ಬೆಂಜಮಿನ್ ಎಂಬ ತಮ್ಮ…

ಕಂ ಕ ಮೂರ್ತಿ

ಶುದ್ಧವಾದ ಮನಸ್ಸಿನಲ್ಲಿ ಹುಟ್ಟುವ ಪ್ರೀತಿಗೆ ಎಣೆಯುಂಟೆ?. ಅದಕ್ಕೆ ಜಾತಿಬೇಧವಿಲ್ಲ, ಮತಬೇಧವಿಲ್ಲ, ಲಿಂಗಬೇಧವೂ ಇಲ್ಲ. ಅಂತಹ ಪ್ರೀತಿಯ ಆಸ್ವಾದನೆಯೇ ಒಂದು ಅನುಭೂತಿ. ಒಂದು ಘಟ್ಟದಲ್ಲಿ ನಾವು ಅಂತಹ ಪ್ರೀತಿಗೆ ತೆರೆದುಕೊಂಡೆವೋ, ಇಡೀ ಲೋಕ ನಮ್ಮದಾಗುತ್ತದೆ. ಅದರ ರುಚಿಯನ್ನು ಬಲ್ಲವನೇ ಬಲ್ಲ.

ಪುಸ್ತಕಲೋಕ ನನ್ನೊಳಗೆ ಇಳಿಯುತ್ತಿದ್ದಂತೆಯೇ ನನ್ನೊಳಗಿನ ಜಗತ್ತು ಬೆಳೆಯತೊಡಗಿತು. ನನ್ನ ಪುಟ್ಟ ಪುಸ್ತಕದ ಕಪಾಟಿನಲ್ಲಿ ಬೆಂಗಳೂರಿನಿಂದ ಬರುತ್ತಿದ್ದ ಸಾಹಿತ್ಯದ ಜತೆಗೇ ಆಧ್ಯಾತ್ಮವೂ ಸೇರಿಕೊಳ್ಳತೊಡಗಿತು. ರಾಮಕ್ರಷ್ಣ, ರಮಣರು, ವಿವೇಕಾನಂದರು ಮನಸ್ಸನ್ನು ಪ್ರವೇಶ ಮಾಡತೊಡಗಿದರು.

ಎಲ್ಲ ಸದ್ವಿಚಾರಗಳೂ ನನ್ನವೇ ಅನಿಸತೊಡಗಿತು. ಕ್ರಮೇಣ ಒಂಟಿತನದ ಚಿಪ್ಪು ಒಡೆಯಿತು. ಮನಸ್ಸಿನ ಪುಟ್ಟ ಮನೆಯೊಳಗೆ ಗೆಳೆಯರ ಸಾಮ್ರಾಜ್ಯ. ದೂರದ ದಕ್ಷಿಣ ಆಫ್ರಿಕಾದ ನೆಲ್ಸನ್ ಮಾಂಡೇಲಾರ ಚಿತ್ರ ನೋಡಿದರೆ, ಅವರು ನನ್ನ ಸಹೋದರ ಎಂಬ ಭಾವ. ಮ್ಯಾಕ್ಸಿಂಗಾರ್ಕಿ ಅವರ ತಾಯಿ ನನ್ನ ಮೇಲೆ ಅಗಾಧ ಪ್ರಭಾವ ಬೀರಿತು. ನನ್ನ ಜಗತ್ತು ‌ದೊಡ್ಡದಿದೆ.

ನಾನು ಒಂದು ಪುಟ್ಟ ಜಗತ್ತಿನಲ್ಲಿ ಕೂತು ಒಂಟೀತನದ ವ್ಯಸನಕ್ಕೆ ಒಳಗಾಗುತ್ತಿದ್ದೇನೆ. ಓದು ಹೆಚ್ಚಾಯಿತು. ನಾನು ಇದುವರೆಗೆ ಓದಿದ್ದು ಏನೇನೂ ಸಾಲದು. ಒಂದೊಂದು ಪುಸ್ತಕವೂ ಒಂದೊಂದು ಗೆಳೆಯನಂತೆ. ಹಾ.ಮಾ.ನಾಯಕರು ಅನುವಾದ ಮಾಡಿದ ಅಮ್ರತ ಪ್ರೀತಂರ ಪದ್ಯಗಳು ಬೆಂಕಿಯಲ್ಲಿ ಅರಳಿದ ನವಿಲುಗರಿ. ನನ್ನ ಅಂತರಂಗ ಓದಿನಿಂದ‌ ಹಿಗ್ಗುತ್ತ ಹೋಯಿತು. ನಾನು ಅರಿಯಬೇಕಾದ ಲೋಕ ಇನ್ನೂ ದೊಡ್ಡದಿದೆ.

ನಿತ್ಯದ ವ್ಯವಹಾರದಲ್ಲೂ ಎಲ್ಲರ ಜತೆ ಇನ್ನಷ್ಟು ಗಾಢವಾಗಿ ಬೆರೆಯತೊಡಗಿದೆ‌ ಮೇಲ್ಜಾತಿಯವನಾದ ನನ್ನ ಬಗ್ಗೆ ಮಿತ್ರರಿಗೆ ಅನುಮಾನ. ಅನುಮಾನ ಸಹಜ. ಅದು ಅನುಭವದ ವಾಸನೆ. ನಾನೇ ಇನ್ನಷ್ಟು ಹತ್ತಿರ ಹೋಗಬೇಕು. ನನ್ನನ್ನು ನಾನು ಅರ್ಥಮಾಡಿಸಿಕೊಡಬೇಕು. ಅವರೆದೆಯ ಅವಮಾನದ ನೋವಿಗೆ ಕಿವಿಗೊಡಬೇಕು. ಆಗಾಗ ಬೆಂಗಳೂರು , ಮೈಸೂರಿನಿಂದ ಕೆಲವು ಸಾಹಿತಿಗಳು, ಚಿಂತಕರು ಬರುತ್ತಿದ್ದರು. ದೇವಯ್ಯ ಹರವೆ, ಕಾಳೇಗೌಡರು, ಪ್ರೊ.ಕ್ರಷ್ಣಪ್ಪ ಅಂತವರ ಚಿಂತನಾ ಶಿಬಿರಗಳಲ್ಲಿ ಭಾಗವಹಿಸುತ್ತಿದ್ದೆ.

ತೇಜಸ್ವಿ ಸಹ ಒಂದು ಶಿಬಿರದಲ್ಲಿ ಅಸಮಾನತೆ ಬಗ್ಗೆ ಎಷ್ಟು ಚೆಂದಾಗಿ ಮಾತನಾಡಿದ್ದರು. ಕೆಲವರು ನನ್ನ ಬಗ್ಗೆ ಕುತೂಹಲದಿಂದ ಕೇಳಿ ತಿಳಿದುಕೊಳ್ಳುತ್ತಿದ್ದರು. ನನ್ನ ನಿಲುವಿಗೆ ಬೆನ್ನು‌ತಟ್ಟುತ್ತಿದ್ದರು. ಬುದ್ಧಣ್ಣಹಿಂಗಮಿರೆ, ಬಾಬೂಮ್ಯಾಥ್ಯು ಭಾಷಣಗಳಿಗೆ‌ ಕಿವಿಯಾದೆ.‌ ಬೆಂಗಳೂರಿನ ಫುಟ್ಪಾತ್ ನಲ್ಲಿ ಮಾರುತ್ತಿದ್ದ ಹಳೆಯ ಪುಸ್ತಕಗಳನ್ನು ಅವುಚಿ ತರುವುದು ಎಷ್ಟು ಖುಷಿ. ಕಾಫ್ಕಾನ ಕನ್ನಡ ರೂಪ, ರೂಪಾಂತರ ನನಗೆ ಸಿಕ್ಕಿದ್ದು ಅಲ್ಲಿಯೇ. ಅದು ನನ್ನೊಳಗಿನ ಒಂಟೀತನದ ಕಾವನ್ನು ನಾನೇ ಮತ್ತಷ್ಟು ಕೆದಕಿ ನೋಡೊಕೊಳ್ಳುವಂತೆ ಮಾಡಿತ್ತು.

ನೆರೂದ ಚಿಲಿಯ ಕ್ರಾಂತಿಕಾರಿ ಕವಿ. ಆತನ ಬೆಂಕಿಕೋಲಿನಂತಹ ಪದ್ಯಗಳು ನನಗೆ ಇಷ್ಟವಾದವು. ಚಿಲಿಯ ಕ್ರಾಂತಿಯ ಸಂದರ್ಭದಲ್ಲಿ ಹಿಂಸೆಗೆ ಬೆಚ್ಚಿ, ಆತ ತನ್ನ ಸಂಗಾತಿಗೆ ಬೀದಿಯಲ್ಲಿ ರಕ್ತ ಇರುವಾಗ ನಿನ್ನನ್ನು ಸಂತೋಷಪಡಿಸುತ್ತೇನೆ ಎಂದು ನಂಬಬೇಡ ಎನ್ನುತ್ತಾನೆ. ಈ ಸಾಲುಗಳನ್ನು ಎಷ್ಟು ಸಾರಿ ಓದಿಕೊಂಡಿಲ್ಲ. ಸುತ್ತಲೂ ದುಃಖವೇ ಇರುವಾಗ ಸಂತೋಷ ಹುಟ್ಟುವುದಾದರೂ ಹೇಗೆ? ನೆರೂದರ ಮತ್ತಷ್ಟು ಕವಿತೆಗಳನ್ನು ಓದಿದೆ. ಕೆಲವರನ್ನು ಓದುವುದು ಬಿಟ್ಟೆ, ಹೀಗೆ ಸ್ವೀಕಾರ ನಿರಾಕಾರದ ಮೂಲಕ ಕೆಲವರನ್ನು ಮನಸ್ಸಿನ ಒಳಗೆ ತೆಗೆದುಕೊಂಡೆ, ಕೆಲವರನ್ನು ವರ್ಜಿಸುತ್ತ ಹೋದೆ.

ಹೀಗೆ ನನ್ನೊಳಗಿನ ಲೋಕ ವಿಸ್ತಾರವಾದಂತೆ ನಾನು ಬಯಲಿಗೆ ಬಂದೆ. ಎಲ್ಲರೂ ನನ್ನವರು ನಾನು ಒಂಟಿಯಲ್ಲ. ಜಗತ್ತಿನ ದುಃಖಿಗಳೆಲ್ಲರೂ ನನ್ನ ಸಹೋದರರು. ಮೇಲ್ಜಾತಿ ಕಾರಣಕ್ಕೆ ನನ್ನ ಅನುಮಾನದಿಂದ‌ ನೋಡುವವರ ಮನಸ್ಸು ಗೆಲ್ಲಬೇಕು. ಜಾತಿಯನ್ನು ಗೆಲ್ಲಲಿಕ್ಕಾಗಿಯೇ ನಾನು ಬಂದಿದ್ದೇನೆ ಎಂದು ಹೇಳಬೇಕು.
…..
ಬೆಂಜಮಿನ್ ಮೊಲಾಯಿಸ್ ದಕ್ಷಿಣ ಆಫ್ರಿಕಾದ ಕವಿ. ಬಂಡಾಯ ಕವಿ. ಮಂಡೇಲಾ ಜತೆಗೆ ವರ್ಣಬೇಧದ ವಿರುದ್ಧ ಕೈ ಎತ್ತಿದ ಧೀರ. ಅವನನ್ನು ಬಂಧಿಸಿ ನೇಣಿಗೇರಿಸಲಾಯಿತು. ಪತ್ರಿಕೆಯಲ್ಲಿ ಈ ಸುದ್ದಿ ಓದಿದೆ. ಎಲ್ಲಿಯ ದಕ್ಷಿಣ ಆಫ್ರಿಕಾ? ಎಲ್ಲಿದ್ದೇನೆ ನಾನು? ಕಣ್ಣುಗಳಲ್ಲಿ‌ ನೀರಾಡಿತು. ನನ್ನ ಬೆಂಜಮಿನ್ ಎಂಬ‌ ಶೀರ್ಷಿಕೆಯಲ್ಲಿ ಪದ್ಯ ಬರೆದೆ. ನಾನು ಕೆಲಸ ಮಾಡುತ್ತಿದ್ದ ಪತ್ರಿಕೆಯಲ್ಲಿಯೇ ಅದು ಪ್ರಕಟವಾಯಿತು. ನನ್ನ ಒಡನಾಡಿಯನ್ನು‌ ಕಳೆದುಕೊಂಡ ಸಂಕಟ. ಊಟ ಸೇರಿತ್ತಿಲ್ಲ.ನೀರೂ.

ರಾತ್ರಿ‌ ರೂಮಿಗೆ ಬಂದೆ. ಬನ್ನಿ‌ ಊಟ ಮಾಡಿ ಎಂದು ಶೇಷಾದ್ರಿ ತಟ್ಟೆಗೆ ಅನ್ನ ಬಡಿಸಿದರು. ಬೇಡ ಎಂದೆ. ಇಡೀ ದಿನ ಬೆಂಜಮಿನ್ ನೆನಪಲ್ಲಿ‌ ಇದ್ದುದಾಗಿಯೇ ಹೇಳಿದೆ. ನೀವು ಅತಿಭಾವುಕರು, ನೀವೊಬ್ಬ ಹುಚ್ಚ ಎಂದು ಪ್ರೀತಿಯಿಂದ ಹೇಳುತ್ತ ತಟ್ಟೆಯ ಮುಂದೆ ಕೂರಿಸಿದರು.
( ಅಪ್ರಕಟಿತ ಅನುಭವ ಕಥನದಿಂದ)

‍ಲೇಖಕರು Admin

May 17, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: