ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸುಧಾ ಆಡುಕಳ ಹೊಸ ಕವಿತೆ- ಅಕ್ಕ..

ಸುಧಾ ಆಡುಕಳ

1.
ದೂರದಲ್ಲೆಲ್ಲೋ ಮಳೆಬಿದ್ದ ಸುದ್ದಿ
ಮಣ್ಣ ಘಮದ ಪರಿಮಳ ಅವನ
ನೆನಪಿಸುವುದ್ಯಾಕೆ?
ಭೂಮಿಯನ್ನೇ ಕೇಳಬೇಕು
ಹೂಕುಂಡದಲ್ಲೊಂದು ಪುಟ್ಟ ಹೂ
ಅರಳಿ ನಕ್ಕರೆ ಅವನ ಒಸಗೆ
ನೆನಪಾಗಬೇಕೆ?
ಬಿಡು, ನಾಳೆ ದುಂಬಿಯನ್ನೇ
ಕೇಳಿದರಾಯಿತು
ರಾತ್ರಿಯಾಗಸದಲ್ಲಿ ಚುಕ್ಕಿ ಸಾಲು
ಅವನ ತಬ್ಬಿದ ನೆನಪು ಮತ್ತೆ ಬಂತು
ನನ್ನ ಕಂಡು ನಗುವ ಚುಕ್ಕಿಗಳಿಗೆ
ಕಾರಣವೂ ಗೊತ್ತು!


ತಳಿರು, ಹಸಿರು, ಗಿಳಿ, ಗೊರವಂಕಗಳ
ಬಳಿ ನಲ್ಲನ ಇರವ ಕೇಳುವ ಅಕ್ಕಾ ಕೇಳೆ
ಅವರಲ್ಲೆಲ್ಲ ನನ್ನಿಯನ ಇರವೇ ಇದೆ
ಹುಡುಕದೇ ಗಳಿಗೆಗೊಮ್ಮೆ ಸಿಗುವವನ
ಮರೆಯುವುದು ಹೇಗೆ?
ನೆನಪೇ ಆದವನ ನೆನಪಾಗಿಸುವ
ಬಗೆಯೆನಗೆ ಹೇಳೆ

2.
ಅಕ್ಕಾ
ನಿನ್ನ ಆ
ಜಡೆಜಂಗಮ
ಅವನೆಂಥವನೆ?
ಕಾಡು ಮೇಡುಗಳಲ್ಲಿ
ನಿನ್ನ ಅಲೆಯಬಿಟ್ಟು
ಕಲ್ಲಾಗಿ ಕುಳಿತವನು
ಅಕ್ಕಾ
ನಿನ್ನ ಗೊರವ
ಅವನೆಷ್ಟರವನೆ?
ಹಾದಿಬೀದಿಯಲ್ಲಿ
ನಿನ್ನ ಹಾಡಲು ಬಿಟ್ಟು
ಕೈಲಾಸಕ್ಕೆ ಹಾರಿದವನು
ಅಕ್ಕಾ


ನಿನ್ನ ಸುಳಿಪಲ್ಲ ಶಿವ
ಅವನೇನು ಬಲ್ಲನೆ?
ನಿನ್ನೊಳಗೆಲ್ಲ ಹರಣವಾಗಿ
ಲಿಂಗವಾಗಿ
ಮೈದಳೆದುದ?
ಎಂದೆಲ್ಲಾ
ಕೇಳಬೇಕೆಂದಿದ್ದೆ
ನಿನ್ನ ಮುಂದಲೆಯ
ಹಿಡಿದು
ನನ್ನ ಮಲ್ಲಿಕಾರ್ಜುನನೊಳಗಾಗಿ
ನಿಂದಿರುವೆ
ನಿನ್ನ ದಾರಿಯ ದಿಟ್ಟಿಸುತ್ತ

‍ಲೇಖಕರು Avadhi

10 April, 2021

1 Comment

  1. T S SHRAVANA KUMARI

    ಚಂದದ ಕವಿತೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading