ಶ್ರೀನಿವಾಸ ಪ್ರಭು ಅಂಕಣ- ಮಧುರ-ಕಠೋರ ನೆನಪುಗಳ ಬುತ್ತಿಯೊಂದಿಗೆ ಕೆಳಗಿಳಿದು ಬಂದೆವು..

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

50

ಜೋಶೀಮಠದ ಸುತ್ತಮುತ್ತಲ ಪ್ರದೇಶಗಳಲ್ಲೇ ಎರಡು ಮೂರು ದಿನ ಚಿತ್ರೀಕರಣ ನಡೆಯಿತು. ಒಂದು ಸಂಜೆ ಚಿತ್ರೀಕರಣ ಮುಗಿಸಿಕೊಂಡು ನಮ್ಮ ವಸತಿಗೃಹಕ್ಕೆ ಮರಳಿ ಬಂದಾಗ ಬಿಟ್ಟೂಬಿಡದಂತೆ ಜಿಟಿಜಿಟಿ ಸುರಿಯುತ್ತಿದ್ದ ಸೋನೆ ಮಳೆ… ಗದಗುಟ್ಟಿಸುತ್ತಿದ್ದ ನಡುಕ. ನಾನು ಸಾಧಾರಣವಾಗಿ ಹೀಗೆ ಚಿತ್ರೀಕರಣಕ್ಕಾಗಲೀ ತರಬೇತಿ ಶಿಬಿರಗಳನ್ನು ನಡೆಸಲು ಹೋಗುವಾಗಲಾಗಲೀ ಕೆಲ ಪುಸ್ತಕಗಳನ್ನೂ ಬರವಣಿಗೆಯ ಸಾಮಗ್ರಿಗಳನ್ನೂ ಜತೆಯಲ್ಲಿ ಒಯ್ಯುತ್ತಿದ್ದೆ—ಬಿಡುವಿನ ವೇಳೆಯ ಸದುಪಯೋಗವಾಗಲೆಂದು. ಈ ಬಾರಿ ನನ್ನ ಯೋಜನೆ ಇದ್ದದ್ದು ‘ಮಂಡೂಕ ರಾಜ್ಯ’ ನಾಟಕವನ್ನು ಸಿದ್ಧ ಪಡಿಸುವುದು. ಕುಂಬಳಗೋಡಿನಲ್ಲಿ ನಡೆಸಿದ ತರಬೇತಿ ಶಿಬಿರದ ಅಂಗವಾಗಿ ಮಾಡಿಸಿದ್ದ ಕಿರು ನಾಟಕದ ಪೂರ್ಣ ಪ್ರಮಾಣದ ವಿಸ್ತೃತ ರೂಪವೇ ‘ಮಂಡೂಕರಾಜ್ಯ’.

ಎರಡು ಮೂರು ದೃಶ್ಯಗಳನ್ನೂ ಅದಾಗಲೇ ಬರೆದು ಮುಗಿಸಿ ಗೆಳೆಯರ ಮುಂದೆ ಓದಿ ತೋರಿಸಿದ್ದೆ ಕೂಡಾ. ಈ ವಿಡಂಬನಾತ್ಮಕ ನಾಟಕದ ಪ್ರಾರಂಭದ ದೃಶ್ಯಗಳನ್ನು ಕೇಳಿ ಬಹುವಾಗಿ ಮೆಚ್ಚಿಕೊಂಡ ಗೆಳೆಯ ವಿ ಆರ್ ಕೆ ಪ್ರಸಾದ ತಾನೇ ಮಂಡೂಕರಾಯನ ಕೇಂದ್ರ ಪಾತ್ರವನ್ನು ನಿರ್ವಹಿಸುವ ಇರಾದೆಯನ್ನೂ ವ್ಯಕ್ತ ಪಡಿಸಿದ್ದ. ಕಾರಣಾಂತರಗಳಿಂದ ಅವನ ಬಯಕೆ ಈಡೇರಲಿಲ್ಲ ಅನ್ನುವುದು ಬೇರೆಯ ಮಾತು..ಇರಲಿ. ಅಂದು ಜಿಟಿಜಿಟಿ ಸೋನೆಯ ಆ ತಣ್ಣನೆಯ ಪ್ರಶಾಂತ ವಾತಾವರಣದಲ್ಲಿ ಮಂಡೂಕರಾಯನ ಪಾತ್ರದೊಂದಿಗೆ ಅನುಸಂಧಾನದಲ್ಲಿ ತೊಡಗಿದ್ದ ನನಗೆ ಇದ್ದಕ್ಕಿದ್ದ ಹಾಗೆ ಕೆಲ ಆತಂಕದ ದನಿಗಳು, ಸರಭರ ಓಡಾಟದ ಸಪ್ಪಳ ಕೇಳಿಬಂದು ನನ್ನ ಏಕಾಗ್ರತೆ ಭಂಗವಾಗಿ ಹೋಯಿತು. ಏನು ಹೆಚ್ಚುಕಮ್ಮಿಯಾಗಿದೆಯೋ ಎಂದು ನೋಡಲು ಹೊರಬಂದ ನನಗೆ ಒಂದು ಆಘಾತಕರ ಸುದ್ದಿ ತಿಳಿದುಬಂತು: ‘ಆದಿ ಶಂಕರ’ ತಂಡದ ಪುಷ್ಪವಲ್ಲಿ ಎಂಬ ಯುವ ಕಲಾವಿದೆ ಕಾಣೆಯಾಗಿದ್ದಾಳೆ! ಅಂದು ಮಧ್ಯಾಹ್ನ ಊಟದ ಸಮಯದ ನಂತರ ಆಕೆ ಯಾರ ಕಣ್ಣಿಗೂ ಬಿದ್ದಿಲ್ಲ! ಆಕೆಯ ಜತೆ ಬಂದಿದ್ದ ಆಕೆಯ ಸಾಕು ತಂದೆ ಪರಮೇಶ್ ಅವರು,”ಅಯ್ಯೋ ಮಗಳೇ..ಎಲ್ಲಿ ಹೋಗಿಬಿಟ್ಟೆಯಮ್ಮಾ.ಯಾರೂ ಗುರುತು ಪರಿಚಯವಿಲ್ಲದ ಈ ಊರಿನಲ್ಲಿ ನಿನ್ನನ್ನ ಎಲ್ಲಿ ಅಂತ ಹುಡುಕಲಿ? ದೇವರೇ..ಇದೇನು ಸಂಕಟ ಕೊಟ್ಟೆಯಪ್ಪಾ ನನಗೆ’ ಎಂದು ಒಂದೇ ಸಮ ರೋದಿಸುತ್ತಿದ್ದಾರೆ.

ಯಾರಿಗೂ ಏನು ಮಾಡಲೂ ತೋಚುತ್ತಿಲ್ಲ..ಅಪರಿಚಿತ ಜಾಗದಲ್ಲಿ ಆ ಹೆಣ್ಣುಮಗಳನ್ನು ಹುಡುಕುವುದಾದರೂ ಹೇಗೆ ಎಂಬ ಪ್ರಶ್ನೆಯೇ ಎಲ್ಲರನ್ನೂ ಕಾಡುತ್ತಿದೆ. ಕೊನೆಗೆ ನಾವು ಒಂದಷ್ಟು ಹುಡುಗರು ಎರಡು ಮೂರು ತಂಡಗಳನ್ನು ಮಾಡಿಕೊಂಡು ನಮ್ಮ ವಸತಿಗೃಹದ ಹಿಂಬದಿಗಿದ್ದ ಮಿಲಿಟರಿಯವರ ಸಂರಕ್ಷಿತ ಪ್ರದೇಶವೂ ಸೇರಿದಂತೆ ಸುತ್ತಮುತ್ತೆಲ್ಲಾ ಹುಡುಕಿ ಬಂದರೂ ಫಲಿತಾಂಶ ಮಾತ್ರ ಶೂನ್ಯ. ಜನ ಸಂಚಾರ ವಿರಳವಾಗಿರುವ ಆ ಪ್ರದೇಶದಲ್ಲಿ, ಮಂಜಿನ ಮಳೆಯೇ ಸುರಿಯುತ್ತಿರುವ ಆ ಮರಗಟ್ಟಿಸುವ ಚಳಿಯ ಇರುಳಲ್ಲಿ ಎಲ್ಲೆಂದು ಹೋಗಿ ಹುಡುಕುವುದು? ಕೆಲವರು ಹೋಗಿ ಪೋಲೀಸ್ ಠಾಣೆಯಲ್ಲೂ ದೂರು ದಾಖಲಿಸಿ ಬಂದರೆಂದು ತೋರುತ್ತದೆ; ಒಟ್ಟಿನಲ್ಲಿ ಆ ಹೆಣ್ಣುಮಗಳು ಎಲ್ಲಿ ಹೋಗಿರಬಹುದು…ಅವಳಿಗೇನಾಗಿರಬಹುದು..ಇತ್ಯಾದಿ ನೂರು ಪ್ರಶ್ನೆಗಳ ಬಿಡಿಸಲಾಗದ ಗಂಟನ್ನು ಎದುರಿಗಿಟ್ಟುಕೊಂಡು ಜಿಜ್ಞಾಸೆಯಲ್ಲಿ ತೊಡಗಿ ಇರುಳಿಗೆ ವಿದಾಯ ಹೇಳಿದೆವು.

ಬೆಳಕು ಹರಿದ ಮೇಲೂ ಆ ಹೆಣ್ಣುಮಗಳ ಯಾವ ಸುದ್ದಿಯೂ ಬಾರದೇ ಹೋದಾಗ ಆತಂಕ ಹೆಚ್ಚಾಗತೊಡಗಿತು. ಇಂಥದೊಂದು ಅನಾಹುತ ಘಟಿಸಿರುವಾಗ ಚಿತ್ರೀಕರಣ ನಡೆಸುವ ಮನಸ್ಥಿತಿಯಾದರೂ ಹೇಗಿದ್ದೀತು? ಒಂದೆಡೆ ತಂಡದ ಹೆಣ್ಣುಮಗಳೊಬ್ಬಳು ಇದ್ದಕ್ಕಿದ್ದ ಹಾಗೆ ಕಾಣೆಯಾಗಿರುವ ಆತಂಕ—ತಲ್ಲಣದ ಪರಿಸ್ಥಿತಿ..ಮತ್ತೊಂದೆಡೆ ಮೊದಲೇ ಸಮಯಾಭಾವದಿಂದ ಬಳಲುತ್ತಿದ್ದರೂ ಚಿತ್ರೀಕರಣವನ್ನು ನಡೆಸಲಾಗದ ಅಸಹಾಯಕತೆ.. ಇಂಥದೊಂದು ಸಂದಿಗ್ಧ ಸನ್ನಿವೇಶದಲ್ಲಿ ಅಯ್ಯರ್ ಅವರು ಕುದ್ದು ಹೋಗುತ್ತಿದ್ದರು.

ಬೆಳಿಗ್ಗೆ ಸುಮಾರು ಎಂಟು ಗಂಟೆಯ ಸಮಯ ಇರಬಹುದು..ನಮ್ಮ ತಾಂತ್ರಿಕ ವರ್ಗದ ಸಹಾಯಕನೊಬ್ಬ ತಂದ ಸುದ್ದಿಯಿಂದ ನಾವೆಲ್ಲರೂ ಅಕ್ಷರಶಃ ಸ್ತಂಬೀಭೂತರಾಗಿಬಿಟ್ಟೆವು!ಆತ ಹೇಳಿದ್ದಿಷ್ಟು: ನಮ್ಮ ವಸತಿಗೃಹದಿಂದ ಒಂದು ಕಿ ಮೀ ದೂರದಲ್ಲಿದ್ದ ಹೆರಿಗೆ ಆಸ್ಪತ್ರೆಯಲ್ಲಿ ಪುಷ್ಪವಲ್ಲಿ ಹೆಣ್ಣುಮಗುವಿಗೆ ಜನ್ಮವಿತ್ತಿದ್ದಾಳೆ!ತಾಯಿ—ಮಗು ಆರೋಗ್ಯವಾಗಿದ್ದಾರೆ! ಹಲವು ಹತ್ತು ನಿಮಿಷಗಳು. ನಾವೆಲ್ಲರೂ ಹಾಗೇ ನಿಶ್ಚಲರಾಗಿ ನಿಂತು ಬಿಟ್ಟೆವು! ಬಾಯಿಗೆ ಬೀಗ ಜಡಿದಂತೆ ಯಾರೊಬ್ಬರದೂ ಒಂದು ಮಾತೂ ಇಲ್ಲ..ಉಸಿರಾಟದ ಸದ್ದೂ ಕೇಳುವಂತಹ ಮೌನ ಕವಿದುಬಿಟ್ಟಿತ್ತು. ಇದು ನಿಜವೇ? ಇದು ಸಾಧ್ಯವೇ? ಅವಿವಾಹಿತಳಾಗಿದ್ದ ಆ ಹೆಣ್ಣುಮಗಳು ಬಸಿರಾಗಿದ್ದಳೇ? ಕೊನೆಯ ಕ್ಷಣದ ತನಕ ಹಾಗೆ ಬಸಿರನ್ನು ಮುಚ್ಚಿಟ್ಟು ಕಾಪಾಡಿಕೊಂಡು ಬರುವುದು ಶಕ್ಯವಿದೆಯೇ? ಕಡೆಯ ಪಕ್ಷ ಸಾಕು ತಂದೆಗಾದರೂ ಅನುಮಾನ ಬಂದಿರಲಿಲ್ಲವೇ? ಕೊಂಚ ಸ್ಥೂಲಕಾಯದ ಆ ಹೆಣ್ಣುಮಗಳು ಹೊಟ್ಟೆಯ ಸುತ್ತ ಒಂದಷ್ಟು ಬಟ್ಟೆಗಳನ್ನು ಸುತ್ತಿಕೊಂಡು ಕೂತೇಳಲು ಒದ್ದಾಡುತ್ತಿದ್ದುದು..ನಿಧಾನವಾಗಿ ಓಡಾಡುತ್ತಿದ್ದುದು..ಈ ಎಲ್ಲಾ ಚಿತ್ರಗಳೂ ಕಣ್ಮುಂದೆ ಬರತೊಡಗಿದವು. ಆದರೂ ಒಬ್ಬರಿಗಾದರೂ, ಕಡೆಯ ಪಕ್ಷ ಅಲ್ಲಿದ್ದ ನಾಲ್ಕಾರು ಹೆಣ್ಣುಮಕ್ಕಳಿಗಾದರೂ ಸೂಕ್ಷ್ಮ ತಿಳಿಯಲಿಲ್ಲವೇಕೆ? ಈ ಯಾವ ಪ್ರಶ್ನೆಗೂ ಯಾರಿಗೂ ಯಾವ ಉತ್ತರವೂ ತೋಚಲಿಲ್ಲ. “ಮುಂಡಾಮೋಚ್ತು.. ಯಾರು ಎಲ್ಲಾದರೂ ಹೋಗಿ ಏನಾರು ಮಾಡಿಕೊಂಡು ಸಾಯಲಿ.. ನಡೀರಯ್ಯಾ.. ನಾವು ಶೂಟಿಂಗ್ ಮುಂದುವರಿಸೋಣ..ನನ್ನ ಗ್ರಹಚಾರ..ಒಂದಷ್ಟು ಶಾಟ್ ಗಳನ್ನ ಮತ್ತೆ ತೆಗೀಬೇಕು.. ಏನು ಮಾಡೋಕಾಗುತ್ತೆ? ನಡೀರಿ” ಎನ್ನುತ್ತಾ ಹೆಗಲ ಮೇಲಿದ್ದ ಟವಲ್ ಅನ್ನು ಜೋರಾಗಿ ಝಾಡಿಸುತ್ತಾ ಅಯ್ಯರ್ ಅವರು ಎದ್ದು ಹೊರಟರು.

ಆ ದಿನದ ನಂತರ ಆ ಹೆಣ್ಣುಮಗಳಾಗಲೀ ಅವಳ ಸಾಕು ತಂದೆಯಾಗಲೀ ಚಿತ್ರೀಕರಣಕ್ಕೆ ಮರಳಲಿಲ್ಲ. ತದನಂತರದಲ್ಲಿ ತಿಳಿದುಬಂದ ಮತ್ತೊಂದು ಸುದ್ದಿಯೆಂದರೆ ಆ ಕೂಸನ್ನು ಯಾವುದೋ ಅನಾಥಾಲಯದಲ್ಲಿ ಬಿಟ್ಟು ಸಾಕು ತಂದೆ—ಮಗಳು ಊರಿಗೆ ಮರಳಿದ್ದಾರೆ! ಬಹುಶಃ ನನ್ನನ್ನು ಹೆಚ್ಚು ಗಾಸಿಗೊಳಿಸಿದ ಸುದ್ದಿ ಇದು. ಯಾರ ತಪ್ಪಿಗೆ ಯಾರಿಗೆ ಶಿಕ್ಷೆ?

ತಂಡದಲ್ಲಿ ಒಬ್ಬೊಬ್ಬರು ಒಂದೊಂದು ಬಗೆಯಾಗಿ ತಮ್ಮ ಅಭಿಪ್ರಾಯಗಳನ್ನು ಈ ಪ್ರಸಂಗದ ಕುರಿತಾಗಿ ತೇಲಿಬಿಡುತ್ತಿದ್ದರು. ಕೆಲವರಿಗೆ ಕ್ಷಣಿಕ ಸುಖಕ್ಕೆ ಮೈಮರೆತ ಹುಡುಗಿಯ ‘ಅನೈತಿಕ’ ನಡತೆಯೇ ದೊಡ್ಡದಾಗಿ ಕಂಡರೆ ಮತ್ತೊಬ್ಬರಿಗೆ ಸಾಕು ಮಗಳ ಚಾರಿತ್ರ್ಯದ ಬಗ್ಗೆ ಕೊಂಚವೂ ಗಮನ ಹರಿಸದೆ ಸ್ವೇಚ್ಛೆಯಾಗಿರಲು ಬಿಟ್ಟ ಸಾಕುತಂದೆಯ ಬೇಜವಾಬ್ದಾರಿತನವೇ ದೊಡ್ಡದಾಗಿ ಕಂಡು ಬಾಧಿಸುತ್ತಿತ್ತು! ತುಂಬು ಬಸಿರನ್ನು ಅನುಮಾನ ಬರದಂತೆ ಮರೆಮಾಚಿದ ಹುಡುಗಿಯ ‘ಜಾಣ್ಮೆ’ ಕೆಲವರಿಗೆ ಸೋಜಿಗ ಮೂಡಿಸಿದರೆ ಇನ್ನು ಕೆಲವರಿಗೆ ಆ ಬೆಟ್ಟಗುಡ್ಡಗಳ ದುರ್ಗಮ ಪ್ರದೇಶಗಳ ಕಷ್ಟಕರ ಪ್ರಯಾಣವನ್ನು ಆಕೆ ಎದೆಗುಂದದೆ ಸಹಿಸಿಕೊಂಡದ್ದೇ ಒಂದು ಪವಾಡವಾಗಿ ತೋರುತ್ತಿತ್ತು.

ನನಗೋ ಈ ಎಲ್ಲ ಗದ್ದಲ—ವಿಚಾರ ವಿಮರ್ಶೆಗಳ, ತಪ್ಪು ಒಪ್ಪುಗಳ ಲೆಕ್ಕಾಚಾರದ ನಡುವೆ ಆಸ್ಪತ್ರೆಯಲ್ಲಿ ಇನ್ನೂ ನೆಟ್ಟಗೆ ಕಣ್ಣು ತೆರೆಯದ, ತಾಯಿಯ ಎದೆಹಾಲಿನ ಜೀವದ್ರವ್ಯದಿಂದಲೂ ವಂಚಿತವಾದ ಆ ಪುಟ್ಟ ಕಂದಮ್ಮನ ಮೆಲುದನಿಯ ಬಿಕ್ಕು ದೂರದಿಂದೆಲ್ಲಿಂದಲೋ ತೇಲಿಬಂದಂತೆ ಭಾಸವಾಗಿ ವಿಚಲಿತನನ್ನಾಗಿ ಮಾಡುತ್ತಿತ್ತು. ಹುಟ್ಟಿಗೆ ಕಾರಣನಾದ ಪುರುಷನಿದ್ದಾನೆ.. ಜನ್ಮ ಕೊಟ್ಟು ಭೂಮಿಗಿಳಿಸಿದ ತಾಯಿಯಿದ್ದಾಳೆ… ಆದರೂ ಕೂಸು ಬೆಳೆಯಬೇಕಿರುವುದು ಅನಾಥನೆಂಬ ಹಣೆಪಟ್ಟಿ ಹಚ್ಚಿಕೊಂಡು ಯಾರದೋ ದಯೆಯ ಆಶ್ರಯದಲ್ಲಿ.. ಯೋಚಿಸಿದಷ್ಟೂ ಮನಸ್ಸು ಖಿನ್ನವಾಗುತ್ತಿತ್ತು. ಬಹಳ ದಿನಗಳ ಕಾಲ ಆ ಕೂಸಿನ ಬಿಕ್ಕು ನನ್ನನ್ನು ಕಾಡಿದ್ದುಂಟು. ಈಗಲೂ ಒಮ್ಮೊಮ್ಮೆ ನೆನಪಾದರೆ ಎದೆ ಭಾರವಾಗುತ್ತದೆ.

ಜೋಶೀಮಠದ ಸುತ್ತಮುತ್ತಲ ಪ್ರದೇಶಗಳಲ್ಲಿ ಚಿತ್ರೀಕರಣ ಮುಗಿಸಿ ನಾವು ಮಿನಿ ಬಸ್ ನಲ್ಲಿ ಹೊರಟದ್ದು ಬದರಿ—ಕೇದಾರ ಕ್ಷೇತ್ರಗಳೆಡೆಗೆ. ಹಾದಿಯುದ್ದಕ್ಕೂ ಹಿಮಪಾತ…ಒಂದೇ ಶೃತಿ ಹಿಡಿದು ಜಿನುಗುತ್ತಲೇ ಇದ್ದ ಮಳೆ..’ಅಹಹಹ ಪುಟ್ಟಿತು ಚಳಿ ಬಳೆದುದು ಚಳಿ..’ ಎಂಬ ಹರಿಹರನ ಚಳಿಯ ವರ್ಣನೆಯನ್ನು ನೆನಪಿಸುತ್ತಿದ್ದ,ಮಾತಿನಲ್ಲಿ ಹೇಳಲಾಗದಷ್ಟು ತೀವ್ರ ಚಳಿ! ಈ ಕೊರೆಯುವ ಚಳಿಯಿಂದ ರಕ್ಷಿಸಿಕೊಳ್ಳಲು ಬ್ಯಾನರ್ಜಿ ಒಂದೆರಡು ರಮ್ ಬಾಟಲ್ ಗಳನ್ನು ತಂದಿದ್ದ. ಒಂದು ಹನಿ ನೀರೂ ಬೆರೆಸದೆ ಹಾಗೇ ಗಂಟಲಿಗೆ ಸುರುವಿಕೊಂಡರೂ ಮೈ ಸಾಸಿವೆ ಕಾಳಿನಷ್ಟಾದರೂ ಬೆಚ್ಚಗಾಗಿದ್ದರೆ ಆಣೆ! ‘ದೇಶ ಆಳುತ್ತಿರುವವರ ದುರಾಡಳಿತವೇ ಈ ಅಕಾಲ ಹಿಮಪಾತಕ್ಕೆ ಕಾರಣ’ ಎಂದು ಅಲ್ಲಿಯ ಜನ ಗೊಣಗುತ್ತಿದ್ದುದೂ ಕೇಳಿಬರುತ್ತಿತ್ತು.

ನಮ್ಮ ಮಿನಿ ಬಸ್ ನ ಚಾಲಕನ ಹೆಸರು ಅವತಾರ ಸಿಂಗ್. ಆತ ಅತ್ಯಂತ ಕಿರಿದಾದ,ಭಯಂಕರ ತಿರುವುಗಳ ಆ ಹಿಮದ ರಸ್ತೆಯಲ್ಲಿ ಮೈಯೆಲ್ಲಾ ಕಣ್ಣಾಗಿ ಬಸ್ ಓಡಿಸುತ್ತಿದ್ದ. ಒಮ್ಮೆ ನಾನು ಬಸ್ ನ ಮುಂಭಾಗದಲ್ಲಿ ಚಾಲಕರ ಬದಿಗೇ ಇದ್ದ ಆಸನದಲ್ಲಿ ಕುಳಿತು ಸುತ್ತಲ ರುದ್ರ ರಮಣೀಯ ದೃಶ್ಯಾವಳಿಯನ್ನು ನೋಡುತ್ತಾ ರೋಮಾಂಚನಗೊಳ್ಳುತ್ತಿದ್ದೆ. ಅಷ್ಟರಲ್ಲೇ ಒಂದು ಹೇರ್ ಪಿನ್ ತಿರುವು ಎದುರಾಯಿತು. ಬಸ್ ತಿರುವಿನಲ್ಲಿ ತಿರುಗುತ್ತಿದ್ದರೆ ಮುಂದೆ ಕುಳಿತಿದ್ದ ನನಗೆ ರಸ್ತೆಯೇ ಕಾಣದೆ ಬಸ್ ಎದುರಿನ ಪ್ರಪಾತಕ್ಕೆ ಜಾರುತ್ತಿದೆ ಅನ್ನಿಸಿ ಅಯ್ಯೋ ಎಂಬ ಚೀತ್ಕಾರ ನನ್ನಿಂದ ಹೊಮ್ಮಿಯೇ ಬಿಟ್ಟಿತು! ಬಲು ಎಚ್ಚರಿಕೆಯಿಂದ ಬಸ್ ಓಡಿಸುತ್ತಿದ್ದ ಅವತಾರ್ ಸಿಂಗ್ ಒಂದಿಷ್ಟೂ ದೃಷ್ಟಿ ಹೊರಳಿಸದೆ ಮುಂದೆಯೇ ನೋಡುತ್ತಾ “ಚುಪ್..ಚುಪ್ ಬೈಠೋ” ಎಂದು ಗದರಿದ.

ಸಾವನ್ನೇ ಎದುರು ಕಂಡಂಥ ಭಯ—ಗಾಬರಿಗಳಲ್ಲಿ ನಡುಗುತ್ತಾ ಜೀವವನ್ನು ಕೈಲಿ ಹಿಡಕೊಂಡು ಬದರೀನಾರಾಯಣ—ಕೇದಾರೇಶ್ವರರ ಜಪ ಮಾಡುತ್ತಾ ಕಣ್ಮುಚ್ಚಿ ಕುಳಿತುಬಿಟ್ಟೆ. ಒಂದಷ್ಟು ದೂರ ಕ್ರಮಿಸಿದ ಮೇಲೆ ಕೊಂಚ ಸಮತಟ್ಟಾದ ನೆಲ ಸಿಕ್ಕಂತಾಗಿ ಅವತಾರ್ ಸಿಂಗ್ ಬಸ್ ನಿಲ್ಲಿಸಿ ನನ್ನತ್ತ ತಿರುಗಿ,”ತುಮ್ ಪೀಛೇ ಜಾಕೇ ಬೈಠೋ..ಡರ್ ಪೋಕ್ ಲೋಗ್ ಯಹಾ ನಹೀ ಬೈಠತೇ” ಎಂದು ಮತ್ತೊಮ್ಮೆ ಗದರಿ ನನ್ನನ್ನು ಹಿಂಬದಿಗೆ ಸಾಗಿಹಾಕಿಬಿಟ್ಟ! ಎಲ್ಲರೆದುರಿಗೆ ಹಾಗೆ ಅನ್ನಿಸಿಕೊಂಡದ್ದು ಕೊಂಚ ಮುಜುಗರವೇ ಆದರೂ ಹೆದರಿ ನಡುಗುವುದು ತಪ್ಪಿತಲ್ಲಾ ಎಂದು ಸಮಾಧಾನವೇ ಆಯಿತು! ಮುಂದೆಯೂ ಚಿತ್ರೀಕರಣದುದ್ದಕ್ಕೂ ಇಂಥ ಅನೇಕ ಮೈ ನಡುಗಿಸುವ ಪ್ರಸಂಗಗಳು ಎದುರಾಗುತ್ತಲೇ ಇದ್ದವು. ಕೇದಾರನಾಥಕ್ಕೆ ಹತ್ತಾರು ಕಿ ಮೀ. ಗಳ ಕಾಲ್ನಡಿಗೆಯ ಪ್ರಯಾಣ…ಮುರಗೋಡ್ ಎಂಬ ದೆಹಲಿಯ ಕಲಾವಿದ ಮಿತ್ರರ ಎಡಗಾಲು ಹಿಮದ ಕಳ್ಳದಲ್ಲಿ ಕೆಳಗೆ ಜಾರಿ ಹೂತುಹೋಗಿ ವಿಹ್ವಲರಾಗಿ ಕೂಗುತ್ತಿದ್ದ ಅವರನ್ನು ನಾವೆಲ್ಲರೂ ಸೇರಿ ಎಳೆದು ಹಾಕಿದ್ದು.. ಕೇವಲ ಒಂದು ತುಂಡು ಪಂಚೆಯುಟ್ಟು ಹಿಮದ ಮಳೆಯಲ್ಲಿ ತೋಯುತ್ತಾ ನಡುಗುದನಿಯಲ್ಲಿ ಶ್ಲೋಕ ಹಾಡಿದ್ದು..ಕೇದಾರನಾಥದಲ್ಲಿ ಒಂದು ಪುಟ್ಟ ಕೋಣೆಯಲ್ಲಿ 15—20 ಜನ ಮಲಗಿದ್ದಾಗ ಉಸಿರು ಕಟ್ಟಿದಂತಾಗಿ ತಿಂದದ್ದನೆಲ್ಲಾ ಹೊದಿಕೆಯ ಮೇಲೆಯೇ ಕಕ್ಕಿಕೊಂಡು ಮತ್ತೆ ಚಳಿಯಲ್ಲಿ ನಡುಗುತ್ತಾ ಇರುಳು ದೂಡಿದ್ದು…ಒಂದೇ ಎರಡೇ? ಇಷ್ಟೆಲ್ಲಾ ಅವಾಂತರಗಳ ನಡುವೆಯೂ ಅಯ್ಯರ್ ಅವರು ತಮ್ಮ ಕಲ್ಪನೆಗೆ ತಕ್ಕಹಾಗೆ ಚಿತ್ರೀಕರಣ ನಡೆಸಿದರು;ಕಲಾವಿದರು ಹಾಗೂ ತಂತ್ರಜ್ಞರು ಎಷ್ಟೇ ಕಷ್ಟವಾದರೂ ಏನೇ ಗೊಣಗಿಕೊಂಡರೂ ನಿರ್ದೇಶಕರಿಗೆ ಸಂಪೂರ್ಣ ಸಹಕಾರ ನೀಡಿ ಒಟ್ಟಾರೆ ಚಿತ್ರೀಕರಣ ಗುರಿ ಮುಟ್ಟುವುದಕ್ಕೆ ಸಹಕರಿಸಿದರು.

ಅಂತೂ ಇಂತೂ ಬದರಿ—ಕೇದಾರಗಳಲ್ಲೆಲ್ಲಾ ಯಶಸ್ವಿಯಾಗಿ ಶೂಟಿಂಗ್ ಮುಗಿಸಿಕೊಂಡು ಮರಳಿ ಹೊರಟಾಗ ಒಂದು ರೀತಿಯ ಮಿಶ್ರ ಭಾವ ಮನಸ್ಸನ್ನಾವರಿಸಿತ್ತು. ಒಂದೆಡೆ ಕೊರೆಯುವ ಚಳಿ ಗಾಳಿಗಳಿಂದ,ಭಯಂಕರ ತಿರುವುಗಳಲ್ಲಿನ ಭಯಭೀತಗೊಳಿಸುವ ಪ್ರಯಾಣಗಳಿಂದ, ಅಕಾಲ ಹಿಮ ವೃಷ್ಟಿಯಿಂದ ಮುಕ್ತಿ ದೊರೆಯುತ್ತಿರುವುದು ಖುಷಿಯ ಸಂಗತಿಯೇ ಆಗಿದ್ದರೂ ಈ ಹಿಮಾಚ್ಛಾದಿತ ಉನ್ನತ ಪರ್ವತ ಶಿಖರ ಶ್ರೇಣಿಗಳ ದರ್ಶನ ಮಾತ್ರದ ದಿವ್ಯಾನುಭೂತಿ ಮತ್ತೆ ದೊರೆಯುವುದಾದರೂ ಎಂದಿಗೋ ಎಂಬ ವಿಷಾದದ ಭಾವವೂ ಒತ್ತರಿಸಿಕೊಂಡು ಬಂದಿತು.ಹಿಮವತ್ಪರ್ವತ ರಾಜನಿಗೆ ವಿದಾಯ ಹೇಳಿ ಭಾರವಾದ ಹೃದಯದೊಂದಿಗೆ ಅನೇಕ ಮಧುರ—ಕಠೋರ ನೆನಪುಗಳ ಬುತ್ತಿಯೊಂದಿಗೆ ಕೆಳಗಿಳಿದು ಬಂದೆವು.

ಇದಾದ ಕೆಲವು ದಿನಗಳಿಗೇ ‘ಆದಿ ಶಂಕರಾಚಾರ್ಯ’ ಚಿತ್ರದ ಚಿತ್ರೀಕರಣ ಪೂರ್ಣಗೊಂಡು, ನಂತರದ ಕೆಲ ದಿನಗಳಲ್ಲೇ ಎಡಿಟಿಂಗ್—ಡಬ್ಬಿಂಗ್—ರೀರೆಕಾರ್ಡಿಂಗ್ ಇತ್ಯಾದಿ ತಾಂತ್ರಿಕ ಕೆಲಸಗಳೂ ಪೂರ್ಣಗೊಂಡು ವಿಶ್ವದ ಮೊಟ್ಟಮೊದಲ ಸಂಸ್ಕೃತ ಭಾಷೆಯ ಚಲನಚಿತ್ರ ಸಿದ್ಧವಾಗಿಯೇ ಹೋಯಿತು.ಅಷ್ಟೇ ಅಲ್ಲ, ಆ ವರ್ಷದ ಸ್ವರ್ಣಕಮಲ ಪ್ರಶಸ್ತಿಯನ್ನು ಗಳಿಸಿದ ಹೆಗ್ಗಳಿಕೆಗೂ ಪಾತ್ರವಾಯಿತು.”ಈ ಪ್ರಶಸ್ತಿಗೆ ನಾನೊಬ್ಬನೇ ಭಾಜನನಲ್ಲ;ಈ ಚಿತ್ರ ಇಷ್ಟು ಸೊಗಸಾಗಿ, ವಿಭಿನ್ನವಾಗಿ ಮೂಡಿ ಬಂದಿರುವುದರ ಹಿಂದೆ ಅನೇಕ ಕಲಾವಿದರ, ತಂತ್ರಜ್ಞರ ಪ್ರತಿಭಾ ಸ್ಪರ್ಶವಿದೆ;ಒಂದರ್ಥದಲ್ಲಿ ಈ ಪ್ರಶಸ್ತಿ ಅವರೆಲ್ಲರಿಗೂ ಸಲ್ಲಬೇಕು” ಎಂದುಹೃದಯ ಪೂರ್ವಕವಾಗಿ ನುಡಿದ ಜಿ ವಿ ಅಯ್ಯರ್ ಅವರು ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ ಅದ್ದೂರಿ ಸಮಾರಂಭವನ್ನೇರ್ಪಡಿಸಿ ಎಲ್ಲಾ ತಂತ್ರಜ್ಞರು ಹಾಗೂ ಕಲಾವಿದರನ್ನು ವಿಶೇಷ ಆಸನದಲ್ಲಿ ಕುಳ್ಳಿರಿಸಿ ಪುಷ್ಪ ವೃಷ್ಟಿಗರೆಸಿ, ಶಂಕರರ ಕಂಚಿನ ಪ್ರತಿಮೆಯನ್ನು ನೆನಪಿನ ಕಾಣಿಕೆಯಾಗಿ ನೀಡಿ ಗೌರವಿಸಿದರು. ಹೀಗೆ ಅನೇಕ ಪ್ರಥಮಗಳ ಒಂದು ವಿಶ್ವಮಾನ್ಯ ಚಲನಚಿತ್ರದ ಭಾಗವಾಗಿ ನಾನೂ ಪಾಲುಗೊಂಡಿದ್ದೆನೆನ್ನುವುದು ನನಗೆ ಅತಿ ಹೆಮ್ಮೆಯ ಹಾಗೂ ಸಂತಸದ ವಿಷಯ.

‘ಆದಿ ಶಂಕರಾಚಾರ್ಯ’ ಚಿತ್ರದ ನಂತರ ಅಯ್ಯರ್ ಅವರು ಇದೇ ಪರಂಪರೆಯನ್ನು ಮುಂದುವರಿಸಿಕೊಂಡು ಬಂದು ಮಧ್ವಾಚಾರ್ಯರ ಬಗ್ಗೆ, ರಾಮಾನುಜರ ಬಗ್ಗೆ,ಸ್ವಾಮಿ ವಿವೇಕಾನಂದರ ಬಗ್ಗೆ ,ಭಗವದ್ಗೀತೆಯ ಬಗ್ಗೆ ಅರ್ಥಪೂರ್ಣ ಚಿತ್ರಗಳನ್ನು ಮಾಡಿದರು. ಹಾಗೆಯೇ ಅವರು ದೆಹಲಿ ದೂರದರ್ಶನಕ್ಕಾಗಿ ನಿರ್ಮಿಸಿದ ಧಾರಾವಾಹಿ ‘ಶ್ರೀ ಕೃಷ್ಣಾವತಾರ’. ತಮ್ಮ ಕಥಾನಕದ ಕೇಂದ್ರಪಾತ್ರಗಳನ್ನು ಪವಾಡ ಪುರುಷರಂತೆ ಅತಿ ರಂಜಿತ ಶೈಲಿಯಲ್ಲಿ ಚಿತ್ರಿಸುವ ಗೊಡವೆಗೆ ಹೋಗದೆ ಆ ಪಾತ್ರಗಳಲ್ಲಿ ಹುದುಗಿರುವ ಅನುಕರಣೀಯವೂ ಆದರ್ಶಪ್ರಾಯವೂ ಆದ ಮಾನವೀಯ ಗುಣಗಳನ್ನೂ ಅವರ ಉಪದೇಶ ಸಾರವನ್ನೂ ಸಮರ್ಥವಾಗಿ ಪ್ರತಿಬಿಂಬಿಸುವ ಪ್ರಯತ್ನ ಮಾಡಿದರು ಜಿ.ವಿ. ಅಯ್ಯರ್.

ವಾಸ್ತವವಾಗಿ ಮುಂದಿನ ಕೆಲ ಸಂಗತಿಗಳು ನಂತರದ ಕಾಲಘಟ್ಟದಲ್ಲಿ ಬರುವವೇ ಆದರೂ ಅಯ್ಯರ್ ಅವರ ವ್ಯಕ್ತಿಚಿತ್ರಣವನ್ನು ಒಂದೇ ಬೀಸಿನಲ್ಲಿ ಹಿಡಿದಿಡುವ ಉದ್ದೇಶದಿಂದ ಆ ಪ್ರಸಂಗಗಳನ್ನು ಇಲ್ಲಿಯೇ ದಾಖಲಿಸುತ್ತಿದ್ದೇನೆ.

ಅಯ್ಯರ್ ಅವರು ಆದಿ ಶಂಕರ ಚಿತ್ರದ ನಂತರ ಮುಂದಿನ ಚಿತ್ರಗಳನ್ನು ಮಾಡುವ ವೇಳೆಗೆ ನಾನು ದೂರದರ್ಶನದಲ್ಲಿ ಕಾರ್ಯಕ್ರಮ ನಿರ್ಮಾಪಕನಾಗಿ ಕೆಲಸಕ್ಕೆ ಸೇರಿಬಿಟ್ಟಿದ್ದರಿಂದ ಚಲನಚಿತ್ರಗಳಲ್ಲಿ ಅಭಿನಯಿಸುವುದಕ್ಕೆ ಪರವಾನಗಿ ಇರಲಿಲ್ಲ.ಹಾಗಾಗಿ ಅಯ್ಯರ್ ಅವರು ಪಾತ್ರ ಮಾಡಲು ಆಹ್ವಾನಿಸಿದರೂ ನಾನು ಮಾಡಲಾಗಲಿಲ್ಲ.”ಬಿಡಯ್ಯಾ..ನೀನು ಪಾತ್ರ ಮಾಡೋದಕ್ಕಾಗದಿದ್ದರೆ ಪರವಾಗಿಲ್ಲˌ..ನಿನ್ನ ಧ್ವನಿಯನ್ನ ಬಳಸ್ಕೋತೀನಿ” ಅಂದರು ಅಯ್ಯರ್ ಅವರು. ಮಧ್ವಾಚಾರ್ಯರ ಪಾತ್ರ ಮಾಡಿದವರು ಪೂರ್ಣಪ್ರಸಾದ್ ಎಂಬ ಕಲಾವಿದರು;ಕನ್ನಡ ನಾಡಿನ ಸುಪ್ರಸಿದ್ಧ ಪ್ರಭಾತ್ ಕಲಾವಿದರು ಕುಟುಂಬದ ಕುಡಿ. ಆ ಚಿತ್ರದಲ್ಲಿ ನಾನು ಅವರಿಗೆ ಕಂಠದಾನ ಮಾಡಿದೆ. ಹಾಗೆಯೇ ಅಯ್ಯರ್ ಅವರು ಭಗವದ್ಗೀತೆ ಚಿತ್ರವನ್ನು ಮಾಡಿದಾಗ ಶ್ರೀಕೃಷ್ಣನ ಪಾತ್ರಧಾರಿ ಗೋಪಿಗೆ (ಬಾಲ ಶಂಕರನ ಪಾತ್ರ ಮಾಡಿದವರು) ಕಂಠದಾನ ಮಾಡಿದೆ. ಇಲ್ಲಿಯ ವಿಶೇಷ ಎಂದರೆ ಕನ್ನಡ ಹಾಗೂ ಹಿಂದಿ ಭಾಷೆಗಳೆರಡರಲ್ಲೂ ನಾನೇ ಗೋಪಿ ಅವರಿಗೆ ಧ್ವನಿಯಾದದ್ದು.ಮುಂದೆ ಅಯ್ಯರ್ ಅವರು ‘ನಾಟ್ಯರಾಣಿ ಶಾಂತಲಾ’ ಚಿತ್ರವನ್ನು ಮಾಡ ಹೊರಟಾಗ ಪರವಾನಗಿ ಇಲ್ಲದಿದ್ದರೂ ಕದ್ದು ಮುಚ್ಚಿ ಪಾತ್ರ ಮಾಡಿಯೇ ಬಿಡುತ್ತೇನೆ ಎಂದು ನಿರ್ಧರಿಸಿಬಿಟ್ಟೆ. ಪ್ರಸಿದ್ಧ ನೃತ್ಯ ಕಲಾವಿದೆ ಮಂಜು ಭಾರ್ಗವಿಯವರ ನಿರ್ಮಾಣದ ಆ ಚಿತ್ರದಲ್ಲಿ ಅಯ್ಯರ್ ಅವರು ನನಗೆ ರಾಮಾನುಜಾಚಾರ್ಯರ ಅನುಯಾಯಿಗಳಾದ ಆಂಡಾನ್ ಅನ್ನುವವರ ಪಾತ್ರ ನೀಡಿದ್ದರು. ರಂಗಭೂಮಿಯ ಗೆಳೆಯರಾದ ಸುಂದರರಾಜ್, ಅವಿನಾಶ್, ಸತ್ಯಸಂಧ, ಭರತ್ ಭಾಗವತರ್ ಮುಂತಾದವರೆಲ್ಲಾ ಆ ಚಿತ್ರದಲ್ಲಿ ಮುಖ್ಯ ಪಾತ್ರಗಳನ್ನು ನಿರ್ವಹಿಸುತ್ತಿದ್ದರು.ದುರದೃಷ್ಟವಶಾತ್ ಆ ಚಿತ್ರ ಪೂರ್ಣಗೊಳ್ಳಲೇ ಇಲ್ಲ. ಆ ಪಾತ್ರಕ್ಕಾಗಿ ತಲೆ ಬೋಳಿಸಿಕೊಂಡು ಆ ನಂತರ ಒಂದಷ್ಟು ದಿನ ಟೋಪಿ ಹಾಕಿಕೊಂಡು ಓಡಾಡಿದ್ದಷ್ಟೇ ಬಂತು! ದೂರದರ್ಶನಕ್ಕಾಗಿಯೇ ಅಯ್ಯರ್ ಅವರು ನಿರ್ದೇಶಿಸಿದ ಧಾರಾವಾಹಿ ಎಂದರೆ ‘ಶ್ರೀ ಕೃಷ್ಣಾವತಾರ’. ಇದರಲ್ಲಿ ನಾನು ಅಕ್ರೂರನ ಪಾತ್ರವನ್ನು ನಿರ್ವಹಿಸುತ್ತಿದ್ದೆ.

ಪ್ರಸಿದ್ಧ ನಟಿ ಮಾಲವಿಕಾ ಈ ಧಾರಾವಾಹಿಯಲ್ಲಿ ಬಾಲಕೃಷ್ಣನ ಪಾತ್ರವನ್ನು ನಿರ್ವಹಿಸುತ್ತಿದ್ದರು.ಎಂದಿನಂತೆ ಕೇರಳದ ಸುಪ್ರಸಿದ್ಧ ಛಾಯಾಗ್ರಾಹಕ ಮಧು ಅಂಬಟ್ ಅವರು ಅಯ್ಯರ್ ಅವರಿಗೆ ಜೊತೆಯಾಗಿದ್ದರು.ಆಗ ದೂರದರ್ಶನದಲ್ಲಿ ಕಾರ್ಯಕ್ರಮ ನಿರ್ಮಾಪಕನಾಗಿದ್ದ ನನಗೆ ಅಲ್ಲಿ ಸಹಾಯಕರಾಗಿದ್ದವರು ಪ್ರತಿಭಾವಂತ ಉತ್ಸಾಹೀ ತರುಣ ರಾಜೇಂದ್ರ ಕಟ್ಟಿ.ಒಂದು ಪಾತ್ರ ಮಾಡಲೂ ಸಹಾ ಬಹು ಉತ್ಸಾಹದಿಂದಿದ್ದ ರಾಜ ಒಂದು ವಾರದ ಮಟ್ಟಿಗೆ ಆಫೀಸ್ ಗೆ ರಜೆ ಹಾಕಿ ನನ್ನೊಂದಿಗೆ ಚಿತ್ರೀಕರಣ ನಡೆಯುತ್ತಿದ್ದ ಉಡುಪಿಗೆ ಬಂದಿದ್ದ.ಆದರೆ ರಾಜನಿಗೆ ಒಂದು ಪಾತ್ರ ನೀಡಲು ಯಾಕೋ ಅಯ್ಯರ್ ಅವರು ಕೊಂಚ ಸತಾಯಿಸಿಬಿಟ್ಟರು. ಆ ಸ್ವಾರಸ್ಯಕರ ಸನ್ನಿವೇಶದ ಸಂಭಾಷಣೆಗಳನ್ನು ಯಥಾವತ್ತಾಗಿ ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದ್ದೇನೆ: ಈ ವೇಳೆಗಾಗಲೇ ರಾಜನಿಗೆ ಪಾತ್ರ ಮಾಡಲು ಆಸಕ್ತಿ ಇರುವ ವಿಚಾರ ಹೇಳಿ ಅವರು ಒಪ್ಪಿಯೂ ಆಗಿತ್ತು.
ರಾಜ: ಸರ್ ,ನನ್ನದು ಯಾವ ಪಾತ್ರ ಅಂತ ಗೊತ್ತಾಗಲಿಲ್ಲ.
ಅಯ್ಯರ್: (ಗಡ್ಡ ಕೆರೆದುಕೊಳ್ಳುತ್ತಾ) ನೀನು ಇದ್ದೀಯಯ್ಯಾ!
ರಾಜ: ಯಾವ ಪಾತ್ರ ಅಂತ ಗೊತ್ತಾಗಿದ್ರೆ ಚೆನ್ನಾಗಿರೋದು..
ಅಯ್ಯರ್: ನೀನು ಇದ್ದೀಯಯ್ಯಾ!
ರಾಜ:ಅದೇ ಗುರುಗಳೇ,ಯಾವ ಪಾತ್ರ ಅಂತ ಗೊತ್ತಾದ್ರೆ ಕೊಂಚ ತಯಾರಿ ಮಾಡಿಕೋಬಹುದಿತ್ತು..
ಅಯ್ಯರ್:(ಸಿಡುಕುತ್ತಾ)ನೀನು ಇದ್ದೀಯಯ್ಯಾ!
ಆನಂತರ ರಾಜ ಏನೂ ಮಾತಾಡದೆ ಸುಮ್ಮನಾಗಿಬಿಟ್ಟ.

ಇದಾದ ಮರುದಿನ ಅಯ್ಯರ್ ಅವರು ರಾಜನಿಗೆ ಸಿಪಾಯಿಯ ವೇಷ ಹಾಕಿಸಿ ಕೈಗೊಂದು ಈಟಿ ಕೊಟ್ಟು ಗುಂಪಿನಲ್ಲಿ ನಿಲ್ಲಿಸಿದರು.ವಾಸ್ತವವಾಗಿ ಪ್ರತಿಭಾಶಾಲಿಯೇ ಆಗಿದ್ದ ರಾಜನಿಗೆ ಇದರಿಂದ ತುಂಬಾ ಇರುಸುಮುರುಸಾಗಿಹೋಯಿತು. ‘ಏನು ಪ್ರಭೂ ಇದು? ಪಾತ್ರ ಕೊಡಿ ಅಂತ ಕೇಳಿದರೆ ಈಟಿ ಕೊಟ್ಟು ನಿಲ್ಲಿಸಿಬಿಟ್ರಲ್ಲಾ!’ ಎಂದು ಪೇಚಾಡಿಕೊಂಡ.ತನ್ನನ್ನು ತಾನೇ ಗೇಲಿ ಮಾಡಿಕೊಂಡು ನಕ್ಕು ನಗಿಸುವ ವಿಶಿಷ್ಟಕಲೆ ರಾಜನಿಗೆ ಸಿದ್ಧಿಸಿತ್ತು.ಅವನ ಶುದ್ಧ ಹಾಸ್ಯ ಪ್ರಜ್ಞೆ ನನಗೆ ಬಲು ಪ್ರಿಯವಾದುದು. ಇದಾದ ಮರುದಿನವೇ ನನ್ನ ಪಾತ್ರದ ದೃಶ್ಯಭಾಗಗಳೆಲ್ಲಾ ಮುಗಿದು ಅಯ್ಯರ್ ಅವರು “ನೀನು ಊರಿಗೆ ಹೊರಡಬಹುದು ಕಣಯ್ಯಾ” ಎಂದು ಅಪ್ಪಣೆ ಮಾಡಿದರು. ಈ ಸುದ್ದಿ ಕೇಳಿ ರಾಜ ಹೌಹಾರಿ ಬಿಟ್ಟ! “ಅಯ್ಯಯ್ಯೋ! ನೀವು ಹೊರಟುಬಿಟ್ರೆ ನಾನೂ ನಿಮ್ಮ ಜತೆ ಹೊರಟುಬಿಡ್ತೀನಿ..ನಾನೊಬ್ಬನೇ ಇಲ್ಲಿ ಈಟಿ ಹಿಡಕೊಂಡು ನಿಂತಿರಲಾರೆ” ಎಂದು ಅಲವತ್ತುಕೊಂಡ. ಅಯ್ಯರ್ ಅವರಿಗೆ ಈ ನಿರ್ಧಾರ ತಿಳಿಸಿದಾಗ ಮತ್ತೆ ಅವರು ಗಡ್ಡ ನೀವಿಕೊಳ್ಳುತ್ತಾ,” ಅಯ್ಯಯ್ಯೋ! ಈಗ ನೀನು ಹೊರಟುಬಿಟ್ರೆ ಹೇಗಯ್ಯಾ? ನಿನ್ನ character ಏ ಇನ್ನೂ establish ಮಾಡಿಲ್ಲವಲ್ಲಯ್ಯಾ!” ಎಂದು ಉದ್ಗರಿಸಿದರು! ರಾಜನಿಗಂತೂ ಹೃದಯವೇ ಬಾಯಿಗೆ ಬಂದಂತಾಗಿ ಹೋಯಿತು! “ಬೇಡ ಸರ್, ನನ್ನ ಪಾತ್ರ establish ಮಾಡಲೇ ಬೇಡಿ..ನನಗೆ ಆಫೀಸ್ ನಲ್ಲಿ ರಜೆ ಮಂಜೂರಾಗಿಲ್ಲ..ನಾನು ಹೋಗಲೇಬೇಕು..ನನ್ನನ್ನ ಬಿಟ್ಟುಬಿಡಿ” ಎಂದು ಕೇಳಿಕೊಂಡ ರಾಜ. “ಸರಿ ಬಿಡಯ್ಯಾ..ಆದರೆ ಅನ್ಯಾಯವಾಗಿ ಒಳ್ಳೇ ಪಾತ್ರ ಕಳಕೊಂಡೆಯಲ್ಲಯ್ಯಾ” ಎಂದು ಪೇಚಾಡಿಕೊಂಡ ಅಯ್ಯರ್ ಅವರ ಮುಖದಲ್ಲಿ ಒಂದು ತುಂಟ ನಗು ಮೂಡಿ ಮಾಯವಾದಂತೆ ಅನ್ನಿಸಿದ್ದು ನನ್ನ ಭ್ರಮೆಯೂ ಇರಬಹುದು!ಈಗಲೂ ರಾಜನನ್ನು ಭೇಟಿಯಾದಾಗಲೆಲ್ಲಾ ‘ನೀನು ಇದ್ದೀಯಯ್ಯಾ’ ಪ್ರಸಂಗವನ್ನು ನೆನಪಿಸಿಕೊಂಡು ನಗುವುದುಂಟು!

ಅಯ್ಯರ್ ಅವರು ದೃಶ್ಯಗಳನ್ನು ಪರಿಭಾವಿಸುತ್ತಿದ್ದ ರೀತಿ ಅನನ್ಯವಾದುದು. ಚಿತ್ರಮಾಧ್ಯಮದ ಅಪರಿಮಿತ ಸಾಧ್ಯತೆಗಳೆಲ್ಲವನ್ನೂ ಅತ್ಯಂತ ಸಮರ್ಥವಾಗಿ ದುಡಿಸಿಕೊಳ್ಳುವ ಕಲೆಗಾರಿಕೆ—ಸೃಜನಶೀಲತೆ ಅಯ್ಯರ್ ಅವರಿಗಿತ್ತು. ನನ್ನ ಈ ಮಾತಿಗೆ ಕನ್ನಡಿ ಹಿಡಿಯುವಂತಹ ಒಂದು ಪ್ರಸಂಗವನ್ನು ಉಲ್ಲೇಖಿಸುತ್ತೇನೆ. ಒಂದು ಸಂಜೆ, ಅಕ್ರೂರ ಕೃಷ್ಣನನ್ನು ವೃಂದಾವನದಿಂದ ಮಥುರೆಗೆ ಕರೆದೊಯ್ಯುವ ದೃಶ್ಯವನ್ನು ಚಿತ್ರೀಕರಿಸಲು ಅಯ್ಯರ್ ಅವರು ಸಿದ್ಧತೆ ಮಾಡಿಕೊಂಡಿದ್ದರು. ಮರುದಿನದ ಚಿತ್ರೀಕರಣ ನಡೆಸಲು ಬೇಕಾದ ಒಂದು ಸ್ಥಳವನ್ನು ಆಗಲೇ ನೋಡಿ ನಿರ್ಧರಿಸಬೇಕಾದ ಪ್ರಸಂಗ ಎದುರಾದ್ದರಿಂದ ಅಯ್ಯರ್ ಅವರು ತಮ್ಮ ನೆಚ್ಚಿನ ಬಂಟರಿಗೆ ಆ ದೃಶ್ಯವನ್ನು ಚಿತ್ರೀಕರಿಸಲು ಸೂಚನೆಗಳನ್ನು ಕೊಟ್ಟು location ನೋಡಲು ಹೊರಟರು. ಅವರ ಜತೆಗಿದ್ದ ಸಹಾಯಕ ನಿರ್ದೇಶಕರೂ ಸಹಾ ಪ್ರತಿಭಾಶಾಲಿಗಳೇ. ತುಂಬು ಉತ್ಸಾಹದಿಂದ ತಮಗೆ ದೊರೆತ ಅವಕಾಶವನ್ನು ಉಪಯೋಗಿಸಿಕೊಂಡು ಛಾಯಾಗ್ರಾಹಕ ಮಧು ಅಂಬಟ್ ರೊಂದಿಗೆ ಮಾತಾಡಿಕೊಂಡು ಬಲು ಮುತುವರ್ಜಿಯಿಂದ ದೃಶ್ಯವನ್ನು ಚಿತ್ರೀಕರಿಸಿದರು. ದೃಶ್ಯದ ಕೊನೆಯ ಚಿತ್ರಿಕೆಯ ಚಿತ್ರೀಕರಣ ಮುಗಿಸುವ ವೇಳೆಗೆ ಅಯ್ಯರ್ ಅವರು ಮರಳಿ ಬಂದರು. ಬಂದವರೇ ಒಮ್ಮೆ ಸುತ್ತಲ ಚಿತ್ರೀಕರಣದ ವಾತಾವರಣವನ್ನೂ ಬಳಸಿದ್ದ ಪರಿಕರಗಳನ್ನೂ ಗಮನಿಸಿದರು. ಅವರಿಗೆ ಸಮಾಧಾನವಾದಂತೆ ಕಂಡಿತು. “ಲೈಟಿಂಗ್ ಹೇಗೆ ಮಾಡಿದೀಯಾ ಸ್ವಲ್ಪ ತೋರಿಸಿಬಿಡಯ್ಯಾ ಮಧು” ಎಂದು ಛಾಯಾಗ್ರಾಹಕರನ್ನು ಕೇಳಿದರು.

ಮಧು ಅಂಬಟ್ ಆ ದೃಶ್ಯಕ್ಕೆ ಮಾಡಿಕೊಂಡಿದ್ದ ಲೈಟಿಂಗ್ ವಿನ್ಯಾಸವನ್ನು ವಿವರಿಸಿದ್ದಲ್ಲದೇ ಒಮ್ಮೆ ದೀಪಗಳನ್ನು ಬೆಳಗಿಸಿಯೂ ತೋರಿಸಿದರು. ಅದನ್ನು ನೋಡುತ್ತಿದ್ದಂತೆ ಅಯ್ಯರ್ ಅವರ ಹುಬ್ಬು ಗಂಟಿಕ್ಕಿತು! ಮುಖದಲ್ಲಿ ಅಸಮಾಧಾನ ಹೊಡೆದು ಕಾಣತೊಡಗಿತು! “ತಲೆ ಚಚ್ಕೋಬೇಕು..ನಾಳೆ ಸಂಜೆ ಈ ದೃಶ್ಯ re shoot ಮಾಡಬೇಕು..ಈಗ pack up” ಎಂದರು ಅಯ್ಯರ್ ಅವರು. ಅವರಿಂದ ಪ್ರಶಂಸೆಯ ಮಾತುಗಳನ್ನು ನಿರೀಕ್ಷಿಸಿದ್ದ ಸಹಾಯಕ ನಿರ್ದೇಶಕರಿಗೂ ಮಧು ಅವರಿಗೂ ಅಯ್ಯರ್ ಅವರ ಈ ಪ್ರತಿಕ್ರಿಯೆಯಿಂದ ಆಘಾತವೇ ಆಗಿಹೋಯಿತು! “ಯಾಕೆ ಅಪ್ಪಾಜಿ? ಅಷ್ಟು ಕಷ್ಟಪಟ್ಟು ಮಾಡಿದೀವಿ..ದೃಶ್ಯಾನೂ ತುಂಬಾ ಚೆನ್ನಾಗಿ ಬಂದಿದೆ..ಅಂದಮೇಲೆ re shoot ಯಾಕೆ?” ಎಂದು ಕೇಳಿದರು ಸಹಾಯಕ ನಿರ್ದೇಶಕರು.ಅದಕ್ಕೆ ಅಯ್ಯರ್ ಅವರು ನೀಡಿದ ಉತ್ತರ,ಒಂದು ದೃಶ್ಯವನ್ನು ಕಲ್ಪಿಸಿಕೊಳ್ಳಬೇಕಾದ ನಿರ್ದೇಶಕನ ‘ಒಳಗಣ್ಣಿ’ನ ಪ್ರಾಮುಖ್ಯತೆಯನ್ನು ತಿಳಿಸಿ ಹೇಳುವಂತಿತ್ತು. “ದೃಶ್ಯ ಚೆನ್ನಾಗಿ ಬಂದಿರಬಹುದು..ಆದರೆ ದೀಪಾವಳಿ ಮಾಡಿಬಿಟ್ಟಿದೀಯಲ್ಲಯ್ಯಾ! ದೃಶ್ಯದಲ್ಲಿ ಮುಖ್ಯವಾಗಿರೋದು ವಿಷಾದದ ಭಾವ; ಕೃಷ್ಣನನ್ನು ಕಳಿಸಿಕೊಡಬೇಕಲ್ಲಾ ಅಂತ ಎಲ್ಲರೂ ಕಣ್ಣೀರು ಹಾಕ್ಕೊಂಡು ಸಂಕಟ ಪಡ್ತಿರೋ ಸನ್ನಿವೇಶಕ್ಕೆ ದೇಶದಲ್ಲಿರೋ ಲೈಟ್ ಗಳನ್ನೆಲ್ಲಾ ಹಾಕಿ ಉರಿಸಿ ಹಬ್ಬ ಮಾಡಿಬಿಟ್ಟಿದೀಯಲ್ಲಯ್ಯಾ! ಇಡೀ ದೃಶ್ಯ ಮಂದ ಬೆಳಕಿನಲ್ಲಿ ನಡೀಬೇಕು; ಒಂದೆರಡು source light ಗಳನ್ನ ಬಳಸಿಕೊಂಡು ಅಲ್ಲಲ್ಲಿ ಮುಖಗಳ ಮೇಲೆ ಬೆಳಕಿನ ಗೆರೆಗಳು ಹಾದು ಹೋಗೋ ಹಾಗೆ compose ಮಾಡಬೇಕು.. ಅದು ಬಿಟ್ಟು ಹೀಗೆ ಝಗಝಗ ದೀಪಗಳನ್ನ ಉರಿಸಿದರೆ ಯಾವ ವಿಷಾದ ಅಭಿವ್ಯಕ್ತವಾಗುತ್ತೆ ಹೇಳಯ್ಯಾ..”!

ಹೀಗೆ ನಾನು ಅಯ್ಯರ್ ಅವರಿಂದ ಕಲಿತ ಪಾಠಗಳು ಅನೇಕ. ಚಿತ್ರವನ್ನು ಮೊಟ್ಟಮೊದಲಿಗೆ ಅಂತರಂಗದಲ್ಲಿ ಪರಿಭಾವಿಸಿಕೊಂಡು, ಮನೋರಂಗದಲ್ಲಿ ಸಂಪೂರ್ಣವಾಗಿ ‘ನೋಡಿ’ ನಂತರ ಅದನ್ನು script ರೂಪಕ್ಕಿಳಿಸಿ, ನಂತರ ಸೆಲ್ಯುಲಾಯ್ಡ್ ಗೆ ರೂಪಾಂತರಿಸುವ ಅದ್ಭುತ ಪ್ರಕ್ರಿಯೆಯ ಮಜಲುಗಳನ್ನು ಅರ್ಥಮಾಡಿಸಿದ ಮಹಾ ಗುರುಗಳು ಜಿ.ವಿ.ಅಯ್ಯರ್.

| ಇನ್ನು ಮುಂದಿನ ವಾರಕ್ಕೆ ।

‍ಲೇಖಕರು Admin

May 19, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: