ಜಯಲಕ್ಷ್ಮಿ ಪಾಟೀಲ್ ಅಂಕಣ- ಮನಸಿನಲ್ಲಿ ಅಚ್ಚಳಿಯದಂತೆ ಉಳಿದಿದ್ದು ಈ ದೃಶ್ಯ…

ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ.

ಸಾ ದಯಾ ಅವರ ನಾಟಕದ ಮೂಲಕ ರಂಗ ಪ್ರವೇಶಿಸಿದ ಇವರು ಬೆಂಗಳೂರಿನಲ್ಲಿ ಅದರೊಂದಿಗೆ ಕಿರುತೆರೆ ಹಾಗೂ ಸಿನಿಮಾಗಳಿಗೂ ತಮ್ಮ ವಿಸ್ತರಿಸಿಕೊಂಡರು.

ಮುಕ್ತಮುಕ್ತ, ಮೌನ, ಕಿಚ್ಚು, ಮುಗಿಲು, ಬದುಕು, ಬೆಳಕು ಇವರಿಗೆ ಹೆಸರು ತಂದುಕೊಟ್ಟಿತು. ಚಲನಚಿತ್ರ ಸೆನ್ಸಾರ್ ಮಂಡಳಿ, ದೂರದರ್ಶನ ಚಲನಚಿತ್ರ ಪೂರ್ವ ವೀಕ್ಷಣಾ ಮಂಡಳಿ ಸಮಿತಿಗಳ ಸದಸ್ಯರಾಗಿದ್ದರು.

‘ಈ ಹೊತ್ತಿಗೆ’ ಮೂಲಕ ಸಾಕಷ್ಟು ಕೃತಿ ಸಮೀಕ್ಷೆಗಳನ್ನು ನಡೆಸಿದ್ದಾರೆ. ‘ಜನದನಿ’ ಮಹಿಳಾ ಸಬಲೀಕರಣದಲ್ಲಿ ಈಗ ಮೈಲುಗಲ್ಲು. ‘ಹಂಗು, ಗುಂಗು ಎರಡೂ ಮಿತಿಯಲ್ಲಿದ್ದರೆ ಬದುಕು ಚೆನ್ನ’ ಎನ್ನುವುದು ಇವರ ಧ್ಯೇಯವಾಕ್ಯ.

‘ಅವಧಿ’ಗೆ ಸುರಪರಿಚಿತರಾದ ಜಯಲಕ್ಷ್ಮಿ ಪಾಟೀಲ್ ಇಂದಿನಿಂದ ತಮ್ಮ ಬದುಕಿನ ನಿಲುದಾಣಗಳ ಬಗ್ಗೆ ಬರೆಯಲಿದ್ದಾರೆ.

11

ಆ ಹುಡುಗ ಬಹುಶಃ ನನ್ನ ಸಿನಿಯರ್ ಆಗಿದ್ದ, ಒಂದು ವರ್ಷವೋ ಎರಡು ವರ್ಷವೋ ಸರಿಯಾಗಿ ನೆನೆಪಿಲ್ಲ. ಹೆಸರೂ ಮರೆತಿದೆ. ನಾನು ಮೋರಟಗಿಯಲ್ಲಿ ಆರನೇ ತರಗತಿಯಲ್ಲಿದ್ದಾಗಿನ ಒಂದಿನ ಶಾಲೆ ಬಿಟ್ಟ ಮೇಲೆ, ಶಾಲೆಯ ಅಂಗಳದಲ್ಲಿ ನನ್ನ ಕೈಗೆ ಪುಟ್ಟ ಪುಸ್ತಕವೊಂದನ್ನು ಕೊಟ್ಟು, 

‘ನಾನು ಇನ್ಮುಂದ ಗುಲ್ಬರ್ಗದಾಗ ಕಲೀತಿನಿ. ನನ್ನ ನೆನಪಿಗೆ ಈ ಪುಸ್ತಕ ಕೊಡ್ತೀನಿ. ಇದನ್ನೋದು’ ಎಂದ. ನನಗೆ ಅಯೋಮಯ. ಮೊದಲ ಸಲ ತಮ್ಮ ಒಬ್ಬರು ತಮ್ಮ ನೆನಪಿಗೆಂದು ಪುಸ್ತಕ ಕೊಡುತ್ತಿರುವುದು. ಹಾಗೆ ನೆನಪಿಗಾಗಿ ಪುಸ್ತಕ ಕೊಡಬೇಕು ಎನ್ನುವುದೂ ತಿಳಿದಿರಲಿಲ್ಲ ನನಗೆ. ನನಗ್ಯಾಕೆ ಕೊಡುತ್ತಿದ್ದಾನೆ? ಅವನನ್ನು ನಾನು ಪುಸ್ತಕ ಕೊಡು ಎಂದು ಕೇಳಿಲ್ಲವಲ್ಲ! ಅದು ಹೇಗೆ ಅವನಿಗೆ ನಾನು ಕತೆ ಕಾದಂಬರಿ ಓದುತ್ತೇನೆಂದು ತಿಳಿಯಿತು? (ಆಗ ಅದಕ್ಕೆ ಸಾಹಿತ್ಯ ಎನ್ನುತ್ತಾರೆನ್ನುವುದೂ ತಿಳಿದಿರಲಿಲ್ಲ! ಪಠ್ಯೇತರ ಓದು ಆರಂಭಿಸಿ ಐದಾರು ತಿಂಗಳಗಳು ಆಗಿದ್ದಿರಬಹುದಷ್ಟೆ.) ಹೀಗೆ ಯೋಚಿಸುತ್ತಾ ಗೊಂದಲಗೊಂಡೆನಾದರೂ ಕೊಟ್ಟ ಪುಸ್ತಕ ಪಡೆದುಕೊಂಡೆ. ಅದೊಂದು ಪುಟ್ಟ ಪುಸ್ತಕವಾಗಿತ್ತು. ಇದನ್ನು ನನಗೆ ಯಾಕೆ ಕೊಟ್ಟ ಎನ್ನುವು ಕುತೂಹಲದಿಂದಲೇ ಅದನ್ನು ಓದಿದೆ. ಪುಸ್ತಕ ತುಂಬಾ ಇಷ್ಟವಾಯಿತು. ಆಗ ಓದಿದ್ದರಲ್ಲಿ ಮನಸಿನಲ್ಲಿ ಅಚ್ಚಳಿಯದಂತೆ ಉಳಿದಿದ್ದು ಈ ದೃಶ್ಯ.

‘ಇಬ್ಬರ ನಡುವೆ ಕಾಳಗ ನಡೆದಿದೆ. ಒಬ್ಬ ಈಗಾಗಲೇ ಎಲ್ಲೆಡೆ ಗೆದ್ದು ಬಂದ ಪ್ರಸಿದ್ಧ ಜಟ್ಟಿಯಾದರೆ, ಇನ್ನೊಬ್ಬನನ್ನು ನೋಡಿದರೇನೇ ಜಟ್ಟಿ ಎದುರು ಇವನು ಮಣ್ಣು ಮುಕ್ಕುವುದು ಗ್ಯಾರಂಟಿ ಎನ್ನುವಂತಿರುವ ದೇಹರ್ದಾಢ್ಯವಿಲ್ಲದ ಸಾಮಾನ್ಯ ಮೈಕಟ್ಟಿನ ವ್ಯಕ್ತಿ. ಮಲ್ಲಯುದ್ಧ, ದೃಷ್ಠಿ ಯುದ್ಧ ಹೀಗೆ ಒಂದೆರಡು ಹಂತಗಳಾದ ಮೇಲೆ ಸಾಮಾನ್ಯ ಮೈಕಟ್ಟಿನ ವ್ಯಕ್ತಿ, ತನ್ನ ಸೊಂಟಕ್ಕೆ ಸುತ್ತಿಕೊಂಡ ಉದ್ದದ ಬೆಲ್ಟಿನಂತದನ್ನು ಬಿಚ್ಚಿ ಜಟ್ಟಿಯತ್ತ ಒಮ್ಮೆ ಝಳಪಿಸುತ್ತಾನೆ.

ಜಟ್ಟಿ ಮಿಸುಗದೇ ನೆಟ್ಟಗೆ ಹಾಗೇ ನಿಂತಿದ್ದನ್ನು ಕಂಡ ಜನ ಸಮೂಹ, ಇವನಿಗೆ ಓಡು ಪಾರಾಗು ಎಂದೇನೋ ಕೂಗುತ್ತಿದ್ದರೂ, ಇವನು ತುಂಬಾ ರಿಲ್ಯಾಕ್ಸ್ ಎದುರಿನ ಜಟ್ಟಿಯತ್ತ ನಡೆಯುತ್ತಿರುವುದನ್ನು ಕಂಡು ಅಚ್ಚರಿಗೊಳ್ಳುತ್ತದೆ. ಆಗ ಜಟ್ಟಿಯ ಎದುರು ನಿಂತು ಅವನ ಕಣ್ಣಲ್ಲಿ ಕಣ್ಣು ಕೀಲಿಸಿ ಈತ ತಾನು ಗೆದ್ದೆನೆಂದು ಘೋಷಿಸುತ್ತಾನೆ. ಆಗಲೂ ಜಟ್ಟಿ ಸುಮ್ಮನೇ ನಿಂತಿದ್ದಾನೆ. ಜನಕ್ಕೆ ಅರ್ಥವಾಗುವುದಿಲ್ಲ. ಇನ್ನಿವನಿಗೆ ಉಳಿಗಾಲವಿಲ್ಲ ಎಂದುಕೊಳ್ಳುತ್ತಾರೆ. ನೋಡಿದರೆ ಸೊಂಟದ ಬೆಲ್ಟಿನಂತೆ ಮಣಿಯುವ ಖಡ್ಗದ ಪ್ರಹಾರದಿಂದಾಗಿ ಜಟ್ಟಿಯ ದೇಹ ಸೊಂಟದಿಂದ ಎರಡು ಭಾಗವಾಗಿ ತುಂಡಾಗಿದ್ದರೂ ಉರುಳದೆ ಹಾಗೇ ನಿಂತಂತೆಯೇ ನಿಂತಿದೆ ಅನ್ನುವುದು ತಿಳಿಯುತ್ತದೆ.’

ಆ ಪುಸ್ತಕದಲ್ಲಿ ಬರುವ ಈ ಹಾವಿನಂತೆ ಬಳಕುವ ಖಡ್ಗದ ಬಳಕೆಯ ದೃಶ್ಯದ ಭಾಗ ನನ್ನ ಮನಸ್ಸಲ್ಲಿ ಉಳಿದಿತ್ತಾದರೂ ಪುಸ್ತಕದ ಹೆಸರು ಮರೆತಿತ್ತು. ಈಗೊಂದು ಆರೇಳು ವರ್ಷಗಳ ಹಿಂದೆ ಫೇಸ್ಬುಕ್ಕಲ್ಲಿ ಈ ದೃಶ್ಯ ವಿವರಿಸಿ, ಹೆಸರು ಗೊತ್ತಿದ್ದವರು ತಿಳಿಸಿ ಎಂದು ವಿನಂತಿಸಿ ಪೋಸ್ಟ್ ಹಾಕಿದ್ದೆ. ಆಗ ಸ್ನೇಹಿತರು ಉತ್ತರಿಸಿದ್ದರಿಂದ ನನಗೆ ಗೊತ್ತಾಗಿದ್ದು ಅದು ಸಂಸ ಅವರ ಪ್ರಸಿದ್ಧ ಐತಿಹಾಸಿಕ ನಾಟಕ ‘ವಿಗಡ ವಿಕ್ರಮರಾಯ’ ಎಂದು. ಮತ್ತು ಜಟ್ಟಿಯ ದೇಹ ಸೊಂಟದಿಂದ ಎರಡು ಹೋಳಾಗಿದ್ದಲ್ಲ, ರುಂಡ ಮುಂಡಗಳು ಬೇರ್ಪಟ್ಟಿರುತ್ತವೆ ಎನ್ನುವುದು ತಿಳಿಯಿತು. ಬಹುಶಃ ನಾಟಕದಲ್ಲಿನ ಇತರ ವಿವರಗಳು ಈ ದೃಶ್ಯದೊಡನೆ ಬೆರೆತು ಮಲ್ಲಯುದ್ಧ, ದೃಷ್ಠಿ ಯುದ್ಧಗಳೂ, ಇದೇ ಕಾಳಗದಲ್ಲಿ ಸೇರಿಕೊಂಡವು ಅನಿಸುತ್ತದೆ.

 ಓದಿನ ರುಚಿ ನನಗೆ ಹತ್ತಿದ್ದು ನನ್ನ ತಂದೆ ತಾಯಿಗಳ ಸಾಹಿತ್ಯಾಸಕ್ತಿಯ ಪ್ರಭಾವದಿಂದ. ನಮ್ಮವ್ವ ಮನೆಯಲ್ಲಿನ ಹತ್ತು ಜನರ ಅಡುಗೆ ಅಂಚಡಿಗಳ ಇತ್ಯಾದಿ ಸೇವೆಯ ನಡುವೆಯೂ ತನ್ನ ಸಾಹಿತ್ಯಾಸಕ್ತಿಯನ್ನು ಉಳಿಸಿಕೊಂಡಿದ್ದು ಸೋಜಿಗವೇ ಸೈ. ಮನೆಯಲ್ಲಿ ದಿನಪತ್ರಿಕೆ, ಸುಧಾ, ಪ್ರಜಾಮತ, ತರಂಗ, ಲಂಕೇಶ್ ವಾರಪತ್ರಿಕೆಗಳು, ಕಸ್ತೂರಿ, ಮಯೂರ ಮಾಸಪತ್ರಿಕೆಗಳು ಬರುತ್ತಿದ್ದವು. ಮಠದಿಂದ ಅನೇಕ ಕಾದಂಬರಿಗಳನ್ನು ಹಾಗೂ ಇನ್ನಿತರ ಪುಸ್ತಕಗಳನ್ನು ಓದಲು ಮನೆಗೆ ತರುತ್ತಿದ್ದರು. ಓದಿದ ನಂತರ ಮರಳಿಸುತ್ತಿದ್ದರು. ನನಗೆ ನೆನಪಿದ್ದಂತೆ ಆಗೆಲ್ಲ ನಮ್ಮ ಮನೆಯಲ್ಲಿ ಕಾದಂಬರಿಗಳ ಓದೇ ಹೆಚ್ಚಾಗಿತ್ತು. ಪುಸ್ತಕ ರೂಪದಲ್ಲಿನ, ವಾರಪತ್ರಿಕೆಗಳಲ್ಲಿ ಧಾರಾವಾಹಿ ರೂಪದಲ್ಲಿ ಬರುತ್ತಿದ್ದ ಕಾದಂಬರಿಗಳು, ಹೀಗೆ. ಕಥೆಗಳ ಓದು ವಾರ ಪತ್ರಿಕೆ, ಮಾಸ ಪತ್ರಿಕೆಗಳಲ್ಲಿ ಬರುತ್ತಿದ್ದ ಕಥೆಗಳಿಗಷ್ಟೇ ಸೀಮಿತವಾಗಿತ್ತು ಅನಿಸುತ್ತದೆ. ಆಗೆಲ್ಲ ಕಥಾ ಸಂಕಲನಗಳನ್ನು ಓದಿದ ನೆನಪಿಲ್ಲ ನನಗೆ.

ಅಂದೊಮ್ಮೆ…

‘ಅಪ್ಪಾ, ಹಿಂಗಂದ್ರೇನು?’ ಪ್ರಜಾಮತ(ವಾರ ಪತ್ರಿಕೆ)ದಲ್ಲಿನ ಯಾವುದೋ ಒಂದು ಪದದ ಅರ್ಥ ತಿಳಿಯದೆ ಅಪ್ಪನ್ನ ಕೇಳಿದೆ. 

‘ಏನದು ತಾ ಇಲ್ಲಿ ನೋಡೂನು’ ಅಂದ್ರು ಅಪ್ಪ. ಪ್ರಜಾಮತವನ್ನು ಅವರ ಕೈಯಲ್ಲಿಟ್ಟು ಆ ಪದವನ್ನು ತೋರಿಸಿದೆ. ಕ್ಷಣ ಹೊತ್ತು ಸುಮ್ಮನಿದ್ದ ಅಪ್ಪ, ‘ನಿಮ್ಮ ಅವ್ವನ್ನ ಕೇಳು ಹೋಗು’ ಅಂದ್ರು.

‘ನಿನಗ ಗೊತ್ತಿಲ್ಲಾ?’

‘ಹೋಗು ಅಕಿನ್ನ ಕೇಳು’

ಸರಿ ಅವ್ವನ ಬಳಿ ಹೋದೆ. ಅವ್ವ ರೊಟ್ಟಿ ಮಾಡುತ್ತಿದ್ದಳು. ಎರಡೂ ಕೈಗಳೂ ಹಿಟ್ಟಾಗಿದ್ದವು. ಹಿಟ್ಟಾದ ಕೈಗಳಿಂದ ಪುಸ್ತಕ ಹಿಡಿಯುವುದು ಹೇಗೆ? ಹೀಗಾಗಿ ನನಗೇ ಆ ಪದವನ್ನು ಓದಿ ಹೇಳಲು ಹೇಳಿದಳು. 

‘ಯೋನಿ ಅಂತೈತಿ ಬೇ. ಹಂಗಂದ್ರೇನು?’ ಅಂದೆ.

ನನ್ನ ಪ್ರಶ್ನೆ ಮುಗಿಯುತ್ತಿದ್ದಂತೆಯೇ ಒಲೆಯೊಳಗಿನ ಉರಿಯ ಕೆಂಪು, ಝಳ ಎರಡೂ ಅವ್ವನ ಮುಖದಲ್ಲಿ ಪ್ರತಿಫಲಿಸುತ್ತಿವೆ ಏನೋ ಎಂಬಂತೆ ಅವ್ವನ್ನ ಮುಖಭಾವ ಬದಲಾಯಿತು. 

‘ಇನ್ನೊಮ್ಮೆ ಅಂಥಾವೇನರ ಓದಿದ್ರ ಕಾಲ್ ಮುರ್ದು ಕೈಯಾಗಿಡ್ತೀನಿ! ಹೇಶಿ ತಂದು! ಇಡು ಮದ್ಲದನ್ನ ಅಲ್ಲೆ. ಹೋಗು ಸಾಲಿ ಪುಸ್ತಕ್ ತೊಗೊ ಕೈಯಾಗ, ನಡಿ!’ ಕೈಯಲ್ಲಿದ್ದ ಕಡಚಿಗಿಯನ್ನು ಝಳಪಿಸುತ್ತಾ ಅವ್ವ ರೇಗಿದಳು.

ಓದಬಾರದ್ದೇನನ್ನೋ ಓದುತ್ತಿದ್ದೇನೆ ಎಂದು ಅವ್ವ ಕೆಂಡಾಮಂಡಲವಾಗಿದ್ದಳು! ಏನೂ ತಪ್ಪೇ ಮಾಡದ ನನ್ನನ್ನು ಕೇವಲ ಒಂದು ಪದದ ಅರ್ಥ ಕೇಳಿದ್ದಕ್ಕೆ ಅವ್ವ ಬೈದಿದ್ದ್ಯಾಕೆ ಎಂದು ತಿಳಿಯದೇ ನಾನು ಕಂಗಾಲಾಗಿದ್ದೆ. 

ಇದು ನಾನು ಆರನೇ ತರಗತಿಯ ಆರಂಭದ ದಿನಗಳಲ್ಲಿನ ಘಟನೆ. ಆಗಷ್ಟೇ ಮನೆಗೆ ಬರುವ ವಾರ ಮಾಸ ಪತ್ರಿಕೆಗಳನ್ನು ಓದುವ ಪ್ರಯತ್ನ ಮಾಡುತ್ತಿದ್ದೆ. ಬೇಸಿಗೆ ರಜದಲ್ಲಿ ಓದಿನ ರುಚಿ ಹತ್ತಿತ್ತು. ಆದರೆ ಕೆಲವು ಪದಗಳು ಅರ್ಥವಾಗುತ್ತಿರಲಿಲ್ಲ. ಆಗೆಲ್ಲ ಅಪ್ಪಾ ಇಲ್ಲವೇ ಅವ್ವನ ಹತ್ತಿರ ಅವುಗಳ ಅರ್ಥವನ್ನು ಕೇಳಿ ತಿಳಿದುಕೊಳ್ಳುತ್ತಿದ್ದೆ. ಹಾಗೆ ಪಠ್ಯೇತರ ಪುಸ್ತಕಗಳನ್ನು ನಾನು ಓದುವುದು ಅವರಿಗೆ ಇಷ್ಟವಾಗುತ್ತದೆ ಎನ್ನುವುದು ಅವರುಗಳ ಕಣ್ಣಲ್ಲಿನ ಮೆಚ್ಚುಗೆ ಹೇಳುತ್ತಿತ್ತು. ಅದು ನನಗೆ ಮತ್ತೂ ಓದಲು ಸ್ಪೂರ್ತಿಯಾಗುತ್ತಿತ್ತು. ತಿಳಿಯದ ಪದಗಳ ಅರ್ಥವನ್ನು ಖುಷಿಯಿಂದಲೇ ಹೇಳುತ್ತಿದ್ದ ಅವ್ವ ಮೊದಲ ಬಾರಿ ಅವ್ವ ಸಿಟ್ಟಿಗೆದ್ದಿದ್ದಳು. ಕಾರಣ ಗೊತ್ತಾಗಲಿಲ್ಲ. ತುಂಬಾ ಅವಮಾನವಾದಂತೆನಿಸಿತ್ತು. ಮುಸುಮುಸು ಅಳುತ್ತಾ ಪಡಸಾಲಿಗೆ ಬಂದವಳೇ ಕೈಯಲ್ಲಿದ್ದ ಪ್ರಜಾಮತವನ್ನು ಟೀಪಾಯ್ ಮೇಲೆ ಕುಕ್ಕಿ ಇಟ್ಟೆ. 

ಅಪ್ಪಾ, ‘ಏನಾಯ್ತು?’

ನಾನು ಅಳುತ್ತಲೇ, ‘ಅವ್ವ ಇನ್ನ ಮ್ಯಾಲೆ ಇಂಥಾವೆಲ್ಲ ಓದಬ್ಯಾಡ ಅಂತ ಬೈದ್ಲು. ನಾ ಇನ್ನ ಒಟ್ಟೇ ಓದೂದೇ ಇಲ್ಲ. ಓದಿದ್ರೂ ಬೈತೀರಿ. ಓದ್ಲಿಕ್ಕೂ ಬೈತೀರಿ’

ಅಪ್ಪಾ, ‘ಹುಚ್ಚಿ. ಅಕಿಗೆ ಗೊತ್ತಿಲ್ದ ಹಂಗದಾಳ, ಸುಮ್ನಾಗು’ ಎಂದು ಸಮಾಧಾನ ಮಾಡಿದರು.

ನಂತರ ಅಪ್ಪಾ, ಅವ್ವನ ಹತ್ತಿರ ನಾನು ಏನು ಓದುತ್ತಿದೆ ಎಂದು ಹೇಳಿದ್ದರು ಅನಿಸುತ್ತೆ, ಅವ್ವ ಯಾರೂ ಹುಡುಗರಿಲ್ಲದಾಗ ನನ್ನನ್ನು ಕರೆದು ಅದರ ಅರ್ಥ ಹೇಳಿದ್ದಳಲ್ಲದೇ, ಅಂಥ ಬರಹಗಳು ಕೇವಲ ದೊಡ್ಡವರಿಗಾಗಿ ಇರುತ್ತವಂತಲೂ, ನಾನಿನ್ನೂ ಚಿಕ್ಕವಳಾದ್ದರಿಂದ ಈಗವನ್ನು ಓದಬಾರದು ಅಂತಲೂ ತಿಳಿಸಿ ಹೇಳಿದಳು. ಬಹುಶಃ ಹೆಣ್ಣುಮಕ್ಕಳ ಆರೋಗ್ಯ ಕುರಿತ ವೈದ್ಯಕೀಯ ಬರಹವಾಗಿದ್ದಿರಬೇಕು ಅಂದು ನಾನು ಓದಿದ್ದು.

ಎಲ್ಲಾ ಬಿಟ್ಟು ಭಂಗಿ ನೆಟ್ಟ ಅನ್ನುವಂತೆ, ಇದ್ಯಾಕೆ ಬೇಕಿತ್ತು ಈ ಘಟನೆಯನ್ನ ಹೇಳದೇ ಇನ್ನೇನದರೂ ಹೇಳಬಹುದಿತ್ತು ಎಂದು ಕೆಲವರಿಗೆ ಅನ್ನಿಸಬಹುದು. ಕಾರಣವಿದೆ.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

August 2, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Akshata Deshpande

    ಚನ್ನಾಗಿ ಮೂಡಿಬರುತ್ತಿದೆ ಅಂಕಣ. ಹೇಳಬಾರದ್ದನ್ನು ಯಾವುದೂ ಹೇಳಿಲ್ಲ ನೀವು. ಸರಿಯಾಗೇ ಒಂದರ ನಂತರ ಇನ್ನೊಂದು ಘಟನೆಯನ್ನ ವರ್ಣಿಸಿಕೊಂಡು ಹೋಗುತ್ತಿದ್ದೀರಿ
    ಮುಂದಿನ ಕಂತಿಗಾಗಿ ಕಾಯುತ್ತಿರುವೆ ❤️

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: