್ನಾಗಿಯೇ ನೋಡಿಕೊಂಡಿದ್ದಾರೆ’ ಎಂದು ತುಳುವಿನಲ್ಲಿ ತಮ್ಮ ತಮ್ಮಲ್ಲಿಯೇ ಹೇಳಿಕೊಂಡದ್ದು. ಹಟ್ಟಿಯಿಂದ ಹೊರಬರುವಾಗ ಅವರ ಮುಖ ಗೆಲವಾಗಿದ್ದುದನ್ನು ಕಂಡ ಆದಿಗೂ ಶಾಮಣ್ಣನವರಿಗೂ ತೃಪ್ತಿಯಾಗಿತ್ತು.

। ಇನ್ನು ನಾಳೆಗೆ ।

‍ಲೇಖಕರು Admin

May 17, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: