ಸುಧಾ ಚಿದಾನಂದಗೌಡ ಸುತ್ತಾಡಲು ಹೊರಟರು..

ಪ್ರವಾಸವೆಂಬುದು ಮನುಷ್ಯನಿಗೆ ಆಕ್ಸಿಜನ್ ಇದ್ದಂತೆ.

“ದೇಶ ಸುತ್ತು ಕೋಶ ಓದು” ಎನ್ನುವ ಮಾತೊಂದಿದೆ.
ಆ ಮಾತಿಗೆ ಕಟ್ಟುಬಿದ್ದವರಲ್ಲಿ ನಾನೂ ಒಬ್ಬಳು. ಕುಟುಂಬವು ಏರ್ಪಡಿಸಿಕೊಂಡು ಹೊರಡುತ್ತಿದ್ದ ಹಂಪಿ, ಕಮಲಾಪುರ, ಕೂಡಲಸಂಗಮ, ಡ್ಯಾಂಗಳಿಂದ ಆರಂಭಗೊಂಡ ನನ್ನ ಪ್ರವಾಸದ ಪಯಣ ಅನೇಕ ಸ್ವಾರಸ್ಯಗಳಿಂದ ಕೂಡಿದೆ. ರೊಟ್ಟಿ, ಎಣ್ಣೆಗಾಯಿ, ಚಟ್ನಿಪುಡಿ, ಮೊಸರನ್ನದ ಬುತ್ತಿಯೊಂದಿಗೆ ಕರ್ಚಿಕಾಯಿ, ಮೈಸೂರುಪಾಕುಗಳು ಆಗಿನ ಪ್ರವಾಸದ ಅವಿಭಾಜ್ಯ ಅಂಗಗಳು. ನಂತರ ನನ್ನ ಪ್ರವಾಸ ಶಾಲೆಯಲ್ಲಿ ಕರೆದೊಯ್ಯುತ್ತಿದ್ದ ಶೈಕ್ಷಣಿಕ ಪ್ರವಾಸಗಳಿಂದ ಮುಂದುವರಿಯಿತು. ಆಗ ಹೋಟೆಲುಗಳ ಪರಿಚಯವೂ ಆಗತೊಡಗಿತು. ನಂತರದ ಕೌಟುಂಬಿಕ ಪ್ರವಾಸಗಳು ಕನ್ಯಾಕುಮಾರಿಯವರೆಗೆ ಮುಂದುವರಿದುವಾದರೂ ಅಷ್ಟೊತ್ತಿಗೆ ರೊಟ್ಟಿಬುತ್ತಿಯ ಕಾಲ ಮುಗಿಯಿತೆಂದೇ ಅನಿಸುತ್ತದೆ. ಪ್ಯಾಕೇಜ್ ಟೂರುಗಳ ಕಾಲ ಇದೀಗ ಲಗ್ಗೆ ಹಾಕಿದೆ… !

ಕಾಲಘಟ್ಟ ಬೇರೆ..
ಊಟ ವಸತಿಯ ಸ್ವರೂಪ ಬೇರೆ..
ಭೇಟಿ ಕೊಡುತ್ತಿರುವ ಸ್ಥಳಗಳು ಬೇರೆಬೇರೆ..
ಆದರೆ ಪ್ರವಾಸ ಕೊಡುವ ಆನಂದ ಎಲ್ಲಾ ಕಾಲಕ್ಕೂ ಒಂದೇ.
ಬಗೆಬಗೆಯ ನೋಟ, ಹೊಸಹೊಸ ಪ್ರದೇಶಗಳು ಕೊಡುವ ಸಂತೋಷ ಮತ್ತು ಜ್ಞಾನ, ಹೊಸಜನರ ಪರಿಚಯ..
ಹೀಗೆ ಅದರ ಸೊಗಸುಗಾರಿಕೆಯನ್ನು ವರ್ಣಿಸುತ್ತಾ ಹೋಗಬಹುದು.

ಭೂಮಿಯ ಮೇಲೀಗ ಮನುಷ್ಯ ಭೇಟಿಕೊಡದ ಜಾಗವೇ ಇಲ್ಲ ಎನ್ನಬಹುದು. ಯಾವಾಗಲೋ ನೋಡಿದ ಅಥವಾ ನಾವೆಂದೂ ನೋಡಲಾರದೇ ಹೋಗಬಹುದಾದ ಅಸಂಖ್ಯಾತ ಪ್ರದೇಶಗಳನ್ನು ಈಗ ಅಂತರ್ಜಾಲದ ಮೂಲಕ ವಿಫುಲ ಮಾಹಿತಿಯೊಡನೆ ಕಣ್ಣೆದುರಿಗೆ ರಂಗುರಂಗಿನ ವೀಡಿಯೋಗಳೊಡನೆ ನೋಡಿಬಿಡಬಹುದು. ಹಾಗೆ ನೋಡುವುದರ ಮಿತಿಗಳೇನೇ ಇರಲಿ, ಕೂತಲ್ಲೇ ಪ್ರವಾಸ ಮಾಡಿದ ಅನುಭವ ಪಡೆಯಲು ಇಷ್ಟು ಸಾಕಲ್ಲವೇ.. ಎಂದೂ ಅನಿಸುತ್ತದೆ.

ಜನ ಹೀಗೆ ಯೋಚಿಸುತ್ತಾರೆಂದು ಪ್ರಾಯóಷಃ ದೊಡ್ಡವರೆನಿಸಿಕೊಂಡವರಿಗೆ ಅರಿವಾಯಿತೆಂದು ತೋರುತ್ತದೆ.
ಹಾಗಾಗಿ ಪಂಡಿತ ಪಾಮರರು, ವಿಶ್ವವಿದ್ಯಾಲಯಗಳ ವಿಮರ್ಶಕರು, ಅಧ್ಯಾಪಕರುಗಳು, ಅಕಾಡೆಮಿ, ಪ್ರಾಧಿಕಾರಗಳೆಲ್ಲಾ ಅನುಸರಿಸುತ್ತಿರುವ ಪ್ರವಾಸ ಕಾರ್ಯಕ್ರಮವೆಂದರೆ “ಸಾಂಸ್ಕøತಿಕ ಅಧ್ಯಯನ” ವೆಂಬ ಹೊಸಬಗೆಯ ಪ್ರವಾಸಾಧ್ಯಯನ. ಹಿಂದಿನಂತೆ ಪ್ರವಾಸವೆಂದರೆ ಒಂದೆರಡು ದಿನಗಳ ಮಟ್ಟಿಗೆ ಹೋಗಿಬರುವುದಲ್ಲವೆಂದೂ, ಆಯಾ ಪ್ರದೇಶಗಳಲ್ಲಿ ಹಲವಾರು ದಿನಗಳು (ಕನಿಷ್ಠ ಒಂದು ತಿಂಗಳು) ವಾಸವಾಗಿದ್ದು, ಜನರೊಟ್ಟಿಗೆ ಬೆರೆತು, ಅವರ ಸಾಮಾಜಿಕ, ಸಾಂಸ್ಕøತಿಕ, ಆರ್ಥಿಕ, ಇತ್ಯಾದಿ ಬದುಕಿನ ಎಲ್ಲ ಆಯಾಮಗಳನ್ನು ದಾಖಲಿಸುವುದು ಪ್ರವಾಸವೆಂಬ ತೀರ್ಮಾನಕ್ಕೆ ಇತ್ತೀಚೆಗೆ ಬರಲಾಗಿದೆ. ಜನಸಾಮಾನ್ಯರ ಆದ್ಯತೆಗಳೇನೇ ಇರಲಿ, ವಿಶ್ವವಿದ್ಯಾಲಯಗಳ ಮೊಗಸಾಲೆಯಲ್ಲಿ ಇಂಥದ್ದೊಂದು ಪ್ರಯೋಗವಂತೂ ಆರಂಭಗೊಂಡಿದೆ. ಈ ಬಗೆಯ ಪ್ರವಾಸಾಧ್ಯಯನ ಕೈಗೊಳ್ಳಬೇಕೆಂಬ ಬಯಕೆ ನನಗೂ ಇತ್ತು. ಅದಕ್ಕೆ ತಕ್ಕಂತೆ “ಕರ್ನಾಟಕ ಸಾಹಿತ್ಯ ಅಕಾಡೆಮಿ”ಯು ಪ್ರವಾಸಾನುದಾನಕ್ಕೆ ಅರ್ಜಿಯನ್ನೂ ಕರೆಯಿತು. ಗೋವಾ ರಾಜ್ಯವನ್ನು ಆಯ್ಕೆ ಮಾಡಿಕೊಂಡು ಅರ್ಜಿ ಹಾಕಿಕೊಂಡೆ-
ಒಂದು ಶುಭಮುಂಜಾವು ಅಕಾಡೆಮಿಯಿಂದ ಫೋನ್ ಬಂತು..
“ಗೋವಾ ರಾಜ್ಯದ ಪ್ರವಾಸಕ್ಕೆ ನೀವು ಆಯ್ಕೆಯಾಗಿದ್ದೀರಿ.
ಪ್ರವಾಸ ಹೋಗಿಬಂದು, ನಂತರ ಒಂದು ವರ್ಷದ ಅವಧಿಯಲ್ಲಿ ಪ್ರವಾಸ ಕಥನದ ಪುಸ್ತಕ ಬರದುಕೊಡಬೇಕು” ಎಂದು.

ಆನಂದಕ್ಕೆ ಹಲವು ಕಾರಣಗಳಿದ್ದವು.
ಅಕಾಡೆಮಿಗಾಗಿ ಬರೆಯುತ್ತಿರುವ ಮೊದಲ ಪುಸ್ತಕ ಇದು ಎಂಬುದು ಮೊದಲ ಆನಂದ.
ಅದರೊಟ್ಟಿಗೆ ನಾನೇ ಆಯ್ಕೆ ಮಾಡಿಕೊಂಡ ಗೋವಾ ರಾಜ್ಯಕ್ಕೇನೇ ಪ್ರವಾಸ ಹೋಗುವ ಅವಕಾಶ ಸಿಕ್ಕಿದ್ದಕ್ಕಾಗಿ.
ವಶೀಲಿಬಾಜಿಯದೇ ಮೇಲುಗೈಯಾದ ಈ ದಿನಗಳಲ್ಲಿ ಯಾವುದೆ ಶಿಫಾರಸ್ಸಿಲ್ಲದೆ ಆದ ಆಯ್ಕೆ ಎಂಬುದಕ್ಕಾಗಿ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷೆ ಮಾಲತಿ ಪಟ್ಟಣಶೆಟ್ಟಿಯವರಿಗೆ ಮತ್ತು ಅವರ ಸಿಬ್ಬಂದಿ ತಂಡಕ್ಕೆ, ಆಯ್ಕೆ ಅಮಿತಿಗೆ ನಾನು ಋಣಿ.

ಪುಸ್ತಕ ಕುರಿತು ಏನು ಹೇಳಲಿ….?
ಬರೆಯುವಾಗ,…
ಪ್ರತಿ ಅಧ್ಯಾಯವನ್ನು ಬರೆದು ಮುಗಿಸಿದಾಗ….
ನನಗೆ ಉಂಟಾದ ಆನಂದ ಪುಸ್ತಕ ಓದುವ ಸಮಯದಲ್ಲಿ ನಿಮಗೂ ಖಂಡಿತ ಉಂಟಾಗುತ್ತದೆ ಎಂದಷ್ಟೇ ಹೇಳಬಲ್ಲೆ.

ಸಾಧ್ಯವಾದಲ್ಲಿ ಒಮ್ಮೆ ಗೋವಾಕ್ಕೆ ಹೋಗಿಬನ್ನಿ.
ಬೀಚ್, ಫಿಶ್, ಫೆನ್ನಿ, ಬಿಕಿನಿಗಳನ್ನು ಹೊರತುಪಡಿಸಿಯೂ ಗೋವಾದ ಐತಿಹಾಸಿಕ ವೈಭವ, ಪ್ರಕೃತಿಯ ರಮಣೀಯತೆ, ಜನಸಾಮಾನ್ಯರ ಸ್ನೇಹದ ಪರಿಚಯ ನಿಮ್ಮನ್ನು ಖಂಡಿತಾ ಬೇರೆಯದೇ ಲೋಕಕ್ಕೆ ಕರೆದೊಯ್ಯುತ್ತದೆ. ಸಮುದ್ರ, ಮಾಂಡೋವಿ ಎಲ್ಲದರ ಮಾಯೆ ನನ್ನನ್ನು ಆವರಿಸಿದಂತೆ ನಿಮ್ಮನ್ನೂ ಆವರಿಸುತ್ತದೆ.
ಮತ್ತೇನೂ ಹೇಳಲಾರೆ.
ನನ್ನ ಅನುಭವಗಳಂತೂ ನಿಮ್ಮೆದುರಿಗಿವೆ.
ಓದಿ, ಪ್ರತಿಕ್ರಿಯಿಸಿ.

ನಮಸ್ಕಾರ
ಸುಧಾ ಚಿದಾನಂದಗೌಡ

‍ಲೇಖಕರು Avadhi Admin

August 23, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. Shreedevi keremane

    ಸುಧಕ್ಕ ಗೋವಾ ಬಂದವರಿಗೆ ಪಕ್ಕದ ನಾನು ನೆನಪಾಗಲಿಲ್ವ?

    ಪ್ರತಿಕ್ರಿಯೆ
    • Sudha ChidanandGowd

      ಓಹ್.. ಶ್ರೀ, ನೀವೊಂದು ಸ್ನೇಹದ ಕಡಲು..!
      ಸಾರಿ, ಮುಂದಿನ ಬಾರಿ ಖಂಡಿತ ನೇರ ನಿಮ್ಮ ಮನೆಗೇ….

      ಪ್ರತಿಕ್ರಿಯೆ
  2. ಅಮರದೀಪ್. ಪಿ.ಎಸ್.

    ಇನ್ನು ಗೋವಾ ಕಥನದ ಓದು ಶುರು….. ಕಾಯ್ತೀನಿ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: