ಆರ್ ಕೆ ಶ್ರೀಕಂಠನ್ ಜೀವನ ಚರಿತ್ರೆ- ಕಾವೇರಿ: ಸಂಕೇತಿಗಳ ಜೀವಧಾರೆ…

ಹಿರಿಯ ಪತ್ರಕರ್ತೆ, ಉತ್ಸಾಹಶೀಲರಾದ ರಂಜನಿ ಗೋವಿಂದ್ ಅವರು ಖ್ಯಾತ ಸಂಗೀತ ವಿದ್ವಾಂಸರಾದ ಆರ್ ಕೆ ಶ್ರೀಕಂಠನ್ ಅವರ ಕುರಿತು ಅತ್ಯುತ್ತಮವಾದ ಇಂಗ್ಲಿಷ್ ಕೃತಿ Voice of a Generation- RK Srikantan ರೂಪಿಸಿದ್ದರು.

ಇದನ್ನು ‘ಗಾನ ಜೀವನ’ ಎನ್ನುವ ಹೆಸರಿನಲ್ಲಿ ಡಾ ಸುಮನಾ ಕೆ ಎಸ್ ಹಾಗೂ ಡಾ ಆರತಿ ಬಾಲಸುಬ್ರಹ್ಮಣ್ಯಂ ಅವರು ಕನ್ನಡಕ್ಕೆ ತಂದಿದ್ದಾರೆ.

ಖ್ಯಾತ ಸಂಗೀತಗಾರರೂ ಹಾಗೂ ಸಂಸ್ಕೃತ ವಿದ್ವಾಂಸರಾದ ಡಾ ಟಿ ಎಸ್ ಸತ್ಯವತಿ ಅವರು ಇದನ್ನು ಸಂಪಾದಿಸಿದ್ದಾರೆ.

ಈ ಕನ್ನಡ ಅವತರಣಿಕೆ ‘ಅವಧಿ’ಯಲ್ಲಿ ಧಾರಾವಾಹಿಯಾಗಿ ನಿಮ್ಮ ಮುಂದೆ…

3

ಕಾವೇರಿ: ಸಂಕೇತಿಗಳ ಜೀವಧಾರೆ

ತೆಲುಗು ಸಂತ-ಸಂಗೀತಗಾರ ಭದ್ರಾಚಲ ರಾಮದಾಸರು ಅದಿಗೋ ಭದ್ರಾದ್ರಿ, ಗೌತಮಿ ಇದಿಗೋ ಚೂಡಂಡಿ” ಎಂದು ಹಾಡುವಾಗ, ಗೋದಾವರಿಯ ಹರಿವೇ ಆತನ ಗಾನ-ಕಾವ್ಯಲಹರಿಗೆ ಸ್ಫೂರ್ತಿಯಾಗಿದ್ದಿರಬೇಕು. ಭಾರತದಲ್ಲಿ ನದಿಗಳನ್ನು ದಿವ್ಯಕೃಪೆಯ ಧಾರೆಗಳೆಂದೇ ಮಾನ್ಯ ಮಾಡಲಾಗುತ್ತದೆ. ಭೌತಿಕ ಅಸ್ತಿತ್ವಕ್ಕೆ ಅವು ಜಲಸಂಪನ್ಮೂಲವನ್ನೊದಗಿಸುತ್ತವೆ ಎಂಬುದೊಂದೇ ಇದಕ್ಕೆ ಕಾರಣವಲ್ಲ. ಸಂಸ್ಕೃತಿ-ಕಲೆ-ಅಧ್ಯಾತ್ಮಗಳ ಅಭಿವ್ಯಂಜನಕ್ಕೂ ನದಿಗಳೇ ಪ್ರೇರಕಶಕ್ತಿಗಳಾಗಿವೆ ಎನ್ನುವುದೂ ಒಂದು ಕಾರಣ! ಈ ಜೀವಧಾರೆಗಳಿಂದ ಮನುಕುಲವು ಪಡೆಯುವ ಪೋಷಣೆಯು ಅಷ್ಟಿಷ್ಟಲ್ಲ. ಕಾವೇರಿಯು ಹೇಗೆ ತಮ್ಮ ಪಾಲಿಗೆ ‘ಜೀವಧಾರೆಯೇ’ ಆಗಿದ್ದಾಳೆ ಎನ್ನುವುದನ್ನು ಪದಗಳಲ್ಲಿ ಕಟ್ಟಿಡಲಾಗದೆ ಸಂಕೇತಿಗಳು ‘ಅದು ಅನುಭವೈಕವೇದ್ಯ’ ಎಂದುಬಿಡುತ್ತಾರೆ!ಅವರ ಎಲ್ಲ ಅಭಿವ್ಯಕ್ತಿಗಳಲ್ಲೂ ಭಕ್ತಿರಸಪಾಕವೂ ಕಾವೇರಿಯ ಸೌಂದರ್ಯಾಸ್ವಾದವೂ ಧ್ವನಿಸುತ್ತಲೇ ಇರುತ್ತದೆ! ಕಾವೇರಿಯು ತನ್ಮಯವಾಗಿ ಹರಿದು ಸಾಗರವನ್ನು ಸೇರುವಂತೆಯೇ ಸಂಕೇತಿಗಳ ಭಾವಲಹರಿಗಳೂ ಭಗವಂತನತ್ತ ತನ್ಮಯಭಾವದಿಂದ ಹರಿಯುತ್ತವೆ!

ಈ ಜೀವನದಿಯು ಕೇವಲ ಕೃಷಿ-ನೀರಾವರಿಗಳನ್ನಷ್ಟೇ ಪೋಷಿಸಿಲ್ಲ, ತ್ಯಾಗರಾಜ-ಪುರಂದರದಾಸರೇ ಮೊದಲಾದ ಹಲವು ಕನ್ನಡ ಕವಿ-ವಾಗ್ಗೇಯಕಾರರ ಸತ್ವಯುತ ಮಾನಸ-ಕ್ಷೇತ್ರಗಳನ್ನೂ ಸೃಜನಶೀಲ ಕನ್ನಡ-ಸಂಸ್ಕೃತ ಕೃತಿಗಳ ಸುಗ್ಗಿಯನ್ನೂ ಪ್ರೇರೇಪಿಸಿದೆ! ಸಂತ ತ್ಯಾಗರಾಜರು ಅಸಾವೇರಿ ರಾಗದ ಕೃತಿಯಲ್ಲಿ ತಮ್ಮ ಅನುಪಮ ಆಧ್ಯಾತ್ಮಿಕ ಹಂಬಲವನ್ನು ಅರುಹುತ್ತ ಕಾವೇರಿಯ ದಿವ್ಯಸೌಂದರ್ಯವನ್ನೇ ನಮ್ಮ ಕಂಗಳ ಮುಂದೆ ಸೆಳೆದು ನಿಲ್ಲಿಸುತ್ತಾರೆ. “ಸಾರಿ ವೆಡಲಿನ ಕಾವೇರಿನಿ ಜೂಡರೇ, ವಾರುವೀರನುಚು ಜೂಡಕ ತಾನವ್ವರಿಗಾಭೀಷ್ಟಮುಲನೊಸಂಗುಚು“ (ಬಡವ-ಬಲ್ಲಿದರೆನ್ನದೆ, ಪಾಪಿಗಳು-ಪುಣ್ಯಾತ್ಮರೆನ್ನದೆ ದೊರೆ-ತಿರುಕನೆನ್ನದೆ ಎಲ್ಲರಿಗೂ ತನ್ನ ಸಮೃದ್ಧಿಯನ್ನು ವಿತರಿಸುವವಳು ಈ ಜೀವನದಿ) ಹಲವು ಕವಿ-ವಾಗ್ಗೇಯಕಾರರೂ ಯೋಗಿಗಳೂ ವೇದಪಂಡಿತರೂ ಕಾವೇರಿಯನ್ನು ಪರಮಪಾವನಿಯೆಂದೂ, ಆದಿ-ಮಧ್ಯ-ಅಂತ್ಯರಂಗಕ್ಷೇತ್ರಗಳಲ್ಲಿ (ಕರ್ನಾಟಕದಲ್ಲಿನ ಶ್ರೀರಂಗಪಟ್ಟಣ ಮತ್ತು ಶಿವನಸಮುದ್ರ ಹಾಗೂ ತಮಿಳುನಾಡಿನ ಶ್ರೀರಂಗಂ ಕ್ಷೇತ್ರಗಳು) ಶ್ರೀರಂಗನಾಥಸ್ವಾಮಿಗೆ ತನ್ನನ್ನು ತಾನು ಮಾಲೆಯಂತೆ ಅರ್ಪಿಸಿಕೊಂಡವಳೆಂದೂ ಸ್ತುತಿಸುತ್ತಾರೆ.ಶತಮಾನಗಳ ಹಿಂದಿನ ಕವಿಕಲಾವಿದರಷ್ಟೇ ಅಲ್ಲ, ಇಂದಿನ ಕವಿಕಲಾವಿದರೂ ಕಾವೇರಿಯನ್ನು ಮನದುಂಬಿ ಸ್ತುತಿಸಿದ್ದಾರೆ. 

ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪನವರು ಕಾವೇರಿಯ ಮೇಲಿನ ತಮ್ಮ ಕವಿತೆಯಲ್ಲಿ ಹೀಗೆ ಹಾಡುತ್ತಾರೆ-

ರಂಗನಾಥನ ಯೋಗನಿದ್ರೆಗೆ ಮಂಗಳದ ದನಿಗೈವಳೆ I

ಎರಡು ತೋಳನು ಚಾಚಿ ಶ್ರೀರಂಗನನು ತೆಕ್ಕೆಯಲಿ ತಬ್ಬಿದವಳೆ II

(ಕಾವೇರಿಯ ಮಧುರ ಕಲರವವು ರಂಗನಾಥನಿಗೆ ದಿವ್ಯಜೋಗುಳವೆಂದೂ,ಅವಳ ಎರಡು ಧಾರೆಗಳೂ ರಂಗನಾಥನನ್ನು ಬಳಸಿರುವ ಅವಳ ತೋಳುಗಳೆಂದೂ ಸುಂದರ ಕವಿಕಲ್ಪನೆಯಿಲ್ಲಿದೆ)

ಗಾಯಕರೂ, ಸಂಗೀತಶಾಸ್ತ್ರಜ್ಞರೂ ಆದ ಟಿ.ಎಸ್.ವಸಂತಮಾಧವೀರವರು ಕಾವೇರಿಯ ಕುರಿತಾದ ತಮ್ಮ ಶ್ಲೋಕಗಳಲ್ಲಿ ಹೀಗೆ ಬಣ್ಣಿಸುತ್ತಾರೆ-

ಬ್ರಹ್ಮಸುತಾಂ ನದೀರೂಪಾಂ ನಿರ್ಮಲವಾರಿಸಂಯುತಾಂ I ಬ್ರಹ್ಮರ್ಷಿಕುಂಭಜಾನೀತಾಂ ಸರ್ವಪಾಪಪರಿಹೃತಾಂII

ಪಶ್ಚಿಮಗಿರಿಸಂಭೂತಾಂ  ನಮತಾಂ ಕಾವೇರೀಂ ಸತೀಂ ದಕ್ಷಿಣಗಂಗೇತಿ ಸ್ಮೃತಾಮ್ II

(ಬ್ರಹ್ಮನಪುತ್ರಿಯೂ, ನದೀರೂಪಳೂ, ನಿರ್ಮಲಜಲದಿಂದಕೂಡಿದವಳೂ, ಬ್ರಹ್ಮರ್ಷಿಅಗಸ್ತ್ಯರಕುಂಭದಿಂದಜನಿಸಿದವಳೂ, ಸಕಲಪಾಪಗಳನ್ನುಪರಿಹರಿಸುವವಳೂ, ಪಶ್ಚಿಮಗಿರಿಯಿಂದಹುಟ್ಟುವವಳೂ,  ದಕ್ಷಿಣಗಂಗೆಯೆಂದು ಸ್ಮರಿಸಲ್ಪಡುವವಳೂ ಆದ ಕಾವೇರಿಯನ್ನು ನಮಿಸಿರಿ)

ಸಂಕೇತೀವಾಸ್ತವ್ಯಗಳ ಬಗ್ಗೆ ಅಪಾರ ಮಾಹಿತಿಯನ್ನು ಸಂಗ್ರಹಿಸಿರುವ ಆರ್.ಎಸ್. ಭಾಸ್ಕರ ಅವಧಾನಿರವರು ಹೇಳುತ್ತಾರೆ- “ಕೊಡವರು ಕಾವೇರಿಯನ್ನು ತಮ್ಮ ಪ್ರಧಾನದೇವತೆ ಎಂದು ಆರಾಧಿಸುವಂತೆಯೇ, ಸಂಕೇತಿಗಳು ಕಾವೇರಿಯನ್ನು ಪಾಪವನ್ನು ತೊಳೆದುಹಾಕುವಂತಹ ದಿವ್ಯಶಕ್ತಿಯೆಂದು ಆರಾಧಿಸುತ್ತಾರೆ.ಕರ್ನಾಟಕದ ಸಂಕೇತಿ-ಗ್ರಾಮಗಳಿಗೂ ಕಾವೇರಿಯು ಜೀವದ ಸೆಲೆಯೇ ಆಗಿದ್ದಾಳೆ. ಸಂಕೇತಿಗಳ ಜೀವನಕ್ಕೆ ಧನ್ಯತಾಭಾವವನ್ನು ಮೂಡಿಸುತ್ತ ಬಂದಿರುವವಳು ಈ ಕಾವೇರಿಯೇ!” 

ಪೂರ್ವದ ದಡದಿಂದ ಕಾವೇರಿಯ ದರ್ಶನ, ಹಿನ್ನಲೆಯಲ್ಲಿ ರಾಮೇಶ್ವರ ದೇವಸ್ಥಾನ

ಅವಧಾನಿಗಳು ತಿಳಿಸುವಂತೆ ಸುಮಾರು 2-3ದಶಕಗಳ ಹಿಂದಿನವರೆಗೂ, ಸಂಕೇತಿಗಳ ಕುಟುಂಬಗಳಲ್ಲಿ ಹುಟ್ಟಿದ ಹೆಣ್ಣುಮಕ್ಕಳಲ್ಲಿ ಒಬ್ಬರಿಗಾದರೂ ‘ಕಾವೇರಿ’ ಎನ್ನುವ ಹೆಸರನ್ನಿಡುವುದು ವಾಡಿಕೆಯಾಗಿತ್ತು. “ಸಂಕೇತಿಗಳ ಧಮನಿಗಳಲ್ಲಿ ಹರಿಯುತ್ತಿರುವುದು ಕಾವೇರಿಯೇ!” ಎನ್ನುತ್ತಾರೆ ಅವರು. ಸಂಕೇತಿ-ಮಹಿಳೆಯ ದಿನಚರಿಯು ಪ್ರಾರಂಭವಾಗುವುದೇ ಕಾವೇರಿಸ್ನಾನ, ಪೂಜನ ಹಾಗೂ ಘಟ್ಟದಲ್ಲಿ ಮಾಡುವ ಪ್ರಕ್ಷಾಲನಾದಿಗಳೊಂದಿಗಾದರೆ, ಪುರುಷರ ದಿನವು ಮುಗಿಯುವುದೇ ಕಾವೇರಿತೀರದಲ್ಲಿ ಮಾಡುವ ಸಂಧ್ಯಾವಂದನದೊಂದಿಗೆ. ಹಬ್ಬಗಳ ಸಂದರ್ಭಗಳಲ್ಲಂತೂ ನದೀತೀರವು ಇವರ ಧಾರ್ಮಿಕ ಆಚರಣೆಗಳಿಂದ ಕಂಗೊಳಿಸುತ್ತಿರುತ್ತದೆ.

ಪಾವನಧಾರೆ

ಕಾವೇರಿಯು ಕರ್ನಾಟಕದ ನೈರುತ್ಯದಲ್ಲಿ ಜನಿಸಿ, ಆಗ್ನೇಯದತ್ತ ಹರಿಯುತ್ತ ಸುಮಾರು 800 ಕಿ.ಮೀಗಳನ್ನು ಕ್ರಮಿಸಿ ಕರ್ನಾಟಕ-ಕೇರಳ-ಪಾಂಡಿಚೆರಿ ಹಾಗೂ ತಮಿಳುನಾಡುಗಳ ಹಲವು ಪ್ರದೇಶಗಳನ್ನು ಸಮೃದ್ಧಗೊಳಿಸುತ್ತ . ಬಂಗಾಳ ಕೊಳ್ಳಿಯ ಸಾಗರವನ್ನು ಸೇರುತ್ತಾಳೆ. ಕಾವೇರಿಯು ಅಸಂಖ್ಯ ಕೃಷಿ, ನೀರಾವರಿ ಹಾಗೂ ವಿದ್ಯುಚ್ಛಕ್ತ್ಯುತ್ಪಾದನಾ ಯೋಜನೆಗಳಿಗೆ ಆಧಾರವಾಗಿದ್ದು, ಹಿಂದಿನಿಂದ ಇಂದಿನವರೆಗೂ ದಕ್ಷಿಣ ಭಾರತದ ಅನೇಕಾನೇಕ ಪ್ರಾಚೀನ ಹಾಗೂ ಆಧುನಿಕ ನಗರಗಳ (ನಾಗರೀಕತೆಗಳ) ಪಾಲಿಗೆ ಜೀವಾಧಾರವೇ ಆಗಿದ್ದಾಳೆ.

ಒಮ್ಮೆ ಓರ್ವ ಕೊಡವ ರಾಜನು ಕಾವೇರಿಯನ್ನು ತನ್ನ ರಾಜ್ಯದೊಳಗೇ ಉಳಿಸಿಕೊಳ್ಳಬೇಕೆಂದು ಯೋಚಿಸಿ, ಈ ಸರಿತೆಯು ಹಿಂದಿರುಗಿ ಹರಿಯುವಂತೆ ಮಾಡಬೇಕೆಂದು ಕಟ್ಟೆಯನ್ನು ಕಟ್ಟಿಸಿದ. ಆದರೆ ನದಿಯ ತುಂಬುಹರಿವನ್ನು ತಡೆಯಲಾಗಲಿಲ್ಲ. ಇಂದಿಗೂ ಕಾವೇರಿಯು ಕಟ್ಟೇಪುರವೆಂಬ ಈ ಸ್ಥಳದಲ್ಲಿ ಪಶ್ಚಿಮಾಭಿಮುಖವಾಗಿ ಹರಿದು ಮತ್ತೆ ಪೂರ್ವಾಭಿಮುಖವಾಗಿ ತಿರುಗಿ ಸರಗೂರಿನತ್ತ ಹರಿಯುವುದನ್ನು ಕಾಣಬಹುದಾಗಿದೆ.   

ರುದ್ರಪಟ್ಣದ ಚಂದ್ರಶೇಖರಯ್ಯ ಎಂಬ ಇಂಜಿನಿಯರ್ 1925ರಲ್ಲಿ ರಾಮನಾಥಪುರದಲ್ಲಿ ಕಾವೇರಿಯ ಮೇಲೆ ಸೇತುವೆಯನ್ನು ನಿರ್ಮಿಸಿದರು. ಕಾವೇರಿಯ ಈ ಹರಿವಿನ ಮಧ್ಯದಲ್ಲಿರುವ ಬಂಡೆಯ ಮೇಲೆ ಶುಕ್ರಾಚಾರ್ಯರು ಒಂಟಿಕಾಲಲ್ಲಿ ನಿಂತು ದೀರ್ಘಕಾಲ ತಪಸ್ಸು ಮಾಡಿದರೆಂಬ ಕಥೆಯಿದೆ. ಆತನ ಪಾದದ ಗುರುತು ಆ ಬಂಡೆಯ ಮೇಲೆ  ಶಾಶ್ವತವಾಗಿ ನೆಲೆನಿಂತಿದೆ ಎಂದು ಹಲವು ಹಳ್ಳಿಗರು ಹೇಳುತ್ತಾರೆ.

ಸಂಕೇತಿಗಳಿಗಂತೂ ಕರ್ನಾಟಕಕ್ಕೆ ವಲಸೆ ಬರುವುದಕ್ಕೂ, ಕೃಷಿಕಾರ್ಯದಲ್ಲಿ ತೊಡಗುವುದಕ್ಕೂ, ಈ ಕಾವೇರಿ, ಹೇಮಾವತೀ, ಲಕ್ಷ್ಮಣತೀರ್ಥ ಹಾಗೂ ತುಂಗೆಗಳ ಸಾನ್ನಿಧ್ಯವೇ ಕಾರಣ, ಪ್ರೇರಣ ಹಾಗೂ ಆಧಾರ. ಅಷ್ಟೇ ಅಲ್ಲ,ಇವರುಗಳ ವೇದಾಧ್ಯಯನ-ಶಾಸ್ತ್ರಾಧ್ಯಯನಗಳೂ ಹಾಗೂ ಲಲಿತಕಲೆಗಳೂ ಈ ನದಿತೀರಗಳಲ್ಲೇ ಸ್ಫೂರ್ತಿಗೊಂಡು ಅರಳಿ ನಿಂತಿವೆ.ಕಾವೇರಿಯದು ಒಂದು ಆಧ್ಯಾತ್ಮಿಕ ಯಾನ. ಪ್ರಾರಂಭದಲ್ಲಿ ಆದಿರಂಗಕ್ಷೇತ್ರದಲ್ಲಿ ರಂಗನಾಥನನ್ನು ಬಳಿಸಿ, ಮುಂದೆ ಮಧ್ಯರಂಗಕ್ಷೇತ್ರವಾದ ಶ್ರೀರಂಗಪಟ್ಟಣದಲ್ಲಿ ರಂಗನನ್ನು (ದ್ವೀಪವನ್ನು) ತನ್ನ ಎರಡು ಧಾರೆಗಳಲ್ಲಿ ಆಲಿಂಗಿಸಿ, ಮುಂದಕ್ಕೆ ಹರಿಯುತ್ತಾಳೆ, ಯಾನದ ಕೊನೆಯ ಭಾಗದಲ್ಲಿ ತಮಿಳುನಾಡಿನ ಶ್ರೀರಂಗಂನಲ್ಲಿ ರಂಗನನ್ನು ಆರಾಧಿಸಿ ಮುಂಬರೆಯುತ್ತಾಳೆ. ಹಾಗಾಗಿ ಕಾವೇರಿಗೂ ರಂಗನಾಥನಿಗೂ ಇರುವ ಈ ನಂಟಿನಿಂದಾಗಿ ಅವನಿಗೆ ‘ಕಾವೇರೀ-ರಂಗ’ನೆಂದೇ ಹೆಸರು. ಶ್ರೀಪಾದರಾಜರು ತಮ್ಮ ದೇವರನಾಮದಲ್ಲಿ “ಕಂಗಳಿವ್ಯಾತಕೋ ಕಾವೇರೀರಂಗನ ನೋಡದ..”ಎಂದೇ ಹಾಡುತ್ತಾರೆ.

ಪೌರಾಣಿಕ ಕಥೆಗಳಿಂದ ಸಮೃದ್ಧವಾಗಿರುವ ಕಾವೇರಿಯ ಯಾನ

ಲೋಕಕಲ್ಯಾಣಕ್ಕಾಗಿ ಗಂಗೆಯು ಭಗೀರಥನಿಗೆ ಒಲಿದಂತೆಯೇ, ದಿವ್ಯಕಾವೇರಿಯೂ ದಕ್ಷಿಣದಲ್ಲಿ ಅಗಸ್ತ್ಯಮುನಿಗಳಿಗೆ ಒಲಿದಳೆನ್ನಲಾಗುತ್ತದೆ. ಮನುಕುಲಕ್ಕೆ ಕಲ್ಯಾಣಕಾರಕವಾಗುವಂತಹ ವರವನ್ನು ಕೋರಿ ಕವೇರ ಮಹಾರಾಜನು, ಸಹ್ಯಾದ್ರಿಯ ಬ್ರಹ್ಮಗಿರಿಯಲ್ಲಿ ತಪಸ್ಸನ್ನಾಚರಿಸಿದ. ಪರಮಶಿವನು ಇವನ ತಪಸ್ಸಿಗೆ ಮೆಚ್ಚಿ ಕಾವೇರಿಯನ್ನು ಮಗಳಾಗಿ ಅನುಗ್ರಹಿಸಿದ.ಈಕೆ ಅಗಸ್ತ್ಯಮಹರ್ಷಿಗಳನ್ನು ವಿವಾಹವಾದಳು. ಈ ಪರಮ ಲಾವಣ್ಯವತಿಯು ಮನುಕುಲಕ್ಕೆ ಶಾಶ್ವತವಾಗಿ ಸೇವೆಗೈಯುವಂತಹ ಯಾವುದಾದರೂ ಶಕ್ತಿಯನ್ನು ತನಗೆ ನೀಡುವಂತೆ ತನ್ನ ಪತಿಯಲ್ಲಿ ಕೋರುತ್ತಿದ್ದಳು. 

ಒಮ್ಮೆ ಸರೋವರದತ್ತ ತೆರಳಿದ ಅಗಸ್ತ್ಯರು ಕಾವೇರಿಯನ್ನು ತನ್ನ ಸಹಜರೂಪದಲ್ಲಿ ಕರೆದೊಯ್ಯಲು ಸಂಕೋಚಿಸಿ, ಜಲರೂಪಕ್ಕೆ ಬದಲಾಯಿಸಿ, ಕಮಂಡಲುವಿನಲ್ಲಿ ಹೊತ್ತೊಯ್ದರು. ಕಮಂಡಲುವನ್ನು ದಡದಲ್ಲಿಟ್ಟು  ಸ್ನಾನಕ್ಕಾಗಿ ನೀರಿಗಿಳಿದರು. ಕಾವೇರಿಯ ಚಿರಕಾಲದ ಆಸೆಯನ್ನು ಈಡೇರಿಸಲು ದೇವತೆಗಳು ಮುಂದಾಗಿ ಉಪಾಯ ಮಾಡಲು ಗಣೇಶನನ್ನು ಕಳುಹಿಸಿದರು. ಗಣೇಶನು ಕಾಗೆಯ ರೂಪದಲ್ಲಿ ಬಂದು ಕಮಂಡಲುವನ್ನು ಉರುಳಿಸಿದನಂತೆ. ಅಂದು ಕಮಂಡಲುವಿನಿಂದ ಹೊಮ್ಮಿದ ಕಾವೇರಿಯು, ಮನುಕುಲದ ಹಿತಕ್ಕಾಗಿ ಅವಿರತಧಾರೆಯಾಗಿ ಹರಿಯಲಾರಂಭಿಸಿ ಮಹಾನದಿಯೇ ಆದಳು.  ಗಣೇಶನು ಅಗಸ್ತ್ಯರಿಗೆ ವಿವರಿಸಿದ- “ನಿನ್ನ ಕೃಪೆಯಿಂದ ಕಾವೇರಿಯು ನದಿಯ ಅವತಾರವನ್ನು ತಾಳಿದ್ದಾಳೆ. ಈ ಪುಣ್ಯನದಿಯು ಆಚಂದ್ರಾರ್ಕವಾಗಿ ಮನುಕುಲಕ್ಕೆ ಆಹಾರವನ್ನೂ ಸಮೃದ್ಧಿಯನ್ನೂ ಕರುಣಿಸಲಿ. ಜನರನ್ನು ಪಾವನಗೊಳಿಸಿ ಜ್ಞಾನವನ್ನು ಚಿಮ್ಮಿಸಲಿ” ಎಂದು. 

ಕರ್ನಾಟಕದ ಪಶ್ಚಿಮಘಟ್ಟಗಳಲ್ಲಿನ ಕೊಡಗಿನ ತಲಕಾವೇರಿಯಲ್ಲಿ (ಮಡಿಕೇರಿಯಿಂದ 48 ಕಿ.ಮೀ) ಕಾವೇರಿ ಹುಟ್ಟುತ್ತಾಳೆ. ಈಕೆ ಕರ್ನಾಟಕದಲ್ಲಿ ದಕ್ಷಿಣಾಭಿಮುಖವಾಗಿಯೂ ತಮಿಳುನಾಡಿನಲ್ಲಿ ಪೂರ್ವಾಭಿಮುಖವಾಗಿಯೂ ಹರಿಯುತ್ತ, ದಕ್ಷಿಣ ಪ್ರಸ್ಥಭೂಮಿಯ ಆಗ್ನೇಯದಲ್ಲಿನ ತಗ್ಗುಪ್ರದೇಶಗಳಲ್ಲಿ ಬಳುಕುತ್ತ ಹರಿದು ಪೂರ್ವದ ಸಾಗರವನ್ನು ಸೇರುತ್ತಾಳೆ. 

ಕಾವೇರಿನದಿಯು ತಲಕಾವೇರಿಯಲ್ಲಿ ಹೊಮ್ಮಿ, ಭಾಗಮಂಡಲದಲ್ಲಿ ರಭಸದಿಂದ ಸಂಗಮಿಸಿ, ಕುಶಾಲನಗರದ ಹಾರಂಗಿ ಜಲಾಶಯವನ್ನು ಪ್ರವೇಶಿಸುತ್ತಾಳೆ. ಕರ್ನಾಟಕದ ಕಣಗಾಲು, ಕಟ್ಟೇಪುರ, ಸರಗೂರು, ಕೊಣನೂರು, ರಾಮನಾಥಪುರ, ಬಸವಾಪಟ್ಣ, ರುದ್ರಪಟ್ಣ, ಕೇರಳಾಪುರ, ದೊಡ್ಡ ಹನಸೊಗೆ ಹಾಗೂ ಚುಂಚನಕಟ್ಟೆಗಳಲ್ಲಿ ಶಾಂತಧಾರೆಯಾಗಿ ಪ್ರವಹಿಸುತ್ತಾಳೆ. ಎಡತೊರೆಯ ಬಳಿಯಲ್ಲಿ ಹೇಮಾವತಿ ನದಿಯನ್ನು ಕೂಡಿಕೊಂಡು ಲಕ್ಷ್ಮಣತೀರ್ಥವನ್ನು ತಲುಪಿ, ಕನ್ನಂಬಾಡಿ ಕಟ್ಟೆಯತ್ತ ಹರಿಯುತ್ತಾಳೆ. ಕೃಷ್ಣರಾಜಸಾಗರ ಸೇತುವೆಯಲ್ಲಿ ಒಯ್ಯಾರವಾಗಿ ಮುಂದುವರಿಯುತ್ತಾಳೆ. 

ಅಲ್ಲಿಂದ ರಂಗನತಿಟ್ಟು ಪಕ್ಷಿಧಾಮದತ್ತ ಹರಿದು, ಶ್ರೀರಂಗಪಟ್ಟಣದ ರಂಗನಾಥನನ್ನು ತಲುಪುತ್ತಾಳೆ. 17ನೆಯ ಶತಮಾನದಲ್ಲಿ ಮೈಸೂರಿನ ದೊರೆ ರಣಧೀರ ಕಂಠೀರವರು ತಮ್ಮ ಮಡದಿಯ ನೆನಪಿನಲ್ಲಿ, ಶ್ರೀರಂಗಪಟ್ಟಣದ ಬಳಿಯಲ್ಲಿನ ಬಂಗಾರ ದೊಡ್ಡಿನಾಲೆಯನ್ನು ನಿರ್ಮಿಸಿದರು. ‘ಮೇಲ್ದಂಡೆಯಲ್ಲಿ ಸೇತುವೆ ಕಟ್ಟಲಾಗಿದ್ದು, ಕೆಳದಂಡೆಯಿಂದ ನದಿಯ ನೀರನ್ನು ಇಂದಿಗೂ ಹೊತ್ತೊಯ್ಯುತ್ತಿರುವ ಏಕೈಕ ನಾಲೆ ’ಇದು. ಈ ಜೀವನದಿಯು ಕೃಷಿಕಾರ್ಯಕ್ಕೆ ಅಪಾರ ಪೋಷಣೆಯಿತ್ತಿದೆಯಲ್ಲದೆ ಮೈಸೂರು, ಮಂಡ್ಯ ಹಾಗೂ ಬೆಂಗಳೂರು ಜಿಲ್ಲೆಗಳ ಜನರಿಗೆ ಕುಡಿಯುವ ನೀರನ್ನಿತ್ತಿದೆ.

ಶ್ರೀರಂಗಪಟ್ಟಣದಲ್ಲಿ ಪಶ್ಚಿಮವಾಹಿನಿಯಾಗಿ ಹರಿದು ಕಾವೇರಿಯು ಶಿಂಶಾನದಿಯೊಂದಿಗೆ ಬೆರೆಯುತ್ತಾಳೆ. ಅಲ್ಲಿಂದ ಮೈದುಂಬಿ ಹರಿಯುತ್ತ 320 ಅಡಿಯಿಂದ (98 ಮೀ) ಧುಮುಕಿ ‘ಗಗನಚುಕ್ಕಿ ಜಲಪಾತ’ವನ್ನು ನಿರ್ಮಿಸುತ್ತಾಳೆ. ಇಲ್ಲಿ ಏಷ್ಯಾಖಂಡದ ಮೊಟ್ಟಮೊದಲ ವಿದ್ಯುಚ್ಛಕ್ತಿ ನಿಗಮವನ್ನು ಸ್ಥಾಪಿಸಲಾಗಿದೆ.  ಅಲ್ಲಿಂದ ಮುಂದೆ T.ನರಸೀಪುರದಲ್ಲಿ ಕಪಿಲಾನದಿಯೊಂದಿಗೆ ತ್ರಿವೇಣೀಸಂಗಮದಲ್ಲಿ ಬೆರೆಯುತ್ತಾಳೆ. ಮುಂದೆ ಮೇಕೆದಾಟುವಿನಲ್ಲಿ ಅರ್ಕಾವತೀನದಿಯನ್ನೂ  ಕೂಡಿಕೊಂಡು ಹೊಗೆಯಕಲ್ (ಹೊಗೇನಕಲ್)ನಲ್ಲಿ ಅಮೋಘವಾದ ಜಲಪಾತವಾಗಿ ಧುಮುಕುತ್ತಾಳೆ. ಅಲ್ಲಿಂದಾಚೆ ಮುಂದೆ ಕರ್ನಾಟಕದ ಸೀಮೆಗಳನ್ನು ದಾಟುತ್ತ ತಮಿಳುನಾಡಲ್ಲಿ ಹರಿಯುತ್ತ ಭವಾನಿನದಿಯನ್ನು ಕೂಡಿಕೊಳ್ಳುತ್ತಾಳೆ. ಮೆಟ್ಟೂರು ಸೇತುವೆಯನ್ನು ದಾಟಿ ಕುಲುಕುತ್ತ ಬಳುಕುತ್ತ ಶ್ರೀರಂಗವನ್ನು ತಲುಪಿ, ಅಲ್ಲಿಂದತಿರುಚ್ಚೀಹಾಗೂತಿರುವಯ್ಯಾರುಗಳನ್ನುಕ್ರಮಿಸಿ, ಪೂಂಪುಹಾರದಲ್ಲಿಪೂರ್ವದ ಸಾಗರದಲ್ಲಿತನ್ಮಯಳಾಗುತ್ತಾಳೆ. 

ಕಾವೇರಿಯ ಕಥೆಯನ್ನು ಸಾರುವ ತಲಕಾವೇರಿಯಲ್ಲಿ ದೇವಿ ಕಾವೇರಿ, ಅಗಸ್ತ್ಯೇಶ್ವರ ಹಾಗೂ ಗಣಪತಿಯ ದೇಗುಲಗಳಿವೆ. ರಾಮನಾಥಪುರದಲ್ಲೂ ರಾಮೇಶ್ವರ, ಸುಬ್ರಹ್ಮಣ್ಯ, ಅಗಸ್ತ್ಯೇಶ್ವರ ಹಾಗೂ ಕಾವೇರೀದೇವಿಯರ ಪುರಾಣಪ್ರಸಿದ್ಧ ದೇಗುಲಗಳಿವೆ. ಕಾವೇರೀತೀರದಲ್ಲಿ ಸಂಗೀತಕ್ಕೆ ವಿಶೇಷವಾಗಿ ಹೆಸರುವಾಸಿಯಾದ ಎರಡು ಊರುಗಳೆಂದರೆ ಕರ್ನಾಟಕದ ರುದ್ರಪಟ್ಣ ಹಾಗೂ ತಮಿಳುನಾಡಿನ ತಂಜಾವೂರು.

। ಇನ್ನು ಮುಂದಿನ ವಾರಕ್ಕೆ ।

‍ಲೇಖಕರು Admin

April 8, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: