ಗಿರಿಜಾ ಶಾಸ್ತ್ರಿ ಅಂಕಣ: ದೇವನೂರ ಮಹಾದೇವರ ದೇವರು

ಗಿರಿಜಾ ಶಾಸ್ತ್ರಿ

ದೇವನೂರ ಮಹಾದೇವರ “ಎದೆಗೆ ಬಿದ್ದ ಅಕ್ಷರ” ಓದಿ ಮುಗಿಸಿದಾಗ, ನನಗೆ ಸಿಕ್ಕಿದ್ದು ಸಮತೆ ಮತ್ತು ಕಾರುಣ್ಯವೆಂಬ ದೇವರು. ಇವು ಬುದ್ಧನ ಗುಣಗಳೂ ಹೌದು. ಇವು ಅಕ್ಷರಗಳ ಮೂಲಕ ಎದೆಯೊಳಗೆ ಬೀಳಬೇಕು. ಜ್ಞಾನ ತಲೆಯೊಳಗೆ ಇಳಿದರೆ ಅಹಂಕಾರವೇ ಮಾತನಾಡುತ್ತದೆ. ಅದೇ ಜ್ಞಾನ ಮನುಷ್ಯನ ಅಂತಃಕರಣದ ಭಾಗವಾದರೆ ಸಮತೆ ಮತ್ತು ಕಾರುಣ್ಯ ಮೈದಾಳಬಹುದು. ಎರಡು ಪದಗಳಲ್ಲಿ, ಎದೆಗೆ ಬಿದ್ದ ಅಕ್ಷರ ಕೃತಿಯ ಸಾರಾಂಶವನ್ನು ಹಿಡಿಯಬಹುದಾದರೆ ಅದುವೇ ಈ ಸಮತೆ ಮತ್ತು ಕಾರುಣ್ಯ. ಈ ಎರಡು ಪರಿಕಲ್ಪನೆಗಳ ಮೂಲಕವೇ ಸಮಾಜದ ಶ್ರೇಣೀಕರಣದ ಕ್ರೌರ್ಯದ ಮುಖಕ್ಕೆ ಕನ್ನಡಿ ಹಿಡಿಯುತ್ತದೆ ಈ ಕೃತಿ.

‘ಎದೆಸೀಳಿದರೆ ಮೂರಕ್ಷರವಿಲ್ಲ’ ಎಂದು ಅನಕ್ಷರಸ್ಥರ ಕುರಿತಾದ ಒಂದು ಬೈಗುಳವಿದೆ. ಈ ಕೃತಿಯನ್ನು ಓದುವ ಮುನ್ನ ನಾನು ಹಾಗೆಂದೇ ಗ್ರಹಿಸಿದ್ದೆ. ಆದರೆ ದೇವನೂರರ ಪ್ರಕಾರ ಅದಲ್ಲ. “ಭೂಮಿಗೆ ಬಿದ್ದ ಬೀಜ, ಎದೆಗೆ ಬಿದ್ದ ಅಕ್ಷರ ಇಂದಲ್ಲ ನಾಳೆ ಫಲಕೊಡುವುದು” ಎಂದು ಸಾಕ್ಷರತೆಯ ಮಹತ್ವವನ್ನು ಸಾರುವ ನುಡಿಯೊಂದನ್ನು ಇಲ್ಲಿ ಹಂಚಿಕೊಂಡಿದ್ದಾರೆ.

ಇದು ಎದೆಗೆ ಬಿದ್ದ ಅಕ್ಷರವೂ ಹೌದು, ಎದೆಸೀಳುವ ಅಕ್ಷರವೂ ಹೌದು. ಇವು ದಲಿತರಲ್ಲದವರ ಎದೆಸೀಳುವ ‘ಅಕ್ಷರ’. ಅವರ ಆತ್ಮಕ್ಕೆ ಪಾಪಪ್ರಜ್ಞೆಯ ಚುರುಕು ಮುಟ್ಟಿಸುವ ‘ಅಕ್ಷರ’ ಎಂಬ ಭಾವದ ಅನುಭವವಾಗುತ್ತದೆ.

‘ಎದೆ ಸೀಳಿ’ಕೊಳ್ಳುವ ಪ್ರಸಂಗ ಬರುವುದು ರಾಮಾಯಣದ ಹನುಮಂತನ ಕತೆಯಲ್ಲಿ.  ರಾಮ ತನ್ನ ಎದೆಯಲ್ಲೇ ಇದ್ದಾನೆ ಎನ್ನುವುದನ್ನು ಹನುಂಮಂತ ತನ್ನ ಎದೆಯನ್ನೇ ಬಗೆದು ತೋರಿಸುತ್ತಾನೆ. ಇದು ಆತ್ಮ ಪರಿವೀಕ್ಷಣೆಯ ನೆಲೆ. ದೇವನೂರರಿಗೆ ಬೇಕಾಗಿರುವುದೂ ಇಂತಹ ಹನುಮದ್ವಿಕಾಸವೇ! “ರಾಮನನ್ನು ಹುಡುಕಬೇಕಾಗಿದೆ” ಎನ್ನುವ ಲೇಖನದಲ್ಲಿ ಮೂರು ರೀತಿಯ ಧರ್ಮಿಗಳನ್ನು ಗುರುತಿಸುತ್ತಾರೆ. ಅವರೆಂದರೆ, ಆಧ್ಯಾತ್ಮ ಧರ್ಮಿಗಳು; ಕುಟುಂಬ ಧರ್ಮಿಗಳು; ಮತ್ತು ವ್ಯಭಿಚಾರಿ ಧರ್ಮಿಗಳು. ಆಧ್ಯಾತ್ಮ ಧರ್ಮಿಗಳ ಎದುರು ರಾಮನೇನಾದರೂ ಪ್ರತ್ಯಕ್ಷನಾದರೆೆ “ನನ್ನೊಳಗೂ ಸಕಲೆಂಟು ಜೀವಿಗಳ ಒಳಗೂ, ನಿನ್ನನ್ನೇ ಕಾಣುತ್ತಿರುವಾಗ ನೀನೇಕೆ ಬೇರೆ ಅವತರಿಸಿದೆ? ಹೋಗಯ್ಯ” ಎಂದು ಹೇಳುವರು. ಕುಟುಂಬ ಧರ್ಮಿಗಳಿಗೆ ರಾಮ ಪ್ರತ್ಯಕ್ಷನಾದರೆ ಸಂಭ್ರಮಿಸಿ, ಪೂಜಿಸಿ ಕುಣಿದು ಕುಪ್ಪಳಿಸುವವರು, ಆದರೆ ವ್ಯಭಿಚಾರಿ ಧರ್ಮಿಗಳಿಗೆ ಮಾತ್ರ ರಾಮ ಬೇಕಿಲ್ಲ. ರಾಮನ ಹೆಸರು ಮಾತ್ರ ಬೇಕು ಆ ಹೆಸರಲ್ಲಿ ಅವರು ಹಣ ಮಾಡಬೇಕು. ಆ ಹೆಸರಲ್ಲಿ ಅವರು ಅಧಿಕಾರ ಸಂಪಾದಿಸಬೇಕು ಇದು ವ್ಯಾಪಾರ ಅವರಿಗೆ.

‘ಸಹನೆ ಮತ್ತು ಪ್ರೀತಿ’ ನನ್ನ ಧರ್ಮ ಎಂಬ ಗಾಂಧೀಜಿಯವರ ಮಾತನ್ನು ಎತ್ತಿ ಹೇಳುತ್ತಾ, ನಾವು ಇಷ್ಟಪಡುವವರ ಬಗ್ಗೆ ಪ್ರೀತಿ ಇರುವುದು ಸಹಜ ಆದರೆ ನಾವು ಇಷ್ಟಪಡದವರಬಗ್ಗೆ ಕಡೆ ಪಕ್ಷ ಸಹನೆಯನ್ನಾದರೂ ಪ್ರಯತ್ನ ಪಟ್ಟು ರೂಢಿಸಿಕೊಳ್ಳಬೇಕು,”ಇದು ಇಷ್ಟಪಡದವರ ಹಿತ ದೃಷ್ಟಿಯಿಂದ ಅಲ್ಲ, ಬದಲಾಗಿ ಸಹನೆಗೆಟ್ಟ ಕ್ಷಣ ನಾವು ಅಧರ್ಮಿಗಳಾಗಿಬಿಡುತ್ತೇವೆ, ಕುಬ್ಜರಾಗುತ್ತೇವೆ. “ಡಿಸೆಂಬರ್ ೬ರಂದು ಹಿಂದೂಗಳೆನಿಸಿಕೊಂಡ ಕೆಲವರು ಸಹನೆಗೆಟ್ಟು ಮಸೀದಿಯ ಧ್ವಂಸಿಸಿ ಧರ್ಮದಿಂದ ದೂರವಾದರು.  ಇದರಿಂದ ಮುಸ್ಲಿಮರಿಗೆ ಆಘಾತವಾಗಿರಬಹುದು. ಆದರೆ ಹಿಂದೂಗಳು ಧರ್ಮಹೀನರಾದರು. ಇದರಿಂದ ಒಟ್ಟಾರೆ ಭಾರತೀಯತೆ ತಲೆತಗ್ಗಿಸುವಂತಾಯ್ತು” ಎನ್ನುತ್ತಾರೆ.

ಅವರ ಪ್ರಕಾರ ಮೂರನೇ ದರ್ಜೆಯ ಅಧರ್ಮಿಗಳು ರಾಮನನ್ನು ಕೊಂದು ಅವನಿಗೆ ಗುಡಿ ಕಟ್ಟುತ್ತಾರೆ ಇಂತಹವರು ಕಟ್ಟಿದ ದೇವಸ್ಥಾನದಿಂದ ರಾಮ ಫೇರಿ ಕೀಳದೇ ಇರುತ್ತಾನೆಯೇ?ಎಂದು ವಿಡಂಬಿಸುತ್ತಾರೆ.

ದೇವನೂರರ ದೇವರು, ಗುಡಿಯನ್ನು ಬೇಡದ (ಮಾಳಿಗೆಯನ್ನು ಬೇಡದ) ದೇವರು. ಈ ಕೃತಿ ಪ್ರರಂಭವಾಗುವುದೇ “ನನ್ನ ದೇವರು” ಎಂಬ ಲೇಖನದಿಂದ. ಇದಕ್ಕೆ ಅವರು, ಸಿದ್ಧಲಿಂಗಯ್ಯನವರು ಹೇಳಿದ ಒಂದು ಕತೆಯನ್ನು ಉಲ್ಲೇಖಿಸುತ್ತಾರೆ. ಮಂಚಮ್ಮನಿಗಾಗಿ ಒಂದು ಗುಡಿಯನ್ನು ಅವಳ ಭಕ್ತಾದಿಗಳು ಕಟ್ಟುತ್ತಿರುವಾಗ ಒಬ್ಬ ವ್ಯಕ್ತಿಯ ಮೈಮೇಲೆ ಬಂದ ಅವಳು,

‘ಏನ್ರಯ್ಯಾ ಏನ್ ಮಾಡ್ತಾ ಇದ್ದೀರಿ?’

‘ನಿನಗೊಂದು ಗುಡಿಮನೆ ಕಟ್ತಾ ಇದ್ದೀವಿ ತಾಯಿ’

ಓಹೋ ನನಗೇ ಗುಡಿಮನೆ ಕಟ್ತಾ ಇದ್ದೀರೋ? ಹಾಗಾದರೆ ನಿಮಗೆಲ್ಲಾ ಮನೆ ಉಂಟಾ ನನ್ನ ಮಕ್ಕಳಾ?

‘ನನಗಿಲ್ಲ ತಾಯಿ’- ಅಲ್ಲೊಬ್ಬ ಹೇಳ್ತಾನೆ

ಹಾಗಾದರೆ ಎಲ್ಲರಿಗೂ ಆಗುವವರೆಗೆ ನನಗೆ ಮನೆ ಬೇಡ’ ಹೀಗೆಂದ ದೇವಿ ಮನೆ ಮಂಚಮ್ಮಳಾಗುತ್ತಾಳೆ. ಇಂದಿಗೂ ಅವಳು ಪೂಜೆಗೊಳ್ಳುವುದು ಛಾವಣಿಯಿಲ್ಲದ ಗುಡಿಯಲ್ಲಿ. ದೇವನೂರರು ಬರೆಯುತ್ತಾರೆ “ಈ ರೀತಿಯಲ್ಲಿ ಛಾವಣಿ ಇಲ್ಲದ ಗುಡಿಯಲ್ಲಿ ಕಾರುಣ್ಯ ಸಮತೆಯ ಬುದ್ಧನನ್ನು ಇಟ್ಟರೆ ಅದೇ ನನ್ನ ದೇವರಾಗುತ್ತದೆ”

ಅಯೋಧ್ಯೆಯ ರಾಮ ತನ್ನ ಗುಡಿಗಾಗಿ ಸಾವಿರಾರು ಜನರನ್ನು ಬಲಿತೆಗೆದುಕೊಂಡರೆ, ಮನೆಮಂಚಮ್ಮ ಇಡೀ ಜಗತ್ತಿನ ಬಡತನದ ಜೊತೆಗೆ ತನ್ನನ್ನು ಗುರುತಿಸಿಕೊಳ್ಳುವ ತಾಯಿಯಾಗಿ ಮಾಳಿಗೆಯಿಲ್ಲದ ಗುಡಿಯಲ್ಲಿ ನೆಲೆ ನಿಲ್ಲುತ್ತಾಳೆ. ಸಮತೆ ಮತ್ತು ಕಾರುಣ್ಯವೇ ದೇವನೂರರ ದೇವರು.

ಸಮತೆಯನ್ನು ಅಖಂಡವಾದ ನೆಲೆಯಲ್ಲಿ ಹಿಡಿಯುತ್ತಾ ಅವರು ಒಂದು ಕತೆಯನ್ನು ಹೇಳುತ್ತಾರೆ, ಅದು ಗಂಡಭೇರುಂಡನ ಕತೆ. ಅದಕ್ಕೆ ಎರಡು ತಲೆಗಳಿದ್ದರೂ ಅವು ಒಂದೇ ದೇಹದ ಭಾಗ. ಎರಡು ಬಾಯಿಗಳಿದ್ದರೂ ದೇಹದ ಹಸಿವೆ ಒಂದೇ. ಎರಡು ಬಾಯಿಗಳೂ ಜಗಳಾಡಿಕೊಂಡು ಒಂದಕ್ಕೆ ಕೊಡದೇ ಇನ್ನೊಂದು ತಿಂದು, ಅದು ತಿಂದಿತಲ್ಲಾ ಎಂದು ಇದು, ಎಚ್ಚರಿಸಿದರೂ ನನ್ನ ಬಾಯಿ ನನ್ನ ಇಷ್ಟ ಎಂದು ವಿಷ ತಿಂದು ಕೊನೆಗೆ ಹಕ್ಕಿ ಸತ್ತು ಬೀಳುತ್ತದೆ. ಸಮಾಜದ ಸಮಸ್ಯೆಗಳನ್ನು ಅಖಂಡವಾಗಿಯೇ ಗ್ರಹಿಸಬೇಕು. ಅವು ಪರಸ್ಪರ  ಅವಲಂಬಿಗಳೇ ಹೊರತು ಅವು ಸ್ವತಂತ್ರವಲ್ಲ ಎಂಬ ಸೂಕ್ಷವಾದ ಒಳನೋಟವನ್ನು ಈ ಕಥೆಯ ಮೂಲಕ ಕೊಡುತ್ತಾರೆ. ದಲಿತರು ತಮ್ಮತಮ್ಮಲ್ಲೇ ಪರಸ್ಪರ ಕಚ್ಚಾಡಿಕೊಂಡು ದಬ್ಬಾಳಿಕೆ ನಡೆಸುವವವರಿಗೂ ಇದನ್ನು ವಿಸ್ತರಿಸುತ್ತಾರೆ. ಅಸ್ಪೃಶ್ಯತೆಯ ಮೂಲ ಇರುವುದು ಇಲ್ಲೇ ಎಂಬುದನ್ನು ಗುರುತಿಸುತ್ತಾರೆ. ದಲಿತ ಸಂಘಟನೆಯ ಛಿದ್ರತೆ ದಲಿತ ಸಮುದಾಯಗಳ ಛಿದ್ರತೆ ಎನ್ನುತ್ತಾರೆ. ಛಿದ್ರವಾಗಿರುವುದಲ್ಲಿ ಮೇಲುಕೀಳುಗಳ ಹೊಯ್ ಕೈಯ್ ಇರುತ್ತದೆಯೇ ಹೊರತು ಸಮತೆ ಇರುವುದಿಲ್ಲ, ಸಮತೆ ಕಣ್ಮರೆಯಾದಲ್ಲಿ ಅಸ್ಪೃಶ್ಯತೆ ಜಾಗೃತವಾಗುತ್ತದೆ. “ಹುಟ್ಟಿನ ಜಾಡು ಹಿಡಿದು” ಎನ್ನುವ ಲೇಖನದಲ್ಲಿ ಬ್ರಾಹ್ಮಣ ಉಪಾಧ್ಯಾಯರೊಬ್ಬರು “ನಾನು ತುಂಬಾ ಸಂಪ್ರದಾಯಸ್ಥ. ಯಾರೊಬ್ಬ ಅಸ್ಪೃಶ್ಯನನ್ನೂ ಮುಟ್ಟಿಸಿಕೊಂಡವನಲ್ಲ. ಒಡಲಾಳ ಓದಿದೆ. ಈ ಸಾಕವ್ವ, ನನ್ನ ಅಜ್ಜಿ ಎನಿಸಿಬಿಟ್ಟಳು. ನನ್ನೊಳಗೆ ನೆಲೆಸಿಬಿಟ್ಟಳು” ಎಂದು ಹೇಳಿದುದನ್ನು ಉಲ್ಲೇಖಿಸುತ್ತಾ ದೇವನೂರರು ‘ಮುಟ್ಟಿಸಿಕೊಳ್ಳುವುದೆಂದರೆ ಬಹುಶಃ ಇದೇ ಅಲ್ಲವೇ?’ ಎನ್ನುತ್ತಾರೆ. ಇಂತಹ ಒಂದು ಸಮಗ್ರವಾದ ಪರಿವರ್ತನೆಯ ಬಗ್ಗೆ ಅವರು ಆಶಾವಾದಿಯಾಗಿದ್ದಾರೆ.  ಆದುದರಿಂದಲೇ ಸಮತೆಯನ್ನು ಎತ್ತಿಹಿಡಿದ, ಇಡೀ ಜಗತ್ತಿನಲ್ಲಿಯೇ ಅಪೂರ್ವವಾದ ವಚನ ಸಾಹಿತ್ಯ ಆಂದೋಲನವೇ ಅವರ ಪಾಲಿಗೆ ನಿಜವಾದ ಧರ್ಮ. “ಅದನ್ನು ಜಾತಿಯ ಬಚ್ಚಲಿನಿಂದ ಮೇಲೆತ್ತಿ ರಕ್ಷಿಸಿದರೆ ಜಗತ್ತಿಗೇ ಬೆಳಕಾಗಬಹುದೇನೋ. ಇದು ಜಾತಿಯಾದರೆ ಕೆಟ್ಟ ಜಾತಿ; ಧರ್ಮವಾದರೆ ಮಹೋನ್ನತ ಧರ್ಮ” ಎನ್ನುತ್ತಾರೆ.

ದೇವನೂರರಿಗೆ ಬೇಕಾಗಿರುವುದು ಸಂಪೂರ್ಣ ಸಾಮಾಜಿಕ ಬದಲಾವಣೆ. ಆದುದರಿಂದಲೇ ಅನಾರೋಗ್ಯದಿಂದ ಬಳಲುತ್ತಿರುವ ಅನಂತಮೂರ್ತಿಯವರನ್ನು ನೋಡಲು ಅವರು ದೆಹಲಿಗೆ ತೆರಳಿದಾಗ ಮಹಾದೇವರಿಗೆ ಅನಂತಮೂರ್ತಿಯವರು ಗಾಯತ್ರಿ ಮಂತ್ರವನ್ನು ದೇವನೂರರಿಗೆ ಉಪದೇಶಿಸಿದ ಹಾಗೆ ಬೋಧೆಯಾಯಿತೆಂದು ಹೇಳುತ್ತಾರೆ. ಆಗ ದೇವನೂರರು “ಸರ್ ಇದು ಮಮೂಲಿ ನಡಿಗೆ. ಅರೆಪ್ರಜ್ಞಾವಸ್ಥೆಯಲ್ಲಾದರೂ ನಾನು ನಿಮಗೆ ಗಾಯತ್ರಿಮಂತ್ರ ಹೇಳಿಕೊಟ್ಟಂತೆ ಬೋಧೆಯಾಗಿದ್ದರೆ ಭಾರತದ ಮನಸ್ಸಿಗೆ ಚಲನೆ ಬರುತ್ತಿತ್ತಲ್ಲವೇ?” ಎನ್ನುತ್ತಾರೆ. ದೇವನೂರರು ದಲಿತರಿಗೆ ಇಂತಹ ಒಂದು ಸ್ಥಿತಿ ಬರಬೇಕೆಂದು ಅಪೇಕ್ಷಿಸಿದ್ದರೂ ಇದೂ ಕೂಡ ಗಾಯತ್ರಿಮಂತ್ರದ ಬಗ್ಗೆ ಇಬ್ಬರಿಗೂ ಇರುವ ಭ್ರಮೆಯನ್ನೇ ವ್ಯಕ್ತಪಡಿಸುತ್ತದೆ.

ಈ ದೇಶದಲ್ಲಿ ಜಾತಿಯ ರಾಜಕಾರಣಕ್ಕೆ ನಡೆದಷ್ಟು ಕೊಲೆ ಅತ್ಯಾಚಾರಗಳು ಬೇರೆ ಯಾವ ಕಾರಣಕ್ಕೂ ನಡೆದಿಲ್ಲವೇನೋ.  ದೇಶ ಅಂದರೆ ಜನ ಎಂಬ ಪು.ತಿ. ನ. ಅವರ ಮಾತನ್ನು ಉಲ್ಲೇಖಿಸುತ್ತಾ “ಈ ಪ್ರದೇಶದಲ್ಲಿ ವಾಸಿಸುವ ಜನರ ಮೊತ್ತವೇ ದೇಶ ಅನ್ನಿಸಿಕೊಂಡಿದ್ದರೆ ಆಗ ಪ್ರತಿಯೊಂದು ಜೀವಕ್ಕೂ ಬೆಲೆ ಇರುತ್ತಿತ್ತು, ಆಗ ಅಲ್ಲಿ ಅಸ್ಪೃಶ್ಯತೆ, ಜಾತಿ, ಮತ ಭಾಷೆಗಾಗಿ ಇಷ್ಟೊಂದು ರಕ್ತ ಸುರಿಯುತ್ತಿರಲಿಲ್ಲವೇನೋ” (ಕನ್ನಡಕ್ಕೂ ಒಂದು ರಾಷ್ಟ್ರೀಯತೆ) ಎನ್ನುತ್ತಾರೆ.

ಒಂದು ಸಲ ಅವರ ಮನೆಯ ಕಕ್ಕಸ್ಸಿನ ಕಮೋಡು ಕಟ್ಟಿಕೊಂಡಿರುತ್ತದೆ. ಕಡ್ಡಿಯಿಂದ ಸರಿಪಡಿಸಲು ಪ್ರಯತ್ನಿಸುತ್ತಾರೆ, ಅಮೇಲೆ ಕೈಗೆ ಪ್ಲಾಸ್ಟಿಕ್ ಚೀಲ ಕಟ್ಟಿಕೊಂಡು ನೋಡುತ್ತಾರೆ ಸರಿಯಾಗುವುದಿಲ್ಲ. ಒಮ್ಮೆ ಅವರ ಹೆಂಡತಿ ಪೌರ ಕಾರ್ಮಿಕನೊಬ್ಬನಿಗೆ ಕೇಳಿದ ಪ್ರಶ್ನೆಗೆ ಅವನು ಕೊಟ್ಟ ಉತ್ತರ ನೆನಪಾಗುತ್ತದೆ.  “ನಿಮಗೆ ಮ್ಯಾನ್ ಹೋಲ್, ಡ್ರೈನೇಜ್ ಕೆಲಸ ಮಾಡಲು ಕಷ್ಟ ಕಹಿ ಅಂತ ಅನ್ನಿಸುವುದಿಲ್ಲವೇ” ಪ್ರಶ್ನೆಗೆ, “ಯಾಕ್ರಮ್ಮ ಕಷ್ಟ ಕಹಿ ನನ್ನ ಮಕ್ಕಳದು ಅಂತ ಅಂತ್ಕಡ್ರಾಯ್ತು” ಎನ್ನುತ್ತಾನೆ.  ಈ ಮಾತನ್ನು ನೆನಪಿಸಿಕೊಂಡು “ಅಯ್ಯೋ ನನ್ನ ಮಕ್ಕಳದಲ್ವಾ” ಎಂದು ಕೈಹಾಕಿ ಸರಿಪಡಿಸುತ್ತಾರೆ. “ಈ ಭಾವನೆ ಬಾರದಿದ್ದರೆ ನಾನು ಕೈಹಾಕುತ್ತಿರಲಿಲ್ಲ .. ಅಸಹಾಯಕತೆಯ ಸೋಲು ಮತ್ತು ದೊಡ್ಡ ಮನಸ್ಸು ಇಲ್ಲದಿದ್ದರೆ ಈ ಕೆಲಸ ಮಾಡುವುದು ಕಷ್ಟ” ಎನ್ನುತ್ತಾರೆ. (ಕೊಳಕು ಎಲ್ಲಿದೆ)

ಇನ್ನೊಮ್ಮೆ ಕುವೆಂಪು ಅವರ ಮಾತಿಗೆ ವಿರುದ್ಧವಾಗಿ ತ್ರಿಮತಸ್ಥರ ಜಗಳದಲ್ಲಿ ಇವರು ಮತ್ತು ಶ್ರೀಕೃಷ್ಣ ಆಲನಹಳ್ಳಿಯವರು ಸಿಲುಕಿಕೊಂಡು, ಅವರ ಜಟಾಪಟಿಗೆ ಸಿಕ್ಕಿ ಒಂದು ಕೋಣೆಯಲ್ಲಿ ಬಂದಿಯಾಗಿರುವಾಗ, ಜನಜಂಗುಳಿಯ ನಡುವೆ ಕಿಟಕಿಯ ಸರಳುಗಳಿಂದ ಒಬ್ಬ ಹುಡುಗ ಕೈಮಾಡಿ ಮಹಾದೇವರನ್ನು ಕರೆದು ನಾನು ನಿಮ್ಮ ತಮ್ಮ ಶಂಕರನ ಕ್ಲಾಸ್ ಮೇಟ್” ಎಂದು ನಗುತ್ತಾ ಕೈಕುಲಕಿದ್ದನ್ನು ಬರೆಯುತ್ತಾರೆ. (ಬ್ರಾಹ್ಮಣರ ಬಹಿರಂಗ ಸಭೆಯ ಅಂತರAಗದಲಿ ಕೆಲಕಾಲ)

ಹುಟ್ಟುತ್ತಾ ವಿಶ್ವಮಾನವ ಎನ್ನುವ ಲೇಖನದಲ್ಲಿ ಕುವೆಂಪು ಅವರ ‘ಹುಟ್ಟುತ್ತಾ ವಿಶ್ವ ಮಾನವ ಬೆಳೆಯುತ್ತಾ ಅಲ್ಪಮಾನವ” ಎಂಬುದರ ಬಗ್ಗೆ ಹೇಳುತ್ತಾ ಮನುಷ್ಯ ಬೆಳೆಯುತ್ತಾ ದೊಡ್ಡವನಾಗಬೇಕು ಆದರೆ ಹುಟ್ಟುವಾಗ ಯಾವುದೇ ಅಸ್ಮಿತೆಯಿಲ್ಲದೆ ಹುಟ್ಟುವ ಮನುಷ್ಯ ಬೆಳೆಯುತ್ತಾ ಜಾತಿ, ಧರ್ಮ, ಪ್ರದೇಶ, ಭಾಷೆ ಇವುಗಳ ಭೇದದೊಳಗೆ ಸಿಕ್ಕು ಹೇಗೆ ಅಲ್ಪನಾಗಿಬಿಡುತ್ತಾನೆ ಎಂದು ಹೇಳುತ್ತಾ ಕುವೆಂಪು ಅವರ ಮಾತುಗಳ ಪ್ರಸ್ತುತೆಯನ್ನು ಎತ್ತಿ ಹಿಡಿಯುತ್ತಾರೆ.

ದೇವನೂರರು ಇಡೀ ಜಗತ್ತಿನ ದಮನಿತರೊಂದಿಗೆ ತಮ್ಮನ್ನು ಗುರುತಿಸಿಕೊಳ್ಳುತ್ತಾರೆ ಎನ್ನುವುದಕ್ಕೆ ಒಂದು ಉದಾಹರಣೆಯೆಂದರೆ “ಮನವ ಕಾಡುತಿದೆ ಎಂಬ ಭಾಗದಲ್ಲಿ “ದಿನ ಸವೆಯುತ್ತಿದೆ. ದಿನ ಮುಗಿಯುವ ಕೊನೆಯಲ್ಲಿ ಎಲ್ಲವೂ ಮುಗಿದ ಮೇಲೆ ಭಾವನೆ ಮೀರಿದ ಇಥಿಯೋಪಿಯಾದ ಮಕ್ಕಳು ಬರುತ್ತವೆ. ಕ್ಷಾಮದ ಬಿಳಿ ಹಲ್ಲುಗಳು ಅವುಗಳನ್ನು ತಿನ್ನುತ್ತವೆ. ಅವುಗಳು ನನ್ನನ್ನು ತಿನ್ನುತ್ತವೆ…” ಮೂರೇ ಸಾಲಿನ ಈ ಗದ್ಯಬರಹ ಒಂದು ಸಶಕ್ತ ಕವಿತೆಯಾಗಿ ಪರಿಣಾಮ ಬೀರುತ್ತದೆ. ಇಲ್ಲಿನ ಎಲ್ಲಾ ಬರಹಗಳಿಗೂ ಈ ಮಾತು ಅನ್ವಯವಾಗುತ್ತದೆ. ದೇವನೂರರ ಭಾಷೆ ರೂಪಕದ ಭಾಷೆ. ಆದುದರಿಂದಲೇ ಲೇಖನಗಳೂ ಚಿಕ್ಕದಾದವು. ಅಷ್ಟೇ ಸುಲಭವಾಗಿ ಓದಿಸಿಕೊಂಡು ಹೋಗುವವು. ಆದುದರಿಂದಲೇ ದೇವನೂರರ ಬರಹಗಳನ್ನು ಕಾವ್ಯದ ಹಾಗೆ ಓದಿಕೊಳ್ಳಬೇಕು ಎಂದು ಟಿ.ಪಿ. ಅಶೋಕ ಅವರು ಅಭಿಪ್ರಾಯ ಪಡುತ್ತಾರೆ. “ಸಂಕಿಪ್ತತೆ ಮತ್ತು ಮೌನ ಅವರ ಮಿತಿ ಎನಿಸದೇ ಅವು ಅವರ ವ್ಯಕ್ತಿತ್ವ ಮತ್ತು ಬರವಣಿಗೆಗಳ ಪ್ರಧಾನ ಲಕ್ಷಣಗಳಾಗಿ ತೋರುತ್ತವೆ ಅಷ್ಟೇ ಅಲ್ಲ ಅವು ಅವರ ದೊಡ್ಡ ಶಕ್ತಿ” (ದೇವನೂರು ಕಥನ) ಎನ್ನುತ್ತಾರೆ.

ಇನ್ನೊಂದು ಕಡೆ ಗಾಂಧಿ ಮತ್ತು ಅಂಬೇಡ್ಕರ್ ವಿಚಾರಗಳನ್ನು ಪ್ರಸ್ತಾಪಿಸುತ್ತ, ಅವರು ಪರಸ್ಪರ ವಿರೋಧಿಗಳಲ್ಲ, ಅವರುಗಳು ಒಂದೇ ವಿಚಾರವನ್ನು ವಿರುದ್ಧ ದಿಕ್ಕಿನಿಂದ ಪ್ರವೇಶಿಸುತ್ತಾರೆ. ಸಾಮಾಜಿಕ ಅನಿಷ್ಠಗಳ ಕಂಬಗಳನ್ನು ಗಾಂಧಿ ಒಳಗಿನಿಂದ ನಿಧಾನವಾಗಿ ಕೊಯ್ದರೆ, ಅಂಬೇಡ್ಕರ್ ಹೊರಗಿನಿಂದ ಕಲ್ಲೆಸೆಯುತ್ತಾರೆ. ಇಬ್ಬರ ಪ್ರಯತ್ನವೂ ಅವುಗಳನ್ನು ನಾಶಮಾಡುವುದೇ ಆಗಿದೆ. ದಲಿತರಿಗೆ ಹೊರಗಿನ ಶತ್ರು ಇರುವಂತೆ ಒಳಗಿನ ಶತ್ರುವೂ ಇದ್ದಾನೆ. ಒಳಗಿನ ಶತ್ರುವನ್ನು ದಮನಿಸದೇ ಹೊರಗಿನ ಶತ್ರುವನ್ನು ದಮನಿಸ ಹೊರಟರೆ ಕೊನೆಗೆ ಆ ಶತ್ರು ತಾನೇ ಆಗಿಬಿಡಬಹುದು. ಒಳಗಿನ ಶತ್ರುವನ್ನು ದಮನಿಸಲು ಗಾಂಧೀಜಿಯ ಅಹಿಂಸಾ ರೂಪದ ಚಳವಳಿ ಅವಶ್ಯಕ. ಅಹಿಂಸೆ ಒಂದು ತಂತ್ರವಲ್ಲ ಬದುಕು. “ನಮ್ಮ ವಿಮೋಚನೆಗಾಗಿ ಸಾವಿರಾರು ರೀತಿಗಳನ್ನು ನಾವು ತಡಕಬೇಕಾಗಿದೆ. ಇಂಥದ್ದರಲ್ಲಿ ಹೀಗಿರುವಾಗ ಗಾಂಧಿಯೂ ನಮಗೆ ದಿಕ್ಕಾಗಬಹುದು(ಗಾಂಧಿ ಅಂಬೇಡ್ಕರ್ ಒಂದಿಷ್ಟು ಮಾತು) ಎಂದು ಹೇಳುತ್ತಾ ದಸಂಸ ದವರು ಗಾಂಧಿ ಚಿತ್ರವನ್ನು ಬಹಿಷ್ಕರಿಸಿದಾಗ ಅದಕ್ಕೆ ಮಣೆಹಾಕದೇ ಗಾಂಧಿ ಚಿತ್ರವನ್ನು ನೋಡಿಕೊಂಡು ಬಂದು ಇತರರಿಗೂ ಅದನ್ನು ನೋಡುವಂತೆ ಒತ್ತಾಯಿಸುತ್ತಾರೆ. ಇದು ದಲಿತ ಸಂಘಟನೆಯ ಒಳಗೇ ಅವರ ವಿಚಾರಗಳು ಎಷ್ಟು ಬಿನ್ನ ಮತ್ತು ಎಂತಹ ವಿಶಿಷ್ಟ ಒಳನೋಟದಿಂದ ಕೂಡಿತ್ತು ಎನ್ನುವುದು ಇದರಿಂದ ಗೊತ್ತಾಗುತ್ತದೆ. ಇದೇ ಭರದಲ್ಲಿ ಜಾತಿಯೊಳಗಿನ ಮದುವೆಗಳನ್ನು ನಿಷೇಧಿಸಬೇಕು ಎನ್ನುವ ಅವರ ಆಶಯವನ್ನು ಗಾಂಧಿ ಅಂರ್ಜಾತೀಯ ವಿವಾಹಗಳಿಗೆ ಮಾತ್ರ ಹೋಗುತ್ತಿದ್ದರು ಎಂಬ ವಿಚಾರದ ಮೂಲಕ ಪುಷ್ಠಿಕೊಡುತ್ತಾರೆ. ಮದುವೆ ಒಂದು ವೈಯಕ್ತಿಕ ವಿಚಾರ ಇದರಿಂದ ಎಷ್ಟರ ಮಟ್ಟಿಗೆ ಯಶಸ್ವಿಯಾದೀತು ಎಂಬುದು ಬೇರೆಯಾದರೂ ದೇವನೂರರಮೇಲೆ ಆಗಿರಬಹುದಾದ ಗಾಂಧಿಯ ಪ್ರಭಾವವನ್ನು ಇದು ಎತ್ತಿ ಹೇಳುತ್ತದೆ. ಗಾಂಧಿ ಮತ್ತು ಅಂಬೇಡ್ಕರ್ ಅವರನ್ನು ಒಂದೇ ಕ್ಯಾನ್ವಾಸಿನೊಳಗೆ ತರುವ ಅವರ ಪ್ರಯತ್ನವೂ ಬಹಳ ಅನನ್ಯವಾಗಿದೆ. ಆದುದರಿಂದಲೇ ಅವರು ಪ್ರೀತಿ ಸಹನೆಯಿಂದಲೇ ನಾಡನ್ನು ಕಟ್ಟಬೇಕಾಗಿರುವುದರ ಜರೂರನ್ನು ಹೇಳುತ್ತ “ನಾವು ನಮ್ಮ ಜನರ ಹೃದಯದ ಒಳಗೆ ಅಡಗಿರುವ ಪುಟ್ಟಪುಟ್ಟ ಬುದ್ಧ, ಬಸವಣ್ಣ, ಗಾಂಧಿ. ಅಂಬೇಡ್ಕರ್ ಅವರನ್ನು ಹುಡುಕೀ ಹುಡುಕಿ ಉದ್ದೀಪನಗೊಳಿಸಬೇಕಾಗಿದೆ” ಎನ್ನುತ್ತಾರೆ, (ಗಾಂಧಿ ಅಂಬೇಡ್ಕರ್ ಒಂದಿಷ್ಟು ಮಾತು)

ಹೀಗೆ ಇಲ್ಲಿನ ಹೆಚ್ಚಿನ ಲೇಖನಗಳಲ್ಲಿ ಅಸಹ್ಯವನ್ನು, ಸಣ್ಣತನವನ್ನು, ಹೃದಯ ದೌರ್ಬಲ್ಯಕ್ಕೆ ಕಾರಣವಾಗುವ ಕ್ಷುದ್ರತೆಯನ್ನು ಮೀರುವ ಬೋಧದ ಕಿಡಿ ಶಾಂತವಾಗಿ ಜ್ವಲಿಸುತ್ತಿದೆ. ದೇವನೂರರ ಆಗಸ ವಿಸ್ತಾರಗೊಂಡಿರುವುದರ ಪ್ರತೀಕವಾಗಿ ಇವು ಕಾಣಿಸುತ್ತವೆ. ದೇವನೂರರ ಈ ಪ್ರಜ್ಞಾವಿಸ್ತಾರದ ಪರಿಯನ್ನು ಹತ್ತಿರದಿಂದ ಕಂಡ ಅವರ ಪತ್ನಿ ಪ್ರೊ. ಕೆ. ಸುಮಿತ್ರಾಬಾಯಿಯವರು “ಸೂಲಾಡಿ ಬಂದೋ ತಿರುತಿರುಗಿ” ಎಂಬ ತಮ್ಮ ಆತ್ಮಕಥನದಲ್ಲಿ ಅವರ ಗಂಡನನ್ನು ಸಮಾಜದ ಬಾಹ್ಯ ನಡಾವಳಿಗಳ ಬಗ್ಗೆ ದಿವ್ಯ ನಿರ್ಲಕ್ಷ ತೋರುವ, ಎಂತಹ ಅವಮಾನಿತ ಗಳಿಗೆಯಲ್ಲೂ ವಿಚಲಿತನಾಗದ ಒಬ್ಬ ಫಕೀರನಂತೆ, ಅವಧೂತನಂತೆ ಕಾಣಿಸಿದ್ದಾರೆ. ರೋಷ, ಆಕ್ರೋಶಗಳಿಂದ, ಘೋಷಣೆ ಠರಾವುಗಳಿಂದ ಮುಕ್ತವಾದ ಈ ಲೇಖನಗಳು ಸುಮಿತ್ರಾಬಾಯಿಯವರ ಚಿತ್ರಣವನ್ನು ನಿಜ ಗೊಳಿಸುತ್ತವೆ. ಮನೆ ಬಾಗಿಲಿಗೆ ಬಂದ ಪದವಿ, ಪ್ರಶಸ್ತಿಗಳನ್ನೂ ಅವರು ನಿರಾಕರಿಸಿದ ಸಂಗತಿಗಳೂ ಇದಕ್ಕೆ ಪುಷ್ಟಿಯನ್ನು ಕೊಡುತ್ತವೆ. ಹೆಚ್ಚಿನ ಮಹಾಬೌದ್ಧರು ಬುದ್ಧನನ್ನು ಅಲಂಕಾರಿಕವಾಗಿ ಇಟ್ಟುಕೊಂಡಿದ್ದರೆ, ದೇವನೂರರು ಬೌದ್ಧರಾಗದೆಯೇ ಸಮತೆ ಮತ್ತು ಕಾರುಣ್ಯವನ್ನು ಆತ್ಮಸಾತ್ ಮಾಡಿಕೊಳ್ಳುವ ಪ್ರಯತ್ನದಲ್ಲಿ ಅವನ ಹಾದಿಯಲ್ಲಿ ನಡೆಯುತ್ತಿರುವುದರ ಹೆಜ್ಜೆ ಗುರುತುಗಳು ಕಾಣಸಿಗುತ್ತವೆ.

‍ಲೇಖಕರು avadhi

January 15, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. Shyamala Madhav

    ತುಂಬ ಮೌಲಿಕವಾದ ವಿಶ್ಲೇಷಣೆ, ಗಿರಿಜಾ. ತಿಳಿಯ ಪಡಿಸಿದ್ದಕ್ಕೆ ಧನ್ಯವಾದ.

    ಪ್ರತಿಕ್ರಿಯೆ
  2. Gopal trasi

    ಆಹಾ…!ಕೃತಿಗೆ ಸಹಸಮವಾಗವಂತ ಪ್ರೌಡಿಮೆ ಕಾಪಾಡಿಕೊಳ್ಳುವ ಅಭಿವ್ಯಕ್ತಿ..ಕೃತಿಯನ್ನೂ. ಮತ್ತೊಮ್ಮೆ ಮನನ ಮಾಡಿಕೊಂಬಂತಾಯಿತು. ಧನ್ಯವಾದ ಗಿರಿಜಾ ಅವರೇ….

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: