‘ಭೂರಮೆ ವಿಲಾಸ’ ಕಾವ್ಯ ಸಂಹಿತೆಗೆ ಪುಟಾಣಿ ಸೃಜನಿಯ ಚಿತ್ರಗಳು

ಸಂಕೇತ್ ಗುರುದತ್

ಸಾಮಾನ್ಯವಾಗಿ ಲೇಖಕರು ತಮ್ಮ ಕೃತಿಗಳನ್ನು ಮುದ್ರಿಸಲು ನಿರ್ಧರಿಸುತ್ತಿದ್ದಂತೆ ತಮ್ಮ ಬರಹಗಳಿಗೆ ಉತ್ತಮ ಸಾಂದರ್ಭಿಕ ಚಿತ್ರಗಳನ್ನು ಹಾಗೂ ಆಕರ್ಷಕ ಮುಖಪುಟವನ್ನು ರಚಿಸುವ ಶ್ರೇಷ್ಠಮಟ್ಟದ ಕಲಾವಿದರನ್ನು ಅರಸಿ ಆರಿಸುತ್ತಾರೆ. ತಮ್ಮ ಬರಹಗಳಿಗೆ ಸಾಕಷ್ಟು ಸಮಂಜಸ
ಅರ್ಥವನ್ನು ಸ್ಫುರಿಸುವ ಚಿತ್ರಗಳನ್ನು ರಚಿಸುತ್ತಾರಾ ಎಂದು ಕಾದು ಕೂರುತ್ತಾರೆ. ನಂತರ ತಮ್ಮ ಬರಹಕ್ಕೆ ಸರಿಸಮಾನವಾದ ಹಾಗೂ ಕೆಲವೊಮ್ಮೆ ಬರಹವನ್ನೂ ಮೀರಿಸುವ ಅರ್ಥವನ್ನು ಗ್ರಹಿಸಿ ಚಿತ್ರಿಸಿ ಕೊಟ್ಟ ಚಿತ್ರಗಳನ್ನು ತಮ್ಮ ಪುಸ್ತಕದಲ್ಲಿ ಬಳಸಿ ಖುಷಿಪಡುತ್ತಾರೆ. ಇದು ಸರ್ವೇಸಾಮಾನ್ಯ ಪ್ರಕ್ರಿಯೆ.

ಆದರಿಲ್ಲಿ ಕಗ್ಗೆರೆ ಪ್ರಕಾಶ್ ತಮ್ಮ ಕಗ್ಗೆರೆ ಪ್ರಕಾಶನದ ‘ಭೂರಮೆ ವಿಲಾಸ’ ಕೃತಿಗೆ ನಾಲ್ಕು ವರ್ಷದ ಪುಟಾಣಿ ಎಸ್ ವಿ ಸೃಜನಿಯ ಚಿತ್ರಕಲಾ ತಮ್ಮ ಕಾವ್ಯ ಸಂಕಲನಕ್ಕೆ ಬಳಸಿಕೊಂಡಿದ್ದಾರೆ. ಒಳ ಪುಟದ ಕವಿತೆಗಳಿಗಷ್ಟೇ ಅಲ್ಲದೇ ಮುಖಪುಟಕ್ಕೂ ಈ ಪುಟಾಣಿಯ ವರ್ಣಚಿತ್ರವನ್ನು ಬಳಸಿಕೊಂಡು ಹೊಸ ಪ್ರಯೋಗವನ್ನು ಮಾಡಿದ್ದಾರೆ. ಬಹುಶಃ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಈ ಪ್ರಯತ್ನ ವಿಭಿನ್ನ ಎನ್ನಬಹುದೇನೋ?

ತಮ್ಮ ಕವಿತೆಯು ಏನನ್ನು ಹೇಳ ಹೊರಟಿದೆ ಅದರ ಆಳ-ವಿಸ್ತಾರಗಳೇನು ಎಂಬುದನ್ನು ಸ್ವತಃ ಅರಿತ ಕಗ್ಗೆರೆ ಪ್ರಕಾಶ್ ಅವರು ಹೊಸ ದಿಶೆಯಲ್ಲಿ ಚಿಂತಿಸಿ ಆಗುಮಾಡಿಸಿದ್ದಾರೆ. ತಮ್ಮ ಗೆಳೆಯ ಹಾಗೂ ಚಿತ್ರಕಲಾವಿದರಾದ ಎಂ ಎಲ್ ಸೋಮವರದ ಅವರು ಮಗಳು ಈ ಸೃಜನಿ. ಈಕೆಯ ಚಿತ್ರ
ರಚನೆಯನ್ನು ಆರಂಭದಿಂದಲೂ ಗಮನಿಸುತ್ತಾ ಬಂದಿದ್ದ ಕಗ್ಗೆರೆ ಪ್ರಕಾಶ್ ಈ ಪುಟಾಣಿಯಲ್ಲಿದ್ದ ರೇಖಾ ಲಾಲಿತ್ಯವನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಪ್ರಯೋಗ ಮಾಡಿದ್ದಾರೆ.

ಪುಟಾಣಿಯ ಮೃದು ಕೈಗಳು ಬಲವಾದ ಹಾಗೂ ನಿಖರವಾದ ರೇಖೆಗಳ ಚಿತ್ರಗಳನ್ನು ಮೂಡಿಸಿವೆ. ಮುಂದೆ ಮತ್ತಷ್ಟು ಪಳಗಿದಲ್ಲಿ ಜಾಗತಿಕ ಮಟ್ಟದಲ್ಲಿ ಹೆಸರು ಮಾಡುವ ಸೂಚನೆಯನ್ನು ಈ ಚಿತ್ರಗಳು ಹೊಂದಿವೆ ಎನ್ನುವುದು ಇಲ್ಲಿ ಉಲ್ಲೇಖಾರ್ಹ. ಹಿರಿಯ ಚಿತ್ರಕಲಾವಿದರಿಂದ
ಚಿತ್ರ ರಚಿಸಿಕೊಂಡಾಗ ಸಿಗುವಷ್ಟೇ ತೃಪ್ತಿಯಲ್ಲಿ ಕಗ್ಗೆರೆ ಪ್ರಕಾಶ್ ಇದ್ದಾರೆ.

‘ಪ್ರತಿಯೊಂದು ಮಗುವಿನಲ್ಲೂ ಒಬ್ಬ ಕಲಾವಿದನಿರುತ್ತಾನೆ’ ಎಂದು ಜಗತ್ ಪ್ರಸಿದ್ಧ ಕಲಾವಿದ ಪಿಕಾಸೋ ಹೇಳುತ್ತಾರೆ. ಆದರೆ ಪುಸ್ತಕ ಪ್ರಪಂಚ ಈ ಮಾತನ್ನು ಗಂಭೀರವಾಗಿ ಪರಿಗಣಿಸಿಲ್ಲ. ಮುಖಪುಟ ಮತ್ತು ಸಾಂದರ್ಭಿಕ ಚಿತ್ರಗಳನ್ನು ದೊಡ್ಡವರಿಂದಲೇ ಬರೆಸಬೇಕೆಂಬ ಪರಿಪಾಠವಿದೆ. ಮಕ್ಕಳ ಚಿತ್ರಗಳಿಗೂ ಹೆಚ್ಚಿನ ಮಹತ್ವ ಕೊಡುವ ನಿಟ್ಟಿನಲ್ಲಿ ಈ ಪ್ರಯತ್ನ ಎನ್ನುವುದು ಕಗ್ಗೆರೆ ಪ್ರಕಾಶ್ ಅವರ ಮಾತು. ಸೃಜನಿಯ ಚಿತ್ರಗಳನ್ನು ಪೂರ್ಣಪ್ರಮಾಣದಲ್ಲಿ ಬಳಸಿಕೊಂಡು ಸೂಕ್ತ ಸಂಭಾವನೆಯನ್ನೂ ಕೊಟ್ಟಿರುವುದು ಕನ್ನಡ ಪುಸ್ತಕ-ಚಿತ್ರ-ಪ್ರಕಾಶನ ಪರಂಪರೆ ಇತಿಹಾಸದಲ್ಲಿ ಇದು ಅಪರೂಪ ಎಂದಿದ್ದಾರೆ.

ಕಗ್ಗೆರೆ ಪ್ರಕಾಶ್ ಅವರ 4ನೇ ಕವನ ಸಂಕಲನ ಹಾಗೂ 21ನೇ ಪುಸ್ತಕವಾದ ‘ಭೂರಮೆ ವಿಲಾಸ’ ಹಾಗೂ ಎಸ್.ಭಾಗ್ಯ ಅವರ ಯೋಧನ ಮಡದಿಯ ಅನುಭವ ಕಥನ ‘ವೈಫ್ ಆಫ್ ಸೋಲ್ಜರ್’ ಕೃತಿಗಳು ಇದೇ ಆಗಸ್ಟ್ 1 ರ ಭಾನುವಾರ ಲೋಕಾರ್ಪಣೆಯಾಗುತ್ತಿದೆ. ಬೆಂಗಳೂರಿನ ಸುಂಕದ ಕಟ್ಟೆಯಲ್ಲಿರುವ ಚಿತ್ರಕಲಾವಿದ ಕೆ ಜಿ ಲಿಂಗದೇವರು ಅವರ ಕೆಜಿಎಲ್ಡಿ ಆರ್ಟ್ ಗ್ಯಾಲರಿಯಲ್ಲಿ ಮಧ್ಯಾಹ್ನ 3ಕ್ಕೆ ಬಿಡುಗಡೆಯಾಗಲಿವೆ. ಈ ಸಂದರ್ಭದಲ್ಲಿ ಪುಟಾಣಿ ಸೃಜನಿಯ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನೂ ಏರ್ಪಡಿಸಿದ್ದು ಕಲಾಕೃತಿಗಳು ಏಳು ದಿನಗಳವರಗೆ ಪ್ರದರ್ಶನವಾಗಲಿವೆ. ಇದು ಸೃಜನಿಯ ಎರಡನೇ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ.

ಕರ್ನಾಟಕದ ಹಲವು ಖ್ಯಾತ ಚಿತ್ರಕಲಾವಿದರು ಸೃಜನಿಯ ಚಿತ್ರಗಳಲ್ಲಿನ ‘ವರ್ಣಸಂಯೋಜನೆ ಮತ್ತು ಕುಂಚದ ಹೊಡೆತ ಅದ್ಭುತವಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಫೇಸ್ಬುಕ್ನಲ್ಲಿ ಸೃಜನಿಯ ಕಲಾಕೃತಿಗಳನ್ನು ವೀಕ್ಷಿಸಿರುವ ಅಮೆರಿಕ, ಬ್ರೆಜಿಲ್, ಪೋರ್ಚಿಗಲ್ ಚಿತ್ರ ಕಲಾವಿದರು ಮೆಚ್ಚುಗೆ ಸೂಚಿಸಿದ್ದಾರೆ.

ಸೃಜನಿಯು ಜಾಗತಿಕ ಮಟ್ಟದಲ್ಲೂ ಬೆಳಗಲೆಂದು ಹಾರೈಸೋಣ.

‍ಲೇಖಕರು Admin

August 1, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ನಾಗರಾಜ್ ಹರಪನಹಳ್ಳಿ

    ಸೋಮವರದ ಸೃಜನಶೀಲ ಕಲಾವಿದ. ಅವರ ಮಗಳು ಸೃಜನಿ ಎಸ್.ವಿ . ಪುಟಾಣಿ ಕಲಾವಿದೆ. ಮಕ್ಕಳ ಮನದ ಭೂಮಿಕೆ ಅದ್ಭುತ ಹಾಗೂ ಊಹಿಸಲಸಾಧ್ಯ. ಅದಕ್ಕೆ ವಚನಕಾರರು ” ಮಗು ಕಂಡ ಕನಸಿನಂತಿತ್ತು ” ಎಂದು ಬಳಸಿದ್ದಾರೆ…ಈ ಮಾತು ಸೃಜನಿ ಚಿತ್ರಗಳಿಗೆ ಅನ್ವಯ….

    ಪ್ರತಿಕ್ರಿಯೆ
  2. K.S.Mariyayyaswamy

    ಅನನ್ಯ ಪ್ರತಿಭೆ…ಸೃಜನಿ….ಶುಭವಾಗಲಿ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: