ಕೆ ನಲ್ಲತಂಬಿ ಅನುವಾದ ಸರಣಿ- ಹಸಿವೂ ಕ್ಷಾಮವೂ

ಮೂಲ: ಎಸ್ ರಾಮಕೃಷ್ಣನ್  

1966 ರಲ್ಲಿ  ತಮಿಳುನಾಡಿನ ವಿರುದುನಗರ್ ಜಿಲ್ಲೆಯ ಮಲ್ಲಾಂಕಿಣರು ಎಂಬ ಹಳ್ಳಿಯಲ್ಲಿ ಹುಟ್ಟಿದವರು. ಪೂರ್ಣಾವಧಿ ಬರಹಗಾರರಾಗಿ ಚೆನ್ನೈಯಲ್ಲಿ ವಾಸವಿದ್ದಾರೆ. ದೇಶಾಂತರಿ ಎಂಬ  ಪ್ರಕಾಶನವನ್ನು ನಡೆಸುತ್ತಿದ್ದಾರೆ.

ಸಣ್ಣಕಥೆ, ಕಾದಂಬರಿ, ಅಂಕಣ, ಸಿನಿಮಾ ಸಾಹಿತ್ಯ, ಮಕ್ಕಳ ಸಾಹಿತ್ಯ, ಇತಿಹಾಸ, ನಾಟಕ, ಅನುವಾದ ಹೀಗೆ ಅನೇಕ  ಪ್ರಕಾರಗಳ ಬರಹಗಳಲ್ಲಿ ತೊಡಗಿಕೊಂಡಿದ್ದಾರೆ. ಇಂಗ್ಲೀಷಿನಲ್ಲೂ ಬರೆಯುತ್ತಾರೆ. 10 ಕಾದಂಬರಿ, 21 ಸಣ್ಣಕಥೆಗಳ ಸಂಕಲನ, ಮೂರು ನಾಟಕ, 22 ಮಕ್ಕಳ ಸಾಹಿತ್ಯ, ಅನೇಕ ಅಂಕಣ ಸಂಕಲನಗಳನ್ನು ಬರೆದಿದ್ದಾರೆ.

ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಉತ್ತಮ ಕಾದಂಬರಿ ಪ್ರಶಸ್ತಿ, ಉತ್ತಮ ಪುಸ್ತಕ ಪ್ರಶಸ್ತಿ, ಠಾಗೂರ್ ಸಾಹಿತ್ಯ  ಪ್ರಶಸ್ತಿ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮುಂತಾದುವುಗಳನ್ನು ಗಳಿಸಿದ್ದಾರೆ.

ತಮಿಳಿನ ಪ್ರಮುಖ ಸಾಹಿತಿಗಳಲ್ಲಿ ಒಬ್ಬರು.

ಕೆ ನಲ್ಲತಂಬಿ

8

ಭಾರತದ ಇತಿಹಾಸದ ಹಾದಿಯ ದಿಕ್ಕನ್ನು ಬದಲಾಯಿಸಿದ ಮುಖ್ಯ ಕಾರಣಗಳಲ್ಲಿ ಒಂದು…. ಕ್ಷಾಮ. ಇಂದಿನವರೆಗೆ ಭಾರತೀಯರ ಮನಸ್ಸಿನಲ್ಲಿ ಕ್ಷಾಮದ ಬಗ್ಗೆಯ ದುಃಖದ ನೆನಪುಗಳೂ, ಆಹಾರವನ್ನು ಬಚ್ಚಿಟ್ಟುಕೊಳ್ಳುವ ಭಯವೂ ಮುಂದುವರೆಯುತ್ತಲೇ ಇದೆ. ಜೀವನೋಪಾಯಕ್ಕಾಗಿ ಸ್ವಂತ ಊರನ್ನು ಬಿಟ್ಟು ಬೇರೆ ಸ್ಥಳಗಳನ್ನು ಹುಡುಕಿಕೊಂಡು ಜನಗಳನ್ನು ಅಲೆಯಲು ಬಿಟ್ಟದ್ದು ಕ್ಷಾಮವೇ. ಭಾರತ ಪೂರ್ತಿ ಹೊಟ್ಟೆಪಾಡಿಗಾಗಿ ಅಲೆದವರ ಕತೆಗಳಿವೆ. 

‘ಕೊಳಗ ಉರುಳಿದ  ಕ್ಷಾಮ  ರಾಜ ಸೋತ ಕ್ಷಾಮ 
ಖಂಡುಗ ಉರುಳಿದ ಕ್ಷಾಮ ನಾಯಕ ಸೋತ ಕ್ಷಾಮ 
ಸೇರು ಉರುಳಿದ ಕ್ಷಾಮ ಚಟಾಕು ಕಳುವಾದ ಕ್ಷಾಮ
ತಾಳಿ ಕಿತ್ತು  ಯೌವನ ಕೆಳೆದುಹೋದ ಕ್ಷಾಮ 
ಸೂರು ಬಿದ್ದು ಬೀದಿಗೆ ಬಂದ ಕ್ಷಾಮ 
ಗಂಡ ಸತ್ತು ಕೈಗೂಸ ಮಾರಿದ ಕ್ಷಾಮ’
ಎಂದು ಧಾತ್ರಿ ಸಂವಸ್ತ್ರದ ಪಂಚಮಿ ‘ಕುಮ್ಮಿ’ ಎಂಬ ತಮಿಳು ಜಾನಪದದ ಹಾಡೊಂದು ಹೇಳುತ್ತದೆ. 

ಅಧಿಕಾರದ ಅಸಡ್ಡೆ ಭಾರತವನ್ನು ಹೇಗೆ ಹಾಳುಮಾಡಿತೆಂಬುವುದಕ್ಕೆ ಇತಿಹಾಸದ ಸಾಕ್ಷಿಗಳು ಈ ಕ್ಷಾಮ. ಇಂದಿಗೂ, ಒಬ್ಬರನ್ನೊಬ್ಬರು ಬೇಟಿಯಾಗುವಾಗ, ‘ಊಟ ಆಯಿತೇ’ ಎಂದು ವಿಚಾರಿಸುವುದರ ಆಧಾರವಾಗಿರುವುದು ಕ್ಷಾಮ ಕಾಲದ ನೆನಪುಗಳು! 

ಭಾರತದಲ್ಲಿ 11ರಿಂದ 17ನೇಯ ಶತಮಾನದವರೆಗೂ 14 ಬರಗಾಲಗಳು ಬಂದಿರುವುದಾಗಿ ಅಂಕಿ ಅಂಶಗಳು ತಿಳಿಸುತ್ತವೆ. ಇವು, ಮಳೆ ಇಲ್ಲದೆ ಬರದಿಂದ ಉಂಟಾದ ಸಣ್ಣ ಕ್ಷಾಮಗಳು. ಆದರೇ, ಇಡೀ ಭಾರತವನ್ನು ಆಕ್ರಮಿಸಿಕೊಂಡ ಕ್ಷಾಮಗಳಲ್ಲ. 

ಆದರೇ, ಈಸ್ಟ್ ಇಂಡಿಯಾ ಕಂಪನಿಯ ನಿರ್ವಹಣೆಯಲ್ಲಿದ್ದಾಗ ಭಾರತದಲ್ಲಿ, 25 ಸಲ ಬರಗಾಲ ಉಂಟಾಯಿತು. ಈ ಕ್ಷಾಮಗಳಿಗೆ ಕಾರಣ ಬರ ಮಾತ್ರವಲ್ಲ, ನಿರ್ವಹಣೆಯ ಕೊರತೆಗಳೂ ಸಹ. ವಿಶೇಷವಾಗಿ, ಹೆಚ್ಚಿನ ತೆರಿಗೆ, ಹೆಚ್ಚಿನ ಅಳತೆಯಲ್ಲಿ ಆಹಾರ ಧಾನ್ಯಗಳು ಇಂಗ್ಲೆಂಡಿಗೆ ರಫ್ತು ಆದದ್ದು, ಅಕ್ಕರೆಯಿಲ್ಲದೆ ನೀರಾವರಿ ಯೋಜನೆಗಳನ್ನು ಕೈಬಿಟ್ಟದ್ದು, ನಗದು ಬೆಳೆಗಳನ್ನು (Cash Crops) ಹೆಚ್ಚಾಗಿ ಬೆಳೆಯಲು ಹೇಳಿ ಒತ್ತಾಯಿಸಿದ್ದು, ವ್ಯವಸಾಯ ಕ್ಷೇತ್ರದ ಬಂಡವಾಳಗಳನ್ನು ಬಲಹೀನಗೊಳಿಸಿದ್ದು ಹೀಗೆ ಅನುಚಿತ ಆಡಳಿತದ ಕಾರಣ ಭಾರತದಲ್ಲಿ ಕ್ಷಾಮ ಉಂಟಾಗಿದೆ. 

‘ಭಾರತವನ್ನು ನಡುಗಿಸಿದ’ ಅತಿ ದೊಡ್ಡ ಅನಾವೃಷ್ಟಿಗಳಲ್ಲಿ ಮೂರು ಬಹಳ ಘಾತುಕವಾದವು. ಅವು 1770ರಲ್ಲಿ ಉಂಟಾದ ಬಂಗಾಳ ಕ್ಷಾಮ, 1876 ಮತ್ತು 78 ರುಗಳಲ್ಲಿ ಧಾತ್ರಿ ವರ್ಷದ ಕ್ಷಾಮ. 1943-44 ಮುಂದಾದ ವರ್ಷಗಳಲ್ಲಿ ಆದ ಭಾರತ ಕ್ಷಾಮ. 

ಬಂಗಾಳದ ಕ್ಷಾಮ 1769 ರಿಂದ 73ರವರೆಗೆ ಘೋರ ತಾಂಡವ ಆಡಿತು. ಒಂದು ಕೋಟಿ ಜನಗಳು ಮರಣ ಹೊಂದಿದರು ಎನ್ನುತ್ತದೆ ಅಂಕಿ ಅಂಶಗಳು. ಅಂದರೆ, ಬಂಗಾಳದ ಜನಸಂಖ್ಯೆಯಲ್ಲಿ ಮೂರನೇಯ ಒಂದು ಭಾಗ ಈ ಅನಾವೃಷ್ಟಿಯಿಂದ ಸತ್ತು ಮಡಿದರು. ಪಶ್ಚಿಮ ಬಂಗಾಳ, ಬಿಹಾರ್, ಓಡಿಸ್ಸಾ ಎಂದು ಕ್ಷಾಮ ಹರಡಿತು. 1770-ರುಗಳಲ್ಲಿ ಉತ್ತುಂಗಕ್ಕೆ ಏರಿತು. ಈ ಕ್ಷಾಮ ಉಂಟಾಗಲೂ ಮುಖ್ಯ ಕಾರಣ, ಕಾಲನಿ ಆಡಳಿತದ ದುರಾಸೆ. 

ಮೊಗಲರ ಕಾಲದಿಂದ ನವಾಬರ ಆಡಳಿತದವರೆಗೆ ಬಂಗಾಳವನ್ನು ತನ್ನ ತಂತ್ರದಿಂದ ಆಕ್ರಮಿಸಿಕೊಂಡು, ತಾನೇ ನಿರ್ವಹಣೆ ಮಾಡಿದ ಈಸ್ಟ್ ಇಂಡಿಯಾ ಕಂಪನಿ, ಬಂಗಾಳವನ್ನು ತನ್ನ ಆಹಾರ ರಫ್ತು ಮಾಡುವ ಗೋದಾಮು ಆಗಿ ಬದಲಾಯಿಸಿತು. ಅಲ್ಲಿಯವರೆಗೆ ಚಾಲನೆಯಲ್ಲಿ ಇದ್ದ ಭೂತೆರಿಗೆಯನ್ನು ಹಲವು ಪಟ್ಟು ಹೆಚ್ಚಿಸಿತು. ವಾಣಿಜ್ಯ ವಸ್ತುಗಳಿಗೆ ಅತಿಯಾಗಿ ತೆರಿಗೆ ವಿಧಿಸಿತು. ಫಸಲಿನಲ್ಲಿ ಅರ್ಧವನ್ನು ಇಂಗ್ಲೆಂಡಿಗೆ ರಫ್ತು ಮಾಡಿತು. ಇವೆಲ್ಲವೂ ಕ್ಷಾಮ ಉಂಟಾಗಳು ಪ್ರಮುಖ ಕಾರಣಗಳು.

ಮೊಗಲರ ಕಾಲದಲ್ಲಿ ಭೂಕಂದಾಯ ವಸೂಲಿ ಮಾಡುತ್ತಿದ್ದವರು ಮಾಮಲೇದಾರ ಎಂಬ ಜಮೀನುದಾರರ ಮೂಲಕ ನಡೆಯಿತು. ಅವರ ಬಗ್ಗೆ, ಅಫ್ತರ್ ಅಲಿಯ ‘ಮೊಗಲರ ಆಡಳಿತದ ಜಮೀನುದಾರರು’ ಎಂಬ ಅಂಕಣ ವಿಸ್ತಾರವಾಗಿ ಈ ಬಗ್ಗೆ ಹೇಳುತ್ತದೆ. ಅದರಲ್ಲಿ, ಒಬ್ಬ ಮಾಮಲೇದಾರನಿಗೆ (ಮಾನ್ಸೆಫ್ದಾರ್) ತೆರಿಗೆ ವಸೂಲಿ ಮಾಡಿಕೊಳ್ಳಲು ಐದರಿಂದ ಹತ್ತು ಹಳ್ಳಿಗಳವರೆಗೆ ಕೊಡಲಾಗುತ್ತದೆ. ವಸೂಲಿ ಮಾಡಿದ ಮೊತ್ತವನ್ನು ಸಾಮ್ರಾಟನಿಗೆ ಸಲ್ಲಿಸಬೇಕು. ಮಾಮಲೇದಾರರು ಜನಗಳನ್ನು ಹಿಂಸಿಸಿ ಎರಡು ಪಟ್ಟು ವಸೂಲಿ ಮಾಡಿದ್ದೂ ಅಲ್ಲದೆ ಅರ್ಧವನ್ನು ತಾವು ಲಪಟಾಯಿಸಿ ಉಳಿದದ್ದನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಿದರು. 

ವ್ಯಾಪಾರದ ಕಿರುಕುಳ ರೈತರನ್ನು ಬಹಳ ಬಾಧೆಗೆ ಒಳಗಾಗಿಸಿತು. ಅದೇ ಸ್ಥಿತಿಯನ್ನು ಇನ್ನೂ ಕಠಿಣವಾಗಿಸಿತು ಈಸ್ಟ್ ಇಂಡಿಯಾ ಕಂಪನಿ. ಅಂದರೆ ಫಸಲಿನಲ್ಲಿ ಅರ್ಧವನ್ನು ತೆರಿಗೆಯಾಗಿ ಸಲ್ಲಿಸಬೇಕು. 1770ರಲ್ಲಿ ಕ್ಷಾಮ ಹೆಚ್ಚಾದ ಕಾಲದಲ್ಲಿ ತೆರಿಗೆಯನ್ನು ಬ್ರಿಟೀಷ್ ಸರಕಾರ ಹತ್ತು ಪ್ರತಿಶತ ಏರಿಸಿತು. ಕರುಣೆಯಿಲ್ಲದ ಕ್ರೌರ್ಯ ಕ್ಷಾಮ ಕಾಲದಲ್ಲಿಯೂ ಸಹ ಜನಗಳನ್ನು ಹಿಂಡಿತು. ಆದ ಕಾರಣ, 1765-ರಲ್ಲಿ ಒಂದೂವರೆ ಕೋಟಿಯಲ್ಲಿ ಇದ್ದ ವಸೂಲಿಯ ಮೊತ್ತ 1777-ರಲ್ಲಿ ಮೂರು ಕೋಟಿಯಾಗಿ ಹೆಚ್ಚಾಯಿತು. ಕ್ಷಾಮವನ್ನು ಬಳಸಿಕೊಂಡು ಅಲ್ಲಿಯವರೆಗೆ ನಡೆದು ಬಂದ ಧಾನ್ಯಗಳ ಸಣ್ಣ ವ್ಯಾಪಾರವನ್ನು ಸಂಪೂರ್ಣವಾಗಿ ತಡೆ ಮಾಡಿ, ಮಾರಾಟದ ಸಂಪೂರ್ಣ ಹಕ್ಕನ್ನು ಬ್ರಿಟೀಷ್ ಸರಕಾರ ತನ್ನದಾಗಿಸಿಕೊಂಡಿತು. 

ತೆರಿಗೆ ಕಟ್ಟಲಾಗದವರ ಕುರಿ, ದನಗಳನ್ನು ಅಪಹರಿಸಿಕೊಂಡಿತು. ಬರದಿಂದ ಹಳ್ಳಿಗಳು ಬರಡಾಗಿ ಸ್ಮಶಾನದಂತಾದವು. ಹಸಿವು ತಾಳಲಾರದೆ ಜನಗಳು ಹಿಂಡು ಹಿಂಡಾಗಿ ಊರು ಬಿಟ್ಟು ಹೋದರು. ಕುಡಿಯಲು ನೀರು ಸಹ ದೊರಕದೆ ಪರದಾಡಿದರು. ಹಸಿವು ಉಪವಾಸದೊಂದಿಗೆ ಸಿಡುಬು ಖಾಯಿಲೆಯೂ ಹರಡಿತು. ಬೀದಿಗಳಲ್ಲಿ ಸತ್ತು ಬಿದ್ದವರನ್ನು ಹೊತ್ತುಹಾಕಲು ಸಹ ಜನಗಳಿರಲಿಲ್ಲ. 

‘ಎಲ್ಲೋ ಬಿದ್ದಿದ್ದ ಒಂದು ಎಲುಬಿನ ತುಂಡನ್ನು ನಾಯಿ ಕಚ್ಚಿಕೊಂಡು ಓಡುವುದನ್ನು ನೋಡಿದ ಜನಗಳು, ಆ ನಾಯಿಯನ್ನು ಅಟ್ಟಿಸಿಕೊಂಡು ಹೋಗಿ ಕೊಂದು, ಆ ತುಂಡು ಎಲುಬಿಗಾಗಿ ಹೊಡೆದಾಡಿಕೊಂಡರು’ ಎಂದು ಗವರ್ನರ್ ಹಂಟರ್ ಹೇಳಿಕೆ ನೀಡಿದ. 

ಅಂತಹ ತೀವ್ರವಾದ ಕ್ಷಾಮದ ಕಾಲದಲ್ಲೂ ಸಹ ಇಂಗ್ಲೆಂಡಿಗೆ ಧಾನ್ಯಗಳನ್ನು ರಫ್ತು ಮಾಡುವುದು ನಿಲ್ಲಲೇ ಇಲ್ಲ. ಹಡಗುಗಳಲ್ಲಿ ಗೋದಿ, ಹತ್ತಿ ಆಹಾರ ಧಾನ್ಯಗಳನ್ನು ತುಂಬಿ ಕಳುಹಿಸುತ್ತಲೇ ಇದ್ದರು. ಕೇಷ್ ಕ್ರಾಪ್ ಆಗಿ ಪರಿಗಣಿಸಿದ ಹತ್ತಿಯನ್ನು ‘ಬಿಳಿ ಬಂಗಾರ’ ಎಂದು ಸಂಭ್ರಮಿಸಿದ ಈಸ್ಟ್ ಇಂಡಿಯಾ ಕಂಪನಿ, ಬಂಗಾಳ ಪೂರ್ತಿಯಾಗಿ ಹತ್ತಿ ಬೆಳೆಯಬೇಕೆಂದು ಒತ್ತಾಯಿಸಿದ್ದೂ ಅಲ್ಲದೆ, ಅದನ್ನು ಕಡಿಮೆ ಬೆಲೆಗೆ ಕೊಂಡುಕೊಂಡು ರೈತರ ಹೊಟ್ಟೆಯ ಮೇಲೆ ಹೊಡೆದು ಹಣ ರಾಶಿ ಹಾಕಿತು. 

ಭಾರತದ ಇತಿಹಾಸದಲ್ಲಿ ಅಳಿಸಲಾಗದ ಶೋಕದ ಕಲೆ ಎಂದು ಬಣ್ಣಿಸಲಾದ ಬಂಗಾಳದ ಬರಗಾಲವನ್ನು ಅಧ್ಯಯನ ಮಾಡಿದ ವಿನಿತಾ ದಾಮೋದರನ್ ಭಯ ಬೀಳುವ ಅಂಕಿ ಅಂಶಗಳನ್ನು ನಮ್ಮ ಮುಂದಿಡುತ್ತಾರೆ. 

1770-ರಲ್ಲಿ ಬಂಗಾಳದಲ್ಲಿ 35 ಪ್ರತಿಶತ ಭೂಮಿ ಕೈಬಿಡಲಾಗಿ ಅನಾಥವಾಯಿತು. 12 ಪ್ರತಿಶತ ಜನ ಆಹಾರವನ್ನು ಹುಡುಕಿಕೊಂಡು ಕಾಡಿನೊಳಗೆ ಅಲೆದಾಡಿದರು. ಬಿರ್ಗಾಮ್ ಪ್ರದೇಶದಲ್ಲಿ ಒಂದು ಗ್ರಾಮದಲ್ಲಿ 60 ಪ್ರತಿಶತ ಜನ ಕ್ಷಾಮಕ್ಕೆ ಬಲಿಯಾದರು. ಜಮೀನುದಾರರು ತಮ್ಮ ಆಹಾರಕ್ಕಾಗಿ ದರೋಡೆಯಲ್ಲಿ ತೊಡಗಿಕೊಂಡರು. 1773ರಲ್ಲಿ ಕ್ಷಾಮ ಕೊನೆ ಕಂಡಾಗ ಹೆಚ್ಚಾಗಿ ಬಂಜರು ಭೂಮಿಗಳೇ  ಇದ್ದವು. 8000 ಜನ ವಾಸವಿದ್ದ ಸ್ಥಳದಲ್ಲಿ 1300 ಜನಗಳು ಮಾತ್ರವೇ ಉಳಿದಿದ್ದರು. ಬಿರ್ಗಾಮ್ ಪ್ರದೇಶ ಒಂದು ದೊಡ್ಡ ಸ್ಮಶಾನವಾಗಿ ಕಂಡಿತು. ಅನಾವೃಷ್ಟಿ ಎಂಬುದು ಒಂದು ದರೋಡೆಯಾಗಿಯೇ ನಡೆದು ಮುಗಿಯಿತು. 

ಕ್ಷಮಾ ಉಂಟಾದಾಗ ಅದನ್ನು ಸಮಾಳಿಸಲು ಆಗದೆ ಹೋದ ಕಾರಣ ಆಹಾರ ಪದಾರ್ಥಗಳನ್ನು ವಿತರಣೆ ಮಾಡಲು ಕ್ರಮವಾದ ರಸ್ತೆಯ ವ್ಯವಸ್ಥೆ ಇಲ್ಲದೆ ಇದ್ದದ್ದು.  ನೀರಾವರಿ ವ್ಯವಸ್ಥೆಯನ್ನು ಪರಾಮರಿಸಲಿಲ್ಲ. ಇವನ್ನು ಅರಿತಿದ್ದ ಅಂದಿನ ಗವರ್ನರ್ ಹಂಟರ್ ಕ್ಷಾಮದಿಂದ ನೊಂದ ಜನಗಳನ್ನು ಬಳಸಿಕೊಂಡು, ರಸ್ತೆ, ಕೊಳ ಮತ್ತು ಕಾಲುವೆಗಳನ್ನು ನಿರ್ಮಾಣ ಮಾಡಲು ಪ್ರಯತ್ನಿಸಿದನು. ಹಸಿವು ಒಂದು ಕಡೆ, ಕಟುವಾದ ದುಡಿಮೆಯ ಶ್ರಮ ಒಂದುಕಡೆ ಎಂದು ಜನಗಳು ಅವಸ್ಥೆಗೆ ಒಳಗಾದರು. 

ತಮ್ಮಿಂದ ಸೃಷ್ಟಿಯಾದ ಕ್ಷಾಮವನ್ನು ಮರೆಮಾಚಲು, ಭಾರತದಲ್ಲಿ ಹಿಂದಿನ ಕಾಲದಿಂದಲೇ ಬರಗಾಲ ಇದೆ ಎಂದು ಸುಳ್ಳಾದ ಅಂಕಿ ಅಂಶಗಳನ್ನು ಬ್ರಿಟೀಷ್ ಸರಕಾರ ಪ್ರಕಟಿಸಿತು. ಗಂಜಿ ಕೇಂದ್ರಗಳನ್ನು ತೆರೆಯುವುದು, ಜನಗಳಿಗೆ ಸಹಾಯ ಧನ ನೀಡುವುದು ಎಂದು ಕಣ್ಣೊರಸುವ ನಾಟಕಗಳನ್ನು ನಡೆಸಿದಾಗಲೂ, ಬಂಗಾಳದ ಬರಗಾಲದ ಘೋರವನ್ನು ಸರಕಾರದಿಂದ ಮರೆಮಾಚಲು ಆಗಲಿಲ್ಲ. 

ಭಾರತದಲ್ಲಿ ಕ್ಷಾಮವೇ ಬಂದಿಲ್ಲವೇ? ಎಂಬ ಪ್ರಶ್ನೆ ಏಳಬಹುದು. ಮಳೆ ಇಲ್ಲದೆ ಬರ ಉಂಟಾಗುವುದನ್ನು ತಮಿಳಿನಲ್ಲಿ ‘ವರ್ಕಡಂ’ ಎನ್ನುತ್ತಾರೆ. ಅದನ್ನೇ ಕನ್ನಡದಲ್ಲಿ ‘ಹವಾಮಾನ ಬರ’- ಮಳೆ ಬಾರದಿದ್ದಾಗ ಅದು ಸಂಭವಿಸುತ್ತದೆ -ಅಥವಾ  ಒಂದು ನಿರ್ದಿಷ್ಟ ಸಮಯದವರೆಗೆ ಕಡಿಮೆ ಮಳೆ ಎಂದು ಹೇಳಲಾಗುತ್ತದೆ. ಮಹಾಭಾರತದಲ್ಲಿ ಮಳೆ ಬರದೇ ಅಂಗ ದೇಶ ಬರಡಾದದ್ದರ ಬಗ್ಗೆ ಉಲ್ಲೇಖಗಳಿವೆ. ಋಷ್ಯಶೃಂಗನನ್ನು ಕರೆತಂದರೆ ಮಾತ್ರವೇ ಮಳೆ ಬರಬಹುದು ಎಂಬ ಮಹಾಭಾರತದ ಉಪಕತೆಯೂ ಒಂದಿದೆ. ತಮಿಳುನಾಡಿನಲ್ಲೂ, ಪಾಂಡ್ಯ ದೇಶದ ಸಂಗಮ್ ಕಾಲದ ನಂತರ ಬಹಳ ದೊಡ್ಡ ಕ್ಷಾಮ ಬಂದದ್ದಾಗಿ ‘ಇರೈಯನಾರ್ ಕಳವಿಯಲ್’ ಎಂಬ ಕೃತಿಯಲ್ಲಿ ಉಲ್ಲೇಖನವಿದೆ. 

ಅದರಂತೆಯೇ ದಖ್ಖನ್ ಪ್ರಸ್ಥಭೂಮಿಯಲ್ಲಿ ಉಂಟಾದ ಹಲವು ಭೀಕರ ಬರಗಾಲಗಳ ಬಗ್ಗೆ ವಿವರಗಳು ದೊರಕಿವೆ. ಕ್ರಿ.ಶ. 1143-ರವರೆಗೆ  ಓಡಿಸ್ಸಾದಲ್ಲಿ ಉಂಟಾದ ಕ್ಷಾಮವೂ, ಕ್ರಿ.ಶ. 1630ರಲ್ಲಿ ಮರಾಠದಲ್ಲಿ ಉಂಟಾದ ಕ್ಷಾಮವೂ ಮುಖ್ಯವಾದವು. ಕ್ರಿ.ಶ. 1630ರಿಂದ 1632ರವರೆಗೆ ಭಾರತದ ಮಧ್ಯ ಭಾಗದಲ್ಲಿ ದಖ್ಖನ ಪ್ರಸ್ಥಭೂಮಿಯಲ್ಲಿ ಉಂಟಾದ ‘ದಖ್ಖನ್ ಕ್ಷಾಮ’ದಲ್ಲಿ ಎರಡು ಲಕ್ಷ ಭಾರತೀಯರು ಸತ್ತುಹೋದರು. 

1783ರಲ್ಲಿ ತೊಡಗಿ 1867ರವರೆಗೆ ಮದರಾಸ್ ರಾಜಧಾನಿ ಏಳು ಘೋರ ಕ್ಷಾಮಗಳನ್ನು ಕಂಡಿದೆ. 1876-78 ನೇಯ ಇಸವಿಗಳಲ್ಲಿ ಬ್ರಿಟೀಷ್ ಭಾರತದ ಒಂದು ಭಾಗವಾದ ಮದರಾಸ್ ಪ್ರಾವಿನ್ಸ್ ತೀವ್ರವಾದ ಕ್ಷಾಮಕ್ಕೆ ಒಳಗಾಯಿತು. ಅದನ್ನೇ ‘ಧಾತ್ರಿ ವರ್ಷದ ಕ್ಷಾಮ’ ಎಂದು ಕರೆಯುತ್ತಾರೆ. ಎರಡು ವರ್ಷಗಳು ಮುಂದುವರೆದ ಈ ಬರಗಾಲ, ಮೊದಲ ವರ್ಷ ಮದರಾಸ್, ಮೈಸೂರು, ಬೊಂಬಾಯಿ, ಹೈದರಾಬಾದ್ ಪ್ರದೇಶಗಳಲ್ಲಿ ಘೋರ ತಾಂಡವ ಆಡಿತು. ಎರಡನೇಯ ವರ್ಷ, ಉತ್ತರ ಭಾರತದ ಮಧ್ಯ ಪ್ರಾವಿನ್ಸ್-ಗಳಿಗೆ ಹರಡಿತು. ಈ ಕ್ಷಾಮದ ಪರಿಣಾಮವಾಗಿ ಬ್ರಿಟೀಷ್ ಸರಕಾರ, ಕ್ಷಾಮ ನಿವಾರಣ ಸಂಸ್ಥೆಗಳನ್ನು ನಿರ್ಮಾಣ ಮಾಡಿ ಕ್ಷಮಾ ಕಾಲದ ನೀತಿ ನಿಯಮಗಳನ್ನು ರೂಪಿಸಿತು. 

ಧಾತ್ರಿ ಸಂವಸ್ತ್ರ ಕ್ಷಾಮದಲ್ಲಿ ಹೆಚ್ಚಾಗಿ ಮರಣ ಹೊಂದಿದವರು, ದಕ್ಷಿಣ ಆರ್ಕಾಡ್ ಜಿಲ್ಲೆಯ ಮಕ್ಕಳು. ಇಂದಿಗೂ  ಆ ನೆನಪಿನ ಮುಂದುವರಿಕೆಯಂತೆ, ದಕ್ಷಿಣ ಆರ್ಕಾಡ್ ಜಿಲ್ಲೆಗಳ ಗ್ರಾಮಗಳಲ್ಲಿ ‘ಧಾತ್ರಿ ವರ್ಷ ಬರಗಾಲದ ಕುಮ್ಮಿ’ ಎಂಬ ಹಾಡನ್ನು ಹಾಡಲಾಗುತ್ತದೆ.  (‘ಕುಮ್ಮಿ’ – ‘ಕುಂಬಿ’: ಹೆಣ್ಣು ಮಕ್ಕಳು ವೃತ್ತಾಕಾರದಲ್ಲಿ ನಿಂತು ಕೈಚಪ್ಪಾಳೆಯೊಡನೆ ಹಾಡುತ್ತಾ ಕುಣಿಯುವ ಒಂದು ಬಗೆಯ ನೃತ್ಯ, ಕುಣಿತ. ಕುಮ್ಮಿ ನೃತ್ಯಕ್ಕಾಗಿ ರಚಿಸಿದ ಹಾಡು ‘ಕುಮ್ಮಟ್ಟಿ’)

| ಇನ್ನು ನಾಳೆಗೆ |

‍ಲೇಖಕರು Admin

August 2, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: