ಸುಯೋಧನ ಪ್ರಕಾಶನದ ಆಹ್ವಾನ

ಸುಧಾ ಚಿದಾನಂದ ಗೌಡ ಅವರ ಹೊಸ ಪುಸ್ತಕ ಬಿಡುಗಡೆ ಆಗುತ್ತಿದೆ

ಪುಸ್ತಕದ ಮುಖಪುಟ, ಆಹ್ವಾನ ಪತ್ರಿಕೆ ಮತ್ತು ಪುರುಷೋತ್ತಮ ಬಿಳಿಮಲೆಯವರ ಮುನ್ನುಡಿ ನಿಮಗಾಗಿ

ಹೊಸಪೇಟೆಯಿಂದ ಹೋಮರನವರೆಗೆ

ಪುರುಷೋತ್ತಮ ಬಿಳಿಮಲೆ

ಕುಂತಲ ದೇಶ, ಸಿಂಧವಾಡಿ, ನೊಳಂಬವಾಡಿ ಮೊದಲಾದ ಹೆಸರುಗಳಿಂದ ಚರಿತ್ರೆಯಲ್ಲಿ ಪ್ರಸಿದ್ಧವಾಗಿರುವ ಇಂದಿನ ಬಳ್ಳಾರಿ ಪ್ರದೇಶವು ಅದರ ಭೌಗೋಳಿಕ ಕಾರಣಗಳಿಂದ ಪ್ರಾಚೀನ ವಲಸೆಗಾರರ ಮತ್ತು ಅವರ ತಂಗುದಾಣಗಳ ಕೇಂದ್ರವಾಗಿತ್ತು. ಹಂಪಿ, ಸಂಗನ ಕಲ್ಲು, ಬೂದಿಹಾಳ, ಕುಡಿತಿನಿ ತೆಕ್ಕಲ ಕೋಟೆ, ಹಿರೇಗುಡ್ಡ, ಕೊಪ್ಪಳ, ಮಸ್ಕಿ , ಮೈಲಾರ, ಮೊದಲಾದ ಪ್ರದೇಶಗಳ ಇತಿಹಾಸ ತುಂಬ ಹಿಂದಕ್ಕೆ ಸರಿಯುತ್ತದೆ. ಮೌರ್ಯರು, ಶಾತವಾಹನರು, ಪಲ್ಲವರು, ಕದಂಬರೇ ಮೊದಲಾದ ಪ್ರಸಿದ್ಧ ಅರಸು ಮನೆತನಗಳು ಬಳ್ಳಾರಿಯನ್ನು ತಮ್ಮ ಆಳ್ವಿಕೆಗೆ ಒಳಪಡಿಸಿಕೊಂಡಿದ್ದರು. ಬಳ್ಳಾರಿಗೆ ಅದರ ಇತಿಹಾಸವೇ ಭಾರವಾಯಿತೋ ಏನೋ ಎಂದು ನಾವೆಲ್ಲ ಶಂಕಿಸುವಷ್ಟರ ಮಟ್ಟಿಗೆ ಅದರ ಚರಿತ್ರೆ ಸುದೀರ್ಘವಾದುದು. ಇಂಥ ಊರೊಂದಕ್ಕೆ ಆಧುನಿಕತೆ ಪ್ರವೇಶಿಸಲು ಆರಂಭಿಸಿದ್ದು 19ನೇ ಶತಮಾನದಲ್ಲಿ. 1799ರಲ್ಲಿ ಟಿಪ್ಪು ಸುಲ್ತಾನ ಮರಣ ಹೊಂದಿದ ಆನಂತರ ಬಳ್ಳಾರಿಯು ಆಗಣ ಮದರಾಸು ಪ್ರಾಂತ್ಯಕ್ಕೆ ಸೇರಿಕೊಂಡಿತು. ಅಂದಿನಿಂದ ಬಳ್ಳಾರಿಯ ದಿಕ್ಕು ಬದಲಾಯಿತು. ಈ ಬದಲಾದ ದಿಕ್ಕಿನಲ್ಲಿ ತುಂಗಭದ್ರಾ ನದಿಗೆ ಕಟ್ಟಿದ ಭವ್ಯ ಅಣೆಕಟ್ಟು, ಗಣಿಗಾರಿಕೆ, ಶಾಲಾ ಕಾಲೇಜುಗಳೆಲ್ಲ ಸೇರಿಕೊಳ್ಳುತ್ತವೆ.
ಶ್ರೀಮತಿ ಸುಧಾ ಚಿದಾನಂದಗೌಡರು ಪ್ರಸ್ತುತ ಪುಸ್ತಕದಲ್ಲಿ ಬಳ್ಳಾರಿಯ ಜನಜೀವನದ ಎರಡು ಮುಖಗಳಾದ ಪ್ರಾಚೀನತೆ ಮತ್ತು ಆಧುಕತೆಗಳನ್ನು ಮನಮೋಹಕವಾದ ಕಾವ್ಯಾತ್ಮಕ ಭಾಷೆಯಲ್ಲಿ ಸೆರೆಹಿಡಿದಿದ್ದಾರೆ. ಇಲ್ಲಿನ ಜನರ ಸಂತೋಷ ಮತ್ತು ತಲ್ಲಣಗಳು ಅವರ ಬರೆಹಗಳಲ್ಲಿ ಅಪೂರ್ವವಾಗಿ ದಾಖಲಾಗಿದೆ. ಜನಸಾಮಾನ್ಯರ ಅನುಭವಗಳನ್ನು ಅವರದ್ದೇ ಭಾಷೆಯಲ್ಲಿ ಮಂಡಿಸುತ್ತಾ, ಓದುಗರನ್ನು ಅದರಾಚೆ ಕೊಂಡೊಯ್ಯುವ ಅವರ ಬರೆವಣಿಗೆಯ ಕ್ರಮವೂ ವಿಶಿಷ್ಟವಾದುದು. ಹೊಸಪೇಟೆಯಿಂದ ಹೋಮರನವರೆಗೆ, ತುಂಗಭದ್ರಾ ನದಿಯಿಂದ ಟೈಗ್ರಿಸ್ ನದಿವರೆಗೆ ಅವರು ಆರಾಮವಾಗಿ ಓಡಾಡಬಲ್ಲರು, ನಮ್ಮನ್ನೂ ಓಡಾಡಿಸಬಲ್ಲರು. ಇದೇ ಈ ಪುಸ್ತಕದ ವಿಶೇಷತೆ.
ಮೇಲಿನ ನನ್ನ ಮಾತುಗಳಿಗೆ ಅತ್ಯುತ್ತಮ ಉದಾಹರಣೆಯೆಂದರೆ ಪುಸ್ತಕದ ಮೊದಲ ಲೇಖನ ಹಿನ್ನೀರು ಎಂಬ ಜೀವತಾಣ. ತುಂಗಭದ್ರಾ ನದಿಗೆ ಕಟ್ಟಿದ ಬೃಹತ್ ಅಣೆಕಟ್ಟಿನ ತಾಂತ್ರಿಕ ವಿವರಗಳೆಲ್ಲ ನಮಗೆ ಚೆನ್ನಾಗಿ ಗೊತ್ತಿದೆ. ಅಭಿವೃದ್ಧಿಯ ಪರಿಭಾಷೆಗಳಲ್ಲಿ ಅವನ್ನೆಲ್ಲ ಈಗಾಗಲೇ ವಿವರಿಸಲಾಗಿದೆ. ಆದರೆ ಆ ಅಣೆಕಟ್ಟಿನ ಹಿನ್ನೀರಿನ ಬಳಿ ವಾಸಿಸುತ್ತಿರುವ ಜನರ ಬದುಕಿನ ಕ್ರಮಗಳನ್ನು ಯಾವ ಪರಿಭಾಷೆಗಳೂ ಸಮರ್ಥವಾಗಿ ಇದುವರೆಗೆ ವಿವರಿಸಿಲ್ಲ. ಒಂದು ವೇಳೆ ಯಾರಾದರೂ ವಿವರಿಸಬಲ್ಲರಾದರೆ, ಅಲ್ಲಿ ಬೇಂದ್ರೆ, ಕುವೆಂಪು ಅಂಥವರಿಗೆ ಏನು ಸ್ಥಾನ? ಇವೆಲ್ಲ ಅರ್ಥವಾಗಬೇಕಾದರೆ ಈ ಲೇಖನವನ್ನು ಧ್ಯಾನಿಸಿ ಓದಬೇಕು. ಹೊಸಪೇಟೆ ಸಮೀಪದ ಬಾಚಿಗೊಂಡನ ಹಳ್ಳಿಯ ಜನರ ಮಾತಿಗೆ ಸುಧಾ ಚಿದಾನಂದರು ಕಿವಿಗೊಟ್ಟದ್ದನ್ನು ಓದಿ ತಿಳಿಯಬೇಕು. ಅಲ್ಲಿನ ರೈತ ಮಂದಿ ಮುಳುಗಡೆಯ ಬಗೆಗೆ ಹೇಳುವುದು ಹೀಗೆ-
ಹೌದ್ರೀ ಏನ್ಮಾಡಾದು? ನಂ ಕೈಯಾಗೇನೈತಿ? ಡ್ಯಾಂ ಸಲುವಾಗಿ ಭೂಮಿ ಎಷ್ಟೋ ಹೋಗೇ ಬಿಟೈತಿ. ಈಗ ಅರ್ಧ ವರ್ಷ ಅರ್ಧ ಹೊಲ ಹಿನ್ನೀರಿನೊಳಗ ಮುಳುಗಿಬಿಡ್ತೆ ತಿ. ಇನ್ನೊಂದ್ ಬೆಳಿನಾರ ಸಿಗ್ತೆ ತಲ್ಲ ಅನ್ನಾದ ನೆಮ್ಮದಿ….
ಹೀಗೆ ಮಂದಿ ಅರ್ಧ ಆಶಾವಾದಿಯಾದರೆ, ಸಿದ್ಧಪ್ಪ ಪೂರ್ತಿ ಆಶಾವಾದಿ –
ನೀರು ನಿಂತು ಹಿಂದೆ ಸರಿತೈತಲ್ರೀ… ಅದು ಚೊಲೋ ಫಲವತ್ತು ಮಣ್ಣುಇರ್ತೆ ತ್ರೀ … ಒಳ್ಳೆ ಹಾಲಿನ ಕೆನೆ
ಇದ್ದಂಗಿರ್ತೆ ತ್ರೀ . ಒಂದು ಕಲಿರ್ಲಲ.್ಲ .. ಒಂದು ಹರಳಿರಲ್ಲ. ನೆಲ್ಲು ಹಗಿ ಹಚ್ಚಿ ಬಿಟ್ವಿ ಅಂದ್ರ ಬರೋಬ್ಬರಿ ಪೀಕು…’

ಇವೆರಡೂ ಗಂಡಸರ ಪ್ರತಿಕ್ರಿಯೆಗಳಾದರೆ, ಸೊಪ್ಪು ಬೆಳೆಯುವುದರಲ್ಲಿ ನಿಷ್ಣಾತಳಾದ ಅಮೀನಮ್ಮ ಒಂದೇ ಎಕರೆಯಲ್ಲಿ ಒಂದಿಡೀ ವರ್ಷ ಅರಾಮಾಗಿ ಮನೆ ಖಚರ್ು ತೂಗಿಸುತ್ತಾಳೆ. ಹಿನ್ನೀರಿನ ಬಗ್ಗೆ ಅವಳಲ್ಲಿ ತಕರಾರೇ ಇಲ್ಲ! ಇದು ದುಡಿಯುವ ವರ್ಗದ ಕಷ್ಟ ಸುಖಗಳಾದರೆ, ಆಧುನಿಕ ವಿದ್ಯಾಭ್ಯಾಸಕ್ಕೆ ತೆರೆದುಕೊಂಡು ಉದ್ಯೋಗ ಹಿಡಿದ ಮಧ್ಯಮ ವರ್ಗದ ಜನರಿಗೆ ಹಿನ್ನೀರು ಒಂದು ಕಾವ್ಯ-
ಅಲೆಗಳು ಮೆಲ್ಲಗೆ ನಾವು ಕುಳಿತಿರುವ ಅರಳಿ ಮರದ ಕಟ್ಟೆಗೆ ತಾಕಿ, ಹಿಂದೆ
ಸರಿಯುತ್ತಿವೆ. ಹಿಂದೆ ತಿರುಗಿ ನೋಡಿದರೆ ಬಾಚಿಗೊಂಡನಹಳ್ಳಿಯ ಮನೆಗಳು,
ಬಟ್ಟೆ ಒಗೆಯುತ್ತಿರುವ ಬಾಲೆಯರು…
ಪತ್ರಿಕೆಯನ್ನೋ… ಷೇಕ್ಸ್ಪಿಯರ್ ಸಾನೆಟ್ನ್ನೋ, ಎಲಿಯಟ್ನ ಕವನವನ್ನೋ,
ಕಾರಂತರ ಕಾದಂಬರಿಯನ್ನೋ, ಮಾಕ್ಸರ್್ನ ಸಮತಾವಾದದ ಥಿಯರಿಯನ್ನೋ
ಹಿಡಿದು ಓದುತ್ತಾ ಹಿನ್ನೀರಿನ ಚಲನಶೀಲ ಮಂದ್ರ ಸ್ಥಾಯಿಯ ಸ್ವರವನ್ನು ಕೇಳಿಸಿಕೊಳ್ಳುತ್ತ
ಮರಕ್ಕೆ ಒರಗಿ ಕುಳಿತರೆ… ಸ್ವರ್ಗವೆಂಬುದು ಎಲ್ಲೋ ಕಾಣದೇ ಇರುವ ಲೋಕದಲ್ಲಿದೆ
ಎಂದು ನಂಬುವುದಾದರೂ ಹೇಗೆ?ಏಕೆ?
ನಾನು ಈಗಾಗಲೇ ಹೇಳಿರುವಂತೆ, ಸುಧಾ ಅವರ ಬರೆಹಗಳ ವಿಶೇಷತೆ ಎಂದರೆ, ಅವರು ತಮ್ಮ ಬರೆಹಗಳಿಗೆ ನೀಡುವ ವಿಸ್ತಾರವಾದ ಆಯಾಮ. ಹೊಸಪೇಟೆಯ ಅಣೆಕಟ್ಟಿಗೆ ಪೂರಕವಾಗಿ ಅವರು ಮೆಸಪಟೋಮಿಯ ನಾಗರಿಕತೆಯ ಜನರು ಕಟ್ಟಿದ ಮೊಟ್ಟ ಮೊದಲ ಆಣೆಕಟ್ಟುಗಳನ್ನು ನೆನಪಿಸುತ್ತಾರೆ, ಯೂಪ್ರೆಟಿಸ್ ಮತ್ತು ಟೈಗ್ರಿಸ್ ನದಿಗಳ ನೆರೆಹಾವಳಿಯಿಂದಾಗಿ ಬೇಸತ್ತಿದ್ದ ಜನರು ಅದನ್ನು ತಡೆಯುವುದಕ್ಕಾಗಿ ಎರಡು ಗುಡ್ಡಗಳ ನಡುವಿನ ಪ್ರದೇಶವನ್ನು ಆರಿಸಿಕೊಂಡು ಅರ್ಧ ಚಂದಾಕ್ರಾರವಾದ ಬೃಹತ್ ತಡೆಗೋಡೆ ನಿಮರ್ಿಸಿದ್ದನ್ನು ಉಲ್ಲೇಖಿಸುತ್ತಾರೆ, ಮತ್ತು ಇಂಥ ಅನೇಕ ಉಲ್ಲೇಖಗಳ ಮೂಲಕ ಅವರು ಓದುಗರು ಅರಿವಿನ ವಲಯಗಳನ್ನು ಗಮನಾರ್ಹವಾಗಿ ವಿಸ್ತರಿಸುತ್ತಾರೆ. ಈ ನಿಟ್ಟಿನಲ್ಲಿ ಅವರು ಮುಳುಗಡೆ ಕಾದಂಬರಿ ಬರೆದ ಶ್ರೀ ನಾ ಡಿ’ಸೋಜಾ ಅವರಿಗಿಂತ ಭಿನ್ನರಾಗುತ್ತಾರೆ.
ಸುಧಾ ಚಿದಾನಂದಗೌಡ ಅವರು ತಮ್ಮ ಲೇಖನಗಳಲ್ಲಿ ನಿದರ್ಿಷ್ಟ ಊರೊಂದರಲ್ಲಿ ಅದಮ್ಯವಾದ ಬದುಕು ಅರಳುವ ಕ್ರಮವನ್ನು ಕಟ್ಟಿಕೊಡುವ ರೀತಿಯೂ ವಿಶೇಷವಾದುದು. ನನಗೆ ತುಂಬಾ ಇಷ್ಟವಾಗಿರುವ ಕೋಳಿಕುಟುಂಬದಲ್ಲಿ ಕಲರ್ ಕೋಳಿಯೊಂದು ಎಲ್ಲ ಚಟುವಟಿಕೆಗಳ ಕೇಂದ್ರವಾಗುತ್ತದೆ. ಅದರಲ್ಲೂ ಮಕ್ಕಳನ್ನು ಒಂದೆಡೆ ಸೇರಿಸುವ ಶಕ್ತಿ ಇರುವುದು ಅದಕ್ಕೆ ಮಾತ್ರ. ಲೇಖಕಿ ಅದನ್ನು ನವಿರಾಗಿ ಕಟ್ಟಿಕೊಡುವುದು ಹೀಗೆ-
ಅಷ್ಟರಲ್ಲಿ ಆ ಕೋಳಿಗೆೆ ಹುಡುಗರ ಗಲಾಟೆ ಗೊತ್ತಾಯಿತೋ ಅಥವಾ ಕಾಂಪೌಂಡಿನ
ತೇವದ ನೆಲದಲ್ಲಿ ಹೇರಳವಾಗಿರುವ ಎರೆ ಹುಳುಗಳಿಂದ ಹೊಟ್ಟೆ ತುಂಬಿತೋ
ಅಥವಾ ಮತ್ತೇನೋ ಕಾರಣಕ್ಕೋ ನೆಲದಿಂದ ಕಾಂಪೌಂಡ್ ಗೋಡೆಯ ಮೇಲಕ್ಕೆ
ಹಾರಿ ಆ ಸಪೂರ ಗೋಡೆಯ ಮೇಲೆ ವೈಯಾರದಿಂದ ನಡೆಯುತ್ತಾ, ಕತ್ತು
ಅಕಾಶಕ್ಕೆ ಚಾಚಿ ಕೊಕ್ಕ್ …ಕೋಕ್ ಎಂದು ಸುತ್ತ ಹತ್ತಾರು ಮಾರು ದೂರಕ್ಕೆ
ಕೇಳುವಂತೆ ಸಂಗೀತ ಕಛೇರಿಯನ್ನು ಧ್ವನಿವರ್ಧಕರಹಿತವಾಗಿ ಕೆಳದನಿಯಲ್ಲಿಯೇ
ಒದರಿಬಿಟ್ಟಿತು. ಅದು ಹುಂಜದ ಲಯಬದ್ಧವಾದ, ರಾಜಗಾಂಭೀರ್ಯದ, ಉಚ್ಛ
ಕಂಠದ ಕೊಕ್ಕೋ…ಕ್ಕೊ… ಎಂಬ ಉದಯರಾಗವಲ್ಲ. ಬದಲಿಗೆ ಗಂಟಲಲ್ಲೇ
ಹಿಡಿದಿಟ್ಟು ಮೆಲ್ಲಗೆ ಹೊರಬಿಟ್ಟಂತಹ ಕೆಳಸ್ತರದ(ಲೋ ಪಿಚ್) ಘನತೆ, ಸಂಕೋಚ,
ಬೆರೆತಂತ ಕ್ವಾಕ್…ಕ್ವಾಕ್… ಹೋಲುವ ಆ ದನಿಗೆ ನಾನೆಂಬ ನಾನು ಅರೆಕ್ಷಣ
ಮೈಮರೆತು ನಿಂತು ನೋಡುವಾಗ ಮಕ್ಕಳೇಕೆ ಬೇಡ?! ಆ ಕೋಳಿಗಾಯನದ
ಇಂಪು, ಕತ್ತು ಚಾಚಿದ ಸೌಂದರ್ಯಕ್ಕೆ ಮರುಳಾದ ಹುಡುಗರ ಗುಂಪು ಔಣಣ ಠಜಿ
ಛಿಠಟಿಣಡಿಠಟಆಗಿ ಹೋ ಎಂದು ಹುಯಿಲಿಟ್ಟುಬಿಟ್ಟಿತು!
ಹಳ್ಳಿಯೊಂದರ ಜೀವಕೇಂದ್ರವಾಗಿ ಕೋಳಿ ಬೆಳೆಯುವ ರೀತಿ ಮನುಕುಲಕ್ಕೂ ಒಂದು ಆದರ್ಶ. ಹೇಟೆ ಕೋಳಿಯೊಂದು ತಾಯ್ತನದ ಕರ್ತವ್ಯ ಪ್ರಜ್ಞೆ ಹಾಗೂ ಉತ್ಕಟತೆಯಿಂದ ಸಂತತಿಯನ್ನು ಬೆಳೆಸುವುದನ್ನೂ ಲೇಖಕಿ ಒಂದು ಮಾದರಿಯಾಗಿ ಮಂಡಿಸುತ್ತಾರೆ. ಜೊತೆಗೆ ಕೋಳಿ ಸಾಕಣೆ ಮತ್ತು ಅದರ ಮಾಂಸಕ್ಕಿರುವ ಜಾಗತಿಕ ಆಯಾಮವನ್ನು ತಮ್ಮ ಎಂದಿನ ಶೈಲಿಯಲ್ಲಿ ನಮ್ಮ ಗಮನಕ್ಕೆ ತರುತ್ತಾರೆ.
ಬದುಕಿನ ಬಗೆಗಣ ಉತ್ಕಟವಾದ ಪ್ರೀತಿಯನ್ನು ಕೋಳಿ ಕತೆಯು ಮಂಡಿಸಿದರೆ, ಅಂಥದ್ದೇ ಉತ್ಕಟ ಪ್ರೀತಿಯ ಇನ್ನೊಂದು ಮುಖವನ್ನು ಕೋತಿಕಥನ ಅದ್ಭುತವಾದ ರೀತಿಯಲ್ಲಿ ಮುನ್ನೆಲೆಗೆ ತರುತ್ತದೆ. ಕೋತಿಯೊಂದು ತನ್ನ ಮಗುವನ್ನು ಕಳೆದುಕೊಂಡಾಗ ಮತಿಭ್ರಮಣೆಗೊಂಡು ಸೇಡು ತೀರಿಸಿಕೊಳ್ಳಲು ಹೋರಾಡುವ ಮಾರ್ಮಿಕ ಕತೆ ಇಲ್ಲಿದೆ. ಜನರಿಗೆ ಕೋತಿಯ ಮತಿಭ್ರಮಣೆ ಗೊತ್ತೇ ವಿನಾ ಅದರ ಕಾರಣಗಳು ಗೊತ್ತಿಲ್ಲ. ಕೊನೆಯಲ್ಲಿ ಲೇಖಕಿ ಬರೆಯುತ್ತಾರೆ-
ಒಂದು ಮಗುವಿನ ಮೇಲೆ ಟ್ರಾಕ್ಟರ್ ಹೋಗಿದ್ದರೆ ಅಥವಾ ಒಬ್ಬ ಹೆಂಗಸಿನಕಾಲೋ, ಕೈಯೋ ವಾಹನಕ್ಕೆ ಸಿಕ್ಕಿಕೊಂಡಿದ್ದರೆ…? ಅದೊಂದು ಣಜ ಆಗುತ್ತಿತ್ತು. ಪರಿಹಾರ ಧನ, ಕೋಟರ್ು, ಕೇಸು ಇತ್ಯಾದಿ ಏನೇನೋ ನಡೆಯುತ್ತಿತ್ತು .ಹೀಗೆ ಹೇಳುವಾಗ ದುರಂತ ಕೆನೆಗಟ್ಟುತ್ತದೆ. ಕನ್ನಡದ ಮಟ್ಟಿಗೆ ತುಂಬ ಹೊಸದು ಎನ್ನುವ ಬರೆವಣಿಗೆ ಇದು.
ಪ್ರಿಯಸಖೀ ಪಾತರಗಿತ್ತೀ.. ಕವಿತೆಯಂಥಾ ಪ್ರಬಂಧ. ಬೇಂದ್ರೆಯವರ ಕವನವನ್ನು ನೆನಪಿಸುವ ಈ ಲೇಖನವು ತುಂಬಾ ಸೂಕ್ಷ್ಮವಾಗಿ ಪಾತರಗಿತ್ತಿಯನ್ನು ಮಾನವನ ಭಾವನಾ ಪ್ರಪಂಚಕ್ಕೆ ಸೇರಿಸುತ್ತದೆ. ಈ ಮುಂದಿನ ಸಾಲುಗಳನ್ನು ಗಮನಿಸಿ-
‘ ನಾನು ನಿಲ್ಲುತ್ತೇನೆಂಬುದಕ್ಕಾಗಿಯೇ ಬಂದವೇನೋ ಎಂಬಂತೆ ಆ ಚಿಟ್ಟೆಗಳು ಹಾರುತ್ತಾ..
ಒಂದೊಂದಾಗಿ, ಒಂದೊಂದಾಗಿ ಬಂದು ಬಾವಿಯ ತುಂಬಹರಡಿಕೊಂಡು,
ಒಂದೊಂದು ಪತಂಗ ಒಂದೊಂದು ಹೂವಿನ ಮೇಲೆ ಕುಳಿತು…
ಅವು ಮಕರಂದ ಹೀರುತ್ತವೆಂಬುದು ಸಹಾ ಗೊತ್ತಿಲ್ಲದ ಬಾಲಕಿ ನಾನಾಗ.
ಅವೂ ನನ್ನಂತೆಯೇ ಹೂವಿಗೆ ಮರುಳಾಗಿ ಅವುಗಳನ್ನು ಮುಟ್ಟಿ,
ಮಾತಾಡಿಸಲು, ಬಣ್ಣವನ್ನು ಬೆರಳುಗಳಿಗೆ ಮೆತ್ತಿಕೊಳ್ಳಲು ಬರುತ್ತವೆಂದೇ ತಿಳ್ಕೊಂಡಿದ್ದೆ….
ಅದೊಂದು ಸ್ವರ್ಗಕ್ಕು ಮಿಗಿಲಾದ,
ಚಲನೆಯೇ ಜೀವಾಳವಾದ,
ಸೌಂದರ್ಯವೇ ಉಸಿರಾದ
ಅದ್ಭುತ-ರಮ್ಯ ಬಾವಿಯಾಗಿ ಹೃದಯತುಂಬಿಕೊಳ್ಳುತ್ತಾ….
ಅದರ ನಡೂಮಧ್ಯೆ ನಾನು ಕೌತುಕದ ಕಾಯವಾಗಿ..
ಅವುಗಳನ್ನೆ ಬಿಟ್ಟಕಣ್ಣಿಂದ ನೋಡುತ್ತಾ, ಮರುಳಾಗುತ್ತಾ…..
ಅವರೆ ನನ್ನ ಪ್ರಾಣಸಖಿಯರು ಎಂದೂಹಿಸಿಕೊಂಡು ಧನ್ಯತೆ ಅನುಭವಿಸುತ್ತಾ…..
ಆದಷ್ಟೂ ಹೊತ್ತು ಹೀಗೇ ಕಳೆದುಹೋಗುತ್ತಿತ್ತೋ ಗೊತ್ತಿಲ್ಲ……’
ಈ ಪಾತರಗಿತ್ತಿಗಳು ನಕ್ಷತ್ರಗಳಾಗ್ತವೆ… ಎಂಬ ನಂಬಿಕೆಯಲ್ಲಿ ಲೇಖನ ಕೊನೆಯಾದಾಗ ಅದು ಅತ್ಯಂತ ಹೃದ್ಯವಾಗುತ್ತದೆ.
ಮೇಲಿನ ಲೇಖನಗಳಿಗಿಂತ ಸ್ವಲ್ಪ ಭಿನ್ನವಾದ ಲೇಖನವು ಅವಮಾನಗಳ ಕುರಿತಾದ್ದು ‘ಅವಮಾನವನ್ನು ಎದುರಿಸದ ಮನುಷ್ಯ ಬೆಳೆಯಲಾರ’ ಎಂಬ ನಂಬಿಕೆಯಲ್ಲಿ ಈ ಲೇಖನವು ಅವಮಾನದ ವಿವಿಧ ಬಗೆಗಳನ್ನು ಪ್ರತೀತಗೊಳಿಸುತ್ತಾ ಹೋಗುತ್ತದೆ. ಅದರಲ್ಲೂ ಮುಖ್ಯವಾಗಿ ಭಾರತೀಯ ಮಹಿಳೆಯು ಊಟ, ನಿದ್ದೆ, ನೀರು, ನೆರಳು, ಮೈಥುನ, ಮೊದಲಾದುವುಗಳಲ್ಲಿ ಅನುಭವಿಸುವ ಅವಮಾನದ ಹಲವು ಬಗೆ ಬಗೆಗಳನ್ನು ತಣ್ಣಗೆ ಇಲ್ಲಿ ನಿರೂಪಿಸಲಾಗಿದೆ. ಪುರಾಣ ಇತಿಹಾಸಗಳನ್ನೂ ಈ ಹಂತದಲ್ಲಿ ಜಾಗರೂಕತೆಯಿಂದ ಪರಿಶೀಲಿಸಲಾಗಿದೆ. ಮುಖ್ಯವಾಗಿ ಶ್ರೇಣೀಕರಣದ ಎರಡು ತುದಿಗಳಲ್ಲಿರುವ ಬ್ರಾಹ್ಮಣ ಮತ್ತು ದಲಿತರು ಅನುಭವಿಸುವ ಅವಮಾನದ ಪರಿಯನ್ನು ನಿರೂಪಿಸುವ ಹೊತ್ತಿಗೆ ಭೈರಪ್ಪನವರನ್ನೂ ವಿಮರ್ಶೆಗೆ ಒಳಪಡಿಸಿದ ರೀತಿ ಅತ್ಯಂತ ಪ್ರೌಢವಾದುದು ಮತ್ತು ಮೌಲಿಕವಾದುದು.
ಮೋಹದೊಳಗಾದ ಮಾವು ಪ್ರಬಂಧವು ಕೋಳಿಕುಟುಂಬದ ಹಾಗೆ ಆಪ್ತವಾದ ಒಂದು ಬರೆಹ. ಇಲ್ಲಿ ಮಾವಿನ ಹಣ್ಣು ಕುಟುಂಬವೊಂದರ ಕೇಂದ್ರದಲ್ಲಿದೆ, ಅದರ ಸುತ್ತ ಬೇರೆ ಬೇರೆ ವಯಸ್ಸಿನ ಜನರಿದ್ದಾರೆ. ಮಾವು ಕಾರಣವಾಗಿ ಜನರು ತಮ್ಮ ಭಾವನಾಲೋಕವನ್ನು ಪ್ರಕಟಗೊಳಿಸುತ್ತಾ ಹೋಗುತ್ತಾರೆ-
ಇದನ್ನ ತಗೋಳ್ರೀ..ಅದನ್ನು ಬಿಟ್ ಬಿಡ್ರೀ..ಹಸಿರಿದ್ರ ಹುಳಿ ಬರ್ತಾವು, ನೋಡ್ರೀ..ಆಮ್ಯಾಲ ನಮ್ಮನ್ನ ಬೈಕೋಬ್ಯಾಡ್ರೀ..ಎಂದೆಲ್ಲ ಆತ್ಮೀಯವಾಗಿ ಹಣ್ಣು ಆಯ್ದುಕೊಳ್ಳಲು ಸಹಕರಿಸುತ್ತಾ ಅಲ್ಲೊಂದುರೀತಿಯ ಗದ್ದಲ, ಕಲರವ ಎಬ್ಬಿಸುತ್ತಿದ್ದರು. ಅಷ್ಟರಲ್ಲಿ ಆ ಗದ್ದಲದ ನಡುವೆಯೇ ಎಲ್ಲರು ಮಗ್ನರಾಗಿರುವಾಗ ಅಜ್ಜ ಎಲ್ಲರ ಕಣ್ಣು ತಪ್ಪಿಸಿ ಕೆಲ ಮಾವಿನಹಣ್ಣುಗಳನ್ನು ಎತ್ತಿಕೊಂಡು ಕೈಮೇಲೆತ್ತಿ ಏನನ್ನೋ ಹುಡುಕುವವನಂತೆ ನಟಿಸುತ್ತಾ ನಾಗಂದಿಗೆಯ ಮೇಲೆ ಸೇರಿಸಿಬಿಟ್ಟಿರುತ್ತಿದ್ದ’
ಬಾಲ್ಯದ ಈ ನೆನಪುಗಳನ್ನು ಲೇಖಕಿ ಆಧುನಿಕ ಸಮಾಜದೊಡನೆ ಇರಿಸಿ ನೋಡುತ್ತಾರೆ, ಅದು ಒಂದು ಬಗೆಯ ಮೌಲ್ಯ ಮಾಪನವೂ ಹೌದು- ‘ ಮಾವು ಹಣ್ಣುಗಳ ರಾಜ. ಅದರಲ್ಲಿ ರಸಪುರಿ, ಮಲಗೋಬಾ, ತೋತಾಪುರಿಗಳ ತಳಿಗಳಿವೆ ಇತ್ಯಾದಿ ಇತ್ಯಾದಿ ಬರೆದರೆ ಪ್ರಬಂಧವಾದೀತು, ಅದಕ್ಕೊಂದು ಆತ್ಮ ಬೇಕಲ.್ಲ ಅದು ಬಾಲ್ಯದಲ್ಲಿತ್ತು.. ಅಥವಾ ಇತ್ತು ಎಂದುಕೊಳ್ಳುವುದೇಕೆ..?ಯಾರ ಬಾಲ್ಯಕ್ಕೂ ಸಾವಿಲ್ಲ ಎನಿಸುತ್ತದೆ. ಅದು ಮುಂದುವರಿಯುತ್ತದೆ ಮಕ್ಕಳಲ್ಲಿ, ಮೊಮ್ಮಕ್ಕಳಲ್ಲಿ.. ಒಟ್ಟಾಗಿರುವ ಮನಸುಗಳಿದ್ದಲ್ಲಿ..ಆ ದಿನಗಳಲ್ಲಿ ಪಡೆದುಕೊಂಡ ನಿಸ್ಪೃಹ ಪ್ರೇಮವನ್ನು ಮುಂದಿನ ಪೀಳಿಗೆಗೆ ನಾವುಕೊಡಬಲ್ಲೆವಾ ಎಂದೂ ಯೋಚಿಸಬೇಕಿದೆ..’
ಗಾಂಧಿಗಿರಿ ಮತ್ತು ಸಬರ್ಮತಿ ಪ್ರಬಂಧವು ಸಮಕಾಲೀನ ಬದುಕಿನ ಸೋಗಲಾಡಿತನವನ್ನು ಹಾಗೆ ಘೋಷಿಸದೇ ಲೇವಡಿ ಮಾಡುವ ವಿನೂತನ ತಂತ್ರಗಾರಿಕೆಯನ್ನು ಒಡಗೂಡಿಸಿಕೊಂಡಿದೆ. ‘ಸಾಬರ್ಮತಿ ಆಶ್ರಮ ಸೇರಿದ ಅವ್ವ ನಿಜಕ್ಕೂ ನನ್ನ ಮೇಲೆ ಬೀರಿದಪ್ರಭಾವ ಅಪಾರ ಎಂದರೆ ಏನೂ ಹೇಳಿದಂತಾಗುವುದಿಲ್ಲ..ಗುಂಗುರುಗೂದಲು,ದೊಡ್ಡಕುಂಕುಮ, ತಲೆ ಮೇಲೆ ಸೆರಗು, ಸದಾ ಏನಾದರೊಂದು ಕೆಲಸದಲ್ಲಿ ಮಗ್ನ. ಅವ್ವ ಏನೂ ಒಂದು ಉಪದೇಶಿಸುತಿರ್ತಲಿಲ್ಲಲ .. ಸುಮ್ಮನೆ ಕಾಯಕದಲಿ ್ಲ ಕೈಲಾಸ ಕಾಣುತ್ತಲೇ ಇದ್ದ ಜೀವ..ಆಕೆಗೆ ಮನೆಗಿಂತ ಸಾಬರ್ಮತಿಯೇ ಇಷ್ಟವಾದಂತಿತ್ತು. ಇದ್ದದ್ದುಒಂದೇ ತಿಂಗಳು.. ಆದರೆ ಜೀವಮಾನಪೂರ್ತಿ ಅದರದೇ ನೆನಕೆ, ಕನವರಿಕೆ..ಪ್ರಭಾವ ಎಂದರೆ ಇದಲ್ಲವೇ..?’ ಎಂದು ಲೇಖಕಿ ಬರೆಯುವಾಗ ಗಾಂಧಿ ಆಶ್ರಮದ ಪರಿಣಾಮವೂ ತೆರೆದುಕೊಳ್ಳುತ್ತದೆ ಮತ್ತು ಹಾಗಾಗದೇ ಇರುವ ಇಂದಿನ ಜೀವನ ಕ್ರಮದ ಪೊಳ್ಳುತನವೂ ಬಯಲಾಗುತ್ತದೆ.
ಸ್ವಾತಂತ್ಯ ಚಳುವಳಿ ಬರುಬರುತ್ತಾ ಹೇಗಿತ್ತೆಂದರೆ ಅದು ಯಾರೋ ಯಾರಿಗೋ ತಿಳಿಹೇಳಿ, ಭಾಗವಹಿಸಲು ಹಚ್ಚಿದ್ದಲ್ಲ. ಅನೇಕರಿಗೆ ಅದು ವೈಯಕ್ತಿಕ ತುತರ್ು ಆಗಿತ್ತು. ಬದುಕಿನ ವಿವಿಧ ಮಜಲುಗಳು ನಗಣ್ಯ ಎನಿಸಿದ್ದವು. ಅದೊಂದು ಐಡೆಂಟಿಟಿ ಕೂಡಾ ಆಗಿದ್ದಿರಬಹುದು. ಒಟ್ಟಾರೆ ಅದು ಕಿಕ್ಕಿರಿದು ಮೊರೆದು ಬ್ರಿಟಿಷರು ನಡುರಾತ್ರಿ ದೇಶದಿಂದ ಹೊರನಡೆವಂತೆ ಮಾಡಿತ್ತು. ಹಾಗೆ ಹೋರಾಡಿದವರನ್ನು ನೆನೆದುಕೊಂಡು ಚಳುವಳಿಯೇ ಇಲ್ಲದೆ ಬಯಲಿನಲ್ಲೆಂಬಂತೆ ನಿಂತಿರುವ ನಮ್ಮ ತಲೆಮಾರು ಅಂತರಂಗದ ಬದಲಾವಣೆಯನ್ನಲ್ಲದೆ ಬೇರಾವುದರ ನಿರೀಕ್ಷೆಯಲ್ಲಿ ಮುಂದಡಿಯಿಡಲು ಸಾಧ್ಯ? ಎಂದು ಕೇಳಿಕೊಳ್ಳಬೇಕು ಎನಿಸುತ್ತದೆ ಎಂಬ ಲೇಖಕಿಯ ಮಾತುಗಳು ಮತ್ತೆ ಮತ್ತೆ ಕಾಡಲಾರಂಭಿಸುತ್ತವೆ.
ಇಂಗ್ಲಿಷ್ ಕನ್ನಡಗಳ ಜೋಕಾಲಿ ಪ್ರಬಂಧವು ಹಿಂದೆಗಿಂತಲೂ ಇಂದು ಹೆಚ್ಚು ಪ್ರಸ್ತುತವಾಗಿದೆ. ಕರ್ನಾಟಕದಲ್ಲಿ ಕನ್ನಡ ಕಾಣೆಯಾಗುತ್ತಿರುವ ಇಂದಿನ ಸಂದರ್ಭದಲ್ಲಿ ಈ ಲೇಖನವು ಮಕ್ಕಳ ಮಟ್ಟಿಗೆ ಕನ್ನಡವು ಹೇಗೆ ಸೃಜನಶೀಲವಾಗಿದೆ ಎಂಬುದನ್ನು ಸೋದಾಹರಣವಾಗಿ ಮನಮುಟ್ಟುವಂತೆ ವಿವರಿಸುತ್ತದೆ. ಶಾಲೆಯಂಗಳದ ತೋಟಕ್ಕೆ ಹೋಗುವುದು, ಕೊಡ ಎತ್ತಿ ನೀರು ತರುವುದು, ಹೂವಿನಗಿಡಕ್ಕೆ ನೀರು ಹೊಯ್ಯುವುದು, ಹುಮ್ಮಸ್ಸು, ಉತ್ಸಾಹ, ಉಲ್ಲಾಸ, ಶ್ರದ್ಧೆಯಲ್ಲಿ ಹೂ ಬಿಟ್ಟಿರಬಹುದಾ? ಅದರ ಮೇಲೆ ಚಿಟ್ಟೆ ಬಂದು ಕೂತಿರಬಹುದಾ? ಎಂದೆಲ್ಲಾ ಆಲೋಚಿಸುವುದು, ರಾತ್ರಿಯೆಲ್ಲಾ ನಿದ್ದೆಗೆಟ್ಟು, ಬೆಳಿಗ್ಗೆ ಬೇಗೆದ್ದು ಓಡಿಹೋಗಿ ಹೂಗಿಡಗಳನ್ನು ನೋಡುತ್ತಾ ನಿಲ್ಲುವುದು – ಎಲ್ಲವೂ ಸಾಧ್ಯವಾಗುವುದು ಮಾತೃಭಾಷೆಯಲ್ಲಿ. ಕಾನ್ವೆಂಟ್ನ ಬಾಯಿಪಾಠ ಕಲಿತ ಪದಗಳ ಮೂಲಕ ಅಲ್ಲ. ಆಂಗ್ಲ ಭಾಷೆಗೆ ಬಲಿಯಾದವರೆಲ್ಲ ಕುತೂಹಲಕ್ಕಾದರೂ ಓದಬೇಕಾದ ಮಹತ್ವದ ಪ್ರಬಂಧವಿದು.
ಗುರಿಗಿಂತ ಪ್ರಿಯವಾಗುವ ದಾರಿ ಪ್ರಬಂಧವು ಪ್ರಯಾಣದ ಅನುಭವಗಳನ್ನು ನವಿರಾಗಿ ಕಟ್ಟಿಕೊಡುವ ನವೀನ ಪ್ರಯತ್ನ. ‘ಉರುಳುವ ಗಾಲಿಯ ಆವಿಷ್ಕಾರ ನಡೆದದ್ದೇ ದಾರಿ ಹುಟ್ಟಿಕೊಳ್ಳಲು ಕಾರಣ ಮತ್ತು ಅನಿವಾರ್ಯತೆ ಎನಿಸುತ್ತೆ. ಮತ್ತು ಈ ರೀತಿಯ ರಸ್ತೆಪಯಣವು ಜೀವನಪಯಣ ಇನ್ನಷ್ಟು ಸ್ವಾರಸ್ಯ, ಸುಲಬ, ವಿಸ್ತಾರ, ನವನವೀನ ಹೀಗೆಲ್ಲಾ ಆಗಲುಕಾರಣವಾಗಿದೆಯೆಂದು ತೋರುತ್ತದೆ. ರಸ್ತೆ ಎಂದರೆ ರಸ್ತೆ ಮಾತ್ರಾನಾ? ಅದು ಗಾಳಿರಸ್ತೆ, ನೀರುರಸ್ತೆ, ರೈಲ್ಹಳಿಗಳೂ ಆಗಿ ರೋಮಾಂಚನಗೊಳಿಸುತ್ತವೆ ತಾನೇ..!’ ಎಂದು ವಿವರಿಸುವ ಲೇಖಕಿ ಅಂತಿಮವಾಗಿ ಪಯಣವನ್ನು ಬಾಳಿಗೆ ಸಂಕೇತವಾಗಿ ಬಳಸುತ್ತಾರೆ. ಶಿವರಾಮ ಕಾರಂತರು ಹಾಗೆ ಮಾಡಿದ್ದ ಇನ್ನೊಬ್ಬ ದೊಡ್ಡ ಬರೆಹಗಾರರು.
ಸಂಕಲನದ ಕೊನೆಯ ಲೇಖನ ಪರ್ಲ್   ಹಾರ್ಬರ್ನ ಕುರಿತಾಗಿದೆ.
ಈ ಕುರಿತು ಹಿಂದೆ ಬಂದಿದ್ದ ಚಲನಚಿತ್ರವನ್ನು ಆಧರಿಸಿ ಶ್ರೀಮತಿ ಸುಧಾ ಅವರು ಯುದ್ಧದ ಬಗೆಗೆ ಮತ್ತು ವರ್ಣತಾರತಮ್ಯದ ಬಗೆಗೆ ಕೆಲವು ಪ್ರಶ್ನೆಗಳನ್ನು ಎತ್ತುತ್ತಾರೆ.
ಸತ್ಯಸಂಗತಿಗಳನ್ನು, ಐತಿಹಾಸಿಕ ಕಥಾವಸ್ತುಗಳನ್ನು ಆಧರಿಸಿದ ಅನೇಕ ಸಿನಿಮಾಗಳು ಗಮನಸೆಳೆಯುತ್ತವೆ ಮತ್ತು ಗಂಭೀರ ಚಿಂತನೆಗೆ ಹಚ್ಚುತ್ತವೆ. ಯುರೋಪಿಯನ್ ಸಾಹಿತ್ಯದ ವಿದ್ಯಾರ್ಥಿನಿಯಾದ, ಮುಖ್ಯವಾಗಿ ಶೇಕ್ಸಪಿಯರ್ ಮಹಾಶಯನ ಚಾರಿತ್ರಿಕ ನಾಟಕಗಳ ಸಂಶೋಧನಾರ್ಥಿಯಾದ, ಐತಿಹಾಸಿಕ ನಾಟಕಗಳನ್ನು, ಕಾದಂಬರಿಗಳನ್ನು ಅಭ್ಯಸಿಸುತ್ತಾ ಬಂದ ನನಗೆ ಐತಿಹಾಸಿಕ ಸಿನಿಮಾಗಳ ಕುರಿತು ಕುತೂಹಲವೇ. ಅದರಲ್ಲೂ ಮುರಿದು ಕಟ್ಟಿದ ಕಥಾನಕಗಳೆಂದರೆ ಇನ್ನಷ್ಟು ಆಸಕ್ತಿ. ಹಾಗಾಗಿ ಅಂಥಾ ಸಿನಿಮಾಗಳ ಸುತ್ತಮುತ್ತ, ಹಿಂದೆಮುಂದೆ ಕೆದಕುವುದು ಹವ್ಯಾಸವಾಗಿ ಬೆಳೆದುಬಿಟ್ಟಿತು. ಈ ದೃಷ್ಟಿಯಲ್ಲಿ ತುಂಬ ನೆನಪಿನಲ್ಲುಳಿದ ಸಿನಿಮಾ ಈ ಪರ್ಲ್ ಹಾರ್ಬರ್,ಎಂದು ಅವರು ಬರೆದುಕೊಂಡಿದ್ದಾರೆ. ಯುದ್ಧದ ಭೀಕರತೆ ನೋಡುವಾಗ ಯುದ್ಧ ಬೇಡ ಎನಿಸುವುದೂ ಸಹಜ. ಆದರೆ ವಾಸ್ತವದಲ್ಲಿ ಮನುಕುಲದ ಚರಿತ್ರೆಯಿಡೀ ಯುದ್ಧ ಮತ್ತು ಪ್ರೀತಿಯಿಂದಲೇ ತುಂಬಿ ಹೋಗಿರುವುದು ಅಂಗೈ ಮೇಲಿನ ಸತ್ಯ ಎಂಬ ಅವರ ಮಾತು ಅಕ್ಷರಶ: ಸತ್ಯವಾದುದು. 2011ರಲ್ಲಿ ವಿಚಾರ ಸಂಕಿರಣದ ನೆವದಲ್ಲಿ ಹವಾಯಿ ದ್ವೀಪದಲ್ಲಿರುವ ಹವಾಯಿ ವಿಶ್ವವಿದ್ಯಾಲಯಕ್ಕೆ ಹೋಗಿದ್ದಾಗ ಗೆಳೆಯರು ಪಲರ್್ ಹಾರ್ಬರ್ಗೆ ಕರೆದೊಯ್ದಿದ್ದರು. ಆಗ ಮೌನವಾಗಿ ರೋಧಿಸುವ ಸರದಿ ನನ್ನದಾಗಿತ್ತು.
ಹೀಗೆ ಶ್ರೀಮತಿ ಸುಧಾ ಚಿದಾನಂದಗೌಡರು ಪ್ರಸ್ತುತ ಪುಸ್ತಕದಲ್ಲಿ ವಿನೂತನವಾದ ಅನೇಕ ವಿಷಯಗಳನ್ನು ಹೇಳಿದ್ದಾರೆ. ಅದನ್ನು ಹೇಳಲು ಅವರು ಆಯ್ದುಕೊಂಡ ಮಾರ್ಗವೂ ಅಷ್ಟೇ ನವೀನವಾದುದು. ಮುಳುಗಡೆ ಊರಿನಲ್ಲಿನ ಅದಮ್ಯ ಜೀವನೋತ್ಸಾಹವನ್ನು ಅವರು ಭಾಷೆಯಲ್ಲಿ ಹಿಡಿಯುತ್ತಾರೆ, ಕೋಳಿ ಕುಟುಂಬ, ಕೋತಿ ಕಥನಗಳ ಮೂಲಕ ಮಾನವ ಮತ್ತು ಪ್ರಾಣಿಗಳ ನಡುವಣ ಸಂಬಂಧಗಳ ಮೇಲೆ ಹೊಸ ಬೆಳಕು ಚೆಲ್ಲುತ್ತಾರೆ. ಪಾತರಗಿತ್ತಿಯ ಮೂಲಕ ಮಾನವನ ಅಂತರಂಗಕ್ಕೆ ಸರಳವಾಗಿ ಇಳಿಯುತ್ತಾರೆ, ಮಾವು ಮಾನವ ಲೋಕದ ಅಭಿವ್ಯಕ್ತಿಯಾಗುತ್ತದೆ, ಕನ್ನಡ ಸೃಜನಶೀಲತೆಯ ಹೆಬ್ಬಾಗಿಲಾಗುತ್ತದೆ, ಪಯಣವು ಬದುಕಿನ ಸತ್ವವಾಗುತ್ತದೆ, ಬದುಕನ್ನು ನಾಶ ಮಾಡುವ ಕಲಹಗಳು ಆತಂಕವನ್ನು ಹೆಚ್ಚಿಸುತ್ತವೆ.
ಕನ್ನಡದಲ್ಲಿ ಈ ಬಗೆಯ ಬರೆಹಗಳು ಹೆಚ್ಚಿಲ್ಲ.
ಸುಧಾ ಚಿದಾನಂದಗೌಡ ಅವರಿಗೆ ಅಭಿನಂದನೆಗಳು.

***


 
 
 

‍ಲೇಖಕರು G

August 29, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. sudha chidanand gowd

    ಧನ್ಯವಾದ ಅವಧಿ
    ಈ ದಿನದ ಕಾರ್ಯಕ್ರಮ ಚೆಂದಗಂಡಿತು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: