ಪ್ರತಿಭಾ ನಂದಕುಮಾರ್
“ಒಂದು ಚಿಕ್ ಪೀಸ್ ಕುಂಬಳಕಾಯ್ ಒಂದು ಕಟ್ಟು ಮೆಂತೆ ಸೊಪ್ಪು ಕೊಡಪ್ಪ ಸಾಕು”
“ಈ…ಏನ್ ನೀವು …ಹಬ್ಬ ಮಡಿಕ್ಕೊಂಡು ಚಿಕ್ ಪೀಸ್ ಕುಂಬಳ್ ಕಾಯ್ ತಗೋ ಓಯ್ತಿದ್ದೀರಲ್ಲ? ಜೋರಾಗ್ ಹಬ್ಬ ಮಾಡಿ”
“ಅದೆಲ್ಲ ಕಾಲ ಆಗೋಯ್ತ್ ಬುಡಪ್ಪ… ಹೋಳಿಗೆ ಕಡುಬು ಚಿತ್ರಾನ್ನ ಅಆಂಬೊಡೆ ಎಲ್ಲ ಮಾಡ್ತಿದ್ದೆ ..ಈಗ ತಿನ್ನೋರ್ಯಾರಿಲ್ಲ ಅನ್ನ ಸಾರು ಮಾಡಿದ್ರೆ ಸಾಕಾಗಿದೆ.”
“ಯಾಕೆ ಎಲ್ಲೋದ್ರು?”
“ಮರಿಗಳೆಲ್ಲ ಬಲ್ತು ಹಾರ್ಕೊಂಡ್ ಹೋಗ್ಬಿಟ್ಟಿವೆ..ಇನ್ಯಾರಿಗೆ ಅಡಿಗೆ ಮಾಡ್ಲಿ?”
“ಓ… ಒಬ್ರೇ ಇರೋದಾ ನೀವು?”
“ಮೊನ್ನೆ ಊರಲ್ಲಿ ಹಬ್ಬಕ್ಕೆ ದೊಡ್ ಕುರಿ ಕಡ್ದು ನೆಂಟರನ್ನೆಲ್ಲ ಕರ್ದು ಏನು ಬಲೇ ಗರ್ದು … ನಂಗೆ ರಜ ಕೊಡಲ್ಲ ಅಂದ್ ಬುಟ್ರು ಇಲ್ಲಿ. ನಾನು ಬೆಳಿಗ್ಗೆ ಅಂಗಡಿಗೆ ಬಂದ್ನಾ ..ಹನ್ನೆರಡಕ್ಕೆ ಬಾಕ್ಲು ಹಾಕಿ ಪಕ್ಕದ್ ಡೈರಿಯಿಂದ ಒಂದ್ ಪ್ಯಾಕೆಟ್ ಮೊಸ್ರು ತಗಂಡ್ ಹೋದೆ. ಅನ್ನ ಮಾಡ್ಕಂಡು ಮಿಕ್ಚರ್ ಉಪ್ಪಿನಕಾಯಿ ತಟ್ಟೆಗೆ ಹಾಕ್ಕೊಂಡ್ ಮೊಸರು ಸುರ್ಕೊಂಡ್ ಊಟಕ್ಕೆ ಕೂತ್ನಾ …ದಳದಳ ಕಣ್ಣಲ್ಲಿ ನೀರ್ ಬಂದ್ ಬುಡ್ತು. ಊರಲ್ಲಿ ಅಪ್ಪ ಅಮ್ಮನ ಜೊತೆ ನೆಂಟರ ಜೊತೆ ಹಬ್ಬ ಮಾಡೋದ್ ಬುಟ್ಟು ಇಲ್ಲಿ ಪರದೇಸಿ ಅಂಗೇ ಮೊಸರನ್ನ ತಿಂತಿದ್ದೀನಲ್ಲ ಆಂತ…ಅಂಗೇ ತಟ್ಟೆ ಎತ್ತಿಟ್ಟು ಅಂಗಿ ಆಕ್ಕೊಂಡು ಮೋಟಾರ್ ಬೈಕ್ ಸ್ಟಾರ್ಟ್ ಮಾಡಿದ್ದೇ ಮೂರೂ ಗಂಟೆ ದಾರಿನ ಎರಡು ಗಂಟೆನಲ್ಲಿ ಕವರ್ ಮಾಡ್ಕೊಂಡ್ ಊಟದ್ ಟೈಮ್ ಗೆ ಊರಲ್ಲಿದ್ದೆ… ನಮ್ಮವ್ವ ಬರಲ್ಲ ಅಂದ್ಯಲಾ ಮಗಾ ಅಂತು … ಹಿಂಗೇ ಕಣ್ಣಲ್ ನೀರ್ ಬಂತು ಅಂದ್ರೆ ಅದೂ ಅಳ್ತದೆ ಅಂತ ಏಳನಿಲ್ಲ. ಚೆನ್ನಾಗ್ ಊಟಾ ಮಾಡ್ಕಂಡ್ ಸಂಜೆಗೆ ಮೋಟಾರ್ ಬೈಕ್ ಹತ್ತಿ ಬಂದ್ ಬುಟ್ಟೆ… ನಮ್ಮವ್ವ ಎಂಭತ್ತು ವರ್ಸ ..ಈಗ್ಲೂ ಎಮ್ಮೆ ಮೆಯ್ಸಕ್ಕೆ ಹೋಯ್ತದೆ ..ನಮ್ಮಪ್ಪ ತೊಂಭತ್ತು ವರ್ಸಾ ..ಈಗ್ಲೂ ಗದ್ದೆ ತೋಟದ್ ಕೆಲ್ಸ ಮಾಡ್ತಾನೆ. ಬೆಂಗ್ಲೂರ್ಗೆ ಬನ್ರೀ ಅಂದ್ರೆ ಯಾಕಪ್ ನಾಲಕ್ ಗೋಡೆ ಮಧ್ಯೆ ನಮ್ಮನ್ನ ಕಟ್ಟಿ ಆಕ್ತಿಯಾ ..ನಾವಿಲ್ಲಿ ಗದ್ದೆ ತೋಟದಲ್ಲಿ ಆರಾಮಾಗಿದ್ದೀವಿ ಅಂತಾರೆ……. ನೀವು ಹಬ್ಬಕ್ಕೆ ಒಬ್ರೇ ಅಂದಿದ್ ಕೇಳಿ ಕಣ್ಣಲ್ಲಿ ನೀರ್ ಬಂತ್ ಕಣವ್ವ …”






0 Comments