ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸೇರಬೇಕಾದ ಊರಲ್ಲಿ ದಾರಿಯೇ ಕೊನೆಯಾಗುತ್ತದೆ…

ಶ್ರೀವಿಭಾವನ 

ಕೊನೆಯಿಲ್ಲದ
ದಾರಿ
ದಾರಿಗುಂಟ ಆಗ್ಗಾಗ್ಗೆ ನನ್ನ ದಾಟಿ
ಮುನ್ನುಗ್ಗುವ
ಒಂದಿಷ್ಟು ಅಪರಿಚಿತ  ಮುಖಗಳನ್ನು
ಬಿಟ್ಟರೆ,
ಮತ್ತೇನು ಇಲ್ಲ
ಕಣ್ಣು ಹಾಯಿಸಿದಷ್ಟು  ದೂರ
ಶೂನ್ಯವನ್ನೇ ಹೊದ್ದುಕೊಂಡಂತಿರುವ
ನೆಲ.

ನನಗೋ ಈ ದಾರಿ ಹೊಸದು
ಎತ್ತ ದೃಷ್ಟಿ ಹಾಯಿಸಿದರೂ
ಬರಿ ಖಾಲಿ ನೋಟಗಳೇ.
ಆಗ್ಗಾಗ್ಗೆ
ಹಿಂದಿಕ್ಕಿ
ಅವಸರದಲ್ಲಿ
ಹೆಜ್ಜೆ  ಇಡುತ್ತಾ
ಅದೆಲ್ಲಿಗೋ
ಧಾವಂತದಲ್ಲಿ  ಸಾಗುತ್ತಿರುವ
ಜನರನ್ನಾದರೂ
ಕೇಳಬೇಕಿತ್ತು
ನಿಮಗಾದರೂ
ಈ ದಾರಿಯ
ಪರಿಚಯವಿದೆಯೇ  ಎಂದು  

ಅನುಭೂತಿಯೋ …
ಅನಿವಾರ್ಯತೆಯೋ….
ಒಂದಿಷ್ಟು ದಾರಿಗಳನ್ನು
ಕ್ರಮಿಸಲೇಬೇಕಿದೆ
ವಿಳಾಸ ಗೊತ್ತಿಲ್ಲದಿದ್ದರೂ
ದಾರಿಯೇ ಕೊನೆಯಾಗುತ್ತದೆ
ತಲುಪಬೇಕಾದ ಊರಲ್ಲಿ
ನಡುವೆ ಅದೇನೋ ತಾಕಲಾಟಗಳು,
ಭ್ರಮೆಗಳು, ಮತ್ತು  ಭಯ!


ಕಾಯ್ದ ನೆಲದ ಬಿಸಿಗೆ
ಎದೆಯ ಬೇಗುದಿಯೇ  ಸರಿ ಜೋಡಿ
ಎಲ್ಲವನ್ನೂ  ಹಗುರಾಗಿಸಿಕೊಂಡು
ಹೆಜ್ಜೆ  ಇಡಲೇ ಬೇಕಿದೆ…
ಗೊತ್ತಿಲ್ಲದ ಊರಿನಡೆಗಿನ
ಪಯಣಕ್ಕಾಗಿ

‍ಲೇಖಕರು Admin

8 April, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading