ಸೌಂದರ್ಯದ ತೆರೆ ಸರಿಸೋಣ…

ಸುಧಾ ಆಡುಕಳ

ಗಹನವಾದಗಣಿಯ ಪಾಠದ ನಡುವೆ ತುಸು ಬಿಡುವು ಸಿಕ್ಕರೂ ಸಾಕು, ನಾನು ನನ್ನ ವಿದ್ಯಾರ್ಥಿಗಳಲ್ಲಿ ಈ ಪ್ರಶ್ನೆಯನ್ನು ಕೇಳುತ್ತೇನೆ, “ನಿಮ್ಮ ತರಗತಿಯಲ್ಲಿ ಯಾರು ಅತಿಚಂದ?” ತಕ್ಷಣವೇ ಕೆಲವರ ಕಣ್ಣರಳುತ್ತದೆ, ಕೆಲವರ ಮುಖ ಬಾಡುತ್ತದೆ, ಕೆಲವರಲ್ಲಿಅದೇನೋ ಗೊಂದಲ. ಒ೦ದು ಕ್ಷಣದ ಮೌನದ ನಂತರ, “ಹೇಳಿ, ಯಾರು ಚಂದ?” ಎ೦ದು ಅದೇಗ ಭೀರವಾದ ದನಿಯಲ್ಲಿ ಪುನರಾವರ್ತನೆ ಮಾಡಿದರೆ ಅವರಿವರ ಮುಖ ನೋಡಿ, ಕೊನೆಗೂ ಒಂದೆರಡು ಬಿಳಿಯ ವಿದ್ಯಾರ್ಥಿನಿಯರ ಹೆಸರು ಉತ್ತರವಾಗಿ ಬರುತ್ತದೆ.

ಹೊಳೆಯುವ ಕಣ್ಣಿರುವ, ಸಪೂರಕ್ಕೆ ಎತ್ತರವಿರುವವರ ಇನ್ನೊಂದೆರಡು ಹೆಸರು ಸ್ವಲ್ಪ ತಡವಾಗಿ ಬರುತ್ತವೆ. ಆ ಕ್ಷಣಕ್ಕೆ ಅವರ ಉತ್ತರದ ಬಗ್ಗೆ ಏನನ್ನೂ ಹೇಳದೇ ನಾನವರಿಗೆ ಒಂದು ಚಂದದ ಕಥೆ ಹೇಳುತ್ತೇನೆ. ಅದು ಅಕ್ಬರ್ ಮತ್ತು ಬೀರಬಲ್ಲನ ನಡುವೆ ನಡೆದ ಕಥೆ. ಒಮ್ಮೆಅಕ್ಬರ್‌ ಚಕ್ರವರ್ತಿಯ ಮಗ ಸಲೀಂ ಆಸ್ಥಾನಕ್ಕೆ ಬಂದು ತನ್ನ ತ೦ದೆಯ ತೊಡೆಯನ್ನೇರಿ ಕುಳಿತುಕೊಳ್ಳುತ್ತಾನೆ. ಮುದ್ದಾದತನ್ನ ಮಗನನ್ನು ಮುದ್ದಿಸುತ್ತಾ, ಅಕ್ಬರ್‌ ತನ್ನ ಆಸ್ಥಾನದ ವಿದ್ವಾಂಸರಿಗೆ ಪ್ರಶ್ನೆಯೊಂದನ್ನು ಕೇಳುತ್ತಾನೆ. “ಈ ಜಗತ್ತಿನಲ್ಲಿಅತೀ ಸುಂದರವಾದ ಮಗು ಯಾವುದು?” ಎಲ್ಲರೂ ಅವನ ಪ್ರಶ್ನೆಯ ಮರ್ಮವನ್ನುಅರಿತು, “ಜಹಾಂಪನಾ, ಅದು ನಿಮ್ಮ ಮಗ ಸಲೀಂ ಅಲ್ಲದೆ ಇನ್ಯಾರು?”ಎಂದು ಉತ್ತರಿಸುತ್ತಾರೆ. ಆದರೆ ಬೀರಬಲ್ ಮಾತ್ರ, “ದೊರೆಗಳೇ, ಜಗತ್ತಿನ ಅತೀ ಸುಂದರವಾದ ಮಗುವನ್ನು ನಾನು ನೋಡಿರುವೆ.” ಎನ್ನುತ್ತಾನೆ.

ಅಕ್ಬರನಿಗೆ ಚೂರು ಅವಮಾನವಾದಂತೆನಿಸಿ, “ಓಹೋ, ಹೌದೇನು? ನನಗೂ ನಿಮ್ಮ ಆ ಸುಂದರವಾದ ಮಗುವನ್ನು ನೋಡುವ ಭಾಗ್ಯವಿದೆಯೆ?” ಎಂದು ಲೇವಡಿ ಮಾಡುತ್ತಾನೆ. ಅದಕ್ಕೆ ಬೀರಬಲ್ಲನು ಆ ಮಗುವನ್ನು ತೋರಿಸುವೆನೆಂದು ತನ್ನೊಡನೆ ರಾಜನನ್ನು ಕರೆದುಕೊ೦ಡು ಹೊರಡುತ್ತಾನೆ. ಅರಮನೆಯ ಹೆದ್ದಾರಿಯನ್ನು ದಾಟಿ, ಕಿರುದಾರಿಗಳನ್ನೆಲ್ಲ ಕಳೆದು, ಅವರೊಂದು ಕಾಲುದಾರಿಗೆ ಹೊರಳುತ್ತಾರೆ. ಅಲ್ಲೊಂದು ಗದ್ದೆಯ ಬಯಲಲ್ಲಿ ಕೂದಲು ಕೆದರಿಕೊಂಡ ಮಗುವೊಂದು ಕೆಸರಲ್ಲಿಆಟವಾಡುತ್ತಿರುತ್ತದೆ. ಬೀರಬಲ್ ಆ ಮಗುವನ್ನು ತೋರಿಸಿ, “ಜಹಾಂಪನಾ, ನೋಡಿ, ಇದೇ ನಾನು ನೋಡಿದ ಅತ್ಯಂತ ಸುಂದರ ಮಗು” ಎನ್ನುತ್ತಾನೆ.

ಅಕ್ಬರನಿಗೆ ಆಗ ಎಷ್ಟು ಕೋಪ ಬಂದಿರಬಹುದು! “ಓಹೋ, ಸತ್ಯವೇನು? ಇದು ಜಗತ್ತಿನ ಅತ್ಯಂತ ಸುಂದರ ಮಗು ನಿನ್ನ ಪಾಲಿಗೆ ಅಲ್ಲವೆ? ಸರಿ ನೋಡೋಣ. ನಿನ್ನನ್ನು ಬಿಟ್ಟು ಜಗತ್ತಿನ ಯಾರಾದರೊಬ್ಬರು ಈ ಮಾತನ್ನು ಹೇಳಲಿ, ನಾನಿದನ್ನು ಮರುಮಾತನಾಡದೇ ಒಪ್ಪುತ್ತೇನೆ” ಎನ್ನುತ್ತಾನೆ. ಬೀರಬಲ್ ತಕ್ಷಣವೇ ದೂರದಲ್ಲಿ ಕೆಲಸ ಮಾಡುತ್ತಿರುವ ಮಗುವಿನ ಅಮ್ಮನಲ್ಲಿಗೆ ಹೋಗಿ, “ತಾಯಿ, ನೀವು ಜಗತ್ತಿನಲ್ಲಿ ಅತಿ ಸುಂದರವಾಗಿರುವ ಮಗುವನ್ನು ನೋಡಿದ್ದೀರಾ?”ಎಂದು ಕೇಳುತ್ತಾನೆ. ಆಗ ಆ ತಾಯಿ ಒಂದು ಕ್ಷಣವೂ ಯೋಚಿಸದೇ, “ನೋಡದೇ ಏನು? ಅಗೋ ಅಲ್ಲಿ ಆಡುತ್ತಿದೆ ನೋಡಿ” ಎನ್ನುತ್ತಾಳೆ.

ಕಥೆ ಕೇಳಿದ ವಿದ್ಯಾರ್ಥಿಗಳ ಮುಖ ಅರಳುತ್ತದೆ!ಮತ್ತೆ ನಾವೆಲ್ಲರೂ ಸೇರಿ ಚಂದ ಎ೦ದರೆ ಏನು? ಎಂಬ ಚರ್ಚೆಯಲ್ಲಿ ತೊಡಗುತ್ತೇವೆ. “ನಿಮ್ಮಅಮ್ಮ, ಅಪ್ಪನಿಗೆ ನೀವು ಬಹಳ ಚಂದ ಅಲ್ಲವೆ?” ಎ೦ದರೆಯಾರೂ ಇಲ್ಲವೆನ್ನುವುದಿಲ್ಲ. ಚಂದವೆ೦ದರೆ ಬಿಳಿ, ಚಂದವೆ೦ದರೆ ಎತ್ತರ, ಚಂದವೆ೦ದರೆ ಸಪೂರ, ಚಂದವೆ೦ದರೆ ಹೊಳಪು ಕಣ್ಣು… ಹೀಗೆ ಎಲ್ಲದರ ಬಗ್ಗೆ ಮಾತನಾಡುತ್ತೇವೆ. ಎಲ್ಲವನ್ನೂ ವೈಜ್ಞಾನಿಕವಾಗಿ ಅರಿಯುವುದು ಹೇಗೆ? ಎಂಬುದರ ಬಗ್ಗೆ ನಾನು ಕೆಲವು ಮಾಹಿತಿಗಳನ್ನು ಹೇಳುತ್ತೇನೆ. ಉದಾಹರಣೆಗೆ ನಮ್ಮಚರ್ಮದ ಬಣ್ಣವನ್ನು ನಿರ್ಧರಿಸುವುದು ನಮ್ಮ ಚರ್ಮದಲ್ಲಿರುವ ಮೆಲಾನಿನ್ ಎಂಬ ಕಣ. ಅದು ದಟ್ಟವಾಗಿದ್ದಷ್ಟೂ ಬಣ್ಣಗಾಢವಾಗುತ್ತ ಹೋಗುತ್ತದೆ. ಮೆಲಾನಿನ್ ಸೂರ್ಯನ ಬಿಸಿಲಿನ ತಾಪವನ್ನುತಡೆಯಲು ಸಹಾಯಕ. ಹಾಗಾಗಿ ಮೆಲಾನಿನ್ ಕಡಿಮೆಯಿರುವ ಬಿಳಿಯ ಬಣ್ಣದವರು ಉರಿಬಿಸಿಲನ್ನುತಡೆಯಲಾರರು.

ನಮ್ಮದು ಹೇಳಿ, ಕೇಳಿ ಉಷ್ಣವಲಯದಲ್ಲಿರುವ ದೇಶ. ಹಾಗಾಗಿ ನಮ್ಮ ಬಣ್ಣವೂ ನಸುಗಪ್ಪಾಗಿರುವುದು ಸಹಜ. ಹಾಗಾಗಿ ನಮ್ಮಲ್ಲಿಯ ಎಲ್ಲ ಪ್ರಾಚೀನ ಸುಂದರ, ಸುಂದರಿಯರೂ ಕಪ್ಪು ಬಣ್ಣದವರೆ. ಕೃಷ್ಣ, ದ್ರೌಪದಿ, ಗೌರಿ, ಬೇಲೂರು ಶಿಲಾಬಾಲಿಕೆಯರು, ನಮ್ಮೂರ ದೇವರ ಮೂರ್ತಿಗಳು… ಹೀಗೆ ನಮ್ಮ ಮಾತುಕತೆ ತಿರುವುಗಳನ್ನು ಪಡೆದುಕೊಳ್ಳುತ್ತದೆ…

ಹಾಗಾದರೆ ಬಿಳಿ ಯಾಕೆ ಚಂದ ಅನಿಸಿಕೊಂಡಿದೆ? ಯಾಕೆಂದರೆ ಜಾಗತಿಕ ಮಾರುಕಟ್ಟೆಯು ಗ್ರಾಹಕರಿಗಾಗಿ ಹಾತೊರೆಯುತ್ತಿದೆ. ಜಗತ್ತಿನ ಅತಿ ಹೆಚ್ಚು ಗ್ರಾಹಕರನ್ನು ಹೊಂದಿದ ಭಾರತದವರ ಸಹಜ ಬಣ್ಣ ನಸುಗಪ್ಪು. ಅವರೆಲ್ಲರಲ್ಲಿ ಬಿಳಿಯೇ ಚಂದ ಎಂಬ ಭಾವನೆಯನ್ನು ಮೂಡಿಸಿದರೆ ಸಾಕು, ಕಪ್ಪಗಿರುವವರಲ್ಲೆಲ್ಲಾ ಕೀಳರಿಮೆ ಬೆಳೆಯುತ್ತಾ ಸಾಗುವುದು. ಅವರಲ್ಲಿ ಕೆಲವರು ಬೆಳ್ಳಗಾಗಲು ಬಯಸಿದರೂ ಸಾಕು, ಕೋಟಿಗಟ್ಟಲೆ ಬಿಳಿಯಾಗುವ ಕ್ರೀಮು ಬಿಕರಿಯಾಗುವುದು. ಇವೆಲ್ಲವನ್ನು ಹೇಳುತ್ತಲೇ ಕಪ್ಪೆಂದರೂ ಚ೦ದವೆ ಎ೦ದಾಗ ಮಕ್ಕಳಲ್ಲೊಂದು ನಿರಾಳ ಭಾವ ಮೂಡುತ್ತದೆ. ನಿಜವಾಗಿಯೂ ನಡೆಯುವುದೂ ಇದೇ ತಾನೆ? ನಂತರ ನಮ್ಮ ಮಾತುಕತೆ ವಂಶವಾಹಿಗಳ ಕಡೆಗೆ ಹೊರಳುತ್ತದೆ.“ನಿಮ್ಮಅಪ್ಪ, ಅಮ್ಮ, ಅಜ್ಜ, ಅಜ್ಜಿ, ಮಾಮಇವರೆಲ್ಲ ನಿಮಗೆ ಇಷ್ಟ ತಾನೆ?”ಎಂದು ಕೇಳಿದರೆ ಯಾರುಇಲ್ಲವೆನ್ನುತ್ತಾರೆ! ನಮ್ಮದೇಹಅವರೆಲ್ಲರಅಂಶವನ್ನು ಹೊತ್ತು ಬಂದಿದೆ.

ನಮ್ಮಎತ್ತರ, ಬಣ್ಣ, ಚಹರೆ ಇವೆಲ್ಲವೂ ಹಿಂದಿನ ಹತ್ತು ಪೀಳಿಗೆಗಳು ನಮಗೆ ನೀಡಿದ ಉಡುಗೊರೆ. ಅವುಗಳನ್ನು ಪ್ರೀತಿಯಿಂದ, ಹೆಮ್ಮೆಯಿಂದ ಸ್ವೀಕರಿಸಬೇಕಲ್ಲವೆ? ಎಂದು ಪ್ರಶ್ನಿಸಿದಾಗ ಅವರೆಲ್ಲರೂ ಇನ್ನೊಂದು ಚೂರು ತಲೆಯೆತ್ತಿ ಹೌದೆನ್ನುತ್ತಾರೆ. ಮತ್ತೆ ನಾನವರಿಗೆ ನಾವು ನಮ್ಮಅಪ್ಪಅಮ್ಮನಅತ್ಯುತ್ತಮ ಸೃಷ್ಟಿಗಳು ಎನ್ನುತ್ತೇನೆ. ಅಮ್ಮನೊಳಗಿರುವ ಒಂದು ಅಂಡವನ್ನು ಬೇಧಿಸಲು ಓಡೋಡಿ ಬರುವ ಲಕ್ಷಾಂತರ ವೀರ್ಯಾಣುಗಳ ಚಿತ್ರವನ್ನು ತೋರಿಸಿ, “ನೋಡಿ, ಈ ಓಟದಲ್ಲಿಗೆದ್ದ ಒಂದು ಸಶಕ್ತ ವೀರ್ಯಾಣುವಿನಿಂದ ನಾವು ಆಗಿದ್ದೇವೆ. ಉಳಿದೆಲ್ಲ ನಮ್ಮ ಸಹೋದದರರನ್ನು ಹಿಂದಿಕ್ಕಿ ನಾವು ಸೃಷ್ಟಿಯಾಗಿದ್ದೇವೆ. ಆದ್ದರಿಂದ ನಾವೇ ಬೆಸ್ಟ್”ಎಂದರೆಅವರ ಕಣ್ಣುಗಳು ಅರಳುತ್ತವೆ!

ಮುಂದೆ ಅವರನ್ನು ನಾನು ಕೇಳುವ ಪ್ರಶ್ನೆ, “ನಿಮ್ಮಂತೆಇನ್ನೊಬ್ಬರಿದ್ದಾರೆಯೇ ಈ ಜಗತ್ತಿನಲ್ಲಿ?” ಇಲ್ಲವೆನ್ನುತ್ತಾರೆ ಅವರು. ಅರೆ! ಜಗತ್ತಿನಲ್ಲಿ ನನ್ನಂಥವರು ನಾನೊಬ್ಬಳೆ. ಎಂಥ ಖುಶಿಯಲ್ವಾ?ಯಾರಿಗೂ ನನ್ನಂತಿರಲು ಸಾಧ್ಯವಿಲ್ಲ. ಆದ್ದರಿಂದ ನಾನು ಇನ್ನೊಬ್ಬರೊಂದಿಗೆ ನನ್ನನ್ನು ಹೋಲಿಸಿಕೊಳ್ಳುವುದೇ ಮೂರ್ಖತನ ಎಂದಾಗ ಹೌದೆನ್ನುತ್ತಾರೆ ಅವರು. “ಆಯ್‌ಆಮ್‌ಯುನಿಕ್”ಎಂದರೆ ಅವರೆಲ್ಲರೂ ಕೈಯ್ಯೆತ್ತಿ ‘ಯೆಸ್’ ಎನ್ನುತ್ತಾರೆ. ನಮ್ಮ ಕಾಲದ ತುಂಬು ಮೈಕಟ್ಟಿನ ನಟಿಯರಾದ ಸರಿತಾ, ಮಂಜುಳಾ, ಮಾಧವಿ….. ಹೀಗೆ ಮಾತನಾಡುತ್ತ, ಅವರ ಮನೆಗಳಲ್ಲಿರುವ ಅಮ್ಮಂದಿರು, ಅತ್ತೆಯಂದಿರೆಲ್ಲ ಬಳುಕುವ ಬಳ್ಳಿಯಂತಿದ್ದಾರೆಯೆ? ಎ೦ದು ಕೇಳಿದಾಗ ಅವರು ಯೋಚಿಸಲು ಪ್ರಾರಂಭಿಸುತ್ತಾರೆ.

ಸೆಕೆಯ ನಾಡಿನಲ್ಲಿರುವವರಿಗೆ ಮೈಬಿಸಿ ಉಳಿಸಿಕೊಳ್ಳಲು ಬೇಕಾಗುವ ಕ್ಯಾಲರಿ ಕಡಿಮೆಯಿರುವುದರಿಂದ ಚೂರು ಗು೦ಡಗಿರುವುದು ಸಹಜವೆ. ಅದನ್ನುಅರಿತುಕೊಂಡೇ ಮಾರುಕಟ್ಟೆಯ ಜಾಹೀರಾತುಗಳು ಸಪೂರವಿರುವುದನ್ನು ಚಂದಎನ್ನುವುದು. ಇದ್ದಬಿದ್ದವರೆಲ್ಲ ತೆಳ್ಳಗಾಗಲು ಹಪಹಪಿಸುವುದು… ಹೌದಲ್ಲ ಅನಿಸುತ್ತದೆ ಅವರಿಗೆ. ನಾವು ಚಿಕ್ಕವರಿದ್ದಾಗ ಮನೆಯ ಕಸ ಗುಡಿಸಿ, ಒರೆಸುವುದು ಮಕ್ಕಳ ಕೆಲಸವೆಂದೇ ನಿಗದಿಯಾಗಿತ್ತು. ನಿಮ್ಮಲ್ಲಿ ಎಷ್ಟು ಜನರು ಈಗಲೂ ಇದನ್ನು ಮಾಡುತ್ತೀರಿ? ಎಂದು ಕೇಳಿದರೆ ಒಂದೆರಡೇ ಕೈಗಳು ಮೇಲಕ್ಕೇಳುತ್ತವೆ. ಓದುವ ಮಕ್ಕಳಿಗೆ ಕೆಲಸ ನೀಡಬಾರದೆಂಬುದು ಈಗಿನ ಪಾಲಕರಿಗೆ ಶಾಸನವೇ ಆಗಿಹೋಗಿದೆ. ಬೆಳೆಯುವ ವಯಸ್ಸಿನಲ್ಲಿ ಸೊಂಟ ಬಗ್ಗಿಸಿ ಮಾಡುವ ಕೆಲಸಗಳು ನಮ್ಮನಡುವನ್ನು ಸಪೂರವಾಗಿಡುತ್ತವೆ. ತೊಡೆಗಳನ್ನು ನೀಳವಾಗಿಸುತ್ತವೆ ಎಂದಾಗ ಕೆಲವರಾದರೂ ಆ ಕೆಲಸಗಳನ್ನು ಮಾಡುವ ಆಲೋಚನೆ ಮಾಡತೊಡಗುತ್ತಾರೆ.

ನಮ್ಮದೈನಂದಿನ ಜೀವನದರೀತಿ, ರಿವಾಜುಗಳನ್ನು ಮತ್ತು ಸೌಂದರ್ಯದ ಬಗೆಗಿನ ನಮ್ಮ ಪರಿಭಾಷೆಗಳನ್ನು ಇಂದುಜಾಗತಿಕ ಮಾರುಕಟ್ಟೆಯೇ ರೂಪಿಸುತ್ತಿದೆಯೆಂಬುದು ವಾಸ್ತವ. ಇದನ್ನು ಇಂದಿನ ಮಕ್ಕಳ ಮುಂದಿಡಬೇಕಾದುದು ನಮ್ಮಕರ್ತವ್ಯ. ಇದೊಂದು ಉದಾಹರಣೆ ನೋಡಿ. ನೀಳಕೂದಲು ಮತ್ತು ಗುಂಗುರು ಕೂದಲು ಇವೆರಡು ವಂಶವಾಹಿಗಳಲ್ಲಿ ಗುಂಗುರಕೂದಲಿನ ವಂಶವಾಹಿ ಪ್ರಬಲವಾಗಿರುತ್ತದೆ. ಅಪ್ಪಅಥವಾ ಅಮ್ಮ ಒಬ್ಬರಿಂದ ಗು೦ಗುರು ಕೂದಲಿನ ವಂಶವಾಹಿ ಬಂದರೂ ಸಾಕು ಮಗುವಿನ ಕೂದಲುಗುಂಗುರಾಗುತ್ತದೆ. ಕೂದಲಿನ ಬಣ್ಣದಲ್ಲಿಯೂ ಹಾಗೆ.ಕೆಂಚು ಮತ್ತು ಕಪ್ಪುಇದರಲ್ಲಿಕಪ್ಪು ಪ್ರಬಲ ವಂಶವಾಹಿ.

ಇ೦ದಿನ ಯಾವುದೇ ಶಾಂಪೂವಿನ ಜಾಹೀರಾತು ನೋಡಿ, ತೆರೆತೆರೆಯಾಗಿ ಜಾರುವ ತಿಳಿಕೆಂಚು ಬಣ್ಣದ ರೇಶಿಮೆಯ ಕೂದಲಿನವರನ್ನೇ ತೋರಿಸುವುದು. ಯಾವುದು ಬಹವಚನವೋ, ಯಾವುದು ಸಹಜವೋ ಅದನ್ನು ಕೊರೆಯೆಂದು ಬಿಂಬಿಸುತ್ತಾ ಮಾರುಕಟ್ಟೆಯನ್ನು ಗಿಟ್ಟಿಸುವುದು. ಗುಂಗುರುಕೂದಲನ್ನು ನೇರವಾಗಿಸುವುದು ಇಂದು ಪ್ರಸಾಧನ ಕ್ಷೇತ್ರದ ಬಹುದೊಡ್ಡ ಉದ್ಯಮ! ಹೀಗೆ ಹುಡುಕುತ್ತಾ ಹೋದಾಗಲೆಲ್ಲ ನಮ್ಮೊಳಗಿನ ಸಹಜತೆಯನ್ನು ಒಪ್ಪಿಕೊಳ್ಳುವ ಮನಸ್ಥಿತಿಯನ್ನು ನಾವು ಬೆಳೆಸಿಕೊಳ್ಳಬಹುದು.

ಟ್ಯಾಗೋರರ ಚಿತ್ರಾ ನಾಟಕದಲ್ಲಿ ಬರುವ ಚಿತ್ರಾ ತನ್ನ ರೂಪು ಅರ್ಜುನನನ್ನು ಮೋಹಿಸುವಷ್ಟು ಮೋಹಕವಾಗಿಲ್ಲವೆಂದು ಮದನನಿಂದ ಹೊಸರೂಪನ್ನು ಪಡೆದುಕೊಳ್ಳುತ್ತಾಳೆ. ಮಾರುಕಟ್ಟೆಯ ಮೋಹಕ್ಕೆ ಬೀಳುವ ಎಲ್ಲರದೂ ಇದೇ ಕಥೆಯೆ. ಆದರೆ ಒಮ್ಮೆ ಪಾರ್ಥನನ್ನು ಸೇರಿದ ನಂತರ ಸೌಂದರ್ಯತನ್ನನ್ನುಕವಿದ ಮುಸುಕಿನಂತೆ ಅವಳಿಗೆ ಭಾಸವಾಗುತ್ತದೆ. ಅವಳು ಮಾರುಕಟ್ಟೆಯ ಮಾಯಾಜಾಲವನ್ನು ಬದಿಗೆ ಸರಿಸಿ ತನ್ನ ನಿಜದ ಮೈಯ್ಯನ್ನು ಮತ್ತೆ ಪಡೆದುಕೊಳ್ಳುತ್ತಾಳೆ. ನಿಜಕ್ಕೂಇಂದು ನಾವೆಲ್ಲರೂ ಅಂತಹ ಚಿತ್ರಾಳಾಗುವ ಧೈರ್ಯವನ್ನುತೋರಬೇಕಿದೆ.

ತರಗತಿಯೊಳಗಿನ ಪಾಠಗಳು, ತರಬೇತಿಯಲ್ಲಿಆಡುವ ಮಾತುಗಳು ಬೀರುವ ಪ್ರಭಾವದ ತಾತ್ಕಾಲಿಕತೆಯ ಅರಿವಿದ್ದೂ ಕೂಡ ಇವೆಲ್ಲವನ್ನೂ ನಮ್ಮ ಜವಾಬ್ದಾರಿಯೆಂಬ೦ತೆ ಕಿರಿಯರಲ್ಲಿ ಹಂಚಿಕೊಳ್ಳಬೇಕಾದದ್ದು ನಮ್ಮ ಕರ್ತವ್ಯವಾಗಿದೆ. ಇಲ್ಲವಾದರೆ ಅರಿವಿಗಿರುವ ಪುಟ್ಟ ಬೆಳಕಿಂಡಿಯನ್ನೂ ನಾವು ಮುಚ್ಚಿದಂತಾಗುತ್ತದೆ. ತನ್ನ ದೇಹವನ್ನು ತಾನು ಒಪ್ಪಿಕೊಳ್ಳಲಾಗದ ಕೀಳರಿಮೆ ವ್ಯಕ್ತಿಯ ಎಲ್ಲ ಪ್ರತಿಭೆಗಳಿಗೂ ತೊಡಕಾಗಬಲ್ಲುದು. ಹೆಣ್ಣು ಮಕ್ಕಳನ್ನಂತೂ ಇಂದಿನ ಮಾರುಕಟ್ಟೆ ಒಂದು ಸರಕನ್ನಾಗಿ ಪರಿಗಣಿಸಿದೆ.

ನಿನ್ನ ಸೊಂಟ ಇಷ್ಟೇ ಸುತ್ತಳತೆಯದಾಗಿರಲಿ, ತುಟಿಗಳು ಹೀಗೆಯೇ ಇರಲಿ, ಹಲ್ಲುಗಳು ಇಷ್ಟು ಪ್ರಕಾಶಮಾನವಾಗಿರಲಿ, ನಿನ್ನ ಎದೆಯುಬ್ಬು ಇಷ್ಟಿರಬೇಕು, ಮೂಗು ಹೀಗಿದ್ದರೆ ಚಂದ, ತುಟಿಯ ಆಕಾರ ಹೀಗಿರಬೇಕು… ಉಫ್…. ಎಷ್ಟೊಂದು ವ್ಯಾಖ್ಯಾನಗಳು. ಇವೆಲ್ಲವನ್ನು ಧಿಕ್ಕರಿಸಿ ಆತ್ಮವಿಶ್ವಾಸದ ನಗೆಯೊಂದನ್ನು ನಕ್ಕು, “ನೋಡ್ರಯ್ಯಾ, ನಾನಿರೋದು ಹೀಗೆ. ಇದನ್ನೇ ಚಂದ ಅಂದುಕೊಳ್ಳಿ”ಎನ್ನುವ ದಿಟ್ಟತನ ಎಲ್ಲರದ್ದಾಗಬೇಕು. ಗಾಂಧಿ, ಮದರ್‌ತೆರೆಸಾ, ವಾರಿಸ್‌ಡೇರಿ, ದೀಪಿಕಾ ಪಡುಕೋಣೆ ಇವರೆಲ್ಲರೂ ಇದನ್ನೇತಾನೆ ಮಾಡಿದ್ದು?

ನಾನು ಮತ್ತೆ ನನ್ನ ಮೊದಲಿನ ಪ್ರಶ್ನೆಯನ್ನು ಕೇಳುತ್ತೇನೆ, “ನಿಮ್ಮಲ್ಲಿ ಚಂದ ಯಾರು?”ಎಲ್ಲರೂ ಒಕ್ಕೊರಲಿನಿ೦ದ ಹೇಳುತ್ತಾರೆ, “ನಾನು! ನಾವು!” ಅಲ್ಲಿಗೆ ನಮ್ಮಅಗಣಿತ ತರಗತಿಯೊಂದು ಮುಗಿಯುತ್ತದೆ. ಇನ್ನೂ ಬದುಕಬೇಕಾದ ಹುಡುಗಿಯೊಬ್ಬಳು ಚಂದವಾಗಲು ಹೋಗಿ ಇಲ್ಲವಾದ ದುಃಖ ನನ್ನನ್ನುಇಷ್ಟೊಂದು ಬರೆಸಿತು. ನಿಮ್ಮ ಮಕ್ಕಳೊಂದಿಗೂ ಇದೆಲ್ಲದರ ಕುರಿತು ಮಾತಾಡಿ ಪ್ಲೀಸ್…

‍ಲೇಖಕರು Admin

May 19, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: