ಉಮೇಶ್ ದೇಸಾಯಿ ಕಥೆ – ಡೈರಿಯ ಹರಿದ ಪುಟಗಳು…

ಉಮೇಶ್ ದೇಸಾಯಿ

ಸೂರ್ಯ ತಂದೆ ತೀರಿಕೊಂಡಾಗ ರಜೆ ಸಿಗದೇ ಸುಮಾರು ಎರಡು ತಿಂಗಳ ನಂತರ ಬಂದವ. ತನ್ನ ಲಿವಿನ್ ಪಾರ್ಟನರ ಶಾಮಲಿಗೂ ಅವಳ  ತಂದೆತಾಯಿ ನೋಡುವುದಿತ್ತು ಇಬ್ಬರಿಗೂ ರಜೆ ಒಂದೇ ಸಲ ಸಿಕ್ಕಿರಲಿಲ್ಲ.ಈಗ ಇಬ್ಬರೂ ಬಂದಿಳಿದಿದ್ದಾರೆ. ಮೂರ್ತಿ ಅಂದರೆ ಸೂರ್ಯನ ತಂದೆ ತೀರಿಕೊಂಡು ಅವರ ದೇಹ ದಾನ ಮಾಡಲಾಗಿತ್ತು ಹೀಗಾಗಿ ಕರ್ಮ ಇತ್ಯಾದಿ ಗೊಂದಲ ಇರಲಿಲ್ಲ. ಶಾಮಲಿ ಉತ್ತರ ಭಾರತದವಳು.. ಅವಳ ಜೊತೆ ಸೂರ್ಯನ ತಾಯಿ ಭಾಮಿನಿ ಕಾಶಿಗೆ ಹೋಗಿ ತಂದೆಯ ಹೆಸರಿನಲ್ಲಿ ದಾನ ಮಾಡುವುದು ಹಾಗೆ ಗಂಗೆಯಲ್ಲಿ ಮುಳುಗೇಳುವುದು ಅಂತ ಠರಾವಾಗಿ ಸೂರ್ಯನಿಗೂ ಕರೆದರೆ ಇವ ಒಲ್ಲೆ ಅಂದ. ಅಮ್ಮ ಡೈರಿ ಬರೆಯುವ ರೂಢಿ ಇತ್ತು ಇದು ಅರಿವಿದ್ದ ಸೂರ್ಯ ಓದಬಹುದೆ ಅಂತ ಕೇಳಿದಾಗ ಮೊದಮೊದಲು ಹಿಂಜರಿದವಳು ಕೊನೆಗೆ ಒಪ್ಪಿದಳು. ತಾನು ಬರೆಯುತ್ತಿದ್ದ ಅಷ್ಟೂ ಡೈರಿ ಮಗನಿಗೆ ಕೊಟ್ಟ ಭಾಮಿನಿ ಶಾಮಲಿ ಜೊತೆ ಪ್ಲೇನ  ಹತ್ತಿದ್ದಳು.

ಸೀರಿಯಲ್‌ ನಂಬರ ಹಾಕಿದ ಡೈರಿಗಳು..ಜೀವನದ ಆಗುಹೋಗುಗಳ ನಿರೂಪಣೆ. ಅವಳ ತಾಯಿ ಭಾಮಿನಿಯ ಅಂತರಂಗದ ದರ್ಶನ ಮಾಡಿಸಬಹುದು ಅದರಲ್ಲಿ. ಖಾಸಗಿಯಾದ ಕೆಲವು ವಿವರಗಳೂ ಇರಲು ಸಾಕು.. ತಾಯಿ ಕಷ್ಟಪಟ್ಟಿದ್ದಾಳೆ ಮುಖ್ಯವಾಗಿ ಒಂಟಿಯಾಗಿ ಎಲ್ಲವನ್ನೂ ನಿಭಾಯಿಸಿದ್ದಾಳೆ ಇದು ಸೂರ್ಯನಿಗೆ ಗೊತ್ತಿದ್ದ ಸಂಗತಿ. ತಂದೆಯ ಸಾವು ನೋವು ತಂದಿತ್ತು ನಿಜ. .ದೊಡ್ಡ ಪ್ರಾಜೆಕ್ಟಿನ ನೆವ ಮಾಡಿ ಕಂಪನಿ ಅವನಿಗೆ ರಜೆ ಕೊಟ್ಟಿರಲಿಲ್ಲ ಇದು ಪೂರ್ಣ ಸತ್ಯ ಅಲ್ಲ.

ತಂದೆ ಮೂರ್ತಿ ಜೊತೆಗಿನ ವೈಮನಸ್ಸು ಅದು ಬೆಳೆದು ಹೆಮ್ಮರವಾಗಿ ಛಲದಿಂದಲೇ ಈ ಕೆಲಸ ಸಿಕ್ಕಾಗ ಮೂರ್ತಿ, ಭಾಮಿನಿಯರ ಒತ್ತಾಯ ಮೀರಿ ದೂರದೇಶಕ್ಕೆ ತಾನು ಹಾರಿದ್ದು ಅಲ್ಲಿಯ ವ್ಯಸ್ತ ಕೆಲಸ,ವೀಕೆಂಡಿನ ಪಾರ್ಟಿಗಳು, ಶಾಮಲಿ ಪರಿಚಯ ಹಾಗೂ ಅವಳ ಜೊತೆ ಲಿವಿನ್‌  ಸಂಬಂಧ ಇವುಗಳ ನಡುವೆ  ತಾನು ಕಳೆದುಹೋಗಿದ್ದು ಸೂರ್ಯನಿಗೂ ಈ ಬಗ್ಗೆ ಪಶ್ಚಾತ್ತಾಪವಿತ್ತು. ಅದೆಷ್ಟೋ ಸಲ ವಿಡಿಯೋ ಕಾಲ ಮಾಡಿದಾಗ ಮೂರ್ತಿ ಸರಿಯಾಗಿ ಮಾತನಾಡುತ್ತಿರಲಿಲ್ಲ ಅವನ ಜೊತೆ. ತಾಯಿಯ ಜೊತೆ ಹರಟುತ್ತಿದ್ದ ಸಮಾಧಾನ ಹೇಳುತ್ತಿದ್ದ. ಭಾಮಿನಿಗೆ ಮೊದಮೊದಲು ಮಗ ಜೊತೆಗಿಲ್ಲದಿರುವುದು ಕಾಡಿತ್ತುನಿಜ ಅದಕೂ ಮೀರಿದ್ದು ಗಂಡ ಹಾಗೂ ಮಗನ ನಡುವಿನ ಬಿರುಕು ಮತ್ತು ತಾನು ಮಧ್ಯಸ್ಥಿಕೆ ವಹಿಸಬೇಕಾಗಿ ಬಂದ ಪರಿಸ್ಥಿತಿ ಇದು ಅವಳಿಗೆ ನೋವು ತಂದಿತ್ತು. 

ಡೈರಿ ಬರೆಯುವುದು ಭಾಮಿನಿ ಬೆಳೆಸಿಕೊಂಡು ಬಂದ ರೂಢಿಯಾಗಿತ್ತು ಅವಳ ಹೈಸ್ಕೂಲಿನ ದಿನಗಳಿಂದ. ಹದಿನೆಂಟಕ್ಕೇ ಮದುವೆಯಾಗಿ ಅತ್ತೆಯ ಒತ್ತಾಯ ಮೀರದೇ ಇಪ್ಪತ್ತು ಸುರುವಾಗಿದೆ ಅನ್ನುವಾಗ ವಂಶಕ್ಕೆ ಮಗನನ್ನು ಕೊಟ್ಟ ಸೊಸೆಯ ಬಗ್ಗೆ ಅವಳ ಅತ್ತೆಯದು ವಿಪರೀತ ಪ್ರೀತಿ. ಮೂರ್ತಿ ಭಾಮಿನಿಯ ನಡುವೆ ಹತ್ತು ವರ್ಷದ ಅಂತರ. ಮನೆತನ, ಆಸ್ತಿ ಎಲ್ಲ ಮೇಲಾಗಿ ಈ ವಯಸ್ಸಿನ ಅಂತರ ಗೌಣವಾಗಿತ್ತು ಭಾಮಿನಿಯ ತಂದೆ ತಾಯಿಗಳಿಗೆ. ಅತ್ತೆಯ ಮುದ್ದಿನ ಸೊಸೆಯಾದವಳು ಗಂಡನ ಜಾಣ್ಮೆಗೆ ಸರಿಸಾಟಿಯಾಗಲಿಲ್ಲ ಎಂಬ ಕೊರಗು ಇತು ಅವಳಿಗೆ. ಅಷ್ಟೆಲ್ಲ ವಂಶೋದ್ಧಾರಕನಿಗಾಗಿ ಹಂಬಲಿಸಿದ ಅತ್ತೆ ಮಗ ಸೂರ್ಯ ನರ್ಸರಿ ಸೇರುವ ಮೊದಲೇ ಕಣ್ಣುಮುಚ್ಚಿದ್ದರು.. ಮೂರ್ತಿ ಮೊದಲಿಂದಲೂ ವರ್ಕೊಹಾಲಿಕ್‌. ಕೆಲಸದ ಮೇಲಿನ ಪ್ರೀತಿ ಸಂಸಾರದ ಮೇಲಿರಲಿಲ್ಲ. ಕಂಪನಿ ಅದರ ಒತ್ತಡಗಳ ನಡುವೆ ಗಂಡ ತನ್ನನ್ನು ಕಡಗಣಿಸುತ್ತಿದ್ದಾನೆ ಅನ್ನುವ ಕೊರಗು ಭಾಮಿನಿಗೆ ಆಗಾಗ ಕಾಡುತ್ತಿತ್ತು ನಿಜ ಆದರೆ ಸೂರ್ಯನ ಸಹವಾಸ ಅವನ ತುಂಟತನಗಳ ನಡುವೆ ಬದುಕು ಹೊಸ ನೋಟ ಕೊಟ್ಟಿತ್ತು. ದಿನಚರಿಯಲ್ಲಿ ದಾಖಲಾಗುತ್ತಿತ್ತು. ಸೂರ್ಯ ಇಂದು ಆಟಿಗೆಗಾಗಿ ಹಟ ಹಿಡಿದಿದ್ದು, ತಿಂಡಿ ತಿನ್ನದೇ ಸತಾಯಿಸಿದ್ದು, ಹೀಗೆ ಸಾಮಾನ್ಯ ಸಂಗತಿಗಳು ಅದರಲ್ಲಿ ದಾಖಲು ಮಾಡುತ್ತಿದ್ದಳು.

ಅಮ್ಮ ಬರೆದ ದಿನಚರಿ ತಿರುವಿಹಾಕುತ್ತಿದ್ದ ಸೂರ್ಯ. ಅಮ್ಮ ಇಷ್ಟು ಕಾವ್ಯಾತ್ಮಕವಾಗಿ ಇಷ್ಟುಛಂದವಾಗಿ ಬರೆಯುತ್ತಾಳೆ. ಮೊದಲಿಂದಲೂ ಅವಳಿಗೆ ಕತೆ ಕಾದಂಬರಿಗಳ ಹುಚ್ಚು. ಈಗೀಗ ಫೇಸಬುಕ್ಕಿನಲೂ ಇದ್ದಾಳೆ.ಅವಳು ಬರೆದ ಕವಿತೆ , ಕತೆ ಪ್ರಕಟವಾದಾಗ ಅದರ ಲಿಂಕ ಕೊಟ್ಟು ಓದಲು ಹೇಳುತ್ತಿದ್ದಳು.  

ಕೆಲವು ಪುಟಗಳ ಓದುವಾಗ ಅಮ್ಮನನ್ನು ತಾನಾಗಲಿ ಅಥವಾ ತಂದೆಯಾಗಲಿ ಕಡೆನಣಿಸಿದೆವೇ ಎಂಬ ಅಳುಕು ಕಾಡಿತ್ತು.

“ಈ ನೀರವ ರಾತ್ರಿ ಸೂರ್ಯನ ಜೊತೆ ಇಂದು ಮಾತಾಡಿದೆ. ತಾನು ಲಿವಿನ್‌ ನಲ್ಲಿ ಇರುವುದಾಗಿ ಹೇಳಿಕೊಂಡ. ಮೊನ್ನೆತಾನೇ ಓದಿದ ಒಂದು ಕತೆಯಲ್ಲಿ ಈ ಬಗ್ಗೆ ಚರ್ಚೆಯಾಗಿತ್ತು. ಕತೆಬರೆದವರು ಪೂರ್ವಾಗ್ರಹ ಪೀಡಿತರು ಅನ್ನುವ ವಾದ ಮಂಡಿಸಿದ್ದೆ ಕಾಮೆಂಟ ಮಾಡುವಾಗ. ಇಂದು ನನ್ನ ಮಗನೇ ಆ ಹಾದಿ ಹಿಡಿದಿರುವ. ಅವನಪ್ಪ ಯಥಾಪ್ರಕಾರ ಅವನ ಜೊತೆ ಮಾತಾಡಲಿಲ್ಲ. ಯಾಕೆ ಕೆಲವು ಅಸಮಾಧಾನಗಳು ಜೀವನ ಪೂರ್ತಿ ಉಳಿದುಹೋಗುತ್ತವೆ…”

ಸೂರ್ಯ ಪುಟ ಹಿಂದೆ ತಿರುಗಿಸಿದ.

“ಬಹಳ ಹುರುಪಿತ್ತು ಆದರೆ ಹುಸಿಹೋಯಿತು. ಒಂದೇ ರೂಮಿನಲ್ಲಿ ಮಲಗಿದರೂ ಹೀಗೆ ಅಪರಿಚಿತರಂತೆ ಇದ್ದು ರೂಢಿಯಾಗಿತ್ತು. ಅವರು ಮಲಗುವುದೇ ತಡವಾಗಿ. ಸೂರ್ಯನಿಗೆ ಕತೆಹೇಳಿ ಅವನಿಗೆ ಮಲಗಿಸಿ ಹೊರಗೆ ಹೋಗಿ ನೋಡಿದಾಗ ಇವರು ಅದಾರ ಜೊತೆಯೋ ಫೋನಿನಲ್ಲಿ ಮಾತಾಡುವುದು ಇದು ದಿನನಿತ್ಯದ ದೃಶ್ಯ. ಇಂದು ಹಾಗಾಗಿರಲಿಲ್ಲ. ನಡುವೆ ಮಲಗಿದ ಮಗನಿಗೆ ಸರಿಸಿ ಬಳಿ ಸರಿದು ಅಪ್ಪಿಕೊಂಡಾಗ ಕಟ್ಟೆ ಒಡೆದಿತ್ತು. ಬಹಳ ದಿನಗಳ ಹಸಿವು ಇಂದು ಈಡೇರಬಹುದು ಈ ಆಸೆ ಆದರೆ ಅದು ನಿರಾಸೆಯ ಗುಳ್ಳೆಯಾಗಿ ಒಡೆದು ಹೋಗಿತ್ತು. ಕ್ರಿಯೆ ಸುರುಮಾಡುವ ಮೊದಲೇ ಸೋತ ಇವರು ಮಗ್ಗುಲು ಬದಲಾಯಿಸಿದರು,ಮುಂದೆಯೂ ಈ ಪ್ರಕ್ರಿಯೆ ಮುಂದುವರೆಯಿತು”

“ಅವರ ಸಮಸ್ಯೆ ಮಾನಸಿಕವಾದದ್ದು ಇದು ನಾ ಪುಸ್ತಕ ಓದಿ ತಿಳಿದ ಸಂಗತಿ.ಅವರ  ದುಸ್ಸಾಹಸ ಅಥವಾ ಅಪೂರ್ಣ ಕ್ರಿಯೆಯ ಬಗ್ಗೆ ಅಳುಕುತ್ತಲೇ ಮಾತಾಡಿದೆ.ಸಿಡಿಮಿಡಿಗೊಂಡರು. ತಮ್ಮ ಶಕ್ತಿಯ ಬಗ್ಗೆ ಪ್ರಶ್ನಿಸಿದ ನನ್ನ ಜರೆದರು. ತೀರ ಅನಿರೀಕ್ಷಿತ ವರ್ತನೆ  ನಾ ಅವರ ಇಗೋ  ನೋಯಿಸಿದ್ದೆ ಇನ್ನು ಮುಂದೆ ಆ ಸಾಹಸ ಬೇಡ…”

“ಉಪವಾಸ ಹೌದು ಅದೇ ಸರಿಯಾದ ಶಬ್ದ. ಜೋಡಿ ಒಬ್ಬಳಿದ್ದಾಳೆ ಅವಳಿಗೆ ಅವಳದೇ ಆದ ಕೆಲವು ಆಸೆಗಳಿವೆ ಕಾಮನೆಗಳಿವೆ ಇದು ಅರಿಯದಷ್ಟು ಇವರು ಕಟುಕರೇ ಮಾತಾಡುವ ಹಾಗಿಲ್ಲ ನುಂಗುವ ಹಾಗಿಲ್ಲ ಒಂದು ರೀತಿಯ ವಿಚಿತ್ರ ನೋವು ಆವರಿಸುತ್ತಿತ್ತು ರಾತ್ರಿ ಬಂತೆಂದರೆ… ಉಳಿದಂತೆ ಖಾತೆಯಲ್ಲಿ ಜಮೆಯಾಗುತ್ತಿದ್ದ ಹ಼ಣ ಯಾಕೆ ಇದ ತಂದೆ ಅಂತ ಕೇಳಿದವರಲ್ಲ.ಒಂದು ವಾದ ಇಲ್ಲ ಅವರ ಪಾಡಿಗೆ ಅವರು ಬೆಳಿಗ್ಗೆ ಹೋದವರು ರಾತ್ರಿ ಬರೋದು ಕೆಲಸದ ಒತ್ತಡ ತಲೆತುಂಬಿಕೊಂಡೇ ಮನೆಗೆ ಬಂದರೂ ಕಂಪನಿಯ ಇತರೆ ಡೈರೆಕ್ಟರ ಜೊತೆ, ಬ್ಯಾಂಕಿನವರ ಜೊತೆ ವ್ಯವಹಾರದ ಮಾತೇ ಉಳಿದ ಮಾತುಕತೆಗಳಿಗೆ ಪ್ರವೇಶ ಇರಲಿಲ್ಲ”

“ಸೂರ್ಯ ಈಗ ಸಾಲೆಗೆ ಹೋಗುತ್ತಿದ್ದಾನೆ. ಅವನಿಗೆ ರೆಡಿ ಮಾಡಿ ಬಸ್‌ ಹತ್ತಿಸಿ  ಒಳಗೆ ಸೇರಿದರಾತು ಪುಸ್ತಕಗಳ ನಡುವೆ ಕಳೆದು ಹೋಗುವೆ. ಕನ್ನಡದ ಎಲ್ಲ ಮಾಸಿಕಗಳಿಗೆ ಚಂದಾದಾರಳು ಅದಲ್ಲದೇ ಅನೇಕ ಕತೆ ಕಾದಂಬರಿಗಳು ಅಲ್ಲಿಯ ನಾಯಕಿಯರು ಅವರ  ಪಾಡು ಒಂದು ಹೊಸ ಜಗತ್ತು ಕಾಣುತ್ತಿತ್ತು. ವಾಸ್ತವದ ನೋವು ತಾತ್ಕಾಲಿಕವಾದರೂ ಮರೆಯುವಂತೆ ಮಾಡುತ್ತಿದ್ದವು ಅವು”

“ಸೂರ್ಯ ಈಗ ಕಾಲೇಜು ಕಲಿಯುತ್ತಿದ್ದಾನೆ. ಮುಂದೆ ಮಗ ವ್ಯವಹಾರದಲ್ಲಿ ಭಾಗಿಯಾಗಲಿ ಎಲ್ಲ ತಂದೆಯ ಆಶಯ ದಂತೆ ಇವರದೂ ಅದೇ ಕನಸು. ಜಗತ್ತು ಬದಲಾಗಿದೆ ನಮ್ಮ ಆರ್ಥಿಕ ಸ್ಥಿತಿಯೂ ಸುಧಾರಿಸಿದೆ . ಇವರ ಕಂಪನಿ ನಿರಂತರ ಲಾಭ ಗಳಿಸುತ್ತಿದೆ. ಈ ನಡುವೆ ಮೂವರೂ ಸೇರಿ ಯುರೋಪ, ಅಮೆರಿಕಾ, ಕೆನಡಾ ಹೀಗೆ ಸುತ್ತಿ ಬಂದಿದ್ದೂ ಇದೆ. ಈಗೀಗ ಇವರ ಜೊತೆ ಪಾರ್ಟಿಗಳಿಗೆ ಹೋಗುತ್ತಿರುವುದು ಸಾಮಾನ್ಯ ಸಂಗತಿಯಾಗಿದೆ. ಹೊಸಬರ ಪರಿಚಯ ಆ ಜನರ ಬೂಟಾಟಿಕೆಯ ನಡುವಳಿಕೆಗಳು ಒಂದು ವಿಚಿತ್ರ ಪ್ರಪಂಚ.. ವೈನ ಕುಡಿಯಲು ಸುರು ಮಾಡಿದೆ ಹೈ ಸೊಸೈಟಿಯ ಜೀವನ ಶೈಲಿಯ ಕೆಲವು ಗತ್ತು ಕಲಿಯುತ್ತಿರುವೆ”

“ಸೂರ್ಯನೂ ಅಷ್ಟು ಮಾತನಾಡಬಾರದಿತ್ತು. ವಾದ ವಿವಾದಕ್ಕೆ ತಿರುಗಿ ಇಡೀ ವಾತಾವರಣ ಕೆಟ್ಟಿತು. ಬ್ಯಾಂಕಾಕ ಗೆ ಹೋಗುವ ಇವರ ಪ್ಲಾನ ನನಗೆ ಗೊತ್ತಿತ್ತು ಬಹಳದಿನಗಳಾಗಿವೆ ಇವರ ಬಗ್ಗೆ ತಲೆ ಕೆಡಿಸಿಕೊಳ್ಳದೇ..ಒಂದೇ ಮನೆಯಲ್ಲಿದ್ದರೂ ನಮ್ಮಿಬ್ಬರ ನಡುವೆ ಆ ಸಂಬಂಧ ಉಳದಿಲ್ಲ.ಇಬ್ಬರಿಗೂ ಇದರ ಅರಿವಿದೆ. ನಾನು ಸಹಜವಾಗಿ ತಗೊಂಡೆ. ಮಗ ಈ ವಯಸ್ಸಿನಲ್ಲಿ ನಿಮಗ್ಯಾಕೆ ಈ ಚಪಲ ಅಂದಾಗ ಇವರು ಕೆರಳಿದರು ನನ್ನ ದುಡ್ಡು ನನ್ನ ಖುಷಿ ಅಂತ ವಾದಿಸಿದರು. ಮಗ ಸುಮ್ಮನಾಗದೆ ನಮ್ಮಿಬ್ಬರ ದಾಂಪತ್ಯದ ಬಗ್ಗೆನೂ ಮಾತನಾಡಿದ. ಅವಳೇ ಸುಮ್ಮನಿದ್ದಾಳೆ ನಿಂದೇನು ಅಂತ ಇವರು ತಿರುಗಿ ಬಿದ್ದರು. ಮಗ ನನ್ನೆಡೆ ನೋಡಿದ ಪ್ರತಿಸಾದ ಸಿಗದಾದಾಗ ಸಿಟ್ಟಿನಿಂದ ಹೊರನಡೆದ”

“ಬ್ಯಾಂಕಾಕ ಪ್ರವಾಸದ ವಿರೋಧ ಒಂದು ನೆವ ಅಷ್ಟೆ ಅಂತ ಗೊತ್ತಾಗಿದ್ದು ಸೂರ್ಯ ಹೊರದೇಶಕ್ಕೆ ಹೊರಟುನಿಂತಾಗ. ನಾ ಬೇಡ ಅಂದೆ ಆದರೆ ಅವ ಆಗಲೇ ನಿರ್ಧಾರಮಾಡಿದ್ದ. ಇವರು ಕೂಗಾಡಿದರು ಇದುವರೆಗೂ ಅವನ ಶಿಕ್ಷಣಕ್ಕೆ ಸುರಿದ ದುಡ್ಡಿನ ಬಗ್ಗೆ ತೀರ ವ್ಯವಹಾರಿಕವಾಗಿ ಮಾತಾಡಿದರು. ಸೂರ್ಯನೂ ಗರಮ್‌ ಆದ ಸುರಿದ ದುಡ್ಡು ವಾಪಾಸ ಕೊಡುವುದಾಗಿ ಹೇಳಿದ. ಮೂವರು ಜನ ನಾವು ಮೂವರೂ ಒಂದೊಂದು ದಿಕ್ಕು ಸಂವಹನ ಇರಲೇ ಇಲ್ಲ. ಅಮೆರಿಕಾದಿಂದ ಅವ ಹೋಗಿ ಮುಟ್ಟಿದ್ದರ ಬಗ್ಗೆ ಕಾಲ್ ಮಾಡಿದ. ವಾರದಲ್ಲಿ ಎರಡು ಮೂರು ಸಲ ಅವ ಮಾತಾಡುತ್ತಿದ್ದ. ಇವರೂ ಎಷ್ಟು ಬೇಕೋ ಅಷ್ಟು ಮಾತನಾಡುತ್ತಿದ್ದರು ಅವ ಹರಟೆ ಹೊಡೆಯುತ್ತುದ್ದಿದು ನನ್ನ ಜೊತೆ..”

ಸೂರ್ಯ ಬೇರೆಯ  ಡೈರಿ ಕೆಗೆತ್ತಿಕೊಂಡ. ಒಟ್ಟು 15 ಡೈರಿಗಳು. ಇವ ತಗೊಂಡಿದ್ದು ಕೊನೆಯದು..ಮೊದಲಿನ ಅನೇಕ ಪುಟಗಳು ಹರಿದ ಸ್ಪಷ್ಟ ಕುರುಹು ಇದ್ದವು. ಸುಮಾರು ನಾಕೈದು ಪುಟಗಳು ಹರಿದುಬಿಟ್ಟ ಗುರುತು. ನಂತರ ಯಥಾ ಪ್ರಕಾರ ಬರವಣಿಗೆ.

“ಆಸ್ಪತ್ರೆಯ ಈ ರಾತ್ರಿಗಳು ಎಷ್ಟು ಭಯಾನಕವಾಗಿರುತ್ತವೆ. ಐಷಾರಾಮಿ ಆಸ್ಪತ್ರೆಯಾದರೂ ಪೇಷಂಟುಗಳ ನರಳುವಿಕೆಯ ಕ್ಷೀಣ ದನಿ ಡಾಕ್ಟರುಗಳ ಓಡಾಟ ನರಸುಗಳ ಸಡಗರದ ನಡುವೆ ಕಾಡುವ ನೀರವತೆ. ಇವರನ್ನು ವಾರ್ಡಗೆ ಶಿಫ್ಟಮಾಡುವವರಿದ್ದರು. ಕ್ಯಾನ್ಸರಿನ ಮೂರನೇಯ ಸ್ಟೇಜು ಗುರುತಾಗಿದ್ದೇ ತಡವಾಗಿ ಅದರಲ್ಲಿ ಇವರು ಆಪರೇಷನ ಅಥವ ಕಿಮೋಗೆ ಒಲ್ಲೆ ಅಂದರು. ಒಂದರ್ಥದಲ್ಲಿ ಸಾವನ್ನೆ ಎದಿರು ನೋಡುವಂತೆ. ಎಲ್ಲ ರೀತಿಯ ತಯಾರಿ ಮಾಡುತ್ತಿದ್ದರು ಸ್ವತಃ ತಾನೇ.. ಲಾಯರಜೊತೆ ವಿಲ್ಲಿನ ಬಗ್ಗೆ ಮಾತುಕತೆ, ಕಂಪನಿಯ ತಮ್ಮ ಶೇರುಗಳ ನಾಮಿನೇಶನ ಅಂತೆಯೇ ತಮ್ಮಸಾಲ ಆಸ್ತಿ ಬಗ್ಗೆ ಆಡಿಟರ ಜೊತೆ ಚರ್ಚೆ ಹೀಗೆ ಪರಿಪೂರ್ಣ ಪ್ಲಾನ ಮಾಡಿದ ಇವರ ಬಗ್ಗೆ ವಿಚಿತ್ರ ಅನಿಸುತ್ತದೆ”

“ ಇಂದು ಕೈ ಹಿಡಿದು ಕೂಡಿಸಿಕೊಂಡರು. ಬಹಳ ಮಾತನಾಡಿದರು..ಇಡೀ ಆಯುಸ್ಸಿನಲ್ಲಿ ಆಡದೇ ಉಳಿದ ಎಲ್ಲ ಮಾತುಗಳು ಆಡಿ ಮುಗಿಸಿದರು. ಮಗನಿಗೆ ತೊಂದರೆ ಕೊಡಬೇಡ ದೇಹದಾನ ಮಾಡು ಅಂದರು. ಸ್ವಲ್ಪ ಮೊತ್ತ ತಾನು ಬೆಳೆದ ಊರಿನ ಸಾಲೆಗೆ ಕೊಡಲು ಹೇಳಿದರು. ಮಗನ ಮೇಲೆ ವೈಮನಸ್ಸಿಲ್ಲ ಆ ಕ್ಷಣದಲ್ಲಿ ತಾನಾಡಿದ ಮಾತುಗಳಬಗ್ಗೆ ಪಶ್ಚಾತ್ತಾಪ ವ್ಯಕ್ತಮಾಡಿದರು” 

ಓದುತ್ತಿದ್ದ ಸೂರ್ಯನ ಕಣ್ಣು ಹನಿಗೂಡಿದವು. ಹಾಗೆಯೇ ಆ ಢೈರಿಯ ಹರಿದ ಪುಟಗಳ ಬಗ್ಗೆ ಅಮ್ಮನಿಗೆ ಕೇಳುವ ಅಂದುಕೊಂಡು ಫೋನ ಮಾಡಿದ.

ಗಂಗೆಯದಡದಲ್ಲಿ ಸಂಜೆಯ ಸೂರ್ಯನ ನೋಡುತ್ತ ಕುಳಿತ ಭಾಮಿನಿಗೆ ಮಧ್ಯಾಹ್ನ ಫೋನುಮಾಡಿದ ಮಗ ಆ ಹರಿದ ಪುಟಗಳ ಬಗ್ಗೆ ಕೇಳಿದ್ದು ನೆನಪಿಗೆ ಬಂತು. ತನ್ನ ಜೊತೆಗಿರು ವ್ಯಾನಿಟಿಯಲ್ಲಿ ಭದ್ರವಾಗಿವೆ ಕಾಶಿವರೆಗೂ ಪಯಣ ಬೆಳೆಸಿವೆ ಅವು. ಬೆಳಿಗ್ಗೆ ಆ ಪಂಡಾಗೆ ಗಂಡನ ಗೋತ್ರದ ಪ್ರವರ ಹೇಳಿ ಶಾಂತಿ ಮಾಡಿಸುವಾಗಲೂ ಅವು ಜೊತೆಯಲ್ಲಿದ್ದವು. ಆ ಹರಿದ ಪುಟಗಳ ಬಗ್ಗೆ ಭಯವಿದೆ. ಎಲ್ಲ ಹೇಳಿಬಿಡಬಾರದು, ಓದಲು ಡೈರಿ ಕೇಳಿದ ಮಗನಿಗೆ ಅದು ಗೊತ್ತಾಗಬಾರದು ಅಂತ ಬೇಕೂಂತಲೇ ಹರಿದಿದ್ದುತಾನು. ನಾಳೆ ಗಂಗೆಯಲ್ಲಿ ಅವನ್ನು ತೇಲಿಬಿಡಬೇಕು..ತನ್ನ ಆ ಪುಟಗಳ ಅನುಭವ ಯಾರಿಗೂ ಗೊತ್ತಾಗಬಾರದು.

ರಾತ್ರಿ ರೂಮಿನಲ್ಲಿ ನಿದ್ರೆ ಬರದೇ ಯಾಕೋ ಆ ಪುಟಗಳ ಓದಬೇಕೆನ್ನಿಸಿತು.

“ಅವಳನ್ನು ಈ ಮೊದಲು ಅನೇಕ ಪಾರ್ಟಿಗಳಲ್ಲಿ ನೋಡಿದ್ದೆ. ಹಲೋ ಅನ್ನುವ ಪರಿಚಯ. ಅಂದು ಯಾಕೋ ಬಹಳೇ ಬೇಜಾರಿನಲ್ಲಿದ್ದೆ. ಇವರು ಯಥಾಪ್ರಕಾರ ಸ್ನೇಹಿತರ ಜೊತೆ ಮಾತು ಕುಡಿತದಲ್ಲಿ ಮಗ್ನರಾಗಿದ್ದರು. ವೈನ ಸಹ ರುಚಿಸಿರಲಿಲ್ಲ..ಅವಳು ತೀರ ಹತ್ತಿರ ಬಂದವಳು ಒಂದು ಕಾರ್ಡ ಕೊಟ್ಟಳು. ನಿನ್ನ ಎಲ್ಲ ನೋವುಗಳಿಗೂ ಔಷಧವಿದೆ. ಫೋನ ಮಾಡು ಅಂದಳು. ಮರುದಿನ ಇವರು ಕೆಲಸದ ಮೇಲೆ ದೆಹಲಿಗೆ ಹೊರಟು ಹೋದರು ಬರುವುದು ಮೂರುನಾಕುದಿನಗಳಾಗುತ್ತದೆ ಅಂದರು. ಕುತೂಹಲಕ್ಕೆ ಫೋನ ಮಾಡಿದೆ. ಒಂದು ಕೆಫೆಯ ವಿಳಾಸ ಹೇಳಿ ಬರಲು ಹೇಳಿದಳು. ಹೋದೆ..ಮುಂದಾದ ಮಾತುಕತೆಗಳು ನಾನು ಊಹಿಸದ್ದು..ಹೀಗೆ ಇದೆ ಹೈ ಸೊಸೈಟಿಯಲ್ಲಿ ಕೇಳಿ ಓದಿ ತಿಳಿದ ಸಂಗತಿ.ಸ್ವತಃ ನಾನೇ ಅದರ ಅನುಭವ ಹೊಂದಲಿರುವೆ ಇದು ವಿಚಿತ್ರ ತಲ್ಲಣ ತಂದ ಸಂಗತಿ.”

“ಊರ ಹೊರಗಿನ ರೆಸಾರ್ಟನ ರೂಮಿನಲ್ಲಿ ಕಾಯುತ್ತಿದ್ದೆ ಬರುವಾಗ ಕಾಡಿದ ದ್ವಂದ್ವ ಇಲ್ಲಿ ಬಂದಾಗಲೂ ಕಾಡಿತ್ತು. ಬಾಗಿಲು ಬಡಿದಾಗ ನಿಯಮಿತ ಸಮಯಕ್ಕೇ ಅವ ಬಂದಿದ್ದ.ಸೂರ್ಯನಿಗಿಂತ ಒಂದೆರಡು ವರ್ಷ ದೊಡ್ಡವನಿರಬೇಕು. ಆಕರ್ಷಕ ನಗು ಮೈಕಟ್ಟು.ನನ್ನ ಹಿಂಜರಿತ ಗಮನಿಸಿದ ಅವ ಕೈಬೆರಳುಗಳ ಹಿತವಾಗಿ ನೇವರಿಸುತ್ತ ಮಾತನಾಡತೊಡಗಿದ. ನಾ ಕಂಪಿಸುತ್ತಿದ್ದೆ ಇದು ಹೊಸದು ಅನುಭವ ನಾ ಮಾಡುತ್ತಿರುವುದು ಸರಿಯೇ ಅವೇ ಪ್ರಶ್ನೆಘಳು ಎಲ್ಲಕೂ ಅವನ ಹಿತವಾದ ನೇವರಿಕೆ ಉತ್ತರವಾಗಿತ್ತು. ನಾ ಕರಗತೊಡಗಿದೆ. ಅವನ ಮಾತಿನ ಮೆದುತನ, ಮಾರ್ದವತೆಎಲ್ಲ ಆಪೋಷನ ತೆಗೆದುಕೊಂಡಂತೆ..ನಾ ಕರಗಿದೆ. ಹಸಿವು ದಾಹ ಎಲ್ಲ ಕಳೆದು ನಿಚ್ಚಳವಾದೆ. ಯಾವ ಪ್ರಶ್ನೆಯೂ ಕಾಡಲಿಲ್ಲ ಆ ಹಿತಾನುಭವ ನನ್ನ ಹಕ್ಕು ಅನಿಸಿತು ಬಲವಾಗಿ. ಅವ ಉನ್ಮತ್ತಗೊಳಿಸುತ್ತಿದ್ದ..ಬೊಗಸೆಯಲ್ಲಿ ತುಂಬಿ ತುಂಬಿ ಉಣ್ಣಿಸಿದ ಅದಷ್ಟೇ ಸತ್ಯ…”

ಸೂರ್ಯ ನನ್ನ ಬಗ್ಗೆ ತಳೆದ ಒಂದು ಇಮೇಜು ಅವ ಈ ಪುಟಗಳ ಓದಿದರೆ ಹಾಳಾಗಬಹುದು ಈ ಭಯ ಕಾಡಿತ್ತು ಅವ ಢೈರಿ ಕೇಳಿದಾಗ. ಯಾಕೆ ಎಲ್ಲ ಹೇಳಬೇಕು ಕೆಲವು ಸಂಗತಿಗಳು ಉಳಿದುಹೋಗಲಿ ಖಾಸಗಿಯಾಗಿ . ಮರುದಿನ ಗಂಗೆಯಲ್ಲಿ ತೇಲಿಬಿಟ್ಟ ಆ ಡೈರಿಯ ಹರಿದ ಪುಟಗಳು ಒದ್ದೆಯಾಗಿ ಕರಗತೊಡಗಿದವು.

‍ಲೇಖಕರು Admin

May 19, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: