ಸುಗ್ಗಿ, ಚಳಿ ಮತ್ತು ಸಂಕ್ರಾಂತಿ.

ಸದಾಶಿವ ಸೊರಟೂರು 

ಚಳಿ, ಒಕ್ಕಲು(ಸುಗ್ಗಿ) ಮತ್ತು ಸಂಕ್ರಾಂತಿ ಈ ಮೂರನ್ನು ನನಗೆ ಬೇರೆ ಬೇರೆಯಾಗಿ ಕಲ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ನನ್ನ ಬದುಕಿನ ಅತಿ ಹೆಚ್ಚು ನೆನಪುಗಳು, ಪಾಠಗಳು ಇರುವುದು ಇಲ್ಲಿಯೆ. ತುಂಬು ಬೊಗಸೆಯ ಖುಷಿ ಕರುಣಿಸುತ್ತಾ, ನನ್ನ ಬೆಳೆಸುತ್ತಾ ಬಂದವು! ಒಕ್ಕಲು (ಸುಗ್ಗಿ) ಈಗ ಊರಿನ ಅಂಗಳದಿಂದ ಮಾಯವಾಗಿದೆ. ಹಿತವಾಗಿ ಮುದ್ದಿಸುತ್ತಿದ್ದ ಚಳಿಗೆ ಅದೇನಾಗಿದೆಯೋ ಗೊತ್ತಿಲ್ಲ. ಆಳಕ್ಕೆ ಇಳಿದು ಮೂಳೆಗಳನ್ನು ನೆಕ್ಕುವುದೊಂದೇ ಕೆಲಸ. ಸಂಕ್ರಾಂತಿ ಹೊಸ ವರ್ಷನ್ ನೊಂದಿಗೆ ಇನ್ನು ಉಳಿದಿದೆ. ಪ್ರತಿವರ್ಷ ಚಳಿ ಬೀಳುವ ವೇಳೆಗೆ ಬಾಲ್ಯದ ನೆನಪುಗಳು ಮಂಕರಿಗಟ್ಟಲೆ ಕಾಡುತ್ತವೆ. ಚಳಿ ಮತ್ತು ಸಂಕ್ರಾಂತಿ ಈ ವಿಷಯದಲ್ಲಿ ನಾನು ಕೃತಜ್ಞ!

ಪ್ರತಿವರ್ಷದ ಚಳಿ ಆರಂಭವಾಗುವ ಹೊತ್ತಿಗೆ ನಮಗೊಂದು ಹೊಸ ಕೌದಿ ಸಿದ್ಧವಾಗುತ್ತಿತ್ತು. ಅಜ್ಜಿ ಕೌದಿ ಹೊಲೆಯುವುದರಲ್ಲಿ ಫೇಮಸ್. ಊರಿಗೆಲ್ಲಾ ಕೌದಿ ಹೊಲಿದು ಕೊಡುವ ಅಜ್ಜಿ ಮೊಮ್ಮಕ್ಕಳಿಗೆ ವರ್ಷಕ್ಕೊಂದರಂತೆ ವಿಶೇಷವಾಗಿ ಹೊಲೆದು ಕೊಡಲಾರಳೇ?  ಅದೇ ಹೊಸ ಕೌದಿ ಒದ್ದು ಅಜ್ಜಿಯ ಪಕ್ಕ ಮಲಗಿಬಿಟ್ಟರೆ ಚಳಿಗೆ ಮುನಿಸು. ಆವರಿಸಲು ಬಂದ ಚಳಿಗೆ ಹೆದರಿ ಹಿಂದೆಗೆಯುತ್ತಿತ್ತು. ವಿಶೇಷವೆಂದರೆ ಅಜ್ಜಿ ಹೇಳುವ ಕಥೆಗಳಿಂದ ಅಂತಹ ಚಳಿಯಲ್ಲೂ ಕೌದಿಯ ಒಳಗೆ ಸಣ್ಣಗೆ ಬೆವರುತ್ತಿದ್ದೆ. ಅದು ನಮ್ಮ ಪಾಲಿಗೆ ಚಳಿಯ ವಿರುದ್ಧದ ಗೆಲುವೇ ಆಗಿತ್ತು.

ಮೊದಲ ಚಳಿ ಅಂಗಳಕ್ಕೆ ಇಣುಕುವ ಹೊತ್ತಿಗೆ ಊರ ಹೊರಗೆ ಕಣಗಳು ರೂಪುಗೊಳ್ಳುತ್ತಿದ್ದವು.  ಒಂದು ದಿನವೆಲ್ಲ ನೀರು ಸುರಿದು, ಮರು ದಿನಕ್ಕೆ ಹತ್ತಾರು ಜೊತೆ ಎತ್ತುಗಳಿಂದ ನೆಲವನ್ನು ತುಳಿಸಿ, ಗಟ್ಟಿಗೊಳಿಸಿ ಸಂಜೆ ಹೊತ್ತಿಗೆ ಸಗಣಿಯಿಂದ ಸಾರಿಸಿ ಬಿಟ್ಟರೆ ಸೊಗಸಾದ ಕಣವೊಂದು ಮೈತಳೆಯುತ್ತಿತ್ತು. ಅದರಲ್ಲಿ ಜೋಳ ರಾಗಿ ಒಕ್ಕಲು. ಅಲ್ಲಿ ಅಪ್ಪನಿಗೆ ಹಗಲು ರಾತ್ರಿಗಳಲ್ಲೂ ಡ್ಯೂಟಿ. ಜೋಳ, ರಾಗಿ ತೆನೆಯ ಮೇಲೆ ರೋಣುಗಲ್ಲು ಹೊಡೆಯಲಾಗುತ್ತಿತ್ತು.  ರೋಣುಗಲ್ಲಿಗೆ ಎತ್ತುಗಳನ್ನು ಕಟ್ಟಿಕೊಂಡು ಗಾಣದ ರೀತಿ ಸುತ್ತಬೇಕಾಗಿತ್ತು. ರೋಣುಗಲ್ಲಿನ ಭಾರಕ್ಕೆ ತೆನೆಯಿಂದ ಕಾಳುಗಳು ಕಳಚಿಕೊಳ್ಳುತ್ತಿದ್ದವು. ರೋಣುಗಲ್ಲಿನ ಮುಂದೆ ಇರುವ ಮರದ ಪಟ್ಟಿಯ ಮೇಲೆ ಕುಳಿತುಕೊಳ್ಳುವುದಕ್ಕೆ ನಮಗೆ ಮೋಜು.  ಅಪ್ಪ ಎಷ್ಟೇ ಬೇಡವೆಂದರೂ ಹಠಕ್ಕೆ ಬಿದ್ದು ನಾನು ಅದರ ಮೇಲೆ ಕೂರುತ್ತಿದ್ದೆ. ಮನೆಯಲ್ಲಿ ಊಟ ತಿನ್ನದೆ ನಾವು ಕಣದಲ್ಲಿ ತಂದಿರುವ ಬುತ್ತಿಯನ್ನು ಹೊಟ್ಟೆ ತುಂಬ ಬಾರಿಸುತ್ತಿದ್ದೆವು. ಇವೆಲ್ಲ ಹಗಲಿನ ತರ್ಲೆಗಳು. ರಾತ್ರಿಯ ಪಾಲಿಗೆ ಚಳಿ, ಅಜ್ಜಿ ಮತ್ತು ಕೌದಿ ಒಳಗೆ ಬೆವರು ತರಿಸುವ ಕಥೆಗಳು.

ಚಳಿಗಾಲದ ಬೆಳಗುಗಳು ಆರಂಭವಾಗುತ್ತಿದ್ದದ್ದೇ ಅಡುಗೆ ಮನೆಯಿಂದ ‘ಪಟ್.. ಪಟ್’ ಅಂತ  ಬಡಿಯುವ ಸದ್ದಿನಿಂದ. ಅವ್ವ ಅದ್ಯಾವ ಹೊತ್ತಿಗೆ ಎದ್ದು ಈ ಕೆಲಸ ಶುರುವಿಟ್ಟು ಕೊಳ್ಳುತ್ತಿದ್ದಳೊ ಗೊತ್ತಿಲ್ಲ!  ನಾವು ಎದ್ದವರೇ ಹೋಗಿ ಒಲೆಯ ಮುಂದೆ ಕೂತು ಬಿಡುತ್ತಿದ್ದವು. ಚಳಿ ಮತ್ತು ಒಲೆಯ ಬಿಸಿಯ ಹದವಾದ ಮಿಳಿತ ಸ್ವರ್ಗ ತೋರಿಸುತ್ತಿತ್ತು.  ಒಲೆಯ ಸೌದೆಯನ್ನು ಆಚೆ ಈಚೆ ಎಳೆದಾಡಿ ಎಳೆದಾಡಿ ಅವ್ವನಿಂದ ಪದೇ ಪದೇ ಬೈಸಿಕೊಳ್ಳುತ್ತಿದ್ದೆ.  ಒಂಚೂರು ದೊಡ್ಡವರಾದ ಮೇಲೆ ಬೆಳಗ್ಗೆ ಎದ್ದವರೇ ಕಣದ ಬಳಿ ಓಡಿ ಹೋಗಿ ಕೇರಿಯ ಹುಡುಗರನೆಲ್ಲಾ ಸೇರಿಕೊಂಡು ಸೌಧೆವೊಟ್ಟಿ ಬೆಂಕಿ ಹೊತ್ತಿಸಿ ಚಳಿ ಕಾಣಿಸಿಕೊಳ್ಳುತ್ತಿದ್ದೆವು. ಚಳಿ, ಒಕ್ಕಲು, ಅಪ್ಪ ಹೀಗೆ  ಎಲ್ಲವೂ ಸಂಕ್ರಾಂತಿಗೆ ಸಿದ್ದತೆ ನಡೆಸಿದಂತಿರುತ್ತಿತ್ತು.

ನಿಜವಾದ ಸುಗ್ಗಿ ಕಳೆ ಕಟ್ಟುತ್ತಿದ್ದು ಸಂಕ್ರಾಂತಿಯಂದು.  ಅಪ್ಪನ ಪಾಲಿಗೆ ಸಂಕ್ರಾಂತಿ ಎಂದರೆ ಕಣದ ತುಂಬಾ ತುಂಬಿರುವ ಧಾನ್ಯಗಳೇ ಆಗಿರುತ್ತಿತ್ತು. ಅವತ್ತು ಪೂಜೆ ಮಾಡಿ ಧಾನ್ಯಗಳನ್ನು ಮನೆಗೆ ತರಲಾಗುತ್ತಿತ್ತು.  ಪೂಜೆಯ ನಂತರ ಅನ್ನಕ್ಕೆ ಹಾಲು ಮತ್ತು ಬೆಲ್ಲ ಸೇರಿಸಿದ ಒಂದು ರೀತಿಯ ಸಿಹಿ ಪ್ರಸಾದ ಹಂಚುತ್ತಿದ್ದರು. ಅದಕ್ಕೆ ನಾವು ಮುಗಿ ಬೀಳುತ್ತಿದ್ದೆವು.  ಮೊದಲು ಧಾನ್ಯಗಳನ್ನು ಊರಿನ ಕೆಲಸ ಮಾಡುವ ಬೇರೆ ಬೇರೆ ಒಕ್ಕಲಿನವರಿಗೆ ಒಂದೊಂದು ಮೊರದಷ್ಟು  ಭಕ್ತಿಯ ರೂಪದಲ್ಲಿ ಸಲ್ಲಿಕೆಯಾಗುತ್ತದೆ.  ತದನಂತರ ಹುಡುಗರಿಗೆ. ನಾವು ತೊಟ್ಟ ಅಂಗಿಗಳೇ ನಮ್ಮ ಪಾಲಿನ ಚೀಲಗಳು.  ನಾವು ಅಂಗಿಯ ಕೆಳ ಗುಂಡಿಗಳನ್ನು ಗಳನ್ನು ಕಳಚಿಕೊಂಡು ಅದನ್ನು ಸೆರಗಿನಂತೆ ಬಳಸಿಕೊಂಡು ಅದರಲ್ಲಿ ಧಾನ್ಯಗಳನ್ನು ಹಾಕಿಸಿಕೊಳ್ಳುತ್ತಿದ್ದೆವು. ಅಲ್ಲಿಂದ ಅಂಗಡಿಗಳಿಗೆ ನಮ್ಮ ಪಯಣ. ಅವೆಲ್ಲವನ್ನು ಅಂಗಡಿಗೆ ಹಾಕಿ ತಿನಿಸುಗಳನ್ನು ಖರೀದಿಸಿ ಮುಕುತ್ತಿದ್ದೆವು. ಈ ಕಾರಣಕ್ಕಾಗಿ ನಮ್ಮ ಪಾಲಿಗೆ ಸಂಕ್ರಾಂತಿ ಬಲು ಆಕರ್ಷಣೆಯದು.

ಸಂಕ್ರಾಂತಿಯ ದಿನ ಬೆಳೆ ಮನೆಗೆ ಸೇರಿದ ಖುಷಿ ಇರುತ್ತಿತ್ತು. ರಾತ್ರಿ ಮನೆಯಲ್ಲಿ ಹಬ್ಬದೂಟ. ಹತ್ತಾರು ದಿನಗಟ್ಟಲೆ ಚಳಿಯ ಮಧ್ಯೆ ಕಣದಲ್ಲಿ ಮಲಗುತ್ತಿದ್ದ ಅಪ್ಪ ಅಂದು ಮನೆಯಲ್ಲಿ ಮಲಗುತ್ತಿದ್ದರು. ಮೂರು ದಿನಗಳಲ್ಲಿ ಧಾನ್ಯಗಳನ್ನು ಹಗೇವು ಇಲ್ಲವೇ ಕಣಜದಲ್ಲಿ ತುಂಬುವ ಕೆಲಸ ನಡೆಯುತ್ತಿತ್ತು. ಸಂಕ್ರಾಂತಿ ಕಳೆದರು, ಒಕ್ಕಲು ಮುಗಿದರು  ಚಳಿಯು ಊರನ್ನು ಬಿಟ್ಟು ಹೋಗುತ್ತಿರಲಿಲ್ಲ. ಚಳಿಯನ್ನು ಅನುಭವಿಸುವಾಗ ಇನ್ನು ಒಕ್ಕಲಿದೆ, ಸಂಕ್ರಾಂತಿಯಿದೆ ಎಂಬ ಭಾವವೇ ನಮಗಿರುತ್ತಿತ್ತು. ಚಳಿ ಕಡಿಮೆಯಾಗುತ್ತಾ ಬಂದಂತೆ ಏನು ಕಳೆದುಕೊಂಡ ಭಾವ! ಬೇಸಿಗೆಯ ಬಿಸಿಲು ಸುರಿಯ ತೊಡಗುತಿತ್ತು.  ಕೌದಿಗಳು ನಮ್ಮಿಂದ ದೂರ. ಅಜ್ಜಿಯ ಪಕ್ಕದ ಜಾಗದಿಂದಲೇ ದೂರ. ಕಥೆಗಳು ಕಡಿಮೆ. ಸೆಕೆಯಲ್ಲಿ ಅಂಗಳದ ಮಧ್ಯೆ ಚಾಪೆ ಹಾಸಿಕೊಂಡು ನಕ್ಷತ್ರಗಳನ್ನು ಎಣಿಸುತ್ತಾ ಮಲಗಿಬಿಡುತ್ತಿದ್ದವು. ಪ್ರತಿ ಬಾರಿ ಚಳಿಗಾಲವು ಒಕ್ಕಲು ಮತ್ತು ಸಂಕ್ರಾಂತಿಯ ನೆನಪುಗಳನ್ನು ತರುತ್ತದೆ. ಅದ್ದೂರಿ ಸಂಕ್ರಾಂತಿ,  ಕೊರೆಯುವ ಚಳಿ ಅದಕ್ಕಾಗಿ ಖರೀದಿಸುವ ಬೆಲೆಬಾಳುವ ಉಡುಪುಗಳು ಆ  ಖುಷಿ ಕೊಡುವುದಿಲ್ಲ!

 

‍ಲೇಖಕರು avadhi

January 15, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: